ಲಾಕ್ಡೌನ್ನಿಂದಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದ ವಲಸಿಗ ನೌಕರರು ಈಗ ನಿಟ್ಟುಸಿರು ಬಿಡುತ್ತಿದ್ದಾರೆ. ರಾಜ್ಯದ ವಿವಿದೆಡೆಗಳಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರಿಗೆ ತಮ್ಮ ತಮ್ಮ ಊರುಗಳಿಗೆ ಸೇರಲು ಪ್ರಯಾಣಕ್ಕೆ ಅಣುವು ಮಾಡಿಕೊಡಲಾಗಿದೆ. ಇನ್ನು ಕಾರ್ಮಿಕರಿಗೆ ಹೆಚ್ಚಿನ ಹೊರೆಯಾಗಬಾರದೆಂಬ ಕಾರಣಕ್ಕೆ ಉಚಿತ ಬಸ್ಗಳ ಸೇವೆಯನ್ನು ಗುರುವಾರದವೆರೆಗೆ ವಿಸ್ತರಿಸಲಾಗಿದೆ.
ಸರ್ಕಾರದ ಪರ ಅಧಿಕೃತ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈವರೆಗೆ 951 ಬಸ್ಗಳಲ್ಲಿ ಸುಮಾರು ಮೂವತ್ತು ಸಾವಿರದಷ್ಟು ವಲಸಿಗ ಕಾರ್ಮಿಕರನ್ನು ಅವರ ಊರುಗಳಿಗೆ ವಾಪಾಸ್ಸು ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ. ಮೇ 5ರಂದು 550 ಬಸ್ಗಳು ಸಂಚರಿಸಿದ್ದು, ಎಲ್ಲಾ ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ ಎಂದಿದ್ದಾರೆ.

ಇನ್ನು, ಕೇಂದ್ರ ಸರ್ಕಾರದಿಂದ ವಿಶೇಷವಾಗಿ ಆರಂಭಿಸಲಾಗಿರುವ ʼಶ್ರಮಿಕ್ʼ ರೈಲು ಸೇವೆಯು ಕರ್ನಾಟಕದಲ್ಲಿ ಈಗಾಗಲೇ ಆರಂಭವಾಗಿದ್ದು ಮೇ 3ರಂದು ಬೆಂಗಳೂರಿನಿಂದ ಬಿಹಾರದ ಪಾಟ್ನಾಕ್ಕೆ 2 ರೈಲುಗಳು ಹಾಗೂ ರಾಂಚಿ ಮತ್ತು ಭುವನೇಶ್ವರ್ಗೆ ತಲಾ ಒಂದು ರೈಲುಗಳು ಹೊರಟಿವೆ ಎಂದು ಮಾಹಿತಿ ನೀಡಿದ್ದಾರೆ. ಮೇ 4ರಂದು ಜೈಪುರ್ ಮತ್ತು ಪಾಟ್ನಾಕ್ಕೆ ತಲಾ ಒಂದು ರೈಲುಗಳು ಹೊರಡಲಿವೆ.
ಇನ್ನು, ನೆರೆ ರಾಜ್ಯಗಳ ಗಡಿಯಲ್ಲಿ ತೆಗೆದುಕೊಂಡಿರುವ ಮುನ್ನೆಚ್ಚರಿಕೆಯ ಕುರಿತು ಮಾತನಾಡಿರುವ ಸುರೇಶ್ ಕುಮಾರ್, ತಮಿಳುನಾಡಿನಲ್ಲಿ ಇತ್ತೀಚಿಗೆ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಕುರಿತು ವರದಿಗಳು ಕೇಳಿ ಬರುತ್ತಿವೆ. ಹಾಗಾಗಿ, ರಾಜ್ಯದ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.