“ಶ್ವೇತಾ ಸಂಜೀವ್ ಭಟ್ ಬರೀತಾ ಇದ್ದೇನೆ… ತಾನು ಮಾಡಿರದ ಅಪರಾಧ ಕೃತ್ಯಕ್ಕಾಗಿ ಸಂಜೀವ್ ಅವರಿಗೆ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಬಹಳಷ್ಟು ಮಂದಿ ಸಂಜೀವ್ ಅವರ ಧೈರ್ಯವಾಗಿ ನಿಂತದ್ದುಂಟು; ಆದರೆ, ಕೇವಲ ಬೆಂಬಲ ಅಥವಾ ಧೈರ್ಯ ಕೊಡುವ ಮಾತು ಕಡೆಗೆ ಯಾವುದೇ ಸಹಾಯ ಮಾಡೋಲ್ಲ ಎಂಬುದು ನಿಜ. ದೇಶ ಮತ್ತು ಜನರ ಸೇವೆ ಮಾಡಿದ ಅಧಿಕಾರಿಯೊಬ್ಬರಿಗೆ ಇಂಥದ್ದೊಂದು ಶಿಕ್ಷೆ ಆಗಿದೆ ಎಂದರೆ ನಿಮ್ಮ ಸಹಾಯ ಯಾವುದೇ ಪ್ರಯೋಜನವಾಗಿಲ್ಲ ಎಂದೇ ಅರ್ಥ…”
-ಇದು ಗುಜರಾತ್ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಪತ್ನಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಮಾತು. ಬರೋಬ್ಬರಿ 29 ವರ್ಷದಷ್ಟು ಹಿಂದಿನ ಪ್ರಕರಣವದು. ಸಂಜೀವ್ ಭಟ್ ಅವರನ್ನು ಮೊದಲ ಆರೋಪಿಯನ್ನಾಗಿಸಲಾಗಿತ್ತು. ಇದೀಗ ಅವರಿಗೆ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಎದುರು ಹಾಕಿಕೊಂಡಿದ್ದರ ಪರಿಣಾಮವಿದು ಎಂಬ ಅಭಿಪ್ರಾಯ ಗಟ್ಟಿಯಾಗಿಯೇ ಕೇಳಿಬರುತ್ತಿದೆ. ಈ ನಡುವೆ, ಸಂಜೀವ್ ಅವರ ಪತ್ನಿ ಶ್ವೇತಾ ಅವರು ಬರೆದಿರುವ ವಿಷಯಗಳು ಕೂಡ ಆ ಅಭಿಪ್ರಾಯವನ್ನು ಗಟ್ಟಿ ಮಾಡುವಂತಿವೆ.
“ನಿಮ್ಮಲ್ಲಿನ ಒಬ್ಬ ಐಪಿಎಸ್ ಅಧಿಕಾರಿಯನ್ನು ಸತ್ಯವಂತನಾಗಿದ್ದಕ್ಕೆ ಶಿಕ್ಷೆಗೆ ದೂಡಲಾಗಿದೆ. ನೀವ್ಯಾರೂ ಅವರ ಬೆನ್ನಿಗೆ ನಿಲ್ಲಲಿಲ್ಲ, ಕಾಪಾಡಲಿಲ್ಲ. ಸೇಡಿನ ಸರ್ಕಾರದ ವಿರುದ್ಧ ಅವರೊಬ್ಬರೇ ಹೋರಾಟ ನಡೆಸಿದರು. ನೀವೆಲ್ಲ ಇನ್ನೂ ಎಲ್ಲಿಯವರೆಗೆ ಮೌನಕ್ಕೆ ಶರಣಾಗಿ ಮೂಕಪ್ರೇಕ್ಷಕರಾಗ್ತೀರಿ ಅನ್ನೋದು ಸದ್ಯದ ಪ್ರಶ್ನೆ. ಒಂದು ದೇಶವಾಗಿ ನಾವು ನಿಜಕ್ಕೂ ಕರಾಳ ಕಾಲಕ್ಕೆ ಸಾಕ್ಷಿಯಾಗುತ್ತಿದ್ದು, ನಮ್ಮ ಕೊನೆಯ ಉಸಿರು ಇರೋವರೆಗೂ ಹೋರಾಟ ನಡೆಸಬೇಕಾಗುತ್ತೆ. ಆದರೆ, ಆ ಹೋರಾಟವನ್ನು ನಾವು ಒಂಟಿಯಾಗಿ ನಡೆಸುತ್ತೇವೆಯೋ ಅಥವಾ ಜನರಿಗಾಗಿ ನಿರಂತರ ಹೋರಾಟ ನಡೆಸಿದ ಒಬ್ಬ ಮನುಷ್ಯನ ಪರವಾಗಿ ಪ್ರಜಾಪ್ರಭುತ್ವ ದೇಶವೊಂದರ ಜನರೆಲ್ಲ ಒಟ್ಟಾಗಿ ಹೋರಾಟ ನಡೆಸುತ್ತೇವೋ ಎಂಬುದನ್ನು ಕಾದುನೋಡಬೇಕು,” ಎಂದಿರುವ ಶ್ವೇತಾ, ಐಪಿಎಸ್ ಅಧಿಕಾರಿಗಳ ಒಕ್ಕೂಟವನ್ನು ತಣ್ಣಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
“ಎಲ್ಲರೂ ಎಚ್ಚರಗೊಳ್ಳಬೇಕಾದ ಸಮಯವಿದು. ಇವತ್ತು ನಮಗೆ ಅನ್ಯಾಯವಾಗಿದೆ, ನಾಳೆ ನಿಮ್ಮಲ್ಲಿ ಯಾರಿಗೆ ಬೇಕಾದರೂ ಇಂಥ ಅನ್ಯಾಯ ಆಗಬಹುದು,” ಎಂಬುದು ಶ್ವೇತಾ ಅವರ ಕಡೆಯ ವಾಕ್ಯ.
ಯಾರು ಈ ಸಂಜೀವ್ ಭಟ್? ಆಗಿದ್ದಾದರೂ ಏನು?

ಅದು 1990ರ ಸಮಯ. ಸಂಜೀವ್ ಭಟ್ ಗುಜರಾತಿನ ಜಾಮನಗರದಲ್ಲಿ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದರು. ಈಗ ಮಾರ್ಗದರ್ಶಕ ಮಂಡಳಿ ಸೇರಿರುವ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿಯವರ ರಥಯಾತ್ರೆ ಗುಜರಾತಿಗೆ ಆಗಮಿಸಿ ಗದ್ದಲಕ್ಕೆ ಎಡೆಮಾಡಿಕೊಟ್ಟಿತ್ತು. ರಥಯಾತ್ರೆಗೆ ಅಡ್ಡಿಯಾಗಿ, ಜಮಜೋಧಪುರ ನಗರದಲ್ಲಿ ಬಂದ್‌ಗೆ ಕರೆ ಕೊಡಲಾಗಿತ್ತು. ಈ ಸಂಬಂಧ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಅಕ್ಟೋಬರ್ 30ರಂದು 150 ಮಂದಿಯನ್ನು ಸಂಜೀವ್ ಭಟ್ ನೇತೃತ್ವದ ತಂಡ ಬಂಧಿಸಿತ್ತು. ಹಾಗೆ ಬಂಧಿಸಲ್ಪಟ್ಟವರಲ್ಲಿ ಪ್ರಭುದಾಸ್ ವೈಷ್ಣಾಣಿ ಎಂಬುವವನೂ ಒಬ್ಬ. ಪೊಲೀಸ್ ಕಸ್ಟಡಿಯಿಂದ ಮನೆಗೆ ಕಳಿಸಿದ ನಂತರ ಆಸ್ಪತ್ರೆಯಲ್ಲಿ ಈತ ಮೃತಪಟ್ಟಿದ್ದ. ಈತನ ಸಹೋದರ ನೀಡಿದ ದೂರಿನ ಮೇರೆಗೆ ಸಂಜೀವ್ ಸೇರಿದಂತೆ ಆರು ಮಂದಿ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪೊಲೀಸ್ ವಶದಲ್ಲಿದ್ದಾಗ ನೀಡಿದ ಕಿರುಕುಳದಿಂದಲೇ ಆತ ಮೃತಪಟ್ಟಿದ್ದಾನೆ ಎಂಬುದು ದೂರಾಗಿತ್ತು.
ಆದರೆ, ಈ ಪ್ರಕರಣ ಹಲವು ವರ್ಷಗಳವರೆಗೆ ಕಡತಗಳಲ್ಲಿ ಉಳಿದುಹೋದ ಇತರ ಪ್ರಕರಣಗಳಂತೆಯೇ ಉಳಿದುಹೋಗಿತ್ತು. ಸಂಜೀವ್ ಅವರ ವಿಚಾರಣೆಗೆ ಗುಜರಾತ್ ರಾಜ್ಯ ಸರ್ಕಾರ ಉತ್ಸಾಹ ತೋರಿರಲಿಲ್ಲ. ಆದರೆ, ನಂತರ ದಿಢೀರನೆ ಈ ಪ್ರಕರಣಕ್ಕೆ ಜೀವ ಕೊಡಲಾಯಿತು. ಈ ಮಧ್ಯೆ, ಡ್ರಗ್ ಕೇಸೊಂದರ ಸಂಬಂಧ 2018ರ ಸೆಪ್ಟೆಂಬರ್ 5ರಂದು ಸಂಜೀವ್ ಅವರನ್ನು ಬಂಧಿಸಲಾಯಿತು. ಇದಕ್ಕೂ ಮುನ್ನವೇ ಅವರನ್ನು ಅಮಾನತು ಮಾಡಲಾಗಿತ್ತು, ನಂತರದಲ್ಲಿ ವಜಾ ಕೂಡ ಮಾಡಲಾಗಿತ್ತು.
ಮೋದಿ ಎಂಟ್ರಿ ಆಗಿದ್ದು ಎಲ್ಲಿ, ಹೇಗೆ?

ಅಸಲಿಗೆ ಸಂಜೀವ್ ಭಟ್ ಮೊದಲ ಆರೋಪಿಯಾಗಿ, ಕಡತಗಳಲ್ಲಿ ಕೊಳೆಯುತ್ತಿದ್ದ ಪ್ರಕರಣಕ್ಕೆ ನಿಜವಾಗಿಯೂ ಮರುಜೀವ ಬಂದದ್ದು 2011ರ ಆಸುಪಾಸು. ಅದಕ್ಕೆ ಮೊದಲು ಸಂಜೀವ್, ಗೋಧ್ರೋತ್ತರ ಹತ್ಯಾಕಾಂಡ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆ ಸಂಬಂಧ ಅಫಿಡವಿಟ್‌ವೊಂದನ್ನು ಸಲ್ಲಿಸಿದ್ದರು. ಗೋಧ್ರಾ ರೈಲು ದುರಂತದ ನಂತರ ಸಭೆ ಕರೆದಿದ್ದ ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿ, “ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ತಮ್ಮ ಕೋಪ ಹೊರಹಾಕಲು ಬಿಡಿ, ಸ್ವಲ್ಪ ನಿಧಾನಿಸಿ,” ಎಂದು ಆಡಳಿತದ ಮುಖ್ಯಸ್ಥರುಗಳಿಗೆ ಸೂಚನೆ ನೀಡಿದ್ದರು ಎಂದು ಸಂಜೀವ್ ಭಟ್ ದಾಖಲಿಸಿದ್ದರು.
ಈ ನಡುವೆ, ಕೋರ್ಟ್ ವಿಶೇಷ ತನಿಖಾ ತಂಡ ನೇಮಿಸಿತ್ತು. ಸಿಬಿಐ ನಿವೃತ್ತ ನಿರ್ದೇಶಕ ಆರ್ ಕೆ ರಾಘವನ್ ಅದರ ಮುಖ್ಯಸ್ಥರಾಗಿದ್ದರು. ಗೋಧ್ರೋತ್ತರ ಗಲಭೆ ಮತ್ತು ಹತ್ಯಾಕಾಂಡಕ್ಕೆ ಮುಖ್ಯಮಂತ್ರಿ ಮೋದಿಯವರ ಕುಮ್ಮಕ್ಕು ಇತ್ತು ಎಂಬ ಆರೋಪವನ್ನು ರಾಘವನ್ ಅವರು ಅನಾಮತ್ತಾಗಿ ತಳ್ಳಿಹಾಕಿದ್ದರು. ಸಂಜೀವ್ ಅವರ ಹೇಳಿಕೆ ನಂಬಲರ್ಹವಲ್ಲ ಎಂದಿತ್ತು ತನಿಖಾ ತಂಡ. ಕೊನೆಗೆ, ಗಲಭೆಗೂ ಮೋದಿಗೂ ಸಂಬಂಧವಿದೆ ಎಂಬಂಥ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವರದಿ ಸಲ್ಲಿಸಿತ್ತು. ಅದೇ ವರ್ಷ (2011) ಸಂಜೀವ್ ಅವರನ್ನು ಅಮಾನತು ಮಾಡಲಾಯಿತು ಮತ್ತು 2015ರಲ್ಲಿ ಸೇವೆಯಿಂದ ವಜಾ ಮಾಡಲಾಯಿತು; ಈ ವೇಳೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವಿತ್ತು.
ಸೇವೆಯಿಂದ ವಜಾ ಮಾಡಿದಾಗ ಸಂಜೀವ್ ಭಟ್ ಹೇಳಿದ್ದೇನು?
ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಂಜೀವ್ ಭಟ್ ಅವರನ್ನು ಪೊಲೀಸ್ ಸೇವೆಯಿಂದ ವಜಾ ಮಾಡಿದ ನಂತರ ‘ದಿ ಹಿಂದು’ ದೈನಿಕ ಅವರನ್ನು ಸಂದರ್ಶಿಸಿತ್ತು (2015, ಆ.21). ಆಗ ಸಂಜೀವ್ ಹೇಳಿದ್ದ ಮಾತುಗಳು ಗಮನಾರ್ಹ.
- ಹೀಗಾಗುತ್ತದೆಂಬ ಅಂದಾಜಿತ್ತು. ಆದರೆ, ಇಷ್ಟೆಲ್ಲ ಸುಳ್ಳಿನ ಲೋಕ ಸೃಷ್ಟಿಯಾದದ್ದು ಅಸಹ್ಯ ತರಿಸಿತು.
- ಪೊಲೀಸ್ ಅಧಿಕಾರಿಯಾಗಿ ಯಾವುದೇ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕೆಂಬ ತಿಳಿವಳಿಕೆ ನನಗಿದೆ. ಆದರೆ, ತನಿಖೆಗೆ ಆದೇಶಿಸಿದ ನಂತರ ಗುಜರಾತ್ ಸರ್ಕಾರವು, ನಾನು ನನ್ನ ಪರವಾಗಿ ವಾದಿಸಲು ಅಗತ್ಯವಿದ್ದ ಸರ್ಕಾರಿ ದಾಖಲೆಗಳನ್ನು ಕೊಡಲೇ ಇಲ್ಲ. ಸಾಕಷ್ಟು ಬಾರಿ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ.
- ವಜಾ ಮಾಡಲೆಂದು ಮಾಡಿದ ಆರೋಪಗಳು ಸಣ್ಣಪುಟ್ಟವು. ಸೇವೆಗೆ ಅನಧಿಕೃತ ಗೈರು, ಸರ್ಕಾರಿ ವಾಹನ ಮತ್ತಿತರ ಸೌಲಭ್ಯಗಳ ದುರ್ಬಳಕೆ ಇತ್ಯಾದಿ ಪುಡಿ ಆರೋಪಗಳನ್ನು ಮಾಡಲಾಗಿತ್ತು. ಇದೆಲ್ಲ ಆಗಿದ್ದು, ಗೋಧ್ರಾ ಹತ್ಯಾಕಾಂಡದ ತನಿಖೆ ನಡೆಸುತ್ತಿದ್ದ ವಿಶೇಷ ತಂಡದ ಎದುರು ಹಾಜರಾಗಿ ನನ್ನ ಹೇಳಿಕೆ ಕೊಟ್ಟ ನಂತರ. ಹತ್ಯಾಕಾಂಡದ ಕುರಿತ ಸತ್ಯಾಂಶ ಹೇಳಿದ್ದಕ್ಕೆ ನನ್ನ ಗೌರವ ಮತ್ತು ಸೇವೆಯ ಘನತೆಯನ್ನು ಮಣ್ಣುಪಾಲು ಮಾಡುವ ಕ್ರಮ ಅದಾಗಿತ್ತು. ಗೃಹ ಸಚಿವಾಲಯ ಹೊರಡಿಸಿದ ವಜಾ ಆದೇಶದಲ್ಲಿ ನನ್ನನ್ನು ಅವಿಧೇಯ ಅಧಿಕಾರಿ ಎಂದು ಹೇಳಲಾಗಿತ್ತು. ನಾನು ಅವರೆದುರು ಕೈಮುಗಿದು ಬೇಡಿಕೊಳ್ಳಬೇಕಿತ್ತೇನು? ಒಬ್ಬ ಐಪಿಎಸ್ ಅಧಿಕಾರಿಯಾಗಿ ನಾನು ಸತ್ಯದ ಜೊತೆ ನಿಂತು ಪ್ರಭುತ್ವಕ್ಕೆ ಅವಿಧೇಯತೆ ತೋರುವ ಧೈರ್ಯ ಮಾಡಿದ್ದೇನಷ್ಟೆ. ಅಧಿಕಾರದಲ್ಲಿ ಇರುವವರ ಕೊಳಕು ಕೆಲಸಗಳಿಗೆ ಬೆಂಬಲ ಕೊಡುವುದು ಐಪಿಎಸ್ ಅಧಿಕಾರಿಗೆ ತಕ್ಕುದಲ್ಲ.
- ಹೋರಾಟದಲ್ಲಿ ಸೋತಿದ್ದಕ್ಕೆ ಖಂಡಿತ ಬೇಸರ ಇಲ್ಲ. ನಾನು ತೆಗೆದುಕೊಂಡ ಯಾವುದೇ ನಿರ್ಧಾರದ ಬಗ್ಗೆಯೂ ನನಗೆ ವಿಷಾದವಿಲ್ಲ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಇದುವರೆಗೂ ಯಾವುದೇ ಹಂತದಲ್ಲೂ ನಾನು ರಾಜಿಯಾಗಿಲ್ಲ. ಇದು ಅಸಮತೋಲಿತ (ಸರ್ಕಾರ ವರ್ಸಸ್ ಸಂಜೀವ್ ಭಟ್) ಹೋರಾಟ ಎಂಬುದು ನಿಜ. ಆದರೂ ನಾನು ಮೌಲ್ಯಗಳಿಗಾಗಿ ಹೋರಾಟ ಮುಂದುವರಿಸುವೆ.
ಆದರೆ, ಸಂಜೀವ್ ಭಟ್ ಅವರ ಏಕಾಂಗಿ ಹೋರಾಟ ಇದುವರೆಗೂ ಅವರಿಗೆ ಯಾವುದೇ ಉಪಕಾರ ಮಾಡಿಲ್ಲ. ಅವರು ಕುಟುಂಬದಿಂದ ದೂರಾಗಿದ್ದಾರೆ. ಮಗಳನ್ನು ನೋಡಲೆಂದು ವಿದೇಶಕ್ಕೆ ಹೋಗಿಬರಲು ಅನುಮತಿ ಸಿಗಲಿಲ್ಲ. ಇಷ್ಟೆಲ್ಲ ಆದ ನಂತರವೂ, ಸಂಜೀವ್ ಅವರು ಸ್ವಂತ ಕುಟುಂಬವೆಂದು ಭಾವಿಸಿದ್ದ ಐಪಿಎಸ್ ಅಧಿಕಾರಿಗಳ ಒಕ್ಕೂಟ ಈ ಬಗ್ಗೆ ತುಟಿ ಬಿಚ್ಚಿಲ್ಲ. ಅವರಿಗೆ ಅನುಕೂಲ ಆಗಲಿದ್ದ ಸರ್ಕಾರಿ ದಾಖಲೆಗಳನ್ನು ಗುಜರಾತಿನ ಯಾವುದೇ ಇಲಾಖೆಯೂ ಕೊಡಲಿಲ್ಲ. ಇದೆಲ್ಲದರ ನಡುವೆ ಇದೀಗ ಸೆಷನ್ಸ್ ಕೋರ್ಟ್, 29 ವರ್ಷ ಹಳೆಯ ಕೇಸಿನ ಸಂಬಂಧ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮಿಕ್ಕ ಆರೋಪಿಗಳಾಗಿದ್ದ ಐವರು ಪೊಲೀಸರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ನೀಡಿದೆ. ಹೋರಾಟದ ಈ ಹಾದಿಯಲ್ಲಿ ಸಂಜೀವ್ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಚಾಲ್ತಿಯಲ್ಲಿದ್ದು, ಮೋದಿ ನೇತೃತ್ವದ ಸರ್ಕಾರದ ದಾಳಗಳ ಬಗ್ಗೆಯೂ ಜೋರು ಚರ್ಚೆ ನಡೆದಿದೆ.