ಕರ್ನಾಟಕ ಕರಾವಳಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಸತತವಾಗಿ ಸೋಲುತ್ತ ಬಂದಿದೆ. ಅದೇ ವೇಳೆ, ಹಾಲಿ ಸಂಸದರ ವೈಫಲ್ಯಗಳ ನಡುವೆಯೂ ಬಿಜೆಪಿ ತನ್ನ ಕೋಟೆಯನ್ನು ಭದ್ರಗೊಳಿಸುತ್ತಲೇ ಇದೆ. ಆದರೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಮಣಿಸುವ ಅವಕಾಶಗಳು ಇದ್ದರೂ ನಾಯಕರ ಸ್ವಪ್ರತಿಷ್ಠೆ, ಹೈಕಮಾಂಡಿನ ಕುರುಡುತನದಿಂದ ಕೈಚೆಲ್ಲಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕರಾವಳಿಯ ಮೂರು ಜಿಲ್ಲೆಗಳು ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ತನ್ನ ಕಂದಾಯ ವ್ಯಾಪ್ತಿಯನ್ನೇ ಲೋಕಸಭಾ ಕ್ಷೇತ್ರವಾಗಿ ಗಳಿಸಿಕೊಂಡಿದೆ. ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಶಿವಮೊಗ್ಗದೊಂದಿಗೆ ಸೇರಿಕೊಂಡು ಲೋಕಸಭಾ ಕ್ಷೇತ್ರವಾಗಿದ್ದರೆ, ಬೈಂದೂರು ವಿಧಾನಸಭಾ ಕ್ಷೇತ್ರವೊಂದು ಶಿವಮೊಗ್ಗ ಕ್ಷೇತ್ರಕ್ಕೆ ಸೇರಿದೆ. ಉತ್ತರ ಕನ್ನಡ ಜಿಲ್ಲೆಯ ಆರು ಮತ್ತು ಬೆಳಗಾವಿಯ ಕಿತ್ತೂರು, ಖಾನಾಪುರ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿಕೊಂಡು ಉತ್ತರ ಕನ್ನಡ ಲೋಕಸಭಾ ಕ್ಷೇತ್ರವಾಗಿದೆ.
ಕರಾವಳಿ, ಮಲೆನಾಡಿಗೆ ಸೇರಿದ ಜಿಲ್ಲೆಗಳಲ್ಲಿ ಮೂರು ದಶಕಗಳಿಂದ ಬಿಜೆಪಿ ಪ್ರಾಬಲ್ಯವಿದೆ. ಇಂದಿನ ದಕ್ಷಿಣ ಕನ್ನಡ ಮತ್ತು ಹಿಂದಿನ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ 28 ವರ್ಷಗಳಲ್ಲಿ ನಡೆದ ಏಳು ಚುನಾವಣೆಗಳಲ್ಲಿ ಬಿಜೆಪಿ ಜಯ ಗಳಿಸಿದೆ. 1991ರಲ್ಲಿ ಕಾಂಗ್ರೆಸ್ ಸೋತ ಅನಂತರ ಮತ್ತೆಂದೂ ಗೆಲುವಿನ ಮುಖವನ್ನು ನೋಡಲಿಲ್ಲ.
ಉಡುಪಿಯಲ್ಲಿ ಒಂದು ಬಾರಿ ವಿನಯ ಕುಮಾರ್ ಸೊರಕೆ ಮತ್ತೊಂದು ಉಪಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಬಿಜೆಪಿಯನ್ನು ಪರಾಜಯಗೊಳಿಸಿದರೂ, ಕಳೆದ ಬಾರಿ ಗೆದ್ದಿರುವ ಶೋಭಾ ಕರಂದ್ಲಾಜೆ ಮತ್ತೊಂದು ಬಾರಿ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ 1996ರಿಂದ ನಡೆದ ಆರು ಚುನಾವಣೆಗಳಲ್ಲಿ ಐದರಲ್ಲಿ ಅನಂತ ಕುಮಾರ್ ಹೆಗಡೆ ಜಯ ಗಳಿಸಿದ್ದು, 1999ರಲ್ಲಿ ಮಾತ್ರ ಮಾರ್ಗರೇಟ್ ಆಳ್ವ ಗೆಲುವು ಕಂಡಿದ್ದರು. ಅದಕ್ಕೂ ಮುನ್ನ, ನಾಲ್ಕು ಬಾರಿ ಸತತವಾಗಿ ಕಾಂಗ್ರೆಸ್‌ನ ದೇವರಾಯ ನಾಯ್ಕ ವಿಜಯ ದಾಖಲಿಸಿದ್ದರು.
ಕರಾವಳಿಯ ಮೂರು ಮಂದಿ ಬಿಜೆಪಿ ಸಂಸದರ ವಿರುದ್ಧವೂ ಪಕ್ಷದೊಳಗೆ ಮತ್ತು ಸಾರ್ವಜನಿಕವಾಗಿ ವಿರೋಧಗಳು ಬಹಿರಂಗವಾಗಿಯೇ ಕೇಳಿಬಂದಿತ್ತು. ಸಂಸದರ ವರ್ತನೆ, ಸಾಧನೆ ಮತ್ತು ನಡವಳಿಕೆಗಳು ಸಹಜವಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟುಮಾಡಿತ್ತು. ಚುನಾವಣೆ ಹತ್ತಿರ ಆಗುತ್ತಿದ್ದಂತೆ ಹಾಲಿ ಸಂಸದರ ವಿರುದ್ಧ ಸಾಮಾಜಿಕ ಜಾಲಾತಾಣಗಳಲ್ಲಿ ಆಕ್ರೋಶಗಳು ವ್ಯಕ್ತವಾಯಿತು. ಇದರ ಹಿಂದೆ ಸಂಘಟನೆಯ ಹಿರಿಯರ ಅತೃಪ್ತಿಯು ಕೆಲಸ ಮಾಡಿತ್ತು ಎಂಬುದು ಸುಳ್ಳಲ್ಲ. ಏನೇ ಆಗಿದ್ದರೂ ಹಾಲಿ ಸಂಸದರ ವಿರುದ್ಧ ಸಾರ್ವಜನಿಕವಾಗಿ ವಿರೋಧ ಇದ್ದಿರುವುದಂತೂ ಸತ್ಯವಾಗಿತ್ತು. ಅದೇ ರೀತಿ, ಬಿಜೆಪಿ ಮತ್ತದರ ಪರಿವಾರದ ಸಂಘಟನೆಗಳ ಮುಖಂಡರಲ್ಲಿ ಕೂಡ ಇವೇ ಕಾರಣಗಳಿಗಾಗಿ ಅಸಮಾಧಾನ ಇತ್ತು ಎಂಬುದು ಕೂಡ ಅಷ್ಟೇ ದಿಟ. ಒಟ್ಟಿನಲ್ಲಿ, ಅಧಿಕಾರದಲ್ಲಿದ್ದವರ ವಿರುದ್ಧ ಅಲೆ ಕರಾವಳಿಯಲ್ಲಿ ಸ್ಪಷ್ಟವಾಗಿ ಇತ್ತು. ಇಂತಹ ಪರಿಸ್ಥಿತಿಯಲ್ಲಿ ನಿರಂತರವಾಗಿ ಸೋಲುತ್ತಿದ್ದ ದಕ್ಷಿಣ ಮತ್ತು ಉತ್ತರ ಕನ್ನಡ ಕ್ಷೇತ್ರಗಳು ಸೇರಿದಂತೆ ಕರಾವಳಿಯ ಯಾವುದೇ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸುವ ಯಾವ ಪ್ರಯತ್ನವನ್ನೂ ಕಾಂಗ್ರೆಸ್ ಮಾಡಿಲ್ಲ ಎಂಬುದು ಸ್ಪಷ್ಟ.
ಮೊದಲಾಗಿ, ದಕ್ಷಿಣ ಕನ್ನಡ ಹೊರತಾಗಿ ಉಳಿದ ಎಲ್ಲ ಮೂರು ಕ್ಷೇತ್ರಗಳನ್ನು ಆ ಪ್ರಾಂತ್ಯದಲ್ಲಿ ಯಾವುದೇ ಪ್ರಾಬಲ್ಯ ಹೊಂದಿರದ ಮಿತ್ರಪಕ್ಷ ಜಾತ್ಯತೀತ ಜನತಾದಳಕ್ಕೆ ಬಿಟ್ಟುಕೊಟ್ಟಾಗಲೇ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯನ್ನು ಸೋಲಿಸುವ ರಾಜಕೀಯ ಇಚ್ಛಾಶಕ್ತಿಯೇ ಇಲ್ಲ ಎಂಬುದು ಸ್ಪಷ್ಟವಾಗಿತ್ತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮೈತ್ರಿಪಕ್ಷಗಳ ಉಮೇದುವಾರರಾಗುತ್ತಾರೆ. ಈ ಕ್ಷೇತ್ರವನ್ನು ಕಾಂಗ್ರೆಸ್ಸಿಗರು ಉಳಿಸಿಕೊಳ್ಳಬಹುದಿತ್ತು. ಆದರೆ, ಪ್ರಮೋದ್ ಪಕ್ಷಾಂತರ ಮಾಡುವ ಮೂಲಕ ಜೆಡಿಎಸ್ ಬಿ ಫಾರಂ ಪಡೆಯುತ್ತಾರೆ. ಇದರ ಹಿಂದೆ ಹಿಂದುತ್ವ ಒಲವುಳ್ಳ, ಕಾಂಗ್ರೆಸ್ ಸಂಪರ್ಕ ಹೊಂದಿರುವ ಯತಿವರ್ಯರೊಬ್ಬರು ರಾಜಕೀಯ ನಡೆಸಿದ್ದಾರೆ ಎಂಬುದು ಉಡುಪಿಯಲ್ಲೀಗ ಬಹಿರಂಗ ರಹಸ್ಯ. ಅಲ್ಲಿಗೆ ಉಡುಪಿಯಲ್ಲಿ ಕಾಂಗ್ರೆಸ್ ಕತೆ ಚುನಾವಣೆಗೆ ಮುನ್ನವೇ ಮುಗಿದಿತ್ತು.
ದಕ್ಷಿಣ ಕನ್ನಡದಲ್ಲಿ ಗೂಟ ಹಾಕಿ ಕುಳಿತಿದ್ದ ಕಾಂಗ್ರೆಸ್ಸಿನ ಕಾಯಂ ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ‘ಹರಿ’ ಈ ಕಡೆ ತಲೆ ಹಾಕಲೇಬಾರದು ಎಂಬ ಒಂದಂಶ ಕಾರ್ಯಕ್ರಮ ಹಾಕಿಕೊಂಡಿದ್ದರು. ಹೈಕಮಾಂಡಿಗೆ ಹತ್ತಿರವಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅಭ್ಯರ್ಥಿಯಾಗಿ ಗೆದ್ದು ಬಂದರೆ ಉಳಿಗಾಲವಿಲ್ಲ ಎಂದೇ ಅವರು ಭಾವಿಸಿದ್ದರು. ಬಿಜೆಪಿಯಲ್ಲಿ ಎಲ್ಲ ಯುವಕರೇ ಗೆದ್ದಿದ್ದು, ಮಿಥುನ್ ರೈ ಎಂಬ ಯುವಕನನ್ನು ಗೆಲ್ಲಿಸುತ್ತೇವೆ ಎಂದು ಸಂಘಟನಾ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಭರವಸೆ ನೀಡಿ ಟಿಕೆಟ್ ತಂದರೇ ಹೊರತು, ಆ ಯುವಕನನ್ನು ಗೆಲ್ಲಿಸುವ ಯಾವ ಪ್ರಯತ್ನಗಳನ್ನು ಮಾಡಿದ್ದಾರೆ ಎಂಬುದನ್ನು ಕಾಂಗ್ರೆಸ್ಸಿನವರೇ ವಿವರಿಸಬೇಕಾಗಿದೆ.
ಇನ್ನು, ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ಆನಂದ ಅಸ್ನೋಟಿಕರ್ ಅವರು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರನ್ನು ಸೋಲಿಸದೆಹೋದರೂ ಕನಿಷ್ಠ ಬಹಿರಂಗವಾಗಿ ಸಂಸದರನ್ನು ಪ್ರಶ್ನಿಸುವ, ಟೀಕಿಸುವ ದಿಟ್ಟತನವನ್ನು ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ಪಕ್ಷದವರು ಬಿಜೆಪಿ ಸಂಸದರನ್ನು ಟೀಕಿಸಲು ಹಿಂಜರಿಯುವ ಪರಿಸ್ಥಿತಿಯಲ್ಲಿ ಈ ಚುನಾವಣೆಯಲ್ಲಿ ಅನಂತರನ್ನು ಪ್ರಶ್ನಿಸಬಹುದು ಎಂಬ ಧೈರ್ಯ ಮತದಾರರಿಗೆ ಬಂದಿದೆ. ಬಿಜೆಪಿಯಲ್ಲಿದ್ದ ಮಾಜಿ ಸಚಿವ ಅಸ್ನೋಟಿಕರ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು. ಸ್ವಲ್ಪ ಮಟ್ಟಿಗೆ ಅಸ್ನೋಟಿಕರ್ ಹೆಗಡೆಗೆ ಸಡ್ಡು ಹೊಡೆದಿದ್ದಾರೆ. ಆದರೆ, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಕಾಂಗ್ರೆಸ್ ಕೊಡುಗೆ ಏನು ಎಂಬುದು ಫಲಿತಾಂಶ ಬಂದಾಗ ಸ್ಪಷ್ಟವಾಗುತ್ತದೆ.
ಬಹುಮುಖ್ಯವಾಗಿ, “ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯನ್ನು ವಿಳಂಬವಾಗಿ ಮಾಡಿರುವುದೇ ಬಿಜೆಪಿ ಸಂಸದರಿಗೆ ವರದಾನವಾಯಿತು. ಚುನಾವಣೆಗಿಂತ ಕನಿಷ್ಠ ಎರಡು ತಿಂಗಳ ಹಿಂದೆಯೇ ಅಭ್ಯರ್ಥಿಗಳ ಘೋಷಣೆ ಆಗಿದ್ದಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತಿತ್ತು,” ಎಂಬುದು ರಾಜಕೀಯ ವಿಶ್ಲೇಷಕರ ಮಾತು ಮತ್ತು ಗುಪ್ತಚರ ವರದಿ ಕೂಡ ಇದನ್ನೇ ಹೇಳುತ್ತದೆ. ಕಾಂಗ್ರೆಸ್ ಮುಖಂಡರು ಚುನಾವಣೆಯನ್ನು ಕೂಡ ತಮ್ಮ ವೈಯಕ್ತಿಕ ಹಿತಾಸಕ್ತಿಯ ವ್ಯವಹಾರವನ್ನಾಗಿ ಮಾಡಿಕೊಂಡಿರುವುದು ಮತ್ತು ಕೇರಳ ಮೂಲದ ಕಾಂಗ್ರೆಸ್ ಉಸ್ತುವಾರಿಗಳಿಗೆ ಇಲ್ಲಿನ ವಾಸ್ತವ ಪರಿಸ್ಥಿತಿ ಗೊತ್ತಿಲ್ಲದಿರುವುದು ಹಿನ್ನಡೆಗೆ ಪ್ರಮುಖ ಕಾರಣ.
ಬಿಜೆಪಿಯವರು ಚುನಾವಣೆಗಾಗಿ ಐದು ವರ್ಷಗಳಿಂದ ಕೆಲಸ ಮಾಡುತ್ತಿರುವಾಗ ಕಾಂಗ್ರೆಸ್ಸಿನವರು ಚುನಾವಣೆ ನಡೆಯುತ್ತಿರುವಾಗಲೂ ಕೆಲಸ ಮಾಡದಿದ್ದರೆ ಅಭ್ಯರ್ಥಿ ಗೆಲ್ಲುವುದಾದರೂ ಹೇಗೆ? ಹಾಗೊಂದು ವೇಳೆ ಗೆದ್ದರೆ, ಅದೊಂದು ಪವಾಡ ಎಂದೇ ಹೇಳಬೇಕಾಗುತ್ತದೆ.
ಅಂಕಣಕಾರರು ಹಿರಿಯ ಪತ್ರಕರ್ತರು