“ಯಾರ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿಲ್ಲ ಹೇಳಿ?”. ಇದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಕೇಳಿಬಂದಿದ್ದ ಭಾರೀ ಭ್ರಷ್ಟಾಚಾರದ ಕುರಿತು ಎರಡು ವಾರದ ಹಿಂದೆ ಮಾಧ್ಯಮಗಳಿಗೆ ನೀಡಿದ್ದ ಪ್ರತಿಕ್ರಿಯೆ.
ಹಾಗೆ ನೋಡಿದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಈ ಮಾತು ಹೊರಬಿದ್ದ ಸಂದರ್ಭ ಕೂಡ ಬಹಳ ಕುತೂಹಲಕಾರಿ. ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಮುಖ್ಯಮಂತ್ರಿಗಳ ನಡುವೆ ಅನಿರೀಕ್ಷಿತ ಖಾಸಗೀ ಮಾತುಕತೆಯ ಹದಿನೈದು ದಿನಗಳ ಬಳಿಕ ಮತ್ತು ಮುಖ್ಯಮಂತ್ರಿ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಮುನ್ನ ಕುಮಾರಸ್ವಾಮಿ ಈ ಮಾತು ಆಡಿದ್ದರು!
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜೊತೆಗೆ, ತಮ್ಮ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಕೆಡವಿ, ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಕಳೆದ ಒಂದೂ ಕಾಲು ವರ್ಷದ ಆಡಳಿತಾವಧಿಯಲ್ಲಿ ನೆರೆ ಇರಬಹುದು, ಬರವಿರಬಹುದು, ಸಾಲು ಸಾಲು ಹಗರಣಗಳಿರಬಹುದು, ಕರೋನಾ ನಿಯಂತ್ರಣ ಮತ್ತು ನಿರ್ವಹಣೆಯ ಯಡವಟ್ಟುಗಳಿರಬಹುದು,.. ಸರ್ಕಾರದ ಯಾವ ಲೋಪಗಳ ವಿಷಯದಲ್ಲಿಯೂ ಪ್ರತಿಪಕ್ಷದ ಮುಖಂಡರಾಗಿ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾದ ರಾಜ್ಯದ ಒಬ್ಬ ಜವಾಬ್ದಾರಿಯುತ ನಾಯಕರಾಗಿ ಕುಮಾರಸ್ವಾಮಿ ಅವರು ಗಟ್ಟಿಯಾಗಿ ಮಾತನಾಡಿದ್ದು ವಿರಳವೇ.
ಕರೋನಾ ಹಿನ್ನೆಲೆಯಲ್ಲಿ ಮೊಟಕುಗೊಂಡ ಸದನದಲ್ಲಿ ಈ ಬಾರಿ ಕಾಂಗ್ರೆಸ್ ಸಕ್ರಿಯ ಪ್ರತಿಪಕ್ಷವಾಗಿ ಸರ್ಕಾರದ ಹಲವು ವೈಫಲ್ಯಗಳು ಮತ್ತು ಹಗರಣಗಳ ಕುರಿತು ವಿಸ್ತೃತ ಚರ್ಚೆ ನಡೆಸಿತು. ಆ ಮೂಲಕ ಆ ಚರ್ಚೆಯ ಭಾಗವಾಗಿಯೇ ಅವಿಶ್ವಾಸ ಗೊತ್ತುವಳಿಯನ್ನೂ ಮಂಡಿಸಿ, ಸರ್ಕಾರದ ಪ್ರತಿ ನಡೆಯನ್ನೂ ಜನರ ಮುಂದಿಡುವ ಅವಕಾಶವಾಗಿ ಸಂದರ್ಭವನ್ನು ಬಳಸಿಕೊಂಡಿತು. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ರಮೇಶ್ ಕುಮಾರ್ ಮತ್ತಿತರು ಪ್ರಬಲ ವಾದ ಮಂಡನೆಯ ಮೂಲಕ ಗಮನ ಸೆಳೆದರು. ಆದರೆ, ಹಿಂದಿನ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕೆ ಮಾತ್ರ, ಅವಿಶ್ವಾಸ ಗೊತ್ತುವಳಿ ವೇಳೆ ಸರ್ಕಾರದ ಪರ ನಿಂತಿದ್ದೇ ಅಲ್ಲದೆ, ಕಲಾಪದ ಅಷ್ಟೂ ದಿನ ಬಹುತೇಕ ಒಂದೋ ಜಾಣ ಮೌನಕ್ಕೆ ಶರಣಾಗಿದ್ದರು, ಇಲ್ಲವೇ ಸರ್ಕಾರದ ಪರ ಮೃದು ಧೋರಣೆ ತಳೆದಿದ್ದರು.
ಅವರ ಆ ಧೋರಣೆಗೆ ಕಲಾಪಕ್ಕೆ ಮುನ್ನ ಅವರು ಸಿಎಂ ಯಡಿಯೂರಪ್ಪ ಅವರನ್ನು ಖಾಸಗಿಯಾಗಿ ಭೇಟಿ ಮಾಡಿದ್ದು ಮತ್ತು ಅದಾದ ಬಳಿಕ ಅವರು ಬಿಜೆಪಿ ಸರ್ಕಾರ ಉಳಿಸುವ ನಿಟ್ಟಿನಲ್ಲಿ ನೀಡಿದ್ದ ಹೇಳಿಕೆಯ ಮುಂದುವರಿದ ಭಾಗ ಎಂಬುದು ಗುಟ್ಟೇನಲ್ಲ.
ಪ್ರಮುಖವಾಗಿ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಅವರದೇ ಪಕ್ಷದಲ್ಲಿಯೇ ಅವರ ವಿರೋಧ ಬಣ ಕಳೆದ ಒಂದು ತಿಂಗಳಿನಿಂದ ತೀವ್ರ ಪ್ರಯತ್ನಗಳನ್ನು ಆರಂಭಿಸಿದೆ. ಪ್ರಹ್ಲಾದ್ ಜೋಷಿ, ಬಿ ಎಲ್ ಸಂತೋಷ್, ಜಗದೀಶ್ ಶೆಟ್ಟರ್ ಮತ್ತಿತರ ನಾಯಕರು ನಾಯಕತ್ವ ಬದಲಾವಣೆಯ ತಮ್ಮ ದನಿಯನ್ನು ಎತ್ತರಿಸಿದ್ಧಾರೆ. ಒಂದು ವೇಳೆ ನಾಯಕತ್ವ ಬದಲಾವಣೆಯ ಪ್ರಯತ್ನಗಳು ಫಲಕೊಟ್ಟು ಹೈಕಮಾಂಡ್ ಹಸಿರು ನಿಶಾನೆ ತೋರಿದರೆ, ಆಗ ಯಡಿಯೂರಪ್ಪ ನೆರವಿಗೆ ಬರಲು ಜೆಡಿಎಸ್ ನಾಯಕರು ಸಜ್ಜಾಗಿದ್ದಾರೆ. ಸರ್ಕಾರ ಮುಂದಿನ ಮೂರು ವರ್ಷ ಉಳಿಯಬೇಕು. ಪದೇ ಪದೇ ಸರ್ಕಾರ ಬದಲಾಗುವುದರಿಂದ ರಾಜ್ಯದ ಜನತೆಗೆ ತೊಂದರೆಯಾಗುವುದನ್ನು ತಪ್ಪಿಸಲು ತಾವು ಯಡಿಯೂರಪ್ಪ ಪರ ನಿಲ್ಲುವುದಾಗಿ ಕಳೆದ ವರ್ಷದ ಯಡಿಯೂರಪ್ಪ ವಿಶ್ವಾಸ ಮತ ಯಾಚನೆಯ ವೇಳೆಯೇ ಕುಮಾರಸ್ವಾಮಿ ಸದನದ ಒಳಗೇ ಹೇಳಿದ್ದರು. ಪಕ್ಷದ ಮತ್ತೊಬ್ಬ ಮುಖಂಡ ಬಸವರಾಜ್ ಹೊರಟ್ಟಿ ಕೂಡ ಇದೇ ಮಾತನ್ನು ಆಡಿದ್ದರು.
ಇದೀಗ ಆ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಪ್ರಯತ್ನಿಸುತ್ತಿದ್ದು, ಮತ್ತೊಮ್ಮೆ ವಚನಭ್ರಷ್ಟ ಎನಿಸಿಕೊಳ್ಳುವ ಸಂದರ್ಭ ಬರದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ ಎಂಬುದು ರಾಜಕೀಯ ಪಡಸಾಲೆಯ ವ್ಯಂಗ್ಯದ ಮಾತು.
ಹಾಗಾಗಿಯೇ ಕುಮಾರಸ್ವಾಮಿಯವರು ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಮತ್ತು ಅಳಿಯ-ಮೊಮ್ಮಗನ ಸಾಲುಸಾಲು ಬಹುಕೋಟಿ ಹಗರಣಗಳ ವಿಷಯದಲ್ಲಿಯೂ ರಾಜಕೀಯ ಸನ್ಯಾಸ ಸ್ವೀಕರಿಸಿದ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದರು. ಯಾವ ಕುಟುಂಬದ ಮೇಲೆ ಭ್ರಷ್ಟಾಚಾರ ಆರೋಪವಿಲ್ಲ ಹೇಳಿ? ಭ್ರಷ್ಟಾಚಾರ ಪ್ರಕರಣ ವಿಷಯದಲ್ಲಿ ಕೊನೆಗೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಅಲ್ಲವೇ? ಹಾಗಾಗಿ ಇಂತಹ ವಿಷಯಗಳ ಚರ್ಚೆ ಮಾಡಿ ಸಮಯ ಹಾಳು ಮಾಡುವ ಬದಲು, ರಾಜ್ಯದ ಬರ ಮತ್ತು ಕರೋನಾ ನಿರ್ವಹಣೆಯ ವಿಷಯದಲ್ಲಿ ಎಲ್ಲಾ ಪಕ್ಷಗಳು ಒಂದಾಗಿ ಕೆಲಸ ಮಾಡಬೇಕಿದೆ ಎಂದು ಮುತ್ಸದ್ಧಿತನದ ವರಸೆ ತೋರಿದ್ದರು.
ಆದರೆ, ಹೀಗೆ ಭ್ರಷ್ಟಾಚಾರದ ಬಗ್ಗೆ ಒಂದು ರೀತಿಯಲ್ಲಿ ಅದನ್ನು ಒಪ್ಪಿಕೊಂಡಂತೆ, ಮತ್ತೊಂದು ಕಡೆ ಅದನ್ನು ಸರಿಪಡಿಸಲಾಗದು ಎಂಬಂತೆ ಮಾತನಾಡಿರುವ ಕುಮಾರಸ್ವಾಮಿಯವರು, ಕೆಲವು ವರ್ಷಗಳ ಹಿಂದೆ ಇದೇ ಯಡಿಯೂರಪ್ಪ ಸಿಎಂ ಆಗಿದ್ಧಾಗ, ಅವರ ಸಾಲುಸಾಲು ಹಗರಣಗಳನ್ನು ಧಾರಾವಾಹಿಯಂತೆ ಪತ್ರಿಕಾಗೋಷ್ಠಿಗಳಲ್ಲಿ ಬಹಿರಂಗಪಡಿಸುತ್ತಾ ಭ್ರಷ್ಟಾಚಾರದ ವಿರುದ್ಧದ ಸಮರ ಸಾರಿದ ಹುತಾತ್ಮನ ವೇಷ ತೊಟ್ಟಿದ್ದರು ಎಂಬುದನ್ನು ಇತಿಹಾಸ ಮರೆಯಲಾರದು ಅಲ್ಲವೆ? ಆಗ ಭ್ರಷ್ಟ ವ್ಯವಸ್ಥೆಯ ವಿರುದ್ಧ, ಯಡಿಯೂರಪ್ಪ ವಿರುದ್ಧ, ರಾಜಕೀಯ ಶುದ್ಧೀಕರಣದ ಪರ ಮಣಿಯದ ಸಮರ ತಮ್ಮದು ಎನ್ನುತ್ತಿದ್ದ ಮಾಜಿ ಮುಖ್ಯಮಂತ್ರಿಗಳಿಗೆ ಯಾವ ಘಳಿಗೆಯಲ್ಲಿ ಅದೆಲ್ಲಾ ವ್ಯರ್ಥ ಎಂಬ ಅಕಾಲ ವೈರಾಗ್ಯ ಕಾಡಿತು ಮತ್ತು ಯಾಕೆ ಕಾಡಿತು ಎಂಬುದು ಕುತೂಹಲಕಾರಿ!
ವಿಪರ್ಯಾಸವೆಂದರೆ; ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಹಗರಣ, ಅವ್ಯವಹಾರ, ಲೋಪಗಳಷ್ಟೇ ಅಲ್ಲ; ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ಬದಲಾವಣೆ ಸೇರಿದಂತೆ ಹಲವು ರೈತ, ಕಾರ್ಮಿಕ ವಿರೋಧಿ ಕಾನೂನುಗಳ ವಿಷಯದಲ್ಲಿ ಕೂಡ ‘ಮಣ್ಣಿನ ಮೊಮ್ಮಗ’ನ ವರಸೆ ಕೂಡ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆಯೇ. ಒಂದು ಪ್ರಾದೇಶಿಕ ಪಕ್ಷವಾಗಿ ನಾಡಿನ ನೆಲ-ಜಲ ಮತ್ತು ಜನರ ವಿಷಯದಲ್ಲಿ ಸ್ಪಷ್ಟ ಮತ್ತು ದಿಟ್ಟ ದನಿಯಾಗಬೇಕಿದ್ದ ಜೆಡಿಎಸ್, ಅದಕ್ಕೆ ತದ್ವಿರುದ್ಧವಾಗಿ ಗಾಳಿಬಂದ ಕಡೆ ತೂರಿಕೊಳ್ಳುವ, ಅನುಕೂಲಕ್ಕೆ ತಕ್ಕಂತೆ ರಾಗ ಬದಲಾಯಿಸುವ ವರಸೆ ಪ್ರದರ್ಶಿಸುತ್ತಿದೆ. ನೆರೆಯ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವಂತೆಯೇ ರಾಜ್ಯದಲ್ಲಿ ಜೆಡಿಎಸ್ ಕೂಡ, ರಾಜ್ಯದ ಹಿತದ ಪರ ನಿಲ್ಲುವ ಬದಲು ಪಕ್ಷದ ನಾಯಕರ ಅನುಕೂಲಕ್ಕೆ ತಕ್ಕಂತೆ ರಾಷ್ಟ್ರೀಯ ಪಕ್ಷಗಳೊಂದಿಗೆ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.
ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣದ ವಿದ್ಯಾಗಮ ಯೋಜನೆ, ಮಹಿಳಾ ಸಾಂತ್ವನ ಕೇಂದ್ರಗಳ ಸಮಸ್ಯೆ ಮುಂತಾದ ವಿಷಯದಲ್ಲಿ ಕಳೆದೊಂದು ವಾರದಿಂದ ಯಡಿಯೂರಪ್ಪ ಸರ್ಕಾರದ ವಿರುದ್ಧ ಟ್ವಿಟರ್ ಸಮರ ಸಾರಿರುವ ಕುಮಾರ ಸ್ವಾಮಿ ಅವರು, ಆರ್ ಆರ್ ನಗರ ಮತ್ತು ಶಿರಾ ವಿಧಾನಸಭಾ ಉಪ ಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತೆ ಚುರುಕಾಗಿದ್ದಾರೆ. ಆದರೆ, ಅವರು ಸರ್ಕಾರದ ಲೋಪಗಳನ್ನು, ವೈಫಲ್ಯಗಳನ್ನು ಪ್ರಶ್ನಿಸಲು ಎತ್ತುತ್ತಿರುವ ವಿಷಯಗಳು ಯಾವುವು? ಎಂಬುದು ಕೂಡ ಗಮನಾರ್ಹ. ಸಾಲುಸಾಲು ಭ್ರಷ್ಟಾಚಾರ, ನೆರೆ ಮತ್ತು ಕರೋನಾದಂತಹ ಸಂದರ್ಭಗಳ ನಿರ್ಹವಣೆಯಲ್ಲಿನ ಹೀನಾಯ ವೈಫಲ್ಯಗಳ ವಿಷಯದಲ್ಲಿ ಜಾಣ ಮೌನಕ್ಕೆ, ನಾಜೂಕು ವರಸೆಗೆ ಮೊರೆಹೋಗಿ, ವಿದ್ಯಾಗಮ, ಮಹಿಳಾ ಸಾಂತ್ವನ ಕೇಂದ್ರದಂತಹ ವಿಷಯದಲ್ಲಿ ಆನ್ ಲೈನ್ ಸಮರ ಸಾರುವ, ಕ್ರಮಕೈಗೊಳ್ಳದೇ ಹೋದರೆ ಉಪವಾಸ ಕೂರುತ್ತೇನೆ ಎನ್ನುವ ಮಟ್ಟಿನ ಕೆಚ್ಚು ತೋರಿಸುವುತ್ತಿರುವುದು ಏನನ್ನು ಹೇಳುತ್ತಿದೆ?
ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ ಎಂಬ ಮಾತಿದೆ ನಿಜ. ಆದರೆ, ಜೆಡಿಎಸ್ ವಿಷಯದಲ್ಲಿ ಇತ್ತೀಚಿನ ವರ್ಷಗಳಲ್ಲಂತೂ ಈ ಮಾತು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಕೇವಲ ವರ್ಷದ ಹಿಂದೆ ಕಾಂಗ್ರೆಸ್ ನಾಯಕರನ್ನು ಅಣ್ಣ- ಗೆಳೆಯ ಎಂದು ಕರೆಯುತ್ತಾ, ಸಮ್ಮಿಶ್ರ ಸರ್ಕಾರದ ಅಧಿಕಾರ ಅನುಭವಿಸಿದ್ದ ಕುಮಾರಸ್ವಾಮಿ ಅವರು, ಅಂದಿನ ತಮ್ಮದೇ ಸರ್ಕಾರವನ್ನ ಆಪರೇಷನ್ ಕಮಲದ ಮೂಲಕ ಕೆಡವಿ, ತಮ್ಮ ಕುರ್ಚಿಯನ್ನೂ ಕಿತ್ತುಕೊಂಡು ಅಧಿಕಾರಕ್ಕೆ ಬಂದವರ ಪರ ಸಾರ್ವಜನಿಕ ಸಮರ್ಥನೆಗೆ ಇಳಿದಿದ್ದಾರೆ. ಅಷ್ಟೇ ಅಲ್ಲ; ಸರ್ಕಾರದ ತೀರಾ ಜನ ವಿರೋಧಿ ಕಾಯ್ದೆ ಕಾನೂನುಗಳ ವಿಷಯದಲ್ಲಿ ಕೂಡ ಸರ್ಕಾರದ ಪರ ಮೃದು ಧೋರಣೆ ತಳೆದಿರುವುದು ರಾಜಕೀಯ ಮೀರಿ ಬೇರೇನೋ ಕೆಮಿಸ್ಟ್ರಿ ಕೆಲಸ ಮಾಡುತ್ತಿರುವಂತಿದೆ ಎಂಬ ಗುಮಾನಿಗಳಿಗೆ ಕಾರಣವಾಗಿದೆ. ಅದರಲ್ಲೂ ಉಪ ಚುನಾವಣೆಯ ಕಣ, ಡ್ರಗ್ಸ್ ಮಾಫಿಯಾ ತನಿಖೆ, ಅಲುಗಾಡುತ್ತಿರುವ ಬಿಎಸ್ ವೈ ಕುರ್ಚಿ ಮತ್ತಿತರ ಸಂಗತಿಗಳ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷದ ಹೊಸ ವರಸೆ ಹೊಸ ಲೆಕ್ಕಾಚಾರಗಳಿಗೆ ಚಾಲನೆ ನೀಡಿದೆ.
ಅದೇನೇ ಇರಲಿ; ಒಂದಂತೂ ಸ್ಪಷ್ಟ. ನೈಜ ಪ್ರಾದೇಶಿಕ ನಾಡು-ನುಡಿಯ ಕುರಿತ ಕಾಳಜಿ, ಜನಪರ ಬದ್ಧತೆ, ಕೇಂದ್ರ ಸರ್ಕಾರಗಳಿಂದ ರಾಜ್ಯಗಳಿಗೆ ಆಗುವ ನಿರಂತರ ಅನ್ಯಾಯಗಳನ್ನು ಪ್ರಶ್ನಿಸುವ ಛಾತಿಯ ಪ್ರಾದೇಶಿಕ ಪಕ್ಷ ಕರ್ನಾಟಕದ ಮಟ್ಟಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚು ಜರೂರಿದೆ. ಆದರೆ, ವಿಪರ್ಯಾಸದ ಸಂಗತಿಯೆಂದರೆ; ಇಂತಹ ಹೊತ್ತಲ್ಲಿ ತಾಂತ್ರಿಕವಾಗಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಕೂಡ, ನಾಡಿನ ನೈಜ ಹಿತ ಕಾಯುವ ಬದಲು ಅನುಕೂಲಸಿಂಧು ರಾಜಕಾರಣದ ಮೂಲಕ ರಾಷ್ಟ್ರೀಯ ಪಕ್ಷಗಳೊಂದಿಗೆ ಚೌಕಾಸಿಗೆ ಇಳಿದಿದೆ. ಇದು ಕರ್ನಾಟಕದ ಪ್ರಾದೇಶಿಕ ರಾಜಕಾರಣದ ದುರಂತ!