ಭಾರತ ರಫೇಲ್ಗಳನ್ನು ಹೊಂದಿರುವುದು ಗೇಮ್ ಚೇಂಜರ್ ಆಗಿರಲಿದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅಂಬಾಲದ ವಾಯುನೆಲೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಭಾರತೀಯ ವಾಯುಸೇನೆಗೆ ಐದು ರಫೇಲ್ ವಿಮಾನಗಳು ಸೇರಿಕೊಂಡಿರುವುದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ. ಇದು ಜಗತ್ತಿಗೆ ಬಲವಾದ ಸಂದೇಶವನ್ನು ರವಾನಿಸುತ್ತದೆ, ಮುಖ್ಯವಾಗಿ ನಮ್ಮೆಡೆಗೆ ಕಣ್ಣೆತ್ತಲು ಧೈರ್ಯ ತೋರಿಸುವವರಿಗೆ ಎಂದು ಎಚ್ಚರದ ಸಂದೇಶ ನೀಡಿದ್ದಾರೆ. ಗಡಿಯಲ್ಲಿ ಉದ್ಭವಿಸಿರುವ ಸಂಘರ್ಷದ ಸ್ಥಿತಿಯಲ್ಲಿ ಈ ನಡೆ (ಭಾರತೀಯ ವಾಯುಸೇನೆಗೆ ರಫೇಲ್ ಸೇರಿಸಿಕೊಳ್ಳುವುದು) ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಚೀನಾ- ಭಾರತ ಗಡಿ ಸಂಘರ್ಷವನ್ನು ಉಲ್ಲೇಖಿಸಿ ಸಚಿವರು ಭಾಷಣ ಮಾಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಉದ್ವಿಘ್ನ ಪರಿಸ್ಥಿತಿಯ ವೇಳೆ ವಾಸ್ತಾವಿಕ ಗಡಿ ರೇಖೆಯಲ್ಲಿ (Line of Actual Control) ಭಾರತೀಯ ವಾಯುಸೇನೆ ತೋರಿದ ಸಮಯಪ್ರಜ್ಞೆಯನ್ನು ನಾನು ಅಭಿನಂದಿಸುತ್ತೇನೆ. ಅದು ನಿಮ್ಮ ಬದ್ಧತೆಯನ್ನು ಎತ್ತಿ ತೋರಿಸಿದೆ ಎಂದು ವಾಯುಸೇನೆಯನ್ನು ಶ್ಲಾಘಿಸಿದ್ದಾರೆ. ಐಎಎಫ್ ಸೈನಿಕರನ್ನು ಫಾರ್ವರ್ಡ್ ಬೇಸ್ಗಳಲ್ಲಿ ನಿಯೋಜಿಸಿರುವುದು ವಾಯುಪಡೆಯು ತನ್ನ ಕಾರ್ಯಾಚರಣೆಯ ಜವಾಬ್ದಾರಿಗಳನ್ನು ಪೂರೈಸಲು ಸಿದ್ಧವಾಗಿದೆ ಎಂಬ ವಿಶ್ವಾಸವನ್ನು ಉಂಟುಮಾಡುತ್ತದೆ ಎಂದಿದ್ದಾರೆ.
ರಫೇಲ್ ಯುದ್ಧ ವಿಮಾನಗಳನ್ನು ಅನಾವರಣ ಗೊಳಿಸುವ ಸಂಧರ್ಭವನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಭವಿಷ್ಯದ ಯಾವುದೇ ಯುದ್ಧದ ಸಂದರ್ಭದ ಮಿಲಿಟರಿ ಕಾರ್ಯಾಚರಣೆಯಲ್ಲಿ ಇನ್ನು ಭಾರತೀಯ ವಾಯುಸೇನೆ ನಿರ್ಣಾಯಕ ಪಾತ್ರವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಒಂದೆಡೆ, ಪ್ರಸ್ತುತ ಗಡಿ ಪರಿಸ್ಥಿತಿ ನಮ್ಮ ಗಮನವನ್ನು ಸೆಳೆದಿದೆ, ಪ್ರಾಯೋಜಿತ ಭಯೋತ್ಪಾದನೆಯಿಂದ ಉಂಟಾಗುವ ಬೆದರಿಕೆಯನ್ನು ನಾವು ಮರೆಯಬಾರದು” ಎಂದು ರಕ್ಷಣಾ ಸಚಿವರು ಪಾಕಿಸ್ತಾನದ ಬಗ್ಗೆ ಉಲ್ಲೇಖಿಸಿದ್ದಾರೆ.
“ಉತ್ತರ ಗಡಿಗಳಲ್ಲಿನ ಭದ್ರತಾ ಸವಾಲುಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅಂತಹ ಸನ್ನಿವೇಶದಲ್ಲಿ, ನಮ್ಮ ರಾಷ್ಟ್ರ ಮತ್ತು ಮೌಲ್ಯಗಳ ರಕ್ಷಣೆಗಾಗಿ ನಾವೆಲ್ಲರೂ ಜಾಗರೂಕರಾಗಿರಬೇಕು. ನಮ್ಮ ಸುರಕ್ಷತೆಗಾಗಿ ನಮ್ಮ ಜಾಗರೂಕತೆಯು ಪ್ರಮುಖ ಪರಿಹಾರವಾಗಿದೆ” ಎಂದು ಸಿಂಗ್ ಹೇಳಿದ್ದಾರೆ.
ದೇಶದ ಅತ್ಯಂತ ಹಳೆಯ ವಾಯುಪಡೆಯ ನೆಲೆಯಾದ ಅಂಬಾಲಾ ವಾಯುಪಡೆ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರೆಂಚ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪರ್ಲಿ, ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಏರ್ ಚೀಫ್ ಮಾರ್ಷಲ್ RKS ಭದೌರಿಯಾ ಮತ್ತು ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಭಾಗವಹಿಸಿದ್ದರು. ಸಮಾರಂಭದಲ್ಲಿ ಸರ್ವಧರ್ಮ ಪೂಜೆಯೂ ನೆರವೇರಿಸಲಾಗಿತ್ತು.