‘ಮೇಡ್ ಇನ್ ಚೈನಾ’ ಎಂದರೆ, ಬಾಳಿಕೆ ಕಡಿಮೆ ಎನ್ನುವ ಮಾತಿದೆ. ಕಡಿಮೆ ಬೆಲೆಗೆ ಸಿಗುವ ʼಮೇಡ್ ಇನ್ ಚೈನಾʼ ವಸ್ತುಗಳಿಗೆ ಯಾವುದೇ ಗ್ಯಾರಂಟಿ ವ್ಯಾರಂಟಿ ಇರುವುದಿಲ್ಲ. ಇದೇ ಕಾರಣಕ್ಕಾಗಿ ಕೋವಿಡ್-19 ಭಾರತಕ್ಕೆ ಎಂಟ್ರಿಕೊಟ್ಟ ಮೊದಮೊದಲು ಒಂದು ಕಾಮಿಡಿ ಕೂಡ ಹುಟ್ಟಿಕೊಂಡಿತ್ತು. ಅಪ್ಪ ಮಗನಿಗೆ ಕರೋನಾ ವೈರಸ್ ಬಂದಿದೆ ಶಾಲೆಗೆ ಹೋಗುವಾಗ ಮಾಸ್ಕ್ ಹಾಕೊಂಡು ಹೋಗು ಎಂದು ಹೇಳುತ್ತಾನೆ. ಮಗಾ “ಯಾಕಪ್ಪ?” ಅಂತಾನೆ. “ಕರೋನಾ ಬಂದಿದೆ ಗೊತ್ತಿಲ್ವೇನು?” ಎಂದು ಮರು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಮಗ “ಕರೋನಾ ಬಂದಿರೋದು ಎಲ್ಲಿಂದ ಹೇಳು.. ಚೀನಾದಿಂದ, ಚೀನಾ ವಸ್ತುಗಳಿಗೆ ಯಾವುದಕ್ಕಾದರೂ ಗ್ಯಾರಂಟಿ ಇದೆಯಾ? ಅಂತಾ ತಂದೆಯನ್ನೇ ಅವಾಕ್ಕಾಗಿಸುತ್ತಾನೆ. ಇದು ಕಾಮಿಡಿಗಾಗಿ ಮಾಡಿದ್ದರೂ ಇದೀಗ ಸತ್ಯ ಎನ್ನುವಂತಾಗಿದೆ. ಆದರೆ ಕರೋನಾ ಸೋಂಕಿನ ಮೇಲಿನ ಗ್ಯಾರಂಟಿ ಅಲ್ಲ. ಅದರ ಬದಲಿಗೆ ಕರೋನಾ ಸೋಂಕನ್ನು ಪತ್ತೆ ಮಾಡಲು ಬಳಸುತ್ತಿರುವ ರ್ಯಾಪಿಡ್ ಟೆಸ್ಟಿಂಗ್ ಕಿಟ್ಗಳ ಮೇಲೆ ಭಾರೀ ಅನುಮಾನ ಮೂಡುವಂತಾಗಿದೆ.
ಚೀನಾದಲ್ಲಿ ಮೊದಲು ಕಾಣಿಸಿಕೊಂಡಿದ್ದ ಕರೋನಾ ವೈರಸ್ ನಿಧಾನವಾಗಿ ವಿಶ್ವವನ್ನೇ ನುಂಗಿ ಹಾಕುವತ್ತ ದಾಪುಗಾಲು ಇಟ್ಟಿದೆ. ವಿಶ್ವದಲ್ಲಿ ಬರೋಬ್ಬರಿ 23 ಲಕ್ಷ ಜನರು ಈ ಹೆಮ್ಮಾರಿ ಕರೋನಾ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ. ಅದರಲ್ಲಿ ಒಂದೂವರೆ ಲಕ್ಷ ಜನರು ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಈ ರೀತಿಯ ಚಂಡಮಾರುತವನ್ನೇ ಸೃಷ್ಟಿ ಮಾಡಿರುವ ಕರೋನಾ ವೈರಸ್ ಪತ್ತೆ ಮಾಡಲು ಚೀನಾ ಒಂದು ಸಲಕರಣೆಯನ್ನು ಪತ್ತೆ ಮಾಡಿದೆ. ಈ ಟೆಸ್ಟ್ ಕಿಟ್ಗಳಲ್ಲಿ ಕೆಲವೇ ಸಮಯದಲ್ಲಿ ಕರೋನಾ ಸೋಂಕು ಇದೆಯೋ ಇಲ್ಲವೋ ಎನ್ನುವ ಬಗ್ಗೆ ಫಲಿತಾಂಶ ಹೇಳಿಬಿಡಬಹುದು. ರಿಯಲ್ ಟೈಂ ಪಿಸಿಆರ್ ಟೆಸ್ಟ್ನಲ್ಲಿ ಶೇಕಡವಾರು 99.9 ರಷ್ಟು ನಿಖರ ವರದಿ ಸಿಗಲಿದ್ದು, ರ್ಯಾಪಿಡ್ ಟೆಸ್ಟ್ ಕಿಟ್ ನಲ್ಲಿ ಶೇಕಡವಾರು 80 ಖಚಿತ ಮತ್ತು ವೇಗವಾದ ವರದಿ ಸಿಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಭಾರತ 6.5 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ ಆಮದು ಮಾಡಿಕೊಳ್ಳುತ್ತಿದ್ದು, ಅದರಲ್ಲಿ ಕರ್ನಾಟಕಕ್ಕೆ 1 ಲಕ್ಷ ರ್ಯಾಪಿಡ್ ಕಿಟ್ ಸಿಗುವ ಭರವಸೆ ವ್ಯಕ್ತಪಡಿಸಿದ್ದರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್.
ಇದೀಗ ಉನ್ನತ ಶಿಕ್ಷಣ ಸಚಿವ ಡಿಸಿಎಂ ಅಶ್ವತ್ಥ ನಾರಯಣ ನೀಡುವ ಮಾಹಿತಿಯಂತೆ ಕೇವಲ ಕರ್ನಾಟಕಕ್ಕೆ 2 ಲಕ್ಷ ರ್ಯಾಪಿಡ್ ಕಿಟ್ ಗಳಿಗಾಗಿ ಆರ್ಡರ್ ಕೊಡಲಾಗಿದೆ. ಈ ತಿಂಗಳಾಂತ್ಯಕ್ಕೆ ಕೆಲವು ಕಿಟ್ಗಳು ಬರುತ್ತವೆ ಎಂದಿದ್ದಾರೆ. ಡಿಸಿಎಂ ಅಶ್ವತ್ಥ ನಾರಾಯಣ ನೇತೃತ್ವದ ಕೋವಿಡ್-19 ʼಟಾಸ್ಕ್ ಫೋರ್ಸ್ʼ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚೀನಾ ಸರ್ಕಾರವೇ ಪಟ್ಟಿ ಮಾಡಿರುವ ಅಧಿಕೃತ ಸಂಸ್ಥೆಗೆ ಆರ್ಡರ್ ಕೊಟ್ಟಿದ್ದು, ರ್ಯಾಪಿಡ್ ಕಿಟ್ ಸಿಗುತ್ತಿದ್ದಂತೆ ರಾಜ್ಯದಲ್ಲಿ 250 ಕಿಯೋಸ್ಕ್ ಕೇಂದ್ರಗಳನ್ನು ತೆರೆದು ಪರೀಕ್ಷೆ ಮಾಡಲಾಗುತ್ತದೆ ಎಂದಿದ್ದಾರೆ. ಆದರೆ ಈ ಚೀನಾದಲ್ಲಿ ಜನನವಾದ ಕರೋನಾ ವೈರಸ್ ಪತ್ತೆಗೆ ಚೀನಾ ನಿರ್ಮಿತ ರ್ಯಾಪಿಡ್ ಕಿಟ್ ಉಪಯೋಗಕ್ಕೆ ಬರುತ್ತಾ ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ. ಯಾಕಂದ್ರೆ ಇದೇ ಚೀನಾ ನಿರ್ಮಿತ ರ್ಯಾಪಿಡ್ ಟೆಸ್ಟ್ ಕಿಟ್ ಗಳನ್ನು ವಿಶ್ವದ ಏಳು ರಾಷ್ಟ್ರಗಳು ತಿರಸ್ಕಾರ ಮಾಡಿವೆ. ಚೀನಾ ಕಳುಹಿಸಿದ್ದ ಅಷ್ಟೂ ಕಿಟ್ ಗಳನ್ನು ವಾಪಸ್ ಕಳುಹಿಸಲಾಗಿದೆ. ಅಂತಹದರಲ್ಲಿ ಭಾರತ ಸರ್ಕಾರ ಚೀನಾ ನಿರ್ಮಿತ ಟೆಸ್ಟ್ ಕಿಟ್ ಪಡೆಯಲು ಚೀನಾ ಹಿಂದೆ ದುಂಬಾಲು ಬಿದ್ದಿದೆ ಎನ್ನುವುದೇ ಆಶ್ಚರ್ಯ.
ಈಗಾಗಲೇ ನಮ್ಮ ದೇಶದಲ್ಲಿ ಪರೀಕ್ಷೆ ಮಾಡಲು ಬಳಸುತ್ತಿರುವ ವಿಧಾನ ʼರಿಯಲ್ ಟೈಂ ಪಿಸಿಆರ್ ಟೆಸ್ಟ್ʼನಲ್ಲಿ ಶೇಕಡವಾರು 99.9 ರಷ್ಟು ನಿಖರ ವರದಿ ಸಿಗಲಿದೆ ಎಂದಿದ್ದಾರೆ ತಜ್ಞರು. ಆದರೆ ಚೀನಾ ನಿರ್ಮಿತ ರ್ಯಾಪಿಡ್ ಟೆಸ್ಟ್ ಕಿಟ್ನಲ್ಲಿ ಶೇಕಡವಾರು ಫಲಿತಾಂಶ ಕೇವಲ 30 ರಿಂದ 35 ರಷ್ಟು ನಿಖರತೆ ಹೊಂದಿರುತ್ತದೆ ಎನ್ನಲಾಗಿದೆ. ಈಗಾಗಲೇ ವಿಶ್ವದ 7 ರಾಷ್ಟ್ರಗಳು ಚೀನಾ ನಿರ್ಮಿತ ಕರೋನಾ ರ್ಯಾಪಿಡ್ ಕಿಟ್ ಗಳನ್ನು ತಿರಸ್ಕರಿಸಿ ವಾಪಸ್ ಕಳುಹಿಸಿವೆ. ಆದರೆ ನಮ್ಮ ಭಾರತ ಚೀನಾದ ರ್ಯಾಪಿಡ್ ಟೆಸ್ಟ್ ಕಿಟ್ ಗಳಿಗಾಗಿ ಆಸೆಗಣ್ಣಿನಿಂದ ಕಾಯುತ್ತಿದೆ. ಯೂರೋಪಿಯನ್ ರಾಷ್ಟ್ರಗಳಾದ ಸ್ಪೈನ್, ಟರ್ಕಿ, ಜಾರ್ಜಿಯಾ, ಚೆಕ್ ರಿಪಬ್ಲಿಕ್, ನೆದರ್ಲ್ಯಾಂಡ್ ದೇಶಗಳು ಕೂಡ ಚೀನಾ ನಿರ್ಮಿತ ರ್ಯಾಪಿಡ್ ಟೆಸ್ಟ್ ಕಿಟ್ಗಳನ್ನು ತಿರಸ್ಕಾರ ಮಾಡಿವೆ. ಚೀನಾ ನಿರ್ಮಿತಿ ರ್ಯಾಪಿಡ್ ಟೆಸ್ಟ್ ಕಿಟ್ಗಳು ಸರಿಯಾದ ಫಲಿತಾಂಶ ನೀಡುತ್ತಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ, ಚೀನಾಗೆ ಕಿಟ್ ಗಳನ್ನು ವಾಪಸ್ ಮಾಡಿವೆ.
ರ್ಯಾಪಿಡ್ ಟೆಸ್ಟ್ ಕಿಟ್ ಮಾತ್ರವಲ್ಲದೆ ಮಾಸ್ಕ್ ಗಳಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಫಿಲ್ಟರ್ಗಳು ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ʼಡಚ್ ಹೆಲ್ತ್ ಮಿನಿಸ್ಟ್ರಿʼ ತಿಳಿಸಿದೆ. ಐದೂವರೆ ಲಕ್ಷ ಟೆಸ್ಟ್ ಕಿಟ್ ಗಳನ್ನು ಖರೀದಿ ಮಾಡಿ ಹಂಚಿಕೆ ಮಾಡಿದ್ದ ಸ್ಪೈನ್ ಸರ್ಕಾರ, ಕಿಟ್ಗಳು ಸರಿಯಿಲ್ಲ ಎಂದು ಘೋಷಣೆ ಮಾಡಿದ ಬಳಿಕ 9 ಸಾವಿರ ರ್ಯಾಪಿಡ್ ಟೆಸ್ಟ್ ಕಿಟ್ಗಳನ್ನು ಚೀನಾಗೆ ವಾಪಸ್ ಕಳುಹಿಸಿದೆ. ಗುಣಮಟ್ಟ ಸರಿಯಿಲ್ಲ ಎಂದು ವಿಶ್ವದ ಹಲವು ರಾಷ್ಟ್ರಗಳು ವಾಪಸ್ ಮಾಡುತ್ತಿರುವಾಗ ಭಾರತ ಸರ್ಕಾರ ಇಷ್ಟೆಲ್ಲಾ ನೋಡಿಯೂ ಚೀನಾದಿಂದ ರ್ಯಾಪಿಡ್ ಟೆಸ್ಟ್ ಕಿಟ್ ತರಿಸುತ್ತಿದೆ. ಸರ್ಕಾರದ ಉದ್ದೇಶ ಶೀಘ್ರ ತಪಾಸಣೆ ಆಗಿದ್ದರೂ ಕರೋನಾ ಸೋಂಕಿತರಾಗಿದ್ದರೂ ಈ ರ್ಯಾಪಿಡ್ ಟೆಸ್ಟ್ ಕಿಟ್ ನಲ್ಲಿ ಸರಿಯಾಗಿ ಪತ್ತೆಯಾಗದಿದ್ದರೆ ಮತ್ತೊಂದು ದೊಡ್ಡ ತಲೆನೋವು ಶುರುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.