ಹೊಸದಾಗಿ ರಚನೆಯಾದ ಬಿಹಾರ ವಿಧಾನಸಭೆಯಲ್ಲಿ ಸೋಮವಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಅವರು ಎನ್ಡಿಎ ಸರ್ಕಾರದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 19 ಲಕ್ಷ ಉದ್ಯೋಗಗಳನ್ನು ರಾಜ್ಯದ ಜನರಿಗೆ ಒದಗಿಸುವಂತೆ ನೆನಪಿಸಿದ್ದಾರೆ
ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ತೇಜಸ್ವಿ ಯಾದವ್, “ಬಿಹಾರ ದೇಶದ ನಿರುದ್ಯೋಗ ರಾಜಧಾನಿಯಾಗಿ ಮಾರ್ಪಟ್ಟಿದೆ. ಸಾರ್ವಜನಿಕರಿಗೆ ಇನ್ನು ಕಾಯಲು ಸಾಧ್ಯವಿಲ್ಲ. ಮೊದಲ ತಿಂಗಳಲ್ಲಿ 19 ಲಕ್ಷ ಉದ್ಯೋಗಗಳನ್ನು ನೀಡಲು ಸಾಧ್ಯವಾಗದಿದ್ದರೆ, ನಾವು ರಾಜ್ಯಾದ್ಯಂತ ಪ್ರತಿಭಟನೆಯಲ್ಲಿ ಸಾರ್ವಜನಿಕರೊಂದಿಗೆ ಸೇರಿಕೊಳ್ಳುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“1 ಕೋಟಿ 56 ಲಕ್ಷ ಮತದಾರರು ಉದ್ಯೋಗ, ಆರೋಗ್ಯ, ಶಿಕ್ಷಣ, ನೀರಾವರಿ ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗುವುದನ್ನು ನಂಬಿದ್ದಾರೆ. ಅವರ ನಂಬಿಕೆಯನ್ನು ಚೂರುಚೂರು ಮಾಡಲು ನಾವು ಬಿಡುವುದಿಲ್ಲ. ಕಠಿಣ ಹೋರಾಟ ಮುಂದುವರಿಯುತ್ತದೆ” ಎಂದು ಅವರು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮೂರನೇ ಅತಿ ದೊಡ್ಡ ಪಕ್ಷದ ನಾಯಕರಾಗಿದ್ದರೂ ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡಿದ್ದಕ್ಕಾಗಿ ತೇಜಸ್ವಿ ಯಾದವ್, ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಟೀಕಿಸಿದ್ದಾರೆ.
“ಜನರು ಈ ಬಾರಿ ಬದಲಾವಣೆಗೆ ಮತ ಚಲಾಯಿಸಿದರು ಮತ್ತು ಅವರ ತೀರ್ಪು ನೀಡಿದರು. ಎಲ್ಲರಿಗೂ ಅಭಿನಂದನೆಗಳು. ಮೂರನೇ ಅತಿದೊಡ್ಡ ಪಕ್ಷದ ನಾಯಕ ಮುಖ್ಯಮಂತ್ರಿಯಾಗಿದ್ದಾರೆ ಎಂದು ಇದೇ ಮೊದಲ ಬಾರಿಗೆ ಕೇಳಿಬರುತ್ತಿದೆ” ಎಂದು ಅವರು ಹೇಳಿದ್ದಾರೆ.
ನಿತೀಶ್ ಕುಮಾರ್ ಅವರನ್ನು ʼಭ್ರಷ್ಟಾಚಾರದ ಭೀಷ್ಮಪಿತಾಮʼ ಎಂದು ಕರೆದ ಯಾದವ್, ಬಿಹಾರ ಮುಖ್ಯಮಂತ್ರಿ ಭ್ರಷ್ಟ ರಾಜಕಾರಣಿಗಳಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
“ನಿತೀಶ್ ಕುಮಾರ್ ಅವರು ಭ್ರಷ್ಟಾಚಾರದ ಭೀಷ್ಮಪಿತಾಮಹ”. ಈ ಬಾರಿಯೂ ಅವರು ಹಿಂಬಾಗಿಲಿನಿಂದ ಸರ್ಕಾರವನ್ನು ರಚಿಸಿದ್ದಾರೆ. ಅವರು ಶಿಕ್ಷಣ ಸಚಿವಾಲಯದ ಪ್ರಮುಖ ಉಸ್ತುವಾರಿಯನ್ನು ʼನೇಮಕಾತಿ ಹಗರಣʼದಲ್ಲಿ ಭಾಗಿಯಾಗಿದ್ದ ಮೇವಲಾಲ್ ಚೌಧರಿ ಅವರಿಗೆ ನೀಡಿದರು, ಅದಾದ ಬಳಿಕ ತಮ್ಮ ಸಂಬಂಧಿಕರು ಹಗರಣದಲ್ಲಿ ಭಾಗಿಯಾಗಿದ್ದರೂ ಕೃಷ್ಣ ನಂದನ್ ಪ್ರಸಾದ್ ವರ್ಮಾ ಅವರಿಗೆ ಅಧಿಕಾರ ನೀಡಿದ್ದಾರೆ ಎಂದು ಯಾದವ್ ಟೀಕಾ ಪ್ರಹಾರ ನಡೆಸಿದ್ದಾರೆ.