ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಸಂಭವಿಸಿದ ನೆರೆ ಹಾನಿಯ ಕುರಿತು ನೆರೆಪೀಡಿತ ಜಿಲ್ಲೆಗಳ ಕರವೇ ಜಿಲ್ಲಾಧ್ಯಕ್ಷರ ಜತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಗೂಗಲ್ ಹ್ಯಾಂಗ್ ಔಟ್ ಮೂಲಕ ನಡೆಸಿದ ಸಭೆ ನಡೆಸಿದ್ದು, ನೆರೆ ಪರಿಹಾರ ನೀಡದಿದ್ದರೆ ರಾಜ್ಯದ್ಯಂತ ಹೋರಾಟ ಸಂಘಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ನಾರಾಯಣಗೌಡರು, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಆಗಿರುವ ಬೆಳೆಹಾನಿ, ಜೀವಹಾನಿ, ಜಾನುವಾರುಗಳ ಮರಣ ಇತ್ಯಾದಿಗಳ ಕುರಿತು ತಾವೆಲ್ಲರೂ ಅಂಕಿಅಂಶಗಳ ಸಮೇತ ಮಾಹಿತಿ ನೀಡಿರುತ್ತೀರಿ. ಸುಮಾರು ೨೫,೦೦೦ ಕೋಟಿ ರುಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು ಸ್ವತಃ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಆದರೆ ವಾಸ್ತವವಾಗಿ ಅದಕ್ಕಿಂದ ದುಪ್ಪಟ್ಟು, ಮೂರುಪಟ್ಟು ನಷ್ಟ ಸಂಭವಿಸಿದೆ ಎಂಬುದು ನಿಮ್ಮ ಮಾತುಗಳಿಂದ ಅರ್ಥವಾಗುತ್ತಿದೆ. ರಾಜ್ಯ ಸರ್ಕಾರದ ಹೇಳಿಕೆಯ ಪ್ರಕಾರ ಇದುವರೆಗೆ ಕೇವಲ ೪.೫ ಕೋಟಿ ರುಪಾಯಿಗಳಷ್ಟು ಪರಿಹಾರ ವಿತರಿಸಲಾಗಿದೆ. ಆಗಿರುವ ನಷ್ಟಕ್ಕೂ ವಿತರಿಸಲಾಗಿರುವ ಪರಿಹಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೊಟ್ಟಿರುವ ಪರಿಹಾರದಲ್ಲೂ ರಾಜಕಾರಣಿಗಳು, ಪುಡಾರಿಗಳು ತಾರತಮ್ಯ ಎಸಗಿರುವುದನ್ನು ನೀವು ಗಮನಕ್ಕೆ ತಂದಿರುತ್ತೀರಿ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೆಲ್ಲವನ್ನೂ ಗಮನಿಸಿದರೆ ರಾಜ್ಯ ಸರ್ಕಾರ ಎಂಬುದು ಅಸ್ತಿತ್ವದಲ್ಲಿ ಇದೆಯೇ ಎಂಬ ಅನುಮಾನ ಮೂಡುತ್ತಿದೆ. ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ತರಲು ರಾಜ್ಯ ಸರ್ಕಾರ ದಯನೀಯವಾಗಿ ವಿಫಲವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನೆರೆಪರಿಹಾರ ತರುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಪಕ್ಷದ ಅಧಿಕಾರವಿದ್ದರೆ ರಾಜ್ಯ ಉದ್ಧಾರವಾಗುತ್ತದೆ ಎಂದು ಚುನಾವಣೆಗಳಲ್ಲಿ ನಂಬಿಸಲಾಗಿತ್ತು. ಆದರೆ ಈಗ ಆಗಿರುವುದೇನು? ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಜನಜಾಗೃತಿ ಮೂಡಿಸಬೇಕಿದ್ದ, ಚಳವಳಿ ರೂಪಿಸಬೇಕಿದ್ದ, ನೊಂದಜನರಿಗೆ ಪರಿಹಾರ ಕೊಡಿಸಬೇಕಿದ್ದ ವಿರೋಧಪಕ್ಷಗಳೂ ಸಹ ಮೌನಕ್ಕೆ ಶರಣಾಗಿವೆ. ಎಲ್ಲ ರಾಜಕೀಯ ಪಕ್ಷಗಳೂ ಉಪಚುನಾವಣೆಗಳ ಅಬ್ಬರದಲ್ಲಿ ಕಳೆದುಹೋಗಿದ್ದಾರೆ. ಸಂತ್ರಸ್ಥರಿಗೆ ಈಗ ಆಡಳಿತ ಪಕ್ಷವೂ ಇಲ್ಲ, ವಿರೋಧಪಕ್ಷವೂ ಇಲ್ಲ ಎಂಬಂತಾಗಿದೆ. ಕರೋನಾ ರೋಗದ ಹೆಸರಿನಲ್ಲಿ ಚಳವಳಿಗಳನ್ನು ಹತ್ತಿಕ್ಕುವ, ಅನುಮತಿಯನ್ನೇ ನೀಡದ ಉದಾಹರಣೆಗಳೂ ಇವೆ.
ಇಂಥ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿರ್ಣಾಯಕ ಹೋರಾಟವನ್ನು ಸಂಘಟಿಸಬೇಕಿದೆ. ಭಾರತ ಒಕ್ಕೂಟದಲ್ಲಿ ಕರ್ನಾಟಕವೆಂಬ ರಾಜ್ಯ ಇದೆಯೋ ಇಲ್ಲವೋ ಎಂದು ನಾವು ಅಧಿಕಾರಸ್ಥ ರಾಜಕಾರಣಿಗಳನ್ನು ಪ್ರಶ್ನಿಸಬೇಕಿದೆ. ನಾವು ಕರ್ನಾಟಕದ ಜನರೂ ಈ ದೇಶದ ಪ್ರಜೆಗಳು ಎಂಬುದನ್ನು ಅವರಿಗೆ ನೆನಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ನೆರೆಪೀಡಿತ ಜಿಲ್ಲೆಗಳ ಕರವೇ ಜಿಲ್ಲಾಧ್ಯಕ್ಷರುಗಳ ನಿಯೋಗವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಕರೆದೊಯ್ಯಲಿದ್ದೇನೆ. ನಮ್ಮ ಅಹವಾಲುಗಳನ್ನು ಸರ್ಕಾರದ ಮುಂದೆ ಇಡೋಣ. ಪರಿಸ್ಥಿತಿ ಹೀಗೇ ಮುಂದುವರೆದರೆ ಇಡೀ ರಾಜ್ಯಾದ್ಯಂತ ದೊಡ್ಡ ಪ್ರಮಾಣದ ಹೋರಾಟವನ್ನು ಸಂಘಟಿಸೋಣ ಎಂದಿದ್ದಾರೆ.