ಕಮ್ಯುನಿಸ್ಟ್ ನಾಯಕ, ರೈತಪರ ಹೋರಾಟಗಾರ ಮಾರುತಿ ಮಾನ್ಪಡೆ ಸಾವಿಗೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರೇ ಎಂದು ಆರೋಪ ಮಾಡಿದ್ದ ಡಿವಿ ಸದಾನಂದ ಗೌಡರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ʼಮಾರುತಿ ಮಾನ್ಪಡೆ ಅವರ ಸಾವಿಗೆ ನಾನು ಮತ್ತು ಡಿ.ಕೆ.ಶಿವಕುಮಾರ್ ಕಾರಣ ಎಂಬ ಬಾಲಿಷ ಹೇಳಿಕೆಯನ್ನು ಕೇಂದ್ರ ಸಚಿವ ಸದಾನಂದ ಗೌಡ ಅವರು ನೀಡಿದ್ದಾರೆ. ಹಾಗಿದ್ದರೆ ದೇಶದಲ್ಲಿ ಒಂದು ಕಾಲು ಲಕ್ಷ ಜನ ಕರೊನಾಕ್ಕೆ ಬಲಿಯಾಗಿದ್ದಾರಲ್ಲಾ ಅದಕ್ಕೆ ಯಾರು ಹೊಣೆ ಎಂದು ಹೇಳುವಿರಾ ಸದಾನಂದ ಗೌಡರೇ? ಎಂದು ಪ್ರಶ್ನಿಸಿದ್ದಾರೆ.
Also Read: ರೈತ ಮುಖಂಡ ಮಾರುತಿ ಮಾನ್ಪಡೆಯವರಿಗೆ ಪ್ರಕಾಶ್ ಕಮ್ಮರಡಿಯವರಿಂದ ನುಡಿ ನಮನ!
ಕರೊನಾ ವಿರುದ್ಧ ಹೋರಾಡಬೇಕಾಗಿದ್ದ ಕೇಂದ್ರ ಸರ್ಕಾರ, ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಜನವಿರೋಧಿ ಕಾನೂನುಗಳನ್ನು ಜಾರಿಗೆ ತಂದದ್ದೇ ಮಾನ್ಪಡೆಯವರೂ ಸೇರಿದಂತೆ ಅನೇಕ ಹೋರಾಟಗಾರರ ಸಾವಿಗೆ ಕಾರಣ ಎಂದು ಸಿದ್ದರಾಮಯ್ಯ ಪ್ರತ್ಯಾರೋಪ ಮಾಡಿದ್ದಾರೆ.
ಇನ್ನು, ರಾಜರಾಜೇಶ್ವರಿ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ, ʼತನಗೆ ಅನುದಾನ ನೀಡಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತೊರೆದದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಆರ್.ಆರ್ ನಗರ ಕ್ಷೇತ್ರಕ್ಕೆ ರೂ.2,000 ಕೋಟಿಗೂ ಅಧಿಕ ಅನುದಾನ ನೀಡಿದ್ದೆ, ಇಂದು ಕ್ಷೇತ್ರದಲ್ಲಿ ಏನಾದರೂ ಅಭಿವೃದ್ಧಿ ಕಾರ್ಯಗಳಾಗಿದ್ದರೆ ಅದಕ್ಕೆ ನಮ್ಮ ಸರ್ಕಾರ ಕಾರಣʼ ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೆ.ಆರ್ ಪೇಟೆಯಲ್ಲಿ ಹಣ ಹಂಚಿ ಗೆದ್ದಂತೆ ಶಿರಾ ಮತ್ತು ಆರ್.ಆರ್ ನಗರದಲ್ಲೂ ಹಣ ಹಂಚಿ ಸುಲಭದಲ್ಲಿ ಗೆಲ್ಲಬಹುದು ಎಂಬುದು ಬಿಜೆಪಿಯವರ ಲೆಕ್ಕಾಚಾರ. ಆದರೆ ಇಲ್ಲಿನ ಜನ ಹಣದ ಆಮಿಷಕ್ಕೆ ಒಳಗಾಗದೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸವನ್ನು ಮಾಜಿ ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ.