ಕೋವಿಡ್ 19 ಈಗ ಜಗತ್ತಿನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದೆ. ಈ ಹಿನ್ನೆಲೆ ಭಾರತ ಸೇರಿದಂತೆ ಹಲವು ದೇಶಗಳು ಲಾಕ್ ಡೌನ್ ಘೋಷಿಸಿ, ವೈರಾಣು ಹರಡುವುದನ್ನು ನಿಯಂತ್ರಿಸಲು ಯತ್ನಿಸುತ್ತಿದೆ. ಇದೇ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮುಖಕ್ಕೆ ಕವಚ ಧರಿಸುವುದು ಕೂಡ ಮುಖ್ಯ ಎಂದು ವೈದ್ಯರು ಸೂಚಿಸಿದ್ದಾರೆ. ಆದ್ರೆ ಇಲ್ಲೊಂದು ಅಧ್ಯಯನ ಮುಖಕವಚ ಧರಿಸುವುದು ಕೂಡ ಅಪಾಯಕಾರಿ ಎಂಬ ಅಚ್ಚರಿಯ ಮಾಹಿತಿಯನ್ನು ಹೊರಗಿಟ್ಟಿದೆ. ಮುಖಕವಚ ಧರಿಸುವುದು ಅಪಾಯಕಾರಿ ದೊಡ್ಡವರಿಗಲ್ಲ. ಬದಲಾಗಿ 2 ವರ್ಷ ಒಳಪಟ್ಟ ಸಣ್ಣ ಮಕ್ಕಳಿಗೆ ಅಪಾಯಕಾರಿ ಎಂಬುವುದಾಗಿದೆ.
ಜಗತ್ತಿನಾದ್ಯಂತ ಇರುವ ವೈದ್ಯರು ಎಲ್ಲರೂ ಮುಖಕವಚ ಉಪಯೋಗಿಸಿ ಎಂದು ಫರ್ಮಾನು ಹೊರಡಿಸುವಾಗ ಜಪಾನಿನ ಈ ವೈದ್ಯರ ತಂಡ ದಯವಿಟ್ಟು ಮಕ್ಕಳಿಗೆ ಮುಖಕವಚ ತೊಡಿಸಬೇಡಿ ಎಂದು ಅಲ್ಲಿನ ಜನರಿಗೆ ಮನವಿ ಮಾಡಿಕೊಂಡಿದೆ. ಅಲ್ಲದೆ ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದೆ.
ಜಪಾನಿನ ವೈದ್ಯರ ತಂಡವೊಂದು ಈ ಬಗ್ಗೆ ಅಧ್ಯಯನ ನಡೆಸಿ ಈ ಬಗ್ಗೆ ಮಾಹಿತಿ ನೀಡಿದೆ. ಏನೆಂದರೆ,
“2 ವರ್ಷದ ಮಕ್ಕಳು ಕಿರಿದಾದ ಮೂಗಿನ ರಂಧ್ರ ಹೊಂದಿರುತ್ತಾರೆ. ಅವರದ್ದು ಬಹಳ ಸೂಕ್ಷ್ಮವಾಗಿ ನಡೆಯುವಂತ ಉಸಿರಾಟ ಪ್ರಕ್ರಿಯೆ. ಧೂಳು ಮುಂತಾದವೆಲ್ಲ ಅವರಿಗೆ ವೇಗವಾಗಿ ಆಕ್ರಮಿಸಿಕೊಳ್ಳುತ್ತವೆ. ಮುಖಕವಚ ಧರಿಸುವುದು ಅವರ ಮೂಗಿಗೆ ಹೆಚ್ಚಿನ ಶಾಖ ನೀಡುತ್ತದೆ. ಮುಖಕವಚ ಧೂಳಿನಿಂದ ರಕ್ಷಣೆ ನೀಡುತ್ತದೆ ಎಂದಾರು, ಕವಚ ತೊಡಿಸುವುದರಿಂದ ಉಸಿರಾಟ ಮಕ್ಕಳಿಗೆ ಕಷ್ಟವಾಗಬಹುದು. ಇದು ಅವರ ಹೃದಯದ ಮೇಲೆ ಹೆಚ್ಚಿನ ಒತ್ತಡ ಹಾಕಲಿದೆ. ಹೀಗಾಗಿ ಸಾಮಾನ್ಯವಾಗಿರೋದಕ್ಕಿಂತ ಹೆಚ್ಚಿನ ಶಕ್ತಿ ಉಪಯೋಗಿಸಿಕೊಂಡು ಅವರು ಉಸಿರಾಟ ನಡೆಸಬೇಕಾಗುತ್ತದೆ. ಹಾಗಾಗಿ, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮುಖಕವಚವನ್ನು ತೊಡಿಸುವುದು ನಿಲ್ಲಿಸೋಣ”
ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಈ ಬಗ್ಗೆ ಎಲ್ಲೆಡೆ ಭಾರೀ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಭಾರತೀಯ ತಜ್ಞರು ಕೂಡ ಸ್ಪಷ್ಟನೆ ನೀಡಿದರೆ ದೇಶವಾಸಿಗಳಿಗೆ ಅನುಕೂಲವಾಗಲಿದೆ.