ಜಗತ್ತಿನ ಬಹುಪಾಲು ದೇಶಗಳಲ್ಲಿ ಅರ್ಥ ವ್ಯವಸ್ಥೆಯಿಂದ ದೈನಂದಿನ ಚಟುವಟಿಕೆಗಳವರೆಗೆ ಕರೋನಾ ಪ್ರತಿಕೂಲ ಪರಿಣಾಮ ಬೀರಿದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಅಥವಾ ಹರಡುವಿಕೆಯ ವೇಗ ತಗ್ಗಿಸಲು ಭಾರತ ಸೇರಿದಂತೆ ಜಗತ್ತಿನ ಹಲವಾರು ದೇಶಗಳು ವಿಧಿಸಿದ ಲಾಕ್ಡೌನ್ ನಿರೀಕ್ಷಿತ ಯಶಸ್ಸನ್ನು ನೀಡದೆ, ಬದಲಾಗಿ ಹೊಸ ಸಮಸ್ಯೆಗಳ ಉಗಮಕ್ಕೆ ಕಾರಣವಾದವು.
ಕರೋನಾ, ಲಾಕ್ಡೌನ್ ಹಿನ್ನಲೆಯಲ್ಲಿ ಸಂಘಟಿತ ವಲಯದ, ಅಸಂಘಟಿತ ವಲಯದ ಹಲವು ಉದ್ಯೋಗಗಳು ನಷ್ಟಗೊಂಡಿದೆ. ಮೊದಲೇ ನಿರುದ್ಯೋಗ ಸಮಸ್ಯೆ ಇದ್ದ ಭಾರತದಲ್ಲಿ ಇದು ಬಲವಾದ ಹೊಡೆತ ನೀಡಿದೆ. ನಿರುದ್ಯೋಗ, ಸ್ವಯಂ ದಿಗ್ಬಂಧನ, ಪ್ರೀತಿ ಪಾತ್ರರಿಂದ ದೂರ ಉಳಿಯುವಿಕೆ, ರೋಗ ಭಯ, ಭವಿಷ್ಯದ ಅನಿಶ್ಚಿತತೆ ಮೊದಲಾದವುಗಳಿಂದ ಜನರು ಖಿನ್ನತೆಗೊಳಗಾಗುತ್ತಿದ್ದಾರೆ. ಆತ್ಮಹತ್ಯೆಗಳಂತ ಪ್ರಕರಣಗಳು ನಿತ್ಯ ಸುದ್ದಿಗಳಾಗುತ್ತಿವೆ. ಇದು ಮಹಿಳೆಯರಲ್ಲಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಲಾಕ್ಡೌನ್ ಬಳಿಕದ ʼವರ್ಕ್ ಫ್ರಂ ಹೋಮ್ʼ, ಮನೋರಂಜನೆಯ ಕೊರತೆ, ಸತತವಾಗಿ ಮನೆಯಲ್ಲೇ ಕಾಲಕಳೆಯಬೇಕಾದ ಅನಿವಾರ್ಯತೆ ಮೊದಲಾದವು ತೀವ್ರ ಒತ್ತಡವನ್ನು ಸೃಷ್ಟಿಸುತ್ತಿದೆ. ಇದರಿಂದ ಒತ್ತಡಕ್ಕೊಳಗಾದ ಮಹಿಳೆಯರಲ್ಲಿ ಇದು ಋತುಚಕ್ರದ ಮೇಲೆ ಪರಿಣಾಮ ಬೀರಿದೆ. ಆತಂಕಕಾರಿ ಅಂಶವೇನೆಂದರೆ ಲಾಕ್ಡೌನ್ ಕಾಲದಲ್ಲಿ ಹಲವಾರು ಮಹಿಳೆಯರು ಒತ್ತಡಕ್ಕೀಡಾಗಿದ್ದಾರೆ.
ಅತಿಯಾದ ಒತ್ತಡ, ವ್ಯಾಯಾಮದ ಕೊರತೆ, ದೇಹದಲ್ಲಿ ಬೊಜ್ಜು ಬೆಳೆಯುವಿಕೆ, ಕರೋನಾ ಕಾಲಕ್ಕಿಂತ ಮೊದಲಿನ ಆಹಾರ ಪದ್ಧತಿಯಲ್ಲಿ ಉಂಟಾದ ಏಕಾಏಕಿ ವ್ಯತ್ಯಯ ಮೊದಲಾದವುಗಳು ಮಹಿಳೆಯರ ಋತುಚಕ್ರದಲ್ಲಿ ತೀವ್ರತರವಾದ ಬದಲಾವಣೆಗೆ ಕಾರಣವಾಗಿದೆ ಎಂದು ಅಧ್ಯಯನವೊಂದು ಹೇಳಿದೆ. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ ಋತುಚಕ್ರದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ವೈದ್ಯರನ್ನು ಸಂಪರ್ಕಿಸುತ್ತಿರುವ ರೋಗಿಗಳಲ್ಲಿ 25% ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಲಾಕ್ಡೌನ್ ಹಿನ್ನಲೆಯಲ್ಲಿ ಉಂಟಾದ ಉದ್ಯೋಗ ನಷ್ಟದ ಭಯ, ಆರ್ಥಿಕ ಅನಿಶ್ಚಿತತೆ, ಕಚೇರಿ ಕೆಲಸದ ಗಡುವು ಬಹುತೇಕ ಮಹಿಳೆಯರಲ್ಲಿ ಮಾನಸಿಕ ಪ್ರಕ್ಷುಬ್ಧತೆಯನ್ನು ಸೃಷ್ಟಿಸಿದೆ. ಸಮಯ ಕಳೆಯಲು ಅನಿಯಮಿತ ಆಹಾರ ಸೇವಿಸುವುದನ್ನು ರೂಢಿ ಮಾಡಿಕೊಂಡಿರುವುದರಿಂದ ದೇಹದಲ್ಲಿ ಬೊಜ್ಜು ಸೇರಿರುವುದಲ್ಲದೆ, ಕರಗಿಸಲು ಸರಿಯಾದ ವ್ಯಾಯಾಮ ಇಲ್ಲದಿರುವುದೂ ಋತುಚಕ್ರದ ಸಮಯದಲ್ಲಿ ವ್ಯತ್ಯಯವಾಗಲು ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆರೋಗ್ಯಪೂರ್ಣ ಮಹಿಳೆಯರಲ್ಲಿ ಸಾಮಾನ್ಯವಾಗಿ 22 ರಿಂದ 35 ದಿನಗಳ ಒಳಗೆ ಋತುಸ್ರಾವ ಸಂಭವಿಸುತ್ತದೆ. 10 ದಿನಗಳು ಹೆಚ್ಚು ಅಥವಾ ಕಡಿಮೆ ಅವಧಿಯಲ್ಲಿ ಋತುಸ್ರಾವವಾದರೆ ಋತುಚಕ್ರ ಅನಿಯಮಿತವಾಗಿದೆ ಎಂದು ಅರ್ಥ. ಬಹುತೇಕ ಮಹಿಳೆಯರು ಒತ್ತಡದಿಂದ್ದಾರೆ. ಅವರು ಅನಿಯಂತ್ರಿವಾಗಿ ಆಹಾರ ಸೇವನೆ ಮಾಡುವುದರಿಂದ ದೇಹತೂಕ ಹೆಚ್ಚಾಗುತ್ತದೆ. ಇದು ಅಸಹಜ ಋತುಸ್ರಾವಕ್ಕೂ ಕಾರಣವಾಗುತ್ತದೆ ಎಂದು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಸ್ತ್ರೀರೋಗತಜ್ಞ ವೈದ್ಯೆಯಾಗಿರುವ ಲಾವಣ್ಯ ಕಿರಣ್ ಹೇಳಿದ್ದಾರೆ.
ಕಳೆದ ತಿಂಗಳು ಅನಿಯಮಿತ ಋತುಸ್ರಾವದ ಪ್ರಕರಣಗಳಲ್ಲಿ 25% ಹೆಚ್ಚಾಗಿದೆಯೆಂಬುದನ್ನು ಅವರು ಗಮನಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ದೆಹಲಿಯಲ್ಲಿ 30 ವರ್ಷದ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ತಡವಾದ ಹಾಗೂ ಅಸಹಜವಾದ ಸಮಯದಲ್ಲಿ ಋತುಸ್ರಾವವಾಗುವುದನ್ನು ಟೈಮ್ಸ್ ಇಂಡಿಯಾ ಉಲ್ಲೇಖಿಸಿದೆ. ಬ್ಯಾಂಕ್ ಅಧಿಕಾರಿಯಾಗಿರುವ ಅವರು ನಿತ್ಯವೂ ಕಛೇರಿಗೆ ಹೋಗಬೇಕಿರುವುದೇ ಒತ್ತಡಕ್ಕೆ ಕಾರಣವಾಗಿರಬೇಕು. ಅವರು ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಯ ಕುರಿತಂತೆ ಚಿಂತಿತರಾಗಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. ಉದ್ಯೋಗ ನಷ್ಟ, ಮನೆಯಲ್ಲೇ ಕೂರುವ ಅನಿವಾರ್ಯತೆ ಇಲ್ಲದ ಮಹಿಳೆಯರಲ್ಲೂ ಕರೋನಾ ಹೇಗೆ ಒತ್ತಡವನ್ನು ತರಬಲ್ಲದು ಎಂಬುದಕ್ಕೆ ಆ ಮಹಿಳೆ ಒಂದು ನಿದರ್ಶನ.
ಅನಿಯಮಿತ ಋತುಸ್ರಾವ ಅವಧಿಗಳ ಜೊತೆಗೆ, ಜಡ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿ ಕೂಡಾ ಅಂಡಾಶಯದ ರೋಗವನ್ನು ಉಂಟುಮಾಡುವ ಅಪಾಯವಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಕೇಂದ್ರೀಕರಿಸುವ ಅಮೇರಿಕಾ ಮೂಲದ ಪ್ರಮುಖ ಸಂಶೋಧನಾ ಸಂಸ್ಥೆಯಾದ Guttmacher ಜೂನ್ 2020 ರಲ್ಲಿ ಮಾಡಿರುವ ಸಮೀಕ್ಷೆಯ ವರದಿ ಪ್ರಕಾರ ಸಮೀಕ್ಷೆಗೊಳಪಡಿಸಿದ ಮೂರನೇ ಒಂದು ಭಾಗದಷ್ಟು ಮಹಿಳೆಯರು ಗರ್ಭಧಾರಣೆಯನ್ನು ವಿಳಂಬಗೊಳಿಸಲು ಬಯಸಿದ್ದಾರೆ ಅಥವಾ ಮಕ್ಕಳನ್ನು ಕಡಿಮೆಗೊಳಿಸಬೇಕೆಂದು ಬಯಸುತ್ತಾರೆ. ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ವೈದ್ಯರ ಭೇಟಿಯನ್ನು ತಪ್ಪಿಸಲು ಬೇಕಾಗಿ ಈ ತೀರ್ಮಾನ ಕೈಗೊಂಡಿರುವುದಾಗಿ ಅವರಲ್ಲಿ 33% ಮಂದಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕರೋನಾದಿಂದಾಗಿ ಹುಟ್ಟಿಕೊಂಡ ವಿಪರೀತ ಭಯ, ಒತ್ತಡಗಳು ಗಣನೀಯ ಪ್ರಮಾಣದ ಮಹಿಳೆಯರಲ್ಲಿ ಅಸಹಜ ಋತುಸ್ರಾವಕ್ಕೆ, ಆ ಮೂಲಕ ಮಹಿಳೆಯರಲ್ಲಿ ಸಂತಾನೋತ್ಪತ್ತಿ, ಉರಿಯೂತ ಮೊದಲಾದ ಲೈಂಗಿಕ ರೋಗಗಳಿಗೆ ಕಾರಣವಾಗಿದೆ. ಮುಟ್ಟಿನ ಕುರಿತಂತೆ ಅಸಹಜ ಸಂಪ್ರದಾಯಗಳಿರುವ, ಮಡಿಗಳಿರುವ ಭಾರತದಂತಹ ದೇಶದಲ್ಲಿ ಅನಿಯಮಿತ ಋತುಸ್ರಾವಗಳು, ಮಹಿಳೆಯರ ಲೈಂಗಿಕ ರೋಗಗಳು ಸಮಸ್ಯೆ ಎಂದು ಪರಿಗಣನೆಗೆ ಒಳಪಟ್ಟಾವೇ? ಒಂದು ವೇಳೆ ಗಂಭೀರತೆಯನ್ನು ಅರಿತುಕೊಂಡರೂ ತಜ್ಞ ವೈದ್ಯರನ್ನು ಭೇಟಿಯಾಗಲು, ಚಿಕಿತ್ಸೆ ಪಡೆಯಲು ಅನುಕೂಲ ಇಲ್ಲದ ಕುಟುಂಬಗಳ ಸಂಖ್ಯೆಯೇ ಹೆಚ್ಚು. ಈ ನಿಟ್ಟಿನಲ್ಲಿ ಮೊದಲಿಗೆ ಋತುಸ್ರಾವದ ಕುರಿತಾಗಿರುವಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವತ್ತ ಗಮನ ಹರಿಸಬೇಕಾಗಿದೆ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ತ್ರೀರೋಗ ತಜ್ಞರ ಅಲಭ್ಯತೆಯನ್ನು ಹೋಗಲಾಡಿಸಬೇಕಾಗಿದೆ.