ಎಪ್ರಿಲ್ 5, 1837ರಲ್ಲಿ, ಅಂದರೆ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕೆ 20 ವರ್ಷ ಮೊದಲೇ ನಮ್ಮ ಕರ್ನಾಟಕದ ನೆಲದಲ್ಲೇ ನಡೆದ ಸ್ವಾತಂತ್ರ್ಯ ಹೋರಾಟವನ್ನು ನಾವು ಮರೆತೇಬಿಟ್ಟಿದ್ದೇವೆ. ಎಪ್ರಿಲ್ 5ರಂದು ಕಲ್ಯಾಣಪ್ಪನ ನೇತೃತ್ವದಲ್ಲಿ ಬ್ರಿಟಿಷರನ್ನು ಓಡಿಸಿದ್ದ ಬಂಡಾಯಗಾರರು ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಧ್ವಜ ಹಾರಿಸಿದ್ದರು. ಎರಡೇ ದಿನಗಳಲ್ಲಿ ಬಂಡಾಯವನ್ನು ಹತ್ತಿಕ್ಕಿದ್ದ ಬ್ರಿಟಿಷರು ಬಿಕರ್ನಕಟ್ಟೆಯಲ್ಲಿ ಕಲ್ಯಾಣಪ್ಫ, ನಂದಾವರದ ನಂದರಸ ಅಥವಾ ಲಕ್ಷ್ಮಪ್ಪರಸ ಬಂಗ ಮತ್ತು ಬಂಡಾಯದ ನಾಯಕರನ್ನು ಗಲ್ಲಿಗೇರಿಸಿ, ಜನರಲ್ಲಿ ಭಯ ಹುಟ್ಟಿಸಲೆಂದು ಶವಗಳನ್ನು ಕೆಲವು ದಿನಗಳ ಕಾಲ ಹಾಗೆಯೇ ಇರಿಸಿ ಅವಮಾನಿಸಿದ್ದರು. ನಾವೀಗ ಅದನ್ನು ಬ್ರಿಟಿಷರು ಕಟ್ಟಿದ್ದ ದೀಪಸ್ಥಂಭದ ಗುರುತಿನಲ್ಲಿ ಸ್ಟೈಲಾಗಿ ಲೈಟ್ ಹೌಸ್ ಹಿಲ್ ಎಂದು ಕರೆಯುತ್ತಿದ್ದೇವೆ. ಅದನ್ನು ನೆನಪಿಸಲು ಈ ಬರಹ.
ಸಾಮಾನ್ಯವಾಗಿ 1857ರಲ್ಲಿ ಉತ್ತರ ಮತ್ತು ಮಧ್ಯಭಾರತದಲ್ಲಿ ನಡೆದ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಕರೆಯಲಾಗುತ್ತದೆ. ಅದರೆ, ಅದಕ್ಕಿಂತ ಮೊದಲೇ ಅನೇಕ ನಿಜವಾದ ಅರ್ಥದ ಸ್ವಾತಂತ್ರ್ಯ ಸಂಗ್ರಾಮಗಳು, ಅಂದರೆ ಬ್ರಿಟಿಷರ ವಿರುದ್ಧದ ಸಶಸ್ತ್ರ ದಂಗೆಗಳು ನಡೆದಿವೆ.
ಅವುಗಳಲ್ಲಿ ಒಂದು ನಮ್ಮ ತುಳುನಾಡಿನ ನೆಲದಲ್ಲಿ ನಡೆದ ಅಮರಸುಳ್ಯ ದಂಗೆಯೂ ಒಂದು! ಆದರೆ, ಈ ದಂಗೆಯನ್ನು ಕೆಲವರು ಕಲ್ಯಾಣಪ್ಪನ ಕಾಟುಕಾಯಿ ಅಂದರೆ ಲೂಟಿ ಎಂದು ಅಪಹಾಸ್ಯ ಮಾಡಿದ್ದುಂಟು. ದಕ್ಷಿಣ ಕನ್ನಡದ ನೆಲದಲ್ಲಿ ನಡೆದರೂ ಈ ದಂಗೆಯ ಮೂಲ ಇರುವುದು ಕೊಡಗಿನಲ್ಲಿ. ಅದರ ಪ್ರಮುಖ ನಾಯಕನೂ ಕೊಡಗಿನವನೇ! ಆದರೆ, ಅದಕ್ಕೆ ಹೆಚ್ಚಿನ ಬಲ ನೀಡಿದವರು ತುಳುನಾಡಿನವರೆಂಬುದನ್ನು ಮರೆಯಲು ಸಾಧ್ಯವಿಲ್ಲ!
ಈ ದಂಗೆ ಸಿಪಾಯಿ ದಂಗೆಗಿಂತ ಇಪ್ಪತ್ತು ವರ್ಷ ಮೊದಲೇ ಅಂದರೆ, 1837ರಲ್ಲಿ ನಡೆದಿತ್ತು ಎಂಬುದು ಗಮನಾರ್ಹ.
ತಮ್ಮ ಪ್ರಭಾವದಲ್ಲಿದ್ದ ಚಿಕವೀರ ರಾಜೇಂದ್ರಪ್ಪ ಎಂಬ ಹಾಲೇರಿ ವಂಶದ ರಾಜನನ್ನು ಬ್ರಿಟಿಷರು 1834ರಲ್ಲಿ ಪದಚ್ಯುತಗೊಳಿಸಿದರು. ಅವನ ಉತ್ತರಾಧಿಕಾರಿ ಎಂದು ಅದೇ ವಂಶದವನೆನ್ನಲಾದ ಜಂಗಮ ಕಲ್ಯಾಣಪ್ಪ ಅಥವಾ ಕಲ್ಯಾಣಸ್ವಾಮಿ ಮಂಡಿಸಿದ ಹಕ್ಕನ್ನು ಬ್ರಿಟಿಷರು ಮಾನ್ಯ ಮಾಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ಬ್ರಿಟಿಷರ ವಿರುದ್ಧ ದಂಗೆಯೆದ್ದ.
ಆಗ ಮಂಗಳೂರು ಬ್ರಿಟಿಷರ ಪ್ರಮುಖ ಬಂದರು ಮತ್ತು ಸೇನಾ ನೆಲೆಯಾಗಿತ್ತು. ಬ್ರಿಟಿಷರ ಪ್ರಮುಖ ಆಡಳಿತ ಕೇಂದ್ರವೂ ಆಗಿತ್ತು. ಕಲ್ಯಾಣಪ್ಪ ಮತ್ತು ಅಪರರಾಮಪ್ಪ ಅಥವಾ ಅಪರಾಪರ, ಪುಟ್ಟಬಸಪ್ಪ, ನಾಲ್ಕ್ನಾಡ್ ಮಂದಿರ ಉತ್ತಯ್ಯ, ಚೆಟ್ಟಿ ಕುಡಿಯ, ಕುರ್ತ ಕುಡಿಯ ಮುಂತಾದವರು ತಮ್ಮ ದಂಡಿನೊಂದಿಗೆ ಮಂಗಳೂರಿನ ಕಡೆ ಹೊರಟು ಸುಳ್ಯಕ್ಕಿಳಿದರು. ಅಮರಸುಳ್ಯದಲ್ಲಿ ಈ ದಂಗೆಗೆ ಚಾಲನೆ ಸಿಕ್ಕಿತು. ಅಮರ ಸುಳ್ಯ ಎಂದರೆ ಸುಳ್ಯ, ಪುತ್ತೂರು ಮತ್ತು ಬಂಟ್ವಾಳದ ಭಾಗವನ್ನು ಒಳಗೊಂಡ ಪ್ರದೇಶವಾಗಿತ್ತು.
ಆಗ ದಕ್ಷಿಣ ಕನ್ನಡವು ಕೆನರಾ ಎಂದು ಕರೆಯಲ್ಪಡುತ್ತಿದ್ದು, ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದು, ಜಿಲ್ಲಾಧಿಕಾರಿಯ ಆಡಳಿತವಿತ್ತು. ಬ್ರಿಟಿಷ್ ಸರಕಾರವು ರೈತರ ತೆರಿಗೆಯನ್ನು ಹೆಚ್ಚಿಸಿತ್ತು. ಹಿಂದೆ ರೈತರು ಧಾನ್ಯ ರೂಪದಲ್ಲಿ ತೆರಿಗೆ ಕೊಡುತ್ತಿದ್ದರು. ಅದು ಆಯಾ ವರ್ಷದ ಬೆಳೆಗೆ ಅನುಗುಣವಾಗಿತ್ತು. ಆದರೆ, ಬ್ರಿಟಿಷರು ಅದನ್ನು ನಗದಾಗಿ ಕೊಡಬೇಕೆಂದೂ, ಬೆಳೆ ಏನೇ ಅಗಿದ್ದರೂ ನಿರ್ದಿಷ್ಟ ಮೊತ್ತವನ್ನು ಕೊಡಲೇ ಬೇಕೆಂದೂ ತಾಕೀತು ಮಾಡಿದ್ದರು. ಇದರಿಂದ ರೈತ ಜಮೀನ್ದಾರರು ಸಿಟ್ಟಿಗೆದ್ದಿದ್ದರು. ಅವರು ದಂಗೆಯನ್ನು ಬೆಂಬಲಿಸಿದರು.
ಸುಮಾರು 2000 ಮಂದಿಯ ದಂಡು ಮೊದಲಿಗೆ ಬ್ರಿಟಿಷರ ಪರವಾಗಿದ್ದ ಸುಳ್ಯ ಅಟ್ಲೂರು ರಾಮಪ್ಪಯ್ಯ ಎಂಬಾತನನ್ನು ಮುಗಿಸಿತು. ಮುಖ್ಯವಾಗಿ ಅರೆಭಾಷೆ ಗೌಡರು ಮತ್ತು ಕೆಲವು ಬಂಟರು ದಂಗೆಯಲ್ಲಿ ಸೇರಿಕೊಂಡರು. ಅವರಲ್ಲಿ ಮುಖ್ಯರು ಬೆಳ್ಳಾರೆ ಕುಕನೂರು ಚೆನ್ನಯ್ಯ, ಉಬಾರ್ ಬೈದ್ಯ, ಕೆದಂಬಾಡಿ ರಾಮೇಗೌಡ, ಪೆರಾಜೆ ಕೃಷ್ಣಯ್ಯ, ಧರ್ಮಸ್ಥಳದ ಮಂಜಯ್ಯ ಹೆಗ್ಗಡೆ, ನಂದಾವರದ ಅರಸ ಲಕ್ಷ್ಮಪ್ಪ ಬಂಗರಸ, ಕುಂಬ್ಳೆ ಸುಬ್ರಾಯ ಹೆಗ್ಡೆ. ಮುಲ್ಕಿಯಿಂದಲೂ ಒಂದು ದಂಡು ಮಂಗಳೂರಿನತ್ತ ಹೊರಟಿತ್ತು.
ಬಂಡುಕೋರರು ಬೆಳ್ಳಾರೆಯ ಖಜಾನೆಯನ್ನು ಲೂಟಿ ಮಾಡಿದರು. ವಿಷಯದ ಗಾಂಭೀರ್ಯ ತಿಳಿಯದೇ ಮಂಗಳೂರಿನಿಂದ ಬಂದಿದ್ದ ಪೊಲೀಸರನ್ನು ಓಡಿಸಿದರು. ಮುಂದೆ ಬಂಟ್ವಾಳದತ್ತ ಸಾಗಿ ಈಗ ನಂದಾವರದ ರೈಲ್ವೇ ಸೇತುವೆ ಇರುವಲ್ಲಿ ಮತ್ತು ಬಂಟ್ವಾಳ ಪೇಟೆಯ ಬಳಿ ನೇತ್ರಾವತಿ ನದಿಯನ್ನು ದಾಟಿ ಬಂಟ್ವಾಳದ ಖಜಾನೆ ಲೂಟಿಮಾಡಿ ಮಂಗಳೂರಿಗೆ ಸಾಗಿದರು. ಕುಂಬ್ಳೆ ಕಡೆಯಿಂದ ಬಂದ ದಂಡು ಉಲ್ಲಾಳದ ಬಳಿ ಜಪ್ಪಿನ ಮೊಗರಿನತ್ತ ದೋಣಿಯಲ್ಲಿ ನದಿದಾಟುತ್ತಿದ್ದಾಗ ಬ್ರಿಟಿಷರ ಫಿರಂಗಿ ಮತ್ತು ಗುಂಡಿನ ದಾಳಿಗೆ ಒಳಗಾಯಿತು.
ಮಂಗಳೂರಿನಲ್ಲಿಯೂ ಖಜಾನೆ ಲೂಟಿ ಮಾಡಿ, ಬಾವುಟ ಗುಡ್ಡೆಯಲ್ಲಿ ಧ್ವಜ ಹಾರಿಸಲಾಯಿತು. ಅದಕ್ಕೆಂದೇ ಬಾವುಟಗುಡ್ಡೆ ಎಂಬ ಹೆಸರು ಬಂದಿರುವುದು. ಬ್ರಿಟಿಷರು ಆಗಲೇ ಹಡಗಿನಲ್ಲಿ ತಲಶ್ಶೇರಿಗೆ ಕಂಬಿ ಕಿತ್ತಿದ್ದರು. ಹದಿಮೂರು ದಿನ ಮಂಗಳೂರು ಬಂಡುಕೋರರ ವಶದಲ್ಲಿತ್ತು.
ಆದರೆ, ಬ್ರಿಟಿಷರು ಕರ್ನಲ್ ಗ್ರೀನ್ ನೇತೃತ್ವದಲ್ಲಿ ಕಣ್ಣೂರಿನಿಂದ ಬಂದು ಬಂಡುಕೋರರನ್ನು ಸದೆಬಡಿದು ಮಂಗಳೂರನ್ನು ಮರಳಿ ವಶಪಡಿಸಿದರು. ಇನ್ನೊಂದು ಕಡೆಯಲ್ಲಿ ಕೊಡಗಿನ ಎಸ್ಪಿ ಲೀ ಹಾರ್ಡಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿ ದಿವಾನ ಅಪ್ಪರಂಡ ಬೋಪಣ್ಣ ಸುಳ್ಯಕ್ಕೆ ಬಂದು ಬಂಡುಕೋರರ ಸದ್ದಡಗಿಸಿದರು.
ಕಲ್ಯಾಣಪ್ಪ ಅದರ್ಶವಾದಿಯಾಗಿದ್ದರೂ, ಅವನ ಸೈನಿಕರು ಲೂಟಿಯಲ್ಲಿ ಮಾತ್ರ ಆಸಕ್ತರಾಗಿದ್ದು, ಲೂಟಿ ಮುಗಿದ ಬಳಿಕ ಆತನಿಗೆ ಕೈಕೊಟ್ಟು ಪರಾರಿಯಾದರು ಎನ್ನಲಾಗುತ್ತದೆ. ಕೊನೆಗೆ ಕಲ್ಯಾಣಪ್ಪ, ನಂದರಸ ಮುಂತಾದ ಹಲವು ನಾಯಕರನ್ನು ಬಿಕರ್ನಕಟ್ಟೆಯಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಅವರ ಶವಗಳು ಕೆಲವು ದಿನ ಅಲ್ಲಿ ತೂಗುತ್ತಿದ್ದವು ಎನ್ನಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಡಿ.ಕೆ.ಚೌಟ ಅವರು ‘ಮಿತ್ತಬೈಲ್ ಯಮುನಕ್ಕೆ’ ಎಂಬ ಸೊಗಸಾದ ತುಳು ಕಾದಂಬರಿಯನ್ನು ಬರೆದಿದ್ದಾರೆ. ಕನ್ನಡ ಅನುವಾದ ಬಹುಶಃ ನವಕರ್ನಾಟಕದಲ್ಲಿ ಲಭ್ಯವಿದೆ.