ಬಿಹಾರ ವಿಧಾನಸಭಾ ಚುನಾವಣೆ ಮತ್ತು ಕರ್ನಾಟಕ, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಉಪಚುನಾವಣೆಗಳ ಫಲಿತಾಂಶದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮತಯಂತ್ರಗಳ ಸಾಚಾತನದ ಬಗ್ಗೆ ಚರ್ಚೆ ಶುರುವಾಗಿದೆ. ಅದರ ಬೆನ್ನಲ್ಲೇ ಬುಧವಾರ ಇವಿಎಂ ವಿರುದ್ಧ ಹೊಸ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಚುನಾವಣೆಗಳಲ್ಲಿ ಇವಿಎಂ ಬಳಕೆ ಕೈಬಿಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸುವಂತೆ ಮನವಿ ಮಾಡಲಾಗಿದೆ.
ಇವಿಎಂಗಳು ದೋಷಪೂರಿತವಾಗಿವೆ. ಅವುಗಳನ್ನು ತಿರುಚುವ ಸಾಧ್ಯತೆ ಹೆಚ್ಚಿದೆ. ಆ ಹಿನ್ನೆಲೆಯಲ್ಲಿಯೇ ಜಗತ್ತಿನ ವಿವಿಧ ರಾಷ್ಟ್ರಗಳು ಅವುಗಳ ಬಳಕೆಯನ್ನು ಕೈಬಿಟ್ಟಿವೆ. ಆ ಹಿನ್ನೆಲೆಯಲ್ಲಿ ಭಾರತದಲ್ಲಿ ಕೂಡ ಇವಿಎಂ ಬಳಕೆ ಕೈಬಿಡಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಶಾದ್ಯಂತ ಇವಿಎಂ ಬದಲಿಗೆ ಸಾಂಪ್ರದಾಯಿಕ ಮತಪತ್ರ ಬಳಕೆ ಜಾರಿಗೆ ಬರಬೇಕಿದೆ. ಆ ಮೂಲಕ ಚುನಾವಣಾ ಮತದಾನವನ್ನು ಇವಿಎಂ ಮೂಲಕ ತಿರುಚುವ ಮತ್ತು ದುರುಪಯೋಗಪಡಿಸಿಕೊಳ್ಳುವ ಅಪಾಯಕಾರಿ ಪ್ರವೃತ್ತಿಗೆ ಇತಿಶ್ರೀ ಹಾಡಬೇಕಿದೆ. ಯಾವುದೆ ದೇಶದ ಪ್ರಜಾಪ್ರಭುತ್ವದ ಮೂಲ ಪ್ರಕ್ರಿಯೆಯಾದ ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯಲು ಮತಪತ್ರಗಳೇ ನಂಬಿಕಸ್ಥ ಮತ್ತು ವಿಶ್ವಾಸಾರ್ಹ ಮಾನದಂಡಗಳು. ಆ ಹಿನ್ನೆಲೆಯಲ್ಲಿ ಇವಿಎಂ ಬಳಸಿದ ತಾಂತ್ರಿಕವಾಗಿ ಮುಂದುವರಿದ ದೇಶಗಳು ಕೂಡ ಅವುಗಳ ಬಳಕೆ ಕೈಬಿಟ್ಟು ಮತ್ತೆ ಮತಪತ್ರ ಪದ್ಧತಿಗೆ ಮರಳಿವೆ. ಆ ಹಿನ್ನೆಲೆಯಲ್ಲಿ ಕೂಡ ದೇಶದಲ್ಲಿಯೂ ಮತಪತ್ರಕ್ಕೆ ಮರಳಲು ಇದು ಸಕಾಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ವಕೀಲ ಸಿ ಆರ್ ಜಯ ಸುಕಿನ್ ಎಂಬವರು ಸಲ್ಲಿಸಿರುವ ಅರ್ಜಿ ಅದಾಗಿದ್ದು, ಇವಿಎಂಗಳನ್ನು ಅವುಗಳ ತಯಾರಿಕೆಯ ಹಂತದಲ್ಲೆ ತಂತ್ರಾಂಶ ಹ್ಯಾಕ್ ಅವಕಾಶವಿದೆ. ಹಾಗಾಗಿ ಯಾವುದೇ ಹ್ಯಾಕರ್ ಅಥವಾ ಮಾಲ್ ವೇರ್ ನೆರವು ಅಗತ್ಯವೂ ಇಲ್ಲದೆ ಫಲಿತಾಂಶ ತಿರುಚಬಹುದು. ಈವರೆಗೆ ಜಗತ್ತಿನಲ್ಲಿ ಹೀಗೆ ಹ್ಯಾಕ್ ಮಾಡಲು ಸಾಧ್ಯವಿಲ್ಲದ ಇವಿಎಂ ಯಂತ್ರಗಳೇ ಇಲ್ಲ ಎಂದು ಹೇಳಲಾಗಿದೆ.