ಅಧಿಕಾರದ ಹಿಂದೆ ಬಿದ್ದಿರುವ ರಾಜಕಾರಣಿಗಳಿಂದಾಗಿ ರಾಜ್ಯ ರಾಜಕೀಯ ಕೆಟ್ಟ ಸ್ಥಿತಿಗೆ ತಲುಪಿರುವಾಗ, ನಿಯಮಾವಳಿಗಳು ಮೌನವಾಗಿದೆ (ನಿಯಮಾವಳಿ ಏನೂ ಹೇಳುವುದಿಲ್ಲ) ಎಂದು ಸ್ಪೀಕರ್ ಅವರು ತಮಗೆ ಪರಮಾಧಿಕಾರವಿದೆ ಎಂಬ ಕಾರಣಕ್ಕೆ ಹೊಸ ಸಂಪ್ರದಾಯಗಳನ್ನು ಹಾಕಹೊರಟರೆ ಏನೇನು ಆಗಬಹುದು ಎಂಬುದಕ್ಕೆ ಉದಾಹರಣೆ ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು.
ಸಾಮಾನ್ಯವಾಗಿ ಶಾಸನಸಭೆ, ಶಾಸಕರ ರಾಜಿನಾಮೆ ಅಥವಾ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಅವರು ನಿರ್ಧಾರ ಕೈಗೊಂಡ ಬಳಿಕ ಆ ನಿರ್ಧಾರ ಸಮಾಧಾನ ತರದಿದ್ದರೆ ಹೈಕೋರ್ಟ್, ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ಸಾಮಾನ್ಯ. ಆದರೆ, ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಅವರು ಶಾಸಕರ ರಾಜಿನಾಮೆ ಅಂಗೀಕಾರ ವಿಚಾರದಲ್ಲಿ ಹೊಸ ಸಂಪ್ರದಾಕ್ಕೆ ಮುನ್ನುಡಿ ಬರೆಯಲು ಮುಂದಾಗಿದ್ದರಿಂದ ಪ್ರಕರಣ ಸ್ಪೀಕರ್ ಮುಂದೆ ಇದ್ದಾಗಲೇ ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮಟ್ಟಕ್ಕೆ ತಲುಪಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಶಾಸಕರಲ್ಲಿ ಅಸಮಾಧಾನ ಹೊಗೆಯಾಡುತ್ತಲೇ ಇತ್ತು. ಇದರ ಲಾಭ ಪಡೆದುಕೊಂಡ ಬಿಜೆಪಿ ಐದು ಬಾರಿ ಆಪರೇಷನ್ ಕಮಲದ ಮೂಲಕ ಅಸಮಾಧಾನಿತ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡಿ ವಿಫಲವಾಗಿತ್ತು. ಇದೀಗ ಅಸಮಾಧಾನ ತಾರಕಕ್ಕೇರಿ ಮೈತ್ರಿ ಸರ್ಕಾರದ ಭಾಗವಾಗಿದ್ದ 16 ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ, ಇದರಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಭೀತಿ ಕಾಣಿಸಿಕೊಂಡಿದೆ. ಈ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಶಾಸಕರ ಮನವೊಲಿಸಿ ಅವರಿಂದ ರಾಜಿನಾಮೆ ವಾಪಸ್ ಪಡೆಯುವಂತೆ ಮಾಡಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಯತ್ನಿಸುತ್ತಿವೆ.
ಇದರ ಮಧ್ಯೆ ಶಾಸಕರ ರಾಜಿನಾಮೆ ಅಂಗೀಕರಿಸಲು ಸ್ಪೀಕರ್ ಹೊಸ ಸಂಪ್ರದಾಯ ಶುರುಮಾಡುತ್ತಿರುವುದರಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ. ಹೀಗಾಗಿ ತಮ್ಮ ರಾಜಿನಾಮೆಗಳನ್ನು ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ನಿರ್ದೇಶನ ನೀಡುವಂತೆ ಕೋರಿ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮೊದಲು ಹತ್ತು ಶಾಸಕರು ಸುಪ್ರೀಂ ಮೆಟ್ಟಿಲೇರಿದ್ದರೆ, ಶನಿವಾರ ಮತ್ತೆ ಐವರು ಶಾಸಕರು ಇದೇ ದಾರಿ ಹಿಡಿದಿದ್ದಾರೆ. ಈ ಐವರು, ಸ್ಪೀಕರ್ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ಹೀಗಿದ್ದರೂ ಸ್ಪೀಕರ್ ಮಾತ್ರ ನಾನು ನಿಯಮಾವಳಿಗಳ ಅನುಸಾರವೇ ಶಾಸಕರ ರಾಜಿನಾಮೆ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ. ಒಬ್ಬ ಅರೆ ನ್ಯಾಯಾಂಗದ (ಕ್ವಾಜಿ ಜುಡೀಶಿಯಲ್) ಅಧಿಕಾರ ಹೊಂದಿರುವ ತಮಗೆ ಈ ರೀತಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಅವರು ಹೇಳುತ್ತಿದ್ದಾರೆ. ಹೌದು, ಸ್ಪೀಕರ್ ಅವರಿಗೆ ಆ ಅಧಿಕಾರ ಇದೆ. ಆದರೆ, ನಿಯಮಗಳಲ್ಲಿ ಇಲ್ಲದೇ ಇರುವ ಹೊಸ ಸಂಪ್ರದಾಯಗಳನ್ನು ಆರಂಭಿಸಿದಾಗ ಅದು ಪ್ರಶ್ನಾರ್ಹವಾಗಿರುತ್ತದೆ. ಆ ಪ್ರಶ್ನೆಯನ್ನೇ ರಾಜಿನಾಮೆ ನೀಡಿದ ಶಾಸಕರು ಎತ್ತಿದ್ದಾರೆ.

ಸ್ಪೀಕರ್ ಉದ್ದೇಶ ಒಳ್ಳೆಯದೇ ಇದ್ದರೂ…
ನಿಯಮಾವಳಿ ಪ್ರಕಾರ ಶಾಸಕರು ರಾಜಿನಾಮೆ ನೀಡಿದಾಗ ಅದನ್ನು ಅಂಗೀಕರಿಸುವ ಮುನ್ನ ಸ್ಪೀಕರ್ ಅವರು ಈ ರಾಜಿನಾಮೆ ಕ್ರಮಬದ್ಧವಾಗಿದೆಯೇ ಎಂದು ಪರಿಶೀಲಿಸಬೇಕು. ಕ್ರಮಬದ್ಧವಾಗಿದ್ದಲ್ಲಿ ಶಾಸಕರನ್ನು ಕರೆಸಿ ಸ್ವ ಇಚ್ಛೆಯಿಂದ ರಾಜಿನಾಮೆ ನೀಡಿದ್ದಾರೆಯೇ ಅಥವಾ ಒತ್ತಡ, ಬೆದರಿಕೆಗೆ ಮಣಿದು ರಾಜಿನಾಮೆ ನೀಡಿದ್ದಾರೆಯೇ ಎಂದು ವಿಚಾರಣೆ ನಡೆಸಬೇಕು. ಬಾಹ್ಯ ಒತ್ತಡಗಳಿಲ್ಲದೆ ಸ್ವ ಇಚ್ಛೆಯಿಂದ ರಾಜಿನಾಮೆ ನೀಡಿದ್ದಾರೆ ಎಂಬುದು ಮನದಟ್ಟಾದರೆ ಅದನ್ನು ಅಂಗೀಕರಿಸಬೇಕು. ಇಲ್ಲವೇ ಶಾಸಕರಿಗೆ ರಾಜಿನಾಮೆ ಹಿಂಪಡೆಯಲು ಅವಕಾಶ ನೀಡಬೇಕು. ಆದರೆ, ಇಂತಿಷ್ಟೇ ಸಮಯದಲ್ಲಿ ರಾಜಿನಾಮೆ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂಬುದು ನಿಯಮದಲ್ಲಿ ಇಲ್ಲ. ಯಾವಾಗ ರಾಜಿನಾಮೆ ಅಂಗೀಕರಿಸಬೇಕು ಎಂಬುದು ಸ್ಪೀಕರ್ ಅವರಿಗೆ ಬಿಟ್ಟ ವಿಚಾರ.
ಇದನ್ನೇ ಮುಂದಿಟ್ಟುಕೊಂಡು ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರ ರಾಜಿನಾಮೆ ಪರಿಶೀಲನೆ ಜತೆಜತೆಗೆ ಅದರ ಬಳಿಕ ತಮ್ಮ ಮುಂದೆ ಬಂದಿರುವ ರಾಜಿನಾಮೆ ನೀಡಿದ ಶಾಸಕರ ಅನರ್ಹತೆ ಅರ್ಜಿ, ರಾಜಿನಾಮೆ ಅಂಗೀಕರಿಸದಂತೆ ಸಾರ್ವಜನಿಕರಿಂದ ಬಂದಿರುವ ಅರ್ಜಿಗಳನ್ನೂ ವಿಚಾರಣೆ ನಡೆಸಿ ನಂತರ ಶಾಸಕರ ರಾಜಿನಾಮೆ ಅಂಗೀಕರಿಸುವುದಾಗಿ ಹೇಳಿದ್ದಾರೆ. ಸ್ಪೀಕರ್ ಅವರ ಈ ನಿರ್ಧಾರ ಒಳ್ಳೆಯದೇ ಇರಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಅವರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು (ಶಾಸಕರು) ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ಉತ್ತರದಾಯಿಗದಳಾಗಿರಬೇಕು. ಜನರು ಒಂದು ಪಕ್ಷದ ಅಭ್ಯರ್ಥಿಗಳಾಗಿದ್ದವರನ್ನು ಆಯ್ಕೆ ಮಾಡಿದ್ದಾರೆ. ಹೀಗಿರುವಾಗ ಶಾಸಕ ಅವಧಿಗೆ ಮುನ್ನ ರಾಜಿನಾಮೆ ನೀಡಿದರೆ ಅದರಿಂದ ಅವರನ್ನು ಆಯ್ಕೆ ಮಾಡಿದ ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ಆಯ್ಕೆ ಮಾಡಿದ ಮತದಾರರ ಅಹವಾಲನ್ನೂ ಆಲಿಸುವುದು ಸರಿಯಾದ ಕ್ರಮ ಎಂಬ ಕಾರಣಕ್ಕೆ ಈ ಸಂಪ್ರದಾಯ ಹಾಕಿರಬಹುದು. ಆದರೆ, ಶಾಸಕರ ರಾಜಿನಾಮೆ ಮತ್ತು ಅಂಗೀಕಾರಕ್ಕೆ ಸಂಬಂಧಿಸಿದಂತೆ ಇರುವ ನಿಯಮಾವಳಿಗಳಲ್ಲಿ ಈ ಅಂಶಗಳಿಲ್ಲ. ರಾಜಿನಾಮೆ ನೀಡಿದ ಶಾಸಕರು ಈ ನಿಯಮಾವಳಿಯನ್ನೇ ಮುಂದಿಟ್ಟುಕೊಂಡು ಸ್ಪೀಕರ್ ಅವರ ತೀರ್ಮಾನದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇನ್ನು ಶಾಸಕರ ರಾಜಿನಾಮೆ ಮತ್ತು ಅವರ ಅನರ್ಹತೆ ಅರ್ಜಿ ವಿಚಾರಣೆ ಕುರಿತಂತೆಯೂ ನಿಯಮಾವಳಿ ಮೌನವಾಗಿದೆ. ಏಕೆಂದರೆ, ನಿಯಮಾವಳಿ ರಚಿಸುವಾಗ ಈ ರೀತಿಯ ಸಮ್ಮಿಶ್ರ ಸರ್ಕಾರ,ಆಪರೇಷನ್ ಮುಂತಾದ ವಿಚಾರಗಳು ಚಾಲ್ತಿಯಲ್ಲಿರಲಿಲ್ಲ. ಯಾವುದೇ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅನರ್ಹಗೊಳಿಸಬೇಕು ಎಂದು ಒಂದು ರಾಜಕೀಯ ಪಕ್ಷ ತನ್ನ ಶಾಸಕನ ವಿರುದ್ಧ ದೂರು ನೀಡಿದ ಬಳಿಕ ಶಾಸಕ ರಾಜಿನಾಮೆ ನೀಡಿದರೆ, ರಾಜಿನಾಮೆ ಕುರಿತು ನಿರ್ಧಾರ ಕೈಗೊಳ್ಳುವ ಮುನ್ನ ಸ್ಪೀಕರ್ ಅನರ್ಹತೆ ದೂರನ್ನು ಇತ್ಯರ್ಥಗೊಳಿಸಬೇಕು. ಆದರೆ, ರಾಜಿನಾಮೆ ನೀಡಿದ ಬಳಿಕ ಅನರ್ಹತೆ ದೂರು ಸಲ್ಲಿಸಿದರೆ ಆಗ ಸ್ಪೀಕರ್ ಏನು ಮಾಡಬೇಕು ಎಂಬುದು ನಿಯಮಾವಳಿಯಲ್ಲಿ ಸ್ಪಷ್ಟವಿಲ್ಲ. ಹೀಗಿರುವಾಗ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರು ರಾಜಿನಾಮೆ ಸಲ್ಲಿಸಿದ ಬಳಿಕ ನೀಡಿದ ಅನರ್ಹತೆ ಅರ್ಜಿಗಳನ್ನು ಒಟ್ಟಾಗಿ ಇತ್ಯರ್ಥಗೊಳಿಸಲು ಮುಂದಾಗಿರುವುದು ಕೂಡ ಹೊಸ ಸಂಪ್ರದಾಯವೇ ಆಗಿದ್ದು, ಇದು ಕೂಡ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕಾರಣವಾಗಿದೆ.
ಸ್ಪೀಕರ್ ವಿರುದ್ಧ ಹೊಸ ಆರೋಪಕ್ಕೂ ನಾಂದಿ
ಸ್ಪೀಕರ್ ಅವರು ಸಾಮಾಜಿಕ ನ್ಯಾಯ ಕಾಪಾಡಿಲ್ಲ, ನಿಯಮಾನುಸಾರ ಪ್ರಕರಣ ಇತ್ಯರ್ಥಗೊಳಿಸಿಲ್ಲ, ತಮ್ಮ ವಾದವನ್ನು ಪರಿಗಣಿಸಿಲ್ಲ ಎಂಬುದು ಸಾಮಾನ್ಯವಾಗಿ ಸ್ಪೀಕರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದವರು ಮಾಡುವ ಆರೋಪ. ಆದರೆ, ಇದೀಗ ಸ್ಪೀಕರ್ ಒತ್ತಡ ಹೇರುತ್ತಿದ್ದಾರೆ ಎಂಬ ಹೊಸ ಆರೋಪಕ್ಕೂ ಶಾಸಕರ ರಾಜಿನಾಮೆ ವಿಳಂಬ ಪ್ರಕರಣ ನಾಂದಿ ಹಾಡಿದೆ. ಶನಿವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಐವರು ಶಾಸಕರು, ತಮ್ಮ ರಾಜಿನಾಮೆ ಅಂಗೀಕರಿಸದಂತೆ ಸರ್ಕಾರ ಸ್ಪೀಕರ್ ಮೇಲೆ ಒತ್ತಡ ಹೇರಿದೆ. ಈ ಕಾರಣದಿಂದ ಸ್ಪೀಕರ್ ಅವರು ತಮ್ಮ ಮೇಲೆ ಒತ್ತಡ ಹೇರಿ ರಾಜಿನಾಮೆ ಅಂಗೀಕಾರ ವಿಳಂಬ ಮಾಡುತ್ತಿದ್ದಾರೆ. ತಮ್ಮ ರಾಜಿನಾಮೆ ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ನಿರ್ದೇಶನ ನೀಡಿ ಎಂದು ನ್ಯಾಯಾಲಯವನ್ನು ಕೋರಿದ್ದಾರೆ. ಸ್ಪೀಕರ್ ಅವರು ಹಾಕಿರುವ ಹೊಸ ಸಂಪ್ರದಾಯ ಜನಪ್ರತಿನಿಧಿಗಳು ಸ್ಪೀಕರ್ ವಿರುದ್ಧವೇ ತಿರುಗಿ ಬೀಳುವ ಮಟ್ಟಿಗೆ ಪರಿಸ್ಥಿತಿ ಹದಗೆಡುತ್ತಿದೆ. ಹೀಗಾಗಿ ಮಂಗಳವಾರ ಸುಪ್ರೀಂ ಕೋರ್ಟ್ ಯಾವ ರೀತಿಯಲ್ಲಿ ಈ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತದೆ ಎಂಬ ಕುತೂಹಲ ತೀವ್ರಗೊಂಡಿದೆ.