ನಿರೀಕ್ಷೆಯಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದಿದ್ದಾರೆ. ಸಂಖ್ಯಾಬಲದ ಕೊರತೆ ಎದುರಿಸುತ್ತಿರುವ ಪ್ರತಿಪಕ್ಷಗಳು ಮತ ವಿಭಜನೆಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಧ್ವನಿಮತದ ಮೂಲಕ ವಿಶ್ವಾಸಮತ ಪ್ರಸ್ತಾಪ ಅಂಗೀಕಾರವಾಗಿದೆ. ಇದರೊಂದಿಗೆ ಮುಂದಿನ ಆರು ತಿಂಗಳು ಯಡಿಯೂರಪ್ಪ ಅವರು ನಿರ್ವಿಘ್ನವಾಗಿ ಆಡಳಿತ ನಡೆಸಬಹುದು. ಆದರೆ, ಇದೇ ವೇಳೆ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಂಡಿಸಿದ್ದ ಬಜೆಟ್ ಗೆ ಅನುಮೋದನೆ ಪಡೆಯದೆ ಕೇವಲ ಮೂರು ತಿಂಗಳ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯುವ ಮೂಲಕ ಯಡಿಯೂರಪ್ಪ ಅವರು ತಮ್ಮ ಸರ್ಕಾರ ಹೊಸ ಬಜೆಟ್ ಮಂಡಿಸಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಕಾರ್ಯಕ್ರಮಗಳಲ್ಲಿ ಬದಲಾವಣೆ ಮಾಡುವ ಮುನ್ಸೂಚನೆ ನೀಡಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರೂಪಿಸಿರುವ ಹಣಕಾಸು ವಿಧೇಯಕವನ್ನು ಒಂದಕ್ಷರವೂ ತಿದ್ದುಪಡಿ ಮಾಡದೆ ಮಂಡಿಸುವುದಾಗಿ ಈ ಹಿಂದೆ ಯಡಿಯೂರಪ್ಪ ಹೇಳಿದ್ದರು. ಅದರಂತೆ ನಡೆದುಕೊಂಡಿದ್ದರೆ ಪೂರ್ಣ ಪ್ರಮಾಣದ ಬಜೆಟ್ ಗೆ ಅನುಮೋದನೆ ಪಡೆಯಬೇಕಿತ್ತು. ಅದನ್ನು ಬಿಟ್ಟು ಮತ್ತೆ ಮೂರು ತಿಂಗಳಿಗೆ ಲೇಖಾನುದಾನ ಪಡೆದುಕೊಂಡಿದ್ದಾರೆ. ಪೂರ್ಣ ಪ್ರಮಾಣದ ಬಜೆಟ್ ಗೆ ಅನುಮೋದನೆ ಪಡೆಯಬೇಕಾದರೆ ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆಯಾಗಬೇಕು. ಆದರೆ, ಚರ್ಚೆಗೆ ಕಾಲಾವಕಾಶ ಇಲ್ಲದ ಕಾರಣ ಮೂರು ತಿಂಗಳಿಗೆ ಲೇಖಾನುದಾನ ಪಡೆಯಲಾಯಿತು ಎಂದು ಯಡಿಯೂರಪ್ಪ ಅವರು ಸಮರ್ಥಿಸಿಕೊಳ್ಳಬಹುದಾದರೂ ಅವರ ಉದ್ದೇಶ ಮಾತ್ರ ಹೊಸ ಬಜೆಟ್ ಮಂಡಿಸಿ ಹಳೆಯ ಬಜೆಟ್ ನಲ್ಲಿ ಪರಿವರ್ತನೆ ಮಾಡುವುದೇ ಆಗಿದೆ.
ಒಟ್ಟು 224 ಸದಸ್ಯಬಲದ ವಿಧಾನಸಭೆಯಲ್ಲಿ 17 ಸದಸ್ಯರು ಆನರ್ಹಗೊಂಡಿದ್ದರಿಂದ ಸಂಖ್ಯಾಬಲ 207ಕ್ಕೆ ಇಳಿದಿದೆ. ಪಕ್ಷೇತರ ಶಾಸಕ ನಾಗೇಶ್ ಬೆಂಬಲ ಸೇರಿದಂತೆ ಪ್ರಸ್ತುತ ಬಿಜೆಪಿ ಬಲ 106 ಇದೆ. ಹೀಗಾಗಿ ಹೊಸ ಬಜೆಟ್ ಮಂಡಿಸಿ ಅನುಮೋದನೆ ಪಡೆಯಲು ಯಾವುದೇ ಸಮಸ್ಯೆ ಆಗುವುದಿಲ್ಲ. ಇದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಬಹುದಾದರೂ ಸಂಖ್ಯಾಬಲ ಮುಖ್ಯಮಂತ್ರಿಗಳ ಪರ ಇರುತ್ತದೆ. ಇದರ ಜತೆಗೆ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ನೀಡಿದ್ದ ಹಲವು ಭರವಸೆಗಳನ್ನು ಈಡೇರಿಸುವ ಕೆಲಸವನ್ನು ಈಗಿನಿಂದಲೇ ಆರಂಭಿಸಬೇಕಿದ್ದು, ಅದಕ್ಕಾಗಿ ಬಜೆಟ್ ನಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇರುವುದರಿಂದ ಕೇಂದ್ರದ ಯೋಜನೆಗಳಿಗೆ ಪೂರಕವಾಗಿ ರಾಜ್ಯದಲ್ಲೂ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಇದರಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಕಮ್ಮಿಯಾಗಿ ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊಸ ಅಥವಾ ಪೂರಕ ಬಜೆಟ್ ಮಂಡಿಸುವ ಯೋಚನೆ ಮಾಡಿರಬಹುದು.
ರೈತರ ಸಾಲ ಮನ್ನಾ ಸೇರಿದಂತೆ ಕುಮಾರಸ್ವಾಮಿ ಅವರ ಬಜೆಟ್ ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳ ಜಾರಿಗೆ ಸಾಕಷ್ಟು ಆರ್ಥಿಕ ಸಂಪನ್ಮೂಲ ಅಗತ್ಯವಿದೆ. ಕಳೆದ ಕೆಲ ವರ್ಷಗಳಿಂದ ರಾಜ್ಯದ ಸಾಲದ ಪ್ರಮಾಣ ಹೆಚ್ಚುತ್ತಲೇ ಇದ್ದು, ಕುಮಾರಸ್ವಾಮಿ ಅವರು ಮಂಡಿಸಿದ್ದ 2019-20ನೇ ಸಾಲಿನ ಬಜೆಟ್ ನಲ್ಲಿ 2020 ಮಾರ್ಚ್ ಅಂತ್ಯಕ್ಕೆ ಸಾಲದ ಮೊತ್ತ 3.27 ಲಕ್ಷ ಕೋಟಿ ರೂ. ದಾಟುವ ಅಂದಾಜು ಮಾಡಲಾಗಿತ್ತು. ಇದೀಗ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತಂದಾಗ ಹಣಕಾಸು ಹೊಂದಾಣಿಕೆಯಲ್ಲಿ ಎಡವಿದರೆ ಸಾಲದ ಪ್ರಮಾಣ ಮತ್ತಷ್ಟು ಹೆಚ್ಚಿಸಬೇಕಾಗುತ್ತದೆ. ಅದರ ಬದಲಾಗಿ ಕೇಂದ್ರದ ಕಾರ್ಯಕ್ರಮಗಳ ಜತೆಗೆ ರಾಜ್ಯದ ಯೋಜನೆಗಳನ್ನು ಹೊಂದಾಣಿಕೆ ಮಾಡಿಕೊಂಡು ಆರ್ಥಿಕ ಹೊರೆ ತಪ್ಪಿಸಿಕೊಳ್ಳುವ ಉದ್ದೇಶವೂ ಯಡಿಯೂರಪ್ಪ ಅವರದ್ದಾಗಿರಬಹುದು. ಇದಕ್ಕಾಗಿಯೇ ಮೂರು ತಿಂಗಳ ಲೇಖಾನುದಾನ ಪಡೆದು ಬಜೆಟ್ ನಲ್ಲಿ ಬದಲಾವಣೆ ಮಾಡಲು ನಿರ್ಧರಿಸಿರಬಹುದು.

ಪ್ರತಿಪಕ್ಷಗಳಲ್ಲಿ ಒಗ್ಗಟ್ಟಿನ ಕೊರತೆಯ ಲಾಭ ಸಿಗಬಹುದೇ?
ಅಧಿಕಾರ ಕಳೆದುಕೊಂಡು ಪ್ರತಿಪಕ್ಷದಲ್ಲಿ ಕುಳಿತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಒಗ್ಗಟ್ಟಿನ ಕೊರತೆ ಇದೆ ಎಂದು ಹೊಸ ಸರ್ಕಾರದ ಮೊದಲ ಅಧಿವೇಶನದಲ್ಲೇ ಸೂಚನೆ ದೊರೆತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೂರಕ ಅಂದಾಜು ಮಂಡಿಸಿ ಅನುಮೋದನೆ ಪಡೆಯಲು ಮುಂದಾದಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನವರು ವಿರೋಧ ವ್ಯಕ್ತಪಡಿಸಿ ಚರ್ಚೆಯಿಲ್ಲದೆ ಅಂಗೀಕಾರ ಬೇಡ ಎಂದು ಹೇಳಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೌನವಾಗಿದ್ದರೂ ಅವರದೇ ಪಕ್ಷದ ಜಿ. ಟಿ. ದೇವೇಗೌಡ ಅವರು ಯಡಿಯೂರಪ್ಪ ಬೆಂಬಲಕ್ಕೆ ನಿಂತರು. ಹಿಂದಿನ ಕುಮಾರಸ್ವಾಮಿ ಸರ್ಕಾರ ಮಾಡಿದ ವೆಚ್ಚಗಳಿಗೆ ಮಂಡಿಸುತ್ತಿರುವ ಪೂರಕ ಅಂದಾಜುಗಳಿಗೆ ಅನುಮೋದನೆ ನೀಡೋಣ ಎಂದು ಹೇಳಿದರು. ಈ ಮಧ್ಯೆ ಕುಮಾರಸ್ವಾಮಿ ಅವರಿಗೂ ಯಡಿಯೂರಪ್ಪ ಸೇರಿದಂತೆ ಬಿಜೆಪಿಯವರು ತಮ್ಮ ಸರ್ಕಾರದ ಬಗ್ಗೆ ಮಾಡಿದ ಟೀಕೆಗಳಿಗೆ ಆಕ್ಷೇಪಿಸಿದರೇ ಹೊರತು ಉಳಿದಂತೆ ತುಟಿ ಬಿಚ್ಚಲಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರ ಬಜೆಟ್ ನಲ್ಲಿ ಘೋಷಿಸಿದ ಕಾರ್ಯಕ್ರಮಗಳನ್ನು ರದ್ದುಗೊಳಿಸದೆ ಯಡಿಯೂರಪ್ಪ ಅವರು ಹೆಚ್ಚುವರಿ ಕಾರ್ಯಕ್ರಮಗಳೊಂದಿಗೆ ಹೊಸ ಬಜೆಟ್ ಮಂಡಿಸಿದರೆ ಜೆಡಿಎಸ್ ವಿರೋಧ ವ್ಯಕ್ತಪಡಿಸಲಾರದು ಎಂಬ ಭರವಸೆ ಸದನದಲ್ಲೇ ಯಡಿಯೂರಪ್ಪ ಅವರಿಗೆ ಸಿಕ್ಕಿದೆ.
ಮೇಲಾಗಿ ಪ್ರತಿಪಕ್ಷಗಳು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್, ಸರ್ಕಾರದ ಕಾರ್ಯವೈಖರಿಯನ್ನು ಹದ್ದಿನ ಕಣ್ಣಲ್ಲಿ ಪರಿಶೀಲಿಸುತ್ತಾ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಲಿದೆ. ಪೂರಕ ಅಂದಾಜು ಅನುಮೋದನೆಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದೇ ಇದಕ್ಕೆ ಉದಾಹರಣೆ. ಇಂತಹ ಸಂದರ್ಭದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಮತ್ತೊಂದು ಪ್ರತಿಪಕ್ಷ ಜೆಡಿಎಸ್ ಬೆಂಬಲ ಬೇಕಾಗಬಹುದು. ಹೀಗಾಗಿ ಸರ್ಕಾರ ಪೂರ್ಣ ಬಹುಮತ ಗಳಿಸುವವರೆಗೆ ಹೊಸ ಬಜೆಟ್ ಮಂಡಿಸಿದರೂ ಯಡಿಯೂರಪ್ಪ ಅವರು ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಹೆಚ್ಚಿನ ಬದಲಾವಣೆ ಮಾಡಲಾರರು.