ಹೊರ ರಾಜ್ಯದ ಕಾರ್ಮಿಕರು: ಕೊಡಗಿನಲ್ಲಿ ಹೆಚ್ಚುತ್ತಿರುವ ಘರ್ಷಣೆ

ಕಾಫಿಯ ಕಣಜ ಎಂದೇ ಹೆಸರುವಾಸಿಯಾಗಿರುವ ಪುಟ್ಟ ಜಿಲ್ಲೆ ಕೊಡಗು ಇಂದಿಗೂ ಕೂಲಿ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ. ಕಾಫಿಯು ಅಪಾರ ಮಾನವ ಸಂಪನ್ಮೂಲ ಬೇಡುವ ಉದ್ಯಮವಾಗಿದ್ದು ತೋಟಗಳಲ್ಲಿ ಕೆಲಸ ಮಾಡಲು ಹೊರರಾಜ್ಯಗಳ ಕಾರ್ಮಿಕರು ಅತ್ಯಾವಶ್ಯ ಮತ್ತು ಅನಿವಾರ್ಯ ಕೂಡ.

1950-60 ರ ದಶಕದಲ್ಲಿ ಕೇರಳ ಹಾಗೂ ತಮಿಳುನಾಡಿನಿಂದ ಸಾವಿರಾರು ಕಾರ್ಮಿಕರು ವಲಸೆ ಬಂದು ತೋಟದ ಲೈನ್ ಮನೆಗಳಲ್ಲಿ ವಾಸವಿದ್ದು ಕಾಫಿ ತೋಟಗಳಲ್ಲಿ ಕೆಲಸ ಮಾಡುತಿದ್ದರು. ಕಾಲ ಕಳೆದಂತೆ ಸರ್ಕಾರ ಹಲವಾರು ಯೋಜನೆಗಳ ಮೂಲಕ ಕಾರ್ಮಿಕರಿಗೆ ನಿವೇಶನ ಮತ್ತು ಮನೆ ಕಟ್ಟಿಕೊಡಲು ಆರಂಭಿಸಿದ ನಂತರ ಪುನಃ ತೋಟಗಳಲ್ಲಿ ದುಡಿಯಲು ಕಾರ್ಮಿಕರ ಕೊರತೆ ಉಂಟಾಯಿತು. ತೋಟಗಳಿಂದ ಹೊರಬಂದು ಮನೆ ಮಾಡಿಕೊಂಡ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರು. ಇದರಿಂದಾಗಿ ಎರಡನೇ ತಲೆಮಾರಿನ ಯುವ ಜನಾಂಗ ಉದ್ಯೋಗ ಅರಸಿಕೊಂಡು ನಗರ ಪ್ರದೇಶಗಳಿಗೆ ಹೋಗುತ್ತಿರುವುದರಿಂದಾಗಿ ತೋಟಗಳಲ್ಲಿ ನವೆಂಬರ್ -ಡಿಸೆಂಬರ್ ತಿಂಗಳಿನಲ್ಲಿ ಕಾಫಿ ಕೊಯ್ಲಿನ ಸಮಯದಲ್ಲಿ ಕಾರ್ಮಿಕರ ತೀವ್ರ ಕೊರತೆ ತಲೆದೋರಿತು.

ಈ ಸಮಯದಲ್ಲಿ ಉತ್ತರ ಕರ್ನಾಟಕದ ಕಾರ್ಮಿಕರನ್ನು ಇಲ್ಲಿಗೆ ಕರೆತರುವ ಪರಿಪಾಠ ಆರಂಭಗೊಂಡಿತು. ಅಲ್ಲಿ ಹೊಲಗಳ ಕೊಯ್ಲು ಮುಗಿದಿರುವುದರಿಂದ ಅಲ್ಲಿನ ಕಾರ್ಮಿಕರಿಗೆ ಮಾರ್ಚ್ ತಿಂಗಳ ವರೆಗೆ ತೋಟಗಳಲ್ಲಿ ಉದ್ಯೋಗವೂ ಲಭಿಸಿ ಅವರೂ ಒಂದಷ್ಟು ಹಣ ಸಂಪಾದನೆ ಮಾಡಿಕೊಳ್ಳಲು ಅನುಕೂಲವಾಯಿತು.

ಕಾಲ ಕಳೆದಂತೆ ಕೊಡಗಿನಲ್ಲಿ ಕೃಷಿ ಭೂಮಿ ವಿಸ್ತಾರವಾಗಿ , ಪ್ರವಾಸೋದ್ಯಮ ಎಗ್ಗಿಲ್ಲದೇ ಬೆಳೆಯಲಾರಂಭಿಸಿತು. ಕೃಷಿ ಭೂಮಿಯನ್ನು ಪರಿವರ್ತನೆಗೊಳಿಸಿ ಹೋಂ ಸ್ಟೇ ಮತ್ತಿತರ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಲಾರಂಬಿಸಿದ ನಂತರ ಕಾಫಿ ತೋಟಗಳ ಕಾರ್ಮಿಕರು ಇದರತ್ತ ಮುಖ ಮಾಡಿದರು. 2000 ನೇ ಇಸವಿಯಿಂದ ಈಚೆಗೆ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗಿದ್ದರಿಂದ ಕಾರ್ಮಿಕರ ಕೊರತೆ ನೀಗಲು ಉತ್ತರ ಭಾರತದ ರಾಜ್ಯಗಳಿಂದ ಹಿಂದಿ ಮಾತನಾಡುವ ಜನ ಆಗಮಿಸತೊಡಗಿದರು. ಇಂದಿಗೂ ಕೊಡಗಿನ ನೂರಾರು ಹೋಂ ಸ್ಟೇ , ಹೋಟೆಲ್ ಗಳಲ್ಲಿ ಉತ್ತರ ರಾಜ್ಯಗಳ ಕಾರ್ಮಿಕರು ದುಡಿಯುತ್ತಿದ್ದಾರೆ. ಉತ್ತರದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗಿ ಮತ್ತು ಬಾಂಗ್ಲಾ ದೇಶದಿಂದಲೂ ವಲಸೆ ಬಂದಿರುವ ಕಾರ್ಮಿಕರಿಗೂ ಸೂಕ್ತ ಉದ್ಯೋಗದ ಅವಶ್ಯಕತೆ ಇದ್ದುದರಿಂದ ಕೊಡಗು ಜಿಲ್ಲೆ ಉತ್ತಮ ಅವಕಾಶವನ್ನೇ ಒದಗಿಸಿದೆ.

ಮೊನ್ನೆ ಮೊನ್ನೆ ತನಕವೂ ಉತ್ತರದ ರಾಜ್ಯಗಳ ಕಾರ್ಮಿಕರಿಂದಾಗಿ ಸ್ಥಳಿಯರಿಗೆ ಯಾವುದೇ ತೊಂದರೆ ಇರಲಿಲ್ಲ. ಕೆಲವೊಮ್ಮೆ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡ ನಿದರ್ಶನಗಳಿದ್ದರೂ ಯಾರೂ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೇ ವರ್ಷದ ಫೆಬ್ರುವರಿ ಮೊದಲ ವಾರದಲ್ಲಿ ನಡೆದ ಘಟನೆಯೊಂದು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತಷ್ಟೇ ಅಲ್ಲ ಜನತೆಯನ್ನೂ ರೊಚ್ಚಿಗೆಬ್ಬಿಸಿತು.

ಫೆಬ್ರುವರಿ 4, 2019. ಎಂದಿನಂತೆ ಕಾಲೇಜಿನಿಂದ ಎರಡು ಕಿಮಿ ದೂರವಿರುವ ಮನೆಗೆ ಕಾಲ್ನಡಿಗೆಯಲ್ಲಿ ಹೋಗುತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಬಿಂದಿಯಾ (ಹೆಸರು ಬದಲಿಸಲಾಗಿದೆ) ರಾತ್ರಿಯಾದರೂ ಮನೆ ತಲುಪಲೇ ಇಲ್ಲ. ಎಲ್ಲ ಕಡೆ ಹುಡುಕಿದ್ದಾಯಿತು. ತಂದೆ ಇಲ್ಲದ ಈ ನತದೃಷ್ಟೆಯ ತಾಯಿ ಪ್ರತಿಷ್ಟಿತ ಸಂಸ್ಥೆಯೊಂದರ ಕಾಫಿ ಎಸ್ಟೇಟಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಮಗಳನ್ನು ಓದಿಸುತ್ತಿದ್ದರು. ಬಿಂದಿಯಾ (17) ಅಪ್ರಪ್ತಳಾಗಿದ್ದು ಇವಳ ಇಬ್ಬರು ಅಣ್ಣಂದಿರೂ ಅದೇ ಎಸ್ಟೇಟಿನಲ್ಲಿ ಕಾರ್ಮಿಕರಾಗಿದ್ದು ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತಿದ್ದರು.

ಬಿಂದಿಯಾ ನಿಗೂಢವಾಗಿ ನಾಪತ್ತೆಯಾದಾಗ ಬಹುಶಃ ಪ್ರೇಮ ಪ್ರಕರಣ ಇರಬಹುದು ಎಂದು ಅಲ್ಲರೂ ಭಾವಿಸಿದ್ದರು. ಪೋಲೀಸರೂ ಹುಡುಕಾಟ ನಡೆಸಿದರೂ ಎನೂ ಪತ್ತೆ ಆಗಿರಲಿಲ್ಲ. ಸ್ಥಳೀಯ ಜನರಿಂದ ಒತ್ತಡದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೋಲೀಸರಿಗೆ ಅದೇ ತೋಟದಲ್ಲಿ ಕಾರ್ಮಿಕರಾಗಿದ್ದ ಉತ್ತರ ಭಾರತ ಮೂಲದ ಸಂದೀಪ್ (23) ಮತ್ತು ರಂಜಿತ್ (28) ಎಂಬ ಕಾರ್ಮಿಕರ ಮೇಲೆ ಅನುಮಾನ ಮೂಡುತ್ತದೆ. ನಂತರ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಅತ್ಯಾಚಾರ ಮಾಡಿ ಬಚ್ಚಿಟ್ಟಿದ್ದ ಶವವನ್ನೂ ತೋರಿಸುತ್ತಾರೆ.

ಇದಾದ ನಂತರ ಸ್ಥಳೀಯರ ಅಸಹನೆ ಭುಗಿಲೇಳುತ್ತದೆ. ಕಾರ್ಮಿಕ ಸಂಘಗಳು , ಜನಪರ ಸಂಘಟನೆಗಳು ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿ ಉತ್ತರ ಭಾರತದ ಕಾರ್ಮಿಕರಿಗೆ ಕೆಲಸವನ್ನೇ ನೀಡಬಾರದು ಮತ್ತು ಅವರನ್ನು ಅಲ್ಲಿಗೇ ಕಳಿಸಬೇಕೆಂದು ಒತ್ತಾಯಿಸಿದರು.

ಇದೀಗ ವೀರಾಜಪೇಟೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ವಿಚಾರಣೆ ಜುಲೈ 20 ರಿಂದ ಆರಂಭಗೊಂಡಿದ್ದು ನತದೃಷ್ಟ ದಲಿತ ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಯಾವ ಪರಿಹಾರವೂ ದೊರೆತಿಲ್ಲ. ಆಕೆಯ ತಾಯಿಯನ್ನು ಪ್ರತಿಧ್ವನಿ ಮಾತಾಡಿಸಿದಾಗ, “ನಾವು ಪರಿಹಾರಕ್ಕೆ ಕಾಯುತ್ತಿಲ್ಲ, ನನ್ನ ಮಗಳ ಮೇಲಾದ ಈ ದೌರ್ಜನ್ಯ ಇನ್ನಾರ ಮಕ್ಕಳಿಗೂ ಆಗುವುದು ಬೇಡ , ಅಪರಾಧಿಗಳನ್ನು ಗಲ್ಲಿಗೇರಿಸಲಿ,’’ ಎಂದು ಒತ್ತಾಯಿಸಿದರು.

ಆದರೆ ತಮಗೆ ಯಾವುದೇ ಪರಿಹಾರ ದೊರಕದೆ ಜೈಲಿನಲ್ಲಿರುವ ಆರೋಪಿಗಳಿಗೆ ಉಚಿತ ಕಾನೂನು ನೆರವು ನೀಡುತ್ತಿರುವುದು ಬಿಂದಿಯಾ ಕುಟುಂಬದ ಸಂಕಟವನ್ನು ಇನ್ನಷ್ಟು ಹೆಚ್ಚಿಸಿದೆ. ಮೃತ ಯುವತಿ ದಲಿತ ವರ್ಗಕ್ಕೆ ಸೇರಿದ್ದರೂ ಆರೋಪಿಗಳೂ ದಲಿತರಾಗಿರುವ ಹಿನ್ನೆಲೆಯಲ್ಲಿ ಕಾನೂನಿನಂತೆ ಪರಿಹಾರ ನೀಡಲಾಗಿಲ್ಲ ಮತ್ತು ಆರೋಪಿಗಳಿಗೆ ಉಚಿತ ಕಾನೂನು ನೆರವು ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಘಟನೆ ನಡೆದ ನಂತರ ಪೋಲೀಸ್ ಇಲಾಖೆ ಎಚ್ಚತ್ತುಕೊಂಡಿದ್ದು, ಎಲ್ಲಾ ಪೋಲೀಸ್ ಠಾಣೆಗಳಲ್ಲೂ ತೋಟಗಳ ಮಾಲೀಕರು ತಮ್ಮಲ್ಲಿ ಕೆಲಸ ಮಾಡುತ್ತಿರುವ ಉತ್ತರದ ಕಾರ್ಮಿಕರ ಹೆಸರುಗಳನ್ನು ನೋಂದಾಯಿಸಬೇಕೆಂದು ಸೂಚಿಸಿದ್ದಾರೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...