ರಾಜ್ಯದ ಪ್ರಮುಖ ವನ್ಯ ಜೀವಿ ತಾಣ ನಗರಹೊಳೆಗೆ ಹೊಂದಿಕೊಂಡಿದ್ದ ಆನೆ ಚೌಕೂರು, ದೇವಮಚ್ಚಿ ಮತ್ತು ಮಾವುಕಲ್ ಮೀಸಲು ಅರಣ್ಯದ ಸುಮಾರು 200 ಚದರ ಕಿಲೋಮೀಟರ್ ಗಳಷ್ಟು ಅರಣ್ಯವನ್ನು ಕೇಂದ್ರ ಸರ್ಕಾರ ನಾಗರಹೊಳೆ ಟೈಗರ್ ರಿಸರ್ವ ಗೆ ಸೇರ್ಪಡೆ ಮಾಡಿ ಕಳೆದ ಆಗಸ್ಟ್ 15 ರಂದು ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವಿಸ್ತೀರ್ಣ ಪ್ರಸ್ತುತ 643.39 ಚದರ ಕಿಲೋಮೀಟರ್ ಗಳಿಂದ 843 ಚದರ ಕಿಲೋಮೀಟರ್ ಗಳಿಗೆ ಏರಿಕೆ ಆಗುತ್ತಿದೆ.
ಹೆಚ್ಚು ಓದಿದ ಸ್ಟೋರಿಗಳು
ವನ್ಯ ಜೀವಿ ಪ್ರೇಮಿಗಳಿಗೆ ಇದು ಸಂತಸದ ಸುದ್ದಿಯೇ. ನಾಗರಹೊಳೆ ಉದ್ಯಾನವನವನ್ನು 2000 ನೇ ಇಸವಿಯಲ್ಲಿಯೇ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದ್ದು, ಇದು ರಾಜ್ಯದ ಎರಡನೇ ಅತೀ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ. (ಮೊದಲನೆಯದು ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ) ಹುಲಿಗಳ ಸಂತತಿ ಬೆಳವಣಿಗೆಗೆ ಅನುವು ಮಾಡಿಕೊಡುವುದೇ ಇದರ ಉದ್ದೇಶ. ಕೇಂದ್ರ ಸರಕಾರ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿ ಹಿಗ್ಗಿಸಿರುವುದರಿಂದ ಕಾಡಂಚಿನ ಗ್ರಾಮಗಳ ಗ್ರಾಮಸ್ಥರಿಗೆ ಹುಲಿಗಳ ಕಾಟ ಕೊಂಚ ಕಡಿಮೆ ಆಗಬಹುದೇನೊ.

ಇತ್ತೀಚಿನ ವರ್ಷಗಳಲ್ಲಿ ಕೊಡಗಿನ ಕಾಫಿ ಬೆಳೆಗಾರರು ಮತ್ತು ರೈತರು ವರ್ಷವಿಡೀ ಕಾಡಾನೆಗಳ ಜತೆ ಗುದ್ದಾಡಿಕೊಂಡೇ ಬೆಳೆ ಬೆಳೆಯಬೇಕಿದೆ. ಆನೆ –ಮಾನವ ಸಂಘರ್ಷ ತಾರಕಕ್ಕೇರಿದ್ದು ಇದಕ್ಕೆ ಮತ್ತಷ್ಟು ಇಂಬು ಕೊಡುವಂತೆ ದಕ್ಷಿಣ ಕೊಡಗಿನ ನಾಗರಹೊಳೆಯ ಕಾಡಂಚಿನ ಗ್ರಾಮಗಳಾದ ಬಿರುನಾಣಿ, ಬಾಳೆಲೆ , ಶ್ರೀಮಂಗಲ, ಮಾಕುಟ್ಟ ಪ್ರದೇಶಗಳಲ್ಲಿ ಹುಲಿಗಳು ದಾಳಿ ಮಾಡಿ ಜಾನುವಾರುಗಳನ್ನು ಹೊತ್ತೊಯ್ಯುತ್ತಿವೆ. ವಿರಾಜಪೇಟೆ ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ ಕಳೆದ 12 ತಿಂಗಳಿನಲ್ಲಿ ಸುಮಾರು 25 ಕ್ಕೂ ಹೆಚ್ಚು ಜಾನುವಾರುಗಳು ಹುಲಿಗಳಿಗೆ ಬಲಿಯಾಗಿವೆ.

ಈಗ ನಾಗರಹೊಳೆ ವಿಸ್ತೀರ್ಣ ಹೆಚ್ಚಾಗಿರುವುದರಿಂದ ಹುಲಿಗಳಿಗೆ ಒಂದಷ್ಟು ನೆಲೆ ಹೆಚ್ಚಾಗಲಿದೆ. ಆದರೆ ರಾತ್ರಿ ವಾಹನ ಸಂಚಾರ ನಿಷೇಧಿಸುವ ಕುರಿತು ವಿರಾಜಪೇಟೆ ತಾಲ್ಲೂಕಿನ ಜನತೆ ಆತಂಕಗೊಂಡಿದ್ದಾರೆ. ಕೇರಳ ಮತ್ತು ಕೊಡಗನ್ನು ಮೈಸೂರಿಗೆ ಸಂಪರ್ಕಿಸುವ ಹೆದ್ದಾರಿ ಆನೆ ಚೌಕೂರು ಅರಣ್ಯ ಚೆಕ್ ಪೋಸ್ಟ್ ಮುಖಾಂತರವೇ ಹಾದು ಹೋಗಿದ್ದು ಇಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸುವ ಸಾಧ್ಯತೆ ಸದ್ಯಕ್ಕೆ ಇಲ್ಲವಾದರೂ ಯಾರಾದರೂ ಮುಂದೆ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದಲ್ಲಿ ನಿಷೇಧಿಸುವ ಸಾಧ್ಯತೆ ಇದ್ದೇ ಇದೆ.
ಈಗ ಪ್ರಸ್ತುತ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲೂ ನ್ಯಾಯಾಲಯದ ಆದೇಶದ ಮೇರೆಗೆ ರಾತ್ರಿ ವೇಳೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಿರಾಜಪೇಟೆ –ಹುಣಸೂರು ರಾಜ್ಯ ಹೆದ್ದಾರಿಯಲ್ಲಿ ಮತ್ತಿಗೋಡು ಆನೆ ಶಿಬಿರದ ಬಳಿ ಕೋರ್ಟಿನ ಆದೇಶದ ಮೇರೆಗೆ ಲೋಕೋಪಯೋಗಿ ಇಲಾಖೆಯು 11 ಕಿಲೋ ಮೀಟರ್ ರಸ್ತೆಯಲ್ಲಿ ತಲಾ 500 ಮೀಟರ್ ಗಳಿಗೆ ಒಂದರಂತೆ ಒಟ್ಟು 22 ರಸ್ತೆ ಉಬ್ಬು ನಿರ್ಮಿಸಿದೆ. ಒಂದು ವೇಳೆ ರಾತ್ರಿ ಸಂಚಾರ ನಿಷೇಧಿಸಿದರೆ ಕೇರಳ ಕೊಡಗಿನ ಪ್ರಯಾಣಿಕರು 16 ಕಿಲೋಮೀಟರ್ ಬಳಸಿಕೊಂಡು ಮಾಲ್ದಾರೆ- ಪಿರಿಯಾಪಟ್ಟಣ ಮಾರ್ಗವಾಗಿ ಮೈಸೂರು ತಲುಪಬೇಕಿದೆ.

ಆದರೆ, ವಾಹನ ಸಂಚಾರವನ್ನು ರಾತ್ರಿ ವೇಳೆ ನಿರ್ಬಂಧಿಸುವ ಪ್ರಶ್ನೆಯೇ ಇಲ್ಲ ಎಂದು ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ನಾರಾಯಣ ಸ್ವಾಮಿ ಪ್ರತಿಧ್ವನಿ ಗೆ ತಿಳಿಸಿದರು. ಕೇಂದ್ರ ಸರ್ಕಾರ ಬಹಳ ಹಿಂದೆಯೇ ಈ ೨೦೦ ಚದರ ಕಿಲೋಮೀಟರ್ ಮೀಸಲು ಅರಣ್ಯವನ್ನು ಹುಲಿ ಸಂರಕ್ಷಣಾ ಪ್ರದೇಶದ ಬಫರ್ ಜೋನ್ ಆಗಿ ಮಾರ್ಪಡಿಸಿದ್ದರೂ ಮೊನ್ನೆ ಆಗಸ್ಟ್ 15 ರಂದು ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದ ಅವರು ವಾಹನ ಸಂಚಾರದ ನಿಷೇಧ ಕೇವಲ ಊಹಾ ಪೋಹ ಎಂದರು.
ಆದರೆ, 200 ಚದರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶ ನಾಗರಹೊಳೆಗೆ ಸೇರಿಸಿರುವದರಿಂದ ರಾತ್ರಿ ವಾಹನ ಚಾಲಕರಿಗೆ ಭಾರೀ ಅನಾನುಕೂಲ ಆಗಲಿರುವುದರ ಬಗ್ಗೆ ಜಿಲ್ಲೆಯ ಪ್ರಯಾಣಿಕರು ಆತಂಕಗೊಂಡಿದ್ದಾರೆ. ಪ್ರತಿಧ್ವನಿಯೊಂದಿಗೆ ಮಾತನಾಡಿದ ಶ್ರೀಮಂಗಲದ ಕಾಫಿ ಬೆಳೆಗಾರ ಮಚ್ಚಮಾಡ ಅನೀಶ್ ಮಾದಪ್ಪ ಅವರು “ವಿರಾಜಪೇಟೆ ತಾಲ್ಲೂಕಿನವರು ಮೈಸೂರಿಗೆ ತೆರಳಬೇಕಾದರೆ ಇದೊಂದೇ ಮಾರ್ಗ ಇರುವುದು. ಇದನ್ನೂ ರಾತ್ರಿ ಮುಚ್ಚಿದರೆ ವೈದ್ಯಕೀಯ ಸೇವೆ ಲಭಿಸದೇ ರೋಗಿಗಳ ಸಾವು ಹೆಚ್ಚುವುದು ಖಚಿತ,’’ ಎಂದರು. ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ಲಭ್ಯ ಇಲ್ಲದಿರುವುದರಿಂದ ಜನತೆ ಮೈಸೂರಿನ ಆಸ್ಪತ್ರೆಗಳನ್ನೇ ನಂಬಿಕೊಂಡಿದ್ದಾರೆ ಎಂದ ಅವರು 16 ಕಿಲೋ ಮೀಟರ್ ಬಳಸಿಕೊಂಡು ರಾತ್ರಿ ಪ್ರಯಾಣ, ಅದೂ ಮಳೆಗಾಲದಲ್ಲಿ ಕಷ್ಟಕರ ಎಂದರು.

ವಿರಾಜಪೇಟೆ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಕೆ ಸೋಮಣ್ಣ ಕಳೆದ ಶುಕ್ರವಾರ ಪತ್ರಿಕಾ ಗೋಷ್ಟಿ ಕರೆದು ರಾತ್ರಿ ವಾಹನ ಸಂಚಾರ ನಿಷೇಧಿಸಿದರೆ ಕೊಡಗು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅದ್ಯಕ್ಷ ನಿವೃತ್ತ ಕರ್ನಲ್ ಮುತ್ತಣ್ಣ ಅವರ ಪ್ರಕಾರ ಈ ಹೊಸದಾಗಿ ಸೇರ್ಪಡೆ ಮಾಡಿಕೊಂಡಿರುವ ಅರಣ್ಯವನ್ನು ಬಫರ್ ಜೋನ್ ಎಂಬುದಾಗಿ ಮಾತ್ರ ಪರಿಗಣಿಸಿದ್ದು ಅರಣ್ಯ ಇಲಾಖೆ ಸಂಚಾರ ನಿಷೇಧಿಸುವ ಸಾದ್ಯತೆ ಇಲ್ಲ ಎಂದರು. ವನ್ಯ ಜೀವಿಗಳ ಜೊತೆಗೆ ಮನುಷ್ಯನ ಜೀವನವೂ ಮುಖ್ಯವಾಗಿದ್ದು ಈಗಾಗಲೇ ನಾಗರಹೊಳೆಯ ಅರಣ್ಯದೊಳಗೆ ಹಾದು ಹೋಗಿರುವ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದ್ದು ಇದನ್ನೂ ನಿಷೇಧಿಸಿದರೆ ಜನತೆಯ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದರು.
ನಮ್ಮ ರಾಜ್ಯದಲ್ಲಿ ಸುಮಾರು 524 ಹುಲಿಗಳಿದ್ದು ಇದು ಹುಲಿ ಸಂಖ್ಯೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಕಳೆದ ೫ ವರ್ಷಗಳಲ್ಲಿ ದೇಶದ ಹುಲಿಗಳ ಸಂಖ್ಯೆ ಶೇಕಡಾ 30 ಕ್ಕೂ ಹೆಚ್ಚಾಗಿದೆ ಎಂದು ಹುಲಿ ಯೋಜನೆ ಅಂಕಿ ಅಂಶಗಳು ತಿಳಿಸುತ್ತವೆ. ಹೆಚ್ಚುತ್ತಿರುವ ಹುಲಿಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ವಿಸ್ತಾರ ಆಗಬೇಕಿರುವುದು ಅನಿವಾರ್ಯ. ಇಂದು ರಾಜ್ಯದಲ್ಲಿ ಐದು ಹುಲಿ ಸಂರಕ್ಷಿತ ಅರಣ್ಯಧಾಮಗಳಿದ್ದು ಬಂಡಿಪುರ, ಭದ್ರಾ, ನಾಗರಹೊಳೆ, ದಾಂಡೇಲಿ ಮತ್ತು ಬಿಆರ್‌ಟಿ ಯಲ್ಲಿ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ದಾಖಲಿಸುತ್ತಿರುವುದು ವನ್ಯಪ್ರೇಮಿಗಳಲ್ಲಿ ಸಂತಸ ತಂದಿದೆ. ನಾಗರಹೊಳೆಯಲ್ಲಿ ಪ್ರಸ್ತುತ ನೂರಕ್ಕೂ ಹೆಚ್ಚು ಹುಲಿಗಳಿದ್ದು ಇವುಗಳ ಸಂತತಿ ಹೆಚ್ಚಲಿ ಎಂದು ಆಶಿಸೋಣ.