ಭ್ರಷ್ಟಾಚಾರದ ಬಗ್ಗೆ ಕೋರ್ಟ್‌ಗಳ ವಿಚಾರಣಾ ಸಮಯದಲ್ಲಿ ತೀಕ್ಷ್ಣ ಟೀಕೆಗಳು ಆಗಾಗ ಕೇಳಿಬರುತ್ತಿರುತ್ತವೆ. ಆದರೆ, ಅದೇ ತೀಕ್ಷ್ಣತೆ ಆದೇಶದಲ್ಲಿಯೂ ಕಾಣುವುದು ಅಪರೂಪ. ಆ ನೆಲೆಯಲ್ಲಿ ಇದೊಂದು ಮಹತ್ವದ ಆದೇಶ.
ಏಪ್ರಿಲ್ 26ರ ಈ ಆದೇಶದಲ್ಲಿ ಅರ್ಜಿಯೊಂದರ (Writ Petition) ವಿಚಾರಣಾ ಸಮಯದಲ್ಲಿ ಹೇಳಲಾದ ಭ್ರಷ್ಟಾಚಾರ ದೂರಿನ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ (Anti Corruption Bureau) ಆದೇಶ ನೀಡಿದೆ. ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ತನಿಖೆ ನಡೆಸಿ ವರದಿ ಸಲ್ಲಿಸಲು ACBಗೆ 90 ದಿನಗಳ ಕಾಲಾವಕಾಶ ನೀಡಿದೆ. ನ್ಯಾಯಮೂರ್ತಿ ಸತ್ಯನಾರಾಯಣ, ಈ ಹಿಂದೆಯೂ ಅಧಿಕಾರ ದುರ್ಬಳಕೆ, ಸರ್ಕಾರಿ ಕೆಲಸದಲ್ಲಿ ಅನಗತ್ಯ ವಿಳಂಬ, ಲಂಚಕ್ಕಾಗಿ ಕಿರುಕುಳ ಕೊಡುವ ಸಂಬಂಧದ ಅರ್ಜಿಗಳ ವಿಚಾರಣೆಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಪ್ರಕರಣದ ವಿಚಾರಣೆಯಲ್ಲಂತೂ ನ್ಯಾ.ಸತ್ಯನಾರಾಯಣ, “ಇವರನ್ನೆಲ್ಲ (ಭ್ರಷ್ಟರನ್ನು) ನೇಣಿಗೆ ಹಾಕಬೇಕು,” ಎಂದು ಹೇಳಿರುವ ಬಗ್ಗೆ ಪತ್ರಿಕೆಗಳಲ್ಲಿ (ಏಪ್ರಿಲ್ 8, 2019) ವರದಿಯಾಗಿತ್ತು.
ಪ್ರಕರಣ ಏನು?
ರಾಮಮೂರ್ತಿ ನಗರ ನಿವಾಸಿ, 72 ವರ್ಷದ ಎನ್ ಗಂಗಾಧರ ಅವರು ದೇವಸಂದ್ರ ಗ್ರಾಮದ ಸರ್ವೆ ನಂಬರ್ 62/1Cಯಲ್ಲಿನ ತಮ್ಮ ಜಾಗದ ಭೂದಾಖಲೆಗಳಲ್ಲಿನ ದೋಷಗಳನ್ನು ಸರಿಪಡಿಸುವಂತೆ ಭೂಮಾಪನ ಹಾಗೂ ಭೂದಾಖಲೆಗಳ ಇಲಾಖೆಗೆ ನಿರ್ದೇಶನ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಈ ದೋಷಗಳನ್ನು ಸರಿಪಡಿಸುವಂತೆ ಭೂದಾಖಲೆಗಳ ಜಂಟಿ ನಿರ್ದೇಶಕರಿಗೆ ತಿಳಿಸಿತ್ತು. ಅದರಂತೆ, 1999ರಲ್ಲಿ ಕಡತದಲ್ಲಿ ಸೇರಿಹೋಗಿದ್ದ ದೋಷವನ್ನು ಸರಿಪಡಿಸಲಾಯಿತು.
ಆದರೆ, ಈ ಮಧ್ಯೆ ವಿಚಾರಣೆ ವೇಳೆ ಅರ್ಜಿದಾರರು, ಹಿಂದಿನ ಜಂಟಿ ನಿರ್ದೇಶಕ ಕೆ ಜಯಪ್ರಕಾಶ ಎಂಬುವರು ದೋಷ ಸರಿಪಡಿಸಲು ರೂ. 20 ಲಕ್ಷ ಕೇಳಿದ್ದರು ಎಂದು ಆಪಾದಿಸಿದರು. ಅಲ್ಲದೆ, ಹಣ ಕೊಡದಿದ್ದಾಗ ಜಯಪ್ರಕಾಶ ಒಂದು ಟಿಪ್ಪಣಿ ತಯಾರಿಸಿ, ಗಂಗಾಧರ ಅವರ ಭೂಮಿಯ ಕಡತದಲ್ಲಿ 1999ರಲ್ಲಿ ಸೇರ್ಪಡೆಗೊಂಡದ್ದು ದೋಷವಲ್ಲ ಎಂಬರ್ಥದ ಟಿಪ್ಪಣಿ ಬರೆದರು. ಅಲ್ಲದೆ, 1999ರ ಕಡತದ ವಿಷಯ ತಹಸೀಲ್ದಾರ್ ವರದಿಯ ಆಧಾರದ ಮೇಲೆ ಆಗಿದೆ ಹಾಗೂ ಸರ್ಕಾರದಿಂದ ಅನಮೋದನೆಗೊಂಡಿದೆ ಎಂದು ಹೇಳಿದ್ದರು.
ಲಂಚದ ಆರೋಪವನ್ನು ತಳ್ಳಿಹಾಕಿದ ಅಧಿಕಾರಿಯ ಪರ ವಕೀಲರು, ಆರೋಪ ನಿಜವೇ ಆಗಿದ್ದಲ್ಲಿ, ದೂರುದಾರರು ಹಿರಿಯ ಅಧಿಕಾರಿಗಳಲ್ಲಿ ದೂರು ಅರ್ಜಿ ಸಲ್ಲಿಸಬೇಕಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ನ್ಯಾಯಾಲಯ ಪ್ರತಿಕ್ರಿಯಿಸಿದ ರೀತಿ ಸದ್ಯ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಹಿಡಿದ ಕನ್ನಡಿಯಂತಿದೆ. ನ್ಯಾಯಾಲಯ ಹೇಳಿದ್ದು: “ಸರ್ಕಾರಿ ಅಧಿಕಾರಿಗಳು ಲಂಚ ಕೇಳುವುದು ಆಶ್ಚರ್ಯವೂ ಅಲ್ಲ, ಹೊಸ ವಿಷಯವೂ ಅಲ್ಲ. ಹೀಗಾಗಿ, ಪೊಲೀಸರಲ್ಲಿ ಅಥವಾ ಹಿರಿಯ ಅಧಿಕಾರಗಳಲ್ಲಿ ದೂರು ಸಲ್ಲಿಸುವುದು ಎಲ್ಲ ಸಂದರ್ಭಗಳಲ್ಲಿ ಸಾಧ್ಯವಾಗದೇ ಇರಬಹುದು. ಈ ಎರಡೂ ಆಯ್ಕೆಗಳಲ್ಲಿ (ಪೊಲೀಸ್ ಹಾಗೂ ಹಿರಿಯ ಅಧಿಕಾರಿಗಳು) ಭ್ರಷ್ಟಾಚಾರ ಪರಿಸ್ಥಿತಿ ಏನೂ ವಿಭಿನ್ನವಾಗಿಲ್ಲ. ಹಾಗಾಗಿಯೇ, ಕೆಲವೊಮ್ಮೆ ದೂರುದಾರರು ನೇರವಾಗಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸುತ್ತಾರೆ.’’
ನ್ಯಾಯಾಲಯ ಹೇಳಿದಂತೆ ಭ್ರಷ್ಟಾಚಾರ ದೂರು ಬಂದ ತಕ್ಷಣ ಹಿರಿಯ ಅಧಿಕಾರಿಗಳೇನು ಕಾರ್ಯಪ್ರವೃತ್ತರಾಗುವುದಿಲ್ಲ. ಅಲ್ಲಿಯೂ ಭ್ರಷ್ಟಾಚಾರ ಇಲ್ಲದೇನಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ 2017 ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಗೆ (Prevention of Corruption Act) ತರಲಾದ ತಿದ್ದುಪಡಿಯ ಪ್ರಕಾರ ಅಧಿಕಾರಿಯ ಸರ್ಕಾರಿ ಕೆಲಸದ ಸಂಬಂಧ ಯಾವುದೇ FIR ದಾಖಲಿಸುವ ಮೊದಲು ಆ ಅಧಿಕಾರಿಯ ಹಿರಿಯ ಅಧಿಕಾರಿಯ ಅನುಮತಿ ಕಡ್ಡಾಯ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ತಿದ್ದುಪಡಿ (2018) ಜಾರಿಗೆ ತರುವ ಮೊದಲೇ, ಸಿದ್ಧರಾಮಯ್ಯ ಸರ್ಕಾರ ಈ ಅಂಶವನ್ನು ACB ಸ್ಥಾಪಿಸುವಾಗ ಜಾರಿಗೆ ತಂದಿತ್ತು. ಈಗಲೂ ಎಷ್ಟೋ ಪ್ರಕರಣಗಳಲ್ಲಿ FIR ದಾಖಲಿಸಲು ACB ಭ್ರಷ್ಟ ಅಧಿಕಾರಿಗಳ ‘ಹಿರಿಯರ’ ಅನುಮತಿಗಾಗಿ ಕಾಯುತ್ತಿದೆ.
ಮೂಲಗಳ ಪ್ರಕಾರ, ACB ಅನೇಕ ಪ್ರಕರಣಗಳಲ್ಲಿ FIR ದಾಖಲಿಸಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ. ಇದಕ್ಕೆ ಕಾರಣ ಇದೇ ಹಿರಿಯ ಅಧಿಕಾರಿಗಳು. ಪೂರ್ವಭಾವಿ ತನಿಖೆ ನಡೆಸಿ FIR ದಾಖಲಿಸಿ ತನಿಖೆ ಮುಂದುವರಿಸಲು ಯೋಗ್ಯ ಪ್ರಕರಣ ಎಂದು ACB ಕಂಡುಕೊಂಡ ಪ್ರಕರಣಗಳ ತನಿಖೆಯೂ ಜಾಡು ತಪ್ಪುತ್ತಿದೆ. ಇದಕ್ಕೆಲ್ಲ ಕಾರಣ ಹಿರಿಯ ಅಧಿಕಾರಿಗಳ ಮುಂದೆ ತೆಪ್ಪಗೆ ಬಿದ್ದಿರುವ FIR ದಾಖಲಿಸಲು ಯೋಗ್ಯ ಪ್ರಕರಣಗಳ ಫೈಲ್.
ಈಗ ಅಂಕಿ-ಅಂಶಗಳಿಗೆ ಬರೋಣ. ACB ಸ್ಥಾಪನೆ ಆದಾಗಿನಿಂದ (2016) ಇದುವರೆಗೂ ಕೇವಲ FIRಗೆ ಅನುಮತಿ ಕೋರಿ ಕಾದು ಕೂತಿರುವ ಪ್ರಕರಣಗಳ ಸಂಖ್ಯೆ ಬರೋಬ್ಬರಿ 109! ಇವೆಲ್ಲ ಸರ್ಕಾರಿ ಅಧಿಕಾರಿಗಳ ಸರ್ಕಾರಿ ಕೆಲಸದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಭ್ರಷ್ಟಾಚಾರದ ಪ್ರಕರಣಗಳು. ಮೂಲಗಳ ಪ್ರಕಾರ, ಈ ಎಲ್ಲ ಪ್ರಕರಣಗಳು, ACB ಸ್ಥಾಪನೆಗೊಂಡ ನಿಯಮಾವಳಿಗಳಂತೆ, ಪೂರ್ವಭಾವಿ ತನಿಖೆ ನಡೆಸಿ, ಮೇಲ್ನೋಟಕ್ಕೆ ಆರೋಪ ಸಾಬೀತಾಗಿ FIR ದಾಖಲಿಸಲು ಯೋಗ್ಯವೆಂದು ಗುರುತಿಸಲಾದ ಪ್ರಕರಣಗಳು. ಈ ಪ್ರಕರಣಗಳಲ್ಲಿ FIR ದಾಖಲಿಸಲು ಆರೋಪ ಎದುರಿಸುತ್ತಿರುವ ಆರೋಪಿಗಳ ಹಿರಿಯ ಅಧಿಕಾರಿಗಳ ಅನುಮತಿ ಬೇಕು.
ಇಂಥಹ ಪರಿಸ್ಥಿತಿಯಲ್ಲಿ, ಕರ್ನಾಟಕ ಹೈಕೋರ್ಟ್ ಹೇಳಿದಂತೆ, ಭ್ರಷ್ಟಾಚಾರದ ಬಗ್ಗೆ ತನಿಖೆ ಆಗಲೇಬೇಕೆಂದು ಬಯಸುವ ಸಮಾಜಮುಖಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ನೇರ ನ್ಯಾಯಾಲಯದ ಮೊರೆಹೋದರೆ ಆಶ್ಚರ್ಯವಿಲ್ಲ. ಆದರೆ, ನ್ಯಾಯಾಲಯಗಳೂ ಭ್ರಷ್ಟಾಚಾರ ಸಂಬಂಧ ಸಲ್ಲಿಸಲಾಗುವ ಅರ್ಜಿಗಳನ್ನು ಮನ್ನಿಸಿದರಷ್ಟೇ ತನಿಖೆ ನಡೆದೀತೇ ಹೊರತು, ಮತ್ತದೇ ಪೊಲೀಸ್ ಅಥವಾ ಹಿರಿಯ ಅಧಿಕಾರಿಗಳ ಬಳಿ ಕಳುಹಿಸಿದರೆ, ತನಿಖೆಯ ಮಾತಂತಿರಲಿ, FIR ಕೂಡ ದಾಖಲಾಗಲಿಕ್ಕಿಲ್ಲ.