ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಈಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹುರಿಯಾಳು. ಭಯೋತ್ಪಾದನೆ ಕೃತ್ಯದ ಆರೋಪಿಗೆ ಪ್ರಮುಖ ಪಕ್ಷವೊಂದು ಚುನಾವಣಾ ಟಿಕೆಟ್ ನೀಡಿರುವ ಮೊದಲ ನಿದರ್ಶನವಿದು.
2008ರ ಸೆಪ್ಟಂಬರ್ 29ರಂದು ಜರುಗಿದ ಮಾಲೆಗಾಂವ್ ಸ್ಫೋಟಕ್ಕೆ ಆರು ಮಂದಿ ಬಲಿಯಾಗಿದ್ದರು. ನೂರು ಮಂದಿ ಗಾಯಗೊಂಡಿದ್ದರು. ತಿಂಗಳೊಪ್ಪತ್ತಿನ ನಂತರ ಪ್ರಜ್ಞಾ ಅವರನ್ನು ಬಂಧಿಸಲಾಗಿತ್ತು.
2011ರ ಏಪ್ರಿಲ್‌ನಲ್ಲಿ ಈ ಪ್ರಕರಣದ ತನಿಖೆಯನ್ನು ಎನ್.ಐ.ಎ ವಹಿಸಿಕೊಂಡಿತು. 2016ರಲ್ಲಿ ಆಪಾದನಾ ಪಟ್ಟಿ ಸಲ್ಲಿಸಿತು. ಬಲವಾದ ಪುರಾವೆಗಳಿಲ್ಲ ಎಂದು ಪ್ರಜ್ಞಾ ಸಿಂಗ್ ಅವರನ್ನು ನಿರ್ದೋಷಿಯೆಂದು ಸಾರಿತು. ತೀವ್ರ ಬಿಗಿ ಕಾಯಿದೆ ಎಂದು ಬಣ್ಣಿಸಲಾಗಿರುವ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯ (MCOCA) ಅನ್ವಯ ಹೂಡಲಾಗಿದ್ದ ಆಪಾದನೆಗಳನ್ನು ಕೈಬಿಟ್ಟಿತು.
ಆಪಾದಿತರ ಎಲ್ಲ ಹೇಳಿಕೆಗಳನ್ನು ಪೊಲೀಸ್ ಅಧಿಕಾರಿಯ ಮುಂದೆ ದಾಖಲಿಸಲಾಯಿತೇ ವಿನಾ ಮ್ಯಾಜಿಸ್ಟ್ರೇಟ್ ಮುಂದೆ ಅಲ್ಲ. ಹೀಗಾಗಿ, ಅವುಗಳಿಗೆ ಸಾಕ್ಷ್ಯದ ಮೌಲ್ಯ ಇಲ್ಲವೆಂದು ಸಾರಿದ ಎನ್.ಐ.ಎ, ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯಡಿ ಹೂಡಲಾಗಿದ್ದ ಆಪಾದನೆಗಳನ್ನು ಕೈಬಿಟ್ಟಿತು. ಆದರೆ, ಕಾನೂನು ವಿರೋಧಿ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ (ಯುಎಪಿಎ) ಅನ್ವಯ ಆಕೆಯ ವಿರುದ್ಧ ಹೂಡಲಾಗಿದ್ದ ಆಪಾದನೆಗಳನ್ನು ಕೈಬಿಡಬೇಕೆಂಬ ಮನವಿಯನ್ನು ಎನ್.ಐ.ಎ ನ್ಯಾಯಾಲಯ 2017ರಲ್ಲಿ ತಿರಸ್ಕರಿಸಿತು. ಪ್ರಜ್ಞಾ ಸಿಂಗ್ ಮತ್ತು ಇತರ ಆರು ಮಂದಿ ಆಪಾದಿತರ ವಿರುದ್ಧ ನ್ಯಾಯಾಲಯ 2018ರ ಕಡೆಯ ಭಾಗದಲ್ಲಿ ಆಪಾದನೆಗಳನ್ನು ಗೊತ್ತುಪಡಿಸಿ ರೂಪಿಸಿತು.
2008ರ ಸೆಪ್ಟಂಬರ್ 29ರ ಮುಂಜಾನೆ ಸುಮಾರು 9.35ರ ಹೊತ್ತು. ಮಹಾರಾಷ್ಟ್ರದ ಮಾಲೇಗಾಂವ್‌ನ ಶಕೀಲ್ ಗೂಡ್ಸ್ ಅಂಡ್ ಟ್ರಾನ್ಸ್‌ಪೋರ್ಟ್ ಕಂಪನಿಯ ಮುಂದೆ ನಿಲ್ಲಿಸಲಾಗಿದ್ದ ಮೋಟಾರ್ ಸೈಕಲ್‌ನಲ್ಲಿ ಅಡಗಿಸಿ ಇಡಲಾಗಿದ್ದ ಸ್ಫೋಟಕಗಳು ಸಿಡಿದವು. ಆರು ಮಂದಿ ಮೃತರಾದರು ಮತ್ತು ನೂರು ಮಂದಿ ಗಾಯಗೊಂಡರು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ ಕರ್ಕರೆ ನೇತೃತ್ವದಲ್ಲಿ ತನಿಖೆ ಜರುಗಿತು. ಸ್ಫೋಟಕಗಳನ್ನು ಅಡಗಿಸಿದ ಮೋಟಾರ್ ಸೈಕಲ್ ಮೂಲತಃ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಸೇರಿದ್ದೆಂದು ಕಂಡುಬಂದಿತು. ಅಕ್ಟೋಬರ್ 24ರಂದು ಆಕೆಯನ್ನು ಬಂಧಿಸಲಾಯಿತು. ‘ಅಭಿನವ ಭಾರತ’ ಎಂಬ ಹಿಂದೂ ಸಂಘಟನೆಯ ಕೈವಾಡದ ಜೊತೆಗೆ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ, ಸುಧಾಕರ ದ್ವಿವೇದಿ ಎಂಬುವರ ಹೆಸರುಗಳು ಮುಂದೆ ಬಂದವು. ಅಲ್ಲಿಂದಾಚೆಗೆ ಎರಡೇ ತಿಂಗಳ ನಂತರ ಪಾಕಿಸ್ತಾನಿ ಜಿಹಾದಿಗಳು ಮುಂಬೈ ಮೇಲೆ ನಡೆಸಿದ ದಾಳಿಯನ್ನು ಹಿಮ್ಮೆಟ್ಟಿಸುವ ಹೋರಾಟದಲ್ಲಿ ಹೇಮಂತ ಕರ್ಕರೆ ಮಡಿದರು.
2010ರಲ್ಲಿ ಬಂಧಿಸಲಾದ ನಬಕುಮಾರ ಸರ್ಕಾರ್ ಅಲಿಯಾಸ್ ಅಸೀಮಾನಂದ ಮಾಲೇಗಾಂವ್ ಸ್ಫೋಟಗಳನ್ನು ಹಿಂದೂ ತೀವ್ರವಾದಿಗಳು ಜಿಹಾದಿ ಭಯೋತ್ಪಾದನೆಗೆ ಪ್ರತೀಕಾರವಾಗಿ ನಡೆಸಿದ್ದಾಗಿ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಮುಸಲ್ಮಾನರನ್ನು ಗುರಿಯಾಗಿಸುವ ಈ ಯೋಜನೆಯನ್ನು ರೂಪಿಸಿದ್ದು ಆರೆಸ್ಸೆಸ್ ಪ್ರಚಾರಕ ಸುನೀಲ್ ಜೋಶಿ ನೇತೃತ್ವದ ಗುಂಪು. ಭಾರತ-ಪಾಕಿಸ್ತಾನದ ನಡುವೆ ಸಂಚರಿಸುವ ರೈಲು ಗಾಡಿ ಸಮಝೌತಾ ಎಕ್ಸ್‌ಪ್ರೆಸ್, ಅಜ್ಮೇರ್ ದರ್ಗಾ ಹಾಗೂ ಹೈದರಾಬಾದಿನ ಮೆಕ್ಕಾ ಮಸೀದಿ ಸ್ಫೋಟಗಳ ಹಿಂದೆಯೂ ಇದೇ ಗುಂಪಿನ ಕೈವಾಡ ಇದ್ದದ್ದಾಗಿ ಆತ ಹೇಳಿದ. ಆನಂತರ ತಾನು ನೀಡಿದ ಹೇಳಿಕೆಗಳಿಂದ ಹಿಂದೆ ಸರಿದ ಆಸೀಮಾನಂದ, ಇತ್ತೀಚೆಗೆ ಎಲ್ಲ ಅಪಾದನೆಗಳಿಂದ ಖುಲಾಸೆ ಹೊಂದಿ ಬಿಡುಗಡೆಯಾಗಿದ್ದಾನೆ.
ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಸಲ್ಲಿಸಿದ ಆಪಾದನಾ ಪಟ್ಟಿ ಪ್ರಕಾರ, ಮುಸ್ಲಿಂ ಬಾಹುಳ್ಯದ ಪ್ರದೇಶಗಳ ಮೇಲೆ ದಾಳಿ ನಡೆಸುವ ಕುರಿತು ಫರೀದಾಬಾದ್, ಭೋಪಾಲ್, ಕೊಲ್ಕತ್ತಾ, ಜಬ್ಬಲ್ಪುರ್, ಇಂದೋರ್, ನಾಸಿಕ್‌ನಲ್ಲಿ ಜರುಗಿದ ಬಹುತೇಕ ಸಭೆಗಳಲ್ಲಿ ಪ್ರಜ್ಞಾ ಹಾಜರಿದ್ದರು. ಮಾಲೇಗಾಂವ್ ಸ್ಫೋಟಕಗಳನ್ನಿರಿಸಲು ಸುನಿಲ್ ಜೋಶಿ, ರಾಮಚಂದ್ರ ಕಲಸಂಗ್ರ ಹಾಗೂ ಸಂದೀಪ್ ಡಾಂಗೆ ಎಂಬುವರನ್ನು ಆರಿಸಿದ್ದೂ ಆಕೆಯೇ ಎನ್ನುತ್ತದೆ ಆಪಾದನಾ ಪಟ್ಟಿ. ಜೋಶಿ ಮತ್ತು ಕಲಸಂಗ್ರ ಇಬ್ಬರೂ ಪ್ರಜ್ಞಾ ಸಮೀಪವರ್ತಿಗಳಾಗಿದ್ದರು. ಬಾಂಬ್ ಇರಿಸಲು ತನ್ನ ಮೋಟಾರ್ ಸೈಕಲ್ ಬಳಕೆಗೆ ಇಬ್ಬರಿಗೂ ಅವಕಾಶ ಮಾಡಿಕೊಟ್ಟಿದ್ದ ಆಪಾದನೆ ಎದುರಿಸಿದ್ದಾರೆ ಪ್ರಜ್ಞಾ.
ಈ ಯಾವುದೇ ಆಪಾದನೆಗಳು ನ್ಯಾಯಾಲಯದಲ್ಲಿ ಇನ್ನೂ ಸಾಬೀತಾಗಿಲ್ಲ. “ಹಿಂದೂ ಭಯೋತ್ಪಾದನೆಯ ಪರಿಕಲ್ಪನೆಯನ್ನು ಬೇರೂರಿಸಲು ಅಂದಿನ ಯುಪಿಎ ಸರ್ಕಾರ ತಮ್ಮನ್ನು ಸಿಕ್ಕಿಸಿ ಹಾಕಿಸಲು ಹೂಡಿದ ಸಂಚು ಇದು,” ಎಂಬುದು ಪ್ರಜ್ಞಾ ಮತ್ತು ಅವರ ಬೆಂಬಲಿಗರ ಪ್ರತ್ಯಾರೋಪ.
ಆಪಾದಿತ ಭಯೋತ್ಪಾದಕರು ಚುನಾವಣೆಗೆ ಸ್ಪರ್ಧಿಸುವುದು ಕಾನೂನು ಉಲ್ಲಂಘನೆ ಅಲ್ಲವೆಂಬುದು ನಿಜ. ಪ್ರಜ್ಞಾ ಸಿಂಗ್ ಠಾಕೂರ್ ಕೂಡ ಆಪಾದಿತರು. ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದಲ್ಲಿ ಚುನಾವಣೆಗೆ ನಿಲ್ಲುವ ಅರ್ಹತೆಯನ್ನು ಕಳೆದುಕೊಳ್ಳುತ್ತಿದ್ದರು.
2008ರ ಮಾಲೇಗಾಂವ್ ಸ್ಫೋಟಗಳ ರೂವಾರಿ ಮತ್ತು ಪ್ರಧಾನ ಸಂಚುಗಾರ್ತಿ ಎಂಬ ಆರೋಪ ಹೊತ್ತಿದ್ದಾರೆ ಪ್ರಜ್ಞಾ ಸಿಂಗ್ ಠಾಕೂರ್. ಆರು ಮಂದಿಯನ್ನು ಬಲಿ ತೆಗೆದುಕೊಂಡ ಆ ಭಯೋತ್ಪಾದನಾ ಕೃತ್ಯದ ಆಪಾದಿತೆಯ ವಿರುದ್ಧ ಕಾನೂನು ವಿರೋಧಿ ಕೃತ್ಯಗಳ (ತಡೆ) ಕಾಯಿದೆಯ ಅಡಿಯಲ್ಲಿ ಆಪಾದನಾ ಪಟ್ಟಿ ಸಲ್ಲಿಕೆಯಾಗಿದೆ. ಇಂತಹ ವ್ಯಕ್ತಿಯನ್ನು ಬಿಜೆಪಿ ಭೋಪಾಲದಿಂದ ತನ್ನ ಹುರಿಯಾಳನ್ನಾಗಿ ಹೂಡಿದೆ. ಪ್ರಜ್ಞಾಪೂರ್ವಕವಾಗಿ ಇಟ್ಟಿರುವ ಹೆಜ್ಜೆಯಿದು.
ಭಯೋತ್ಪಾದನೆ ವಿರುದ್ಧ ನಿರ್ಣಾಯಕ ನಡೆ ನುಡಿ ತನ್ನದು ಎಂದು ಹೇಳಿಕೊಳ್ಳುವ ಪಕ್ಷ ಬಿಜೆಪಿ. ನಿರ್ದಿಷ್ಟ ಧಾರ್ಮಿಕ ಸಮುದಾಯವೊಂದನ್ನು ಗುರಿಯಾಗಿಸಿ ಬಾಂಬ್ ಇರಿಸಿದ ಆರೋಪಿಗೆ ಮುಖ್ಯಧಾರೆಯ ಪಕ್ಷವೊಂದು ತನ್ನ ಉಮೇದುವಾರಿಕೆಯ ಕಿರೀಟ ತೊಡಿಸುವುದು ಸಾಮಾನ್ಯ ವಿದ್ಯಮಾನ ಅಲ್ಲ. ಈ ನಡೆಯ ಸಂದೇಶ ನಿಚ್ಚಳ. ಆಕ್ರಮಣಕಾರಿ ಹಿಂದುತ್ವವಾದಿ ರಾಷ್ಟ್ರೀಯತೆಯ ಪ್ರತಿನಿಧಿಯನ್ನಾಗಿ ಪ್ರಜ್ಞಾ ಅವರನ್ನು ದೇಶದ ಮುಂದಿರಿಸಲಾಗಿದೆ. ಮಾಲೇಗಾಂವ್ ಬಾಂಬ್‌ಗೆ ಬಲಿಯಾದ ಆರೂ ಮಂದಿ ಒಂದು ವೇಳೆ ಅಲ್ಪಸಂಖ್ಯಾತ ಕೋಮಿಗೆ ಸೇರದೆ ಬಹುಸಂಖ್ಯಾತರೇ ಆಗಿದ್ದಿದ್ದರೆ ಪ್ರಜ್ಞಾ ಠಾಕೂರ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಹೂಡುತ್ತಿತ್ತೇ? ಅಥವಾ ಭಯೋತ್ಪಾದನೆಯ ಆಪಾದನೆ ಹೊತ್ತು ಜಾಮೀನಿನ ಮೇಲೆ ಬಿಡುಗಡೆಯಾದ ವ್ಯಕ್ತಿಗೆ ಇತರ ಯಾವುದೇ ಪಕ್ಷ ಚುನಾವಣಾ ಟಿಕೆಟ್ ನೀಡಿದ್ದರೆ ಬಿಜೆಪಿ ಸಹಿಸುತ್ತಿತ್ತೇ? ಹಾಗೆಯೇ, ಹಸುಳೆಯೂ ಸೇರಿದಂತೆ ಆರು ಮಂದಿ ಮುಸಲ್ಮಾನರು ಹತರಾದ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಲ್ಲದೆಹೋಗಿದ್ದರೆ ಪ್ರಜ್ಞಾಸಿಂಗ್‌ಗೆ ಬಿಜೆಪಿಯ ಉಮೇದುವಾರಿಕೆ ದೊರೆಯುತ್ತಿರಲಿಲ್ಲ ಎಂಬ ಅಂಶವನ್ನು ಗಮನಿಸಲೇಬೇಕು.
ಮುಂಬಯಿಗೆ ನುಗ್ಗಿ ರಕ್ತದೋಕುಳಿ ಆಡಿದ್ದ ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ಧೀರೋದಾತ್ತ ಹೋರಾಟದಲ್ಲಿ ಅಸುನೀಗಿದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ ಕರ್ಕರೆ. ಮಾಲೆಗಾಂವ್ ಸ್ಫೋಟಗಳ ತನಿಖೆ ನಡೆಸಿದ್ದ ಕರ್ಕರೆ ಅವರಿಗೆ ನೀನು ಸರ್ವನಾಶವಾಗುತ್ತೀ ಎಂದು ತಾವು ಶಾಪ ನೀಡಿದ್ದಾಗಿಯೂ, ಹೀಗಾಗಿ ತನ್ನ ಕರ್ಮದ ಫಲವನ್ನು ಈ ಅಧಿಕಾರಿ ಉಂಡು ಸಾಯಬೇಕಾಯಿತು ಎಂಬ ಪ್ರಜ್ಞಾ ಠಾಕೂರ್ ಹೇಳಿಕೆ ನೀಡಿದ್ದಾರೆ. ಇಷ್ಟು ಕಾಲ ದನಿ ಉಡುಗಿದ್ದ ಈಕೆಗೆ ಬಿಜೆಪಿ ಉಮೇದುವಾರಿಕೆ ದನಿ ನೀಡಿದೆ. ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಹೋರಾಡಿ ಮಡಿದು ಮರಣೋತ್ತರ ಅಶೋಕಚಕ್ರ ಸಮ್ಮಾನಕ್ಕೆ ಪಾತ್ರರಾದ ಕರ್ಕರೆ ಸಾಯಲೆಂದು ಶಪಿಸುವುದು, ಇಂತಹ ಶಾಪದಿಂದಲೇ ಅವರು ಸತ್ತರೆಂದು ಬಹಿರಂಗವಾಗಿ ಹೆಮ್ಮೆಯಿಂದ ಹೇಳಿಕೊಳ್ಳುವುದು ಅದ್ಯಾವ ದೇಶಭಕ್ತಿ?
ಪ್ರಧಾನಿ ಮತ್ತು ಬಿಜೆಪಿ ಕುರಿತು ಭಿನ್ನಮತ ವ್ಯಕ್ತಪಡಿಸಿದವರಿಗೆಲ್ಲ ದೇಶದ್ರೋಹಿಗಳೆಂದೂ, ಅರ್ಬನ್ ನಕ್ಸಲರೆಂದೂ, ತುಕಡೇ ತುಕಡೇ ಗ್ಯಾಂಗ್ ಎಂದೂ ಸರ್ಟಿಫಿಕೇಟುಗಳನ್ನು ನೀಡುವವರು ಕರ್ಕರೆ ಸಾಯಲೆಂದು ಶಪಿಸಿದ್ದಾಗಿ ಬಹಿರಂಗವಾಗಿ ಸಾರಿರುವ ಪ್ರಜ್ಞಾಗೆ ಯಾವ ಸರ್ಟಿಫಿಕೆಟ್ ನೀಡಬೇಕಿತ್ತು? ಪಾಕ್ ಭಯೋತ್ಪಾದಕರ ವಿರುದ್ಧ ಹೋರಾಡುತ್ತಲೇ ಮಡಿದ ಕಾರಣಕ್ಕೆ ಅಶೋಕಚಕ್ರ ಸಮ್ಮಾನಿತರಾದವರನ್ನು ನಿಂದಿಸುವವರು ದೇಶಪ್ರೇಮಿ ಎನಿಸಿಕೊಳ್ಳುವ ತರ್ಕವಾದರೂ ಯಾವುದು?
ಆದರೆ, ಪ್ರಜ್ಞಾ ಅವರಿಗೆ ದೇಶಭಕ್ತಿಯ ಸರ್ಟಿಫಿಕೆಟನ್ನು ಮುಂಗಡವಾಗಿಯೇ ನೀಡಲಾಗಿದೆ. ಠಾಕೂರ್ ದೇಶಭಕ್ತರಾದರೆ ಕರ್ಕರೆ ದೇಶದ್ರೋಹಿ ಎಂದು ಅರ್ಥವಲ್ಲವೇ? ಅವರಿಗೆ ದೇಶದ್ರೋಹಿಯ ಸರ್ಟಿಫಿಕೆಟ್ ಮರಣೋತ್ತರವಾಗಿ ನೀಡಲು ಮೋದಿ ಮತ್ತು ಅವರ ಪಕ್ಷ ತಯಾರಿದೆಯೇ? ಹಾಗಿದ್ದರೆ, ಕರ್ಕರೆ ಹುತಾತ್ಮರು ಎಂಬ ತನ್ನ ಹೇಳಿಕೆಯನ್ನು ಬಿಜೆಪಿ ವಾಪಸು ಪಡೆಯಬೇಕು. ಇಲ್ಲವೇ, ಪ್ರಜ್ಞಾ ಠಾಕೂರ್ ಹೇಳಿಕೆ ದೇಶದ್ರೋಹದ್ದು ಎಂದು ತಾನು ಭಾವಿಸಿದಲ್ಲಿ ಆಕೆಗೆ ನೀಡಿರುವ ಉಮೇದುವಾರಿಕೆಯನ್ನು ಕಿತ್ತುಕೊಳ್ಳಬೇಕು. ಎರಡನ್ನೂ ವಹಿಸಿಕೊಳ್ಳುವುದು ಸಮಯಸಾಧಕ ದೇಶಪ್ರೇಮ ಎನಿಸಿಕೊಂಡೀತು.
2006 ಮತ್ತು 2008ರ ಮಾಲೇಗಾಂವ್ ಸ್ಫೋಟಗಳ ಜೊತೆಗೆ 2007ರ ಸಮಝೌತಾ ಎಕ್ಸ್‌ಪ್ರೆಸ್‌ಗೆ ಬಾಂಬ್ ಇಟ್ಟ ಪ್ರಕರಣ, 2007ರಲ್ಲಿ ಹೈದರಾಬಾದ್‌ನ ಮೆಕ್ಕಾ ಮಸೀದಿ ಹಾಗೂ ಅದೇ ವರ್ಷದ ಅಜ್ಮೇರ್ ದರ್ಗಾ ಸ್ಫೋಟಗಳಲ್ಲಿ ಅಭಿನವ ಭಾರತ ಎಂಬ ಹಿಂದೂ ಭಯೋತ್ಪಾದಕ ಗುಂಪಿನ ಕೈವಾಡವಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಆಪಾದನಾಪಟ್ಟಿಗಳನ್ನು ಸಲ್ಲಿಸಿತ್ತು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಆಂದೋಲನ ದೇಶವನ್ನು ಹಿಂದೂ-ಮುಸ್ಲಿಮರನ್ನಾಗಿ ಧ್ರುವೀಕರಿಸಿ ಒಡೆಯುವ ಸಾಮರ್ಥ್ಯ ಹೊಂದಿತ್ತು. ಆ ಹಾಲು ಕರೆದು ಮುಗಿದಿದೆ. ಇದೀಗ ದೇಶಭಕ್ತಿ-ದೇಶದ್ರೋಹದ ಹೊಸ ಹಾಲು ಕರೆಯಲಾಗುತ್ತಿದೆ. ಉಗ್ರ ಹಿಂದೂ ರಾಷ್ಟ್ರವಾದ ಎಂಬುದು ಹೊಸ ರಾಮಮಂದಿರ ಆಂದೋಲನವಾಗಿ ಪರಿಣಮಿಸಿದೆ. ಆಯೋಧ್ಯೆ ಉತ್ತರಪ್ರದೇಶದ ಭೂಭಾಗಕ್ಕೆ ಯಾಕೆ ಸೀಮಿತ ಆಗಬೇಕು? ಅದಕ್ಕೆ ದೇಶಭಕ್ತಿ- ದೇಶದ್ರೋಹದ ಹೊಸ ವೇಷ ತೊಡಿಸಿ ದೇಶದ ಮೂಲೆಮೂಲೆಗಳಲ್ಲಿ ಬಡಿದೆಬ್ಬಿಸಿದರಾಯಿತು. ಹಿಂದುತ್ವ ಎಂಬುದು ದೇಶಪ್ರೇಮದ ಸಂಕೇತ ಎಂದು ಕರೆದರಾಯಿತು, ಅಧಿಕಾರದಲ್ಲಿರುವ ಪಕ್ಷವನ್ನು ಪ್ರಶ್ನಿಸುವ ಭಿನ್ನಮತದ ಮನೋವೃತ್ತಿಗೆ ದೇಶದ್ರೋಹದ ಹಣೆಪಟ್ಟಿ ಹಚ್ಚಿದರಾಯಿತು. ಪುಲ್ವಾಮಾ ಭಯೋತ್ಪಾದಕ ದಾಳಿ ಮತ್ತು ಬಾಲಾಕೋಟ್ ಪ್ರತಿದಾಳಿಯ ನಂತರ ಈ ಹಣೆಪಟ್ಟಿ ಹಚ್ಚುವ ಕೆಲಸ ಬಿಡುವಿಲ್ಲದೆ ನಡೆದಿದೆ. ದೇಶದ ಬಡಜನರು, ನಿರುದ್ಯೋಗಿ ಯುವಜನರು, ಕಂಗೆಟ್ಟ ರೈತ ಸಮುದಾಯಗಳನ್ನು ಯಶಸ್ವಿಯಾಗಿ ಯಾಮಾರಿಸಲಾಗುತ್ತಿದೆ. ಅವರ ಕಣ್ಣ ಮುಂದೆ ಹರವಿದ್ದ ‘ಅಚ್ಛೇ ದಿನಗಳ’ ಕನಸು ನನಸಾಗಲಿಲ್ಲ. ಈ ವಿಷಯಗಳ ಕುರಿತು ಚರ್ಚೆ ನಡೆಯದಂತೆ ತಡೆದು ಅದನ್ನು ಬೇರೆ ದಿಕ್ಕಿಗೆ ತಿರುಗಿಸಬೇಕಿದ್ದರೆ ದೇಶಭಕ್ತಿ-ದೇಶದ್ರೋಹ- ಧರ್ಮಗಳಿಗಿಂತಹ ಭಾವೋದ್ದೀಪಕ ವಿಷಯಗಳು ಬಹು ಪರಿಣಾಮಕಾರಿ ಎಂಬುದು ಮೋದಿ-ಅಮಿತ್ ಶಾ ಜೋಡಿ ಮತ್ತು ಅವರ ಹಿಂದಿರುವ ಪರಿವಾರ ಬಹಳ ಚೆನ್ನಾಗಿ ಬಲ್ಲದು.
ಭಯೋತ್ಪಾದನೆಯ ಆರೋಪ ಹೊತ್ತ ಪ್ರಜ್ಞಾ ಠಾಕೂರ್‌ಗೆ ಲೋಕಸಭಾ ಟಿಕೆಟ್ ನೀಡಿರುವ ರಣನೀತಿ ಕೂಡ ಅಸಲು ಚರ್ಚೆಯನ್ನು ದಿಕ್ಕು ತಪ್ಪಿಸುವ ಅದೇ ತಂತ್ರದ ಮುಂದುವರಿದ ಭಾಗ. ಭಯೋತ್ಪಾದನೆಗೆ ಒಳ್ಳೆಯ ಭಯೋತ್ಪಾದನೆ ಮತ್ತು ಕೆಟ್ಟ ಭಯೋತ್ಪಾದನೆ ಎಂಬ ಬಣ್ಣಗಳಿಲ್ಲ. ಭಯೋತ್ಪಾದನೆ ಭಯೋತ್ಪಾದನೆಯೇ ಎಂದು ಪಾಕಿಸ್ತಾನಕ್ಕೆ ಪಾಠ ಹೇಳುತ್ತಿದ್ದ ಇದೇ ಪಕ್ಷ-ಪರಿವಾರ ಇದೀಗ ಹಿಂದೂ ಭಯೋತ್ಪಾದನೆಗೆ ನ್ಯಾಯಸಮ್ಮತ ಮತ್ತು ಸಹಜ-ಸ್ವಾಭಾವಿಕತೆಯ ಪಟ್ಟ ಕಟ್ಟಲು ಮುಂದಾಗಿದೆ. ಜಿಹಾದಿ ಭಯೋತ್ಪಾದನೆಗೆ ‘ಪ್ರತ್ಯುತ್ತರ’ ನೀಡಿದರೆ ಅದು ಭಯೋತ್ಪಾದನೆ ಅಲ್ಲ ಎಂಬ ಸಮರ್ಥನೆಯನ್ನು ಕಟ್ಟಿ ಬೆಳೆಸಲಾಗುತ್ತಿದೆ.
ಅಂಕಣಕಾರರು ಹಿರಿಯ ಪತ್ರಕರ್ತರು