ಎನ್ಫೀಲ್ಡ್ ಓಡಿಸಿದ ಹುಡುಗಿ- ರೊಚ್ಚಿಗೆದ್ದ ಗಂಡಸರು!
ಹದಿನೆಂಟರ ಪ್ರಾಯದ ಆ ಹುಡುಗಿಯ ಹೆಸರು ರಿತಿಕಾ ಮಾವಿ. ದೆಹಲಿ ಗಡಿ ಭಾಗದ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ಹಳ್ಳಿಯೊಂದರಲ್ಲಿ ಹನ್ನೊಂದನೆಯ ತರಗತಿಯ ವಿದ್ಯಾರ್ಥಿನಿ. ರಾಯಲ್ ಎನ್ಫೀಲ್ಡ್ ಮೋಟರ್ ಸೈಕಲ್ ಓಡಿಸುವುದು ಆಕೆಯ ಇಷ್ಟದ ಹವ್ಯಾಸ. ಇಷ್ಟಕ್ಕೇ ಹಳ್ಳಿಯ ಕೆಲ ಗಂಡಸರ ಕಣ್ಣು ಕೆಂಪಾಗಿವೆ. ಎಚ್ಚರಿಕೆ-ಜಗಳ-ಹಲ್ಲೆ-ಗುಂಡು ಸಿಡಿತ, ಕೊಲೆ ಬೆದರಿಕೆ, ಪೊಲೀಸು ಕೇಸು, ಪಂಚಾಯಿತಿ ನಡೆದಿರುವುದು ವರದಿಯಾಗಿದೆ.
ಮಿಲಕ್ ಖಾತನಾ ಎಂಬ ಗ್ರಾಮದ ಹನ್ನೊಂದನೆಯ ತರಗತಿಯ ವಿದ್ಯಾರ್ಥಿನಿ ರಿತಿಕಾ. ತಂದೆ ವರ್ಷದ ರಾಯಲ್ ಎನ್ಫೀಲ್ಡ್ ಬೈಕ್ ಖರೀದಿಸಿದ. ಅಂದಿನಿಂದ ಆಕೆಗೆ ಅದರ ಸವಾರಿಯ ಬಯಕೆ. ಕಲಿತೂ ಬಿಟ್ಟಳು. ಮೊನ್ನೆ ಬೈಕ್ ಏರಿ ಅಂಗಡಿಯಿಂದ ಮನೆಗೆ ಮರಳುತ್ತಿದ್ದಳು. ಇಬ್ಬರು ಗಂಡಸರು ಅಡ್ಡ ಹಾಕಿದರು. ಬಹಳ ದಿನಗಳಿಂದ ಬೈಕ್ ಓಡಿಸುವ ಈ ಹುಡುಗಿಯ ‘ಉದ್ಧಟತನ’ವನ್ನು ಗಮನಿಸುತ್ತಿದ್ದರಂತೆ. ಇಷ್ಟ ಆಗಲಿಲ್ಲವಂತೆ. ಇವರಿಬ್ಬರು ಹೀಗೆಂದದ್ದು ಆಕೆಗೂ ಹಿಡಿಸಲಿಲ್ಲ. ಮಾತಿಗೆ ಮಾತು ಬೆಳೆಯಿತು.
ತಕ್ಷಣದಿಂದಲೇ ಈ ‘ಚಾಳಿ’ಯನ್ನು ಬಿಡಬೇಕೆಂದು ಹುಡುಗಿಗೆ ಎಚ್ಚರಿಕೆ ನೀಡಿದರು. ಇಲ್ಲದಿದ್ದರೆ ಆಕೆಯ ತಂದೆಯ ಗ್ರಹಚಾರ ನೆಟ್ಟಗಿರುವುದಿಲ್ಲವೆಂದು ಬೆದರಿಸಿದರು. ಹುಡುಗಿ ಮನೆಗೆ ಬಂದು ಈ ತರಲೆ ಗಂಡಸರ ಬಗ್ಗೆ ತಿಳಿಸಿದಳು. ಅಷ್ಟು ಹೊತ್ತಿಗೆ ಅವರು ಮನೆಗೇ ಬಂದರು. ‘ಮಗಳು ಬೈಕ್ ಓಡಿಸುವುದು ನಮ್ಮ ಮನೆಯ ವಿಷಯ. ನಮಗೇನೂ ಅದರಿಂದ ತೊಂದರೆಯಿಲ್ಲ’ ಎಂಬ ತಂದೆಯ ಮಾತನ್ನು ಕೇಳಲು ಅವರು ತಯಾರಿರಲಿಲ್ಲ. ಕುಲ್ಲು ಮತ್ತು ಸಚಿನ್ ಮತ್ತು ಅವರ ಇಬ್ಬರು ಸಂಗಾತಿಗಳು ಗನ್ ಹೊರತೆಗೆದು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಹೆದರಿಸಿದರು. ರಿತಿಕಾಳನ್ನು ಹುಡುಕಿಕೊಂಡು ಮನೆ ನುಗ್ಗಿದರು. ಚಾವಣಿಗೂ ಗುಂಡುಗಳನ್ನು ಹಾರಿಸಿ ಪಲಾಯನ ಮಾಡಿದರು.

ಪೊಲೀಸರು ಕೇಸು ದಾಖಲು ಮಾಡಿಕೊಂಡರು. ಮೊನ್ನೆ ಆಪಾದಿತರ ಮನೆಯಲ್ಲಿ ಪಂಚಾಯತಿ ಕರೆಯಲಾಯಿತು. ಐವತ್ತು ಮಂದಿ ಪುರುಷರು ಸೇರಿದ್ದರು. ಆಪಾದಿತರ ಪರವಾಗಿ ಅವರ ಕುಟುಂಬ ಕೇಳಿರುವ ಲಿಖಿತ ಕ್ಷಮಾಪಣೆಯನ್ನು ಒಪ್ಪಿಕೊಂಡು ಕುಲ್ಲು-ಸಚಿನ್ ಮತ್ತಿತರರ ಮೇಲೆ ನೀಡಿರುವ ದೂರನ್ನು ವಾಪಸು ಪಡೆಯುವಂತೆ ಪಂಚಾಯಿತಿ ತೀರ್ಪು ನೀಡಿತು. ಇನ್ನೆಂದೂ ಬೈಕ್ ಓಡಿಸುವ ಹುಡುಗಿಯರ ತಂಟೆಗೆ ಬರುವುದಿಲ್ಲವೆಂಬ ಮುಚ್ಚಳಿಕೆಯನ್ನು ಹುಡುಗಿಯ ಅಪ್ಪ ಒಪ್ಪಿಕೊಳ್ಳುತ್ತಾನೆ. ರಾಜಿ ಮಾಡಿಕೊಳ್ಳುತ್ತಾನೆ.
ಈ ನಡುವೆ ಪೊಲೀಸರು ಆಪಾದಿತರನ್ನು ಇನ್ನೂ ಹುಡುಕುತ್ತಿದ್ದಾರೆ. ಜೀನ್ಸ್ ತೊಡಬಾರದು, ಚೌಮೀನ್ ತಿನ್ನಕೂಡದು, ಮೊಬೈಲ್ ಫೋನ್ ಇಟ್ಟುಕೊಳ್ಳತಕ್ಕದ್ದಲ್ಲ ಎಂಬುದಾಗಿ ಉತ್ತರ ಭಾರತದ ಹಳ್ಳಿಗಳ ಖಾಪ್ ಪಂಚಾಯಿತಿಗಳು ಹುಡುಗಿಯರಿಗೆ ವಿಧಿಸಿರುವ ಸಂಕೋಲೆಗಳು ಹತ್ತು ಹಲವು ತೆರನಾದವು. ರಿತಿಕಾ ಅದೃಷ್ಟವಂತೆ. ತಂದೆ ಆಕೆಯ ಪರ ನಿಂತಿದ್ದಾನೆ. ಪಂಚಾಯಿತಿ ಕೂಡ ಆಕೆಯ ಬೈಕ್ ಸವಾರಿಗೆ ಅಡ್ಡಗಾಲು ಹಾಕಿಲ್ಲ.

ಕುಸಿಯಿತು (ಜಿಮ್ಮಿ) ಕಾರ್ಟರ್ ಪುರಿಯ ಭಾಗ್ಯ!
ದೌಲತ್ ಪುರ ನಶೀರ್ ಬಾದ್ ಎಂಬುದು ಹರಿಯಾಣದ ಗುರುಗ್ರಾಮದ ಒಂದು ಹಳ್ಳಿ. ಅಮೆರಿಕೆಯ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ಅವರ ತಾಯಿ ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಈ ಹಳ್ಳಿಯಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದರಂತೆ. 1978ರಲ್ಲಿ ಕಾರ್ಟರ್ ಈ ಹಳ್ಳಿಗೆ ಪತ್ನಿಸಹಿತ ಭೇಟಿ ನೀಡಿ ಪಂಚಾಯತಿ ಭವನಕ್ಕೆ ಟಿವಿಯೊಂದನ್ನು ಉಡುಗೊರೆ ನೀಡಿದ್ದರು. ಆನಂತರ ಹಳ್ಳಿಯ ಹೆಸರು ಕಾರ್ಟರ್ ಪುರವೆಂದು ಬದಲಾಯಿತು. 1981ರ ಹೊತ್ತಿಗೆ ಇಲ್ಲಿ ಮಾರುತಿ ಸುಜುಕಿ ಕಾರು ಉತ್ಪಾದನಾ ಘಟಕ ಸ್ಥಾಪಿಸಲಾಯಿತು. ಹಳ್ಳಿ ಉದ್ಧಾರವಾಯಿತು. ಮಾರುತಿಗೆ ಬಿಡಿ ಭಾಗಗಳನ್ನು ಮಾಡಿಕೊಡುವ ಘಟಕಗಳೂ ಸುತ್ತಮುತ್ತ ತಲೆಯೆತ್ತಿದವು. ಹೊರಗಿನಿಂದ ಹತ್ತು ಸಾವಿರ ಮಂದಿ ಉದ್ಯೋಗಿಗಳು ಬಂದು ನೆಲೆಸಿದರು. ವಸತಿಗೆ ವಿಪರೀತ ಬೇಡಿಕೆ. ಎತ್ತಿನ ಬಂಡಿ ಇಟ್ಟುಕೊಂಡಿದ್ದ ರೈತರು ಮಾರುತಿ ಕಾರು ಖರೀದಿಸಿದರು. ಮಹಡಿ ಮನೆಗಳನ್ನು ಕಟ್ಟಿಸಿದರು. ಬಾಡಿಗೆಗೆ ನೀಡಿದರು. ತಿಂಗಳಿಗೆ ಐದು ಲಕ್ಷ ರುಪಾಯಿವರೆಗೆ ಬಾಡಿಗೆ ಗಳಿಸುತ್ತಿದ್ದವರೂ ಇದ್ದರು. ಈ ಆಟೋಮೊಬೈಲ್ ಹಬ್ ತಲೆ ಎತ್ತಿ ಸಮೃದ್ಧವಾದ ಕಾರಣವೇ ಗುರುಗ್ರಾಮ ಮಾಹಿತಿ ತಂತ್ರಜ್ಞಾನ ಕಂಪನಿಗಳನ್ನೂ ಕೈಬೀಸಿ ಕರೆಯಿತು. ಐಟಿ ಸಿಟಿ ರೂಪುಗೊಂಡಿತು.
ಅರ್ಥಸ್ಥಿತಿಗೆ ಬಡಿದಿರುವ ಮಂದಗತಿ ಆಟೋಮೊಬೈಲ್ ಉದ್ಯಮಕ್ಕೆ ದೊಡ್ಡ ಏಟನ್ನೇ ನೀಡಿದೆ. ಆಟೋಮೊಬೈಲ್ ಬಿಡಿ ಭಾಗಗಳನ್ನು ತಯಾರಿಸುತ್ತಿದ್ದ ಘಟಕಗಳು ಕದ ಮುಚ್ಚಿವೆ. ಸುಮಾರು 50 ಸಾವಿರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಬಾಡಿಗೆಗೆ ಪಡೆದಿದ್ದ ಮನೆಗಳು ಕೊಠಡಿಗಳನ್ನು ಖಾಲಿ ಮಾಡತೊಡಗಿದ್ದಾರೆ. ಕಾರ್ಟರ್ ಪುರಿಯ ವಲಸೆಗಾರ ಕಾರ್ಮಿಕರು ಗೂಡು ತೊರೆದಿದ್ದಾರೆ. ಹಠಾತ್ತನೆ ಕುಸಿದಿರುವ ಭಾಗ್ಯ ಮತ್ತೆ ಖುಲಾಯಿಸೀತೇ ಎಂದು ನಿರೀಕ್ಷಿಸುವುದು ಬಿಟ್ಟರೆ ಕಾರ್ಟರ್ ಪುರಿಯ ಮನೆ ಮಾಲೀಕರ ಬಳಿ ಬೇರೆ ಯಾವ ಆಯ್ಕೆಯೂ ಇಲ್ಲ.

ದುಬಾರಿ ದಂಡಗಳು- ದೆಹಲಿ ತತ್ತರ
ಸಂಚಾರಿ ನಿಯಮಗಳ ಉಲ್ಲಂಘನೆಯ ದಂಡಗಳು ಮುಗಿಲು ಮುಟ್ಟಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂಚಾರಿ ನಿಯಮ ಉಲ್ಲಂಘನೆಯ ಹೊಸ ದಂಡಗಳು ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಕ್ಷೇತ್ರದ ವಾಹನ ಚಾಲಕರ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿವೆ.
ಬೈಕ್ ಸವಾರರಿಗೆ ಕೂಡ ಹದಿನೈದು ಸಾವಿರ ರುಪಾಯಿಗಳ ದಂಡ ಸರ್ವೇ ಸಾಧಾರಣ ಆಗಿ ಹೋಗಿದೆ. 23, ಸಾವಿರ 24, ಸಾವಿರ ಡ್ರೈವಿಂಗ್ ಲೈಸೆನ್ಸ್, ವಿಮೆ, ನೋಂದಣಿ ಪತ್ರ ಇಲ್ಲದ ಆಟೋ ಚಾಲಕನೊಬ್ಬನಿಗೆ ವಿಧಿಸಿದ ದಂಡ 32 ಸಾವಿರ ರುಪಾಯಿಗಳು! ಹದಿನಾರು ಸಾವಿರ ರುಪಾಯಿ ದಂಡ ವಿಧಿಸಿದ್ದನ್ನು ಪ್ರತಿಭಟಿಸಿದ ಪಾನಮತ್ತ ಬೈಕ್ ಸವಾರನೊಬ್ಬ ಪೊಲೀಸರ ಎದುರಿಗೇ ತನ್ನ ಬೈಕ್ ಗೆ ಬೆಂಕಿ ಇಟ್ಟು ಪ್ರತಿಭಟಿಸಿದ ಪ್ರಕರಣ ಜರುಗಿದೆ. ಗುರುಗ್ರಾಮದ ಇಬ್ಬರು ಆಟೋ ಚಾಲಕರ ಪೈಕಿ ಒಬ್ಬಾತನಿಗೆ 37 ಸಾವಿರ ದಂಡ ಮತ್ತು ಇನ್ನೊಬ್ಬನಿಗೆ 27 ಸಾವಿರ ದಂಡ ವಿಧಿಸಿರುವುದು ಉಂಟು.
ಹೆಲ್ಮೆಟ್ ಅಂಗಡಿಗಳು ಮತ್ತು ವಾಯುಮಾಲಿನ್ಯ ಪರೀಕ್ಷಣಾ ಕೇಂದ್ರಗಳು ಭರದ ವ್ಯಾಪಾರ ನಡೆಸಿವೆ. ಬೈಕುಗಳು ಕಾರುಗಳಿಗೆ ಅಳವಡಿಸಿದ ಕರ್ಕಶ ಹಾರ್ನ್ ಗಳನ್ನು ಕಿತ್ತು ಹಾಕಿಸಲು ಕರೋಲ್ ಬಾಗ್ ನಲ್ಲಿ ಜನ ಜಾತ್ರೆ. ಸಾವಿರಾರು ರುಪಾಯಿ ತೆತ್ತು ಬೈಕುಗಳ ಸೈಲೆನ್ಸರುಗಳಿಗೆ ಅಳವಡಿಸಿಕೊಂಡಿದ್ದ ಹೆಚ್ಚು ಸದ್ದು ಮಾಡುವ ಸಾಧನಗಳನ್ನು ತೆಗೆಯಿಸಲಾಗುತ್ತಿದೆ. ಎಷ್ಟೋ ಮಂದಿ ಕೆಲಸಕ್ಕೆ ಹೋಗದೆ ರಜೆ ಹಾಕಿ ಈ ಕೆಲಸಗಳಲ್ಲಿ ತೊಡಗಿದ್ದಾರೆ.
ಸಂಚಾರ ನಿಯಮಗಳ ಉಲ್ಲಂಘನೆಗಳು ತಗ್ಗತೊಡಗಿವೆ ಎನ್ನುತ್ತಿದ್ದಾರೆ ಪೊಲೀಸರು. ರಸ್ತೆಗಳು ದುಸ್ಥಿತಿಯಲ್ಲಿವೆ. ಅವುಗಳ ಎಂಜಿನಿಯರಿಂಗ್ ಕುರಿತು ಯಾರೂ ತಲೆ ಕೆಡಿಸಿಕೊಂಡಿಲ್ಲ. ಚಾಲನಾ ಲೈಸೆನ್ಸ್ ಗಳನ್ನು ಈಗಲೂ ಬೇಕಾ ಬಿಟ್ಟಿಯಾಗಿ ನೀಡಲಾಗುತ್ತಿದೆ. ಯಾರು ಬೇಕಾದರೂ ಹಣ ಕೊಟ್ಟು ಲೈಸೆನ್ಸ್ ಪಡೆದು ವಾಹನಗಳೊಂದಿಗೆ ರಸ್ತೆಗೆ ಇಳಿಯುತ್ತಿದ್ದಾರೆ. ಹಲವು ಆಯಾಮಗಳ ಸಮಸ್ಯೆಯಿದು. ಒಂದು ಆಯಾಮವನ್ನು ಮಾತ್ರ ಭಾರೀ ದಂಡಶುಲ್ಕಗಳೊಂದಿಗೆ ತಿದ್ದಲು ಮುಂದಾಗಿರುವುದು ಸೂಕ್ತವಲ್ಲ ಎಂಬುದು ಜನಾಭಿಪ್ರಾಯ.
ಬೆಂಗಳೂರಿನಲ್ಲಿ ಕೂಡ 16 ಸಾವಿರ ರುಪಾಯಿಗಳ ದಂಡ ಹಾಕಿರುವ ಒಂದು ಪ್ರಕರಣ ವರದಿಯಾಗಿದೆ. ಆದರೆ ಇಂತಹ ಪ್ರಕರಣಗಳ ಸಂಖ್ಯೆ ಉದ್ಯಾನ ನಗರಿಯಲ್ಲಿ ಇನ್ನೂ ವಿರಳವೇ. ಹೊಸ ಕಾನೂನಿನ ಬಿಗಿ ಜಾರಿ ಅಲ್ಲಿ ಇನ್ನೂ ಆರಂಭ ಆಗಿಲ್ಲ.
ದಲಿತನ ವರಿಸಿದ ಒಬಿಸಿ ಯುವತಿಯ ಹತ್ಯೆ
ಜಾತಿ ವ್ಯವಸ್ಥೆ ಕರಗಿ ಹೋಗಿದೆಯಲ್ಲ ಎಂದು ಹುಬ್ಬು ಹಾರಿಸುವವರ ಮುಖಕ್ಕೆ ಬಾರಿಸಿದಂತೆ ಜಾತಿ ಭೇದದ ಪ್ರಕರಣಗಳು ನಿತ್ಯ ನೂರಾರು ಸಂಖ್ಯೆಯಲ್ಲಿ ನಡೆಯುತ್ತಲೇ ಇವೆ. ಇವುಗಳಲ್ಲಿ ಎಲ್ಲವೂ ವರದಿಯಾಗುವುದಿಲ್ಲ. ಪೊಲೀಸ್ ಠಾಣೆಯ ಕಟ್ಟೆ ಹತ್ತಿದ ಎಲ್ಲ ಪ್ರಕರಣಗಳನ್ನೂ ಅವರು ದಾಖಲು ಮಾಡಿಕೊಳ್ಳುವುದೂ ಇಲ್ಲ. ದೂರು ದಾಖಲು ಮಾಡಿಕೊಂಡರೆ ಅದನ್ನು ಎಫ್.ಐ.ಆರ್. ತನಕ ಒಯ್ಯದೆ ಮುಚ್ಚಿ ಹಾಕಲಾಗುತ್ತದೆ.
‘ಕೆಳಜಾತಿ’ಯ ಗಂಡನ್ನು ವರಿಸಿದ ‘ಮೇಲ್ಜಾತಿ’ಯ ಹೆಣ್ಣನ್ನು ಆಕೆಯ ಕುಟುಂಬದ ಸದಸ್ಯರೇ ಕತ್ತರಿಸಿ ಹಾಕುವ ‘ಅವಮರ್ಯಾದೆ ಹತ್ಯೆ’ ಪ್ರಕರಣಗಳು ಸರ್ವೇಸಾಮಾನ್ಯ ಆಗಿ ಹೋಗಿವೆ.
ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯಲ್ಲಿ ಮೊನ್ನೆ ಜರುಗಿದ ಈ ಪ್ರಕರಣವನ್ನೇ ನೋಡಿ. ಆಕೆ ಹಿಂದುಳಿದ ವರ್ಗಗಳ ಜಾತಿಗೆ ಸೇರಿದ ಹುಡುಗಿ. ಅಪ್ರಾಪ್ತೆಯಾಗಿದ್ದಾಗಲೇ ದಲಿತ ಹುಡುಗನನ್ನು ವರಿಸಿದ್ದಳು. ಹುಡುಗಿಯ ಕಡೆಯವರ ಸಿಟ್ಟಿಗೆ ಹೆದರಿ ಇಬ್ಬರೂ ಓಡಿ ಹೋಗಿ ಪಂಜಾಬಿನ ಲೂಧಿಯಾನದಲ್ಲಿ ಜೀವಿಸಿದ್ದವರು ಆರು ವರ್ಷಗಳ ನಂತರ ಊರಿಗೆ ಹಿಂತಿರುಗಿದರು. ಎಲ್ಲ ಮಾಮೂಲಾಗಿದೆ ಎಂದು ತಿಳಿದಿದ್ದರು. ಗಂಡನ ಮನೆಯಲ್ಲಿದ್ದ ಹುಡುಗಿ ಕಳೆದ ಸೋಮವಾರ ಸಂಜೆ ಹೊಲದಿಂದ ಹಿಂದಿರುಗುತ್ತಿದ್ದಳು. ಆಕೆಯ ಸೋದರ ಮತ್ತು ಸೋದರ ಸಂಬಂಧಿಕರು ಕ್ರಿಕೆಟ್ ಬ್ಯಾಟುಗಳಿಂದ ಆಕೆಯನ್ನು ಬಡಿದರು. ಆಕೆ ಸ್ಥಳದಲ್ಲೇ ಕಡೆಯುಸಿರೆಳೆದಳು. ದಲಿತ ಪತಿ ಈಗ ಅಂಗೈಯಲ್ಲಿ ಪ್ರಾಣ ಹಿಡಿದಿದ್ದಾನೆ.