ಜರ್ಮನಿ ನಾಜೀ ಹಾದಿಯಲ್ಲಿ ಹಿಂದೀ ಭಾಷೆ!
ಹೆಸರಾಂತ ಭಾಷಾ ಶಾಸ್ತ್ರಜ್ಞ ಗಣೇಶ ದೇವಿ ನೇತೃತ್ವದ ಭಾರತೀಯ ಜನಭಾಷಿಕ ಸಮೀಕ್ಷೆ (ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ) ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿನ ಭಾಷೆಗಳು 780. ಇವುಗಳ ಪೈಕಿ 220 ಭಾಷೆಗಳು ಕಳೆದ ಐದಾರು ದಶಕಗಳಲ್ಲಿ ನಶಿಸಿ ಹೋಗಿವೆ. ಇನ್ನೂ 150 ಭಾಷೆಗಳು ಮುಂದಿನ 50 ವರ್ಷಗಳಲ್ಲಿ ಕಣ್ಮರೆಯಾಗುವ ದಟ್ಟ ಸಾಧ್ಯತೆ ಇದೆ ಎಂದು ಈ ಸಮೀಕ್ಷೆ ಹೇಳಿದೆ. ಪ್ರತ್ಯಕ್ಷ- ಪರೋಕ್ಷ ಹಿಂದೀ ಹೇರಿಕೆಗೆ ವೆಚ್ಚವಾಗುತ್ತಿರುವ ಹಣ ಮತ್ತು ತೋರಲಾಗುತ್ತಿರುವ ಅತ್ಯುತ್ಸಾಹದ ನೂರರ ಒಂದಂಶವೂ ಈ ತಬ್ಬಲಿ ಭಾಷೆಗಳ ಕುರಿತು ವ್ಯಕ್ತವಾಗುತ್ತಿಲ್ಲ ಎಂಬುದು ಕಟು ಸತ್ಯ. ತಾಯಿ ಭಾರತಿ ಬಹುಭಾಷಾ ಸರಸ್ವತಿಯೇ ವಿನಾ ಕೇವಲ ಹಿಂದೀ ಸರಸ್ವತಿ ಅಲ್ಲ ಎಂಬುದನ್ನು ಒಪ್ಪಲು ಆಳುವವರು ತಯಾರಿಲ್ಲ. ಕಳೆದ ಐದು ವರ್ಷಗಳಿಂದ ಚಾಲ್ತಿಯಲ್ಲಿರುವ ಹಯಾಮಿನಲ್ಲಿ ಅತಿ ಮುಚ್ಚಟೆಯ ನಡುವೆಯೂ ಹಿಂದೀ ಭಾಷೆ ಎದುರಿಸತೊಡಗಿರುವ ಅಪಾಯ ಕುರಿತು ಆತಂಕಗಳು ಪ್ರಕಟ ಆಗತೊಡಗಿವೆ.
ರುಚಿರ್ ಜೋಶಿ ಅವರು ದೇಶದ ಗಮನಾರ್ಹ ಇಂಗ್ಲಿಷ್ ಕಾದಂಬರಿಕಾರ ಮತ್ತು ಅಂಕಣಕಾರ. ದೇಶದ ಸೂಕ್ಷ್ಮ ರಾಜಕೀಯ- ಸಾಮಾಜಿಕ ಕದಲಿಕೆಗಳನ್ನು ಗಮನಿಸಿ ದಾಖಲಿಸುವ ವಿರಳ ವ್ಯಾಖ್ಯಾನಕಾರರಲ್ಲಿ ಒಬ್ಬರು. ಮೋದಿ ಭಾರತದ ಹಿಂದೀ ಭಾಷೆಯು, ಹಿಟ್ಲರನ ಕಾಲದ ಜರ್ಮನಿಯ ನಾಜೀವಾದಿ ಜರ್ಮನ್ ಭಾಷೆಯ ದಾರಿ ಹಿಡಿಯುತ್ತಿದೆ ಎಂದಿದ್ದಾರೆ.
ಹಿಂದೀ ಕವಿತೆ ಬರೆಯುವ ಹವ್ಯಾಸವಿರುವ ರಮೇಶ್ ಪೋಖ್ರಿಯಾಲ್ ದೇಶದ ಮಾನವಸಂಪನ್ಮೂಲ ಅಭಿವೃದ್ಧಿ ಮಂತ್ರಿ. ಅಧಿಕಾರಿಗಳ ಟಿಪ್ಪಣಿ ಸೇರಿದಂತೆ ತಮ್ಮ ಬಳಿ ಬರುವ ಎಲ್ಲ ಕಡತಗಳೂ ಕಾಗದಪತ್ರಗಳೂ ಹಿಂದೀಯಲ್ಲೇ ಇರತಕ್ಕದ್ದೆಂದು ಆಜ್ಞಾಪಿಸಿದ್ದಾರೆ. ಮತ್ತೊಬ್ಬ ಹಿರಿಯ ಸಚಿವ ರಾಜನಾಥ ಸಿಂಗ್ ಕೂಡ ಹಿಂದೀ ಭಾಷೆಗೇ ಮಣೆ ಹಾಕುವವರು. ಆದರೆ ಅಧಿಕಾರಿಗಳ ಟೀಕೆ ಟಿಪ್ಪಣಿಗಳು ಇಂಗ್ಲಿಷಿನಲ್ಲಿದ್ದರೆ ಅಥವಾ ಅಲ್ಲಲ್ಲಿ ಇಂಗ್ಲಿಷ್ ಬಳಸುವುದಿದ್ದರೆ ಅದನ್ನು ನಿಷೇಧಿಸುವ ಮನೋಭಾವ ಅವರದಲ್ಲ. ಪೋಖ್ರಿಯಾಲ್ ಅವರ ನಡೆಯನ್ನು ಉದ್ಧಟತನ- ದುಸ್ಸಾಹಸ ಎಂದು ಕರೆದಿದ್ದಾರೆ ರುಚಿರ್ ಜೋಶಿ. ತನ್ನ ಮಾತೃಭಾಷೆ ತೆಲುಗು, ಒಡಿಯಾ, ಕಚ್ಛಿ ಅಥವಾ ಖಾಸಿ ಆಗಿದ್ದ ವ್ಯಕ್ತಿ ಹಿಂದೀಯಲ್ಲೇಕೆ ವ್ಯವಹರಿಸಬೇಕು ಎಂದು ಕುಪಿತರಾಗಿದ್ದಾರೆ.
ಅವರು ಹೇಳುತ್ತಾರೆ- ನನ್ನ ಆಯ್ಕೆಯ ಭಾರತೀಯ ಭಾಷೆ ಇಂಗ್ಲಿಷ್. ನಮ್ಮ ದೇಶದ ಹಲವು ಭಾಷಾ ಅಡೆತಡೆಗಳನ್ನು ಹಾದು ಅರ್ಥವಾಗುವ ಭಾಷೆ ಅದು. ಹಿಂದೆಂದಿಗಿಂತಲೂ ಇಂದು ಹೆಚ್ಚು ಹೆಚ್ಚು ಮಂದಿ ಮಾತಾಡುತ್ತಿರುವ ಮತ್ತು ಅರ್ಥ ಮಾಡಿಕೊಳ್ಳತೊಡಗಿರುವ ಭಾಷೆ. ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮಗಳ ಬೆಸುಗೆಯ ಭಾಷೆಯಾಗಿ ಇಂಗ್ಲಿಷೇ ಯಾಕೆ ಮುಂದುವರೆಯಬಾರದು? ಹಿಂದೀ ಈ ದೇಶದ ಮುಖ್ಯ ಭಾಷೆಗಳಲ್ಲಿ ಒಂದು. ಆರೆಸ್ಸೆಸ್-ಬಿಜೆಪಿ ಆರಾಧಿಸುವ ಸಂಸ್ಕೃತ ಭೂಯಿಷ್ಠ ಹಿಂದೀಯು, ಹಿಂದಿ-ಹಿಂದುಸ್ತಾನಿ-ಉರ್ದು ಭಾಷಿಕ ಸೀಮೆಯಲ್ಲಿ ಒಂದು ಅಲ್ಪಸಂಖ್ಯಾಕ ಭಾಷೆ. ಪಂಜಾಬಿ, ಸಿಂಧಿ, ಅವಧಿ, ಬ್ರಜ, ಭೋಜಪುರಿ, ಮೈಥಿಲಿ ಮತ್ತು ಇತರೆ ಭಾಷೆಗಳ ಕುಟುಂಬದ ಒಂದು ಭಾಷೆ ಅಷ್ಟೇ. ಇಂತಹ ಅಲ್ಪಸಂಖ್ಯಾಕ ಭಾಷೆಯು ಉಳಿದೆಲ್ಲ ಭಾಷೆಗಳ ಸವಾರಿ ಯಾಕೆ ಮಾಡಬೇಕು?
ಒಂದು ನಿರ್ದಿಷ್ಟ ಸಿದ್ಧಾಂತ ಮತ್ತು ಪ್ರಭುತ್ವದ ರಾಜಕೀಯ ದುರ್ಬಳಕೆಗೆ ತುತ್ತಾಗುವ ಭಾಷೆ ತೀವ್ರ ಹಾನಿಯನ್ನು ಅನುಭವಿಸುತ್ತದೆ. ಎರಡನೆಯ ವಿಶ್ವಯುದ್ಧದ ನಂತರ ಜರ್ಮನಿ ಮಾತ್ರವಲ್ಲ, ಜರ್ಮನ್ ಭಾಷೆ ಕೂಡ ಕೆಲ ಕಾಲ ಅನಧಿಕೃತ ಬಹಿಷ್ಕಾರ ಎದುರಿಸಬೇಕಾಯಿತು. ಗಯಟೆ, ರಿಲ್ಕೆ, ಕಾಫ್ಕಾ ರಂತಹವರು ಬಳಸಿದ ಸೊಬಗಿನ ಭಾಷೆ ಇಂತಹ ದುಸ್ಥಿತಿ ಎದುರಿಸಬೇಕಾಯಿತು. 1925-1945ನಡುವೆ ಜರ್ಮನ್ ಭಾಷೆಯು ವರ್ಣಭೇದ ಮತ್ತು ಜನಾಂಗೀಯ ಹತ್ಯೆಯ ಕಡುದ್ವೇಷವನ್ನು ಪಸರಿಸುವ ಭಾಷೆಯಾಗಿ ಪರಿಣಮಿಸಿತ್ತು. ಅಮಾಯಕರ ಸಾಮೂಹಿಕ ನರಮೇಧವನ್ನು ಆಗು ಮಾಡುವ ಕೇಡಿನ ಮಿಲಿಟರಿ ಆಣತಿಯ ಒರಟು- ವಿಕಾರ- ಕುರೂಪದ ಭಾಷೆಯೆಂದು ಅಂತಾರಾಷ್ಟ್ರೀಯವಾಗಿ ಕರೆಯಿಸಿಕೊಂಡಿತು.
ಕೆಲವೇ ವರ್ಷಗಳಲ್ಲಿ ಇದೇ ಸ್ಥಿತಿ ಹಿಂದೀ ಭಾಷೆ ಅಥವಾ ಅದರ ಕೆಲವು ವಲಯಗಳಿಗೆ ಒದಗುವ ನೈಜ ಅಪಾಯವಿದೆ. ಸುಳ್ಳುಗಳು, ರಾಜಕೀಯ ಗುಂಪು ಹತ್ಯೆಗಳ ಭಾಷೆ, ಗಣರಾಜ್ಯವನ್ನು ವಿನಾಶದತ್ತ ದೂಡಿದ ಭಾಷೆ, ತೀವ್ರ ಪ್ರಗತಿಗಾಮಿ ಧಾರ್ಮಿಕ ಬಹುಸಂಖ್ಯಾಕ ಭಾಷೆಯೆಂದು ಹಿಂದೀಯನ್ನು ಪರಿಗಣಿಸುವ ದಿನಗಳು ದೂರವಿಲ್ಲ. ದೇಶದ ಉದ್ದಗಲಕ್ಕೆ ಹಿಂದೀ ಹೇರಿಕೆಯನ್ನು ವಿರೋಧಿಸಿದ ರೀತಿಯಲ್ಲೇ ನಂಜುಭರಿತ ಸಂಗತಿಗಳನ್ನು ಪ್ರತಿನಿಧಿಸುತ್ತಿರುವ ಒಂದು ಬಗೆಯ ಹಿಂದಿಯನ್ನು ಕೂಡ ನಾವು ಪ್ರತಿಭಟಿಸಬೇಕಿದೆ. ಹಿಂದೀ ಭಾಷೆಯ ಮೇಲೆ ಹೇರಲಾಗುತ್ತಿರುವ ಆಳದ ಹಾನಿಯನ್ನು ತಗ್ಗಿಸುವ ಮತ್ತು ತಪ್ಪಿಸುವ ಪ್ರಯತ್ನ ಮಾಡಬೇಕಿದೆ’’.
ರೇಪ್ ಪ್ರಕರಣದ ಯುವತಿಯೀಗ ಪೊಲೀಸ್ ಕಾನ್ಸಟೇಬಲ್

ಥಾನಾಗಾಜಿ ಎಂಬುದು ರಾಜಸ್ತಾನದ ಅಲ್ವರ್ ಜಿಲ್ಲೆಯ ಒಂದು ಸರ್ವೇಸಾಧಾರಣ ಊರು. ಕಳೆದ ಲೋಕಸಭಾ ಚುನಾವಣೆಗಳ ನಡುವೆ ಏಕಾಏಕಿ ಸಮೂಹಮಾಧ್ಯಮಗಳ ತಲೆಬರೆಹಗಳಲ್ಲಿ ಕಾಣಿಸಿಕೊಂಡಿತು. ರಾಜಸ್ತಾನ ಕಾಂಗ್ರೆಸ್ ಆಳ್ವಿಕೆಗೆ ದಕ್ಕಿರುವ ಕಾರಣ ಪ್ರಧಾನಿ ಕೂಡ ಈ ಊರಿನ ಹೊರವಲಯದಲ್ಲಿ ಜರುಗಿದ ದುಷ್ಟ ಕೃತ್ಯವನ್ನು ಎತ್ತಿ ಆಡಿದ್ದರು. ಅಲ್ಲಿನ ದಲಿತ ಯುವತಿಯೊಬ್ಬಳ ಮೇಲೆ ಮೇಲ್ಜಾತಿಯ ಐವರು ಖೂಳರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಕೃತ್ಯವನ್ನು ನೋಡುವಂತೆ ಆಕೆಯ ಪತಿಯನ್ನು ಬಲವಂತಪಡಿಸುತ್ತಲೇ ವಿಡಿಯೋ ಚಿತ್ರೀಕರಣವನ್ನೂ ಮಾಡಿದ್ದರು. ಹೊಸದಾಗಿ ಮದುವೆಯಾಗಿದ್ದ ಎಳೆಯ ಜೋಡಿಯದು. ಊರ ಹೊರವಲಯದಲ್ಲಿ ಬೈಕಿನ ಮೇಲೆ ತೆರಳುತ್ತಿದ್ದ ದಂಪತಿಗಳನ್ನು ಬಲಿಷ್ಠ ಗುಜ್ಜರ್ ಜಾತಿಗೆ ಸೇರಿದ ಐವರು ಯುವಕರು ನಿಲ್ಲಿಸಿದರು. ಜಾತಿ ಯಾವುದೆಂದು ಕೇಳಿದರು. ದಲಿತರೆಂದು ತಿಳಿಯುತ್ತಿದ್ದಂತೆ, ಹಲ್ಲೆಗೆ ತೊಡಗಿದರು. ಇಬ್ಬರನ್ನೂ ಥಳಿಸಿದರು, ಭಂಗಿ- ಚಮಾರ್ ಎಂದು ಜರೆದರು. ಬಟ್ಟೆ ಹರಿದು ಹಾಕಿ ಬೆತ್ತಲಾಗಿಸಿದರು. ಮರಳ ದಿಬ್ಬಗಳ ಮರೆಗೆ ಕರೆದೊಯ್ದು ಯುವತಿಯನ್ನು ಚಿತ್ರಿಹಿಂಸೆಗೆ ಗುರಿ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದರು. ತಾವು ಬಲಿಷ್ಠ ಜಾತಿಗೆ ಸೇರಿದ್ದರೆ ಈ ಅನಾಚಾರ ನಡೆಯುತ್ತಲೇ ಇರಲಿಲ್ಲ ಎಂದಿದೆ ಈ ಜೋಡಿ.
ದಲಿತರು ತಮ್ಮ ಕೂದಲನ್ನೂ ಕೊಂಕಿಸಲಾರರು ಎಂದು ಹೇಳಿಯೇ ಈ ಜೋಡಿಯ ಮೈ ಮೇಲೆ ಕೈ ಹಾಕಿದ್ದರು ಗುಜ್ಜರ್ ಯುವಕರು. ಈ ಸೀಮೆಯ ಬಲಿಷ್ಠ ಜಾತಿಗಳ ಗಂಡಸರು ದಲಿತ ಹೆಣ್ಣುಮಕ್ಕಳನ್ನು ಮನಬಂದಂತೆ ಅಪಹರಿಸಿ ವಾರಗಟ್ಟಲೆ ಅತ್ಯಾಚಾರ ಎಸಗಿ ಬಿಡುಗಡೆ ಮಾಡುತ್ತಿದ್ದ ಹಳೆಯ ದಿನಗಳನ್ನು ನೆನೆಯುತ್ತಾನೆ ಥಾನಾಗಾಜಿಯ ವೃದ್ಧ ಭೋಜಲಾಲ್. ಅಪಹರಿಸಲಾದ ಹೆಣ್ಣುಮಕ್ಕಳು ಮನೆಗೆ ಮರಳಿದರೆ, ಸದ್ಯ ಜೀವಸಹಿತ ಬಂದಳಲ್ಲ ಎಂದು ಹೆತ್ತವರು ನಿಟ್ಟುಸಿರೆಳೆಯುತ್ತಿದ್ದರು. ಕಾಲ ಹೆಚ್ಚೇನೂ ಬದಲಾಗಿಲ್ಲ. ದಲಿತ ಹೆಣ್ಣುಮಕ್ಕಳು ದುರ್ಬಲರಲ್ಲಿ ದುರ್ಬಲರು ಎಂಬ ಕಾರಣಕ್ಕಾಗಿಯೇ ಅವರನ್ನು ಅಪಹರಿಸಿ ಅತ್ಯಾಚಾರ ಮಾಡಲಾಗುತ್ತಿದೆ ಎನ್ನುತ್ತಾನೆ ಭೋಜಲಾಲ್. ‘ದಲಿತ ಯುವತಿಯ ಮೇಲೆ ಅತ್ಯಾಚಾರ’ ಎಂಬ ತಲೆಬರೆಹಗಳು ಅಪ್ರಸ್ತುತ. ‘ಯುವತಿಯ ಮೇಲೆ ಅತ್ಯಾಚಾರ’ ಎಂದು ಬರೆದರಾಗದೇ ಎಂದು ಪ್ರಶ್ನಿಸುವ ಜನ ನಮ್ಮ ಸಮಾಜದಲ್ಲಿ ಹೇರಳ ಸಂಖ್ಯೆಯಲ್ಲಿದ್ದಾರೆ. ಪ್ರಗತಿಗಾಮಿಗಳು ಮಾತ್ರವಲ್ಲ, ಪ್ರಜ್ಞಾವಂತರ ಪೈಕಿಯೂ ಇಂತಹ ಪ್ರಶ್ನೆ ಕೇಳುವವರು ಕಂಡು ಬರುತ್ತಾರೆ. ಜಾತಿ ತಿಳಿದು ಅತ್ಯಾಚಾರ ಎಸಗುವ ಶತಮಾನಗಳ ಪೂರ್ವಗ್ರಹಕ್ಕೆ ಕಣ್ಣುಮುಚ್ಚಿದ ತಿಳಿಗೇಡಿಗಳು ಮಾತ್ರವೇ ಇಂತಹ ಮುಠ್ಠಾಳ ಮತ್ತು ಫಟಿಂಗ ಪ್ರಶ್ನೆಯನ್ನು ಕೇಳಬಲ್ಲರು.
ಅತ್ಯಾಚಾರದ ಚಿತ್ರೀಕರಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಬೆದರಿಕೆ ಒಡ್ಡಿ ಹಣ ವಸೂಲಿಗೆ ಬ್ಲ್ಯಾಕ್ ಮೇಲ್ ಮಾಡುವ ಥಾನಾಗಾಜಿಯ ಖೂಳರನ್ನು ಪೊಲೀಸರು ಸುಲಭಕ್ಕೆ ಬಂಧಿಸುವುದಿಲ್ಲ. ರಾಜಕೀಯ ಒತ್ತಡದ ಬಿಸಿ ಹುಟ್ಟಿದ ನಂತರವೇ ಕಾರ್ಯಪ್ರವೃತ್ತರಾಗುತ್ತಾರೆ. ಅತ್ಯಾಚಾರದ ಚಿತ್ರೀಕರಣ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವುದನ್ನು ತಡೆಯುವಂತೆ ಎಳೆಯ ಜೋಡಿ ಮಾಡಿಕೊಳ್ಳುವ ಪರಿಪರಿಯ ಮನವಿಗೆ ಅವರು ಕುರುಡಾಗಿರುತ್ತಾರೆ. ಅತ್ಯಾಚಾರ ಮಾಡಿದವರು ಅವಹೇಳನಕ್ಕೆ ಒಳಗಾಗದೆ, ಅದಕ್ಕೆ ಬಲಿಯಾದ ಹೆಣ್ಣುಮಕ್ಕಳು ಕಳಂಕ ಎದುರಿಸುವುದು ಈ ದೇಶದ ಆಷಾಡಭೂತಿ ಸಾಮಾಜಿಕ ವ್ಯವಸ್ಥೆಯ ಕ್ರೂರ ವ್ಯಂಗ್ಯ. ವರ್ಷ ಉರುಳಿದರೂ ಬಹಿರಂಗವಾಗಿ ಮುಖ ತೋರಿಸುವ ಸ್ಥಿತಿಯಲ್ಲಿಲ್ಲ ಈ ಜೋಡಿ.
ಅತ್ಯಾಚಾರದ ವಿಡಿಯೋವನ್ನು ಅಲ್ವರ್ ನಲ್ಲಿ ನೋಡದವರೇ ವಿರಳ. ಬೀದಿಗಿಳಿದರೆ ‘ಆ ವಿಡಿಯೋದಲ್ಲಿರುವವಳು ಇವಳೇ’ ಎಂಬ ಮಾತುಗಳು ಇರಿಯುತ್ತವೆ. ಗಂಡು ನೋಟಗಳ ನಾಲಿಗೆಗಳು ಈಕೆಯ ಮೈಯನ್ನು ಎಂಜಲು ಮಾಡತೊಡಗುತ್ತವೆ. ಗುಜ್ಜರ್ ಸಮುದಾಯದಿಂದ ಬೆದರಿಕೆಯ ಕರೆಗಳು ಈಗಲೂ ನಿಂತಿಲ್ಲ. ಹಗಲಿರುಳು ಕಾಡುವ ಅತ್ಯಾಚಾರದ ದುಃಸ್ವಪ್ನಗಳು, ಮನೋಯಾತನೆಯ ವಿರುದ್ಧ 19ರ ಹರೆಯದ ಈ ಯುವತಿಯ ಹೋರಾಟ ಈಗಲೂ ಜಾರಿಯಲ್ಲಿದೆ. ಯುವತಿಯ ಪಾಲಿಗೆ ಈ ಕತ್ತಲ ನಡುವೆ ಬೆಳ್ಳಿರೇಖೆಯೊಂದು ಮೂಡಿದೆ. ಹನ್ನೊಂದನೆಯ ತರಗತಿವರೆಗೆ ಓದಿರುವ ಆಕೆಗೆ ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ. ಇದೇ ಜುಲೈ ಒಂದರಿಂದ ಕೆಲಸಕ್ಕೆ ಹಾಜರಾಗಿರುವ ಆಕೆ ಪೊಲೀಸ್ ವಸತಿಯಲ್ಲಿ ವಾಸ ಮಾಡಿದ್ದಾಳೆ. ಈಕೆಯ ಮೈಗಾವಲಿಗೆ ಮತ್ತೊಬ್ಬ ಮಹಿಳಾ ಕಾನ್ಸಟೇಬಲ್ ನಿಯೋಜಿಸಲಾಗಿದೆ. ‘ನನಗೆ ಆದದ್ದನ್ನು ಬೇರೆ ಯುವತಿಗೆ ಆಗಲು ಬಿಡುವುದಿಲ್ಲ’ ಎಂಬುದು ಈ ಹೊಸ ಪೊಲೀಸ್ ಪೇದೆಯ ಅಮಾಯಕ ಆಶಯ.
ದೆಹಲಿ: ವಲಸಿಗರ ರಾಜಧಾನಿಯೂ ಹೌದು

ದೆಹಲಿ ಕೇವಲ ದೇಶದ ರಾಜಧಾನಿಯಲ್ಲ, ವಲಸಿಗರ ರಾಜಧಾನಿಯೂ ಹೌದು. ಮಹಾರಾಷ್ಟ್ರದ ನಂತರ ವಲಸಿಗರ ಅಚ್ಚುಮೆಚ್ಚಿನ ಆಯ್ಕೆ. ಆದರೆ ಸ್ಥಳೀಯ ಜನಸಂಖ್ಯೆ ಮತ್ತು ವಲಸಿಗರ ಜನಸಂಖ್ಯೆಯನ್ನು ತುಲನೆ ಮಾಡಿ ನೋಡಿದರೆ ಅಂತಾರಾಜ್ಯ ವಲಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ನೆಲೆಸಿರುವ ಮಹಾನಗರವಿದು. 1991-2011 ನಡುವೆ ಉತ್ತರಪ್ರದೇಶ, ಉತ್ತರಾಖಂಡ, ಬಿಹಾರ, ಜಾರ್ಖಂಡದ ವಲಸಿಗರ ಸಂಖ್ಯೆ ಸತತವಾಗಿ ಹೆಚ್ಚಿತು. ದೆಹಲಿಯ ವಲಸಿಗರ ಪೈಕಿ ಮೂರನೆಯ ಎರಡರಷ್ಟು ಸಂಖ್ಯೆ ಈ ರಾಜ್ಯಗಳದೇ.
ದೆಹಲಿ ಈಗಾಗಲೆ ವಿಶ್ವದ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರಕೂಟ. ವರ್ಷದ ಹಿಂದೆ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ 2028ರ ವೇಳೆಗೆ ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರಕೂಟ ಆಗಲಿದೆ. ಜನಸಂಖ್ಯೆ ಈಗಿನ 2.9 ಕೋಟಿಯಿಂದ 3.7 ಕೋಟಿಗೆ ಜಿಗಿಯಲಿದೆ. ಈಗ 3.7 ಕೋಟಿಯಷ್ಟಿರುವ ಟೋಕಿಯೋದ ಜನಸಂಖ್ಯೆ 2028ರ ವೇಳೆಗೆ 3.68 ಕೋಟಿಗೆ ತಗ್ಗಲಿದೆ.
ತೀವ್ರ ಜನಸಾಂದ್ರತೆಯ ನಗರದ ಸ್ಥಾನದಲ್ಲೂ ದೆಹಲಿಯೇ ಮೊದಲು. ದೆಹಲಿಯ ಜನಸಾಂದ್ರತೆಯನ್ನೇ ಇಡೀ ದೇಶದ ಜನಸಂಖ್ಯೆಗೆ ಅನ್ವಯಿಸಿದರೆ, ಭಾರತದ ಜನಸಂಖ್ಯೆಯನ್ನು ರಾಜಸ್ತಾನದ ನಾಲ್ಕನೆಯ ಒಂದರಷ್ಟು ಭೂಭಾಗದಲ್ಲಿ ನೆಲೆಗೊಳಿಸಲು ಬರುತ್ತದೆ ಎನ್ನಲಾಗಿದೆ.
ಈಗಲೂ ಕಾಗದ ಬಿಟ್ಟು ಮೇಲೇಳದಿರುವ ದೆಹಲಿ ಅಭಿವೃದ್ಧಿಯ ಮಾಸ್ಟರ್ ಪ್ಲ್ಯಾನ್ ಒಂದು ವೇಳೆ ಜಾರಿಯಾದರೂ, ದೆಹಲಿ ವಾಸಯೋಗ್ಯವಾಗಿ ಉಳಿಯುವುದಿಲ್ಲ ಎಂಬ ಆತಂಕವನ್ನು ನಗರಯೋಜಕರು ವ್ಯಕ್ತಪಡಿಸಿದ್ದಾರೆ.