ಕಾಜಲ್ ಎಂಬ ತರುಣಿಯೂ ದೀಪ್ ಎಂಬ ಯುವಕನೂ….
ಉತ್ತರಪ್ರದೇಶದ ರಾಯಬರೇಲಿ ಜಿಲ್ಲೆಯಲ್ಲಿ ಇಚ್ಛಾಪುರ ಎಂಬುದೊಂದು ಹಳ್ಳಿ. ಅಲ್ಲಿಯ ಜನಸಂಖ್ಯೆ ಏಳುನೂರು. ದಲಿತರು ಮತ್ತು ಹಿಂದುಳಿದ ವರ್ಗಗಳದು ಸಮ ಸಮ ಸಂಖ್ಯೆ. ಎರಡೂ ಪಾಳೆಯಗಳ ನಡುವೆ ವೈಮನಸ್ಯದ ದಾಖಲೆಗಳಿಅಲ್ಲಿ ಅಂಜೂ ವರ್ಮಾ ಎಂಬ 16 ವರ್ಷದ ಹಿಂದುಳಿದ ವರ್ಗದ ಹುಡುಗಿ ಮತ್ತು ಸಂದೀಪ್ ಎಂಬ 17 ವರ್ಷದ ದಲಿತ ಹುಡುಗ. ವಯೋಸಹಜ ಆಕರ್ಷಣೆ. ಮಾತು ಗೆಳೆತನಕ್ಕೆ ತಿರುಗಿತು. ಗೆಳೆತನ ಪ್ರೇಮದತ್ತ ಹೊರಳಲು ಬಹಳ ಕಾಲ ಹಿಡಿಯಲಿಲ್ಲ. ಹೊಲಗಳಲ್ಲಿ ಕುಳಿತು ತಾಸುಗಟ್ಟಲೆ ಹರಟುತ್ತಿದ್ದರು. ಅಲ್ಲಿಗೂ ಮನಸ್ಸು ತುಂಬುತ್ತಿರಲಿಲ್ಲ. ಆಕೆ ಅವನ ಅಂಜೂ. ಅವನು ಆಕೆಯ ದೀಪ್. ರಾತ್ರಿ ಮಾತಾಡಲು ಆಕೆಗೆ ಅವನು ನೋಕಿಯಾ ಫೋನು ಕೊಡಿಸಿದ. ಫೋನಿನಲ್ಲಿ ಮಾತಾಡುತ್ತಿದ್ದಾಗ ಆಕೆಯ ಮನೆಯವರು ಹಿಡಿದು ಫೋನು ಕಿತ್ತುಕೊಂಡರು. ಹೀಗೆ ಒಂದರ ನಂತರ ಒಂದರಂತೆ ಆಕೆಗೆ ಆತ ಕೊಡಿಸಿದ ಫೋನುಗಳು ಐದು.
ಮಾತಾಡುತ್ತ ಮಾತಾಡುತ್ತಲೇ ಎರಡು ವರ್ಷಗಳು ಉರುಳಿದವು. ಉಳಿದ ಬದುಕು ಹಂಚಿಕೊಳ್ಳುವುದಿದ್ದರೆ ಅದು ನಿನ್ನೊಂದಿಗೇ ಎಂದಳು ಅಂಜು. ಆ ದಿನ ದೀಪ್ ಪಾಲಿನ ಅತ್ಯಂತ ಆನಂದದ ದಿನ. ಇಬ್ಬರ ಜಾತಿಗಳು ಬೇರೆ ಬೇರೆ. ಕುಟುಂಬಗಳು ಒಪ್ಪುವುದಿಲ್ಲ. ಎಳೆಯ ಪ್ರೇಮಿಗಳು ಪಂಜಾಬಿನ ಲೂಧಿಯಾನಕ್ಕೆ ಓಡಿ ಹೋದರು. ಅಲ್ಲಿ ಸಂದೀಪನ ಗೆಳೆಯರಿದ್ದರು ಸಹಾಯ ಮಾಡಲು. ಹೊಸೈರಿ ಅಂಗಡಿಯೊಂದರಲ್ಲಿ ಸೇಲ್ಸ್ ಮನ್ ಕೆಲಸ.
ಪುಟ್ಟ ಕೋಣೆಯೊಂದನ್ನು ಬಾಡಿಗೆ ಹಿಡಿದರು. ತಿಂಗಳಿಗೆ 1,800 ರುಪಾಯಿ ಬಾಡಿಗೆ. ಸ್ಥಳೀಯ ಕೃಷ್ಣಮಂದಿರದಲ್ಲಿ ಮದುವೆ ಮಾಡಿಕೊಂಡರು. ಎರಡು ವರ್ಷಗಳ ನಂತರ ಆತನಿಗೆ 21 ತುಂಬಿದ ನಂತರ ವಿವಾಹವನ್ನು ರಿಜಿಸ್ಟರ್ ಮಾಡಿಸಿದರು. ಅವನು ಆಕೆಯನ್ನು ಕಾಜಲ್ ಎಂದು ಕರೆದ. ಆಕೆ ಅವನನ್ನು ದೀಪ್ ಎಂದು ಕರೆದಳು. ತಿಂಗಳಿಗೆ 12 ಸಾವಿರ ರುಪಾಯಿ ಗಳಿಸುತ್ತಿದ್ದ. ಇಬ್ಬರೂ ಜೊತೆ ಸೇರಿ ಅಡುಗೆ ಮಾಡುತ್ತಿದ್ದರು. ಸಂಜೆ ಪೇಟೆ, ಸಿನೆಮಾ ತಿರುಗಾಟ. ಬದುಕು ಸುಂದರ ಎನಿಸಿತು. ಆರು ವರ್ಷಗಳು ಉರುಳಿಯೇ ಹೋದವು.

ಇತ್ತ ಇಚ್ಛಾಪುರದಲ್ಲಿ ಹುಡುಗಿಯ ತಂದೆ ರಾಜೇಂದ್ರ ವರ್ಮ ಸಂದೀಪನ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದ. ಮಗಳ ತಲೆ ಕೆಡಿಸಿ ಓಡಿಸಿಕೊಂಡು ಹೋಗಿದ್ದಾನೆಂದು ಕಿರುಚಾಡಿದ. ಸಂದೀಪನ ತಂದೆ 60 ವರ್ಷದ ಹರಿಲಾಲ್ ಮೊದಲೇ ಮುಜುಗರದ ವ್ಯಕ್ತಿ. ಈಗಂತೂ ಮುದುಡಿ ಹೋದ. ಸಂದೀಪ್ ಹಾಗೆ ಮಾಡಲಾರ ಎಂಬುದು ಆತನ ಭಾವನೆಯಾಗಿತ್ತು. ಮಗನ ಗೆಳೆಯರಲ್ಲಿ ವಿಚಾರಿಸಿ ನೋಡಿದ. ಲೂಧಿಯಾನಕ್ಕೆ ಹೋಗಿದ್ದು ತಿಳಿಯಿತು. ಸಂದೀಪನಿಂದ ತಾನು ತಲೆ ತಗ್ಗಿಸುವಂತಾಯಿತು ಎಂದು ರೋದಿಸಿದ. ಜನ ಆಡಿಕೊಂಡು ನಗುವಂತಾಯಿತು ಎಂದು ಕುಗ್ಗಿ ಹೋದ.
ಸಂದೀಪನನ್ನು ಸಂಪರ್ಕಿಸಿ ವಾಪಸು ಬರುವಂತೆ ಪರಿ ಪರಿಯಾಗಿ ಬೇಡಿಕೊಂಡ. ಕೆಲ ದಿನಗಳ ನಂತರ ಅಂಜು ಮತ್ತು ದೀಪ್ ವಾಪಸು ಬಂದರು. ಕುಟುಂಬದವರು ಅಂಜುವನ್ನು ಕರೆದೊಯ್ದ, ದೂರದ ಸಂಬಂಧಿಕರ ಮನೆಯಲ್ಲಿ ಬಿಟ್ಟರು. ಸಂದೀಪ್ ಲೂಧಿಯಾನಕ್ಕೆ ವಾಪಸಾದ. ದಿನಗಳು ಸಂದವು. ಅವನಿಗೆ ಈಗಲೂ ನಿಚ್ಚಳವಾಗಿ ನೆನಪಿದೆ. 2012ರ ಆಗಸ್ಟ್
15ರಂದು ಅಂಜುವಿನ ಫೋನ್ ಬಂತು. ನೀನಿಲ್ಲದೆ ಬದುಕಲಾರೆ ಎಂದಳು. ನೇರವಾಗಿ ಅವಳಿದ್ದಲ್ಲಿಗೆ ಹೋದ. ಬಸ್ ಹಿಡಿದು ಲೂಧಿಯಾನಕ್ಕೆ ಬಂದರು. ಈ ಸಲ ಹರಿಲಾಲ್ ಸಂದೀಪನನ್ನು ಸಂಪರ್ಕಿಸಲಿಲ್ಲ. ಮಗನ ಮೇಲೆ ವಿಪರೀತ ಕೋಪದಲ್ಲಿದ್ದ.

2018ರ ಜನವರಿ. ಸಂದೀಪನ ಹತ್ತಿರದ ಸಂಬಂಧಿ ತೀರಿ ಹೋದರು. ಅಂಜುವನ್ನೂ ಕರೆದುಕೊಂಡು ಅಂತ್ಯಕ್ರಿಯೆಗೆಂದು ಇಚ್ಛಾಪುರಕ್ಕೆ ತೆರಳಿದ. ಕೆಲದಿನಗಳ ಮಟ್ಟಿಗೆಂದು ಹೋದವರು ತಿಂಗಳೊಪ್ಪತ್ತು ತಂಗಿಬಿಟ್ಟರು. ಲೂಧಿಯಾನಕ್ಕೆ ಹೊರಡುವ ದಿನದಂದು ರೈಲುಗಾಡಿ ತಪ್ಪಿ ಹೋಯಿತು. ಇನ್ನಷ್ಟು ದಿನ ಉಳಿಯುವ ಮನಸ್ಸಾಯಿತು. ಕಲ್ಲಾಗಿದ್ದ ಮನೆ ಮಂದಿಯ ಮನಸುಗಳು ಮಿದುವಾಗತೊಡಗಿದ್ದವು. ತಂದೆ ಮಾತಾಡಿಸತೊಡಗಿದ್ದ. ಕೂಡಿ ಬೆರೆತ ಕುಟುಂಬದ ಭಾವನೆ. ಅಂಜು ಬಹಳ ಖುಷಿಯಿಂದಿದ್ದಳು. ಸಂದೀಪ ಹಳ್ಳಿಯಲ್ಲೇ ಒಂದು ವೆಲ್ಡಿಂಗ್ ಮಳಿಗೆ ತೆರೆದ. ಲೂಧಿಯಾನವನ್ನು ಮರೆತೇ ಬಿಟ್ಟರು. ಸಂದೀಪನ ಸಂಪಾದನೆಯಿಂದ ಮಣ್ಣಿನ ಮನೆಯು ಇಟ್ಟಿಗೆ ಸಿಮೆಂಟು ಕಂಡಿತು.

ದಂಪತಿಗೆ ಅಂಜುವಿನ ಮನೆಯವರು ಏನು ಮಾಡುತ್ತಾರೋ ಎಂಬ ಅಳುಕು ಕಾಡಿಯೇ ಇತ್ತು. ಹೀಗಾಗಿ ಆಕೆ ಹೊರಗೆ ಹೆಜ್ಜೆ ಇಡದಾದಳು. ಇತ್ತೀಚೆಗೆ ಸೆಪ್ಟಂಬರ್ ಎರಡರ ಸಂಜೆ. ಮನೆಯಲ್ಲಿ ಪಾಯಿಖಾನೆ ಇದ್ದರೂ, ಅಂಜು, ಆಕೆಯ ಓರಗಿತ್ತಿ ಹಾಗೂ ಸಂದೀಪನ ತಂಗಿ ಬಹಿರ್ದೆಸೆಗೆಂದು ಬಯಲಿನತ್ತ ನಡೆದರು. ಸಂಜೆ ಐದಕ್ಕೆ ಬಿಟ್ಟವರು ಐದೂವರೆಯ ಹೊತ್ತಿಗೆ ಮರಳುತ್ತಿದ್ದರು. ದಾರಿಯಲ್ಲಿ ಮಾವಿನ ತೋಪಿನ ಬಳಿ ಅಂಜುವಿನ ಸೋದರ ಪ್ರದೀಪ್, ಸೋದರ ಸಂಬಂಧಿಗಳಾದ ಪಂಕಜ್, ಅಜಯ್, ವಿಜಯ್ ಕ್ರಿಕೆಟ್ ಆಡುತ್ತಿದ್ದರು. ಅಲ್ಲಿಂದ ಸಂದೀಪನ ಮನೆ 150 ಗಜ ದೂರವಿದ್ದೀತು. ಪಂಕಜ್ ಅಂಜುವಿಗೆ ಅಡ್ಡ ಹಾಕಿದ. ಮಾತಾಡಬೇಕಿದೆ ಎಂದ. ಬಿಡು ಎಂದು ಆಕೆ ಒಂದು ಹೆಜ್ಜೆ ಮುಂದಿಟ್ಟಿರಬಹುದು. ಅಷ್ಟರಲ್ಲಿ ಹಿಂದಿನಿಂದ ಅವನು ಕ್ರಿಕೆಟ್ ಬ್ಯಾಟ್ ನಿಂದ ಆಕೆಯ ತಲೆಗೆ ಹೊಡೆದ. ಕೆಳಗೆ ಬಿದ್ದ ಆಕೆಯ ತಲೆಯ ಮೇಲೆ ಮತ್ತಷ್ಟು ಏಟುಗಳು. ರಕ್ತ ಹರಿಯಿತು. ಬುರುಡೆ ಸೀಳಿತ್ತು. ಅವನನ್ನು ತಡೆಯುವ ಉಳಿದಿಬ್ಬರು ಹೆಣ್ಣುಮಕ್ಕಳ ಪ್ರಯತ್ನ ವಿಫಲ ಆಗಿತ್ತು. ನೆರವಿಗೆ ಜನರನ್ನು ಕರೆ ತರುವ ವೇಳೆಗೆ ಅಂಜುವಿನ ಪ್ರಾಣ ಹಾರಿ ಹೋಗಿತ್ತು.
ಸಂದೀಪನನ್ನು ಸಂತೈಸುವ ಧೈರ್ಯವೂ ಆತನ ತಂದೆ ತಾಯಿಗಳು ಬಂಧು ಬಳಗಕ್ಕೆ ಇರಲಿಲ್ಲ. ತಮ್ಮದೇ ರಕ್ತ ಹಂಚಿಕೊಂಡು ಹುಟ್ಟಿದ ಕುಟುಂಬದ ಸದಸ್ಯರೊಬ್ಬರನ್ನು ಬಡಿದು ಕೊಲ್ಲುವ ಮನಸ್ಸು ಆ ಕುಟುಂಬದವರಿಗೆ ಹೇಗಾದರೂ ಬರುತ್ತದೆ ಎಂಬುದು ಹರಿಲಾಲ್ ಪಾಲಿಗೆ ಬಗೆಹರಿಯದ ಒಗಟಾಗಿತ್ತು. ಹರಿಲಾಲ್ ಕುಟುಂಬ ಆರಂಭದಲ್ಲಿ ಅಂಜುವಿನ ಮೇಲೆ ಕೋಪಗೊಂಡಿತ್ತು ನಿಜ. ಆದರೆ ಬರ ಬರುತ್ತ ಆಕೆ ಮನೆ ಮಗಳಾದಳು. ಆಕೆಯೂ ಕುಟುಂಬದ ಎಲ್ಲ ಸದಸ್ಯರ ಕಾಳಜಿ ಮಾಡುತ್ತಿದ್ದಳು. ಎಲ್ಲರನ್ನೂ ಗೌರವಿಸುತ್ತಿದ್ದಳು. ಹರಿಲಾಲ್ ಗೆ ಸೊಸೆಯ ಬಗ್ಗೆ ಹೆಮ್ಮೆಯೆನಿಸಿತ್ತು. ಆಕೆಯ ಅಕಾಲ ಮರಣಕ್ಕೆ, ಮಗನ ವೇದನೆಗೆ ಮರುಗಿದ ಕುಟುಂಬದ ಕಣ್ಣೀರು ಈಗಲೂ ನಿಂತಿಲ್ಲ.
ಅತ್ತ ಅಂಜುವಿನ ಮನೆಗೆ ಬೀಗ ಬಿದ್ದಿತು. ಇಡೀ ಕುಟುಂಬ ರಾತ್ರೋರಾತ್ರಿ ಪರಾರಿಯಾಗಿತ್ತು. ಹೊರಗೆ ಕಟ್ಟಿದ್ದ ಎಮ್ಮೆಗಳು ಕಟ್ಟಿದಂತೆಯೇ ಇದ್ದು ಉಪವಾಸವಿದ್ದವು. ಹುಡುಕಿ ಬಂದ ಪೊಲೀಸನೊಬ್ಬ ಅವುಗಳಿಗೆ ನೀರಿನ ವ್ಯವಸ್ಥೆ ಮಾಡಿದ.
‘ಎಲ್ಲ ಸಹಜತೆಗೆ ಮರಳಿತ್ತು. ಅಂಜುವನ್ನು ಕೊಲ್ಲಬಹುದು ಎಂಬ ಕಲ್ಪನೆಯೂ ನಮಗಿರಲಿಲ್ಲ. ಕೊಂದ ಸೋದರನಿಗೆ ದುಷ್ಟತನದ ಚರಿತ್ರೆಯೂ ಇರಲಿಲ್ಲ. ಹತ್ಯೆಯಾದ ದಿನ ಅಂಜು ಮುಖದ ಮೇಲೆ ಮುಸುಕು (ಘೂಂಘಟ್) ಹೊದ್ದಿರಲಿಲ್ಲ. ಪಂಕಜ್ ಆಕ್ಷೇಪಿಸಿದ್ದಕ್ಕೆ ಅಂಜು ಸುಮ್ಮನೆ ನಕ್ಕಿದ್ದಳು. ಕೊಲೆಯನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ ಮತ್ತೊಬ್ಬ ಜಾತಿಯವನೊಂದಿಗೆ ಓಡಿ ಹೋದ ಮಗಳ ಮನೆಯವರ ಸಂಕಟ ನನಗೆ ಅರ್ಥವಾಗುತ್ತದೆ. ಮಕ್ಕಳು ಹಣ ಅಥವಾ ಭೂಮಿ ಕಾಣಿಯಿಲ್ಲದವನನ್ನು ಮದುವೆಯಾದರೂ ತಂದೆ ತಾಯಿಗಳಿಗೆ ತೊಂದರೆಯಿಲ್ಲ, ಆದರೆ ಜಾತಿ ಇದೆಯಲ್ಲ….ಜನ ನೋಡುವುದು ಅದೊಂದನ್ನೇ’ ಎನ್ನುತ್ತಾಳೆ ಸಂದೀಪನ ತಾಯಿ. ಅಂಜುವಿನ ಸೋದರ ಸಂಬಂಧಿ ಪಂಕಜನನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಸ್ವಂತ ಸೋದರ ಪ್ರದೀಪ್ ಮತ್ತು ಉಳಿದ ಅಜಯ್ ವಿಜಯ್ ತಲೆಮರೆಸಿಕೊಂಡಿದ್ದಾರೆ.
ಕಳೆದ ವಾರ ಇದೇ ಅಂಕಣದಲ್ಲಿ ಈ ಇಬ್ಬರು ಪ್ರೇಮಿಗಳ ದುರಂತ ಕತೆಯನ್ನು ಕೆಲವೇ ಸಾಲುಗಳಲ್ಲಿ ಹೇಳಲಾಗಿತ್ತು. ಆದರೆ ಆನಂತರ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಅವನೀಶ್ ಮಿಶ್ರಾ ಇಚ್ಛಾಪುರಕ್ಕೆ ಹೋಗಿ ಸಂದೀಪನ ಕುಟುಂಬದ ಜೊತೆ ಮಾತಾಡಿ ಅವರದೇ ಮಾತುಗಳಲ್ಲಿ ಇಡೀ ಪ್ರಕರಣವನ್ನು ಬಿಡಿಸಿಟ್ಟಿದ್ದಾರೆ.
ಜಾತಿಯೆಂಬ ವಿಷವನ್ನು ನರನಾಡಿಗಳಲ್ಲಿ ಧರಿಸಿಕೊಂಡು ಬದುಕುತ್ತಿರುವ ಭವ್ಯ ಭಾರತದ ಹಳ್ಳಿ ಹಳ್ಳಿಗಳ ಕತೆಯಿದು. ಕಾಜಲ್ ಮತ್ತು ದೀಪ್ ದೇಶದ ಉದ್ದಗಲಕ್ಕೆ ಎಲ್ಲೆಲ್ಲಿಯೂ ಇದ್ದಾರೆ. ಜಾತಿ ದ್ವೇಷದ ಕೊಡಲಿ ಒಮ್ಮೆ ಕಾಜಲ್ ಳ ಕುತ್ತಿಗೆ ಕಡಿದರೆ ಮತ್ತೊಮ್ಮೆ ದೀಪ್ ನ ಮೇಲೆ ಎರಗುತ್ತದೆ. ಬಹುತೇಕ ಸನ್ನಿವೇಶಗಳಲ್ಲಿ ಕಾಜಲ್ ಮತ್ತು ದೀಪ್ ಇಬ್ಬರನ್ನೂ ಕಡಿದು ಒಗೆಯಲಾಗುತ್ತಿದೆ. ಅವರು ಸಾಯುತ್ತಲೇ ಇರುತ್ತಾರೆ….