ತಿಹಾರ್ ಜೈಲಿನಲ್ಲಿ ಹಿಂದೂ ಕೈದಿಗಳ ರಂಜಾನ್ ರೋಜಾ
ದೆಹಲಿಯ ತಿಹಾರ್ ಸೆಂಟ್ರಲ್ ಜೈಲು ಏಷ್ಯಾದ ಅತಿ ದೊಡ್ಡ ಬಂದೀಖಾನೆ. ಈ ಜೈಲಿನ ಸರಳುಗಳ ಹಿಂದೆ ದಿನ ದೂಡಿದವರು ಮತ್ತು ಈಗಲೂ ಕೈದಾಗಿರುವವರ ಪೈಕಿ ವಿಖ್ಯಾತರು ಮತ್ತು ಕುಖ್ಯಾತರ ದೊಡ್ಡ ಪಟ್ಟಿಯೇ ಉಂಟು. ದಾದ್ರಾ ನಗರ ಹವೇಲಿ ಮತ್ತು ಛತ್ತೀಸಗಢದ ನಂತರ ದೇಶದ ಅತಿ ಕಿಕ್ಕಿರಿದ ಮೂರನೆಯ ಜೈಲು ತಿಹಾರದ ಸೆಂಟ್ರಲ್ ಜೈಲು. 6,500 ಕೈದಿಗಳ ಸಾಮರ್ಥ್ಯದ ಈ ಜೈಲಿನಲ್ಲಿ 16,500 ಬಂದಿಗಳಿದ್ದಾರೆ.
ಕಾಲಕಾಲಕ್ಕೆ ಸುದ್ದಿಯಲ್ಲಿರುತ್ತದೆ ತಿಹಾರ್ ಜೈಲು. ಹಿಂದೂ-ಮುಸ್ಲಿಂ ಧ್ರುವೀಕರಣದ ಗಾಳಿ ದೇಶದ ಉದ್ದಗಲಕ್ಕೆ ಬೀಸಿರುವ ಇಂದಿನ ದಿನಗಳಲ್ಲಿ ಪುನಃ ಪತ್ರಿಕೆಗಳ ತಲೆಬರಹಗಳಲ್ಲಿ ಮೂಡಿದೆ ಈ ಕೈದುಖಾನೆ. ಮುಸಲ್ಮಾನರ ಪವಿತ್ರ ರಂಜಾನ್ ಮಾಸದಲ್ಲಿ ಆ ಧರ್ಮಾನುಯಾಯಿಗಳು ಹಗಲು ಉಪವಾಸ ಮಾಡಿ ಪ್ರಾರ್ಥಿಸುವುದು ತಿಹಾರದಲ್ಲೂ ಸಾಮಾನ್ಯ. ಆದರೆ, ಹಿಂದೂ ಕೈದಿಗಳು ಅವರ ಜೊತೆ ಉಪವಾಸ ಮಾಡುವುದು ವಿಶೇಷ. ತಿಹಾರದಲ್ಲಿ ಈ ಚರ್ಯೆ ಹೊಸದೇನಲ್ಲ. ಆದರೆ, ಈ ವರ್ಷ ರಂಜಾನ್ ಆಚರಿಸಿ ಉಪವಾಸವಿರುವ ಹಿಂದೂ ಕೈದಿಗಳ ಸಂಖ್ಯೆ ಕಳೆದ ಸಲಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ, 150ಕ್ಕೆ ಏರಿದೆ. ಮುಸಲ್ಮಾನರೂ ಸೇರಿ 2,658 ಕೈದಿಗಳು ರೋಜಾ ಆಚರಿಸುತ್ತಿದ್ದಾರೆ. ಇವರಿಗಾಗಿ ವಿಶೇಷ ಏರ್ಪಾಡುಗಳನ್ನು ಮಾಡಲಾಗಿದೆ. ಕ್ಯಾಂಟೀನಿನಲ್ಲಿ ಖರ್ಜೂರ ಮತ್ತು ರೂಹ್ ಅಪ್ಝಾ ಮಾರಾಟಕ್ಕೆ ಇರಿಸಲಾಗಿದೆ. ಊಟದ ವೇಳೆಯನ್ನು ಬದಲಾಯಿಸಲಾಗಿದೆ.
ರೋಜಾ ಆಚರಿಸುತ್ತಿರುವ ಬಹುಪಾಲು ಹಿಂದೂ ಕೈದಿಗಳು ತಮ್ಮ ಮುಸಲ್ಮಾನ ಗೆಳೆಯರೊಡನೆ ಒಗ್ಗಟ್ಟು ಪ್ರದರ್ಶಿಸುವ ಕಾರಣವನ್ನು ನೀಡಿದ್ದಾರೆ. ದೇವರಿಗೆ ಪ್ರಾರ್ಥನೆ ಸಲ್ಲಿಸಿದರೆ ಬೇಗ ಜೈಲಿನಿಂದ ಬಿಡುಗಡೆಯಾಗುವ ಕಾರಣವನ್ನು ಕೆಲವರು ಮುಂದೆ ಮಾಡಿದ್ದಾರೆ.
ಈ ಚರ್ಯೆ ಏಕಮುಖ ಅಲ್ಲ. ಹಿಂದೂ ಹಬ್ಬ ನವರಾತ್ರಿಯ ಒಂಬತ್ತು ದಿನಗಳ ಉಪವಾಸವನ್ನು ಮುಸ್ಲಿಂ ಕೈದಿಗಳೂ ದೊಡ್ಡ ಸಂಖ್ಯೆಯಲ್ಲಿ ಆಚರಿಸುತ್ತಾರೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ಬಿಜೆಪಿಗೆ ವೋಟು ಹಾಕಿದವ ಬೆರಳು ಕತ್ತರಿಸಿಕೊಂಡ!

ಉತ್ತರ ಪ್ರದೇಶದ ಬುಲಂದಶಹರ ಲೋಕಸಭಾ ಕ್ಷೇತ್ರದಲ್ಲಿ ಆಕಸ್ಮಿಕವಾಗಿ ಕಮಲದ ಗುರುತಿನ ಗುಂಡಿ ಒತ್ತಿದ ಪವನಕುಮಾರ್ ಎಂಬ ದಲಿತ ಯುವಕ ಪ್ರಾಯಶ್ಚಿತ್ತವಾಗಿ ಶಾಯಿ ಹಚ್ಚಿದ ಬೆರಳಿನ ತುದಿಯನ್ನೇ ಕತ್ತರಿಸಿಕೊಂಡಿದ್ದಾನೆ. ಮೊದಲ ಸಲ ಮತದಾನ ಯಂತ್ರದಲ್ಲಿ ಮತ ಚಲಾಯಿಸಿದ ಈ ಯುವಕ, ಗೊಂದಲ ಗಡಿಬಿಡಿಯ ಕಾರಣ ದೊಡ್ಡ ‘ಅಪರಾಧ’ ಎಸಗಿದ್ದಾಗಿ ಹೇಳಿಕೊಂಡಿದ್ದಾನೆ. ಖುದ್ದು ಜಾಟವ (ಕರ್ನಾಟಕದಲ್ಲಿ ‘ಬಲಗೈ’ ದಲಿತ ಪಂಗಡ) ಜಾತಿಗೆ ಸೇರಿದ ಪವನ್, ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಕಟ್ಟಾ ಅನುಯಾಯಿ. ಮಹಾ ಮೈತ್ರಿಕೂಟದ ಅಭ್ಯರ್ಥಿಗೆ ಮತ ನೀಡುವುದು ಆತನ ಇರಾದೆಯಾಗಿತ್ತು. ಆದರೆ, ಅತ್ಯುತ್ಸಾಹದಲ್ಲಿ ಕಮಲದ ಗುರುತಿನ ಗುಂಡಿ ಒತ್ತಿಬಿಟ್ಟ. ಸಹಿಸಲಾಗಲಿಲ್ಲ, ಮನೆಗೆ ಬಂದವನೇ ಕುಡುಗೋಲಿನಿಂದ ಬೆರಳ ತುದಿಯನ್ನು ಕತ್ತರಿಸಿ ಹಾಕಿದೆ ಎಂದಿರುವ ಆತನ ವಿಡಿಯೋ ವೈರಲ್ ಆಗಿದೆ.
ಶಿಕಾರಪುರ ವಿಧಾನಸಭಾ ಕ್ಷೇತ್ರದ ಅಬ್ದುಲ್ಲಾಪುರ ಹುಲಸನ್ ಗ್ರಾಮದಲ್ಲಿ ಜಾಟವರೇ ಬಹುಸಂಖ್ಯಾತರು. ಆದರೆ, ‘ಸವರ್ಣೀಯ’ ರಜಪೂತರು ಮತ್ತು ಮೀಣಾಗಳ ವಸತಿಯಿಂದ ದೂರ ಊರ ಹೊರವಲಯದಲ್ಲಿ ಇವರ ವಾಸ. ರಜಪೂತರು ಮತ್ತು ಮೀಣಾಗಳು ಬಿಜೆಪಿ ಬೆಂಬಲಿಗರು. ಜಾಟವ ಕೇರಿ ಮಾಯಾವತಿ ನಿಷ್ಠ. ಮಗ ಬೆರಳು ಕತ್ತರಿಸಿಕೊಂಡ ಕಾರಣವನ್ನು ತಂದೆ-ತಾಯಿ ನಂಬುವುದಿಲ್ಲ. ನೀನು ನಿಜ ಯಾಕೆ ಹೇಳುತ್ತಿಲ್ಲ ಮಗಾ? ಮಾಯಾವತಿ ಅವರಿಗೆ ನಿಷ್ಠೆ ತೋರಿಸಲು ಎರಡೆರಡು ಸಲ ವೋಟು ಹಾಕಬೇಕಿತ್ತಲ್ಲವೇ ನಿನಗೆ, ಅದಕ್ಕಾಗಿ ಶಾಯಿ ಹಚ್ಚಿದ ಬೆರಳ ತುದಿ ಕತ್ತರಿಸಿಕೊಂಡೆಯಲ್ಲವೇ ಎಂದು ಚುಡಾಯಿಸಿದ್ದಾರೆ ತಾಯಿ ಶೀಲಾ ಮತ್ತು ತಂದೆ ಜೈಪಾಲ್ ಸಿಂಗ್. ಮೂರೂವರೆ ಬಿಘಾ ಜಮೀನಿನಲ್ಲಿ (ಒಂದು ಎಕರೆಗೆ ನಾಲ್ಕು ಬಿಘಾ) ಮುಸುಕಿನ ಜೋಳ ಮತ್ತು ಮೂಲಂಗಿ ಬೆಳೆಯುವ ಈ ಕುಟುಂಬದ ದೊಡ್ಡ ಸಮಸ್ಯೆ ಹೊಲ ನುಗ್ಗಿ ಮೇಯುವ ಬೀಡಾಡಿ ದನಗಳದು. ಅವುಗಳನ್ನು ಹೊಡೆದು ಅಟ್ಟಿಸುವಂತಿಲ್ಲ, ಗೋರಕ್ಷಕರ ಭಯ!
ಮೀಣಾ ಮತ್ತು ರಜಪೂತರ ವಸತಿಯ ಕತೆಯೇ ಬೇರೆ. ಇಲ್ಲಿನ ಒಂದೊಂದು ವೋಟೂ ಮೋದಿಗೇ. ಬೀಡಾಡಿ ದನಗಳ ಕಾಟ ಇವರಿಗೂ ಉಂಟು. ಆದರೆ, ಈ ದನಗಳನ್ನು ಮೋದಿ-ಯೋಗಿ ತಂದು ಬಿಡುತ್ತಿಲ್ಲವಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ. ಮೋದಿ ಮಾಡಿರುವ ಒಳ್ಳೆಯ ಕೆಲಸ ಗೊತ್ತಿದ್ದಿದ್ದರೆ ಪವನ್ ತನ್ನ ಬೆರಳು ಕತ್ತರಿಸಿಕೊಳ್ಳುತ್ತಿರಲಿಲ್ಲ ಎನ್ನುತ್ತಾರೆ.
ಕಛ್‌ನ ಮಾಲ್ಧಾರಿಗಳು- ಅಭಾವದ ಸುತ್ತ ಹೆಣೆದ ಸಂಸ್ಕೃತಿಯ ಅವನತಿ

ಮಾಲ್ಧಾರಿ ಎಂಬ ಅಲೆಮಾರಿ ಬುಡಕಟ್ಟು ಜನರ ಪಾರಂಪರಿಕ ಕಸುಬು ಪಶುಪಾಲನೆ. ಗುಜರಾತಿನ ಉಪ್ಪು ಮರುಭೂಮಿಯಾದ ಕಛ್ ರಣದ ಅಂಚಿನ 2,000 ಚದರ ಕಿಮೀ ಉದ್ದಗಲದ ಮರುಭೂಮಿಯ ಕುರುಚಲು ಹುಲ್ಲುಗಾವಲಿನಲ್ಲಿ ಹಬ್ಬಿರುವ 51 ಗ್ರಾಮಗಳು ಇವರು ಬಾಳಿ ಬದುಕಿರುವ ಸೀಮೆ. ಜನಸಂಖ್ಯೆ 18 ಸಾವಿರ. ಮಾಲ್ಧಾರಿಗಳಲ್ಲಿ ಹಿಂದುಗಳೂ ಉಂಟು, ಮುಸಲ್ಮಾನರೂ ಇದ್ದಾರೆ. ಮುಸಲ್ಮಾನರು ಗೋಪೂಜೆ ಮಾಡುತ್ತಾರೆ. ಗಣೇಶನ ಹಬ್ಬ ಆಚರಿಸುತ್ತಾರೆ. ಖವ್ವಾಲಿಯಷ್ಟೇ ಅಲ್ಲದೆ ಭಜನೆಯನ್ನೂ ಮಾಡುತ್ತಾರೆ. ಗುಜರಾತಿನ ಕೋಮು ದಂಗೆಗಳ ಬಿಸಿ ಮಾಲ್ಧಾರಿಗಳನ್ನು ತಟ್ಟಲಿಲ್ಲ. ವಿಶಿಷ್ಟ ಸಮೃದ್ಧ ಸಂಸ್ಕೃತಿ, ಸಾಹಿತ್ಯ, ಪರಂಪರೆಯ ಇತಿಹಾಸ ಅವರದು. ಎಮ್ಮೆ, ಎತ್ತು, ಹಸುಗಳ ಅತ್ಯುತ್ತಮ ತಳಿಗಳನ್ನು ರೂಪಿಸಿರುವ ಮಾಲ್ಧಾರಿಗಳು ಹಸುಗಳು ಮತ್ತು ಎಮ್ಮೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ.
ಅಭಾವದ ಸುತ್ತ ಹೆಣೆದ ಸಂಸ್ಕೃತಿ ಇವರದು. ಬರಗಾಲ ಇವರ ನಿತ್ಯ ಅತಿಥಿ. ನೂರು ವರ್ಷಗಳಲ್ಲಿ 57 ಬರಗಾಲಗಳು. ಕೆಲವು ತೀವ್ರ, ಇನ್ನು ಕೆಲವು ಸಾಧಾರಣ ಸ್ವರೂಪದವು. ಈ ಸಲ ಮಳೆಯ ಮುಖ ಕಂಡು ಜೂನ್ ತಿಂಗಳಿಗೆ ವರ್ಷ ತುಂಬಲಿದೆ. ಬರಗಾಲದ ಹೊಡೆತಕ್ಕೆ ಬನ್ನಿ ಸೀಮೆ ತತ್ತರಿಸಿದೆ. ಅಭಾವದ ಸುತ್ತ ಕಟ್ಟಿದ ಸಂಸ್ಕೃತಿಯಲ್ಲವೇ? ಮತ್ತೆ ತತ್ತರ ಯಾಕೆ?
ಭುಜ್‌ನಿಂದ ಬರುವ ಕೊಳಾಯಿ ನೀರು, ಪಂಜಾಬಿನಿಂದ ಪೂರೈಕೆ ಆಗುವ ಮೇವು, ಹುಲ್ಲುಗಾವಲನ್ನು ಆಕ್ರಮಿಸಿರುವ ಹುಚ್ಚು ಬಬೂಲ್‌ನಿಂದ ದೊರೆಯುವ ಇದ್ದಿಲಿನ ಆದಾಯದಂತಹ ಅಂಶಗಳು ಈ ಜನಜೀವನದ ಕೆಚ್ಚಿನ ಮೊನಚನ್ನು ಕಿತ್ತುಕೊಂಡಿವೆ. ಅಂತರ್ಜಲ ಮತ್ತು ಮಳೆನೀರಿನ ಕೊಯ್ಲು ಪದ್ಧತಿ ಗತಿಸಿಹೋಗಿದೆ. ಕೊಳಗಳು, ಸರೋವರಗಳನ್ನು ಜೀವಂತ ಇರಿಸುವ ಚೈತನ್ಯ ನಾಶವಾಗಿದೆ. ಜಂಗಮರಾಗಿದ್ದ ಅಲೆಮಾರಿ ಮಾಲ್ಧಾರಿಗಳು ಇದೀಗ ಸ್ಥಾವರ. ಅಳಿವು ಯಾರದು?
ಹೊಸ ಹೆಸರು ಧರಿಸಲಿವೆ ದೆಹಲಿಯ ‘ಹರಿಜನ’ ಬಸ್ತಿಗಳು

ಒಂದು ಅಂದಾಜಿನ ಪ್ರಕಾರ, ದೇಶದ ರಾಜಧಾನಿ ದೆಹಲಿಯಲ್ಲಿ 500-600 ಹರಿಜನ ಬಸ್ತಿಗಳಿವೆ. ಈಗಲೂ ಅವುಗಳನ್ನು ಹರಿಜನ ಬಸ್ತಿಗಳು ಎಂದೇ ಕರೆಯಲಾಗುತ್ತದೆ. ‘ಹರಿಜನ ಬಸ್ತಿ’ಯನ್ನು ವಿಳಾಸದಲ್ಲಿ ನಮೂದಿಸಲೇಬೇಕಾದ ಮುಜುಗರ ಈ ಬಸ್ತಿಗಳ ಯುವ ತಲೆಮಾರನ್ನು ಹಿಂಡಿ ಕಾಡುತ್ತಿದೆ. ಹೆಸರಿನ ಮುಂದಿನ ಅಡ್ಡ ಹೆಸರು- ಕುಲನಾಮವನ್ನು ಕೈಬಿಟ್ಟು ಜಾತಿ ವ್ಯವಸ್ಥೆಯ ಕ್ರೌರ್ಯದಿಂದ ತುಸುಮಟ್ಟಿಗೆ ಪಾರಾಗಬಹುದು. ಆದರೆ ವಿಳಾಸವನ್ನು ಬದಲಿಸಲಾದೀತೇ?
ಅರವಿಂದ್ ಕೇಜ್ರಿವಾಲ್ ಅವರ ಆಪ್ ಸರ್ಕಾರ ಈ ಬಸ್ತಿಗಳ ಮರುನಾಮಕರಣಕ್ಕೆಮುಂದಾಗಿದೆ. ಹರಿಜನ ಪದವನ್ನು ಟಂಕಿಸಿದಾತ ಗುಜರಾತಿನ 15ನೆಯ ಶತಮಾನದ ಗುಜರಾತಿ ಸಂತ ಕವಿ ನರಸೀ ಮೆಹ್ತಾ. ದೇವದಾಸಿಯರ ಮಕ್ಕಳನ್ನು ಕರೆಯಲು ಬಳಸಿದ ಪದವಿದು. ಬಹಳ ಜನರಿಗೆ ಈ ಹಿನ್ನೆಲೆ ತಿಳಿದಿಲ್ಲ. 1931ರಲ್ಲಿ ಗಾಂಧೀಜಿ ದಲಿತರನ್ನು ಹರಿಜನರೆಂದು (ದೇವರ ಮಕ್ಕಳು) ಕರೆದು ಈ ಪದವನ್ನು ‘ಜನಪ್ರಿಯ’ಗೊಳಿಸಿದರು. ಅಲ್ಲಿಯ ತನಕ ಅಸ್ಪೃಶ್ಯರೆಂದೇ ದಲಿತರನ್ನು ಕರೆಯಲಾಗುತ್ತಿತ್ತು. ಬಾಬಾಸಾಹೇಬ ಅಂಬೇಡ್ಕರ್ ಹರಿಜನ ಪದ ಬಳಕೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಹರಿಜನ ಪದದ ಮೂಲ ಅರ್ಥ ತಂದೆ ಯಾರೆಂದು ತಿಳಿಯದ ದೇವದಾಸಿ ಸಂತಾನವೆಂದು ಹೆಚ್ಚು ಮಂದಿಗೆ ಗೊತ್ತಾದಂತೆ ವಿರೋಧವೂ ವ್ಯಾಪಕಗೊಂಡಿತು. ದಲಿತ ಆಂದೋಲನಗಳು ಈ ಕುರಿತು ಅರಿವು ಮೂಡಿಸಿದವು. 1950 ಮತ್ತು 1960ರ ದಶಕಗಳಲ್ಲಿ ದೆಹಲಿಯಲ್ಲಿ ತಲೆಯೆತ್ತಿದ ದಲಿತ ಕಾಲೊನಿಗಳಿಗೆ ಆಯಾ ದಲಿತ ಉಪಜಾತಿಯ ಹೆಸರುಗಳನ್ನು ಇರಿಸಲಾಯಿತೇ ವಿನಾ ಹರಿಜನ ಬಸ್ತಿ ಎಂದು ಕರೆಯಲಿಲ್ಲ. ದಲಿತ ಜನಸಂಖ್ಯೆ ದಟ್ಟವಾಗಿರುವ ಕರೋಲ್ ಬಾಗ್‌ನಲ್ಲಿ ಹರಿಜನ ಬಸ್ತಿಯ ಹೆಸರು ಮಾಯವಾಗಿರುವುದರ ಹಿನ್ನೆಲೆ ಇದೇ ಆಗಿದೆ ಎನ್ನುತ್ತಾರೆ ಜೆಎನ್‌ಯು ಸಮಾಜಶಾಸ್ತ್ರದ ಪ್ರೊಫೆಸರ್ ವಿವೇಕ್ ಕುಮಾರ್.
ಕಳೆದ ಮೂವತ್ತು ವರ್ಷಗಳಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸಗಢ ಮುಂತಾದ ಅನೇಕ ರಾಜ್ಯಗಳಲ್ಲಿ ಹರಿಜನ ಬಸ್ತಿ ಪದ ಬಳಕೆ ನಿಲ್ಲಿಸಿ ಹೊಸ ಹೆಸರಿಡಲಾಗಿದೆ. ಆದರೆ, ಆ ಹೊಸ ಹೆಸರುಗಳು ಕೂಡ ಬಹುತೇಕ ದಲಿತ ಪ್ರತೀಕಗಳೇ ಆಗಿವೆ. ಹೀಗಾಗಿ, ಆ ವಸತಿಯಿಂದ ಬಂದ ವ್ಯಕ್ತಿಯನ್ನು ಜಾತಿಯಿಂದ ಗುರುತಿಸುವುದು ಈಗಲೂ ಸುಲಭವೇ ಆಗಿದ್ದು, ಜಾತಿವ್ಯವಸ್ಥೆಯ ಕಳಂಕದಿಂದ ಆ ನಿವಾಸಿಗಳು ಬಿಡುಗಡೆ ದೊರೆತಿಲ್ಲ. ಹೀಗಾಗಿ, ದೆಹಲಿಯಲ್ಲಿ ಬೇರೆ ಹೆಸರುಗಳನ್ನೇ ಇಡುವ ಆಲೋಚನೆ ನಡೆದಿದೆ.
ಅಂಕಣಕಾರರು ಹಿರಿಯ ಪತ್ರಕರ್ತರು