ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಿಸಲಾಗುತ್ತಿದೆ. ಗೃಹ ಮಂತ್ರಿಗಳಾದ ಅಮಿತ್ ಶಾ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ದೇಶದ ಭಾಷಾ ವೈವಿಧ್ಯತೆಯ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಆದರೆ ವಿದೇಶಿ ಭಾಷೆಯ ಆಕ್ರಮಣ ತಡೆಯಲು ಇಡೀ ದೇಶಕ್ಕೆ ಒಂದು ಭಾಷೆ ಬೇಕು ಎಂಬ ವಾದವನ್ನು ಎಂದಿನಂತೆ ಒತ್ತಿ ಹೇಳಿದ್ದಾರೆ.
ನಿಜಕ್ಕೂ ಇದು ಕೇವಲ ಭಾಷೆಯ ರಾಜಕಾರಣವೇ? ಹಿಂದಿಯೇತರ ರಾಜ್ಯಗಳವರಾದ ನಾವು ಅತಿಯಾಗಿ ಪ್ರತಿಕ್ರಿಯಿಸುತ್ತಿದ್ದೇವಾ? ಸಾವಿರಾರು ಭಾಷೆಗಳಿರುವ ದೇಶದಲ್ಲಿ ಒಂದು ಭಾಷೆಯನ್ನು ಒಪ್ಪಿಕೊಳ್ಳುವುದು ಹೇಗೆ? ನಾವು ಹಿಂದಿ ಹೇರಿಕೆಯನ್ನು ಅಷ್ಟು ಗಂಭೀರವಾಗಿ ಪರಿಗಣಿಸಲು ಅದು ಕೇವಲ ಭಾಷಾ ರಾಜಕೀಯ ಎಂಬ ಕಾರಣಕ್ಕಲ್ಲ. ಅಸಮವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಶಕ್ತಿಯನ್ನು ಬಳಸಿಕೊಂಡು ದೇಶಾದ್ಯಂತ ತಮ್ಮ ಹಾದಿಯನ್ನು ವಿಸ್ತರಿಸಲು, ಆ ಮೂಲಕ ಅಧಿಕಾರವನ್ನು ಆನಂದಿಸಲು ಅತ್ಯಂತ ಎಚ್ಚರಿಕೆಯಿಂದ ರಚಿಸಲಾದ ವಿನ್ಯಾಸವಾಗಿ ಕಾಣಿಸುತ್ತಿದೆ. ಭಾರತೀಯರನ್ನು ಒಂದು ರೀತಿಯಲ್ಲಿ ಯೋಚಿಸಲು, ಒಂದು ರೀತಿಯಲ್ಲಿ ಮತ ಚಲಾಯಿಸಲು, ಒಂದು ಜೀವನ ವಿಧಾನಕ್ಕೆ ಒಗ್ಗಿಕೊಳ್ಳುವಂತೆ ಮಾಡಲು ಬಹಳ ಮುಖ್ಯ ಸಾಧನವನ್ನಾಗಿ ಈ ಹಿಂದಿ ಅಸ್ತ್ರವನ್ನು ಬಳಸಲಾಗುತ್ತಿದೆ.
ಈ ಮೂಲಕ ಹಿಂದಿ ಭಾಷಿಕರ ವ್ಯಾಪ್ತಿಯ ಅಧಿಕಾರ ಇಡೀ ರಾಷ್ಟ್ರಕ್ಕೆ ವಿಸ್ತರಿಸಬಹುದು ಎಂಬುದು ಇದರ ಹಿಂದಿರುವ ಉದ್ದೇಶ. ಸೆಪ್ಟೆಂಬರ್ ಬಂತೆಂದರೆ ಕೇಂದ್ರ ಸರ್ಕಾರದಡಿ ಬರುವ ಎಲ್ಲ ಸಂಸ್ಥೆಗಳ ಎಲ್ಲ ಶಾಖೆಗಳಲ್ಲೂ ಹಿಂದಿ ಪಕವಾಡ ವಿಜೃಂಭಣೆಯಿಂದ ನಡೆಯುತ್ತದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೂ, ವಡೋದರಾದಿಂದ ಹಿಡಿದು ಅಗರ್ತಲಾವರೆಗೂ ದೇಶದ ಮೂಲೆಮೂಲೆಗಳಲ್ಲಿರುವ ಎಲ್ಲ ಶಾಖೆಗಳಲ್ಲೂ ಈ ಹಿಂದಿ ಸಂಭ್ರಮಾಚರಣೆ ಕಡ್ಡಾಯವಾಗಿ ನಡೆಯಲೇಬೇಕು ಹಾಗು ಅದರ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತೆ. ಕೇಂದ್ರ ಸರ್ಕಾರ ಹಿಂದಿಯನ್ನು ಇಷ್ಟು ಸಡಗರದಿಂದ ಆಚರಿಸುತ್ತಲ್ಲಾ, ಭಾರತದ ಇತರ ನುಡಿಗಳನ್ನು ಹೇಗೆ ಆಚರಿಸುತ್ತೆ? ಹೇಗೆ ಆಚರಿಸುತ್ತೆ ಅಂತ ಕೇಳುವುದೇ ಅಸಂಬದ್ಧ, ಏಕೆಂದರೆ ಕೇಂದ್ರ ಕಛೇರಿಗಳಲ್ಲಿ ಬೇರೆ ನುಡಿಗಳನ್ನು ಆಚರಿಸುವುದೇ ಇಲ್ಲ. ಹದಿನೈದು ದಿನಗಳು ಬೇಡ, ಒಂದು ದಿನವಾದರೂ ಆಚರಿಸಬಹುದಲ್ಲಾ? ಹೋಗಲಿ, ಆಯಾ ರಾಜ್ಯದ ಭಾಷೆಗಳನ್ನು ಆಯಾ ರಾಜ್ಯಗಳಲ್ಲಿ ಆಚರಿಸಬಹುದಲ್ಲಾ? ಉಹೂಂ! ಮಹಾರಾಷ್ಟ್ರ ದಿವಸದ ಅಂಗವಾಗಿ ಮಹಾರಾಷ್ಟ್ರದ ಕಛೇರಿಗಳಲ್ಲಿ ಮರಾಠಿಯನ್ನು ಆಚರಿಸಬೇಕೆಂದರೆ ಅಲ್ಲಿ ಕೆಲಸ ಮಾಡುವ ಮರಾಠಿಗರೇ ಕೈಯಿಂದ ದುಡ್ಡು ಹಾಕಿ ಆಚರಿಸಬೇಕು, ಕೇಂದ್ರ ಸರ್ಕಾರ ಒಂದು ಪೈಸೆಯನ್ನೂ ಖರ್ಚು ಮಾಡೋಲ್ಲ. ಕರ್ನಾಟಕದ ಕಛೇರಿಗಳಲ್ಲಿ ಕನ್ನಡದ ಆಚರಣೆಗೂ, ಪಶ್ಚಿಮ ಬಂಗಾಳದಲ್ಲಿ ಬೆಂಗಾಲಿ ಆಚರಣೆಗೂ, ಹಿಂದೀಯೇತರ ಎಲ್ಲ ಭಾಷೆಗಳಿಗೂ ಇದೇ ಪರಿಸ್ಥಿತಿ.

ಇವೆಲ್ಲವನ್ನೂ ಹೇಳಿದಾಗ ಕೆಲವರ ವಾದ ಹೀಗಿರುತ್ತೆ. ಕನ್ನಡವನ್ನು ಆಚರಿಸಬೇಕಿರೋದು ಕರ್ನಾಟಕ ಸರ್ಕಾರ. ಮರಾಠಿಯನ್ನು ಆಚರಿಸಬೇಕಿರೋದು ಮಹಾರಾಷ್ಟ್ರ ಸರ್ಕಾರ. ಹೀಗಿರುವಾಗ, ನೀವು ಕೇಂದ್ರ ಸರ್ಕಾರದಿಂದ ಪ್ರತಿ ಭಾಷೆಯ ಆಚರಣೆಯನ್ನು ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ? ಇವರಿಗೆ ನಾನು ಕೇಳೋದು ಒಂದೇ ಪ್ರಶ್ನೆ. ಕನ್ನಡಕ್ಕೆ ಒಂದೇ ರಾಜ್ಯವಿರೋದು. ಮರಾಠಿ-ಗುಜರಾತಿ-ತಮಿಳಿಗೂ ಅಷ್ಟೇ. ಆದರೂ ನೀವು ಈ ಭಾಷೆಗಳ ಜವಾಬ್ದಾರಿ ಆಯಾ ರಾಜ್ಯಗಳ ಮೇಲಿದೆ ಅನ್ನುತ್ತೀರಿ. ಆದರೆ, ಹಿಂದಿಗೆ ಹತ್ತು ರಾಜ್ಯಗಳಿದ್ದರೂ ನಿಮಗೇಕೆ ಅದರ ಆಚರಣೆಗೆ ಕೇಂದ್ರ ಸರ್ಕಾರವವಷ್ಟೇ ಜವಾಬ್ದಾರಿ ಅನಿಸುತ್ತೆ? ಹತ್ತು ರಾಜ್ಯಗಳಿದ್ದರೂ ಹಿಂದಿ ಬೆಳೆಸಲು ಕೇಂದ್ರ ಬೇಕು, ಒಂದೇ ರಾಜ್ಯವಿದ್ದರೂ ಭಾರತದ ಬೇರೆ ಭಾಷೆಗಳ ಬಗ್ಗೆ ಕೇಂದ್ರ ತಲೆಕೆಡಿಸಿಕೊಳ್ಳಲೂ ಬಾರದು. ಆಹಾ ಅದ್ಭುತ!
ಈ ವಿಷಯದಲ್ಲಿ ಅನ್ಯಾಯವನ್ನು ಸರಿಪಡಿಸಲು ಕೇಂದ್ರಕ್ಕೆ ಎರಡು ದಾರಿಗಳಿವೆ. ಒಂದು – ಎಲ್ಲ ಭಾಷೆಗಳನ್ನೂ ಆಚರಿಸೋದು. ಎರಡು – ಎಲ್ಲ ಭಾಷೆಗಳ ಆಚರಣೆಯನ್ನು ಆಯಾ ರಾಜ್ಯಗಳಿಗೆ ಬಿಟ್ಟು ಬೇರೆ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದು. ಇದು ನಮ್ಮ ದೇಶದಲ್ಲಿನ ಭಾಷಾ ಅಸಮಾನತೆಯ ಒಂದು ಸಣ್ಣ ಉದಾಹರಣೆಯಷ್ಟೆ. ಸೂಕ್ಷ್ಮವಾಗಿ ಗಮನಿಸಿದರೆ, ಇವೆಲ್ಲದರ ಹಿಂದಿರುವ ಮೂಲ ಸಮಸ್ಯೆ – ನಮ್ಮ ದೇಶದ ಭಾಷಾ ನೀತಿ. ಅದರಿಂದಾಗಿ ಭಾರತದ ಇತರ ನುಡಿಗಳಿಗೆ, ಅವುಗಳನ್ನು ಮಾತಾಡುವ ಬಹುಪಾಲು ಭಾರತೀಯರಿಗೆ ಎಷ್ಟು ಅನ್ಯಾಯವಾಗುತ್ತಿದೆ ಅನ್ನೋದನ್ನು ಗಮನಿಸಲು ಶುರು ಮಾಡಿ, ಕ್ರಮೇಣ ನಿಮಗೆ ಗೊತ್ತಾಗುತ್ತಾ ಹೋಗುತ್ತೆ.
ಕೇಂದ್ರ ಸರ್ಕಾರ ಭಾರತೀಯರೆಲ್ಲರನ್ನೂ ಪ್ರತಿನಿಧಿಸುವುದೇ ಹೊರತು, ಒಂದು ಜನಾಂಗವನ್ನಲ್ಲ.
ಕೇಂದ್ರ ಖರ್ಚು ಮಾಡುವ ದುಡ್ಡು ಭಾರತದೆಲ್ಲೆಡೆಯಿಂದ ಬರುತ್ತೆ ಹೊರತು ಒಂದು ಪ್ರಾಂತ್ಯದಿಂದಲ್ಲ. ಜಾತಿ, ಮತ, ಪ್ರಾಂತ್ಯ, ಭಾಷೆ ಇತ್ಯಾದಿ ವಿಚಾರಗಳಲ್ಲಿ ಸಮಾನತೆಯನ್ನು ಎತ್ತಿ ಹಿಡಿಯಬೇಕಿರುವ ಸರ್ಕಾರ ಭಾಷೆಯ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಧೋರಣೆಯನ್ನು ಮುಂದುವರೆಸಿಕೊಂಡು ಹೋಗೋದು “ನಮ್ಮದು ಸಮಾನತೆಯ ಪ್ರತೀಕವಾದ ರಾಷ್ಟ್ರ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಮಗೆ ಶೋಭೆಯನ್ನು ತರೋದಿಲ್ಲ. ಯಾವ ಪಕ್ಷ ಸ್ವಾತಂತ್ರದಲ್ಲಿ ಪಾಲ್ಗೊಂಡಿತ್ತು – ಯಾವ ಪಕ್ಷ ಪಾಲ್ಗೊಂಡಿರಲಿಲ್ಲ, ಯಾವ ದೇಶ ನರಕದ ಹಾಗಿದೆ –ಯಾವ ದೇಶ ಸ್ವರ್ಗದ ಹಾಗಿದೆ, ಈ ರೀತಿ ಹಿಂದೆ ನಡೆದುಹೋಗಿರುವ/ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಮೂರು ಹೊತ್ತೂ ಚರ್ಚಿಸುವ ಬದಲು ಹೇಗೆ ನಮ್ಮ ದೇಶವನ್ನು ತನ್ನೆಲ್ಲ ಭಾಷೆ-ಜನಾಂಗಗಳಿಗೆ ಸಮಾನ ಒತ್ತನ್ನು ಕೊಡುವ, ಜಾತಿ-ಮತ-ಪಕ್ಷ ಬಿಟ್ಟು ಅಭಿವೃದ್ಧಿಪರ ಚಿಂತನೆಗಳನ್ನು ನಡೆಸುವ ಇನ್ನೂ ಒಳ್ಳೆಯ ದೇಶವನ್ನಾಗಿಸೋದು ಅನ್ನುವುದರ ಬಗ್ಗೆ ಹೆಚ್ಚು ಚರ್ಚಿಸಬೇಕಿದೆ.

ಭಾರತೀಯತೆಗಾಗಿ ತಮ್ಮತನವನ್ನು ಸ್ವಲ್ಪವೂ ಬದಿಗಿಡಬೇಕಿಲ್ಲ ಅನ್ನೋದು ಭಾರತೀಯರಿಗೆ, ಅದರಲ್ಲೂ ಹಿಂದೀಯೇತರ ನುಡಿಗಳನ್ನು ಮಾತಾಡುವ ಭಾರತೀಯರಿಗೆ, ಆದಷ್ಟು ಬೇಗ ಅರಿವಾಗಬೇಕಿದೆ. ಇದಾದರೆ, ಎಲ್ಲರೂ ಒಗ್ಗೂಡಿ ಕೇಂದ್ರದ ಮೇಲೆ ಸಾಮಾಜಿಕ ಹಾಗೂ ರಾಜಕೀಯ ಒತ್ತಡ ಹಾಕಿ ಭಾಷಾನೀತಿಯನ್ನು ಬದಲಿಸಬಹುದು. ಎಲ್ಲಿಯವರೆಗೆ ನಾವು ಯಾರೋ ಹುಟ್ಟುಹಾಕಿರುವ ಹುಸಿ ಭಾರತೀಯತೆಯ ಚಿತ್ರಣವನ್ನು ನಂಬಿ, ಅದನ್ನು ಪಾಲಿಸುವ ಸಲುವಾಗಿ ನಮ್ಮತನವನ್ನೇ ಬದಿಗಿಡಲು ಒಪ್ಪುತ್ತಿರುತ್ತೇವೋ, ಅಲ್ಲಿಯವರೆಗೂ ಭಾಷಾ-ಜನಾಂಗೀಯ ಅಸಮಾನತೆಗೆ ನಾವೇ ಪರೋಕ್ಷವಾಗಿ ಬೆಂಬಲಿಸುತ್ತಿರುತ್ತೇವೆ.

ಭಾರತಾಂಬೆ ತನ್ನ ಮೇಲಿರುವ ಪ್ರೀತಿಯನ್ನು ತೋರಿಸಲು ಕನ್ನಡಾಂಬೆಯ ಮೇಲಿರುವ ಪ್ರೀತಿಯನ್ನು ಬದಿಗಿಡು ಎಂದು ಹೇಳುವಷ್ಟು ಬಾಲಿಶವಾದ ಸ್ವಭಾವನ್ನು ಹೊಂದಿರುವವಳಲ್ಲ ಅನ್ನುವ ಸ್ಪಷ್ಟ ನಂಬಿಕೆ ಕನ್ನಡಿಗರಲ್ಲಿ ಮೂಡಿದರೆ, ಯಾವ ರಾಜಕೀಯ ಶಕ್ತಿಗಳಿಗೂ ನಮಗೆ ಮೋಸ ಮಾಡಲು ಆಗೋದಿಲ್ಲ. ಅದಕ್ಕಾಗಿಯೇ ದೆಹಲಿಯಿಂದ ಇಲ್ಲಿಯವರ ಮೂಲಕ ನಮ್ಮನ್ನಾಳುತ್ತಿರುವ ರಾಷ್ಟ್ರೀಯ ಪಕ್ಷಗಳು, ನಮ್ಮಲ್ಲಿ ಈ ನಂಬಿಕೆ ಮೂಡದಿರುವ ಹಾಗೆ ನೋಡಿಕೊಳ್ಳುತ್ತಿವೆ, ಮುಂದೂ ನೋಡಿಕೊಳ್ಳಲು ಯತ್ನಿಸುತ್ತಿರುತ್ತವೆ. ಈ ಪಿತೂರಿಯನ್ನು ಎಷ್ಟು ಬೇಗ ನಾವು ಕಂಡುಹಿಡಿಯುತ್ತೀವೋ, ಅಷ್ಟು ನಮಗೇ ಒಳ್ಳೇದು. ಕನ್ನಡದ ಬಗ್ಗೆ ಬರೀ ಹಾಗೆ ಹೀಗೆ ಎಂದು ಸಿನಮೀಯ ಡೈಲಾಗುಗಳನ್ನು ಹೊಡೆಯುವ ಬದಲು ನಾವು ಸ್ವಂತ ಬುದ್ಧಿವಂತಿಕೆಯನ್ನು ಬಳಸಿ ಇವೆಲ್ಲದರ ಅರಿಮೆಯ ಕಡೆಗೆ ಸಾಗಬೇಕಿದೆ.
ಹಿಂದಿ ಹೇರಿಕೆಗೆ ನಮ್ಮ ಪ್ರತಿರೋಧವು ಕ್ಷುಲ್ಲಕವಾಗಿ ಕಾಣಿಸಬಹುದು. ಒಂದು ವೇಳೆ ಹಿಂದಿ ಹೇರಿಕೆಯನ್ನು ಸಹಿಸಿಕೊಂಡರೆ, ಹಿಂದಿ ಭಾಷಿಕರಾದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳು ತಮ್ಮ ತಾಯ್ನಾಡಿನಲ್ಲಿಯೂ ಅವಕಾಶ ವಂಚಿತರಾಗುತ್ತಾರೆ. ಆದರೆ ಹಿಂದಿ ಭಾಷಿಕರಿಗೆ ದೇಶಾದ್ಯಂತ ಅವಕಾಶಗಳು ಸೃಷ್ಟಿಯಾಗುತ್ತವೆ! ಇನ್ನೊಂದೆಡೆ ಹಿಂದಿ ಭಾಷಿಕರು ಈ ಬೆಳವಣಿಗೆಯಿಂದ ಸೋಮಾರಿಯಾಗಲು ಅವಕಾಶ ಮಾಡಿಕೊಡುತ್ತದೆ ಮತ್ತು ಮಾನವ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ಯಾವುದೇ ಕಾಳಜಿ ಇಲ್ಲದ ಪ್ರತಿಗಾಮಿ ರಾಜಕಾರಣದಲ್ಲಿ ತೊಡಗಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ.
ಈ ಹೇರಿಕೆಗೆ ಪ್ರತಿರೋಧ ವ್ಯಕ್ತಪಡಿಸುತ್ತಿರುವುದು ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದು, ಸ್ವಾಭಿಮಾನವನ್ನು ಎತ್ತಿಹಿಡಿಯುವುದು ಮತ್ತು ಜೀವನ ಮಾರ್ಗಗಳು ರಕ್ಷಿಸಿಕೊಳ್ಳುವುದು, ನಮ್ಮ ಜನರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಉಳಿಸಿಕೊಳ್ಳುವುದು ಹಾಗೂ ನಮ್ಮ ಪೂರ್ವಜರು ಕಂಡುಕೊಂಡ ಭಾರತದ ಕಲ್ಪನೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ! ಹಾಗಾಗಿ ಖಂಡಿತವಾಗಿಯೂ ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ!
ಅವಿವೇಕಿ ಭಾಷಾ ರಾಜಕಾರಣದ ಬಗ್ಗೆ ನಾವು ಯಾಕೆ ಅನಗತ್ಯವಾಗಿ ಚಿಂತೆ ಮಾಡುತ್ತೇವೆ ಎಂಬ ಭಾಷಣಗಳು ನಮ್ಮ ಪ್ರತಿರೋಧವನ್ನು ಕ್ಷೀಣಿಸುತ್ತದೆ. ಈ ಕೆಟ್ಟ ಕಾರ್ಯಸೂಚಿಯ ಗಂಭೀರತೆ ನಮಗೆ ಮನವರಿಕೆಯಾಗಿದ್ಧು, ನಾವು ಇದರ ವಿರುದ್ಧ ಎಲ್ಲ ಸ್ವಾಭಿಮಾನಿ ಭಾರತೀಯರಂತೆ ಹೋರಾಟ ನಡೆಸುತ್ತೇವೆ.
ಹಿಂದಿ ಮಾತನಾಡುವ ಜನರಿಗೆ ಶುಭಾಶಯಗಳು. ನಮ್ಮ ಪ್ರತಿರೋಧ, ನಮ್ಮ ಗುರುತನ್ನು ಕೊಲ್ಲುವ, ನಮ್ಮ ವೈವಿಧ್ಯತೆಯನ್ನು ಅಳಿಸಿ ಹಾಕುವ ಹಾಗೂ ನಮ್ಮ ವೈವಿಧ್ಯಮಯ ರಾಷ್ಟ್ರವನ್ನು ಏಕರೂಪಗೊಳಿಸುವ ಪ್ರಯತ್ನ ವಿರುದ್ಧವಾಗಿದೆಯೇ ಹೊರತು, ನಿಮ್ಮ ಬಗ್ಗೆ ಅಲ್ಲ.