ದೆಹಲಿ ಕುಂಬಾರರ ಕತೆ- ದೇಶದ ಕುಂಬಾರಿಕೆಯ ವ್ಯಥೆ
ಪಶ್ಚಿಮ ದೆಹಲಿಯ ಉತ್ತಮನಗರ ಪ್ರದೇಶದಲ್ಲೊಂದು ಕುಂಬಾರ ಗ್ರಾಮ ಉಂಟು. ಅದನ್ನು ಕುಂಬಾರ ಕಾಲನಿ ಎಂದೇ ಕರೆಯುತ್ತಾರೆ. ಬಹುತೇಕರು ನೆರೆಯ ಹರಿಯಾಣ ಮತ್ತು ರಾಜಸ್ತಾನದವರು. 1968ರಲ್ಲಿ ಇವರಿಗೆ ಇಲ್ಲಿ ನಿವೇಶನಗಳನ್ನು ಹಂಚಿಕೊಡಲಾಗಿತ್ತು. ದೇಶದ ಅತಿದೊಡ್ಡ ಕುಂಬಾರರ ಕಾಲನಿಯಿದು. 400ಕ್ಕೂ ಹೆಚ್ಚು ಮನೆಗಳು. ಮುಖ್ಯಬೀದಿಯಲ್ಲಿ ಮಡಿಕೆ ಕುಡಿಕೆ ಹೂಜಿ ಕುಂಡ, ಬೋಗುಣಿ, ಹಾಗೂ ಮಣ್ಣಿನ ಕಲಾಕೃತಿಗಳ ಅಂಗಡಿಗಳು. ಓಣಿಗಳಲ್ಲಿ ಕುಂಬಾರಿಕೆಯ ಕಮ್ಮಟಗಳು.
ರಾಷ್ಟ್ರಪ್ರಶಸ್ತಿ ಪಡೆದ ಕುಂಬಾರಿಕೆ ಕಲಾವಿದರೂ ಇಲ್ಲಿದ್ದಾರೆ. ಆದರೆ ಬಹುತೇಕರು ಹೊಸತನ, ಹೊಸ ತಂತ್ರಜ್ಞಾನ, ವಿನ್ಯಾಸಗಳನ್ನು ಕಲಿಯಲು ಆಸಕ್ತಿ ತೋರುತ್ತಿಲ್ಲ. ಮಾರುಕಟ್ಟೆಯ ಸ್ಪರ್ಧೆಗೆ ತಮ್ಮನ್ನು ಒಡ್ಡಿಕೊಳ್ಳಲಾರದೆ ಸೋಲುತ್ತಿದ್ದಾರೆ. ಶೇ. 40ರಷ್ಟು ಮನೆಗಳು ಈಗಾಗಲೆ ಕುಂಬಾರಿಕೆಯನ್ನು ಬಿಟ್ಟುಕೊಟ್ಟಿವೆ. ಜೀವನಯಾಪನೆಗೆ ಎಷ್ಟೋ ಮಂದಿ ಸೈಕಲ್ ರಿಕ್ಷಾ ತುಳಿಯುತ್ತಿದ್ದಾರೆ. ಅವರ ಮಕ್ಕಳು ಮರಿಗಳು ಡ್ರೈವರ್, ಮೆಕ್ಯಾನಿಕ್, ಎ. ಸಿ. ದುರಸ್ತಿ ಇತ್ಯಾದಿ ಕೆಲಸಗಳನ್ನು ಅವಲಂಬಿಸುತ್ತಿದ್ದಾರೆ. ಹಣತೆಗಳ ಹಬ್ಬ ದೀಪಾವಳಿ ಕೂಡ ಇವರ ನಿತ್ಯ ಬದುಕಿನ ಕತ್ತಲನ್ನು ಚೆದುರಿಸಿಲ್ಲ. ಮಣ್ಣಿನ ಹಣತೆಗಳನ್ನು ಕೊಳ್ಳುವವರಿಲ್ಲ. ಚೀನೀ ವಿದ್ಯುದ್ದೀಪಗಳ ಸರಗಳು ಇವರ ಹಣತೆಗಳ ವ್ಯಾಪಾರವನ್ನು ಕಸಿದಿವೆ. ಗಾಜು ಮತ್ತು ಪ್ಲಾಸ್ಟಿಕ್ ಹಾವಳಿಯಿಂದಾಗಿ ಇವರು ತಯಾರಿಸುವ ಇತರೆ ವಸ್ತುಗಳನ್ನು ಕೇಳುವವರಿಲ್ಲ. ಅಲ್ಯೂಮಿನಿಯಂ ಬಂದಾಗಲೆ ಅರ್ಧವಾಗಿದ್ದ ಕುಂಬಾರಿಕೆ ಈಗ ಕಡೆಯುಸಿರು ಬಿಡತೊಡಗಿದೆ.
ಗ್ರಾಮೀಣ ಕುಶಲ ಕಲೆಯನ್ನು ಪ್ರೋತ್ಸಾಹಿಸುವ ಮಾತಾಡಿದ್ದ ಗಾಂಧೀ ಮಹಾತ್ಮನ 150ನೆಯ ಜಯಂತಿ ಆಚರಿಸುತ್ತಿದೆ ದೇಶ. ಇಂತಹ ಸಂದರ್ಭದಲ್ಲಿ ಕುಂಬಾರರ ಅಸ್ತಿತ್ವವೇ ಅಳಿವಿನ ಅಂಚು ತಲುಪಿರುವುದು ವಿಡಂಬನೆ. ಕಾಲನಿ ಕಳೆದು ಹೋದ ಕಲೆಯ ವಸ್ತುಸಂಗ್ರಹಾಲಯ ಆಗಿಬಿಡುವ ದಿನಗಳು ದೂರವಿಲ್ಲ ಎಂಬುದು ಇವರ ಆತಂಕ. ಈ ಕಾಲನಿ ಈಗಾಗಲೆ ವಿಶೇಷವಾಗಿ ವಿದೇಶಿ ಪ್ರವಾಸಿಗಳಲ್ಲಿ ಜನಪ್ರಿಯ ಪ್ರೇಕ್ಷಣೀಯ ಸ್ಥಳ. ತಂಡ ತಂಡಗಳಲ್ಲಿ ಬಂದು ಮಣ್ಣು ಕಲೆಯಾಗಿ ಅರಳುವ ಬೆರಗನ್ನು ನೋಡುತ್ತಾರೆ. ಫೋಟೋ ತೆಗೆಯುತ್ತಾರೆ. ತೆಗೆಯಿಸಿಕೊಳ್ಲುತ್ತಾರೆ. ಕುಂಬಾರ ಚಕ್ರವನ್ನು ತಿರುಗಿಸಿ ಮುದಗೊಳ್ಳುತ್ತಾರೆ. ಡೆಲ್ಲಿ ಫೋಟೋಗ್ರಫಿ ಕ್ಲಬ್ ನವರ ಯಾತ್ರೆ ತಿಂಗಳಿಗೆರಡು ಸಲ ತಪ್ಪದು.
ಮಾಲಿನ್ಯದ ಆರೋಪ ಈ ಕಾಲನಿಯನ್ನು ಇನ್ನಷ್ಟು ಕಂಗೆಡಿಸಿದೆ. ರಾಜಸ್ತಾನದ ಬರಪೀಡಿತ ಪ್ರದೇಶಗಳಿಂದ ಮತ್ತು ಹರಿಯಾಣದಿಂದ ಈ ಸಮುದಾಯ ಇಲ್ಲಿಗೆ ಬಂದು ಬೀಡು ಬಿಟ್ಟಾಗ ಸುತ್ತಮುತ್ತ ಕೃಷಿ ಪ್ರದೇಶ. ಇದೀಗ ಗಿಜಿಗುಡುವ ವಸತಿ ಪ್ರದೇಶ. ತಾವು ತಯಾರಿಸಿದ ವಸ್ತುಗಳನ್ನು ಸುಟ್ಟು ಗಟ್ಟಿ ಮಾಡಲು ರಾತ್ರಿ ಮೂರು ತಾಸು ಭಟ್ಟಿ ಹೊತ್ತಿಸುತ್ತಾರೆ. ಕಟ್ಟಿಗೆ, ಮರದ ಹೊಟ್ಟಿನ ಉರುವಲು ಕಪ್ಪು ಹೊಗೆಯನ್ನು ಎಬ್ಬಿಸುತ್ತದೆ. ಮಾಲಿನ್ಯದ ದೂರು ರಾಷ್ಟ್ರೀಯ ಹಸಿರು ನ್ಯಾಯಪೀಠದ ತನಕ ಹೋಗಿದೆ. ನೋಟಿಸುಗಳು ಬಂದಿವೆ. ಅಡುಗೆ ಅನಿಲ ಬಳಸುವ ಭಟ್ಟಿಗಳು ಈ ಸಮಸ್ಯೆಗೆ ಪರಿಹಾರ. ಆದರೆ ಇವುಗಳನ್ನು ತಾವೇ ಕಟ್ಟಿಕೊಳ್ಳುವಷ್ಟು ಹಣಕಾಸಿನ ಅನುಕೂಲ ಇವರಿಗಿಲ್ಲ.
ಪತ್ರಿಕೆಗಳು, ಟೀವಿ ಚಾನೆಲ್ ಗಳು ಪ್ರತಿ ದಿವಾಳಿಗೆ ಮುನ್ನ ಈ ಕಾಲನಿಯನ್ನು ನೆನಪಿಸಿಕೊಳ್ಳುತ್ತವೆ. ಮುಂದಿನ ದೀಪಾವಳಿ ತನಕ ಮರೆತುಬಿಡುತ್ತವೆ. ಇದು ಕೇವಲ ದೆಹಲಿಯ ಉತ್ತಮನಗರದ ಕುಂಬಾರ ಕಾಲನಿಯ ಕತೆಯಿರಲಾರದು. ದೇಶದ ಬಹುತೇಕ ಎಲ್ಲ ಕುಂಬಾರಿಕೆ ಚಕ್ರಗಳು ಸೊರಗತೊಡಗಿರುವ ವ್ಯಥೆಯಿದು.
ರಾಜಸ್ತಾನದಲ್ಲೊಂದು ಮಾನವಂತ ದಲಿತ ಮದುವೆ
ಕೊಲೆ ಸುಲಿಗೆಗಳು, ಗುಂಪು ಹತ್ಯೆಗಳು, ದಲಿತರ ಮೇಲಿನ ದೌರ್ಜನ್ಯಗಳು, ರೇಪ್ ಪ್ರಕರಣಗಳಿಗೆ ಕುಪ್ರಸಿದ್ಧಿ ಗಳಿಸಿರುವ ರಾಜಸ್ತಾನದ ಜಿಲ್ಲೆ ಅಲ್ವರ್. ದೆಹಲಿ ಮತ್ತು ಹರಿಯಾಣದ ನೆರೆಹೊರೆಯ ಸೀಮೆ. ಜಾನುವಾರು ವ್ಯಾಪಾರಿ ಪೆಹ್ಲೂಖಾನ್ ನನ್ನು ಬೀದಿಯಲ್ಲಿ ಜಜ್ಜಿ ಕೊಂದ ಜಾಗ. ವಿಡಿಯೋ ಇದ್ದರೂ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳು ಖುಲಾಸೆಯಾದ ವಿದ್ಯಮಾನವನ್ನು ಇತ್ತೀಚೆಗೆ ದೇಶಕ್ಕೆ ದೇಶವೇ ಕಣ್ಣುಜ್ಜಿಕೊಂಡು ಅಪನಂಬಿಕೆಯಿಂದ ನೋಡಿತ್ತು.
ಈ ಜಿಲ್ಲೆಯಲ್ಲಿ ಮಿತಿ ಮೀರಿದ ಅಪರಾಧಗಳು. ಜಿಲ್ಲೆಗೆ ಒಬ್ಬ ಪೊಲೀಸ್ ವರಿಷ್ಠಾಧಿಕಾರಿ ಇರುವುದು ವಾಡಿಕೆ. ಆದರೆ ಅಲ್ವರ್ ಜಿಲ್ಲೆಗೆ ರಾಜಸ್ತಾನ ಸರ್ಕಾರ ಇಬ್ಬರು ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸಿದೆ! ಹೀಗಾದರೂ ಅಪರಾಧಗಳು ತಹಬಂದಿಗೆ ಸಿಕ್ಕಾವು ಎಂಬ ನಿರೀಕ್ಷೆ. ಪಾತಕಗಳ ಇಂತಹ ಸೀಮೆಯಲ್ಲೊಂದು ಮಾನವಂತ ವಿದ್ಯಮಾನ ವರದಿಯಾಗಿದೆ. ಅದೊಂದು ಭಿನ್ನ ಬಗೆಯ ಮದುವೆ. ಲಿಂಗ ಸಮಾನತೆ, ಸಾಮಾಜಿಕ ನ್ಯಾಯ, ಪರಿಸರ ಕಾಳಜಿಯ ಸಂದೇಶಗಳನ್ನು ಆಚರಣೆಯಲ್ಲಿ ಸಾರಿದ ಆದರ್ಶ ವಿವಾಹ. ಅಲ್ವರ್ ನಗರದಿಂದ 20 ಕಿ.ಮೀ. ದೂರದ ಕರೋಲಿ ಎಂಬ ಗ್ರಾಮದಲ್ಲಿ ದಲಿತ ಜೋಡಿ ಅಜಯ್ ಜಾಟವ್ ಮತ್ತು ಬಬಿತಾ ಮಾಡಿಕೊಂಡ ಲಗ್ನವಿದು.
ಕುದುರೆ ಏರಿದ ವರನ ದಿಬ್ಬಣ ವಧುವಿನ ಮನೆಗೆ ತೆರಳುವುದು, ವಧುವಿನ ಕಡೆಯವರು ಈ ದಿಬ್ಬಣಕ್ಕಾಗಿ ಕಾದು ಭಯ ಭಕ್ತಿಯಿಂದ ಬರಮಾಡಿಕೊಳ್ಳುವುದು ವಾಡಿಕೆ. ಆದರೆ ಇಲ್ಲಿ ವರನ ಬದಲು ವಧು ಸಾರೋಟು ಹತ್ತಿ ತನ್ನ ಹಳ್ಳಿ ತುಲೇದಾ ದಿಂದ ಕರೋಲಿ ಗ್ರಾಮದ ವರನ ಮನೆಗೆ ಮೆರವಣಿಗೆಯಲ್ಲಿ ತೆರಳಿದಳು. ಸಾರೋಟಿನ ಎಡಬಲಕ್ಕೆ ಅಂಬೇಡ್ಕರ್ ಮತ್ತು ಬುದ್ಧನ ಫೋಟೋಗಳು. ನಡುವೆ ಕಂಗೊಳಿಸಿದ ವಧು.
25ರ ಹರೆಯದ ಬಬಿತಾ ಸ್ನಾತಕೋತ್ತರ ಪದವೀಧರೆ. ಮುಹೂರ್ತ-ಪುರೋಹಿತರ ಗೊಡವೆ ಇರಲಿಲ್ಲ. ವಿವಾಹ ವಿಧಿ ನೆರವೇರಿದ್ದು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಮಾಣವಚನದೊಂದಿಗೆ. ಗ್ರಾಮದಲ್ಲಿ ಗ್ರಂಥಾಲಯ ಆರಂಭಿಸಲು ವಧೂ ವರರು ಮೂವತ್ತು ಸಾವಿರ ರುಪಾಯಿ ಬೆಲೆ ಬಾಳುವ ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟರು. ಮದುವೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬದಲು ಮಡಿಕೆ ಕುಡಿಕೆಗಳನ್ನು ಬಳಸಲಾಗಿತ್ತು. ಹರಸಲು ಬಂದ ಅತಿಥಿಗಳೆಲ್ಲರಿಗೆ ಸಂವಿಧಾನದ ಪ್ರತಿ ಮತ್ತು ಸಸಿಯೊಂದರ ಉಡುಗೊರೆ ನೀಡಲಾಯಿತು. ವಧೂವರರು ಉಡುಗೊರೆ ಸ್ವೀಕರಿಸಲಿಲ್ಲ. ಲಗ್ನಪತ್ರಿಕೆಯನ್ನು ಕೂಡ ಬಟ್ಟೆಯ ತುಂಡುಗಳ ಮೇಲೆ ಮುದ್ರಿಸಲಾಗಿತ್ತು. ಆಹ್ವಾನಿತರು ವಿವಾಹದ ನಂತರ ಇವುಗಳನ್ನು ತೊಳೆದು ಕರವಸ್ತ್ರಗಳನ್ನಾಗಿ ಬಳಸಬೇಕೆಂಬುದು ವಧೂವರರ ಆಶಯ.
ಇತರರಿಗೆ ಮಾದರಿಯಾಗಿ ಮದುವೆಯಾಗಬೇಕೆಂಬ ಅಜಯ್-ಬಬಿತಾ ಅವರ ಈ ಯೋಜನೆಯನ್ನು ಇಬ್ಬರ ಮನೆಯವರೂ ಒಪ್ಪಿ ನಡೆಸಿಕೊಟ್ಟದ್ದು ಮತ್ತೊಂದು ವಿಶೇಷ.
ಬ್ರೆಜಿಲ್ ಗೂಳಿಗಳ ವೀರ್ಯ ಆಮದಿಗೆ ಆರೆಸ್ಸೆಸ್ ವಿರೋಧ
ದೇಶೀ ತಳಿಗಳ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಬ್ರೆಜಿಲ್ ದೇಶದಿಂದ ಗಿರ್ ಗೂಳಿಗಳ ವೀರ್ಯವನ್ನು ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಆರೆಸ್ಸೆಸ್ ವಿರೋಧ ಎದುರಾಗಿದೆ. ಕೃತಕ ಗರ್ಭಧಾರಣೆಗೆಂದು ಗಿರ್ ತಳಿಯ ಗೂಳಿಗಳ ಒಂದು ಲಕ್ಷ ‘ಡೋಸ್’ ಗಳಷ್ಟು ವೀರ್ಯದ ಆಮದಿಗೆ ಸರ್ಕಾರ ಈ ವರ್ಷದ ಆರಂಭದಲ್ಲಿ ಟೆಂಡರ್ ಕರೆದಿತ್ತು. ಬ್ರೆಜಿಲ್ ಗಿರಿ ತಳಿಯ ಮೂಲ ಭಾರತವೇ. ಬ್ರೆಜಿಲ್ ಈ ಹಿಂದೆ ಭಾರತದಿಂದ ಗಿರ್ ಹಸುಗಳನ್ನು ಆಮದು ಮಾಡಿಕೊಂಡಿತ್ತು. ಗುಜರಾತಿನ ಭಾವನಗರದ ಅರಸು ಕುಟುಂಬ ಕೃಷ್ಣಾ ಎಂಬ ಹೆಸರಿನ ಗೂಳಿಯೊಂದನ್ನು ಬ್ರೆಜಿಲ್ ಗೆ ಉಡುಗೊರೆಯಾಗಿ ನೀಡಿತ್ತು ಕೂಡ. ಗಿರ್ ಗೂಳಿಗಳ ವೀರ್ಯವನ್ನು ಆಮದು ಮಾಡಿಕೊಳ್ಳುವ ನಿರ್ಧಾರದ ಹಿಂದಿನ ಕಾರಣವಿದು.
ಗುಜರಾತಿನ ಘನಶ್ಯಾಮಜೀ ವ್ಯಾಸ್ ಮತ್ತು ರಾಜಕೋಟದ ರಾಜಮನೆತನದ ಸತ್ಯಜಿತ್ ಕಛಾರ್ ಎಂಬ ಜಾನುವಾರು ತಳಿ ಉತ್ಪಾದಕರಿಬ್ಬರು ಈ ನಿರ್ಧಾರದ ವಿರುದ್ಧ ದನಿಯೆತ್ತಿದ್ದಾರೆ. ಇವರ ವಿರೋಧಕ್ಕೆ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಅವರೂ ದನಿಗೂಡಿಸಿದ್ದಾರೆ. ಇತ್ತೀಚಿನ ತಮ್ಮ ವಿಜಯದಶಮಿ ಭಾಷಣದಲ್ಲಿ ಈ ಕುರಿತು ಅವರು ಪ್ರಸ್ತಾಪ ಮಾಡಿದ್ದುಂಟು.
ಗಿರ್ ತಳಿಯ 150 ಹಸುಗಳು ಮತ್ತು ನಾಲ್ಕು ಗೂಳಿಗಳನ್ನು ಕಛಾರ್ ಪೋಷಿಸಿದ್ದಾರೆ. ತಮ್ಮ ಕುಟುಂಬ ಗಿರ್ ತಳಿಯ ಜಾನುವಾರಗಳನ್ನು 17ನೆಯ ಶತಮಾನದಿಂದ ಅಭಿವೃದ್ಧಿಪಡಿಸಿಕೊಂಡು ಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಬ್ರೆಜಿಲ್ ಗಿರ್ ಹಸುಗಳನ್ನು ಇತರೆ ತಳಿಗಳೊಂದಿಗೆ ಸಂಕರಗೊಳಿಸಲಾಗಿದೆ. ಹೀಗಾಗಿ ಅವು ಇಲ್ಲಿನ ಉಗ್ರ ಉಷ್ಣ ವಾತಾವರಣದಲ್ಲಿ ಉಳಿಯಲಾರವು ಎಂಬುದು ಅವರ ವಾದ. ಸಾಂಪ್ರದಾಯಿಕ ಹಾಲು ವ್ಯಾಪಾರ ಮತ್ತು ಬಂಜೆ ಹಸುಗಳು ಮತ್ತು ಗೂಳಿಗಳ ಮಾರಾಟದ ಜೊತೆಗೆ ಬ್ರೆಜಿಲ್ ನಲ್ಲಿ ಕಂಪನಿ ಸ್ಥಾಪಿಸಿರುವ ಕಛಾರ್, ಆ ಕಂಪನಿಗೆ ಗಿರ್ ಹಸುಗಳ 600 ಭ್ರೂಣಗಳನ್ನು ರಫ್ತು ಮಾಡಿದ್ದಾರಂತೆ. ಅವರ ಗೋಕೃಪಾ ಸಂಸ್ಥೆ ಪಂಚಗವ್ಯವನ್ನು (ಹಸುವಿನ ಹಾಲು, ಮೊಸರು, ತುಪ್ಪ, ಸಗಣಿ ಹಾಗೂ ಮೂತ್ರದ ‘ಪವಿತ್ರ’ ಮಿಶ್ರಣ) ಉತ್ಪಾದಿಸುತ್ತದೆ. ಗೋಮೂತ್ರದ ಸಾರವನ್ನು ಮಾರಾಟ ಮಾಡುತ್ತದೆ.
ಇನ್ನು ಘನಶ್ಯಾಮ್ ಜಿ ವ್ಯಾಸ್ ಅವರು ಆಯುರ್ವೇದ ಸೇವೆಗಳನ್ನು ಒದಗಿಸುವ ಗುಜರಾತಿನ ಭುವನೇಶ್ವರಿ ಪೀಠದ ಮುಖ್ಯಸ್ಥರು. 77ರ ಇಳಿವಯಸ್ಸು. ಪೀಠ 1910ರಿಂದ ಗಿರ್ ಹಸುಗಳ ತಳಿಯನ್ನು ಪೋಷಿಸುತ್ತಿದೆ. ಈಗ 200 ಹಸುಗಳಿವೆ. ನಾಲ್ಕು ಗೂಳಿಗಳಿವೆ 25 ಗಂಡು ಕರುಗಳಿವೆ. ಲಾಭ ಮಾಡುವ ಉದ್ದೇಶವಿಲ್ಲ. ಗಿರ್ ಹಸುಗಳ ತಳಿ ಭಂಡಾರವನ್ನು ಕಾಪಾಡಿಕೊಳ್ಳುವುದು ಏಕೈಕ ಗುರಿ.
ಉದ್ದೇಶಿತ ಬ್ರೆಜಿಲ್ ವೀರ್ಯ ಆಮದು ಭಾರತೀಯ ಜಾನುವಾರುಗಳ ಮೇಲೆ ಅಡ್ಡಪ್ರಭಾವ ಬೀರಲಿದೆ. ನಮ್ಮ ಹಸುಗಳು ಸರಾಸರಿ ತಲಾ 400ರಿಂದ 500 ಕೇಜಿ ತೂಗುತ್ತವೆ. ಬ್ರೆಜಿಲ್ ನ ಗಿರ್ ಗೂಳಿಗಳ ತೂಕ ತಲಾ 1,200 ಕೇಜಿಗಳು. ಅವುಗಳ ವೀರ್ಯದಿಂದ ಗರ್ಭ ಧರಿಸುವ ನಮ್ಮ ಹಸುಗಳು ಕರುವಿಗೆ ಜನನ ನೀಡುವಲ್ಲಿ ತೊಂದರೆ ಎದುರಿಸಬಹುದು. ಅಷ್ಟೇ ಅಲ್ಲ, ಒಮ್ಮೆ ಆಮದು ವೀರ್ಯದ ಡೋಸ್ ಗಳ ಬಳಕೆ ಶುರುವಾದರೆ ನಮ್ಮ ಗೂಳಿಗಳು ಮತ್ತು ಗಂಡು ಕರುಗಳನ್ನೇನು ಮಾಡುವುದು? ಮೇಲಾಗಿ ಬ್ರೆಜಿಲ್ ಗಿರ್ ಹಸುಗಳನ್ನು ಮುಖ್ಯವಾಗಿ ಮಾಂಸದ ಉತ್ಪಾದನೆಗೆಂದು ಇತರೆ ತಳಿಗಳೊಂದಿಗೆ ಸಂಕರಗೊಳಿಸಿ ರೂಪಿಸಲಾಗಿದೆ. ಇವುಗಳಿಗೆ ಭಾರೀ ಪ್ರಮಾಣದ ಮೇವು ಬೇಕು. ನಮ್ಮ ರೈತರು ಎಲ್ಲಿಂದ ತಂದಾರು ಎಂಬುದು ವ್ಯಾಸ್ ಪ್ರಶ್ನೆ.