ಸ್ಕಿಲ್ ಇಂಡಿಯ (ಕೌಶಲ್ಯ ಭಾರತ), ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಭೇಟಿ ಬಚಾವೊ ಭೇಟಿ ಪಡಾವೊ, ಸ್ಟಾರ್ಟ್ ಅಪ್ ಇಂಡಿಯ ಇತ್ಯಾದಿ ಪ್ರಧಾನಿ ನರೇಂದ್ರ ಮೋದಿ ಯುವ ಜನರಿಗಾಗಿ ಘೋಷಿಸಿರುವ ಯೋಜನೆಗಳು. ಅದೇ ರೀತಿ ಸ್ಮಾರ್ಟ್ ಸಿಟಿ, ಸ್ಯಾಂಡ್ ಅಪ್ ಇಂಡಿಯಾ, ಸೇತು ಭಾರತಂ ಇತ್ಯಾದಿ ಹಲವಾರು ಯೋಜನೆಗಳು ಘೋಷಣೆ ಆಗಿವೆ. ಹಲವಾರು ಅನುಷ್ಠಾನ ಆಗುತ್ತಲೂ ಇದೆ.
ಪ್ರಧಾನಿ ಇಂತಹ ಯೋಜನೆಗಳನ್ನು ತಮ್ಮ ಭಾಷಣಗಳಲ್ಲಿ ಪ್ರಸ್ತಾಪ ಮಾಡುತ್ತಲೇ ಇರುತ್ತಾರೆ. ಪ್ರಧಾನ ಮಂತ್ರಿಯವರ ಇತ್ತೀಚಿಗಿನ ಭಾಷಣಗಳನ್ನು ಗಮನಿಸಿದರೆ ಅವರು ಸ್ಕಿಲ್ ಇಂಡಿಯ, ಸ್ಮಾರ್ಟ್ ಸಿಟಿ ಮುಂತಾದ ಯೋಜನೆಗಳ ಹೆಸರುಗಳನ್ನು ಎತ್ತುತ್ತಲೇ ಇಲ್ಲ.
ದೇಶದಲ್ಲಿ ನಿರುದ್ಯೋಗ ಪರ್ವ ಆರಂಭವಾಗಿ ಈಗಾಗಲೇ ಕೆಲವು ವರ್ಷಗಳು ಆಗಿವೆ. ನಿರುದ್ಯೋಗದ ಅಂಕಿ ಅಂಶಗಳನ್ನು ಎಷ್ಟೇ ಅಡಗಿಸಿಟ್ಟರೂ ವಾಸ್ತವ ವಿಚಾರ ಹೊರ ಪ್ರಪಂಚಕ್ಕೆ ಗೊತ್ತಾಗುತ್ತಲೇ ಇದೆ. ಇಂತಹ ನಿರುದ್ಯೋಗವನ್ನು ತಕ್ಕ ಮಟ್ಟಿಗೆ ನಿಯಂತ್ರಿಸಲು ಕೌಶಲ್ಯ ಹೊಂದಿದ್ದ ಸ್ಕಿಲ್ ಇಂಡಿಯಾ ಕಾರ್ಯಕ್ರಮ ಅನುಷ್ಠಾನ ಕನಿಷ್ಟ ಪ್ರಮಾಣದಲ್ಲೂ ಆಗುತ್ತಿಲ್ಲ.
2015 ಜುಲೈ 15ರಂದು ಆರಂಭವಾದ ಸ್ಕಿಲ್ ಇಂಡಿ ಇಂಡಿಯಾ ಮಿಷನ್ ಯೋಜನೆ 2022 ವೇಳೆ ಅಂದಾಜು 40 ಕೋಟಿ ಜನರಿಗೆ ವಿವಿಧ ಕೌಶಲ್ಯಗಳಲ್ಲಿ ವೃತ್ತಿ ಆಧಾರಿತ ತರಬೇತಿ ನೀಡಿ ಅವರನ್ನು ಉದ್ಯೋಗ ಯೋಗ್ಯರನ್ನಾಗಿ ಮಾಡಬೇಕಾಗಿತ್ತು. ಯೋಜನೆಯ ಮೂರನೇ ಎರಡರಷ್ಟು ಅವಧಿ ಮುಗಿದಿದ್ದು, ಇದುವರೆಗೆ ಎರಡೂವರೆ ಕೋಟಿ ಜನರಿಗೆ ಮಾತ್ರ ತರಬೇತಿ ನೀಡಲಾಗಿದೆ.
ದೇಶದಾದ್ಯಂತ ಕೌಶಲ್ಯ ತರಬೇತಿ ನೀಡಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (NSDC), ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ PMKVY, ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಅಭಿವೃದ್ಧಿ ಯೋಜನೆ ಇತ್ಯಾದಿ ಕಾರ್ಯಕ್ರಮಗಳಡಿ ಯೋಜನೆಯ ಅನುಷ್ಠಾನ ಆಗುತ್ತಲಿದೆ. ಅಂದಾಜು ನಾಲ್ಕು ಸಾವಿರ ವೃತ್ತಿ ಕೌಶಲ್ಯ ಕೋರ್ಸುಗಳನ್ನು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಸಿದ್ಧಪಡಿಸಿದೆ. ಈ ತರಬೇತಿಗಳನ್ನು ನೀಡಲು ತರಬೇತುದಾರರು ಮತ್ತು ತರಬೇತಿ ಸಂಸ್ಥೆಗಳನ್ನು ಕೂಡ ನೇಮಿಸಬೇಕಾಗುತ್ತದೆ. ಕೆಲವು ರಾಜ್ಯಗಳಲ್ಲಿ ಈ ಯೋಜನೆಗೆ ಪಾಲುದಾರರು ಹೆಚ್ಚಿನ ಆಸಕ್ತಿ ವಹಿಸಿದರೆ, ಬಹಳಷ್ಟು ರಾಜ್ಯಗಳಲ್ಲಿ ಸೂಕ್ತ ಪ್ರಮಾಣದ ಏಜೆನ್ಸಿಗಳನ್ನು, ತರಬೇತುದಾರರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ಆದುದರಿಂದಾಗಿ ಸ್ಕಿಲ್ ಇಂಡಿಯಾ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನ ಆಗದೇ ಇರುವುದರಿಂದ ಪ್ರಧಾನಿಯವರು ಕೂಡ ಸ್ಕಿಲ್ ಇಂಡಿಯ ಶಬ್ದವನ್ನೇ ತಮ್ಮ ಭಾಷಣದಿಂದ ಕೈ ಬಿಟ್ಟಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆ ಕೂಡ ಬಹುತೇಕ ಕಡೆ ಕುಂಟುತ್ತಾ ಸಾಗಿದೆ ಮತ್ತು ಬಹಳಷ್ಟು ನಗರಗಳಲ್ಲಿ ಅವೈಜ್ಞಾನಿಕ ಮತ್ತು ದುಂದುವೆಚ್ಚದ ಯೋಜನೆಯಾಗಿ ಮಾರ್ಪಟ್ಟಿದೆ. ಕರ್ನಾಟಕ ರಾಜ್ಯದಲ್ಲಿ ಆಯ್ಕೆಯಾದ ಬಹುತೇಕ ನಗರಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಆರಂಭವಾಗಿ ಹಲವು ವರ್ಷಗಳು ಆದರೂ ಬೆರಳೆಣಿಕೆ ಕಾಮಗಾರಿಗಳು ಕೂಡ ಸಂಪೂರ್ಣವಾಗಿ ಅನುಷ್ಠಾನ ಆಗಿಲ್ಲ.
ಕೌಶಲ್ಯ ಅಭಿವೃದ್ಧಿಗಾಗಿಯೇ ಕೇಂದ್ರ ಸರಕಾರ ಇಲಾಖೆಯೊಂದನ್ನು ಹೊಂದಿದ್ದು, ಕಳೆದ ಮೂರು ವರ್ಷಗಳಲ್ಲಿ ತಮಗೆ ನೀಡಲಾದ ಅನುದಾನವನ್ನು ಉಪಯೋಗಿಸಲು ಇಲಾಖೆಗೆ ಸಾಧ್ಯವಾಗಿಲ್ಲ. 2019 ಜುಲೈ ತಿಂಗಳಲ್ಲಿ ಮಂಡಿಸಲಾದ ಬಜೆಟಿನಲ್ಲಿ ಸ್ಕಿಲ್ ಡೆವಲಪ್ ಮೆಂಟ್ ಇಲಾಖೆಗೆ 2,989 ಕೋಟಿ ರೂಪಾಯಿ ನೀಡಲಾಗಿದ್ದು, ಅದು ಕಳೆದ ಅವಧಿಯ 2,820 ಕೋಟಿ ರೂಪಾಯಿಗಿಂತ ಕೊಂಚ ಹೆಚ್ಚಿನ ಮೊತ್ತವಾಗಿದೆ. ಕಳೆದ ವರ್ಷ ಇಲಾಖೆಯು 3,400 ಕೋಟಿ ರೂಪಾಯಿ ವೆಚ್ಚ ಮಾಡಲು ಕಾರ್ಯಕ್ರಮಗಳನ್ನು ಹೊಂದಿದ್ದರೂ, ಇಲಾಖೆ ವ್ಯಯ ಮಾಡಿರುವುದು ಕೇವಲ 600 ಕೋಟಿ ರೂಪಾಯಿ ಮಾತ್ರ.
ಹೀಗೆ ಮೋದಿ ಸರಕಾರದ ಅತ್ಯುತ್ತಮವಾದ ಯೋಜನೆಯೊಂದು ಅನುಷ್ಠಾನದಲ್ಲಿ ವಿಫಲವಾಗುತ್ತಿದ್ದು, ಸ್ಮಾರ್ಟ್ ಸಿಟಿ ಯೋಜನೆ ಪರಿಕಲ್ಪನೆಯ ಹಂತದಲ್ಲೇ ಹಳ್ಳ ಹಿಡಿದು ಇದೀಗ ಭ್ರಷ್ಟಾಚಾರದ ಕೂಪವಾಗುವ ಎಲ್ಲ ಸಾಧ್ಯತೆಗಳಿವೆ.

ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ – ಧಾರವಾಡ, ಶಿವಮೊಗ್ಗ, ಮಂಗಳೂರು ಮತ್ತು ತುಮಕೂರು ಸ್ಮಾರ್ಟ್ ಸಿಟಿ ಅನುಷ್ಠಾನ ಮಾಡುತ್ತಿರುವ ನಗರಗಳು. ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಆಯ್ಕೆ ಆಗಲು ಪಟ್ಟ ಪ್ರಯತ್ನ, ಉತ್ಸಾಹ ಅದನ್ನು ಅನುಷ್ಠಾನ ಮಾಡುವಲ್ಲಿ ಕಂಡುಬರುತ್ತಿಲ್ಲ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಪಿಡಬ್ಲ್ಯುಡಿಯವರು ಮಾಡುವ ಕೆಲಸವನ್ನು ಸ್ಮಾರ್ಟ್ ಸಿಟಿಯವರು ಮಾಡುತ್ತಿದ್ದಾರೆ ಎಂಬಂತಾಗಿದೆ.
ಸ್ಮಾರ್ಟ್ ಸಿಟಿಯ ಪರಿಕಲ್ಪನೆಯೇ ಮೊದಲಿಗೆ ಅರ್ಥ ಆಗಿರಲಿಲ್ಲ. ಹಾಗೆಂದು, ಕೇಂದ್ರ ಸರಕಾರ ಕೂಡ ಸ್ಪಷ್ಟವಾದ ರೂಪುರೇಷಗಳನ್ನು ನೀಡಿರಲಿಲ್ಲ. ಆದರೆ, ದೇಶದಲ್ಲಿ ನೂರು ಸುಸ್ಥಿರವಾದ ಜನಸ್ನೇಹಿ ಮತ್ತು ಆಧುನಿಕ ತಂತ್ರಜ್ಞಾನ ಆಧಾರಿತ ಸೌಲಭ್ಯಗಳ ಹೈಟೆಕ್ ಸೌಲಭ್ಯಗಳ ನಗರ ಆಗಬೇಕು ಎಂಬುದು ಪ್ರಧಾನಿಯವರ ಆಶಯ ಆಗಿತ್ತು.
ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ ಕೆಂಪುಪಟ್ಟಿ ಮತ್ತು ರಾಜಕೀಯ ಹಸ್ತಕ್ಷೇಪಗಳು ಬರಬಾರದು ಎಂದು ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ಕಂಪೆನಿಗಳನ್ನು ಸ್ಥಾಪಿಸಲಾಯ್ತು. ಬಹಳಷ್ಟು ಕಡೆ ಮಹಾನಗರಪಾಲಿಕೆಯ ಆಯುಕ್ತರನ್ನೇ ಸ್ಮಾರ್ಟ್ ಸಿಟಿಯ ಆಡಳಿತ ನಿರ್ದೇಶಕರನ್ನಾಗಿ ಮಾಡುವ ಮೂಲಕ ಯೋಜನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡಲಾಯ್ತು. ಜನಪ್ರತಿನಿಧಿಗಳ ಪಾತ್ರ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ತೀರಾ ನಗಣ್ಯವಾದ ಕಾರಣ ಬೇಕಾಬಿಟ್ಟಿ ಪ್ರಸ್ತಾವನೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಇಂತಹ ಸಂದರ್ಭದಲ್ಲಿ ರಾಜಕೀಯ ಹಸ್ತಕ್ಷೇಪ ಬಂದೇ ಬರುತ್ತದೆ. ಇಂತಹ ಲೋಪದೋಷಗಳಿಂದ ಸ್ಮಾರ್ಟ್ ಸಿಟಿ ಸ್ಮಾರ್ಟ್ ಆಗದೆ ಅಧಿಕಾರಿಗಳು, ಗುತ್ತಿಗೆದಾರರು, ಸಲಹೆಗಾರರು ಸ್ಮಾರ್ಟ್ ಆಗಲು ಹೋಗಿ ಕೊನೆಗೆ ಲೋಕಾಯುಕ್ತ ಪ್ರವೇಶ ಅನಿವಾರ್ಯ ಆಗಲಿದೆ.