ಜನ ಪ್ರತಿಭಟನೆಗಳು ಸಿಡಿದದ್ದು ಕಳೆದ ಜೂನ್ ತಿಂಗಳಿನಲ್ಲಿ. ಕೆಲವು ಅಪರಾಧಗಳ ಆರೋಪಿಗಳನ್ನು ಚೀನಾದ ವಶಕ್ಕೆ ಒಪ್ಪಿಸಲು ಅನುವು ಮಾಡಿ ಕೊಡುವ ವಿಧೇಯಕವೊಂದು ಈ ತಳಮಳಕ್ಕೆ ಕಾರಣ ಆಗಿತ್ತು. ಕೆಲವು ವಾರಗಳಿಂದ ಈ ವಿಧೇಯಕದ ವಾಪಸಾತಿಯ ಬೇಡಿಕೆಗೆ ಮೂಲಭೂತ ರಾಜಕೀಯ ಸುಧಾರಣೆಗಳು ಹಾಗೂ ಪ್ರತಿಭಟನೆಕಾರರ ಮೇಲೆ ಪೊಲೀಸ್ ಕ್ರೌರ್ಯದ ವಿಚಾರಣೆಯ ಬೇಡಿಕೆಗಳೂ ಹೊಸದಾಗಿ ಸೇರಿವೆ.
ಭೌಗೋಳಿಕ ವಿಸ್ತೀರ್ಣದಲ್ಲಿ ದೆಹಲಿಗಿಂತ ಸಣ್ಣ ಮಹಾನಗರ ಹಾಂಗ್ ಕಾಂಗ್. ಸುಮಾರು 1,100 ಚದರ ಕಿ.ಮೀ.ಗಳು. ಅಂದಾಜು ಜನಸಂಖ್ಯೆ 74 ಲಕ್ಷ. ಬ್ರಿಟಿಷರ ವಸಾಹತಾಗಿದ್ದ ಹಾಂಗ್ ಕಾಂಗ್ 1997ರಲ್ಲಿ ಚೀನಾ ವಶಕ್ಕೆ ಮರಳಿತು. ”ಒಂದು ದೇಶ-ಎರಡು ವ್ಯವಸ್ಥೆ’’ ಎಂಬ ತತ್ವದಡಿ ಅರೆ-ಸ್ವಾಯತ್ತ ಅಧಿಕಾರ ಅನುಭವಿಸುತ್ತ ಬಂದಿದೆ. ಹಾಂಗ್ ಕಾಂಗ್ ಗೆ ತನ್ನದೇ ಪ್ರತ್ಯೇಕ ಕಾಯಿದೆ ಕಾನೂನುಗಳು ಮತ್ತು ನ್ಯಾಯಾಲಯ ವ್ಯವಸ್ಥೆ ಉಂಟು. ಚೀನಾದ ಮುಖ್ಯನಾಡಿನ ಜನರಿಗೆ ಇಲ್ಲದಿರುವ ಅನೇಕ ನಾಗರಿಕ ಹಕ್ಕುಗಳು ಹಾಂಗ್ ಕಾಂಗ್ ನಾಗರಿಕರಿಗೆ ಉಂಟು.
ಈ ದ್ವೀಪ ನಗರವನ್ನು ಬ್ರಿಟಿಷರು 19ನೆಯ ಶತಮಾನದಲ್ಲಿ ವಾಣಿಜ್ಯ ಹೊರ ಶಿಬಿರವನ್ನಾಗಿ ಅಭಿವೃದ್ಧಿಪಡಿಸಿತು. ಜಾಗತಿಕ ಅಫೀಮು ವ್ಯಾಪಾರದ ವಿಸ್ತರಣೆಗಾಗಿ ವಸಾಹತು ಸಾಮ್ರಾಜ್ಯವು ಚೀನಾವನ್ನು ಕೂಡ ಅದುಮಿಟ್ಟಿದ್ದ ದಿನಗಳು ಅವು. ಬ್ರಿಟಿಷರ ಕೈಯಲ್ಲಿದ್ದ ಈ ನಗರವನ್ನು 99 ವರ್ಷಗಳ ಗುತ್ತಿಗೆಯ ಮೇರೆಗೆ ಕಿಂಗ್ ಸಂತತಿಯು ಮುಂದುವರೆಯಲು ಬಿಟ್ಟಿದ್ದು 1898ರಲ್ಲಿ. ಹೀಗಾಗಿ ಉದಾರವಾದಿ ಆಳ್ವಿಕೆ ಮತ್ತು ಕಾನೂನು ವ್ಯವಸ್ಥೆ, ಸ್ವಾಯತ್ತತೆ ಮುಂತಾದ ಷರತ್ತುಗಳ ಮೇರೆಗೆ ಬ್ರಿಟಿಷರು ಹಾಂಗ್ ಕಾಂಗ್ ನ್ನು ಚೀನೀಯರಿಗೆ ಹಸ್ತಾಂತರಿಸಿದರು.
ಬ್ರಿಟಿಷರು ಭಾರತವನ್ನು ಆಳುತ್ತಿದ್ದಾಗ ಹಾಂಗ್ ಕಾಂಗ್ ಗೆ ತೆರಳಿದ ಭಾರತೀಯರು ಈಗಲೂ ಅಲ್ಲಿಯೇ ನೆಲೆಸಿದ್ದಾರೆ. ಕೆಲವರು ಚೀನೀ ಪೌರತ್ವ ಸ್ವೀಕರಿಸಿದ್ದರೆ, ಉಳಿದವರು ಬ್ರಿಟಿಷ್ ಪಾಸ್ಪೋರ್ಟ್ ಗಳನ್ನು ಹೊಂದಿದ್ದಾರೆ. ಇಂತಹ ಭಾರತೀಯರ ಸಂಖ್ಯೆ 45 ಸಾವಿರ ಎನ್ನಲಾಗಿದೆ.
ಕೊಲೆ, ಲೈಂಗಿಕ ಅತ್ಯಾಚಾರದಂತಹ ಅಪರಾಧಗಳ ಶಂಕಿತರನ್ನು ವಿಚಾರಣೆಗಾಗಿ ಚೀನಾ ಮುಖ್ಯನಾಡಿಗೆ ಕಳಿಸುವುದಾಗಿ ಕಾನೂನಿಗೆ ಮಾಡಿರುವ ತಿದ್ದುಪಡಿಗಳು ಈ ಪ್ರತಿಭಟನೆಯನ್ನು ಭುಗಿಲೆಬ್ಬಿಸಿದವು. 2017ರಲ್ಲಿ ಚೀನಾ ಮುಖ್ಯನಾಡಿನ ಬೆಂಬಲದೊಂದಿಗೆ ಹಾಂಗ್ ಕಾಂಗ್ ನ ಮುಖ್ಯ ಕಾರ್ಯನಿರ್ವಾಹಕರಾಗಿ ಅಧಿಕಾರ ವಹಿಸಿಕೊಂಡ ಕ್ಯಾರೀ ಲ್ಯಾಮ್ ಈ ತಿದ್ದುಪಡಿಗಳ ವಿಧೇಯಕದ ಅಂಗೀಕಾರಕ್ಕೆ ಚಾಲನೆ ನೀಡಿದ್ದರು.

ವಿಧೇಯಕವನ್ನು ಅಮಾನತಿನಲ್ಲಿ ಇರಿಸುವ ಭರವಸೆ ಎರಡು ತಿಂಗಳ ಹಿಂದೆಯೇ ಸಿಕ್ಕಿತ್ತು. ಆದರೆ ವಿಧೇಯಕವನ್ನು ವಿಧಾನಸಭೆಯಲ್ಲಿ ಪುನಃ ಮಂಡಿಸಲು ಅವಕಾಶ ಇತ್ತು. ಹೀಗಾಗಿ ಪ್ರದರ್ಶನಕಾರರು ಈ ಭರವಸೆಗೆ ಸೊಪ್ಪು ಹಾಕಲಿಲ್ಲ. ಪ್ರತಿಭಟನೆ ಮುಂದುವರೆಯಿತು. ಜೂನ್ 16ರಂದು ಹಾಂಗ್ ಕಾಂಗ್ ನ ಬೀದಿಗಳಲ್ಲಿ ನದಿಗಳಂತೆ ಹರಿದು ಬಂದ ಜನಪ್ರತಿಭಟನೆಯಲ್ಲಿ ಪಾಲ್ಗೊಂಡವರ ಸಂಖ್ಯೆ 20 ಲಕ್ಷ!
ಪೊಲೀಸ್ ದೌರ್ಜನ್ಯಗಳ ಬಗೆಗೆ ಸ್ವತಂತ್ರ ತನಿಖೆ, ಬಂಧಿಸಲಾದ ಪ್ರತಿಭಟನಾಕಾರರಿಗೆ ಕ್ಷಮಾದಾನ, ಎಲ್ಲ ಶಾಸಕರು ಮತ್ತು ಮುಖ್ಯಕಾರ್ಯನಿರ್ವಾಹಕರ ಹುದ್ದೆಗಳಿಗೆ ನೇರ ಚುನಾವಣೆ ಹಾಗೂ ಪ್ರತಿಭಟನಾಕಾರರ ವಿರುದ್ಧ ದಂಗೆಕೋರರು ಪದಪ್ರಯೋಗವನ್ನು ವಾಪಸು ಪಡೆಯಬೇಕು ಎಂಬುವು ಇತರೆ ನಾಲ್ಕು ಬೇಡಿಕೆಗಳು.
ಬದಲಾಯಿಸಿದ ಕಾನೂನನ್ನು ಹಾಂಗ್ ಕಾಂಗ್ ನಲ್ಲಿರುವ ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ಅಸ್ತ್ರವಾಗಿ ಬಳಸಲಿದೆ ಎಂಬುದು ಪ್ರತಿಭಟನೆಯ ಹಿಂದಿನ ಶಂಕೆ. ಚೀನಾ ಮುಖ್ಯನಾಡಿನ ನ್ಯಾಯಾಂಗ ವ್ಯವಸ್ಥೆಯನ್ನು ಕಮ್ಯುನಿಸ್ಟ್ ಸರ್ಕಾರವೇ ನೇರವಾಗಿ ನಿಯಂತ್ರಿಸುತ್ತದೆ. ಹೀಗಾಗಿ ರವಾನಿತ ಶಂಕಿತರನ್ನು ಚಿತ್ರಹಿಂಸೆಗೆ ಗುರಿ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಈಗಾಗಲೆ ಕುಸಿಯತೊಡಗಿರುವ ಹಾಂಗ್ ಕಾಂಗ್ ನ ಸ್ವಾಯತ್ತತೆಗೆ ಈ ತಿದ್ದುಪಡಿ ವಿಧೇಯಕ ಮತ್ತೊಂದು ದೊಡ್ಡ ಹೊಡೆತ ನೀಡಲಿದೆ ಎಂಬುದು ಪ್ರತಿಭಟನಾಕಾರರ ಕಳವಳ.
ಗೃಹಿಣಿಯರಿಂದ ಮೊದಲುಗೊಂಡು ವ್ಯಾಪಾರಿಗಳು, ವಕೀಲರು, ವಿದ್ಯಾರ್ಥಿಗಳು ಮುಂತಾಗಿ ಸಮಾಜದ ಎಲ್ಲ ವರ್ಗಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಇದು ಹಾಂಗ್ ಕಾಂಗ್ ನ ಸಾವು ಬದುಕಿನ ಪ್ರಶ್ನೆ. ಈ ವಿಧೇಯಕವು ಹಾಂಗ್ ಕಾಂಗ್ ನ ಅಂತಾರಾಷ್ಟ್ರೀಯ ಹಣಕಾಸು ಕೇಂದ್ರ ಎಂಬ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಹಾಂಗ್ ಕಾಂಗ್ ನ ನ್ಯಾಯಾಂಗ ವ್ಯವಸ್ಥೆಯನ್ನೂ ಬಾಧಿಸಲಿದೆ. ನಮ್ಮ ಭವಿಷ್ಯವನ್ನು ಬರೆಯಲಿದೆ ಎಂಬುದು ಹಾಂಗ್ ಕಾಂಗಿಗಳ ಅಸಮಾಧಾನ.

ವಿಧೇಯಕವನ್ನು ವಾಪಸು ಪಡೆಯುವಲ್ಲಿ ಭಾರೀ ವಿಳಂಬ ಮಾಡಲಾಯಿತು. ಈಗ ಪ್ರತಿಭಟನೆಗಳು ಕೇವಲ ವಿಧೇಯಕಕ್ಕೆ ಸೀಮಿತವಾಗಿ ಉಳಿದಿಲ್ಲ. ಜನರ ಕೋಪ ತಾಪ ತುಸು ಶಮನವಾಗಬಹುದು. ಆದರೆ ರಸ್ತೆಗಿಳಿದಿರುವ ಜನ ಮನೆಗೆ ಮರಳುವ ಸ್ಥಿತಿ ಇನ್ನೂ ಕಾಣುತ್ತಿಲ್ಲ ಎಂಬ ಲಿಂಗ್ನಾನ್ ವಿಶ್ವವಿದ್ಯಾಲಯದ ಪ್ರೊ. ಸ್ಯಾಮ್ಸನ್ ಯೂನ್ ಅಭಿಪ್ರಾಯವನ್ನು ನ್ಯೂಯಾರ್ಕ್ ಟೈಮ್ಸ್ ಉಲ್ಲೇಖಿಸಿದೆ.
ಜಾಗತಿಕ ನಾಯಕತ್ವ ವಹಿಸಲು ಹೊರಟಿರುವ ಚೀನಾಗೆ ಹಾಂಗ್ ಕಾಂಗ್ ನ ದೈತ್ಯ ಪ್ರತಿಭಟನೆಗೆ ದೊರೆತಿರುವ ಅಂತಾರಾಷ್ಟ್ರೀಯ ಪ್ರಚಾರ ತೀವ್ರ ಇರಿಸು ಮುರಿಸು ಉಂಟು ಮಾಡಿದೆ. ಪ್ರತಿಭಟನೆಗಳಿಂದಾಗಿ ಸಂಭವಿಸಿರುವ ಹಣಕಾಸು ಮತ್ತು ಮನೋವೈಜ್ಞಾನಿಕ ನಷ್ಟಗಳು ನಿರ್ಲಕ್ಷಿಸಲಾರದಷ್ಟು ದೊಡ್ಡ ಪ್ರಮಾಣದವು. ಈ ನಡುವೆ ಅಮೆರಿಕೆಯೊಂದಿಗೆ ನಡೆದಿರುವ ವಾಣಿಜ್ಯ-ವ್ಯಾಪಾರ ಸಮರವು ರಗಳೆಯಾಗಿ ಪರಿಣಮಿಸಿದೆ. ಏಷ್ಯಾದ ಬಹುಮುಖ್ಯ ವ್ಯಾಪಾರ-ವಾಣಿಜ್ಯ ಕೇಂದ್ರ ಹಾಂಗ್ ಕಾಂಗ್, ಆರ್ಥಿಕ ಹಿಂಜರಿತದತ್ತ ಸರಿಯತೊಡಗಿರುವ ಸೂಚನೆಗಳತ್ತ ಹಲವು ಅರ್ಥಶಾಸ್ತ್ರಜ್ಞರು ಗಮನ ಸೆಳೆದಿದ್ದಾರೆ. ಆಂದೋಲನದ ಅಶಾಂತಿಯ ಕಾರಣ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಬಿಡಿ ವ್ಯಾಪಾರ ಸೊರಗಿದೆ.
ಇಷ್ಟೇ ಅಲ್ಲದೆ ಮುಂಬರುವ ಅಕ್ಟೋಬರ್ ಒಂದರಂದು ಚೀನಾ ಗಣತಂತ್ರದ 70ನೆಯ ಸಂಸ್ಥಾಪನಾ ದಿನಾಚರಣೆ. ದೇಶದ ಒಳಗೆ ಮಾತ್ರವಲ್ಲದೆ, ಚೀನೀಯರು ಹೆಚ್ಚಿನ ಸಂಖೆಯಲ್ಲಿರುವ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿಯೂ ಉತ್ಸವಗಳನ್ನು ಯೋಜಿಸಲಾಗಿದೆ. ಈ ಹೊತ್ತಿನಲ್ಲಿ ಹಾಂಗ್ ಕಾಂಗ್ ಆಂದೋಲನ-ದಮನ ಅಪೇಕ್ಷಣೀಯ ಅಲ್ಲ. ಜಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಚೀನಾ ಕೈಗೊಂಡಿರುವ ದಮನಕಾರಿ ಕ್ರಮಗಳಿಗೂ ಈಗಾಗಲೆ ದೊಡ್ಡ ಪ್ರಚಾರ ದೊರೆತಿದೆ. ಬೀಜಿಂಗ್ ನ ಟಿಯಾನನ್ಮನ್ ಚೌಕದಲ್ಲಿ ಜರುಗಿದ ಜನತಂತ್ರ ಪರವಾದ ಭಾರೀ ಜನಾಂದೋಲನವನ್ನು ಮಿಲಿಟರಿ ಟ್ಯಾಂಕ್ ಗಳನ್ನು ಬಳಸಿ ಹತ್ತಿಕ್ಕಿತ್ತು ಚೀನಾ. ಈ ಕಾರ್ಯಾಚರಣೆಯಲ್ಲಿ ನರಮೇಧವೇ ನಡೆದು ಹೋಗಿತ್ತು. ಈ ನರಮೇಧಕ್ಕೂ 2019ರಲ್ಲಿ 30 ವರ್ಷ ತುಂಬಲಿದೆ. ಅಂತಾರಾಷ್ಟ್ರೀಯ ಒತ್ತಡವೂ ಹೆಚ್ಚತೊಡಗಿದೆ.
ಈ ಎಲ್ಲ ಕಾರಣಗಳಿಂದಾಗಿ ಚೀನಾ ತಿದ್ದುಪಡಿ ವಿಧೇಯಕವನ್ನು ಸದ್ಯಕ್ಕೆ ವಾಪಸು ಪಡೆದಿದೆ.