ಲೋಕಸಭಾ ಚುನಾವಣೆ ನಡೆದು, ಫಲಿತಾಂಶ ಹೊರಬಿದ್ದು ವಾರವೇ ಆಯಿತು. ಹೊಸ ಸರ್ಕಾರ ರಚನೆಯಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವೂ ಮುಗಿದಿದ್ದಾಯಿತು. ಅಂತೂ ಮುಂದಿನ ಐದು ವರ್ಷದ ಅವಧಿಯ ಒಂದು ಮಹತ್ತರ ಕೆಲಸ ಮುಗಿಸಿಬಿಟ್ಟೆವು ಅಂದುಕೊಂಡು ನಾವೆಲ್ಲ ಆರಾಮ ಆಗುವಷ್ಟರಲ್ಲಿ ಕೆಲವು ಮಾಧ್ಯಮಗಳಲ್ಲಿ ಮುಗಿದುಹೋದ ಚುನಾವಣೆ ಕುರಿತು ಒಂದು ತಕರಾರು ಕೇಳಿಬಂದಿದೆ. “ಭಾರತದಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿವೆ. ಅದರಲ್ಲಿ ತಾಪಮಾನ ಏರಿಕೆಯೂ ಒಂದು. ಲೋಕಸಭಾ ಚುನಾವಣೆ ಸಮಯದಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆಯದಿರುವುದು ನಿರಾಸೆ ಮೂಡಿಸಿದೆ,” ಎಂಬುದು ಆ ತಕರಾರು. ಇದನ್ನು ಹೇಳಿದವರು ಜ್ಞಾನಪೀಠ ಪುರಸ್ಕೃತ ಲೇಖಕ ಅಮಿತಾವ್ ಘೋಷ್.
“ಚುನಾವಣೆ ಮುಗಿದು ಯಾವ ಕಾಲವಾಯಿತು, ಈ ಮನುಷ್ಯ ಬೇರೆ…” ಅಂತ ಗೊಣಗಬಹುದಾದಂಥ ಅತಿ ಸಣ್ಣ ಸುದ್ದಿ ಇದು. ಬಹುತೇಕರು ಹಾಗೆಯೇ ಗ್ರಹಿಸುವುದುಂಟು. ಆದರೆ, ಭಾರತದಂಥ ದೇಶದಲ್ಲಿ ಪರಿಸರ ಸಂಬಂಧಿ ಸಮಸ್ಯೆಗಳು ಎಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂಬುದಕ್ಕೆ ಕಣ್ಣೆದುರಿನ ನಿದರ್ಶನಗಳೇ ನೂರೆಂಟು ಇರುತ್ತವೆ. ಆದರೂ ಕಂಡುಕೊಳ್ಳದ ಹಾಗೆ ಜಾರಿಕೊಳ್ಳುವವರೇ ಜಾಸ್ತಿ. ಆದರೆ, ಧಾರವಾಡದ ‘ಪರಾಗ’ ತಂಡ ನಾಗರಿಕರಲ್ಲಿನ ಇಂಥ ನಿರ್ಲಕ್ಷ್ಯ ಹೋಗಲಾಡಿಸುವ ಪಣ ತೊಟ್ಟಿದೆ. ಹಸುರು ಓದು ಪಸರಿಸುವ ಮೂಲಕ, ಪರಿಸರ ಕುರಿತ ಅರಿವು ಹೆಚ್ಚಿಸುವುದು, ಆ ಮೂಲಕ ಪರಿಸರ ಸಂಬಂಧಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಕುರಿತು ಗಂಭೀರವಾಗಿ ಯೋಚಿಸುವಂಥ ಸನ್ನಿವೇಶ ಸೃಷ್ಟಿಸುವುದು ಈ ತಂಡದ ಗುರಿ.
ಧಾರವಾಡದ ಡಾ.ಸಂಜೀವ್ ಕುಲಕರ್ಣಿ, ಶಾರದಾ ಗೋಪಾಲ್, ಶಿವಾನಂದ ಹೊಂಬಲ್, ಪ್ರಜ್ಞಾ ಮತ್ತಿಹಳ್ಳಿ, ನಿವೇದಿತಾ ಕೊನೇರಿ, ಅನುಷಾ ಹೆಗಡೆ ಈ ತಂಡದಲ್ಲಿ ಇದ್ದಾರೆ. ಹೈದರಾಬಾದಿನಲ್ಲಿ ಇದ್ದುಕೊಂಡು, ಇಂಗ್ಲಿಷ್ ಭಾಷೆಯಲ್ಲಿನ ಪರಿಸರ ಸಂಬಂಧಿ ಬರಹಗಳನ್ನು ತೆಲುಗು ಮತ್ತಿತರ ಭಾಷೆಗಳಿಗೆ ರೂಪಾಂತರಿಸುವ ಬರಹ ಚಳವಳಿ ಮಾಡುತ್ತಿರುವ ಟಿ ವಿಜಯೇಂದ್ರ ಈ ತಂಡದ ಮಾರ್ಗದರ್ಶಕರು.
ಸದ್ಯ ಪರಿಸರ ಸಂಬಂಧಿ ಬರಹಗಳು ಕನ್ನಡದಲ್ಲಿ ಅಪರೂಪ. ನಾಗೇಶ ಹೆಗಡೆ, ಶಿವಾನಂದ ಕಳವೆ ಮೊದಲಾದ ಕೆಲವರು ಬರಹಗಾರರನ್ನು ಹೊರತುಪಡಿಸಿದರೆ ಮಿಕ್ಕೆಲ್ಲರದ್ದೂ ಇಂಟರ್‌ನೆಟ್ ಸರಕು ಮಾತ್ರ. ಕ್ಷೇತ್ರಕಾರ್ಯ, ಸ್ಥಳೀಯ ನಿದರ್ಶನಗಳು ಹೆಚ್ಚೂಕಡಿಮೆ ನಾಪತ್ತೆ. ಹಾಗಾಗಿ, ಕನ್ನಡದ ಓದುಗರಿಗೆ ಪರಿಸರ ಸಂಬಂಧಿ ಬರಹಗಳನ್ನು ಹೆಚ್ಚು ತಲುಪಿಸಬೇಕು ಎಂಬುದು ಈ ತಂಡದ ಆಶಯ. ಅದಕ್ಕಾಗಿ, ಇಂಗ್ಲಿಷ್‌ನಲ್ಲಿ ಪ್ರಕಟವಾದ ಪ್ರಮುಖವೆನಿಸಿದ ಕೆಲವು ಬರಹಗಳನ್ನು ಕನ್ನಡಕ್ಕೆ ತರುವ ಪ್ರಯತ್ನದಲ್ಲಿದೆ ‘ಪರಾಗ’ ತಂಡ. ಈ ಪ್ರಯತ್ನದ ಮೊದಲ ಭಾಗವಾಗಿ ಐದು ಪುಸ್ತಕಗಳನ್ನು ಹೊರತರಲಾಗುತ್ತಿದ್ದು, ಪ್ರತಿ ಪುಸ್ತಕವೂ 20 ರೂಪಾಯಿಯೊಳಗೆ ಓದುಗರಿಗೆ ಸಿಗಲಿದೆ ಎಂಬುದು ಗಮನಾರ್ಹ.
“ಸಮಸ್ಯೆ ಬಗ್ಗೆ ತಿಳಿದುಕೊಳ್ಳದಿದ್ರೆ ಅದನ್ನು ಬಗೆಹರಿಸೋಕೆ ಆಗೋಲ್ಲ. ಹಾಗಾಗಿ, ಪರಿಸರ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸ್ಬೇಕು ಅಂದ್ರೆ ಆ ಸಮಸ್ಯೆಗಳ ಬಗ್ಗೆ ಮೊದಲು ಸರಿಯಾಗಿ ತಿಳ್ಕೋಬೇಕು. ಯುಜನರಿಗೆ ಕನ್ನಡದಲ್ಲಿಯೇ ಅಂಥ ಮಾಹಿತಿಗಳೆಲ್ಲ ಸಿಗಬೇಕು. ಹಾಗಾಗಿ ಈ ತಂಡ ಕಟ್ಟಲಾಗಿದೆ. ಇಂಗ್ಲಿಷ್, ಹಿಂದಿ, ಮರಾಠಿ ಮುಂತಾದ ಭಾಷೆಗಳಲ್ಲಿನ ನಮಗೆ ಅತ್ಯಗತ್ಯ ತಿಳಿದುಕೊಳ್ಳಬೇಕು ಎನಿಸಿದ ಬರಹಗಳನ್ನು ಅನುವಾದಿಸಿ ಪ್ರಕಟಿಸುವುದು ನಮ್ಮ ಆಲೋಚನೆ. ಜೊತೆಗೆ, ಪರಿಸರ ಮತ್ತು ಕೃಷಿಗೆ ಸಂಬಂಧಿಸಿದ ಓದಲೇಬೇಕಾದ ಎಲ್ಲ ಪುಸ್ತಕಗಳನ್ನು ಸಂಗ್ರಹಿಸಿ ಧಾರವಾಡದಲ್ಲಿ ಒಂದು ಪುಸ್ತಕ ಮಳಿಗೆ ತೆರೆಯುವ ಪ್ರಯತ್ನವೂ ನಡೆದಿದೆ. ಪರಿಸರಪ್ರಿಯ ಕನ್ನಡದ ಓದುಗರು ನಮ್ಮ ಪ್ರಯತ್ನಗಳನ್ನು ಸ್ವಾಗತಿಸುತ್ತಾರೆ ಎಂಬ ವಿಶ್ವಾಸವಿದೆ,” ಎನ್ನುತ್ತಾರೆ ತಂಡದ ಪ್ರಮುಖರಾದ ಡಾ.ಸಂಜೀವ್ ಕುಲಕರ್ಣಿ.
ಪರಿಸರ ಸಂಬಂಧಿ ಸಮಸ್ಯೆಗಳ ತೀವ್ರತೆ ಅರ್ಥವಾಗುವುದು ಪರಿಸ್ಥಿತಿ ಕೈಮೀರಿದ ಮೇಲೆಯೇ. ಪ್ರವಾಹ ಬರಬೇಕು, ಬಿರುಗಾಳಿ ಏಳಬೇಕು, ನದಿಗಳೆಲ್ಲ ಬತ್ತಿ ಬರಗಾಲ ತಾಗಬೇಕು ಇತ್ಯಾದಿ. ಆದರೆ, ಅಂಥ ದುರಂತಗಳು ಸಂಭವಿಸುವುದನ್ನು ತಪ್ಪಿಸಲು ಇರುವ ದಾರಿಗಳ ಬಗ್ಗೆ ಅರಿವು ಮೂಡಿಸುವುದು ತುರ್ತು ಅಗತ್ಯ. ಅಂಥದ್ದೊಂದು ಕೆಲಸಕ್ಕೆ ಮುಂದಾದ ‘ಪರಾಗ’ ತಂಡಕ್ಕೆ ಯಶಸ್ಸು ಸಿಗಲೆಂಬುದು ‘ಪ್ರತಿಧ್ವನಿ’ಯ ಆಶಯ.
ಚಿತ್ರ: ಟಿ ವಿಜಯೇಂದ್ರ (ಎಡತುದಿ) ಮತ್ತು ಡಾ.ಸಂಜೀವ್ ಕುಲಕರ್ಣಿ (ಬಲತುದಿ)