ಕೊಪ್ಪಳ ಗವಿಮಠ ಶ್ರೀಗಳ ನೇತ್ರತ್ವದಲ್ಲಿ ಹಿರೇಹಳ್ಳ ಪುನರುಜ್ಜೀವನ ಕಾರ್ಯ ನಡೆಯುತ್ತಿತ್ತು. ನದಿ ಪಾತ್ರದ ಜಾಲಿಕಂಟಿ ಕಿತ್ತೆಸೆದು, ಪ್ಲಾಸ್ಟಿಕ್ ತ್ಯಾಜ್ಯ ಎತ್ತಿ, ಹೂಳು ತೆಗೆದು ದಂಡೆ ಸರಿಪಡಿಸುವ ಕೆಲಸ ಸಮರೋಪಾದಿಯಲ್ಲಿ ಸಾಗಿತ್ತು. ನದಿ ಪುನಶ್ಚೇತನ ವೀಕ್ಷಣೆಗೆ ಶ್ರೀಗಳು ಆಹ್ವಾನಿಸಿದ್ದರು. ಸಿಂಧೋಗಿ, ಡಂಬ್ರಳ್ಳಿ, ಕೋಳೂರು ಹಳ್ಳದ ದಂಡೆಯ ಊರು ನೋಡುತ್ತ, ಹಿರೇಹಳ್ಳದ ಮದ್ಲಾಪುರ ಅಣೆಕಟ್ಟೆಯಿಂದ ನದಿಗುಂಟ ನಡೆಯುತ್ತಿದ್ದೆ. ದೂರದ ಮರಳ ರಾಶಿಗಳ ಮಧ್ಯೆ ಅಚ್ಚಬಿಳಿ ಸಮವಸ್ತ್ರ ಧರಿಸಿ ಸಾವಧಾನ್ ಭಂಗಿಯಲ್ಲಿ ಪ್ರಾರ್ಥನೆಗೆ ಸಾಲುಹಚ್ಚಿ ನಿಂತ ಪುಟಾಣಿ ಮಕ್ಕಳಂತೆ ದನಕರುಗಳು ನಿಂತಿದ್ದವು. ಬಾಲ್ಯದ ದಿನಗಳಲ್ಲಿ ದನ ಕಾಯುತ್ತಿದ್ದ ಪೂರ್ವಾಶ್ರಮದ ಕೆಲಸಗಳು ನನಗೂ ನೆನಪಾದವು. ಹಳ್ಳದ ವೀಕ್ಷಣೆ ನಿಲ್ಲಿಸಿ ದನಕರುಗಳತ್ತ ಓಡಿದೆ.
“ಎಷ್ಟು ಕುಟುಂಬದ ದನಕರು ಅದಾವು?” ದನಕರುಗಳ ಜೊತೆಗಿದ್ದ ಯಲ್ಲಮ್ಮರನ್ನು ಪ್ರಶ್ನಿಸಿದೆ. “ಇದರಾಗ ಬ್ಯಾರಿಯಾರದೂ ಇಲ್ಲರಿ, ಎಲ್ಲವೂ ನಮ್ಮವೇ,” ಚೂರು ಸಿಡುಕಿನಲ್ಲಿ ಉತ್ತರಿಸಿದಳು. “250 ದನಕರು ಅದಾವ, ಎಲ್ಲವೂ ನಮ್ಮದೇ!” ಗೊಲ್ಲಗಿತ್ತಿ ಹೆಮ್ಮೆಯಲ್ಲಿ ಬೀಗಿದಳು. ಹಸು ಸಾಕ್ತಾರೆ ಎಂದ ಮೇಲೆ ಹಾಲು ಎಷ್ಟು ಮಾರುತ್ತಾರೆಂದು ವಾಡಿಕೆಯಲ್ಲಿ ವಿಚಾರಿಸಿದೆ. “ಹಾಲು ಕರಿಯೋದಿಲ್ಲ; ಆಕಳು ಹಾಲು ಕೊಡೋದು ಕರುಗಳಿಗೆ ಕುಡಿಯೋದಕ್ಕೆ, ನಮಗಲ್ಲ! ಚಹಾಕ್ಕೆ ಒಂದೆರಡು ಸೇರು ಕರೀತಿವಿ, ಉಳಿದದ್ದು ಕರು ಕುಡಿತಾವು. 50 ಕರು ಅದಾವು. ಹಾಲೆಲ್ಲ ಅವಕ್ಕೆ…” ಯಲ್ಲವ್ವನ ಉತ್ತರದಲ್ಲಿ ಪಶುಸಂಗೋಪನೆಯ ಲೆಕ್ಕಾಚಾರಗಳೆಲ್ಲ ತಲೆಕೆಳಗಾದವು. ಜಿಂಕೆಮರಿಗಳಂತೆ ಚಂಗನೆ ನೆಗೆಯುತ್ತ ಒಂದಿಷ್ಟು ಕರುಗಳು ತಾಯಿ ಹಾಲು ಸೇವನೆಯ ಗುಟ್ಟು ಬಿಚ್ಚಿಟ್ಟವು.

ಹಿರೇಹೊಳೆಯ ಭರಮಪ್ಪ ಕೊಪ್ಪಳ ಕೌಲೂರು ಓಣಿಯ ನಿವಾಸಿ. 11 ಎಕರೆ ಜಮೀನಿನ ಒಡೆಯ. ದನಕರು ಈ ಗೌಲ್ಲರ ಕುಟುಂಬದ ದೊಡ್ಡ ಸಂಪತ್ತು. ಯಲ್ಲಮ್ಮನಿಗೆ ಈ ಮನೆತನದ ಸಂಪತ್ತು ಕಾಯುವ ಉಸ್ತುವಾರಿ. ಮುಂಗಾರಿನ ಬೆಳೆ ಕಟಾವಾಗಿ ಹೊಳೆಯಂಚಿನ ಹೊಲದಲ್ಲಿ ಸಜ್ಜೆ, ಜೋಳ, ಹುಲ್ಲು ಮೇಯಿಸುತ್ತ ಆರೆಂಟು ತಿಂಗಳು ಅಲೆಮಾರಿ ಜೀವನ. ಹೊಲದಲ್ಲಿ ದನಕರು ತರುಬಿದರೆ ಹೊಲದ ಯಜಮಾನರು ಸಗಣಿ, ಮೂತ್ರದಿಂದ ಹೊಲ ಫಲವತ್ತಾಗುತ್ತದೆಂದು ದಿನಕ್ಕೆ 500-600 ರೂಪಾಯಿ ನೀಡುವರು, ಇದು ದಿನದ ಆದಾಯ ಮೂಲ. ಗಂಡು ಕರು ಬೆಳೆಸಿ ಉಳುಮೆಗೆ ಮಾರಿದರೆ ಉತ್ತಮ ಲಾಭ. ಮೇವು ಹುಡುಕುತ್ತ ಹೊಲದಿಂದ ಹೊಲಕ್ಕೆ ಅಡ್ಡಾಡುವಾಗ ಬೆಳೆ ತಿಂದರೆ ಕೃಷಿಕರಿಂದ ಬಯ್ಗುಳದ ಸುರಿಮಳೆ, ಕಳ್ಳೆತ್ತುಗಳತ್ತ ಕಣ್ಣಿಟ್ಟು ಸದಾ ಎಚ್ಚರದಲ್ಲಿ ಕಾವಲು. ಬಡ ಬದುಕಿನ ಸರಳ ಜೀವನದಲ್ಲಿ ಜವಾರಿ ತಳಿ ಸಂರಕ್ಷಣೆಯ ದಾರಿ. ದನಕರು ಮೇಯಿಸುವ ತಾಣದಿಂದ ಮನೆ ನಾಲ್ಕೈದು ಕಿಲೋಮೀಟರ್ ಸನಿಹವಿದ್ದರೂ ಮನೆಗೆ ಹೋಗುವುದಿಲ್ಲ. ರಾತ್ರಿ ದನಕರುಗಳ ಸಂಗಡ ಹೊಲ, ಕಾಡು ಗುಡ್ಡ, ನದಿ ದಡದಲ್ಲಿ ವಿಶ್ರಾಂತಿ. ಹಳ್ಳ, ಕೆರೆಗಳ ನೀರು ಕುಡಿದು ಅಲ್ಲಿ ಅಡುಗೆ ಊಟ. ಬಯಲು ಚಪ್ಪರಕ್ಕೆ ನಕ್ಷತ್ರಗಳ ಬೆಳಕು.
ಉರಿ ಬಿಸಿಲು, ಕಲುಷಿತ ನೀರು ಸೇವನೆ, ದಿನಕ್ಕೆ ಹತ್ತು ಹದಿನೈದು ಕಿಲೋಮೀಟರ್ ಸುತ್ತಾಟ, ವಿಶ್ರಾಂತಿ ರಹಿತ ದುಡಿಮೆ. ಬಯಲಲ್ಲಿ ಮಲಗಿದವರಿಗೆ ನಡುರಾತ್ರಿ ಇದ್ದಕ್ಕಿದ್ದಂತೆ ಗುಡುಗು ಸಿಡಿಲಿನ ಬೇಸಿಗೆ ಮಳೆ ಬರುವುದಿದೆ. ಕಾಡು ಗುಡ್ಡದಿಂದ ಕುರಿ ಹಿಡಿಯಲು ಬರುವ ತೋಳಗಳ ಹಿಂಡು, ಚಿರತೆ ಹಾವಳಿ. ರಾತ್ರಿ ಮಲಗಿದಲ್ಲಿ ಹಾವು ವಿಷಜಂತುಗಳ ಆಗಮನ! ಹಿರೇಹಳ್ಳದ ಗುಂಡಿಗಳಲ್ಲಿ ನೀರಿರುವ ತಾಣ ಹುಡುಕಿಹೋದ ದನಕರುಗಳನ್ನು ಮರಳಿ ಹಿಂಡಿಗೆ ಸೇರಿಸಲು ಜಾಲಿಕಂಟಿಯಲ್ಲಿ ನುಸುಳಬೇಕು, ಮುಳ್ಳಿನ ಮಧ್ಯೆ ಜೀವ ಕೈಯಲ್ಲಿ ಹಿಡಿದು ಬದುಕಬೇಕು. ಹಿರೇಹಳ್ಳದ ಸ್ವಚ್ಛತೆ ಕಾಯಕದಿಂದ ಭಯ ದೂರಾಗಿದೆಯೆಂದು ಶ್ರೀಗಳಿಗೆ ಶರಣೆನ್ನುತ್ತಾಳೆ. “ದನಕರು ದೇವರಲ್ಲಿರೀ, ಅವೇ ನಮ್ಮ ಕಾಯ್ತಾವ. ಮ್ಯಾಲಿದ್ದವ ನೋಡ್ತಾನ. ನಾವೇನು ಮಾಡಾದ್ ಐತಿ?” ಥಟ್ಟನೆ ಉತ್ತರಿಸುವ ಮುಗುದೆ ಯಲ್ಲಮ್ಮ ಹಸುಕರುಗಳಿಗಾಗಿ ಮುಳ್ಳಿನ ಹಾದಿ ಸವೆಸುತ್ತಿರುವವಳು. ಸಣ್ಣಪುಟ್ಟ ಕಾಯಿಲೆಗಳಿಗೆ ಗಿಡಮೂಲಿಕೆಯಲ್ಲಿ ಮದ್ದು ಹುಡುಕುತ್ತಾಳೆ. ಪುಟ್ಟ ಮಕ್ಕಳನ್ನು ಶಾಲೆ ಓದುವ ಅನುಕೂಲಕ್ಕೆ ಊರಲ್ಲಿ ಉಳಿಸಿದ್ದಾಳೆ.

ಗಂಡ ಕೊಳ್ಳಪ್ಪನ ಜೊತೆ ಸೇರಿ ದನಕರು ಮೇಯಿಸುತ್ತ ಬಿಸಿಲೂರಿನ ಘಟ್ಟಿಗಿತ್ತಿ ಯಲ್ಲಮ್ಮನ ಪಯಣ. “ಹೊಗೆಸೊಪ್ಪು ತಿನ್ನಬ್ಯಾಡ ಅಂದ್ರು ಕೇಳಂಗಿಲ್ಲ,” ತಂಬಾಕು ಮೆಲ್ಲುವ ಗಂಡನ ಬಗ್ಗೆ ಸಣ್ಣ ತಕಕಾರು. ಬಾಟಲ್ ನೀರು, ಬುತ್ತಿ ಗಂಟು, ಕೋಲು, ಕತ್ತಿ ಹಿಡಿದು ಸಾಗುವ ಜೋಡಿ ಜೀವ. ಮೇವು, ನೀರು ಹುಡುಕುತ್ತ ಹಂಪಿಯ ತುಂಗಭದ್ರೆಯ ತಟದವರೆಗೂ ಪಯಣ. ಮನೆಮಕ್ಕಳಿಗಿಂತ ಹೆಚ್ಚಿನ ಪ್ರೀತಿ ಉಳಿಸಿಕೊಂಡ ಕಾರಣಕ್ಕೆ ಹಸುಕರು ಇವರ ಜೊತೆ ನಲಿಯುತ್ತಿವೆ. ಗೋಶಾಲೆ, ಮೇವಿನ ದಾಸ್ತಾನು, ತಳಿ ಸಂರಕ್ಷಣೆ, ಸರಕಾರಿ ನೆರವು ಮುಂತಾದ ಪದಗಳು ಗೊತ್ತಿಲ್ಲ. ದನಕರುಗಳ ಮಮತೆಯ ಅಮ್ಮ ಯಲ್ಲಮ್ಮ. ದನ ಕಾಡಲ್ಲಿ ಕರು ಹಾಕಿದಾಗ ಆರೈಕೆ ಸಹಜ ಕಾರ್ಯ. ಇವರ ಜೀವನ ವಿಧಾನ ಕುರಿತು ಮಾತಾಡುವಾಗ ಕೊಪ್ಪಳದ ವಿಜ್ಞಾನಿ ಮಿತ್ರ ಎಮ್ ಬಿ ಪಾಟೀಲ್ ಹೇಳಿದ ಮಾತು ಕೇಳಬೇಕು. ಮದುವೆಯಾಗಿ ದನಕರು ಮೇಯಿಸುತ್ತ ಬಯಲು ನಾಡು ಸುತ್ತಿ ಹದಿನೈದು ವರ್ಷ ಬಳಿಕ ಮರಳಿ ಊರಿಗೆ ಬಂದ ಗೊಲ್ಲರ ಜೋಡಿ ಜೊತೆಗೆ ನಾಲ್ಕು ಮಕ್ಕಳು ಬಂದಿದ್ದವಂತೆ! ಆಸ್ಪತ್ರೆಯಿಂದ ದೂರವಿದ್ದು ಹೆರಿಗೆ, ಬಾಣಂತನ ಕಾಡು ಹೊಲದಲ್ಲಿ ಪೂರೈಸುತ್ತ ಬದುಕುವ ಕಾಡುತನ ವಿವರಿಸಲು ಪದಗಳಿಲ್ಲ. ಎಲ್ಲ ಸವಾಲು ಗೆದ್ದು ದನಕರು ಗೆಲ್ಲಿಸುವುದು ಏಕೈಕ ಗುರಿ, ಪಶುಗಳ ಪವಿತ್ರ ಪ್ರೀತಿಗೆ ಗೊಲ್ಲರೇ ಸೈ!
ಹಳ್ಳಿಗಳಲ್ಲಿ ಜವಾರಿ ತಳಿಯ ದನಕರು ಹಿಂಡು ಕಾಡಿನತ್ತ ಮೇವಿಗೆ ಹೋಗುತ್ತಿದ್ದ ದೃಶ್ಯಗಳು ನೆನಪಾಗಿರಬಹುದು. ಅಧಿಕ ಹಾಲು ನೀಡುವ ಜರ್ಸಿ, ಎಚ್‍ಎಫ್ ತಳಿಯ ಡೇರಿ ಉದ್ಯಮ ಆಗಮನದ ಬಳಿಕ ಕೃಷಿಕರ ಮನಸ್ಸು ಬದಲಾಗಿ ನಾಟಿ ತಳಿ ದನಕರು ಕಣ್ಮರೆಯಾಗಿವೆ. ಹಸು ಸಾಕಣೆ ನಷ್ಟವೆಂದು ಮೈತುಂಬ ಕೆಲಸವೆಂದು ದೊಡ್ಡಿಗಳು ಕಾರ್ ಶೆಡ್ಡುಗಳಾಗಿವೆ.. ಉಳುಮೆ ಎತ್ತುಗಳ ನೆಲೆಯಲ್ಲಿ ಟ್ರ್ಯಾಕ್ಟರ್‌ಗಳು ಬಂದಿವೆ. ದನಕರುಗಳ ಸುತ್ತ ಬೆಳೆದ ಕೃಷಿ ಜೀವನ ಸಂಸ್ಕೃತಿ ಲಾಭದ ಹುಡುಕಾಟದಲ್ಲಿ ಯಾಂತ್ರೀಕರಣಕ್ಕೆ ತಿರುಗಿದೆ. ಕುರಿ ಸಂತೆಗಳಲ್ಲಿ ಹಸುಕರುಗಳ ಮಾರಾಟ ಮೆರೆದು ಕಸಾಯಿಖಾನೆಯ ಪಾಲಾಗಿವೆ. ನಮ್ಮ ಕಾಡು, ಹೊಲದ ಮೇವು ತಿಂದು ಆರೈಕೆಯ ಖರ್ಚಿಲ್ಲದೆ ಕೃಷಿ ಗೆಲ್ಲಿಸಿದ ಜವಾರಿ ದನಕರು ಬೇಕೆಂದರೂ ಸಿಗದ ಪರಿಸ್ಥಿತಿ ಇದೆ. ಇಂಥ ಅಬ್ಬರದ ನಡುವೆ, ಓದಿಲ್ಲದ ಯಲ್ಲಮ್ಮ ತನ್ನ ಪಾಡಿಗೆ ತಾನು ನಿಂತಿದ್ದಾಳೆ, ಜವಾರಿ ಕರುಗಳು ಸುತ್ತ ಜಿಗಿದು ನಲಿಯುತ್ತಿವೆ.
ಲೇಖಕರು ನೆಲ, ಜಲ ಸಂರಕ್ಷಣೆಯ ಕಾರ್ಯಕರ್ತರು, ಕೃಷಿ-ಪರಿಸರ ಬರಹಗಾರರು