ವರುಣನ ರುದ್ರಾವತಾರದಿಂದ ಕರ್ನಾಟಕವು ಒಂದು ವಿಚಿತ್ರ ಸನ್ನಿವೇಶಲ್ಲಿ ಸಿಲುಕಿದೆ. ಮೊದಲು ಅಬ್ಬರಿಸಿದ ನೆರೆ ಮಹಾರಾಷ್ಟ್ರದಲ್ಲಿನ ಪಶ್ಚಿಮ ಘಟ್ಟದಲ್ಲಿನ ಮಳೆಯಿಂದ ಉಕ್ಕಿ ಹರಿದು ಬಂದ ಅಂತರ ರಾಜ್ಯ ಕೃಷ್ಣಾನದಿ (ಅದರ ಉಗಮ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ) ಯ ನೀರು. ಅದರೊಡನೆ ಭಾರೀ ಮಳೆಯೂ ಧ್ವನಿಗೂಡಿಸಿ ನಮ್ಮ ರಾಜ್ಯದಲ್ಲಿನ, ಕೃಷ್ಣಾ ಕಣಿವೆಯ ಇತರ ನದಿಗಳಾದ ಮಲಪ್ರಭಾ, ಘಟಪ್ರಬಾ, ಭೀಮಾ, ತುಂಗಭದ್ರಾ, ಕರಾವಳಿ ಕರ್ನಾಟಕದ ಜಿಲ್ಲೆಗಳ, ಒಳನಾಡ ಜಿಲ್ಲೆಗಳ, ಮತ್ತು ಕಾವೇರಿ ಜಲಾನಯನ ಪ್ರದೇಶಗಳ ಹಿರಿ ಕಿರಿ ನದಿಗಳು, ಅಣೆಕಟ್ಟೆಗಳು ಕೆರೆಗಳು ತುಂಬಿ ಹರಿದು ಲಕ್ಷ ಲಕ್ಷ ಕೂಸೆಕ್ಸಗಳಷ್ಟು ನೀರು ರಭಸದಿಂದ ಪೂರ್ವ ಮತ್ತು ಪಶ್ಚಿಮಕ್ಕಿರುವ ಸಮುದ್ರಗಳನ್ನು ಕೂಡಿಕೊಳ್ಳಲು ಧಾವಿಸುತ್ತಿದೆ.
ಈಗ ಕರ್ನಾಟಕ ಅನುಭವಿಸುತ್ತಿರುವುದು ಹಿಂದೆಂದೂ ಕಾಣದ ಮೇಘಸ್ಫೋಟ. ಒಂದು ರೀತಿಯಿಂದ ಪಶ್ಚಿಮ ಘಟ್ಟದಿಂದ ಕ್ರಮೇಣ ಕೆಳಗಿಳಿಯುತ್ತ, ರಾಜ್ಯದಲ್ಲಿನ ಪೂರ್ವಾಭಿಮುಖ ನದಿಗಳಿಗೆ ಪ್ರವಾಹದ ನಂತರ ಕಾವೇರಿ ಜಲಾನಯನ ಪ್ರದೇಶಕ್ಕೆ ತಿರುಗುತ್ತಾ ಕರ್ನಾಟಕದ ಜನಜೀವನದ ಜೊತೆಗೆ ಚೆಲ್ಲಾಡಿದೆ. ಇದರಲ್ಲಿ, ಕೈಗೂಡಿಸಿದ ಪಶ್ಚಿಮಾಭಿಮುಖ ನದಿಯೆಂದರೆ ದಕ್ಷಿಣ ಕನ್ನಡದ ನೇತ್ರಾವತಿ. ಒಂದು ರೀತಿ ಈ ಮಳೆ ಅಕಾಲಿಕ. ನಿಗದಿತ ಕಾಲಕ್ಕೆ ಬರದೇ, ಅಭಾವದ ಕಡೆಗೆ ಜನರನ್ನು ನೂಕುತ್ತಿದ್ದ ಮಳೆಗಾಲ, ಈಗ ತಂದ ಪ್ರವಾಹ, ಮಹಾಪೂರಗಳಿಂದ “ದೇವರೇ ನಮ್ಮನ್ನು ಕಾಪಾಡಬೇಕು“ ಎಂಬ ಪರಿಸ್ಥಿತಿಗೆ ಜನರನ್ನು ದೂಡಿದೆ. ಇಡೀ ಮಳೆಗಾಲದ ಋತುವಿಗೆ ಆಗಬಹುದಾದ ಮಳೆ ಕೆಲವೇ ದಿವಸಗಳ ಚೌಕಟ್ಟಿನೊಳಗೆ ಸುರಿದು ಜನಜೀವನವನ್ನು ವಿಧ್ವಂಸಗೊಳಿಸುತ್ತಾ, ಹಲವಾರು ಪ್ರಶ್ನೆಗಳಿಗೆ ಮತ್ತು ಸಂದಿಗ್ಧಗಳಿಗೆ ಉತ್ತರ ಹುಡುಕುವಂತೆ ಮಾಡಿದೆ. ಮಲಗಿದ ಸರಕಾರ ಮತ್ತು ಶಾಸಕರು ಮೈ ಕೊಡವಿ ಎದ್ದು ಬಂದರೂ ಜನರಿಗೆ ಪರಿಹಾರಸಿಗದ ಪರಿಸ್ಥಿತಿ ನಿರ್ಮಾಣ ಮಾಡಿದೆ.
ಇದನ್ನು ಎಂದೂ, ಯಾರೂ ನಿರೀಕ್ಷಿಸಿರಲಿಲ್ಲ. ವೈಜ್ಞಾನಿಕವಾಗಿ ಹವಾಮಾನ ತಜ್ಞರಾಗಲೀ, ಅಥವಾ ಸಾಂಪ್ರದಾಯಿಕ ನಂಬಿಕೆಗಳ ಭರವಸೆ ಇಟ್ಟ ಹಿರಿಯರಾಗಲೀ ಇಂತಹದ್ದೊಂದು ನಡೆಯಬಹುದು ಎಂದು ಹೇಳಿರಲಿಲ್ಲ. ಆದರೆ ಒಂದು ಮಾತಂತೂ ನಿಜ. ಜಾಗತಿಕ ತಾಪಮಾನ ಹೆಚ್ಚುತ್ತಿರುವ ಬಗೆಗೆ ವಿಜ್ಞಾನಿಗಳು ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಅನುಗುಣವಾಗಿ ಕೆಲವು ಸೂಕ್ಷ್ಮ ಬದಲಾವಣೆಗಳು ಕಾಣಿಸತೊಡಗಿವೆ. ಹಿಮಾಲಯದಲ್ಲಿ ಮತ್ತು ದಕ್ಷಿಣ ಧ್ರುವದ ಅಂಟಾರ್ಟಿಕಾ ಪ್ರದೇಶದಲ್ಲಿ ಹಿಮದ ಗಡ್ಡೆಗಳು, ಏರುತ್ತಿರುವ ತಾಪಮಾನದಿಂದಾಗಿ ಕರಗುತ್ತಿವೆ. ಕರ್ನಾಟಕದಂತೆ ಇತರ ರಾಜ್ಯಗಳ ಜನರು ಅಕಾಲ ಮಳೆ ಮಹಾಪೂರಗಳ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ಒಂದು ರೀತಿಯಿಂದ ನೋಡಿದರೆ ಇದು ಸಮಸ್ಯೆಯೆಂದೂ ಹೇಳಬಹುದು. ದೇಶದ ಹಲವಾರು ರಾಜ್ಯಗಳಲ್ಲಿಯೂ ಇಂತಹದೇ ಪರಿಸ್ಥಿತಿ ನಿರ್ಮಾಣ ವಾಗಿದೆ. ಇದು ಹವಾಮಾನ ಬದಲಾವಣೆಯಾಗುತ್ತಿರುವ ದ್ಯೋತಕವೋ? ಯಾವುದಕ್ಕೂ ಕಾದು ನೋಡಬೇಕು.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಹಿಂದೆ ಎಂದೂ ಎಲ್ಲ ಅಣೆಕಟ್ಟುಗಳು ತುಂಬಿ ಹೆಚ್ಚಿನ ನೀರು ಹೊರಗೆ ಹರಿಯುತ್ತಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ನದಿಗಳಿಗೆ ಇಂತಹ ಮಹಾಪೂರ ಎಂದೂ ಒಂದೇ ವರ್ಷ ಒಟ್ಟಿಗೆ ಬಂದಿರಲಿಲ್ಲ. ನೀರು ಸಂಗ್ರಹದ ಕೊರತೆಯಿಂದ ಯಾವಾಗಲೂ ಬಳಲುತ್ತಿದ್ದ ಮಲಪ್ರಭಾ ಅಣೆಕಟ್ಟು ಬಹಳ ವರ್ಷಗಳ ನಂತರ ತುಂಬಿದೆ. (ಈ ಕೊರತೆ ತುಂಬಲೆಂದೇ ಕರ್ನಾಟಕ ಮಹಾದಾಯಿ ನೀರನ್ನು ತಿರುವಬೇಕೆಂದು ಕೇಳುತ್ತಿದೆ) ಅಣೆಕಟ್ಟಿನಿಂದ ಬಿಟ್ಟ ಹೆಚ್ಚುವರಿ ನೀರಿನಿಂದ ನದಿ ದಂಡೆಯ ಮೇಲಿನ ಹಳ್ಳಿಗಳು ಜಲಾವ್ರತವಾಗಿವೆ. ಹಳ್ಳಗಳು ತುಂಬಿ ಹರಿದು ಸಂಪರ್ಕಕ್ಕೆ ವ್ಯತ್ಯಯ ತಂದಿದೆ. ಘಟಪ್ರಭಾ ಆಣೆಕಟ್ಟಿನದೂ ಇದೇ ಕಥೆ. ಭಾರೀ ನೀರು ಹರಿದು ಬಂದು ಆಣೆಕಟ್ಟಿನ ಎಲ್ಲ ಗೇಟುಗಳನ್ನು ಓಪನ್ ಮಾಡಲಾಗಿದೆ. ಅತಿ ದೊಡ್ಡ ಆಣೆಕಟ್ಟಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಲಮಟ್ಟಿ ಜಲಾಶಯದಲ್ಲಿ ಕರ್ನಾಟಕವಿನ್ನೂ ತನಗೆ ಪಾಲಿಗೆ ಬರಬೇಕಾದ ನೀರನ್ನು ಹಿಡಿದಡಲು ಅಣೆಕಟ್ಟಿನ ಎತ್ತರವನ್ನು 524 ಮೀಟರಗೆ ಏರಿಸಿದ್ದರೆ ನಮ್ಮ ಈಗಿರುವ ಅರ್ಧದಷ್ಟು ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಅದು ಆಗದಿದ್ದುದರಿಂದ ಹೆಚ್ಚಿನ ನೀರು ರಭಸದಿಂದ ಹರಿದು ಹೋಗಿ ಕೆಳದಂಡೆ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರ ಕೆಳ ಪ್ರದೇಶದಲ್ಲಿ, ವಿಜಯಪುರ-ಕಲಬುರ್ಗಿ ಗಡಿಯಲ್ಲಿ ಇರುವ ನಾರಾಯಣಪುರ ಒಂದು ಸಮತೋಲನ ಅಣೆಕಟ್ಟು ಆದುದರಿಂದ ಹೆಚ್ಚಿನ ನೀರು ಹಿಡಿದಿಡಲು ಆಗುವುದೇ ಇಲ್ಲ. ತುಂಗಭದ್ರಾ ಆಣೆಕಟ್ಟಿನಲ್ಲಿ ಹರಿದು ಬರುತ್ತಿರುವ ಹೂಳು 139 ಟಿ. ಎಮ್. ಸಿ ಅಡಿಯಲ್ಲಿ ಸಾಮರ್ಥ್ಯ ಸಂಗ್ರಹದಲ್ಲಿ 33 ಟಿ.ಎಂ ಸಿ. ಅಡಿಯಷ್ಟು ಈಗಾಗಲೇ ಕಡಿಮೆ ಆಗಿದೆ. ಹೊರಗೆ ನೀರು ಹೋಗುವುದು ಅನಿವಾರ್ಯ.
ಕಾರಣ ಏನೇ ಇರಲಿ, ಈ ವರ್ಷ ಆದದ್ದು ಮುಂದಿನ ವರ್ಷಗಳಲ್ಲಿ ಮರುಕಳಿಸದೇ ಇದ್ದಿತೇ? ಒಂದು ವೇಳೆ ಹೀಗಾದರೆ, ಇಷ್ಟು ಅನಾವಶ್ಯಕವಾಗಿ ನಮ್ಮ ಪಾಲಿನ ನೀರು ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಹಿಡಿದಿಡುವ ಚೈತನ್ಯವನ್ನೂ, ಸಾಮರ್ಥ್ಯವನ್ನೂ ನಾವು ಕಲ್ಪಿಸಿಕೊಳ್ಳುವದೂ ಅನಿವಾರ್ಯ. ಬೇರೆ ಬೇರೆ ಯೋಜನೆಗಳಿಗೆ ಹಣವನ್ನು ಸುರಿಯುವುದರ ಬದಲಾಗಿ, ಅಪೂರ್ಣವಾಗಿರುವ ಕೃಷ್ಣ ಮೇಲ್ದಂಡೆ ಮತ್ತು ಇತರ ನೀರಾವರಿ ಯೋಜನೆಗಳನ್ನು ಯುದ್ಧೋಪಾದಿಯಲ್ಲಿ ಅನುಷ್ಠಾನ ಗೊಳಿಸುವುದರ ಜೊತೆಗೆ, ಕೆಲವಾರು ಆಯ್ದ ಸ್ಥಳಗಳಲ್ಲಿ ಸಮತೋಲನ ಸಂಗ್ರಹಾಲಯಗಳನ್ನು ಕಟ್ಟುವುದಕ್ಕೆ ಕ್ರಮ ತೆಗೆದುಕೊಳ್ಳಬೇಕಲ್ಲದೇ, ಕೆರೆ ಕಟ್ಟೆಗಳ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕು.
ದಕ್ಷಿಣದ ಮೂರು ಪ್ರಮುಖ ನದಿ ಕಣಿವೆಗಳಾದ ಗೋದಾವರಿ, ಕೃಷ್ಣಾ ಮತ್ತು ಕಾವೇರಿಗಳ ಪೈಕಿ ಕಾವೇರಿ ನದಿ ಕಣಿವೆ ಪ್ರದೇಶವು ಮುಂಬರುವ ದಿನಗಳಲ್ಲಿ ಮೇಘಸ್ಫೋಟಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ. (ಕೃಷ್ಣಾ ಕಣಿವೆಯಲ್ಲಿ ಏನಾಗಿದೆ ಎನ್ನುವುದನ್ನು ಈಗಾಗಲೇ ಅನುಭವಿಸಿದ್ದೇವೆ. ಈಗಲೇ ಕಾವೇರಿ ಜಲಾನಯನ ಪ್ರದೇಶದಲ್ಲಿಯೂ ಭಾರಿ ಮಳೆ ಆಗುವ ಸಾಧ್ಯತೆಯನ್ನು ಹವಾಮಾನ ತಜ್ಞರು ಸೂಚಿಸಿದ್ದಾರೆ) ಆದುದರಿಂದ ಆದ್ಯತೆಯ ಮೇಲೆ ತಾಪಮಾನ ಹೆಚ್ಚದಿರುವಂತಹ, ಅಂದರೆ ಅರಣ್ಯ ಸಂರಕ್ಷಿಸುವ ಮತ್ತು ಬೆಳೆಸುವ ಕಾರ್ಯಕ್ರಮಗಳನ್ನು ಸರಕಾರವು ಅನುಷ್ಠಾನಗೊಳಿಸಬೇಕಾಗಿದೆ. ಹಿಂದಿನ ದಶಕಗಳಲ್ಲಿ, ತುಂಗಭದ್ರಾ ಆಣೆಕಟ್ಟಿನಲ್ಲಿ ಸೇರುತ್ತಿರುವ ಹೂಳನ್ನು ತಡೆಯಲು, ಜಲಾನಯನ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಕಾರ್ಯಕ್ರಮಗಳನ್ನು ಸರಿಯಾಗಿ ಕಾರ್ಯಗತ ಮಾಡದಿರುವ ಪರಿಣಾಮವಾಗಿ, ಈಗಾಗಲೇ ಆಣೆಕಟ್ಟಿನ ನೀರು ಸಂಗ್ರಹ ಸಾಮರ್ಥ್ಯದಲ್ಲಿ 33 ಟಿ. ಎಂ.ಸಿ. ಎಫ್.ಟಿ. ಕಳೆದುಕೊಂಡಿದ್ದೇವೆ. ಇದು ಹೀಗೆ ಮುಂದುವರಿದರೆ ತುಂಗಭದ್ರಾ ಅಣೆಕಟ್ಟು ಬರಿದಾಗುವ ದಿನ ದೂರವಿಲ್ಲ. ವಿಶೇಷವಾಗಿ, ಪಶ್ಚಿಮ ಘಟ್ಟದಲ್ಲಿನ ಅರಣ್ಯ ಪ್ರದೇಶಗಳಲ್ಲಿ, ಮಳೆ ನೀರು ಹಿಡಿದಿಡುವ ಮತ್ತು ಮಣ್ಣು ನೀರಿನ ಜೊತೆ ಹರಿದು ಹೋಗದಿರುವ ಸಾಮರ್ಥ್ಯವನ್ನು ಜರೂರಾಗಿ ಬೆಳೆಸಬೇಕಾಗಿದೆ.
ಜಲ ತಜ್ಞ ರಾಜೇಂದ್ರ ಸಿಂಗ್ ಹೇಳಿದಂತೆ “ನೀರನ್ನು ಹರಿಸಿ, ಹರಿದ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ” ಎನ್ನುವ ತತ್ವದ ಪ್ರಕಾರ ನಮ್ಮ ನೀರಾವರಿ ಯೋಜನೆಯ ಅನುಷ್ಠಾನದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದು ಒಂದೊಂದು ನೀರಿನ ಹನಿಯ ಉಪಯೋಗ ಮಾಡುವುದರ ಕಡೆಗೆ ಲಕ್ಷ್ಯ ಕೊಡದೇ ಹೊರತು ಗತ್ಯಂತರವಿಲ್ಲ.