ಉನ್ನಾವ್ ಮತ್ತು ಕಠುವಾ ಅತ್ಯಾಚಾರ ಪ್ರಕರಣಗಳ ವಿಶ್ಲೇಷಣೆ ಭಾಗ – 2
ಹೆಣ್ಣು ದೈವಸಮಾನ ಎಂಬ ಬಿಜೆಪಿಯ ಮಾತು ಅಪ್ಪಟ ಅವಕಾಶವಾದಿ. ವರ್ಷದ ಹಿಂದೆ ಉನ್ನಾವ್ ನ ಕಾಂಡದ ಜೊತೆಗೇ ಬೆಳಕಿಗೆ ಬಂದ ಮತ್ತೊಂದು ಭಯಾನಕ ಘಟನೆ ಜಮ್ಮುವಿನ ಕಠುವಾದಲ್ಲಿ ಜರುಗಿದ್ದು. ಈ ಭೀಭತ್ಸದ ಹಿಂದೆ ಜನಾಂಗೀಯ ‘ಶುದ್ಧಿ’ಯ ಹುನ್ನಾರವಿತ್ತು. ಬಾಕರ್ವಾಲ್ ಎಂಬ ಕುರಿಗಾಹಿ ಮುಸ್ಲಿಂ ಅಲೆಮಾರಿಗಳನ್ನು ಜಮ್ಮುವಿಗೆ ಮರಳಿ ಬಾರದಂತೆ ಹೊರಗಟ್ಟುವ ದ್ವೇಷವಿತ್ತು. ಎಂಟು ವರ್ಷದ ಅಸೀಫಾ ಮುಸ್ಲಿಂ ಜನಾಂಗದಲ್ಲಿ ಹುಟ್ಟಿದ ಕಾರಣಕ್ಕೆ ಜರುಗಿದ ಬಲಾತ್ಕಾರವಿದು. ಈ ಪಾತಕದ ಮೇಲೆ ಪರದೆ ಎಳೆಯಲು ತ್ರಿವರ್ಣ ಧ್ವಜವನ್ನು ಪಟಪಟಿಸಲಾಯಿತು. ಹಿಂದು ಏಕತಾ ಮಂಚ್ ಮತ್ತು ಭಾರತ ಬಚಾವೋ ರಥಯಾತ್ರ ಸಂಘಟನೆಗಳ ಮೊಹರು ಈ ಬಲಾತ್ಕಾರದ ಮೇಲೆ ನ್ಯಾಯಬದ್ಧತೆಯ ಮೊಹರು ಒತ್ತಿದ್ದವು. ಭಾರತ ಮಾತಾ ಕೀ ಜೈ ಘೋಷಣೆ ಕೂಗಲಾಯಿತು. ದೇಶದ ಪರವಾಗಿ ಮಾಡಲಾದ ಬಲಾತ್ಕಾರವಿದು. ಅರ್ಥಾತ್ ‘ರಾಷ್ಟ್ರವಾದಿ’ ಬಲಾತ್ಕಾರ ಎಂದು ಬಿಂಬಿಸುವ ಪ್ರಯತ್ನಗಳು ನಡೆದವು.. ಈ ಬಲಾತ್ಕಾರದಲ್ಲಿ ದೈಹಿಕವಾಗಿ ಭಾಗಿಯಾದವರು ಕೆಲವೇ ಮಂದಿ. ಆದರೆ ಮಾನಸಿಕವಾಗಿ ಭಾಗಿಯಾದವರು ಕೋಟ್ಯಂತರ ಮಂದಿ. ಬಲಾತ್ಕಾರಿಗಳನ್ನು ರಕ್ಷಿಸಲು ಧರ್ಮ ಮತ್ತು ದೇಶಭಕ್ತಿಯನ್ನು ಬಳಸಿದವರೂ ಈ ಬಲಾತ್ಕಾರದಲ್ಲಿ ಭಾಗಿಗಳೇ ಅಲ್ಲವೇ?
ಜಮ್ಮು- ಕಾಶ್ಮೀರ ಕ್ರೈಂ ಬ್ರ್ಯಾಂಚ್ ಆಪಾದನಾ ಪಟ್ಟಿ ಸಲ್ಲಿಸಲು ಅಡ್ಡಿ ಮಾಡಿ ಬಲಾತ್ಕಾರಿಗಳನ್ನು ರಕ್ಷಿಸಲು ಮುಂದಾದವರಲ್ಲಿ ಬಿಜೆಪಿಯ ಹಿಂದೂ ಏಕತಾ ವೇದಿಕೆ ಇತ್ತು, ಕಾಂಗ್ರೆಸ್ ಬೆಂಬಲಿಗರೂ ಇದ್ದರು. ಉತ್ತರಪ್ರದೇಶದ ದಾದ್ರಿಯ ಅಖ್ಲಾಕ್ ಅಹ್ಮದನನ್ನು ಜಜ್ಜಿ ಕೊಂದವರಲ್ಲಿ ಒಬ್ಬ ಸತ್ತಾಗ ಆತನ ಕಳೇಬರಕ್ಕೆ ತ್ರಿವರ್ಣಧ್ವಜ ಹೊದಿಸಿ ಹುತಾತ್ಮ ಪಟ್ಟ ನೀಡಲಾಯಿತು. ಪಹಲೂಖಾನ್ ನ ಹಂತಕರನ್ನು ಭಗತ್ ಸಿಂಗ್ ಎಂದು ಕರೆಯಲಾಯಿತು. ಜಮ್ಮುವಿನ ಹಿಂದೂ ಆಪಾದಿತರನ್ನು ಮುಸ್ಲಿಂ ಕಾಶ್ಮೀರದ ಪೊಲೀಸರು ಮಟ್ಟ ಹಾಕಲು ಹೊರಟಿದ್ದಾರೆ ಎಂಬುದಾಗಿ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ಅಂದಿನ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರದ ಇಬ್ಬರು ಬಿಜೆಪಿ ಮಂತ್ರಿಗಳೂ ಭಾಗವಹಿಸಿದ್ದರು.
ಬಾಕರ್ವಾಲ ಅಲೆಮಾರಿ ಮುಸ್ಲಿಮರು ಮತ್ತು ಸ್ಥಳೀಯ ಹಿಂದೂಗಳ ನಡುವಣ ಮನಸ್ತಾಪ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ನಡೆದಿದೆ. ಎರಡೂ ಸಮುದಾಯಗಳು ಪೊಲೀಸ್ ಠಾಣೆಗಳ ಮೆಟ್ಟಿಲು ಹತ್ತಿವೆ. ಹಿಂದೂಗಳಿಗೆ ಸೇರಿದ ಜಮೀನಿಗೆ ನಮ್ಮ ಆಡು ಕುರಿ ಕುದುರೆಗಳು ಸುಳಿದರೆ ಹರಿತ ಕತ್ತಿಗಳಿಂದ ಅವುಗಳನ್ನು ಇರಿಯಲಾಗುತ್ತದೆ. ಪ್ರಾಣಿಗಳಿಗೆ ಹಿಂದು ಭೂಮಿ ಮುಸ್ಲಿಂ ಭೂಮಿ ಎಂಬ ಫರಕು ತಿಳಿಯುತ್ತದೇನು ಎಂದು ಕೇಳಿದ್ದ ಆಸೀಫಾಳ ಅಜ್ಜ.
ಬಿಜೆಪಿಯ ಬಲಗುಂದಿಸುವ ಅಥವಾ ಅದಕ್ಕೆ ರಾಜಕೀಯವಾಗಿ ಅನಾನುಕೂಲ ಉಂಟು ಮಾಡುವ ರೇಪ್ ರಾಷ್ಟ್ರವಿರೋಧಿಯೂ, ಬಲ ಹೆಚ್ಚಿಸುವ ರೇಪ್ ರಾಷ್ಟ್ರವಾದಿಯೂ ಆಗಿರುವಂತೆ ತೋರುತ್ತಿದೆ.

ಹಣಬಲ-ತೋಳ್ಬಲ-ಜಾತಿಬಲ ಹೊಂದಿರುವ ರಾಜಕಾರಣಿಗಳನ್ನು ಬಚಾವು ಮಾಡಲು ರಾಜಕೀಯ ಪಕ್ಷಗಳು ಯಾವ ಲಜ್ಜೆಗೇಡಿ ಹಂತಕ್ಕೂ ಹೋಗಬಲ್ಲವು. ಇತಿಹಾಸವನ್ನು ಕೆದಕಿದರೆ ಕಾಂಗ್ರೆಸ್ ಮೂಗಿನಡಿ ನಡೆದಿರುವ ಇಂತಹುದೇ ಪ್ರಕರಣಗಳು ಬೆಳಕಿಗೆ ಬಂದಾವು. ಮೊನ್ನೆ ಮೊನ್ನೆ 2014ರಲ್ಲಿ ಸಮಾಜವಾದಿ ಪಾರ್ಟಿಯು ಗಾಯತ್ರಿ ಪ್ರಸಾದ ಪ್ರಜಾಪತಿ ಎಂಬ ತನ್ನ ಮಂತ್ರಿಯನ್ನು ಹೀಗೆಯೇ ರಕ್ಷಿಸಿಕೊಂಡಿತ್ತು. ಈಗ ರಜಪೂತ-ಠಾಕೂರ್ ವೋಟುಗಳಿಗಾಗಿ ಬಿಜೆಪಿಯು ಸೆಂಗರ್ ನನ್ನು ರಕ್ಷಿಸಿಕೊಳ್ಳುತ್ತಿರುವಂತೆಯೇ, ಆಗ ಹಿಂದುಳಿದ ವರ್ಗಗಳ ವೋಟುಗಳಿಗಾಗಿ ಸಮಾಜವಾದಿ ಪಾರ್ಟಿಯು ಪ್ರಜಾಪತಿಯನ್ನು ಬಿಟ್ಟುಕೊಡಲು ಸಿದ್ಧವಿರಲಿಲ್ಲ.
ಚಿತ್ರಕೂಟಕ್ಕೆ ಸೇರಿದ್ದ ಯುವತಿಯನ್ನು ಮನೆ ಮತ್ತು ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಲಖ್ನೋಗೆ ಕರೆದು, ಪ್ರಜಾಪತಿ ಮತ್ತು ಆತನ ಬಂಟರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರದ ವಿಡಿಯೋ ಚಿತ್ರೀಕರಣ ಮಾಡಿ, ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿತ್ತು. ಆಗಲೂ ಪೊಲೀಸರು ಆಕೆಯ ದೂರು ದಾಖಲಿಸದೆ ಕಂಬ ಸುತ್ತಿಸಿದರು. ಪ್ರಜಾಪತಿಯ ಬಂಧನ ಸಾಧ್ಯವಾದದ್ದು ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರವೇ. ಈಗ ಸೆಂಗರ್ ರಕ್ಷಣೆಗೆ ನಿಂತಿರುವ ಆಡಳಿತ ಪಕ್ಷ ಬಿಜೆಪಿ, ಆಗ ಪ್ರತಿಪಕ್ಷವಾಗಿತ್ತು. ಪ್ರಜಾಪತಿ ಮತ್ತು ಬಂಟರಿಂದ ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿದ್ದ ಸಂತ್ರಸ್ತೆ ಯುವತಿಯ ಪರವಾಗಿ ನಿಂತು ತುರುಸಿನ ರಾಜಕಾರಣ ನಡೆಸಿತು. ಪ್ರಜಾಪತಿಯನ್ನು ಸಂಪುಟದಿಂದ ಕೈಬಿಟ್ಟು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿತ್ತು. ಜೈಲು ಸೇರಿದ್ದ ಪ್ರಜಾಪತಿಯ ವಿರುದ್ಧ ಯುವತಿ ಇತ್ತೀಚೆಗೆ ಅತ್ಯಾಚಾರದ ದೂರು ವಾಪಸು ಪಡೆದಳು. ಅತ್ಯಾಚಾರ ನಡೆಸಿದ್ದು, ಆತನ ಬಂಟರೇ ವಿನಾ ಪ್ರಜಾಪತಿ ಅಲ್ಲ ಎಂಬ ಹೇಳಿಕೆ ನೀಡಿ ಈ ಮಾಜಿ ಮಂತ್ರಿಯನ್ನು ಪಾರು ಮಾಡಿದ್ದಾಳೆ. ಹಿನ್ನೆಲೆಯಲ್ಲಿ ಕೆಲಸ ಮಾಡಿರುವುದು ಭಯವೋ ಆಮಿಷವೋ ಸದ್ಯಕ್ಕೆ ತಿಳಿಯದು. ಅಂದ ಹಾಗೆ ಜೈಲು ಸೇರಿದ ತನ್ನನ್ನು ಸಮಾಜವಾದಿ ಪಾರ್ಟಿ ನಿರ್ಲಕ್ಷಿಸಿತು ಎಂದು ಪ್ರಜಾಪತಿ ಕುಪಿತನಾಗಿದ್ದಾನೆ. ಆತನ ಮಕ್ಕಳು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ, ಅಮೇಠಿಯಲ್ಲಿ ಸ್ಮೃತಿ ಜುಬಿನ್ ಇರಾನಿಯ ಗೆಲುವಿಗೆ ಪ್ರಚಾರ ನಡೆಸಿದರು.
ಆದರೆ ಮಾಯಾವತಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಬಂಡಾ ಕ್ಷೇತ್ರದ ಶಾಸಕ ಪುರುಷೋತ್ತಮ ನರೇಶ ದ್ವಿವೇದಿಯ ಮೇಲೆ ಬಂದ ಅತ್ಯಾಚಾರದ ಆರೋಪವನ್ನು ತಡಮಾಡದೆ ಸಿಬಿಐಗೆ ಒಪ್ಪಿಸಿದ್ದುಂಟು. ಆದರೂ ಸಂತ್ರಸ್ತೆಯ ಪಾಲಿಗೆ ತಡ ಆಗಿತ್ತು. ದ್ವಿವೇದಿಯಿಂದ ಅತ್ಯಾಚಾರಕ್ಕೆ ಗುರಿಯಾದ ಶೀಲೂ ನಿಶಾದ್ ಇದೀಗ ಉನ್ನಾವ್ ಯುವತಿಗೆ ನ್ಯಾಯ ದೊರಕಿಸಿಕೊಡಿ ಎಂದು ದನಿ ಎತ್ತಿದ್ದಾಳೆ.
ಆಕೆಯ ಅಹವಾಲನ್ನು ಆಕೆಯ ಮಾತುಗಳಲ್ಲೇ ಕೇಳಿ- 2011ರಲ್ಲಿ ಬಿ.ಎಸ್.ಪಿ. ಶಾಸಕ ಪುರುಷೋತ್ತಮ ದ್ವಿವೇದಿ ನನ್ನ ಮೇಲೆ ಅತ್ಯಾಚಾರ ನಡೆಸಿದ. ಆಗ ನನ್ನ ವಯಸ್ಸು 17. ತೀವ್ರ ನೋವಿನ ಕಾರಣ ದಿನಗಟ್ಟಲೆ ನಡೆಯಲಾಗಲಿಲ್ಲ. 22 ದಿನಗಳ ಕಾಲ ರಕ್ತಸ್ರಾವ. ಮಾನಸಿಕವಾಗಿಯೂ ಛಿದ್ರವಾಗಿದ್ದೆ. ಶಾಸಕನ ಬಂಟರು ಮತ್ತು ಪಕ್ಷದ ಕಾರ್ಯಕರ್ತರು ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದರು. ತೆಪ್ಪಗಿದ್ದರೂ ನನ್ನ ಮೇಲೆ ಕಳ್ಳತನದ ಆರೋಪ ಹೊರಿಸಿ ಜೈಲಿಗೆ ಕಳಿಸಿದರು. ಜೈಲಿನಿಂದ ಹೊರಬಿದ್ದರೆ ಕೊಂದು ಹಾಕುತ್ತಾರೆಂದು ಹೇಳುತ್ತಿದ್ದ ಕಾರಣ ಜೈಲುವಾಸವೇ ಲೇಸು ಎನಿಸಿತ್ತು. ರಾಜಿ ಮಾಡಿಕೊಳ್ಳುವಂತೆ ನನ್ನ ಭಯಭೀತ ಕುಟುಂಬದ ಮೇಲೆ ಭಾರೀ ಒತ್ತಡವಿತ್ತು. ನಾನೂ ಹೆದರಿದ್ದೆ. ನನ್ನನ್ನು ಬೆಂಬಲಿಸಿದವರ ಮನೆಗಳ ಸುಟ್ಟು ಹಾಕುವುದಾಗಿ ಗ್ರಾಮಸ್ತರಿಗೆ ಎಚ್ಚರಿಕೆ ನೀಡಲಾಗಿತ್ತು. ಬಡರೈತನ ಮಗಳು ನಾನು ಗೊಂದಲಕ್ಕೆ ಬಿದ್ದಿದ್ದೆ, ವ್ಯಗ್ರಳಾಗಿದ್ದೆ. ನ್ಯಾಯಕ್ಕಾಗಿ ಹೋರಾಡಲು ತೀರ್ಮಾನಿಸಿದೆ, ದೂರು ದಾಖಲಿಸಿದೆ. ಮಾಧ್ಯಮಗಳ ಮುಂದೆ ಮಾತಾಡಿದೆ. ಗುಲಾಬಿ ಗ್ಯಾಂಗ್ ನ ಸಂಪತ್ ಪಾಲ್ ಅವರನ್ನು ಸಂಪರ್ಕಿಸಿದೆ. ದೆಹಲಿಗೆ ತೆರಳಿ ಪ್ರತಿಭಟನೆಗಳು, ಸುದ್ದಿ ಚರ್ಚೆಗಳಲ್ಲಿ ಭಾಗವಹಿಸಿದೆ. ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಭಟನೆಗಳಲ್ಲಿ ಭಾಗವಹಿಸಿದೆ. ಬಂಡಾ ದಿಂದ ಶಾಸಕನ ವಿರುದ್ಧ ದೂರು ನೀಡಿದ್ದ ಮೊದಲ ಮಹಿಳೆಯಾಗಿದ್ದೆ. ಇದೆಲ್ಲವನ್ನು ನಾನು ಇತರರ ಸಹಾಯದಿಂದ ಸಾಧಿಸಿದೆ. ಎಫ್.ಐ.ಆರ್. ದಾಖಲಾದ ತಕ್ಷಣ ನನ್ನ ಆತ್ಮರಕ್ಷಣೆಗೆಂದು ಗನ್ ಮ್ಯಾನ್ ನೀಡಲಾಯಿತು. ಪಿಸ್ತೂಲನ್ನೂ ಕೊಟ್ಟರು. ಉನ್ನಾವದ ಹುಡುಗಿಗೂ ಇಂತಹುದೇ ರಕ್ಷಣೆಯ ಅಗತ್ಯವಿದೆ. ಆಕೆಗೆ ಸುಲಭವಾಗಿ ನ್ಯಾಯ ದೊರೆಯುವ ಭರವಸೆ ನನಗಿಲ್ಲ.
ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಬೇಕಿರುವ ಈ ಕಟು ಸತ್ಯಗಳು ಹೊರಬಿದ್ದ ಬಳಿಕವೂ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ- ಗೃಹಮಂತ್ರಿ-ಪಕ್ಷದ ಅಧ್ಯಕ್ಷ ತುಟಿ ಬಿಚ್ಚುವುದಿಲ್ಲವೆಂದರೆ ಆತ್ಮಸಾಕ್ಷಿಗಳು ಯಾವ ಪರಿ ಕೊಳೆತು ಹೋಗಿರಬಹುದು! ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷಕ್ಕೆ, ನೈತಿಕತೆ ಅನೈತಿಕತೆಗಳು ಅನ್ವಯ ಆಗುವುದಿಲ್ಲವೇ? ಅನ್ಯಾಯವನ್ನು ಖಂಡಿಸದಂತೆ ಇವರೆಲ್ಲರ ಬಾಯಿಗೆ ಬಿದ್ದಿರುವ ಬೆರಗಿನ ಬೀಗ ಯಾವುದದು? ತಾನು ಇತರೆ ಪಕ್ಷಗಳಿಗಿಂತ ಭಿನ್ನ ಎಂದು ಮುಟ್ಟಿ ಹೇಳಿಕೊಳ್ಳುವ ನೈತಿಕ ಧೈರ್ಯವನ್ನು ಈ ಪಕ್ಷ ಈಗಲೂ ಉಳಿಸಿಕೊಂಡಿದೆಯೇ?