ಯಾವುದೇ ಪಕ್ಷ ಅಧಿಕಾರದಲ್ಲಿರಲಿ ತಮಗೆ ಹತ್ತಿರವಾದವರನ್ನು ದೇಶದ ಪ್ರಮುಖ ಸಂಸ್ಥೆಗಳಿಗೆ ನೇಮಕ ಮಾಡಿ ಪರೋಕ್ಷವಾಗಿ ಅವುಗಳು ತಮ್ಮ ಹಿಡಿತದಲ್ಲಿ ಇರುವಂತೆ ನೋಡಿಕೊಳ್ಳುತ್ತವೆ. ಆದರೆ, ಇದಕ್ಕೊಂದು ಮಿತಿ ಇರುತ್ತದೆ. ಈಗ ಅಧಿಕಾರದಲ್ಲಿರುವ ಬಿಜೆಪಿಯ ದೊಡ್ಡ ತಪ್ಪೆಂದರೆ ಈ ಮಿತಿಯನ್ನು ಅದು ಗೌರವಿಸದೇ ಇರುವುದು. ಈ ನಿಟ್ಟಿನಲ್ಲಿ ಇದುವರೆಗೂ ನಡೆದ ಕೇಂದ್ರ ಸರ್ಕಾರ ನಡೆಸಿದ ನೇಮಕಾತಿಗಳ ಬಗ್ಗೆ ಎರಡು ವರದಿಗಳ ವಿಶ್ಲೇಷಣೆ: ಭಾಗ-2
ಬಿಜೆಪಿಯ ಎಣೆಯಿಲ್ಲದ ಮೂಗು ತೂರಿಸುವಿಕೆಯ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ ದೇಶ ಸದ್ಯ ಎದುರಿಸುತ್ತಿರುವ ಆರ್ಥಿಕ ಪರಿಸ್ಥಿತಿ. ದಶಕದ ಹಿಂದೆ ಬಹುತೇಕ ಇಡೀ ವಿಶ್ವವೇ ಆರ್ಥಿಕ ಸಂಕಷ್ಚಕ್ಕೆ ಸಿಲುಕಿ ಒದ್ದಾಡುತ್ತಿದ್ದಾಗ ಭಾರತ ಹೆಚ್ಚೇನು ಹೊಡೆತ ತಿನ್ನದೇ ಪಾರಾಗಿದ್ದಕ್ಕೆ ಮುಖ್ಯ ಕಾರಣ ಭಾರತೀಯರ ಹಣ ಉಳಿಸುವ ಅಭ್ಯಾಸ. ಮತ್ತು ಜೊತೆ ಜೊತೆಗೆ ಎರ್ ಬಿ ಐ ಮತ್ತು ಅದರ ಕಟ್ಟು ನಿಟ್ಟಾದ ಆರ್ಥಿಕ ನೀತಿಗಳು, ಆರ್ ಬಿ ಐ ಗೆ ಇದ್ದ ಸ್ವಾಯತ್ತತೆ, ಮತ್ತು ಆ ಮೂಲಕ ಅದು ತೆಗೆದುಕೊಂಡ ನಿರ್ಧಾರಗಳು ಭಾರತಕ್ಕೆ ಈ ದೊಡ್ಡ ಆರ್ಥಿಕ ಸಂಕಷ್ಟ ತಟ್ಟದಂತೆ ತಡೆಯಿತು. ಅಂತಹ ಸಶಕ್ತ ಆರ್ ಬಿ ಐ, ಈಗ ಬಿಜೆಪಿಯ ಮುಂದಾಲೋಚನೆ ಇಲ್ಲದ, ಪ್ರಚಾರ ಪ್ರಿಯ ನೀತಿ ಮತ್ತು ಯೋಜನೆಗಳಿಂದಾಗಿ ಹಲ್ಲಿಲ್ಲದ ಹಾವಿನಂತಾಗಿದೆ.
ಭಾರತದ ಈಗಿನ ಆರ್ಥಿಕ ಸಂಕಷ್ಚಕ್ಕೆ ಬಿಜೆಪಿಯೇ ಏಕಮಾತ್ರ ಕಾರಣವಲ್ಲ. ಯುಪಿಎ ತನ್ನ ಕೆಟ್ಟ ಆಡಳಿತದಿಂದ ಎರಡನೇ ಅವಧಿಯಲ್ಲೇ ಇದಕ್ಕೆ ನಾಂದಿ ಹಾಡಿ ಆಗಿತ್ತು. ಆದರೆ, ಪರಿಸ್ಥಿತಿ ಹತೋಟಿಯಲ್ಲಿತ್ತು. ಆರ್ಥಿಕತೆಯನ್ನು ಮತ್ತೆ ದಾರಿಗೆ ತರುವುದು ಕಷ್ಟವಾಗಿದ್ದರೂ ಅಸಾಧ್ಯವಾಗಿರಲಿಲ್ಲ. ಆದರೆ, ಬಿಜೆಪಿ ತಾನು ಬೇರೆ ಕಡೆ ತೋರಿದ ಅದೇ ಸರ್ವಾಧಿಕಾರಿ ಧೋರಣೆಯಿಂದ, ಅರೆ ಬೆಂದ ಜ್ಞಾನದಿಂದ ಮತ್ತು ತನ್ನನ್ನು ಒಪ್ಪದವರಿಗೆಲ್ಲಾ ಗೇಟ್ ಪಾಸ್ ನೀಡುವ ಅಭ್ಯಾಸದಿಂದ ಪರಿಸ್ಥಿತಿ ಹದ್ದು ಮೀರುವಂತೆ ಮಾಡಿತು.

ಅಂತಾರಾಷ್ಚ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ್ದ ಅಂದಿನ ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್, ತಮ್ಮ ಅತ್ಯುತ್ತಮ ನೀತಿಗಳಿಂದಾಗಿ ಇನ್ನೊಂದು ಅವಧಿಗೆ ಮುಂದುವರಿಯಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದಾಗಲೇ, ಬಿಜೆಪಿ ಅದನ್ನು ಸುಳ್ಳಾಗಿಸಿ ಉರ್ಜಿತ್ ಪಟೇಲ್ ರನ್ನು ಆರ್ ಬಿ ಐ ಗವರ್ನರ್ ಆಗಿ ನೇಮಿಸಿತು. ಖಡಕ್ ಮಾತಿನ ರಘುರಾಮ್ ರಾಜನ್ ಅವರಿಗಿಂತ ತಮ್ಮ ಸಲಹೆಗಳಿಗೆ ತಲೆದೂಗಬಹುದಾದ ಪಟೇಲ್, ಸರ್ಕಾರಕ್ಕೆ ಅನುಕೂಲಕರ ಆಯ್ಕೆ ಎನಿಸಿತ್ತು. ರಾಜನ್ ಹುದ್ದೆಯಿಂದ ಕೆಳಗಿಳಿಯುವ ಮೊದಲೇ ಬ್ಯಾಂಕ್ ಗಳ ಹೆಚ್ಚುತ್ತಿರುವ ಎನ್ ಪಿ ಎ ಬಗ್ಗೆ ಎಚ್ಚರಿಕೆ ಹೇಳಿದ್ದರು. ಈ ಬಗ್ಗೆ ಆಗಲೇ ಕಠಿಣ ಕ್ರಮಗಳನ್ನು ಆರಂಭಿಸಿದ್ದರು. ಅಪನಗದೀಕರಣವನ್ನು ತೀವ್ರವಾಗಿ ವಿರೋಧಿಸಿದ್ದರು.
ಇವುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದರೆ ಇಂದಿನ ಸ್ಥಿತಿ ಬರುತ್ತಿರಲಿಲ್ಲ. ಆದರೆ, ಬಿಜೆಪಿ ಎಲ್ಲಾ ಅರ್ಥಿಕ ತಜ್ಞರ ಸಲಹೆ ಗಾಳಿಗೆ ತೂರಿ ಅಬ್ಬರದ ಪ್ರಚಾರ ಪಡೆದು ಡೀಮಾನಿಟೈಸೇಷನ್ ಎಂಬ ಅಸ್ತ್ರ ಬಿಟ್ಟಿತು. ಆದರೆ, ಅದು ತಿರುಗುಬಾಣವಾಯಿತು. ತಾನು ವಿರೋಧ ಪಕ್ಷದಲ್ಲಿದ್ದಾಗ ಖಡಾಖಂಡಿತವಾಗಿ ವಿರೋಧಿಸಿದ್ದ ಜಿ ಎಸ್ ಟಿಯನ್ನು ಯಾವುದೇ ಸರಿಯಾದ ಸಿದ್ಧತೆಯಿಲ್ಲದೆ ಜಾರಿಗೆ ತಂದಿತು. ಈಗಲೂ ಜಿ ಎಸ್ ಟಿ ಒಂದು ಗೊಂದಲಮಯ ವ್ಯವಸ್ಥೆಯಾಗಿಯೇ ಉಳಿದಿದೆ. ದೊಡ್ಡ ತೂಗುಕತ್ತಿಯಂತಿದ್ದ ಎನ್ ಪಿ ಎ ಬಗ್ಗೆ ಏನು ಹೆಚ್ಚಿನ ಕ್ರಮ ಕೈಗೊಳ್ಳಲಿಲ್ಲ.
Also Read: ಸ್ವಾಯತ್ತ ಸಂಸ್ಥೆಗಳಿಗೆ ಪಕ್ಷ ಸಿದ್ಧಾಂತ ಪ್ರೇರಿತ ನೇಮಕಾತಿ– ಮೋದಿ 1.0

ಮೊದಲಿಗೆ ಬಿಜೆಪಿಯ ದೂರದೃಷ್ಚಿಯಿಲ್ಲದ ಯೋಜನೆಗಳಿಗೆ ಅಸ್ತು ಎಂದಿದ್ದ ಊರ್ಜಿತ್ ಪಟೇಲ್ ಗೆ ಕೂಡ ಈ ಮಟ್ಟಿನ ಸ್ವಾತಂತ್ರ್ಯ ಹರಣ ಸಹಿಸಲಾಗಲಿಲ್ಲ. ಕೊನೆಗೆ ಆರ್ ಬಿಐ ನಿಂದ ಸರ್ಕಾರಕ್ಕೆ ಹಣ ನೀಡುವ ವಿಷಯದಲ್ಲಿ ವಿರೋಧ ವ್ಯಕ್ತಪಡಿಸಿದ ಪಟೇಲ್ ವೈಯಕ್ತಿಕ ಕಾರಣ ಹೇಳಿ ರಾಜೀನಾಮೆ ನೀಡಿ ಕೆಳಗಿಳಿದರು. ನಂತರ ವಿರಲ್ ಆಚಾರ್ಯ ಸೇರಿದಂತೆ ಎಷ್ಟೋ ಆರ್ಥಿಕ ತಜ್ಞರು ಹಲವರು ಪ್ರಮುಖ ಸಂಸ್ಥೆಗಳಿಂದ, ಆಯೋಗಗಳಿಂದ ಬಿಜೆಪಿಯ ಸರ್ವಾಧಿಕಾರಿ ಮನೋಭಾವದೊಂದಿಗೆ ಏಗಲಾರದೆ ಹೊರ ಬಂದಿದ್ದಾರೆ. ಸರ್ಕಾರಗಳು ಮಾಡಿದ ಎಡವಟ್ಟುಗಳ ಭಾರ ಹೊರಲು ದೇಶವನ್ನು ಆರ್ಥಿಕ ಸಂಕಷ್ಚಕ್ಕೆ ತಳ್ಳಿದ ಅಪವಾದಕ್ಕೆ ವಿನಾಕಾರಣ ಗುರಿಯಾಗಲು ಯಾರು ಸಿದ್ಧರಿಲ್ಲ. ಇವರಲ್ಲಿ ಸರ್ಕಾರದ ಪರವಾಗಿದ್ದ ಆರ್ಥಿಕ ತಜ್ಞರೂ ಸಾಕಷ್ಚಿದ್ದಾರೆ ಎಂಬುದು ಬಿಜೆಪಿ ನಾಯಕರು ಎಷ್ಚರ ಮಟ್ಟಿಗೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಾರೆ ಎಂಬುದನ್ನು ವಿವರಿಸುತ್ತದೆ.
ಈಗ ಬಿಜೆಪಿ ಮತ್ತೊಂದು ತಪ್ಪು ಮಾಡಿದೆ. ಆರ್ಥಿಕ ತಜ್ಞರನ್ನು ದೂರವಿಟ್ಟು, ತಮ್ಮೆದುರು ಕೈಕಟ್ಟಿ ನಿಲ್ಲುವ ಅಧಿಕಾರಿಶಾಹಿ ವ್ಯವಸ್ಥೆಯ ಭಾಗವಾಗಿದ್ದವರನ್ನು ಗವರ್ನರ್ ಆಗಿ ನೇಮಿಸಿದೆ. ಹೀಗಾಗಿಯೇ, ಸರ್ಕಾರಕ್ಕೆ ತನ್ನ ಬಜೆಟ್ ಕೊರತೆ ಮುಚ್ಚಲು ಅಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ಆರ್ ಬಿಐನಿಂದ ಪಡೆಯುವುದು ಸುಲಭವಾಯಿತು. ತನ್ನ ಸ್ವಂತ ಖಜಾನೆಗೆ ಕನ್ನ ಹಾಕಿದ ಕೇಂದ್ರ ಸರ್ಕಾರ ಅಲ್ಲಿಗೇ ನಿಲ್ಲಿಸಿಲ್ಲ. ಈ ಮೊದಲು ಯಾವುದೇ ಸರ್ಕಾರಗಳು ಯೋಚಿಸದ ಕ್ರಮವೊಂದನ್ನು ಪ್ರಸ್ತಾಪಿಸಿದೆ. ಆರ್ ಬಿ ಐ ಕಾಯ್ದೆಯ, ಸೆಕ್ಷನ್ 7ನ್ನು ಬಳಸುವ ಮಾತಾಡಿದೆ. ಇದರ ಪ್ರಕಾರ ಕೇಂದ್ರ ಸರ್ಕಾರ ಜನಹಿತ ದೃಷ್ಚಿಯಿಂದ ಆರ್ ಬಿ ಐ ಗೆ ನಿರ್ದೇಶನ ನೀಡಬಹುದು. ಅಂದರೆ ಆರ್ ಬಿ ಐ ಎಂಬ ಸ್ವಾಯತ್ತ, ಇದುವೆರಗೂ ಅತ್ಯುತ್ತಮ ನೀತಿಗಳಿಂದ ದೇಶದ ಆರ್ಥಿಕತೆ ಕಾಪಾಡಿದ್ದ ಸಂಸ್ಥೆ ಸಂಪೂರ್ಣ ಕೇಂದ್ರದ ಹಿಡಿತಕ್ಕೆ ಹೋಗುವುದು. ಇದರ ಬಗ್ಗೆ ಕೇಂದ್ರ ಮತ್ತೇನು ಹೇಳದಿದ್ದರೂ, ಈ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂಬ ವಿಚಾರವೇ ಆರ್ಥಿಕ ತಜ್ಞರನ್ನು ಬೆಚ್ಚಿ ಬೀಳಿಸಿದೆ.
ಅಂತೂ ದೇಶದ ಎಲ್ಲಾ ಪ್ರಮುಖ ಸಂಸ್ಥೆಗಳಲ್ಲೂ ಮೂಗು ತೂರಿಸಿ, ಅದರೊಳಗೆ ತಲ್ಲಣ ಮೂಡಿಸಿ, ಅವುಗಳ ಮಾನವನ್ನು ಬಹಿರಂಗವಾಗಿ ಹರಾಜು ಹಾಕಿದ್ದ ಕೇಂದ್ರದ ಎನ್ ಡಿ ಎ ಸರ್ಕಾರ ಈಗ ಆರ್ ಬಿ ಐ ಯನ್ನೂಆ ಪಟ್ಟಿಗೆ ಸೇರಿಸುವತ್ತ ದಾಪುಗಾಲು ಹಾಕಿದೆ.