ಇದು ಯಾವುದೇ ಒಂದು ಪಕ್ಷಕ್ಕೆ ಮೀಸಲಾದ ಕೆಟ್ಟ ಅಭ್ಯಾಸವಲ್ಲ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ತಮಗೆ ಹತ್ತಿರವಾದವರನ್ನು ದೇಶದ ಪ್ರಮುಖ ಸಂಸ್ಥೆಗಳಿಗೆ ನೇಮಕ ಮಾಡಿ ಪರೋಕ್ಷವಾಗಿ ಅವುಗಳು ತಮ್ಮ ಹಿಡಿತದಲ್ಲಿ ಇರುವಂತೆ ನೋಡಿಕೊಳ್ಳುತ್ತವೆ. ಹೀಗಾಗಿಯೇ, ಸಂಸತ್ತಿನಲ್ಲಿ ಆಡಳಿತ ಪಕ್ಷ ಬದಲಾದಂತೆ ದೇಶದ ಪ್ರಮುಖ ಸಂಸ್ಥೆಗಳಲ್ಲೂ ಕೊಂಚಮಟ್ಟಿನ ಬದಲಾವಣೆಗಳು ಅಯಾಚಿತವಾಗಿ ನಡೆಯುತ್ತವೆ. ಇಂತಹ ಶಕ್ತಿ ತಮಗೆ ಬೇಕೆಂಬುದಕ್ಕಾಗಿಯೇ ಪಕ್ಷಗಳು ಅಧಿಕಾರಕ್ಕಾಗಿ ಕಿತ್ತಾಡುವುದು. ಹೀಗಾಗಿ, ಈ ರೀತಿಯ ಸಂಸ್ಥೆಯೊಳಗಿನ ರಾಜಕಾರಣದಿಂದ, ರಾಜಕೀಯ ಪಕ್ಷಗಳು ದೂರವಿರಬೇಕೆಂದು ಬಯಸುವುದು ತಪ್ಪಾಗುತ್ತದೆ. ಆದರೆ, ಈ ಅಧಿಕ ಪ್ರಸಂಗಿತನಕ್ಕೂ ಒಂದು ಮಿತಿ ಇರುತ್ತದೆ. ಈಗ ಅಧಿಕಾರದಲ್ಲಿರುವ ಬಿಜೆಪಿಯ ದೊಡ್ಡ ತಪ್ಪೆಂದರೆ ಈ ಮಿತಿಯನ್ನು ಅದು ಗೌರವಿಸದೇ ಇರುವುದು. ಈ ನಿಟ್ಟಿನಲ್ಲಿ ಇದುವರೆಗೂ ನಡೆದ ಕೇಂದ್ರ ಸರ್ಕಾರ ನಡೆಸಿದ ನೇಮಕಾತಿಗಳ ಬಗ್ಗೆ ಎರಡು ವರದಿಗಳ ವಿಶ್ಲೇಷಣೆ: ಭಾಗ-1
ರಾಜ್ಯಪಾಲರ ನೇಮಕ:
ಕಳೆದ ಬಾರಿ ಎನ್ ಡಿ ಎ ಅಧಿಕಾರಕ್ಕೆ ಬಂದ ಕೂಡಲೇ ಬಹುತೇಕ ರಾಜ್ಯಪಾಲರು ಬದಲಾದರು, ಅದು ನಿರೀಕ್ಷಿತವೂ ಆಗಿತ್ತು. ಯುಪಿಎ ಅಧಿಕಾರಕ್ಕೆ ಬಂದಾಗಲೂ ಇದೇ ರೀತಿಯ ಬದಲಾವಣೆಗಳು ಆಗಿದ್ದವು. ಈ ಕುರಿತ ವಿವಾದ ನ್ಯಾಯಲಯದ ಮೆಟ್ಟಿಲೂ ಏರಿತ್ತು. ಆದರೆ, ಬಿಜೆಪಿಯ ಕಾಲದಲ್ಲಿ ಆಗಿದ್ದು ಅಗಾಧ ಮತ್ತು ತ್ವರಿತ ಬದಲಾವಣೆ. 29 ರಾಜ್ಯಗಳ ಪೈಕಿ 26ರಲ್ಲಿ ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಜೆಪಿ ನೇಮಿತ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳು ಬಂದರು. ಸರ್ಕಾರದ ಪುಣ್ಯಕ್ಕೆ ಯಾವ ರಾಜ್ಯಪಾಲರೂ ನ್ಯಾಯಾಲಯದ ಬಾಗಿಲು ತಟ್ಟಲಿಲ್ಲ.
ರಾಜ್ಯಪಾಲರ ನೇಮಕದ ಮೂಲಕ ರಾಜ್ಯಗಳ ಆಡಳಿತದಲ್ಲಿ ತಮ್ಮ ಪ್ರಭಾವ ಇರುವಂತೆ ನೋಡಿಕೊಂಡ ಬಿಜೆಪಿ ಬಳಿಕ ಕಣ್ಣು ಹಾಯಿಸಿದ್ದು ನ್ಯಾಯಾಂಗದ ಕಡೆಗೆ. ತಮ್ಮ ಮೊದಲನೇ ಅದಿವೇಶನದಲ್ಲಿಯೇ ನ್ಯಾಯಧೀಶರ ನೇಮಕದಲ್ಲಿ ಅಗಾಧ ಬದಲಾವಣೆ ತರುವ ಪ್ರಯತ್ನ ಮಾಡಿತು. ಈಗಿರುವ ಕಾಲೇಜಿಯಂ ವ್ಯವಸ್ಥೆಯಲ್ಲಿ ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಿಸುತ್ತಾರೆ. ಅದರ ಬದಲಿಗೆ ಸಂವಿಧಾನಕ್ಕೆ ತಿದ್ದುಪಡಿ ತಂದು ನ್ಯಾಯಾಧೀಶರ ನೇಮಕಕ್ಕಾಗಿ ರಾಷ್ಚ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರಚಿಸುವ ಅದರ ಪ್ರಯತ್ನ ಮಾತ್ರ ಫಲ ಕೊಡಲಿಲ್ಲ. ಮಸೂದೆ ಎರಡೂ ಸದನದಲ್ಲಿಅಂಗೀಕೃತಗೊಂಡರೂ ಸರ್ವೋಚ್ಛ ನ್ಯಾಯಾಲಯ ಅದರ ವಿರುದ್ಧ ತೀರ್ಪ ನೀಡುವ ಮೂಲಕ ನ್ಯಾಯಾಂಗ ನೇಮಾಕಾತಿಗಳೊಳಗೆ ಮೂಗು ತೂರಿಸುವ ಸರ್ಕಾರದ ಯತ್ನಕ್ಕೆ ಇತಿ ಶ್ರೀ ಹಾಡಿತು.

ಆದರೂ. ನ್ಯಾಯಾಂಗ ವ್ಯವಸ್ಥೆಯೊಳಗೆ ನುಸುಳಿದ್ದ ರಾಜಕೀಯ ಮಾತ್ರ ತನ್ನ ಬಣ್ಣ ತೋರದೇ ಇರಲಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಇತರ ನ್ಯಾಯಮೂರ್ತಿಗಳು ಬಹಿರಂಗ ಪತ್ರಿಕಾಗೋಷ್ಟಿ ನಡೆಸಿದರು. ಅನಿರೀಕ್ಷಿತ ಮತ್ತು ಅನಪೇಕ್ಷಣೀಯವಾದ ಈ ನಡೆಯನ್ನು ನ್ಯಾಯಾಂಗದೊಳಗಿನ ಗುದ್ದಾಟ ಎಂಬಂತೆ ಬಿಂಬಿಸಲು ಯತ್ನಿಸಲಾಯಿತಾದರೂ, ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಆ ಸಂದರ್ಭದಲ್ಲಿ ತಮ್ಮ ಕೈಗೆತ್ತಿಕೊಂಡಿದ್ದ ರಾಜಕೀಯವಾಗಿ ಅತೀ ಪ್ರಮುಖವಾದ ಹಲವು ಕೇಸುಗಳು, ಅವರು ತೆಗೆದುಕೊಂಡ ಕೆಲವು ನಿರ್ಧಾರಗಳು ಈ ಬಹಿರಂಗ ಕಿತ್ತಾಟದ ಹಿಂದಿರುವ ರಾಜಕೀಯ ಹಸ್ತವನ್ನು ಅನಾವರಣಗೊಳಿಸಿದವು.

ನಂತರ ಸಿಬಿಐ ಸರದಿ:
ಸರ್ಕಾರದ ಈ ಭಾರೀ ಹಸ್ತಕ್ಷೇಪಕ್ಕೆ ಬಲಿಯಾಗುವ ನಂತರದ ಸರದಿ ಸಿಬಿಐನದ್ದು. ದೇಶದ ಈ ಪ್ರಮುಖ ತನಿಖಾ ಸಂಸ್ಥೆ ಯಾವಾಗಲೂ ಅಧಿಕಾರದಲ್ಲಿರುವ ಪಕ್ಷದ ಕೈ ಗೊಂಬೆಯಂತೆಯೇ ಕೆಲಸ ಮಾಡುತ್ತಾ ಬಂದಿದೆ. ರಾಜಕೀಯ ಲಾಭಕ್ಕಾಗಿ, ರಾಜಕೀಯ ದ್ವೇಷಕ್ಕಾಗಿ ಅನಾದಿ ಕಾಲದಿಂದಲೂ ಬಳಕೆಯಾಗುತ್ತಲೇ ಬಂದಿದೆ. ಆದರೆ, ಇತರ ಕಡೆ ಆದಂತೆಯೇಇಲ್ಲೂ ಬಿಜೆಪಿಯ ಹಸ್ತಕ್ಷೇಪ ಎಲ್ಲಾ ಮಿತಿಗಳನ್ನು ದಾಟಿತು. ತನಗೆ ಬೇಕಾದ ವ್ಯಕ್ತಿಯನ್ನು ಪ್ರಮುಖ ಸ್ಥಾನದಲ್ಲಿ ಕೂರಿಸಲು ಸಾಕಷ್ಟು ನಿಯಮಗಳನ್ನೂ ಬಿಜೆಪಿ ಉಲ್ಲಂಘಿಸಿ ಬಿಟ್ಟಿತು. ಮೋದಿಯ ನೆಚ್ಚಿನ ರಾಕೇಶ್ ಅಸ್ತಾನ ನಿಯಮ ಮೀರಿದ ಪದೋನ್ನತಿಗೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಒಪ್ಪದೇ ಇದ್ದದ್ದು ಎನ್ ಡಿ ಎ ಸರ್ಕಾರದ ಮತ್ತೊಂದು ಐತಿಹಾಸಿಕ ವಿವಾದಕ್ಕೆ ಕಾರಣವಾಯಿತು. ಇದೇ ಮೊದಲ ಬಾರಿಗೆ ಸಿಬಿಐಯೊಳಗೆ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದ ವ್ಯಕ್ತಿಗಳಿಬ್ಬರು ಬಹಿರಂಗ ಕದನಕ್ಕಿಳಿದರು. ಸರ್ಕಾರ ತನ್ನ ಮಾತಿಗೆ ಎದುರಾಡಿದ ವರ್ಮಾರನ್ನು ನಿರ್ದೇಶಕ ಸ್ಥಾನದಿಂದ ಕಿತ್ತು ಹಾಕಿತು. ಅಂತೂ ಸಿಬಿಐ ಮಾನವೂ ಬೀದಿಗೆ ಬಂತು. ಸಿಬಿಐ ಎಂದಿದ್ದರೂ ಸರ್ಕಾರದ ಕೈ ಗೊಂಬೆ ಎಂಬುದಕ್ಕೆ ನಿಚ್ಚಳ ಸಾಕ್ಷ ದೊರೆಯಿತು.
ಫಿಲ್ಮ್ ಇನ್ಸ್ಟಿಟ್ಯೂಟ್ ಗೆ ನೇಮಕಾತಿ:
ಪ್ರಮುಖ ಅಧಿಕಾರಗಳನ್ನು ಹೊಂದಿರುವ ಇಂತಹ ಸಂಸ್ಥೆಗಳು ಮಾತ್ರವಲ್ಲದೆ, ಸೆನ್ಸಾರ್ ಮಂಡಳಿ. ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ ಗಳಂತಹ ಕಲೆಗೆ ಸಂಬಂಧಿಸಿದ ಪ್ರತಿಷ್ಚಿತ ಸಂಸ್ಥೆಗಳಿಗೆ ನಡೆದ ನೇಮಕಾತಿಗಳೂ ಅತೀ ದೊಡ್ಡ ವಿವಾದ ಸೃಷ್ಚಿಸಿದವು. ಎಫ್ ಟಿ ಐ ಐ ವಿದ್ಯಾರ್ಥಿಗಳಂತೂ ಬರೋಬ್ಬರಿ ಎರಡು ವರ್ಷ ಪ್ರತಿಭಟನೆ ನಡೆಸಿ ಗಜೇಂದ್ರ ಚೌಹಾನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳೆಗಿಳಿಸುವಲ್ಲಿ ಸಫಲರಾದರು. ಚಿತ್ರರಂಗದ ದಿಗ್ಗಜರು ಅಲಂಕರಿಸಿದ್ದ ಸ್ಥಾನವನ್ನು ಮಹಾಭಾರತ ಧಾರವಾಹಿಯ ಯುದಿಷ್ಚಿರ ಪಾತ್ರ ಬಿಟ್ಟರೆ ಮತ್ತೆಲ್ಲೂ ಹೆಸರು ಮಾಡದ ನಟನಿಗೆ, ಬಿಜೆಪಿ ಬೆಂಬಲಿಗ ಎಂಬ ಒಂದೇ ಕಾರಣಕ್ಕೆ ನೀಡುವುದು ಸರಿಯಲ್ಲ ಎಂಬ ವಿದ್ಯಾರ್ಥಿಗಳ ವಾದಕ್ಕೆ ಅಂತೂ ಮಣಿದ ಸರ್ಕಾರ ಖ್ಯಾತ ನಟ ಅನುಪಮ್ ಖೇರ್ ಗೆ ಹುದ್ದೆ ನೀಡಿತು.
ಇಂತಹ ಸಂಸ್ಥೆಗಳೂ ಎಂದೂ ರಾಜಕೀಯದಿಂದ ಪೂರ್ಣ ಹೊರತಲ್ಲ. ಆದರೆ, ಬಿಜೆಪಿಗೂ ಇತರ ಪಕ್ಷಗಳಿಗೂ ಇಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ. ಇತರ ಪಕ್ಷಗಳು ತಮ್ಮನ್ನು ಬೆಂಬಲಿಸುವ ಆದರೆ ಆ ಸ್ಥಾನಕ್ಕೆ ಯೋಗ್ಯನಾದ ವ್ಯಕ್ತಿಗೆ ಹುದ್ದೆಗಳನ್ನು ನೀಡುತ್ತವೆ ಮತ್ತು ಅನಗತ್ಯ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಬಿಜೆಪಿಗೆ ಇಂತಹ ಹುದ್ದೆಗಳಲ್ಲಿ ಬೇಕಾಗಿರುವುದು “ಜೀ ಹುಝೂರ್” ಎನ್ನುವ ವ್ಯಕ್ತಿಗಳು. ಅನುಪಮ್ ಖೇರ್ ಕೂಡ ಬಿಜೆಪಿ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಂಡವರು. ಆದರೆ, ಸ್ಥಾನಕ್ಕೆ ಅರ್ಹ ವ್ಯಕ್ತಿ. ಇತರ ಪಕ್ಷಗಳಾದರೆ ಮೊದಲಿಗೇ ಅನುಪಮ್ ಖೇರ್ ಗೆ ಸ್ಥಾನ ನೀಡುತ್ತಿತ್ತು. ಆದರೆ, ಬಿಜೆಪಿಗೆಕಂಡಿದ್ದು ಎಲ್ಲರೂ ಮರೆತಿರುವ ಆದರೆ, ತನ್ನ ಪರ ಪ್ರಚಾರ ನಡೆಸುವ ನಟ ಚೌಹಾನ್.

ಇದೇ ತಪ್ಪನ್ನು ಬಿಜೆಪಿ ಸೆನ್ಸಾರ್ ಬೋರ್ಡ್ ಗೆ ನೇಮಕಾತಿಯಲ್ಲೂ ಮಾಡಿತು. ಬಿಗ್ರೇಡ್, ಮಸಾಲ ಚಿತ್ರಗಳಿಗೇ ಹೆಸರಾದ ನಿರ್ಮಾಪಕ ಪಹಲಾಜ್ ನಿಹಲಾನಿಯನ್ನು ಸೆನ್ಸಾರ್ ಬೋರ್ಡ್ ನ ಮುಖ್ಯಸ್ಥನ ಸ್ಥಾನದಲ್ಲಿ ಕೂರಿಸಿತು. ಮೋದಿಯ ದೊಡ್ಡ ಹಿಂಬಾಲಕ ನಿಹಲಾನಿಗೆ ಇದ್ದ ದೊಡ್ಡ ಯೋಗ್ಯತೆಯೆಂದರೆ ಮೋದಿ ಪರ ಚುನಾವಣಾ ಪ್ರಚಾರಕ್ಕಾಗಿ “ಹರ ಹರ ಮೋದಿ” ವಿಡಿಯೋ ಮಾಡಿದ್ದು. ತಾನೇ ದ್ವಂದ್ವಾರ್ಥದ ಮಸಾಲ ಚಿತ್ರಗಳ ನಿರ್ಮಾಪಕನಾಗಿದ್ದರೂ ಸೆನ್ಸಾರ್ ಮಂಡಳಿಯ ಮುಖ್ಯಸ್ಥನ ಸ್ಥಾನದಲ್ಲಿ ಕುಳಿತ ಕೂಡಲೇ ಭಾರತೀಯ ಸಂಸ್ಕೃತಿಯ ರಕ್ಷಕನೆಂಬಂತೆ ವರ್ತಿಸಿದ ನಿಹಲಾನಿ ವಿವಾದಕ್ಕಿಂತ ಹೆಚ್ಚಾಗಿ ಅಪಹಾಸ್ಯಕ್ಕೆ ಈಡಾದರು. ಅನೇಕ ಪ್ರಶಸ್ತಿ ವಿಜೇತ ಚಿತ್ರಗಳು, ಆಫ್ ಬೀಟ್ ಚಿತ್ರಗಳಿಗೆ ಬಿಡುಗಡೆ ನಿರಾಕರಿಸಿ ಅಥವಾ ಎ ಸರ್ಟಿಫಿಕೇಟ್ ನೀಡಿ ಕೆಲವು ಅತ್ಯಂತ ಅಸಹ್ಯಕರ ದ್ವಂದ್ವಾರ್ಥ ದೃಶ್ಯಗಳಿದ್ದ, `ಸಾಫ್ಟ್ ಪೋರ್ನ್’ ರೀತಿಯ ಬಾಲಿವುಡ್ ಚಿತ್ರಗಳಿಗೆ ಯಾವುದೇ ಕಟ್ ಇಲ್ಲದೆ ಬಿಡುಗಡೆಯ ಭಾಗ್ಯ ನೀಡಿದ ನಿಹಲಾನಿ ಕೊನೆಗೆ ಬಿಜೆಪಿಗೂ ತಲೆ ನೋವಾಗಿ ಪರಿಣಮಸಿದ್ದು ಸುಳ್ಳಲ್ಲ.
ಇಂತಹ ವಿಲಕ್ಷಣ ನೇಮಕಾತಿಯಿಂದಾಗಿ ತಾನೂ ಅಪಹಾಸ್ಯಕ್ಕೆ ಈಡಾದ ಸರ್ಕಾರ ಕೊನೆಗೂ ನಿಹಾಲಿಯನ್ನು ಕೆಳಗಿಳಿಸಿತು. ಚಿತ್ರರಂಗಕ್ಕೆ ಮರಳಿದ ‘ಸಂಸ್ಕಾರಿ’ ನಿಹಲಾನಿ ನಿರ್ಮಿಸಿದ ಮೊದಲ ಚಿತ್ರ ಎರಾಟಿಕ್ ಥ್ರಿಲರ್ ‘ಜ್ಯೂಲಿ’.