ಪುಟ್ಟ ರಾಜ್ಯ ಜಾರ್ಖಂಡ್ ನಲ್ಲಿ ಕಮಲ ಪಕ್ಷ ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿತೇ? ಈ ರಾಜ್ಯಕ್ಕೆ ಸಂಬಂಧಪಡದ ಅಥವಾ ಮತದಾರರಿಗೆ ಸಹ್ಯವಾಗದ ಯೋಜನೆಗಳನ್ನು ಪಟ್ಟಿ ಮಾಡಿ ಪ್ರಚಾರ ಮಾಡಿದ್ದೇ ಬಿಜೆಪಿಗೆ ಮುಳುವಾಯಿತೇ? ಎಲ್ಲೆಡೆ ಮೋದಿ ಅಲೆಯ ಟ್ರಂಪ್ ಕಾರ್ಡ್ ಹಿಡಿದು ಓಡಾಡಿದ್ದೇ ಬೂಮ್ ರಾಂಗ್ ಆಯಿತೇ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಒಂದೇ. ಅದುವೇ ಹೌದು ಎಂಬುದು.
ಬಿಜೆಪಿ ಇದುವರೆಗೆ ಅಧಿಕಾರದಲ್ಲಿದ್ದರೂ ಪ್ರತಿಪಕ್ಷಗಳಾದ ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಆರ್ ಜೆಡಿಗಳ ಮೈತ್ರಿಕೂಟವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೇ, ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದಂತೆ ಮೋದಿ ಅಲೆಯಲ್ಲೇ ತೇಲಿ ಸೋತು ಸುಣ್ಣವಾಗಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಅಣಿಯಾಗುತ್ತಿದೆ. ಹಾಗಾದರೆ ದೇಶದೆಲ್ಲೆಡೆ ನರೇಂದ್ರ ಮೋದಿ ಅಲೆಯಿಂದಲೇ ಗೆಲುವು ಸಾಧಿಸುತ್ತಾ ಬಂದಿದ್ದ ಬಿಜೆಪಿ ಜಾರ್ಖಂಡ್ ನಲ್ಲಿ ಹೀನಾಯ ಸೋಲು ಅನುಭವಿಸಿರುವ ಹೊಣೆಯನ್ನು ಇದೇ ನರೇಂದ್ರ ಮೋದಿ ಹೊತ್ತುಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ.
ಹೇಳಿ ಕೇಳಿ ಹೆಚ್ಚು ಆದಿವಾಸಿಗಳು ಮತ್ತು ಬುಡಕಟ್ಟು ಸಮುದಾಯದ ಜನರೇ ಹೆಚ್ಚಿರುವ ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿಯಾಗಿದ್ದ ಮೊದಲ ಆದಿವಾಸಿಯೇತರ ರಘುಬರ್ ದಾಸ್ ಸರ್ಕಾರದ ವಿರುದ್ಧ ಜೆಎಂಎಂ, ಕಾಂಗ್ರೆಸ್ ಮತ್ತು ಆರ್ ಜೆಡಿ ಒಗ್ಗಟ್ಟಾಗಿ ಹೆಣೆದ ತಂತ್ರ ಕೆಲಸ ಮಾಡಿದೆ. ಇಲ್ಲಿ ದಾಸ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡ ಈ ಮೂರೂ ಪಕ್ಷಗಳ ಮೈತ್ರಿಕೂಟ ಅದರಲ್ಲಿ ಯಶಸ್ಸನ್ನೂ ಸಾಧಿಸಿದೆ.
ತಮ್ಮದು ರಾಷ್ಟ್ರೀಯ ಪಕ್ಷ. ನಮ್ಮದು ರಾಷ್ಟ್ರೀಯವಾದ, ಹಿಂದುತ್ವವಾದಿಗಳು ನಾವು ಎಂದು ಹೇಳಿಕೊಳ್ಳುತ್ತಲೇ ಇದನ್ನು ಟ್ರಂಪ್ ಕಾರ್ಡ್ ಅನ್ನಾಗಿ ಬಳಸಿಕೊಂಡು ಪ್ರಚಾರ ಮಾಡಿದ ಬಿಜೆಪಿ ನಾಯಕರು, ಸ್ಥಳೀಯ ಮಟ್ಟದಲ್ಲಿ ಹಾಸುಹೊಕ್ಕಾಗಿ ಮಲಗಿದ್ದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲದೇ, ಮತ್ತದೇ ರಾಮಮಂದಿರ ನಿರ್ಮಾಣದ ಜಪ ಮಾಡಿದರು. ಇದರ ಜತೆಗೆ ಜಾರ್ಖಂಡ್ ರಾಜ್ಯಕ್ಕೆ ಸಂಬಂಧಪಡದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯನ್ನು ರದ್ದು ಮಾಡಿದ್ದು, ಅಕ್ರಮ ವಿದೇಶಿ ವಲಸಿಗರನ್ನು ಒಕ್ಕಲೆಬ್ಬಿಸುವುದು, ರಾಷ್ಟ್ರೀಯ ನಾಗರಿಕರ ನೋಂದಣಿಯಂತಹ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಜಾರ್ಖಂಡ್ ರಾಜ್ಯದ ಮತದಾರರ ಎದುರು ಇಟ್ಟರು.
ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಇಲ್ಲಿ ಧರ್ಮಾಧಾರಿತ ಗಿಮಿಕ್ ಮಾಡಲು ಪ್ರಯತ್ನಿಸಿದರು. ಮುಸ್ಲಿಂರನ್ನು ಗುರಿಯಾಗಿರಿಸಿ ಉದ್ದುದ್ದ ಭಾಷಣ ಮಾಡುವ ಮೂಲಕ ಹಿಂದೂ ಮತಗಳನ್ನು ಕ್ರೋಢಿಕರಿಸಲು ಕೈಹಾಕಿದರು. ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಯಾರು ಎಂಬುದು ನಿಮಗೆಲ್ಲಾ ಗೊತ್ತಿದೆ. ಅವರನ್ನು ಅವರು ಹಾಕಿರುವ ಬಟ್ಟೆಯಲ್ಲೇ ಗುರುತಿಸಬಹುದು ಎಂದೆಲ್ಲಾ ಮತದಾರರ ತಲೆಗೆ ಕೋಮುಭಾವನೆ ತುಂಬುವ ಪ್ರಯತ್ನ ಮಾಡಿದರು. ಆದರೆ, ಇದಕ್ಕೆ ಅಲ್ಲಿನ ಮತದಾರ ಕ್ಯಾರೇ ಎನ್ನಲಿಲ್ಲ.
ಇನ್ನೊಂದೆಡೆ ಬಿಜೆಪಿ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಕೂಡ ಕಟ್ಟರ್ ಹಿಂದುತ್ವವಾದದ ಮಾತುಗಳನ್ನಾಡಿದರು. ಮನೆ ಮನೆಯಲ್ಲೂ ರಘುಬರ್ ದಾಸ್ ಎಂದು ಪ್ರಚಾರ ಮಾಡಿದರು. ಅದಾಗಲೇ ಮುಖ್ಯಮಂತ್ರಿ ದಾಸ್ ಆಡಳಿತ ವಿರೋಧಿ ಅಲೆ ಎದ್ದಿದ್ದಾಗಿತ್ತು. ಹೀಗಾಗಿ ಅಮಿತ್ ಶಾ ಮಾಡಿದ ಮನೆ ಮನೆಯಲ್ಲೂ ರಘುಬರ್ ದಾಸ್ ಎಂಬ ಪ್ರಚಾರಕ್ಕೆ ತಕ್ಕ ಶಾಸ್ತಿ ಮಾಡಿದ ಮತದಾರರು ದಾಸ್ ಸರ್ಕಾರವನ್ನು ಮನೆಗೇ ಕಳುಹಿಸಿದರು.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಬಿಜೆಪಿ ಕೇವಲ ರಾಷ್ಟ್ರೀಯ ವಿಚಾರಗಳನ್ನು ಪ್ರಸ್ತಾಪ ಮಾಡಿ ಮತದಾರರಿಂದ ದೂರ ಸರಿದರೆ, ಮತ್ತೊಂದೆಡೆ ಕೇವಲ ಸ್ಥಳೀಯ ವಿಚಾರಗಳನ್ನು ಮುಂದಿಟ್ಟು ಜೆಎಂಎಂ, ಕಾಂಗ್ರೆಸ್ ಮತ್ತು ಆರ್ ಜೆಡಿ ಮೈತ್ರಿಕೂಟ ಮತದಾರರಿಗೆ ಹತ್ತಿರವಾಯಿತು.
ಹೇಗೆ ಈ ಮೈತ್ರಿಕೂಟಕ್ಕೆ ಜನತೆ ಸಾರಾಸಗಟಾಗಿ ಬೆಂಬಲ ಸೂಚಿಸಿದರು ಎಂದು ನೋಡುವುದಾದರೆ, ಪ್ರಚಾರದ ವೇಳೆ ಮೈತ್ರಿಕೂಟ ಸ್ಥಳೀಯ ವಿಚಾರಗಳೇ ತನ್ನ ಪ್ರಮುಖ ಕಾರ್ಯಸೂಚಿ ಎಂದು ಘೋಷಿಸಿತ್ತು. ಅಧಿಕಾರಕ್ಕೆ ಬಂದರೆ ಎರಡು ವರ್ಷಗಳಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶೇ.67 ರಷ್ಟು ಮೀಸಲಾತಿ ತರಲಾಗುತ್ತದೆ ಎಂದು ಭರವಸೆ ನೀಡಿತು. ಇದಲ್ಲದೇ, ಪದವೀಧರರು ಮತ್ತು ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿಗಳಿಗೆ ಮಾಸಿಕ ಕ್ರಮವಾಗಿ 5,000 ಮತ್ತು 7,000 ರೂಪಾಯಿಗಳ ಭತ್ಯೆ ನೀಡುವುದಾಗಿ ವಾಗ್ದಾನ ಮಾಡಿದ್ದು, ಖಾಸಗಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಶೇ.75 ರಷ್ಟು ಮೀಸಲಾತಿ ತರುವುದಾಗಿ ಹೇಳುವ ಮೂಲಕ ಮತದಾರರ ಮನಸನ್ನು ಗೆದ್ದಿತು.
ಇಲ್ಲಿ ಮೈತ್ರಿಕೂಟ ವ್ಯವಸ್ಥಿತವಾಗಿ ಚುನಾವಣೆ ಎದುರಿಸಿದ್ದರಿಂದ ಗೆಲುವನ್ನು ತನ್ನದಾಗಿಸಿಕೊಂಡಿತು ಎಂದು ಹೇಳಬಹುದು. ಹಾಗೆ ನೋಡುವುದಾದರೆ, 81 ವಿಧಾನಸಭಾ ಸದಸ್ಯ ಬಲವನ್ನು ಹೊಂದಿದ್ದು, ಈ ಪೈಕಿ ಜೆಎಂಎಂ 41 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಇದರಲ್ಲಿ 31 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಕಾಂಗ್ರೆಸ್ ಪಕ್ಷ 31 ಕ್ಷೇತ್ರಗಳಲ್ಲಿ ಕಣಕ್ಕಿಳಿದು 14 ರಲ್ಲಿ ಜಯ ಕಂಡಿದ್ದರೆ, ಆರ್ ಜೆಡಿ 7 ಕ್ಷೇತ್ರಗಳ ಪೈಕಿ 4 ರಲ್ಲಿ ಜಯ ಗಳಿಸಿದೆ. ಈ ಮೂಲಕ ಮೂರೂ ಪಕ್ಷಗಳು ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡು ಒಟ್ಟು 48 ಸ್ಥಾನಗಳಲ್ಲಿ ಜಯ ಗಳಿಸಿದ್ದು, ಬಿಜೆಪಿಯನ್ನು ಮೂರನೇ ಬಾರಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಿವೆ. ಕಳೆದ ಬಾರಿ 49 ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿ ಅದರ ಅರ್ಧದಷ್ಟು ಸ್ಥಾನಗಳಲ್ಲೂ ಗೆಲ್ಲಲು ಸಾಧ್ಯವಾಗಿಲ್ಲ ಎಂದರೆ ಅದರ ಆಡಳಿತ ವಿರೋಧಿ ಅಲೆ ಎಷ್ಟಿದೆಯೆಂಬುದನ್ನು ಊಹಿಸಬಹುದಾಗಿದೆ.
ಇಲ್ಲಿ ಮತ್ತೊಂದು ಅಂಶವೆಂದರೆ ಬಿಜೆಪಿ ತನ್ನ ಹಳೆಯ ಸುದೇಶ್ ಮಹತೋ ನೇತೃತ್ವದ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್ ಯು) ಮತ್ತು ಲೋಕ ಜನಶಕ್ತಿ ಪಾರ್ಟಿ ಮೈತ್ರಿಯನ್ನು ಕಳೆದುಕೊಂಡು ಎಲ್ಲಾ 81 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದು ಹಿನ್ನಡೆಗೆ ಸ್ವಲ್ಪ ಮಟ್ಟಿನ ಕಾರಣವಾಗಿರುವಂತೆ ಕಂಡುಬರುತ್ತಿದೆ.
ಮುಖ್ಯಮಂತ್ರಿಯಾಗಿದ್ದ ರಘುಬರ್ ದಾಸ್ ಅವರು ಆದಿವಾಸಿಗಳಿಗೆ ಪಥ್ಯವಲ್ಲದ ವಿವಾದಿತ ಭೂಕಾಯಿದೆಗಳನ್ನು ಜಾರಿಗೆ ತರಲು ಹೊರಟಿದ್ದು ಬಿಜೆಪಿ ಸೋಲಿಗೆ ಮತ್ತೊಂದು ಪ್ರಮುಖ ಕಾರಣ ಎಂದು ವಿಶ್ಲೇಷಿಸಬಹುದು. ಏಕೆಂದರೆ, ಸಂತಾಲ್ ಪರಗಣ ಕಾಯ್ದೆ ಮತ್ತು ಚೋಟನಾಗ್ಪುರ ಟೆನೆನ್ಸಿ ಕಾಯ್ದೆಗಳನ್ನು ಜಾರಿಗೆ ತರುವ ಪ್ರಸ್ತಾಪವನ್ನು ದಾಸ್ ಸರ್ಕಾರ ಮಾಡಿತ್ತು. ಒಂದು ವೇಳೆ ಈ ಕಾನೂನುಗಳನ್ನು ಜಾರಿಗೆ ತಂದರೆ ತಮ್ಮ ಸಾಂಪ್ರದಾಯಿಕ ಭೂ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತದೆ ಎಂಬ ಭೀತಿ ಆದಿವಾಸಿಗಳನ್ನು ಕಾಡುತ್ತಿತ್ತು. ಈ ಕಾರಣದಿಂದಲೇ ಆದಿವಾಸಿಗಳು ಬಿಜೆಪಿಯನ್ನು ದೂರ ಇಟ್ಟರು.
ಈ ವಿಚಾರಗಳನ್ನು ಬಿಜೆಪಿಯಾಗಲೀ ಅಥವಾ ಪ್ರತಿಪಕ್ಷಗಳಾಗಲೀ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪ್ರಸ್ತಾಪ ಮಾಡಲಿಲ್ಲ. ಹೀಗಿದ್ದಾಗ್ಯೂ ಆದಿವಾಸಿಗಳು ಮಾತ್ರ ಈ ಕಾನೂನುಗಳ ವಿರುದ್ಧ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಬಿಜೆಪಿ ಜಾರ್ಖಂಡ್ ರಾಜ್ಯಕ್ಕೆ ಅಪ್ರಸ್ತುತವೆನಿಸುವ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದು, ಸ್ಥಳೀಯ ವಿಚಾರಗಳನ್ನು ಮರೆತ್ತಿದ್ದರಿಂದ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದರೆ, ಬಿಜೆಪಿಯ ಆಡಳಿತ ವಿರೋಧಿ ಅಲೆಯನ್ನು ಪ್ಲಸ್ ಪಾಯಿಂಟ್ ಆಗಿ ಮಾರ್ಪಾಟು ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ಜೆಎಂಎಂ, ಕಾಂಗ್ರೆಸ್ ಮತ್ತು ಆರ್ ಜೆಡಿ ಮೈತ್ರಿಕೂಟ ಹೆಚ್ಚಾಗಿ ಸ್ಥಳೀಯ ವಿಚಾರಗಳನ್ನು ಪ್ರಸ್ತಾಪಿಸಿ ದಶಕದ ನಂತರ ಅಧಿಕಾರದ ಗದ್ದುಗೆ ಏರುತ್ತಿದೆ.