ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ (ಎಐಸಿಸಿ) ಸೋನಿಯಾ ಗಾಂಧಿ ಮತ್ತೊಮ್ಮೆ ಅಧ್ಯಕ್ಷರಾಗುವುದರೊಂದಿಗೆ ನೆಹರೂ ಕುಟುಂಬ ಸದಸ್ಯರಲ್ಲದವರನ್ನು ಪಕ್ಷದ ನಾಯಕರು ಈ ಸ್ಥಾನಕ್ಕೆ ಒಪ್ಪಿಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಲೋಕಸಭೆ ಚುನಾವಣೆಯ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಅವರ ಮನವೊಲಿಸುವ ಪ್ರಯತ್ನ ವಿಫಲವಾಗಿತ್ತು. ನಂತರದಲ್ಲಿ ನೆಹರೂ ಕುಟುಂಬದ ಸದಸ್ಯರಲ್ಲದವರನ್ನು ಈ ಸ್ಥಾನಕ್ಕೆ ಕುಳ್ಳಿರಿಸಲು ಪಕ್ಷದ ನಾಯಕರು ಹಲವು ಸಭೆಗಳನ್ನು ನಡೆಸಿದರಾದರೂ ಅದು ವಿಫಲವಾಗಿ ಕೊನೆಗೆ ಸೋನಿಯಾ ಗಾಂಧಿ ಅವರ ಹೆಗಲಿಗೆ ಈ ಜವಾಬ್ದಾರಿಯನ್ನು ಹಾಕಿದ್ದಾರೆ. ಕಾಂಗ್ರೆಸ್ ನಾಯಕರ ಈ ತೀರ್ಮಾನವನ್ನು ಬಿಜೆಪಿ, ಇದು ಭಟ್ಟಂಗಿತನ ಮತ್ತು ಗುಲಾಮಗಿರಿಯ ಕ್ರಿಯೆ ಎಂದು ಟೀಕಿಸಿದೆ.
ಹಾಗೆಂದು ಇದು ಭಟ್ಟಂಗಿತನ, ಗುಲಾಮಗಿರಿಯ ಸಂಕೇತ ಖಂಡಿತವಾಗಿಯೂ ಅಲ್ಲ. ಇಲ್ಲಿ ಕಾಂಗ್ರೆಸ್ ನಾಯಕರ ಸ್ವಾರ್ಥವೂ ಅಡಗಿದೆ. ಅದರಲ್ಲಿ ಮೊದಲನೆಯದ್ದು ಸೋಲಿನಲ್ಲೇ ಮುಂದುವರಿಯುತ್ತಿರುವ ಕಾಂಗ್ರೆಸ್ ಜವಾಬ್ದಾರಿ ಹೊತ್ತುಕೊಳ್ಳಲು ಇತರರಿಗೆ ಇಷ್ಟವಿಲ್ಲದೇ ಇರುವುದು. ಎರಡನೆಯದಾಗಿ, ನೆಹರೂ ಕುಟುಂಬ ಹೊರತಾಗಿ ಅಧ್ಯಕ್ಷ ಸ್ಥಾನ ತನಗೆ ಸಿಗಬೇಕು. ಅದು ಸಾಧ್ಯವಾಗದಿದ್ದರೆ ಇತರರಿಗೆ ಸಿಗಬಾರದು ಎಂಬ ನಾಯಕರ ಸ್ವಾರ್ಥ. ಈ ಕಾರಣಕ್ಕಾಗಿ ನೆಹರೂ ಕುಟುಂಬ ಸದಸ್ಯರಲ್ಲದವರನ್ನು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿ ಎಂದು ಸ್ವತಃ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಹೇಳಿದರೂ ಕೇಳದ ಇತರೆ ನಾಯಕರು ಆ ಕುಟುಂಬಕ್ಕೇ ಮಾನ್ಯತೆ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜಿನಾಮೆ ನೀಡಿದ ಬಳಿಕ ಪ್ರಮುಖವಾಗಿ ಕೇಳಿ ಬಂದಿದ್ದು ಪ್ರಿಯಾಂಕಾ ಗಾಂಧಿ ಹೆಸರು. ಆದರೆ, ಈ ಜವಾಬ್ದಾರಿ ಹೊತ್ತುಕೊಳ್ಳಲು ಪ್ರಿಯಾಂಕಾ ನಿರಾಕರಿಸಿದ್ದರಿಂದ ಬೇರೆಯವರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್ ವರ್ಕಿಂಗ್ ಕಮಿಟಿಗೆ (ಸಿಡಬ್ಲ್ಯುಸಿ) ವಹಿಸಲಾಯಿತು. ಸಿಡಬ್ಲ್ಯುಸಿ ಮುಂದೆ ಈ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ,ಮುಕುಲ್ ವಾಸ್ನಿಕ್, ಸುಶೀಲ್ ಕುಮಾರ್ ಶಿಂಧೆ, ಯುವ ನಾಯಕರಾದ ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧ್ಯಾ, ಮಿಲಿಂದ್ ದೇವೊರ ಅವರ ಹೆಸರುಗಳಿದ್ದವು. ಇದರ ಮಧ್ಯೆ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ, ಎ. ಕೆ. ಆಂಟನಿ ಅವರೂ ಎಐಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಾಗಿದ್ದರು.
ಇದರಿಂದಾಗಿ ಸಿಡಬ್ಲ್ಯುಸಿ ಸಭೆಗಳಲ್ಲಿ ಹೊಸ ಅಧ್ಯಕ್ಷರ ನೇಮಕಕ್ಕೆ ಒಂದೊಂದು ಹೆಸರು ಪ್ರಸ್ತಾಪವಾಗುತ್ತಿದ್ದರೂ ಅದರ ಸಾಧಕಭಾದಕಗಳ ಕುರಿತು ಚರ್ಚೆಯಾಗುವ ಬದಲು ಬೇಡ ಎನ್ನುವ ಮಾತೇ ಮುನ್ನಲೆಗೆ ಬರುತ್ತಿತ್ತು. ಸಭೆಯಲ್ಲಿ ಅತಿ ಹೆಚ್ಚು ಚರ್ಚೆಯಾಗಿದ್ದು ಮಲ್ಲಿಕಾರ್ಜುನ ಖರ್ಗೆ ಅವರ ಕುರಿತಾಗಿ. 2014-19ರ ಅವಧಿಯಲ್ಲಿ (ಮೋದಿ-1ರಲ್ಲಿ) ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾಗಿದ್ದ ಖರ್ಗೆ ಅವರು ನಡೆದುಕೊಂಡ ರೀತಿ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿ ನಿಂತಿತ್ತು. ಲೋಕಸಭೆಯಲ್ಲಿ ಖರ್ಗೆಯವರಿಗೆ ಅಧಿಕೃತವಾಗಿ ಪ್ರತಿಪಕ್ಷ ನಾಯಕನ ಸ್ಥಾನ ಸಿಗದೇ ಇದ್ದರೂ, ಕೇವಲ 44 ಸಂಸದರೊಂದಿಗೆ ಕಾಂಗ್ರೆಸ್ ಪಕ್ಷದ ಹೊಣೆ ಹೊತ್ತಿದ್ದರೂ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲದೆ, ಯುಪಿಎ-2ರಲ್ಲಿ (2009-2014) ಕೇಂದ್ರ ಸಚಿವರಾಗಿದ್ದಾಗಲೂ ಖರ್ಗೆ ಅವರ ಸಾಧನೆ ಉತ್ತಮವಾಗಿತ್ತು. ಬಹುತೇಕ ಹಿರಿಯ ಸಚಿವರು ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಆರೋಪದಲ್ಲಿ ಸಿಲುಕಿದ್ದಾಗಲೂ ಖರ್ಗೆ ವಿರುದ್ಧ ಅಂತಹ ಯಾವುದೇ ಆರೋಪ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ಸಿನ ಎರಡನೇ ಹಂತದ ನಾಯಕರಿಗೆ ಖರ್ಗೆ ಅವರ ಬಗ್ಗೆ ಒಲವಿತ್ತು.

ಆದರೆ, ಹಿರಿಯ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಬೇಡವಾಗಿತ್ತು. ಪಿ. ಚಿದಂಬರಂ, ಎ. ಕೆ. ಆಂಟನಿ ಸೇರಿದಂತೆ ಅನೇಕ ಪ್ರಮುಖ ನಾಯಕರು ಪಕ್ಷದಲ್ಲಿ ಖರ್ಗೆ ಅವರಿಗಿಂತ ಹಿರಿಯರು. ಮೇಲಾಗಿ ನೆಹರೂ ಕುಟುಂಬಕ್ಕಷ್ಟೇ ನಿಷ್ಠರಾಗಿರುವ ಇವರಿಗೆ ಖರ್ಗೆ ಸೇರಿದಂತೆ ಕಾಂಗ್ರೆಸ್ಸಿನ ಇತರೆ ಪ್ರಮುಖರನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಇರಲಿಲ್ಲ. ಹೀಗಾಗಿ ಖರ್ಗೆ, ಮುಕುಲ್ ವಾಸ್ನಿಕ್ ಹೆಸರು ಬಂದಾಗಲೆಲ್ಲಾ ಒಂದಲ್ಲಾ ಒಂದು ನೆಪ ಹೇಳಿಕೊಂಡು ನಿರಾಕರಿಸುತ್ತಿದ್ದರು. ಇನ್ನು ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧ್ಯಾ, ಮಿಲಿಂದ್ ದೇವೊರ ಅವರಂತಹ ಯುವಕರನ್ನು ಒಪ್ಪಿಕೊಳ್ಳುವುದು ಎಲ್ಲಿಂದ ಬಂತು? ಹೀಗಾಗಿ ಮತ್ತೆ ನೆಹರೂ ಕುಟುಂಬದತ್ತಲೇ ಒಲವು ವ್ಯಕ್ತವಾಯಿತು.
ಖರ್ಗೆ ಮುಂಚೂಣಿಯಲ್ಲಿದ್ದುದೇ ಸೋನಿಯಾ ಆಯ್ಕೆಗೆ ಕಾರಣ
ರಾಷ್ಟ್ರೀಯ ಪಕ್ಷಗಳಲ್ಲಿ ಉತ್ತರ ಭಾರತದ ಲಾಬಿ ಹೆಚ್ಚಾಗಿದೆ. ಕಾಂಗ್ರೆಸ್ ಕೂಡ ಇದಕ್ಕೆ ಹೊರತಾಗಿಲ್ಲ. ಮುಕುಲ್ ವಾಸ್ನಿಕ್ ಅವರ ಹೆಸರಿಗೆ ಹೆಚ್ಚು ಬೆಂಬಲ ಸಿಕ್ಕಿದ್ದರೆ ಹಿರಿಯ ನಾಯಕರು ಒಪ್ಪಿಕೊಳ್ಳುತ್ತಿದ್ದರೇನೋ? ಆದರೆ, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಂಚೂಣಿಯಲ್ಲಿದ್ದುದರಿಂದ ಹಿರಿಯ ದಕ್ಷಿಣ ಭಾರತದ ಪ್ರಮುಖ ನಾಯಕರಾದ ಚಿದಂಬರಂ ಮತ್ತು ಆಂಟನಿ ಒಪ್ಪಿಕೊಳ್ಳಲಿಲ್ಲ. ಇದಕ್ಕೆ ಬೆಂಬಲವಾಗಿ ಉತ್ತರ ಭಾರತದ ಲಾಬಿಯೂ ಕೆಲಸ ಮಾಡಿತು. ದಕ್ಷಿಣ ಭಾರತದವರನ್ನು ಆಯ್ಕೆ ಮಾಡಿದರೆ ಅವರು ಉತ್ತರ ಭಾರತದ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಾರೆ ಎಂಬ ಆರೋಪವನ್ನೂ ಮಾಡಲಾಯಿತು. ಖರ್ಗೆ ಅವರ ಆಯ್ಕೆಗೆ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದನ್ನೇ ನೆಪ ಮಾಡಿಕೊಂಡು ವಿರೋಧ ವ್ಯಕ್ತಪಡಿಸಿದರು.
ಇವೆಲ್ಲವೂ ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಶನಿವಾರ ನಡೆದ ಅಂತಿಮ ಸಭೆಯ ಮೊದಲೇ ನಿರ್ಧಾರವಾಗಿತ್ತು. ಹೀಗಾಗಿ ಅಧ್ಯಕ್ಷ ಸ್ಥಾನ ತ್ಯಜಿಸಿದ್ದ ರಾಹುಲ್ ಗಾಂಧಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ನೆಹರೂ ಕುಟುಂಬ ಸದಸ್ಯರಲ್ಲದವರನ್ನು ಆಯ್ಕೆ ಮಾಡಿ ಎಂದು ಪದೇ ಪದೇ ಹೇಳಿದ್ದರೂ ಸಿಡಬ್ಲ್ಯುಸಿ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ಮತ್ತೆ ರಾಹುಲ್ ಹೆಸರನ್ನೇ ಸೂಚಿಸಿದರು. ರಾಹುಲ್ ಇದಕ್ಕೆ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿದಿದ್ದರಿಂದ ಪ್ರಿಯಾಂಕಾ ವಾದ್ರಾ ಹೆಸರನ್ನು ಎಳೆತಂದರು. ಅದಕ್ಕೂ ಒಪ್ಪಿಗೆ ಸಿಗದ ಕಾರಣ ಬಲವಂತವಾಗಿ ಸೋನಿಯಾ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕುಳ್ಳಿರಿಸಲಾಯಿತು.
ಇದಕ್ಕೆ ಇನ್ನೂ ಒಂದು ಕಾರಣ ಪಿ. ಚಿದಂಬರಂ ಮತ್ತು ಎ. ಕೆ. ಆಂಟನಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು. ಚಿದಂಬರಂ ಮತ್ತು ಪುತ್ರನ ವಿರುದ್ಧ ಭ್ರಷ್ಟಾಚಾರದ ಆರೋಪ ಇದ್ದುದರಿಂದ ಅವರನ್ನು ಆಯ್ಕೆ ಮಾಡಿದರೆ ಪಕ್ಷ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಕೊಳ್ಳಬಹುದು ಎಂದು ಆರಂಭದಲ್ಲೇ ನಿರಾಕರಿಸಲಾಗಿತ್ತು. ಇನ್ನು ಆಂಟನಿ ಅವರ ಬಗ್ಗೆ ಸೋನಿಯಾ ಮತ್ತು ರಾಹುಲ್ ಅವರಿಗೆ ಒಪ್ಪಿಗೆ ಇರಲಿಲ್ಲ. ಇದರಿಂದಾಗಿ ಈ ಇಬ್ಬರೂ ಸೇರಿ ಖರ್ಗೆ ಮತ್ತು ಮುಕುಲ್ ವಾಸ್ನಿಕ್ ಅವರ ಹೆಸರಿಗೆ ಸಹಮತ ವ್ಯಕ್ತಪಡಿಸಲಿಲ್ಲ. ತಮಗೆ ಸಿಗದ ಸ್ಥಾನ ಬೇರೆಯವರಿಗೂ ಸಿಗಬಾರದು ಎಂಬುದು ಇವರ ವಿರೋಧದ ಹಿಂದಿನ ಉದ್ದೇಶವಾಗಿತ್ತು. ಈ ವಿಚಾರದಲ್ಲಿ ಉತ್ತರ ಭಾರತದ ಕಾಂಗ್ರೆಸ್ ನಾಯಕರ ಬೆಂಬಲವೂ ಸಿಕ್ಕಿದ್ದರಿಂದ ಕೊನೆಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೆಹರೂ ಕುಟುಂಬದ ಹೆಗಲಿಗೆ ಬೀಳುವಂತಾಯಿತು. ಇಲ್ಲಿ ಗುಲಾಮಗಿರಿ, ಭಟ್ಟಂಗಿತನಕ್ಕಿಂತ ನನಗೆ ದಕ್ಕದ್ದು ಬೇರೆಯವರಿಗೂ ದಕ್ಕಬಾರದು ಎಂಬ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸ್ವಾರ್ಥವೇ ಮೆರೆಯಿತು.