ರಾಜಕಾರಣಿಗಳು ಸೇನೆಯ ಹೆಸರು ಬಳಸಿಕೊಂಡು ವೋಟು ಗಿಟ್ಟಿಸುವುದು ಇಂಡಿಯಾದಲ್ಲಿ ಹೊಸತೇನಲ್ಲ. ಆದರೆ, ಇದುವರೆಗೂ ಪರೋಕ್ಷವಾಗಿ ನಡೆಯುತ್ತ ಬಂದಿದ್ದ ಇಂಥದ್ದೊಂದು ತಂತ್ರ ಈಗ ನಿರ್ಲಜ್ಜೆಯಿಂದ ನಡೆಯುತ್ತಿದೆ. ‘ಸದಾ ಸಮತೂಕದ ಮಾತಿನ ಮೂಲಕವೇ ಎದುರಾಳಿಗೆ ಚಳ್ಳೆಹಣ್ಣು ತಿನ್ನಿಸುತ್ತಾರೆ’ ಎಂಬ ಖ್ಯಾತಿಯ ಪ್ರಧಾನಿ ನರೇಂದ್ರ ಮೋದಿ ಕೂಡ, “ಬಾಲ್ಕೋಟ್‌ನಲ್ಲಿ ವಾಯುದಾಳಿ ನಡೆಸಿದ ವೀರ ಸೈನಿಕರಿಗೆ ಹಾಗೂ ಪುಲ್ವಾಮ ಘಟನೆಯ ಹುತಾತ್ಮರಿಗೆ ನಿಮ್ಮ ವೋಟುಗಳನ್ನು ಅರ್ಪಿಸಿ,” ಎಂದು ಕರೆ ನೀಡಿ, ಸೇನಾ ಬಳಗದ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರಧಾನಿಗಿಂತಲೂ ಒಂದು ಹೆಜ್ಜೆ ಮುಂದೆ ಹೋದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸೇನೆಯನ್ನು ‘ಮೋದಿಜಿ ಕಿ ಸೇನಾ’ ಎಂದು ಕರೆದು ಎಲ್ಲರಿಂದ ಬೈಗುಳದ ಮಳೆ ಬರಮಾಡಿಕೊಂಡರು. ಇನ್ನು, ಚುನಾವಣಾ ಪ್ರಚಾರ ಸಭೆಗಳ ಫ್ಲೆಕ್ಸ್‌ಗಳಲ್ಲಿ ಹುತಾತ್ಮ ಸೈನಿಕರ ಫೋಟೊಗಳನ್ನು ಬಳಸಿದ್ದು, ಬಾಲ್ಕೋಟ್ ವಾಯುದಾಳಿಯ ಅಭಿನಂದನ್ ಚಿತ್ರ ಉಪಯೋಗಿಸಿಕೊಂಡಿದ್ದು… ಹೀಗೆ ಸರಣಿ ಪ್ರಮಾದಗಳು ನಡೆದುಹೋದವು. ಇದನ್ನೆಲ್ಲ ಕಂಡು ಕೋಪಗೊಂಡಿರುವ ಸೇನೆಯ ಮಾಜಿ ಸೈನಿಕರು ರಾಷ್ಟ್ರಪತಿಗೊಂದು ಪತ್ರ ಬರೆದು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಜೊತೆಗೆ, ನೋಟಿಸ್ ಕೊಡುವುದು ಮುಂತಾದ ವಿಳಂಬ ದಾರಿಗಳನ್ನು ಬಿಟ್ಟು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದೂ ಆಗ್ರಹಿಸಿದ್ದಾರೆ. ಪತ್ರದ ಮುಖ್ಯಾಂಶಗಳು ಇಲ್ಲಿವೆ.
- ನಿಮಗೆ ಗೊತ್ತೇ ಇದೆ, ತಮ್ಮ ಮೇಲೆ ಋಣಾತ್ಮಕ ಪರಿಣಾಮ ಆಗುತ್ತಿದೆ ಎಂಬ ವಿಷಯಗಳಲ್ಲಿ ಸಹ ಸೇನೆಯಲ್ಲಿ ಕೆಲಸ ಮಾಡುವ ಯಾರೂ ಮಾತನಾಡುವ ಹಾಗಿಲ್ಲ. ಸೇನೆಯ ನಿಯಮಗಳಿಗೆ ಬೆಲೆ ಕೊಟ್ಟು, ಎಲ್ಲವನ್ನೂ ಸಹಿಸಿಕೊಂಡು ಕರ್ತವ್ಯ ನಿರ್ವಹಿಸಲಾಗುತ್ತದೆ. ಸೇನೆಯ ಮಂದಿ ಭಾರತೀಯ ಸಂವಿಧಾನಕ್ಕೆ ಮಾತ್ರ ತಲೆಬಾಗುವುದು. ಹಾಗಾಗಿ, ಮೂರೂ ಪಡೆಗಳ ಅಧಿಪತಿ ಎಂದು ಸಂವಿಧಾನದಲ್ಲಿ ಕರೆಸಿಕೊಂಡ ನಿಮಗೆ ಈ ಪತ್ರ ಬರೆಯುತ್ತಿದ್ದೇವೆ.
- ಸೇನೆಯು ಗಡಿಯಲ್ಲಿ ನಡೆಸುವ ಎಲ್ಲ ಚಟುವಟಿಕೆಗಳ ಶ್ರೇಯವನ್ನು ತಮ್ಮದೇ ಎಂದು ಬಿಂಬಿಸಿಕೊಳ್ಳಲಾಗುತ್ತಿದೆ. ಅದೆಲ್ಲವನ್ನೂ ಮೀರಿ, ಇನ್ನೂ ಮುಂದೆ ಹೋಗಿ, ಸೇನಾಪಡೆಗಳನ್ನು ‘ಮೋದಿಯವರ ಸೇನಾಪಡೆ’ ಎಂದು ಹೇಳಿಕೊಳ್ಳಲಾಗುತ್ತಿದೆ. ಮಿಲಿಟರಿ ಸಮವಸ್ತ್ರಗಳನ್ನು ಧರಿಸಿ ಚುನಾವಣಾ ಪ್ರಚಾರ ಮಾಡಲಾಗುತ್ತಿದೆ. ವಿಂಗ್ ಕಮಾಂಡರ್ ಅಭಿನಂದನ್ ಸೇರಿದಂತೆ ಸೇನಾ ಸಿಬ್ಬಂದಿಯ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ.
- ನೌಕಾದಳದ ಮಾಜಿ ಮುಖ್ಯಸ್ಥರು ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದನ್ನು ನಾವು ಶ್ಲಾಘಿಸುತ್ತೇವೆ. ಈ ಕುರಿತು ವಿವರಣೆ ನೀಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಸೇರಿದಂತೆ ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ ಕೂಡ. ಆದರೆ, ಇಷ್ಟೆಲ್ಲ ಆದ ನಂತರವೂ ಸೇನೆಯ ಹೆಸರು ದುರ್ಬಳಕೆ ಮಾಡುತ್ತಿರುವವರ ವರ್ತನೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂಬುದು ನಿಜಕ್ಕೂ ವಿಷಾದನೀಯ.
- ಈಗಾಗಲೇ ಸಂಸತ್ ಚುನಾವಣೆ ಚಾಲ್ತಿಗೆ ಬಂದಿದೆ. ನೀತಿಸಂಹಿತೆ ಎಂಬುದೊಂದು ಇದೆಯಾದರೂ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಅಭ್ಯರ್ಥಿಗಳು ಅದನ್ನು ಮೀರುವಂಥ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಸೇನೆಯ ಹೆಸರು ದುರ್ಬಳಕೆ ಮಾಡಿಕೊಳ್ಳುವ ರಾಜಕಾರಣಿಗಳ ಈ ವರ್ತನೆ ಚುನಾವಣೆ ಕಾಲದಲ್ಲಿ ಅಥವಾ ಚುನಾವಣೆ ಹತ್ತಿರದಲ್ಲಿ ಇರುವಾಗ ಮಾತ್ರವೇ ಹೆಚ್ಚಾಗುತ್ತಿರುವುದರ ಕುರಿತು ನಮಗೆ ಆತಂಕವಿದೆ.
- ಸೇನೆಯ ಹೆಸರನ್ನು, ಚಟುವಟಿಕೆಗಳನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳುವುದು ಸೇನೆಯಲ್ಲಿ ಸೇವೆ ಸಲ್ಲಿಸುವವರ ನೈತಿಕತೆ ಮತ್ತು ಹೋರಾಟದ ಮನೋಭಾವದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದಕ್ಕೆ ನಿಮ್ಮ ಸಹಮತವಿದೆ ಎಂದು ನಾವು ನಂಬಿದ್ದೇವೆ. ಸೇನಾ ಸಿಬ್ಬಂದಿ ಮೇಲಿನ ಇಂಥ ನಕಾರಾತ್ಮಕ ಪರಿಣಾಮಗಳು ದೇಶದ ಸಮಗ್ರತೆಗೆ ಮತ್ತು ದೇಶದ ಭದ್ರತೆಗೆ ಅಪಾಯಕಾರಿ.
- ಸೇನೆಯ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಂಬಂಧ ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. ಜೊತೆಗೆ, ಸೇನೆಯ ಹೆಸರು, ಸೇನೆಯ ಯಾವುದೇ ಚಟುವಟಿಕೆ, ಸೇನೆಯ ಸಮವಸ್ತ್ರ ಹಾಗೂ ಲಾಂಛನಗಳು ಮುಂತಾದ ಯಾವುದನ್ನೂ ರಾಜಕೀಯ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ನಿರ್ದೇಶಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.
ಪತ್ರ ಬರೆದವರು: ಜನರಲ್ ಎಸ್ ಎಫ್ ರೋಡ್ರಿಗಸ್, ಜನರಲ್ ಶಂಕರ್ ರಾಯ್ ಚೌಧರಿ, ಜನರಲ್ ದೀಪಕ್ ಕಪೂರ್, ಅಡ್ಮಿರಲ್ ಲಕ್ಷ್ಮಿನಾರಾಯಣ ರಾಮದಾಸ್, ಅಡ್ಮಿರಲ್ ವಿಷ್ಣು ಭಾಗವತ್, ಅಡ್ಮಿರಲ್ ಸುರೇಶ್ ಮೆಹ್ತಾ, ನೌಕಾದಳದ ಮಾಜಿ ಮುಖ್ಯಸ್ಥ ಎನ್ ಸಿ ಸೂರಿ, 12 ಮಂದಿ ಲೆಫ್ಟಿನಂಟ್ ಜನರಲ್, ಮೂವರು ವೈಸ್ ಅಡ್ಮಿರಲ್, ಏರ್ ಮಾರ್ಷಲ್ ವೀರ್ ನಾರಾಯಣ್, 16 ಮಂದಿ ಮೇಜರ್ ಜನರಲ್, ರಿಯರ್ ಅಡ್ಮಿರಲ್ಸ್, ಬ್ರಿಗೇಡಿಯರ್ಸ್, ಕರ್ನಲ್ಸ್ ಸೇರಿದಂತೆ ಒಟ್ಟು 156 ಮಾಜಿ ಸೇನಾಧಿಕಾರಿಗಳು ಮತ್ತು ಸೈನಿಕರು.