ಶುಕ್ರವಾರ ಅಧಿವೇಶನ ಆರಂಭವಾಗುವುದರೊಳಗೆ ತಮ್ಮ ರಾಜೀನಾಮೆ ಅಂಗೀಕಾರವಾಗುವಂತೆ ನೋಡಿಕೊಳ್ಳಬೇಕು ಎಂಬ ಗುರಿಯೊಂದಿಗಿದ್ದ ಶಾಸಕರಿಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಗುರುವಾರ ರಾತ್ರಿಯವರೆಗೆ ಫಲಿತಾಂಶ ಮಾತ್ರ ಶೂನ್ಯ.
ಕಳೆದ ಶನಿವಾರ 13 ಶಾಸಕರು ನೀಡಿದ ರಾಜಿನಾಮೆಗಳನ್ನು ಮಂಗಳವಾರ ಪರಿಶೀಲಿಸಿದ ಸ್ಪೀಕರ್ ರಮೇಶ್ ಕುಮಾರ್, ಐದು ಶಾಸಕ ರಾಜಿನಾಮೆ ಕ್ರಮಬದ್ಧವಾಗಿದ್ದು, ತಮ್ಮ ಮುಂದೆ ಹಾಜರಾಗುವಂತೆ ಆ ಶಾಸಕರಿಗೆ ಸೂಚನೆ ನೀಡಲಾಗಿದೆ. ಉಳಿದ ಎಂಟು ನಾಮಪತ್ರಗಳು ಕ್ರಮಬದ್ಧವಲ್ಲ. ಈ ವಿಚಾರವನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದರು. ಯಾವುದೋ ಹಪಾಹಪಿಗೆ ಸಿಕ್ಕಿಕೊಳ್ಳದೆ ಶಾಸಕರು ತಾಳ್ಮೆಯಿಂದ ಯೋಚಿಸಿದ್ದರೆ ಅಥವಾ ತಮ್ಮ ಬದ್ಧತೆ ಬಗ್ಗೆ ನಂಬಿಕೆ ಇದ್ದಿದ್ದರೆ ನೇರವಾಗಿ ಸ್ಪೀಕರ್ ಅವರನ್ನು ಭೇಟಿಯಾಗಿ ಕ್ರಮಬದ್ಧವಲ್ಲದ ರಾಜಿನಾಮೆಯನ್ನು ಕ್ರಮಬದ್ಧಗೊಳಿಸಿಕೊಳ್ಳಬಹುದಿತ್ತು. ತಾವು ಸ್ವ ಇಚ್ಛೆಯಿಂದ ಹಾಗೂ ಯಾವುದೇ ಒತ್ತಡಕ್ಕೆ ಒಳಗಾಗದೆ ರಾಜಿನಾಮೆ ನೀಡಿರುವುದಾಗಿ ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಳ್ಳಬಹುದಿತ್ತು.
ಇಂತಹ ಅವಕಾಶ ಇದ್ದರೂ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಅತೃಪ್ತ ಶಾಸಕರು ನೇರವಾಗಿ ಸ್ಪೀಕರ್ ಮುಂದೆ ಬರುವ ಬದಲು ಸುಪ್ರೀಂ ಕೋರ್ಟ್ ಮೊರೆ ಹೋದರು. ಆದರೆ, ಸುಪ್ರೀಂ ಕೋರ್ಟ್ ಕೂಡ ಹೇಳಿದ್ದು ಅಷ್ಟೆ. ಸಂಜೆಯೊಳಗೆ ಸ್ಪೀಕರ್ ಬಳಿ ಹೋಗಿ ರಾಜಿನಾಮೆಗೆ ಸಂಬಂಧಿಸಿದಂತೆ ನಿಮ್ಮ ಅಹವಾಲು ಮಂಡಿಸಿ. ಅವರು ಆ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳಲಿ ಎಂದು. ಅದರಂತೆ ಅತೃಪ್ತ ಶಾಸಕರು ಮುಂಬೈನಿಂದ ವಿಶೇಷ ವಿಮಾನದಲ್ಲಿ ಬಂದು ಗಡಿಬಿಡಿಯಲ್ಲಿ ಸ್ಪೀಕರ್ ಅವರನ್ನು ಭೇಟಿಯಾಗಿ ಕ್ರಮಬದ್ಧ ನಾಮಪತ್ರ ಸಲ್ಲಿಸಿ ವಾಪಸ್ ಮುಂಬೈಗೆ ತೆರಳಿದ್ದಾರೆ. ಒಂದೊಮ್ಮೆ ಶಾಸಕರು ತಮ್ಮ ಬಗ್ಗೆ ತಾವು ನಂಬಿಕೆ ಹೊಂದಿದ್ದರೆ, ನೇರವಾಗಿ ಸ್ಪೀಕರ್ ಅವರನ್ನು ಭೇಟಿಯಾಗಿ ಈ ಕೆಲಸವನ್ನು ಒಂದು ದಿನ ಮುಂಚೆಯೇ ಮಾಡಿ ತ್ವರಿತ ತೀರ್ಮಾನಕ್ಕೆ ಮನವಿ ಮಾಡಿಕೊಳ್ಳಬಹುದಿತ್ತು. ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಆತ್ಮಾಭಿಮಾನ, ಗೌರವ, ಘನತೆ ಉಳಿಸಿಕೊಂಡು ಬಂದಿರುವ ರಮೇಶ್ ಕುಮಾರ್ ಅವರು ಈ ರೀತಿ ನೇರವಾಗಿ ಬಂದಿದ್ದರೆ ಅದನ್ನು ಪರಿಗಣಿಸುತ್ತಿದ್ದರೋ ಏನೋ
ಸುಪ್ರೀಂ ಆದೇಶವಷ್ಟೇ ಶಾಸಕರಿಗೆ ಶ್ರೀರಕ್ಷೆಯಾಗಬೇಕು:
ಆದರೆ, ಶಾಸಕರು ಸುಪ್ರೀಂ ಕೋರ್ಟ್ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಬಳಿ ಬಂದಿದ್ದರಿಂದ ಸಹಜವಾಗಿಯೇ ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಹೀಗಾಗಿ ಏನೇ ಒತ್ತಡ ಬಂದರೂ ನಿಯಮ ಬಿಟ್ಟು ರಾಜಿನಾಮೆ ಅಂಗೀಕರಿಸುವುದಿಲ್ಲ. ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೂ ತರುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸ್ಪೀಕರ್ ಅವರು ತಮ್ಮ ಈ ನಿಲುವುಗೆ ಬದ್ಧವಾಗಿ ತಕ್ಷಣ ಶಾಸಕರ ರಾಜಿನಾಮೆ ಅಂಗೀಕರಿಸುವುದಿಲ್ಲ. ನಿಯಮಾವಳಿ ಪ್ರಕಾರ ವಿಚಾರಣೆ ನಡೆಸಿಯೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದರೆ ಕೋರ್ಟ್ ಕೂಡ ಮಧ್ಯಪ್ರವೇಶಿಸಲು ಸ್ವಲ್ಪ ಯೋಚಿಸಬೇಕಾಗುತ್ತದೆ. ಏಕೆಂದರೆ, ಸ್ಪೀಕರ್ ಅಥವಾ ಸದನದ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹಿಂದೆ ಲೋಕಸಭೆಯ ಅಧ್ಯಕ್ಷರಾಗಿದ್ದ ಸೋಮನಾಥ್ ಚಟರ್ಜಿ ಅವರು ಈ ಹಿಂದೆ ಸ್ಪಷ್ಟವಾಗಿ ಕೋರ್ಟ್ ಆದೇಶ ತಳ್ಳಿಹಾಕಿದ್ದರು. ಆ ವೇಳೆ ಕೋರ್ಟ್ ಏನೂ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೇ ರೀತಿ ಸ್ಪೀಕರ್ ರಮೇಶ್ ಕೂಡ ಖಡಕ್ ನಿರ್ಧಾರ ಕೈಗೊಂಡರೆ ಆಗ ಕೋರ್ಟ್ ಏನು ಆದೇಶಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಒಂದೊಮ್ಮೆ ರಾಜಿನಾಮೆ ಕುರಿತು ತಕ್ಷಣ ತೀರ್ಮಾನ ಕೈಗೊಳ್ಳಿ ಎಂದು ಆದೇಶಿಸಿದರೆ ಮತ್ತು ಅದನ್ನು ಸ್ಪೀಕರ್ ಪಾಲಿಸಿದರೆ ಮಾತ್ರ ಶಾಸಕರ ರಾಜಿನಾಮೆ ಶೀಘ್ರವಾಗಿ ಅಂಗೀಕಾರವಾಗಬಹುದು.
ಅಧಿವೇಶನದ ಪರಿಸ್ಥಿತಿ ಏನು:
ಈ ಮಧ್ಯೆ ಶುಕ್ರವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಎಲ್ಲಾ ಶಾಸಕರು ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ವಿಧೇಯಕಗಳು ಚರ್ಚೆಗೆ ಬಂದಾಗ ಸರ್ಕಾರದ ಪರ ಮತ ಹಾಕಬೇಕು ಎಂದು ಎಲ್ಲಾ ಶಾಸಕರಿಗೆ ವಿಪ್ ನೀಡಲಾಗಿದೆ. ಈ ವಿಪ್ ಉಲ್ಲಂಘಿಸಿದರೆ ಅನರ್ಹಗೊಳಿಸಲು ಅವಕಾಶವಿದೆ. ಆದರೆ, ಈ ಶಾಸಕರು ಈಗಾಗಲೇ ರಾಜಿನಾಮೆ ನೀಡಿರುವುದರಿಂದ ಅವರಿಗೆ ವಿಪ್ ಅನ್ವಯವಾಗುವುದೇ ಎಂಬ ಬಗ್ಗೆ ಎರಡು ಬಗೆಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಕೆಲವು ಕಾನೂನು ತಜ್ಞರು, ವಿಪ್ ಅನ್ವಯವಾಗುತ್ತದೆ ಎಂದು ಹೇಳಿದರೆ, ಇನ್ನು ಕೆಲವರು, ವಿಪ್ ಅನ್ವಯವಾಗಿ ಅದರ ಆಧಾರದ ಮೇಲೆ ಅನರ್ಹಗೊಳಿಸಿದರೂ ಅದರಿಂದ ಶಾಸಕರಿಗೆ ಏನೂ ತೊಂದರೆಯಾಗುವುದಿಲ್ಲ. ಹೇಗೂ ರಾಜಿನಾಮೆ ನೀಡಿದ್ದಾರೆ. ಅದನ್ನು ಅಂಗೀಕರಿಸದೆ ವಜಾಗೊಳಿಸಿದಂತೆ ಆಗುತ್ತದೆ. ಮತ್ತೆ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳುತ್ತಾರೆ.
ಆದರೆ, ಅಧಿವೇಶನ ಆರಂಭವಾದರೂ ಕಲಾಪ ನಡೆಸಲು ಪ್ರತಿಪಕ್ಷ ಬಿಜೆಪಿ ಅವಕಾಶ ನೀಡುವುದಿಲ್ಲ. ಶಾಸಕರ ರಾಜಿನಾಮೆಯಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಅಧಿವೇಶನ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ. ಮುಖ್ಯಮಂತ್ರಿ ರಾಜಿನಾಮೆಗೆ ಒತ್ತಾಯಿಸಿ ಕಲಾಪಕ್ಕೆ ಅಡ್ಡಿಪಡಿಸುವುದು ಖಚಿತ. ಹೀಗಾಗಿ ರಾಜ್ಯ ರಾಜಕಾರಣದ ಬೃಹನ್ನಾಟಕ ಇನ್ನಷ್ಟು ದಿನ ಮುಂದುವರಿಯುವುದು ಖಚಿತ.