ಮೈತ್ರಿ ಸರ್ಕಾರ ಉರುಳಿಸಿ ಅನರ್ಹಗೊಂಡ ಶಾಸಕರ ಎದೆಯಲ್ಲಿ ಡವಡವ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್ ನಲ್ಲಿರುವ ಅನರ್ಹತೆ ಕುರಿತ ವ್ಯಾಜ್ಯ ಬಗೆಹರಿಯುವ ಮೊದಲೇ 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಬೆಂಗಳೂರಿನ ರಾಜರಾಜೇಶ್ವರಿನಗರ ಮತ್ತು ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರಗಳಿಗೆ ದಿನಾಂಕ ನಿಗದಿಯಾಗಿಲ್ಲ. ಅಕ್ಟೋಬರ್ 21ರಂದು 15 ಕ್ಷೇತ್ರಗಳಿಗೆ ಮತದಾನ ನಿಗದಿಯಾಗಿದ್ದು, ಅ. 24ರಂದು ಮತ ಎಣಿಕೆ ನಡೆಯಲಿದೆ.
ಅನರ್ಹತೆ ವಿವಾದವನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಬಿಜೆಪಿ ಸರ್ಕಾರದಲ್ಲಿ ಪಾಲ್ಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿರುವ ವ್ಯಾಜ್ಯ ಬಗೆಹರಿಸಿಕೊಳ್ಳಲು ಅನರ್ಹ ಶತಾಯ ಗತಾಯ ಪ್ರಯತ್ನ ನಡೆಸಿದರಾದರೂ ಇನ್ನೂ ಅದು ತಾರ್ಕಿಕ ಅಂತ್ಯ ಕಾಣುವ ಲಕ್ಷಣವೇ ತೋಚುತ್ತಿಲ್ಲ. ಚುನಾವಣೆ ಘೋಷಣೆಯಾಗುವ ಆತಂಕದೊಂದಿಗೆ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಪರಿಗಣಿಸುತ್ತಿಲ್ಲ. ಇದರ ಮಧ್ಯೆಯೇ ಚುನಾವಣಾ ದಿನಾಂಕ ಪ್ರಕಟವಾಗಿರುವುದು ಅನರ್ಹ ಶಾಸಕರ ನಿದ್ದೆಗೆಡಿಸಿದೆ. ಇನ್ನೊಂದೆಡೆ ಸರ್ಕಾರ ಉರುಳಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ತಯಾರಿ ಚುರುಕುಗೊಳಿಸಿದರೆ, ಅತ್ತ ಬಿಜೆಪಿಯೂ ಗಟ್ಟಿಯಾಗಿ ತಮ್ಮೊಂದಿಗೆ ನಿಲ್ಲುತ್ತಿಲ್ಲ, ಇತ್ತ ಕೋರ್ಟ್ ನಲ್ಲೂ ವಿವಾದ ಬಗೆಹರಿಯುತ್ತಿಲ್ಲ ಎಂಬ ಆತಂಕದಲ್ಲಿ ಅನರ್ಹ ಶಾಸಕರು ಇದ್ದಾರೆ.
ದಿಕ್ಕು ತೋಚದ ಪರಿಸ್ಥಿತಿ:
ಸ್ಪೀಕರ್ ಅವರು 17 ಶಾಸಕರನ್ನು ಅನರ್ಹಗೊಳಿಸಿ ಎರಡು ತಿಂಗಳಾಗುತ್ತಾ ಬಂದಿದೆ. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರಾದರೂ ಇನ್ನೂ ವಿಚಾರಣೆ ಆರಂಭವಾಗಿಲ್ಲ. ಅಷ್ಟರಲ್ಲೇ ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ತಮ್ಮ ಅರ್ಜಿ ವಿಚಾರಣೆ ವಿಳಂಬದಿಂದ ಆತಂಕಗೊಂಡಿದ್ದ ಅನರ್ಹ ಶಾಸಕರಿಗೆ ಕೋರ್ಟ್ ನಲ್ಲಿ ಅರ್ಜಿಯ ತುರ್ತು ಇತ್ಯರ್ಥಕ್ಕೆ ಚುನಾವಣೆ ಘೋಷಣೆ ಎಂಬ ಪ್ರಬಲ ಅಸ್ತ್ರ ಸಿಕ್ಕಿದಂತಾಗಿದೆ. ಕೋರ್ಟ್ ನಲ್ಲಿ ಇದನ್ನೇ ಮುಂದಿಟ್ಟುಕೊಂಡು ಅವರು ಹಕ್ಕು ಪ್ರತಿಪಾದಿಸಬಹುದು. ಆದರೆ, ಯಾವುದಕ್ಕೂ ಸಮಯ ಇಲ್ಲದೇ ಇರುವುದು ಅನರ್ಹ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸಾಮಾನ್ಯವಾಗಿ ಚುನಾವಣಾ ಅಧಿಸೂಚನೆ ಹೊರಡಿಸಿದ ಮೇಲೆ ಅಂದರೆ ನಾಮಪತ್ರ ಸಲ್ಲಿಕೆ ಆರಂಭವಾದ ಮೇಲೆ ಚುನಾವಣೆ ವಿಚಾರದಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶಿಸುವುದಿಲ್ಲ. ಇದೀಗ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಸೋಮವಾರದಿಂದ (ಸೆ. 23) ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದ್ದು, ಸೆ. 30 ನಾಮಪತ್ರ ಸಲ್ಲಿಸಲು ಕಡೆಯ ದಿನ. ಅಷ್ಟರೊಳಗೆ ಅನರ್ಹ ಶಾಸಕರ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸದೇ ಇದ್ದರೆ ಉಪ ಚುನಾವಣೆಯಲ್ಲಿ ಅವರಾರೂ ಸ್ಪರ್ಧಿಸಲು ಅವಕಾಶವೇ ಇಲ್ಲ.

ಸಮಯವೇ ಇಲ್ಲ:
ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಎರಡು ರೀತಿಯಲ್ಲಿ ಇತ್ಯರ್ಥಗೊಳ್ಳಬಹುದು.
1. ಒಂದೊಮ್ಮೆ ಸ್ಪೀಕರ್ ಆದೇಶವನ್ನು ಕೋರ್ಟ್ ಎತ್ತಿಹಿಡಿದರೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕೂಡ ಅವರಿಂದ ಸಾಧ್ಯವಾಗುವುದಿಲ್ಲ. ಏಕೆಂದರೆ, ಈ ಎಲ್ಲಾ ಶಾಸಕರನ್ನು 15ನೇ ವಿಧಾನಸಭೆ ಅವಧಿಗೆ ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದಾರೆ.
2. ಸ್ಪೀಕರ್ ಅವರು 15ನೇ ವಿಧಾನಸಬೆ ಅವಧಿಗೆ ಎಂದು ಹೇಳಿದ್ದನ್ನು ರದ್ದುಗೊಳಿಸಿ ಅನರ್ಹತೆ ಆದೇಶ ಮಾತ್ರ ಎತ್ತಿಹಿಡಿದರೆ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು.
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅರ್ಜಿ ವಿಚಾರಣೆಗೇ ಸಮಯಾವಕಾಶ ಇಲ್ಲದಂತಾಗಿದೆ. ಸೋಮವಾರದಿಂದಲೇ ಚುನಾವಣಾ ಪ್ರಕ್ರಿಯೆಗಳು ಆರಂಭವಾಗುತ್ತದೆ. ಹೀಗಾಗಿ ಅನರ್ಹ ಶಾಸಕರಿಗೆ ಸ್ಪರ್ಧೆಗೆ ಅವಕಾಶ ಸಿಗುವುದು ಕೂಡ ಕಷ್ಟಸಾಧ್ಯ ಎನ್ನುವಂತಾಗಿದೆ. ಹೀಗಾಗಿ ಅನರ್ಹತೆ ಪ್ರಶ್ನಿಸಿ ತಾವು ಸಲ್ಲಿಸಿದ ಅರ್ಜಿ ಇತ್ಯರ್ಥವಾಗುವವರೆಗೆ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದು ಅಥವಾ ತಮ್ಮ ಅನರ್ಹತೆ ಆದೇಶಕ್ಕೆ ತಡೆಯಾಜ್ಞೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವುದು ಮಾತ್ರ ಅನರ್ಹ ಶಾಸಕರ ಮುಂದಿರುವ ದಾರಿ. ಒಂದೊಮ್ಮೆ ಈ ಕೋರಿಕೆಯನ್ನು ಕೋರ್ಟ್ ಪರಿಗಣಿಸಿದರೆ ಅನರ್ಹ ಶಾಸಕರು ಅಪಾಯದಿಂದ ಪಾರಾಗುತ್ತಾರೆ. ಇಲ್ಲದೇ ಇದ್ದಲ್ಲಿ ಕೆಲವರ ರಾಜಕೀಯ ಭವಿಷ್ಯವೇ ಅಲ್ಲಿಗೆ ಮುಗಿದಂತಾಗುತ್ತದೆ.
ಕಾಂಗ್ರೆಸ್, ಜೆಡಿಎಸ್ ನಲ್ಲಿ ಹುಮ್ಮಸ್ಸು, ಬಿಜೆಪಿ ತಟಸ್ಥ:

ಅನರ್ಹಗೊಂಡವರ ಪಾಲಿಗೆ ಉಪ ಚುನಾವಣೆ ಘೋಷಣೆ ಆತಂಕ ತಂದಿದ್ದರೆ, ನಮ್ಮ ಸರ್ಕಾರ ಉರುಳಿಸಿದವರಿಗೆ ತಕ್ಕ ಪಾಠ ಕಲಿಸಲೇ ಬೇಕು ಎಂದು ಹೊರಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಹೊಸ ಹುಮ್ಮಸ್ಸು ಬಂದಿದೆ. ಅಲ್ಲದೆ, ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯೂ ಕಾಣಿಸಿಕೊಂಡಿದೆ.
ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶ ಸಿಗದಿದ್ದಲ್ಲಿ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂದು ಅವರು ಆಡಳಿತಾರೂಢ ಬಿಜೆಪಿ ಎದುರು ಬೇಡಿಕೆ ಇಡಬಹುದು. ಆದರೆ, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಒಪ್ಪುವ ಸಾಧ್ಯತೆ ಕಡಿಮೆ. ಹಾಗಾದಲ್ಲಿ ಅನರ್ಹ ಶಾಸಕರು ಮತ್ತು ಬಿಜೆಪಿ ಮಧ್ಯೆಯೇ ಹಣಾಹಣಿ ಆರಂಭವಾಗುತ್ತದೆ. ಇದರ ಮಧ್ಯೆ ನಮ್ಮ ಅಭ್ಯರ್ಥಿಗಳು ಸುಲಭವಾಗಿ ಗೆದ್ದು ಬರಬಹುದು ಎಂಬುದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಿರೀಕ್ಷೆಯಾಗಿದೆ.
ಇನ್ನು ಬಿಜೆಪಿ ಈ ವಿಚಾರದಲ್ಲಿ ಸದ್ಯಕ್ಕೆ ತಟಸ್ಥ ನಿಲುವು ತಳೆದಿದೆ. ಚುನಾವಣೆ ಘೋಷಣೆಯಾಗಿದ್ದರಿಂದ ಸರ್ಕಾರ ಉಳಿಸಿಕೊಳ್ಳಲು ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲೇ ಬೇಕು. ಅನರ್ಹರಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದರೆ ಸರಿ. ಇಲ್ಲವಾದಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು. ಆಗ ಅನರ್ಹಗೊಂಡಿರುವ ಶಾಸಕರ ಮಾತು ಕೇಳಲೇ ಬೇಕು ಎಂದೇನಿಲ್ಲ. ಹೀಗಾಗಿ ಆಗಿದ್ದು ಆಗಲಿ ಎಂಬ ನಿಲುವಿನೊಂದಿಗೆ ಬಿಜೆಪಿ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕೆಲಸ ಆರಂಭಿಸಿದೆ.
ಯಾವ ಕ್ಷೇತ್ರಗಳಿಗೆ ಚುನಾವಣೆ
ಒಟ್ಟು 17 ಕ್ಷೇತ್ರಗಳ ಶಾಸಕರು ಅನರ್ಹಗೊಂಡಿದ್ದು, ಈ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಅಥಣಿ (ಮಹೇಶ್ ಕುಮಟಳ್ಳಿ), ಕಾಗವಾಡ (ಶ್ರೀಮಂತ ಪಾಟೀಲ್), ಗೋಕಾಕ್ (ರಮೇಶ್ ಜಾರಕಿಹೊಳಿ), ಯಲ್ಲಾಪುರ (ಅರಬೈಲ್ ಶಿವರಾಮ ಹೆಬ್ಬಾರ್), ಹಿರೇಕೆರೂರು (ಬಿ.ಸಿ. ಪಾಟೀಲ್), ರಾಣೆಬೆನ್ನೂರು (ಆರ್. ಶಂಕರ್), ವಿಜಯನಗರ (ಆನಂದ್ ಸಿಂಗ್), ಚಿಕ್ಕಬಳ್ಳಾಪುರ (ಡಾ.ಕೆ. ಸುಧಾಕರ್), ಕೆ.ಆರ್.ಪುರ (ಬೈರತಿ ಬಸವರಾಜು), ಯಶವಂತಪುರ (ಎಸ್.ಟಿ. ಸೋಮಶೇಖರ್), ಮಹಾಲಕ್ಷ್ಮಿ ಲೇಔಟ್ (ಕೆ. ಗೋಪಾಲಯ್ಯ), ಶಿವಾಜಿನಗರ (ರೋಷನ್ ಬೇಗ್), ಹೊಸಕೋಟೆ (ಎಂ.ಟಿ.ಬಿ.ನಾಗರಾಜು), ಕೆ.ಆರ್.ಪೇಟೆ (ಕೆ.ಸಿ.ನಾರಾಯಣಗೌಡ) ಮತ್ತು ಹುಣಸೂರು (ಎಚ್.ವಿಶ್ವನಾಥ್) ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆಯಲಿದೆ. ಮಸ್ಕಿ (ಪ್ರತಾಪ ಗೌಡ ಪಾಟೀಲ್) ಹಾಗೂ ರಾಜರಾಜೇಶ್ವರಿ ನಗರ (ಮುನಿರತ್ನ) ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿಲ್ಲ. ಈ ಎರಡು ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳ ವಿರುದ್ಧ ಸೋತ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಅದಿನ್ನೂ ವಿಚಾರಣೆ ಹಂತದಲ್ಲಿರುವುದರಿಂದ ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿಲ್ಲ.