ಮೈತ್ರಿ ಸರ್ಕಾರದ 15 ಶಾಸಕರ ರಾಜಿನಾಮೆ ಮತ್ತು ಅವರನ್ನು ಅನರ್ಹಗೊಳಿಸಬೇಕು ಎಂಬ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಏನೇ ತೀರ್ಪು ಹೊರಬಂದರೂ ಅತೃಪ್ತ ಶಾಸಕರು ರಾಜಿನಾಮೆ ವಾಪಸ್ ಪಡೆಯದ ಹೊರತು ಬಹುಮತ ಕಳೆದುಕೊಳ್ಳುವ ಸರ್ಕಾರವನ್ನು ದೇವರು ಕೂಡ ಕಾಪಾಡಲು ಸಾಧ್ಯವಿಲ್ಲ. ಏಕೆಂದರೆ, ಶಾಸಕರ ರಾಜಿನಾಮೆ ಅಂಗೀಕಾರವಾದರೂ ಅಥವಾ ಅವರನ್ನು ಅನರ್ಹಗೊಳಿಸಿದರೂ ವಿಧಾನಸಭೆಯ ಸದಸ್ಯ ಬಲ 209ಕ್ಕೆ ಇಳಿಯುತ್ತದೆ. ಸರ್ಕಾರದ ಸಂಖ್ಯಾಬಲ 102ಕ್ಕೆ ಕುಸಿಯಲಿದ್ದು, ಈಗಾಗಲೇ ರಾಜಿನಾಮೆ ನೀಡಿರುವ ಇನ್ನಿಬ್ಬರು ಶಾಸಕರು ಸದನಕ್ಕೆ ಹಾಜರಾಗದಿದ್ದರೆ ಅದು 99ಕ್ಕೆ ಇಳಿಯಲಿದೆ. 107 ಸದಸ್ಯಬಲ (ಇಬ್ಬರು ಪಕ್ಷೇತರರ ಬೆಂಬಲ) ಹೊಂದಿರುವ ಪ್ರತಿಪಕ್ಷ ಬಿಜೆಪಿ ಕೈ ಮೇಲಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜಿನಾಮೆ ನೀಡಲೇಬೇಕಾಗುತ್ತದೆ.
ಆದರೆ, ಸದ್ಯದ ಕುತೂಹಲ ಇರುವುದು ಸುಪ್ರೀಂ ಕೋರ್ಟ್ ನೀಡುವ ಆದೇಶದ ಬಗ್ಗೆ. ಶಾಸಕರ ರಾಜಿನಾಮೆ, ಅನರ್ಹತೆ, ಸ್ಪೀಕರ್ ಅವರ ವಿವೇಚನಾಧಿಕಾರ, ಈ ಕುರಿತಂತೆ ನಿಯಮಗಳು ಏನು ಹೇಳುತ್ತವೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸುದೀರ್ಘ ವಾದ- ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ತ್ರಿಸದಸ್ಯ ಪೀಠ, ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದಿದ್ದರೆ ತಕ್ಷಣವೇ ತೀರ್ಪು ನೀಡಬಹುದಿತ್ತು. ಆದರೆ, ಒಂದು ದಿನ ಸಮಯಾವಕಾಶ ತೆಗೆದುಕೊಂಡ ಕಾರಣ ಅದನ್ನು ಹೊರತಾಗಿ ಕೆಲವು ನಿರ್ದೇಶನಗಳನ್ನು ನೀಡಬಹುದು. ಆದರೆ, ಅದರಿಂದ ಅರೆ ನ್ಯಾಯಾಂಗದ ಅಧಿಕಾರ ಹೊಂದಿರುವ ಸ್ಪೀಕರ್ ಅವರ ಕಾರ್ಯವ್ಯಾಪ್ತಿಯಲ್ಲಿ ನೇರ ಮಧ್ಯ ಪ್ರವೇಶವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸುಪ್ರೀಂ ಕೋರ್ಟ್ ಗೆ ಇದೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶ ಶಾಸಕಾಂಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಹತ್ವದ್ದಾಗಿರಲಿದೆ.
ಸುಪ್ರೀಂ ಕೋರ್ಟ್ ನಲ್ಲಿ ಅತೃಪ್ತ ಶಾಸಕರ ಪರ ವಕೀಲರು, ಸ್ಪೀಕರ್ ಪರ ವಕೀಲರು ಮತ್ತು ಮುಖ್ಯಮಂತ್ರಿಗಳ ಪರ ವಕೀಲರು ಮಂಡಿಸಿದ ವಾದದಿಂದ ಶಾಸಕರ ರಾಜಿನಾಮೆ ಅಥವಾ ಅನರ್ಹತೆ ವಿಚಾರದಲ್ಲಿ ಸ್ಪಷ್ಟ ನಿಯಮಗಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ, ನಿಯಮಗಳಿಗಿಂತ ಹೆಚ್ಚಾಗಿ ಈ ಹಿಂದಿನ ಸ್ಪೀಕರ್ ಅಥವಾ ಕೋರ್ಟ್ ಆದೇಶಗಳು, ಸ್ಪೀಕರ್ ಅವರ ವಿವೇಚಾನಾಧಿಕಾರ, ಶಾಸಕರ ಹಕ್ಕು ಮುಂತಾದ ವಿಚಾರಗಳನ್ನೇ ಮುಂದಿಟ್ಟುಕೊಂಡು ಇವರು ವಾದ ಮಂಡಿಸಿದ್ದಾರೆಯೇ ಹೊರತು ನಿಯಮಾವಳಿಗಳ ಬಗ್ಗೆ ಹೆಚ್ಚು ಉಲ್ಲೇಖ ಮಾಡಿಲ್ಲ. ಹೀಗಾಗಿ ಇಂತಹ ಸಂದರ್ಭಗಳು ಬಂದಾಗ ಸ್ಪೀಕರ್ ಅವರ ಕಾರ್ಯವ್ಯಾಪ್ತಿ, ನಿಯಮಾವಳಿಗಳ ರಚನೆ ಬಗ್ಗೆಯೂ ಕೋರ್ಟ್ ಆದೇಶದಲ್ಲಿ ಪ್ರಸ್ತಾಪಿಸಿದರೆ ಅದು ಅಚ್ಚರಿಯಲ್ಲ.
ಸರ್ಕಾರ ರಕ್ಷಿಸಲು ಸಾಧ್ಯವೇ ಇಲ್ಲ
ಸುಪ್ರೀಂ ಕೋರ್ಟ್ ತೀರ್ಪು ಏನೇ ಬರಲಿ, ಅಲ್ಪಮತಕ್ಕೆ ಕುಸಿಯಲಿರುವ ಸರ್ಕಾರವನ್ನು ರಕ್ಷಿಸಿಕೊಳ್ಳಲು ಜೆಡಿಎಸ್- ಕಾಂಗ್ರೆಸ್ ಮೈತ್ರಿಗೆ ಸಾಧ್ಯವೇ ಇಲ್ಲ. ಅದು ಸಾಧ್ಯವಾಗಬೇಕಾದರೆ ಕನಿಷ್ಟ ಎಂಟು ಶಾಸಕರು ರಾಜಿನಾಮೆ ಹಿಂತೆಗೆದುಕೊಳ್ಳಬೇಕು. ಆದರೆ, ರಾಜಿನಾಮೆ ಅಂಗೀಕಾರಕ್ಕೆ ಪಟ್ಟು ಹಿಡಿದಿರುವ ಶಾಸಕರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಖಚಿತ. ಕಾಲಮಿತಿಯೊಳಗೆ ತೀರ್ಮಾನ ಕೈಗೊಳ್ಳುವಂತೆ ಸ್ಪೀಕರ್ ಅವರಿಗೆ ಕೋರ್ಟ್ ಸೂಚಿಸಿದರೆ ಅವರು ಒಂದೋ ರಾಜಿನಾಮೆ ಅಂಗೀಕರಿಸಬಹುದು ಇಲ್ಲವೇ ಅನರ್ಹತೆ ದೂರು ಆಧರಿಸಿ ಶಾಸಕರನ್ನು ಅನರ್ಹಗೊಳಿಸಬಹುದು. ಒಂದೊಮ್ಮೆ ರಾಜಿನಾಮೆ ಪತ್ರವನ್ನು ಮೊದಲು ಪರಿಗಣಿಸಿ ಎಂದು ಹೇಳಿದರೆ ಆಗ ಸ್ಪೀಕರ್ ಆದೇಶ ಪಾಲಿಸಬೇಕಾಗುತ್ತದೆ. ಅದನ್ನು ಹೊರತಾಗಿ ಬೇರೆ ಯಾವುದೇ ಆದೇಶ ನೀಡಿದರೂ ಆಗ ವಿಪ್ ಉಲ್ಲಂಘನೆ ವಿಚಾರದಲ್ಲಿ ಶಾಸಕರಿಗೆ ರಕ್ಷಣೆ ಒದಗಿಸುವ ಕೆಲಸ ಆಗಬೇಕಾಗುತ್ತದೆ.

ತೀರ್ಪು ಏನೇ ಬಂದರು ಆಗುವುದು ಇಷ್ಟೆ
1. ರಾಜಿನಾಮೆ ಅಂಗೀಕರಿಸುವಂತೆ ಕೋರ್ಟ್ ಸೂಚಿಸಿದರೆ ಸ್ಪೀಕರ್ ಅದರಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಪ್ರಸ್ತುತ 16 ಶಾಸಕರು ರಾಜಿನಾಮೆ ನೀಡಿದ್ದು, ಈ ಪೈಕಿ ಕನಿಷ್ಠ 15 ಶಾಸಕರು ರಾಜಿನಾಮೆ ಹಿಂಪಡೆಯದಿದ್ದರೆ ಅವು ಅಂಗೀಕಾರವಾಗಬಹುದು. ಸರ್ಕಾರದ ಜತೆಗಿದ್ದ ಇಬ್ಬರು ಪಕ್ಷೇತರ ಶಾಸಕರು ಈಗಾಗಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಜತೆ ಸೇರಿಕೊಂಡಿದ್ದಾರೆ. ಅಲ್ಲಿಗೆ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ.
2. ತೀರ್ಮಾನವನ್ನು ಸ್ಪೀಕರ್ ವಿವೇಚನೆಗೆ ಬಿಟ್ಟಾಗ ಸ್ಪೀಕರ್ ರಾಜಿನಾಮೆ ಅಂಗೀಕಾರ ಮೊದಲು ಮಾಡಿದರೆ ಆಗ ಫಲಿತಾಂಶ ಮೇಲಿನಂತೆ ಬರುತ್ತದೆ. ಒಂದೊಮ್ಮೆ ಅನರ್ಹತೆ ಅರ್ಜಿಯನ್ನು ಮೊದಲು ಪರಿಗಣಿಸಿ 15 ಶಾಸಕರನ್ನು ಅನರ್ಹಗೊಳಿಸಿದರೆ ಆಗಲೂ ವಿಧಾನಸಭೆಯಲ್ಲಿ ಸರ್ಕಾರ ಬಹುಮತ ಕಳೆದುಕೊಳ್ಳಲಿದ್ದು, ಆಗ ಮುಖ್ಯಮಂತ್ರಿಗಳಿಗೆ ರಾಜಿನಾಮೆ ನೀಡುವುದು ಬಿಟ್ಟರೆ ಬೇರೆ ಮಾರ್ಗವೇ ಇಲ್ಲ.
3. ಒಂದೊಮ್ಮೆ ಶಾಸಕ ಸ್ಥಾನದಿಂದ ಅನರ್ಹಗೊಂಡರೂ ಅದು ಅವರು ಆಯ್ಕೆಯಾದ ಅವಧಿಗೆ ಮಾತ್ರ ಎಂದು ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ ಅನರ್ಹಗೊಂಡರು ಎಂಬ ಅಪವಾದ ಹೊರತುಪಡಿಸಿ ಅವರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಸಮಸ್ಯೆ ಇರುವುದಿಲ್ಲ. ಉಪ ಚುನಾವಣೆಯಲ್ಲಿ ತಮಗೆ ಬೇಕಾದ ಪಕ್ಷದಿಂದ ಸ್ಪರ್ಧಿಸಿ ಮತ್ತೆ ಗೆದ್ದು ಬರಬಹುದು. ಅಷ್ಟರಲ್ಲಿ ಸರ್ಕಾರ ಬಿದ್ದುಹೋಗಿರುತ್ತದೆ.
ಈ ಕಾರಣಗಳಿಂದಾಗಿ ಸುಪ್ರೀಂ ಕೋರ್ಟ್ ಆದೇಶ ಅಥವಾ ಸ್ಪೀಕರ್ ಅವರ ತೀರ್ಮಾನಗಳಿಂದ ಸರ್ಕಾರ ಉಳಿಸಿಕೊಳ್ಳಬಹುದು ಎಂದು ಮೈತ್ರಿ ನಾಯಕರು ಕನಸೇನಾದರೂ ಕಂಡಿದ್ದರೆ ಅದು ಕನಸಾಗಿಯೇ ಉಳಿಯಬೇಕೇ ಹೊರತು ನನಸಾಗುವುದು ಅಸಾಧ್ಯದ ಮಾತು. ಏಕೆಂದರೆ, ಬಹುಮತ ಸಾಬೀತು ಎಂಬುದು ನಿರ್ಧಾರವಾಗುವುದು ವಿಧಾನಸಭೆಯ ಒಳಗೆ ಮತ್ತು ವಿಶ್ವಾಸಮತ ಕೋರುವ ಸಂದರ್ಭದಲ್ಲಿ ಸದನದಲ್ಲಿರುವ ಸದಸ್ಯರ ಸಂಖ್ಯೆಯ ಆಧಾರದ ಮೇಲೆ. ಈ ವೇಳೆ ಶಾಸಕರು ಗೈರು ಹಾಜರಾದರೂ ಅವರ ಮೇಲೆ ಕಾನೂನು ಕ್ರಮ ಜರುಗಿಸುವುದು (ಶಾಸಕ ಸ್ಥಾನದಿಂದ ಅನರ್ಹಗೊಳಿಸುವುದು) ನಂತರದ ಮಾತು. ಅಷ್ಟರಲ್ಲಿ ಸರ್ಕಾರ ಉರುಳಿಹೋಗಿರುತ್ತದೆ. ಆದರೂ ಸುಪ್ರೀಂ ತೀರ್ಪಿನ ಬಗ್ಗೆ ಕುತೂಹಲ ಉಳಿದಿರುವುದಕ್ಕೆ ಕಾರಣ, ಸ್ಪೀಕರ್ ಅವರ ವಿವೇಚಾನಾಧಿಕಾರ ಕುರಿತು ಹಾಗೂ ಶಾಸಕರ ರಾಜಿನಾಮೆ, ಅನರ್ಹತೆ ಪ್ರಕರಣಗಳ ಇತ್ಯರ್ಥಕ್ಕೆ ಸೂಕ್ತ ಕಾಲಮಿತಿ ಮತ್ತು ನಿಯಮಗಳಿಲ್ಲದಿರುವುದರಿಂದ ಕೋರ್ಟ್ ಯಾವ ರೀತಿ ಆದೇಶ ಹೊರಡಿಸಬಹುದು, ಮುಂದೆ ಇಂತಹ ಪ್ರಕರಣಗಳು ಬಂದಾಗ ಇತ್ಯರ್ಥಪಡಿಸಲು ಸರಿಯಾದ ದಾರಿ ಸಿಗುತ್ತದೆ ಎಂಬ ಕಾರಣಕ್ಕಾಗಿ ಅಷ್ಟೆ.
ಸರ್ಕಾರ ಉಳಿಯಬೇಕಾದರೆ…
ಮೈತ್ರಿ ಸರ್ಕಾರ ಉಳಿಯಬೇಕಾದರೆ ಪ್ರಸ್ತುತ ರಾಜಿನಾಮೆ ನೀಡಿರುವ 16 ಶಾಸಕರ ಪೈಕಿ ಕನಿಷ್ಠ 10 ಮಂದಿಯಾದರೂ ತಮ್ಮ ರಾಜಿನಾಮೆ ವಾಪಸ್ ಪಡೆಯಬೇಕು. ಇಲ್ಲವೇ ಪ್ರತಿಪಕ್ಷ ಬಿಜೆಪಿಯ 6-7 ಶಾಸಕರು ವಿಶ್ವಾಸಮತ ಯಾಚನೆ ವೇಳೆ ಸದನದಿಂದ ಹೊರಗುಳಿಯಬೇಕು. ಇಲ್ಲವಾದಲ್ಲಿ, 4-5 ಬಿಜೆಪಿ ಶಾಸಕರು ಸದನದಿಂದ ಹೊರಗುಳಿದು, ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದಿರುವ ಇಬ್ಬರು ಪಕ್ಷೇತರರು ಮತ್ತೆ ಬೆಂಬಲ ನೀಡಬೇಕು. ಆಗ ಬಿಜೆಪಿ ಸದಸ್ಯರು ಶಾಸಕ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಆದರೆ, ಮೈತ್ರಿ ಸರ್ಕಾರವನ್ನು ಉರುಳಿಸಿ ಹೊಸ ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ಅದಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಅಧಿಕಾರದ ಕನಸು ಕಾಣುತ್ತಿರುವ ಈ ಶಾಸಕರಾರೂ ಸರ್ಕಾರ ಉಳಿಸುವ ಪ್ರಯತ್ನಕ್ಕೆ ಕೈಹಾಕಿ ತಮ್ಮ ತಲೆ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಳ್ಳುವ ದುಸ್ಸಾಹಸ ಮಾಡುವುದೂ ಇಲ್ಲ.