ದೇಶದ ಅತ್ಯುನ್ನತ ನ್ಯಾಯದೇಗುಲ ಸುಪ್ರೀಂ ಕೋರ್ಟ್. ಕಾರ್ಯಾಂಗ ಮತ್ತು ಶಾಸಕಾಂಗದ ಸ್ವೇಚ್ಛಾಚಾರ, ಪಕ್ಷಪಾತ ಮಾತ್ರವಲ್ಲದೆ ಉಳ್ಳವರ ದೌರ್ಜನ್ಯ, ಅಟ್ಟಹಾಸಗಳಿಗೆ ಮೂಗುದಾರ ತೊಡಿಸಿ ನೀಡಿರುವ ತೀರ್ಪುಗಳಿಗೆ ಲೆಕ್ಕವಿಲ್ಲ. ಅಸಹಾಯಕ ಜನರ, ನಿಸ್ಸಹಾಯಕ ಸಮಾಜದ ಅಂತಿಮ ಅಶಾಕಿರಣ. ಇಂತಹ ದೇಗುಲದ ಮುಖ್ಯ ನ್ಯಾಯಮೂರ್ತಿ ಖುದ್ದು ಕಟಕಟೆಯಲ್ಲಿ ನಿಂತಿದ್ದಾರೆ. ವಿರಳ, ವಿಕಟ ಸನ್ನಿವೇಶವಿದು. ತಮ್ಮ ಕಚೇರಿಯ ಮಹಿಳಾ ಉದ್ಯೋಗಿಯನ್ನು ಲೈಂಗಿಕ ಕಿರುಕುಳಕ್ಕೆ ಗುರಿ ಮಾಡಿದ್ದ ಆರೋಪವನ್ನು ಮುಖ್ಯನ್ಯಾಯಮೂರ್ತಿ ರಂಜನ್ ಗೋಗೋಯ್ ಎದುರಿಸಿದ್ದಾರೆ. ಅವರೇ ನೇಮಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಮಿತಿಯೊಂದು ‘ವಿಚಾರಣೆ’ ನಡೆಸಿ ಗೋಗೋಯ್ ತಪ್ಪಿಸ್ಥರಲ್ಲವೆಂದು ದೇಶಕ್ಕೆ ಸಾರಿ ಹೇಳಿದೆ. ಈ ‘ವಿಚಾರಣೆ’ಯಲ್ಲಿ ತಮಗೆ ನ್ಯಾಯ ದೊರೆವ ಭರವಸೆ ಇಲ್ಲವೆಂದು ದೂರುದಾರ ಮಹಿಳೆ ಅವಿಶ್ವಾಸ ಪ್ರಕಟಿಸಿ ಹೊರನಡೆದಿದ್ದರು. ಆದರೂ ‘ವಿಚಾರಣೆ ’ ಪೂರ್ಣಗೊಂಡಿತು! ವರದಿಯನ್ನು ಗೋಪ್ಯವಾಗಿ ಇರಿಸಲಾಗಿದೆ. ಮುಂದೆ ಎಂದಾದರೂ ಒಂದು ದಿನ ಬಹಿರಂಗ ಆದೀತೆಂಬ ಭರವಸೆ ಸದ್ಯಕ್ಕಂತೂ ಇಲ್ಲ.
ಈ ‘ವಿಚಾರಣೆ’ ವಿಧಾನ-ವೈಖರಿಯ ಕುರಿತು ಎದ್ದಿದ್ದ ಪ್ರಶ್ನೆಗಳು ಅಡಗಲು ನಿರಾಕರಿಸಿವೆ. ದೇಶಕ್ಕೆಲ್ಲ ಪಾರದರ್ಶಕತೆಯ ಪಾಠ ಹೇಳುವ ಸುಪ್ರೀಂ ಕೋರ್ಟ್, ತನ್ನದೇ ಸರದಿ ಬಂದಾಗ ನಿರೀಕ್ಷೆಯ ಎತ್ತರಕ್ಕೇರಲಿಲ್ಲ.
ವಿಚಾರಣಾ ಸಮಿತಿಗೆ ಹೊರಗಿನ ವ್ಯಕ್ತಿಯೊಬ್ಬರನ್ನು ಸೇರಿಸಿಕೊಳ್ಳಿ ಮತ್ತು ವಿಚಾರಣೆಯ ಸಮಯದಲ್ಲಿ ದೂರುದಾರಳು ತನ್ನ ಪರ ವಕೀಲರನ್ನು ಇರಿಸಿಕೊಳ್ಳಲು ಅವಕಾಶ ಮಾಡಿಕೊಡಿ ಎಂಬುದಾಗಿ ಇದೇ ಸುಪ್ರೀಂ ಕೋರ್ಟಿನ ಮತ್ತೊಬ್ಬ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೀಡಿದ್ದರೆನ್ನಲಾದ ವಿವೇಕದ ಸಲಹೆ ವ್ಯರ್ಥವಾಗಿದೆ. ವಿಚಾರಣೆಯ ಸಮಯದಲ್ಲಿ ವಕೀಲರೊಬ್ಬರನ್ನು ಇರಿಸಿಕೊಳ್ಳಲು ಅವಕಾಶ ಕೊಡುವಂತೆ ದೂರುದಾರಳೂ ಕೋರಿದ್ದಳು. ಆಪಾದನೆ ಹೊತ್ತ ಮುಖ್ಯ ನ್ಯಾಯಮೂರ್ತಿಯವರಿಗೆ ವಿಚಾರಣೆಯ ವರದಿ ದೊರೆಯುತ್ತದೆ. ಆದರೆ, ದೂರುದಾರಳಿಗೆ ಅದನ್ನು ನಿರಾಕರಿಸಲಾಗುತ್ತದೆ! ತಾನು ನುಡಿದಿದ್ದ ಸಾಕ್ಷ್ಯದ ಲಿಖಿತ ಪ್ರತಿಯನ್ನು ಕೂಡ ಆಕೆಗೆ ನೀಡಲಾಗಲಿಲ್ಲ. ಈ ವರದಿಯನ್ನು ಪುನರ್ ಪರಿಶೀಲಿಸುವ ಅವಕಾಶವೂ ಇಲ್ಲ.
ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ, ಇಂದಿರಾ ಬ್ಯಾನರ್ಜಿ ಹಾಗೂ ಇಂದೂ ಮಲ್ಹೋತ್ರ ಅವರನ್ನು ಒಳಗೊಂಡಿದ್ದ ಈ ಸಮಿತಿ, ನಾಲ್ಕು ದಿನಗಳಲ್ಲಿ ತನ್ನ ವಿಚಾರಣೆಯನ್ನು ಮುಗಿಸಿತು. ದೂರುದಾರಳನ್ನು ಪ್ರಶ್ನಿಸುವಲ್ಲೇ ಮೂರು ದಿನಗಳು ಉರುಳಿದವು. ದೂರುದಾರಳು ಅವಿಶ್ವಾಸ ಪ್ರಕಟಿಸಿ ಹೊರನಡೆದದ್ದು ಮೂರನೆಯ ದಿನ.
ಉದ್ಯೋಗದ ಜಾಗಗಳಲ್ಲಿ ಮಹಿಳೆಯರು ಎದುರಿಸುವ ಲೈಂಗಿಕ ಕಿರುಕುಳದ ಆಪಾದನೆಗಳ ವಿಚಾರಣೆಗೆಂದು 1997ರಷ್ಟು ಹಿಂದೆಯೇ ವಿಶಾಖಾ ಮೊಕದ್ದಮೆಯಲ್ಲಿ ತಾನೇ ಮಾರ್ಗಸೂಚಿಗಳನ್ನು ರೂಪಿಸಿ ತೀರ್ಪು ನೀಡಿತ್ತು ಸುಪ್ರೀಂ ಕೋರ್ಟ್. ಇವೇ ಮಾರ್ಗಸೂಚಿಗಳನ್ನು ಗಮನದಲ್ಲಿ ಇರಿಸಿಕೊಂಡು ಸರ್ಕಾರ 2013ರಲ್ಲಿ ಕಾಯಿದೆ ರೂಪಿಸಿತ್ತು. ಕೆಲಸದ ಜಾಗಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿಷೇಧ ಹಾಗೂ ಪರಿಹಾರ) ಕಾಯಿದೆಯ ಪ್ರಕಾರ, ವಿಚಾರಣಾ ಸಮಿತಿಯ ಮುಖ್ಯಸ್ಥರು ಮಹಿಳೆಯಾಗಿರಬೇಕು. ಸಮಿತಿಯ ಅರ್ಧದಷ್ಟು ಸದಸ್ಯರು ಕೂಡ ಮಹಿಳೆಯರೇ ಆಗಿರತಕ್ಕದ್ದು. ಕೆಲಸದ ಜಾಗಗಳಲ್ಲಿ ಹಿರಿಯ ಅಧಿಕಾರಿಗಳು ಸಮಿತಿಯ ಮೇಲೆ ಪ್ರಭಾವ ಬೀರಬಹುದಾದ ಸಾಧ್ಯತೆಯನ್ನು ತಡೆಯಲು ಈ ಸಮಿತಿಯ ಸದಸ್ಯರೊಬ್ಬರು ಹೊರಗಿನವರಾಗಿರಬೇಕು.
ಸರ್ಕಾರಿ ಅಥವಾ ಖಾಸಗಿ ಉದ್ಯೋಗದ ಸ್ಥಳವೊಂದರಲ್ಲಿ ಇಂತಹುದೇ ಆಪಾದನೆ ಕೇಳಿಬಂದು, ಪ್ರಾಥಮಿಕ ನೋಟಕ್ಕೆ ನಿಜ ಎನಿಸಬಹುದಾದ ಪುರಾವೆಯನ್ನು ಆಕೆ ಮುಂದಿಟ್ಟಿದ್ದರೆ, ಆಪಾದಿತನನ್ನು ಅಮಾನತಿನಲ್ಲಿ ಇರಿಸಿ ವಿಚಾರಣೆಗೆ ಆದೇಶ ನೀಡಲಾಗುತ್ತಿತ್ತು. ಆಪಾದಿತ ಮತ್ತು ದೂರುದಾರಳಿಬ್ಬರಿಗೂ ತಮ್ಮ ವಾದ- ಪ್ರತಿವಾದ- ಪಾಟೀಸವಾಲು- ಪುರಾವೆಗಳನ್ನು ಮಂಡಿಸಲು ಅವಕಾಶ ಇರುತ್ತಿತ್ತು. ಆಪಾದಿತನ ಜಾಗದಲ್ಲಿ ಮುಖ್ಯ ನ್ಯಾಯಮೂರ್ತಿ ನಿಂತರೆ ಈ ವಿಚಾರಣಾ ವಿಧಾನ- ವೈಖರಿಗಳು ಯಾಕೆ ಬದಲಾಗಬೇಕು?
ಹಾಲಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಚಾರಣಾ ಸಮಿತಿಯನ್ನು ವಿಶಾಖಾ ಮಾರ್ಗಸೂಚಿಗಳ ಪ್ರಕಾರವಾಗಲಿ, 2013ರ ಕಾಯಿದೆಗೆ ಅನುಗುಣವಾಗಿಯೇ ಆಗಲಿ ರಚಿಸಿಲ್ಲ. ಸುಪ್ರೀಂ ಕೋರ್ಟ್ ತಾನೇ ರೂಪಿಸಿಕೊಂಡಿರುವ ಹಳೆಯ ಅನೌಪಚಾರಿಕ ವಿಧಾನದ ಅನೌಪಚಾರಿಕ ಹಂಗಾಮಿ ಸಮಿತಿಯಿದು.. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧದ ಆಪಾದನೆಗಳ ವಿಚಾರಣೆಗೆ ರಚಿಸಲಾಗುವ ಮೂವರು ನ್ಯಾಯಮೂರ್ತಿಗಳ ಆಂತರಿಕ ವ್ಯವಸ್ಥೆ. 1999ರಲ್ಲಿ ತನಗಾಗಿ ತಾನೇ ಜಾರಿಗೆ ತಂದಿರುವ ಈ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವೇ ಕಂಡುಬಂದಿಲ್ಲದಿರುವುದು ಅಚ್ಚರಿಯ ಸಂಗತಿ.
ದುರುದ್ದೇಶಪೂರಿತ ಮತ್ತು ಹುಸಿ ಆಪಾದನೆಗಳಿಂದ ನ್ಯಾಯಮೂರ್ತಿಗಳಿಗೆ ರಕ್ಷಣೆ ಒದಗಿಸುವುದು ಈ ಹಳೆಯ ವಿಚಾರಣಾ ವಿಧಾನದ ಉದ್ದೇಶ ಎನ್ನಲಾಗಿದೆ. ಈ ಅನಿಸಿಕೆಯನ್ನು ಸುಲಭವಾಗಿ ತಳ್ಳಿಹಾಕಲು ಬರುವುದಿಲ್ಲ. ದುರುದ್ದೇಶಪೂರಿತ ಹುಸಿ ಆಪಾದನೆಗಳು ನ್ಯಾಯಮೂರ್ತಿಯೊಬ್ಬರ ಚಾರಿತ್ರ್ಯಕ್ಕೆ ಸುಲಭವಾಗಿ ಮಸಿ ಬಳಿದುಬಿಡಬಹುದು. ನ್ಯಾಯಾಂಗದ ಘನತೆಯನ್ನೂ ವಿವಾದದ ಕೆಸರಿಗೆ ಎಳೆದುಬಿಡಬಹುದು. ಹಾಗೆಂದು, ಸುಪ್ರೀಂ ಕೋರ್ಟ್ ತನ್ನನ್ನು ನ್ಯಾಯಯುತ ಮತ್ತು ಪಾರದರ್ಶಕ ವಿಚಾರಣೆಯಿಂದ ಮುಕ್ತಗೊಳಿಸಿಕೊಳ್ಳಲು ಬರುವುದೇ? ಇತರ ಗಣ್ಯ ಸಂಸ್ಥೆಗಳೂ ಇದೇ ದಾರಿಯನ್ನು ತುಳಿಯಬಹುದಲ್ಲ?
ನ್ಯಾಯದಾನ ಮಾಡುವವರು ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಡಬೇಕು. ನೆಲದ ಕಾಯಿದೆ ಕಾನೂನುಗಳು ತಮಗೂ ಅನ್ವಯಿಸುತ್ತವೆಂದು ಒಪ್ಪಿಕೊಳ್ಳಬೇಕು. ಮುಖ್ಯ ನ್ಯಾಯಮೂರ್ತಿಯವರು ದುರುದ್ದೇಶಪೂರಿತ- ಹುಸಿ ಆಪಾದನೆಗಳಿಗೆ ಬಲಿಪಶು ಆಗಕೂಡದು ನಿಜ. ಅಂತೆಯೇ ದೂರುದಾರಳಿಗೆ ಅನ್ಯಾಯ ಆಗಕೂಡದು ಎಂಬುದೂ ಅಷ್ಟೇ ಮುಖ್ಯ.
ಆದರೆ, ಮುಖ್ಯ ನ್ಯಾಯಮೂರ್ತಿಯವರ ಪ್ರಕರಣದಲ್ಲಿ ದೂರನ್ನು ಕಿಡಿಗೇಡಿ ಶಕ್ತಿಗಳ ಕೃತ್ಯವೆಂದು ಬಣ್ಣಿಸಲಾಗುತ್ತದೆ. ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ನಡೆದ ದಾಳಿಯೆಂದು ಘೋಷಿಸಲಾಗುತ್ತದೆ. ದೂರುದಾರಳ ಚಾರಿತ್ರ್ಯ ಹನನವಾಗುತ್ತದೆ. ಆಕೆಯ ಉದ್ದೇಶವನ್ನು ಸಂದೇಹಿಸಲಾಗುತ್ತದೆ. ಆಕೆಯನ್ನು ಬಂಧಿಸಿದ್ದ ಪೊಲೀಸರು ದೈಹಿಕ ಹಿಂಸೆಗೆ ಗುರಿ ಮಾಡುತ್ತಾರೆ. ಅಪರಿಚಿತ ವ್ಯಕ್ತಿಗಳು ಬೆದರಿಕೆ ಕರೆ ಮಾಡುತ್ತಾರೆ, ಹೋದ ಬಂದಲ್ಲೆಲ್ಲ ಹಿಂಬಾಲಿಸುತ್ತಾರೆ. ತನ್ನನ್ನು ಪೊಲೀಸ್ ಅಧಿಕಾರಿಯೊಬ್ಬರು ಮುಖ್ಯನ್ಯಾಯಮೂರ್ತಿಯವರ ನಿವಾಸಕ್ಕೆ ಕರೆದೊಯ್ದು, ಪಾದಕ್ಕೆ ನಮಿಸಿ ಮೂಗು ಉಜ್ಜಿ ಕ್ಷಮೆ ಕೇಳಿ ತೊಲಗು ಎಂದು ಮುಖ್ಯನ್ಯಾಯಮೂರ್ತಿಯವರ ಪತ್ನಿ ತಮ್ಮನ್ನು ಗದರಿಸಿದ್ದಾಗಿ ಆಕೆ ಹೇಳುತ್ತಾಳೆ. ಆಕೆಯ, ಆಕೆಯ ಗಂಡ ಮತ್ತು ಮೈದುನನ ಉದ್ಯೋಗಗಳಿಗೆ ಸಂಚಕಾರ ಬರುತ್ತದೆ. “ನಾನು ಎಲ್ಲವನ್ನೂ ಕಳೆದುಕೊಂಡು ಬರಿಗೈಲಿ ನಿಂತಿದ್ದೇನೆ. ಭವಿಷ್ಯ ಅನಿಶ್ಚಿತ. ಪುನಃ ಬಂಧಿಸಿದರೆ ನನ್ನ ಪುಟ್ಟ ಮಗಳನ್ನು ಬಿಟ್ಟಿರಬೇಕಾಗುತ್ತದೆ,” ಎಂಬ ನೋವು ಆಕೆಯದು. ಆಕೆಯ ದೂರು ನಿಜವಲ್ಲ ಎಂದೇ ಒಂದು ಕ್ಷಣ ಭಾವಿಸೋಣ. ಆ ನಿರ್ಣಯಕ್ಕೆ ಬರಲೂ ನ್ಯಾಯಬದ್ಧ ವಿಧಿವಿಧಾನಗಳಿವೆಯಲ್ಲವೇ? ಲೈಂಗಿಕ ಕಿರುಕುಳದ ದೂರೊಂದು ನ್ಯಾಯಾಂಗದ ಸ್ವಾತಂತ್ರ್ಯದ ವಿಷಯವಾಗಿ ಬದಲಾಗಿಬಿಡುವುದು ಸೋಜಿಗದ ಮತ್ತು ನೋವಿನ ಸಂಗತಿ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಹುದ್ದೆಗಿರುವ ಪ್ರಭಾವ, ಅಧಿಕಾರ ಅಪಾರ. ತಮ್ಮ ನ್ಯಾಯಾಲಯದ ಇತರ ನ್ಯಾಯಮೂರ್ತಿಗಳಿಗೆ ದಿನನಿತ್ಯದ ಕೆಲಸ ಕಾರ್ಯ ಹಂಚಿಕೊಡುವವರು ಕೂಡ ಅವರೇ. ಹೀಗಿರುವಾಗ, ತಮ್ಮ ಮುಖ್ಯಸ್ಥರ ಕುರಿತು ವಿಚಾರಣೆ ನಡೆಸುವ ಹೊಣೆಯನ್ನು ನ್ಯಾಯಮೂರ್ತಿಗಳಿಗೆ ನೀಡಿದ್ದು ಎಷ್ಟು ಔಚಿತ್ಯಪೂರ್ಣ? ಮುಖ್ಯ ನ್ಯಾಯಮೂರ್ತಿಯವರ ಮೇಲೆ ಕೇಳಿಬರುವ ಅಪಾದನೆಗಳ ವಿಚಾರಣೆಗೆ ಸುಪ್ರೀ ಕೋರ್ಟ್‌ನ ಆಂತರಿಕ ವಿಧಾನಗಳಲ್ಲಿ ಅವಕಾಶವೇ ಇಲ್ಲ.
ತಮ್ಮ ದೂರಿಗೆ ಬಲವಾದ ಪುರಾವೆಗಳನ್ನು ಒದಗಿಸಿರುವುದಾಗಿ ದೂರು ನೀಡಿರುವ ಮಹಿಳೆ ಹೇಳಿದ್ದಾರೆ. ಈ ದೂರು- ಪುರಾವೆಗಳು ದುರುದ್ದೇಶಪೂರಿತ ಅಥವಾ ಹುಸಿಯೇ ಆಗಿದ್ದಲ್ಲಿ, ಹೇಗೆ ಹುಸಿ ಎಂದು ಜವಾಬು ನೀಡುವವರು ಯಾರು? ಈ ಸಮಿತಿ ಆಪಾದಿತ ಮುಖ್ಯ ನ್ಯಾಯಮೂರ್ತಿಯವರನ್ನೂ ವಿಚಾರಿಸಿತೇ, ವಿಚಾರಿಸಿದ್ದಲ್ಲಿ ಅವರು ನೀಡಿದ ಸಮಜಾಯಿಷಿಗಳೇನು ಎಂಬುದೆಲ್ಲ ಗೋಪ್ಯ ಗೋಪ್ಯ.
ಇಂದಿನ ಸಾಮಾಜಿಕ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಆಳಲನ್ನು ಕೇಳುವವರಿಲ್ಲ ಎಂಬುದು ದೀನ, ದಲಿತ ವರ್ಗಗಳು ಹಾಗೂ ಮಹಿಳೆಯರ ಶತಮಾನಗಳ ದೂರು. ಸದರಿ ಪ್ರಕರಣದ ದೂರುದಾರ ಮಹಿಳೆ ಕೂಡ ಇದೇ ಮಾತು ಹೇಳಿದ್ದಾಳೆ. ತನಗೆ ನ್ಯಾಯ ಸಿಗುವುದಿಲ್ಲವೆಂದು ವಿಚಾರಣೆಯಿಂದ ಹೊರನಡೆದಿದ್ದಾಳೆ. ಕಾರ್ಯಾಂಗ- ಶಾಸಕಾಂಗಗಳು ಈ ಸಂಬಂಧ ಕುರುಡಾದಾಗ, ನ್ಯಾಯಾಂಗ ಕಣ್ಣು ತೆರೆಸಿದ್ದುಂಟು. ಆದರೆ, ಇದೀಗ ನ್ಯಾಯಾಂಗವೇ ಕುರುಡಾದರೆ ಕಾಯುವವರಾದರೂ ಯಾರು? ಹರ ಕೊಲ್ಲಲ್ ಪರ ಕಾಯ್ವನೇ?
1950ರಿಂದ ಇಲ್ಲಿಯವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಸ್ಥಾನ ಪಡೆದಿರುವ ಮಹಿಳೆಯರ ಸಂಖ್ಯೆ ಕೇವಲ ಒಂಬತ್ತು. ಮಹಿಳಾ ನ್ಯಾಯವಾದಿಗಳ ಸಂಖ್ಯೆಯ ಪರಿಸ್ಥಿತಿಯೂ ಸಮಾಧಾನಕರ ಅಲ್ಲ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಜಾರಿಯಲ್ಲಿರುವ ಕೊಲಿಜಿಯಂ ಪದ್ಧತಿ ಕೂಡ ಮಹಿಳೆಯ ಪ್ರಾತಿನಿಧ್ಯಕ್ಕೆ ಪೂರಕ ಅಲ್ಲ. ನ್ಯಾಯವಾದಿಗಳನ್ನು ನ್ಯಾಯಮೂರ್ತಿಗಳಾಗಿ ನಿಯುಕ್ತಿ ಮಾಡುವ ನಿರ್ಣಾಯಕ ಅಧಿಕಾರ ಕೊಲಿಜಿಯಂನದು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ಮೂವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಈ ಕೊಲಿಜಿಯಂನಲ್ಲಿರುತ್ತಾರೆ. ನ್ಯಾಯಮೂರ್ತಿಗಳ ನೇಮಕದ ಶಿಫಾರಸನ್ನು ಮಾಡುವುದು ಇದೇ ಕೊಲಿಜಿಯಂ. ಈ ಕೊಲಿಜಿಯಂ ಕೂಡ ಪುರುಷಪ್ರಧಾನ. ದೇಶಾದ್ಯಂತ 25 ಹೈಕೋರ್ಟುಗಳ ಕೊಲಿಜಿಯಂ ಪೈಕಿ 19ರಲ್ಲಿ ಮಹಿಳಾ ನ್ಯಾಯಮೂರ್ತಿಗಳಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ಜಾಗ ಸಿಕ್ಕಿರುವುದು ಒಬ್ಬೇ ಒಬ್ಬ ಮಹಿಳೆಗೆ. ನ್ಯಾಯಮೂರ್ತಿ ರೂಮಾಪಾಲ್ ಈಗ ನಿವೃತ್ತರು. ಹಾಲಿ ನ್ಯಾಯಮೂರ್ತಿ ಭಾನುಮತಿ ಅವರು ಈ ಪಟ್ಟಿಗೆ ಎರಡನೆಯ ಮಹಿಳೆಯಾಗಿ ಸೇರುವ ಅವಕಾಶವಿದೆ. ಕನಿಷ್ಠ ಪಕ್ಷ ಇನ್ನೂ ಆರು ವರ್ಷಗಳ ಕಾಲ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರುವ ಅವಕಾಶ ಇಲ್ಲ ಎನ್ನಲಾಗಿದೆ. ಅಧೀನ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಪ್ರಮಾಣ ಶೇ.27.6. ದೇಶದ ಅರ್ಧ ಜನಸಂಖ್ಯೆಯ ಮತ್ತು ಅರ್ಧಾಂಗಿ ಎಂದು ಬಣ್ಣಿಸಲಾಗುವ ಅರ್ಧನಾರೀಶ್ವರ ಪರಂಪರೆಯಲ್ಲಿ ಅಡಗಿರುವ ಕಟುಸತ್ಯವಿದು.
ನ್ಯಾಯಾಂಗ ಪುರುಷ ಪ್ರಧಾನ ಆಗದೆ, ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಇದ್ದಿದ್ದಲ್ಲಿ ಪರಿಸ್ಥಿತಿ ಇಷ್ಟು ಅಪಾರದರ್ಶಕ ಆಗುತ್ತಿರಲಿಲ್ಲ. ಲಿಂಗ ಸೂಕ್ಷ್ಮತೆ, ಲಿಂಗ ಅಸಮಾನತೆ ಕುರಿತು ಆತ್ಮನಿರೀಕ್ಷಣೆ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್‌ಗೆ ಇದು ಸಕಾಲ.
ವಾದಿ ಅಥವಾ ಪ್ರತಿವಾದಿಯ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಿ ನೀಡುವ ತೀರ್ಪು ನೈಸರ್ಗಿಕ ನ್ಯಾಯ ಪ್ರಕ್ರಿಯೆಯ ತತ್ವಗಳಿಗೆ ವ್ಯತಿರಿಕ್ತ. ಇಂತಹ ತೀರ್ಪನ್ನು ತಳ್ಳಿಹಾಕಲು ಬರುತ್ತದೆಂದು ಸುಪ್ರೀಂ ಕೋರ್ಟ್ ಇದೇ ಫೆಬ್ರವರಿಯಲ್ಲಿ ಹೇಳಿತ್ತು. ಸಾಂವಿಧಾನಿಕ ನೈತಿಕತೆ ಎತ್ತಿಹಿಡಿಯುವುದೇ ಪರಮ. ಅದನ್ನು ಎತ್ತಿಹಿಡಿಯಲು ಕಾಯಿದೆ ಕಾನೂನುಗಳನ್ನು ಸೃಜನಶೀಲವಾಗಿ ವ್ಯಾಖ್ಯಾನ ಮಾಡಿದರೆ ತಪ್ಪಿಲ್ಲ ಎಂಬ ಮಾತನ್ನೂ ತಾನು ಹೇಳಿದ್ದುಂಟು. ನ್ಯಾಯಾಲಯ ಸದರಿ ಪ್ರಕರಣದಲ್ಲಿ ತನ್ನ ಮಾತುಗಳನ್ನು ತಾನೇ ಎತ್ತಿಹಿಡಿದಿದ್ದರೆ ಸಾಕಿತ್ತು.