ಆಕೆಯ ಹೆಸರು ಲಕ್ಷ್ಮಿ ಅಗರ್‌ವಾಲ್. ರಾಜಧಾನಿ ದೆಹಲಿಯಲ್ಲಿ ವಾಸ. 2005ರಲ್ಲಿ ಆಕೆಯ ಪ್ರಿಯಕರನೇ ಆಸಿಡ್ ಎರಚಿಬಿಟ್ಟಿದ್ದ. ಆಗಿನ್ನೂ ಆಕೆಗೆ 15ರ ಹರೆಯ. ಮುಖ ಮತ್ತು ದೇಹದ ಒಂದಷ್ಟು ಭಾಗ ಸುಟ್ಟುಹೋಯಿತು. ಲಕ್ಷ್ಮಿ ಸುಪ್ರೀಂ ಕೋರ್ಟ್ ಮೊರೆಹೋದಳು. ಆದರೆ, ಪರಿಹಾರ ಕೋರಿ ಅಲ್ಲ; ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿಡಿದು. ಆಸಿಡ್ ಅಟ್ಯಾಕ್ ನಿಯಂತ್ರಣ ಕುರಿತ ಕಾನೂನನ್ನು ಬಿಗಿ ಮಾಡಬೇಕು ಅಥವಾ ಅಂಥದ್ದೊಂದು ಹೊಸ ಕಾನೂನನ್ನು ರೂಪಿಸಬೇಕು ಎಂಬುದು ಲಕ್ಷ್ಮಿ ಹೂಡಿದ ದಾವೆಯ ಸಾರಾಂಶ. ಅಸಲಿಗೆ, ಆಸಿಡ್ ದಾಳಿಗಳ ನಿಯಂತ್ರಣ ಕುರಿತ ಅಭಿಯಾನವೊಂದು ಇಂಡಿಯಾದಲ್ಲಿ ಸದ್ದಿಲ್ಲದೆ ಆರಂಭಗೊಂಡಿದ್ದು ಹೀಗೆ.
ಈ ಅಭಿಯಾನ ದೊಡ್ಡ ರೂಪು ತಾಳಿ, ಆಸಿಡ್ ದಾಳಿಗಳ ಭಯಾನಕತೆ ಕಂಡು ಬೆಚ್ಚಿದ ಸುಪ್ರೀಂ ಕೋರ್ಟ್, 2013ರಲ್ಲಿ ಒಂದು ಮಹತ್ವದ ತೀರ್ಪು ಕೊಡುತ್ತದೆ. ಆ ತೀರ್ಪಿನ ಪ್ರಕಾರ, ಆಸಿಡ್ ಮಾರಾಟ ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟು, ಅಧಿಕೃತ ಔಟ್‌ಲೆಟ್‌ಗಳಲ್ಲಿ ಮಾತ್ರವೇ ಮಾರಾಟ ಮಾಡಬೇಕು ಎಂದಾಗುತ್ತದೆ. ಹಾಗೆ ಮಾರಾಟ ಮಾಡುವಾಗ ಆಸಿಡ್ ಕೊಳ್ಳುವವರ ಗುರುತಿನ ಪತ್ರದ ಪ್ರತಿಯನ್ನು ಪಡೆಯಬೇಕು ಮತ್ತು ಆತ ಆಸಿಡ್ ಕೊಳ್ಳುತ್ತಿರುವ ಉದ್ದೇಶವನ್ನು ದಾಖಲಿಸಿಕೊಳ್ಳುವುದು ಕಡ್ಡಾಯ ಎನ್ನುತ್ತದೆ ಸುಪ್ರೀಂ ಕೋರ್ಟ್. ಆ ನಂತರ ಆ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಬೇಕು ಎಂಬುದನ್ನು ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಆದರೆ, ಈ ತೀರ್ಪಿನ ನಂತರ ನಡೆದ ಬೆಳವಣಿಗೆಗಳು ಮಾತ್ರ ಇಂಥ ತೀರ್ಪುಗಳನ್ನು ಸರ್ಕಾರಗಳು ಹೇಗೆ ಸ್ವೀಕರಿಸುತ್ತವೆ ಎಂಬುದಕ್ಕೆ ಸಾಕ್ಷಿ. 2012ರಲ್ಲಿ 106 ಆಸಿಡ್ ದಾಳಿ ಪ್ರಕರಣಗಳು ದಾಖಲಾಗಿದ್ದವು. 2013ರಲ್ಲಿ, ಅಂದರೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ವರ್ಷ ಆಸಿಡ್ ದಾಳಿಗಳ ಸಂಖ್ಯೆ 116ಕ್ಕೆ ತಲುಪಿ, ತೀರ್ಪು ಬಂದ ಮರುವರ್ಷ (2014) 225ಕ್ಕೂ, ಅದರ ಮರುವರ್ಷ (2015) 249ಕ್ಕೂ ಏರಿಕೆ ಕಂಡು ಅಭಿಯಾನದಲ್ಲಿ ತೊಡಗಿದ್ದ, ಅಭಿಯಾನಕ್ಕೆ ಬೆಂಬಲ ನೀಡಿದ್ದ ಎಲ್ಲರನ್ನೂ, ಸ್ವತಃ ಸುಪ್ರೀಂ ಕೋರ್ಟನ್ನೂ ಬೆಚ್ಚಿಬೀಳಿಸಿವೆ.
ದೇಶದ ಆಸಿಡ್ ದಾಳಿ ಪ್ರಕರಣಗಳಲ್ಲಿ ಕರ್ನಾಟಕದ ಪಾಲೂ ಇದೆ. ಆಸಿಡ್ ಮಾರಾಟದ ಮೇಲೆ ಸುಪ್ರೀಂ ಕೋರ್ಟ್ ನಿಯಂತ್ರಣ ಹೇರಿದ 2013ರಿಂದ ಇಲ್ಲಿಯವರೆಗೆ (ಮೇ 2019) ಒಟ್ಟು 17 ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿವೆ. ಈ ಪೈಕಿ ಬೆಂಗಳೂರು ನಗರದ ಐದು ಪ್ರಕರಣಗಳೂ ಸೇರಿವೆ. ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ಹಾಸನ, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳಿಂದ ತಲಾ ಒಂದು ಹಾಗೂ ಕಲಬುರಗಿ, ಮಂಗಳೂರು ನಗರದಿಂದ ತಲಾ ಒಂದು ಪ್ರಕರಣ ದಾಖಲಾಗಿವೆ (ಮಾಹಿತಿ: ಕರ್ನಾಟಕ ಸ್ಟೇಟ್ ಕ್ರೈಮ್ ರೆಕಾರ್ಡ್ಸ್ ಬ್ಯುರೋ). ಆದರೆ, ಮಾಧ್ಯಮಗಳಲ್ಲಿ ವರದಿಯಾದದ್ದು ಮತ್ತು ಆಚೆ ಬಾರದ ಪ್ರಕರಣಗಳನ್ನೂ ಸೇರಿಸಿದರೆ ಈ ಸಂಖ್ಯೆ ಹೆಚ್ಚಾಗುವುದು ನಿಶ್ಚಿತ.
ಬೆಂಗಳೂರು ಮತ್ತಿತರ ನಗರಗಳಿಗೆ ಹೋಲಿಸಿದರೆ ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ಮಾತ್ರ ನಿಜಕ್ಕೂ ಚಿಂತಾಜನಕ. ‘ಮೇಲ್ ಟುಡೇ’ ದಿನಪತ್ರಿಕೆಯ ರಿಯಾಲಿಟಿ ಚೆಕ್‌ನಲ್ಲಿ ದೆಹಲಿಯ ಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಆಸಿಡ್ ಸಿಗುತ್ತಿರುವುದು ಬೆಳಕಿಗೆ ಬಂದಿದೆ. ದಕ್ಷಿಣ ದೆಹಲಿಯ ಮನೆಯೊಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುವ ಪುಷ್ಟ ಎಂಬಾಕೆ ಹೇಳಿರುವ ಹೇಳಿಕೆ ಇದು: “ಟಾಯ್ಲೆಟ್ ಸೀಟ್ ಅನ್ನು ಸರಿಯಾಗಿ ಕ್ಲೀನ್ ಮಾಡುತ್ತಿಲ್ಲ ಎಂಬುದು ನನ್ನ ಮನೆಯಾಕೆಯ ಪ್ರತಿದಿನದ ದೂರಾಗಿತ್ತು. ಟಾಯ್ಲೆಟ್ ಕ್ಲೀನ್ ಮಾಡಲು ಅತ್ಯಂತ ಜನಪ್ರಿಯ ಬ್ರಾಂಡ್‌ಗಳನ್ನೆಲ್ಲ ಬಳಸಿಯೂ ನಾನು ಸೋತಿದ್ದೆ. ಕೊನೆಗೆ ಯಾರೋ ಹೇಳಿದರೂಂತ ಆಸಿಡ್ ಬಳಸಿ ತೊಳೆದೆ. ಸ್ವಚ್ಛವಾಯಿತು. ಮನೆಯಾಕೆಗೆ ತುಂಬಾ ಖುಷಿಯಾಯಿತು. 60 ರುಪಾಯಿಯ ಒಂದು ಬಾಟಲ್ ಆಸಿಡ್ ಅನ್ನು ಎರಡು ತಿಂಗಳು ಬಳಸಬಹುದು.” ಅಪರಾಧ ಕೃತ್ಯಗಳು ಹೆಚ್ಚಾಗಿ ಕಂಡುಬರುವ ದೆಹಲಿ ಹೊರವಲಯ ನೋಯ್ಡಾದಲ್ಲಿ ಹಾರ್ಡ್‌ವೇರ್ ಶಾಪ್‌ಗಳಲ್ಲಿ ಕೂಡ ಆಸಿಡ್ ಮಾರಾಟ ಕಂಡುಬಂದಿದೆ.
ಇತ್ತೀಚೆಗೆ 22 ವರ್ಷದ ಮಹಿಳೆ ಮೇಲೆ ಆಸಿಡ್ ದಾಳಿ ನಡೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಘಟನೆ ಹಿನ್ನೆಲೆಯಲ್ಲಿ, ಆಸಿಡ್ ಮಾರಾಟ ನಿಷೇಧಕ್ಕೆ ಒತ್ತಾಯಿಸಿ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರಿಗೆ ಆ ರಾಜ್ಯದ ಮಹಿಳಾ ಆಯೋಗ ಪತ್ರ ಬರೆದಿತ್ತು. ದೆಹಲಿಯ ಮಹಿಳಾ ಆಯೋಗ ಕೂಡ ಕಂದಾಯ ಇಲಾಖೆಯ ವಿಭಾಗೀಯ ಆಯುಕ್ತರಿಂದ ಆಸಿಡ್ ನಿಯಂತ್ರಣ ಸಂಬಂಧ ಸಂಪೂರ್ಣ ವಿವರ ನೀಡುವಂತೆ ಕೇಳಿದೆ.
ಆಸಿಡ್ ದಾಳಿ ಇಷ್ಟೊಂದು ಚರ್ಚೆಗೆ ಸಿಗಲು ಮುಖ್ಯ ಕಾರಣವೆಂದರೆ, ಮಹಿಳೆಯರನ್ನು ಹಣಿಯಲು, ಬೆದರಿಸಲು ಮತ್ತು ಮಹಿಳೆಯರ ವಿರುದ್ಧ ಸೇಡು ತೀರಿಸಿಕೊಳ್ಳಲು ಅದನ್ನೊಂದು ಆಯುಧವಾಗಿ ಉಪಯೋಗಿಸಿಕೊಳ್ಳುತ್ತಿರುವುದು. ಮಾಧ್ಯಮ ಸಮೀಕ್ಷೆಯೊಂದರ ಪ್ರಕಾರ, ಶೇಕಡ 72ರಷ್ಟು ಆಸಿಡ್ ದಾಳಿ ಪ್ರಕರಣಗಳಲ್ಲಿ ಸಂತ್ರಸ್ತರು ಮಹಿಳೆಯರೇ ಆಗಿರುತ್ತಾರೆ. ಪ್ರೇಮ ನಿರಾಕರಣೆ ಪ್ರಕರಣಗಳು, ಬೆದರಿಕೆಯೊಡ್ಡಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾದ ಪ್ರಕರಣಗಳು ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಗಳ ಸಂಬಂಧವೇ ಆಸಿಡ್ ದಾಳಿಗಳು ಹೆಚ್ಚಾಗಿ ನಡೆದಿವೆ, ನಡೆಯುತ್ತಿವೆ. ಹಾಗಾಗಿ ಆಯಾ ರಾಜ್ಯಗಳ ಮಹಿಳಾ ಆಯೋಗಗಳು ಇಂಥ ಪ್ರಕರಣ ಬೆಳಕಿಗೆ ಬಂದಾಗಲೆಲ್ಲ ಪೊಲೀಸರಿಗೆ ವಿವರಣೆ ಕೇಳಿ ನೋಟಿಸ್ ನೀಡುವುದು ಅಥವಾ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯುವುದು ನಡೆದೇ ಇದೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಆಸಿಡ್ ಮಾರಾಟ ದಂಧೆ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಬಹುಶಃ ಅಂಥ ನೋಟಿಸ್ ಅಥವಾ ಪತ್ರಗಳಿಂದ ಯಾವುದೇ ಪ್ರಯೋಜನ ಆಗಲಾರದು.