ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಹಿರಿಯ ನಾಯಕರು. ಅವರು ಅಸಲಿ ಕಾಂಗ್ರೆಸ್‌ನವರು. ಶಾಸಕಾಂಗ ಪಕ್ಷದ ಧುರೀಣರಾದ ಸಿದ್ದರಾಮಯ್ಯವವರಂತೆ ಬೇರೆ ಪಕ್ಷದಿಂದ ವಲಸೆ ಬಂದವರಲ್ಲ. ಕಾಂಗ್ರೆಸ್‌ನ ನೀತಿ, ಸಂಸ್ಕ್ರತಿಗಳನ್ನು ಅರೆದು ಕುಡಿದವರು. ಯಾವ ಕಾಲದಲ್ಲಿಯೂ, ಎಂತಹ ಪರಿಸ್ಥಿತಿಯಲ್ಲಿಯೂ ಕಾಂಗ್ರೆಸಿಗೆ ದ್ರೋಹ ಬಗೆದವರಲ್ಲ. ಪಕ್ಷದ ಮುಂದಾಳತ್ವದ ಬಗೆಗೆ ಬಹಿರಂಗವಾಗಿ ಎಂದೂ ಟೀಕೆ ಮಾಡಿದವರಲ್ಲ.
1972ರಲ್ಲಿ, ಅಂದಿನ ರಾಜ್ಯ ಪಕ್ಷದ ಅಧ್ಯಕ್ಷರಾದ ದೇವರಾಜ ಅರಸು ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಸೇರಿ, ಕಲಬುರಗಿಯ ಮೂಲೆಯಲ್ಲಿ ಇಂದಿನ ತೆಲಂಗಾಣಕ್ಕೆ ಹೊಂದಿದ ಗುರುಮಿಠಕಲ್ ಮೀಸಲು ಕ್ಷೇತ್ರದಿಂದ ಆರಿಸಿ ಬಂದ ಖರ್ಗೆ, ಒಂಬತ್ತು ಬಾರಿ ವಿಧಾನಸಭೆಗೆ ಆರಿಸಿ ಬಂದರು. ಜಾತಿ ವೈಷಮ್ಯಗಳಿಂದ ತುಂಬಿ ತುಳುಕುತ್ತಿದ್ದ ಆ ಜಿಲ್ಲೆಯಲ್ಲಿ ಒಬ್ಬ ದಲಿತ ಮೀಸಲು ಕೇತ್ರದಿಂದ ಸತತವಾಗಿ ಅಷ್ಟು ಬಾರಿ ಆರಿಸಿ ಬರುವುದು ಅಷ್ಟು ಸುಲಭದ ಮಾತಲ್ಲ. ದಲಿತರಿಗೆ ತಮ್ಮ ಹಕ್ಕು ದೊರಕಿಸುವಲ್ಲಿ, ಮೇಲ್ಜಾತಿಯವರನ್ನು ತುಳಿಯದೆ ಒಂದು ಜಾಣ್ಮೆಯ ಸಮತೋಲನ ಸಾಧಿಸಿದ್ದರು. ಒಂದು ವರದಿಯ ಪ್ರಕಾರ, ಅವರು ಮೇಲ್ಜಾತಿಯವರನ್ನು ಜಾಸ್ತಿ ಒಲೈಸಿದುದರಿಂದಲೇ ಎಲ್ಲ ಚುನಾವಣೆಗಳನ್ನು ಸುಲಭ ಸಾಧ್ಯವಾಗಿ ಗೆಲ್ಲಲು ಸಾಧ್ಯವಾಯಿತು.
ಎರಡು ಬಾರಿ ಕಲಬುರಗಿಯಿಂದಲೂ ಇದೇ ರೀತಿ ಅವರು ಆರಿಸಿ ಬಂದಿದ್ದರು. 2009ರಲ್ಲಿ ರೈಲ್ವೆ ಮಂತ್ರಿಗಳಾಗಿ, ಇಂತಹ ಹಿಂದುಳಿದ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದರು. ಹುಬ್ಬಳ್ಳಿ-ಕಲಬುರಗಿಗಳ ನಡುವೆ ಮೊದಲ ಬಾರಿ ರೈಲ್ವೆ ಸಂಪರ್ಕ ಆದದ್ದು ಇವರ ಕಾಲದಲ್ಲಿ. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಗೆದ್ದ ಅವರಿಗೆ, ಲೋಕಸಭೆಯಲ್ಲಿ ಪ್ರತಿಷ್ಠಿತ ವಿರೋಧಿ ಪಕ್ಷದ ನಾಯಕನ ಸ್ಥಾನವೂ ಒಲಿದು ಬಂದಿತು. ತಮ್ಮ ಉರ್ದು ಮತ್ತು ಹಿಂದಿ ಭಾಷೆಯ ಮೇಲಿನ ಪ್ರಭುತ್ವದಿಂದ ಹಿಂದಿ ನಾಡಿನಲ್ಲಿಯೂ ಹೆಸರು ಮಾಡಿದರು.
1989ರಲ್ಲಿ ವೀರೇಂದ್ರ ಪಾಟೀಲರ ಮಂತ್ರಿಮಂಡಲ ಬಿಟ್ಟರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಕಾಂಗ್ರೆಸ್ ಮಂತ್ರಿಮಂಡಲಗಳಲ್ಲಿ ಮಂತ್ರಿಯಾಗಿ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಧುರೀಣರಾಗಿ ಕಾರ್ಯನಿರ್ವಹಿಸಿದ್ದಾರೆ.
ಹಿರಿತನ, ಅನುಭವ, ದಲಿತ ಎಂಬೆಲ್ಲ ಹಿನ್ನೆಲೆಗಳು ಇದ್ದರೂ, ಕರ್ನಾಟಕದ ಮುಖ್ಯಮಂತ್ರಿ ಪಟ್ಟ ಅವರಿಗೆ ಕಾರಣಾಂತರಗಳಿಂದ ಒಲಿಯಲಿಲ್ಲ. ಅವರ ಸಹೋದ್ಯೋಗಿ ಮತ್ತು ಅದೇ ಜಿಲ್ಲೆಯವರಾದ ಧರ್ಮ ಸಿಂಗ್ ಅವರು ಆ ಪಟ್ಟಕ್ಕೆ ಏರಿದರೂ, ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರಕದಾಯಿತು. ಖರ್ಗೆಯವರು ತಮ್ಮನ್ನು ಯಾವಾಗಲೂ ಕರೆದುಕೊಳ್ಳುವುದು ‘ಸುಗ್ಗಿಯ ಮುನ್ನಿನ ಧುರೀಣ’ ಎಂದು. ಅಂದರೆ, ಕಷ್ಟಕಾಲದಲ್ಲಿ ಪಕ್ಷದ ಪರ ಕೆಲಸ ಮಾಡಿ, ಅ ಕೆಲಸ ಫಲ ನೀಡುವ ಕಾಲ ಬಂದಾಗ, ‘ಸುಗ್ಗಿಯ ನಂತರದ ಧುರೀಣರು’ ಬಂದು ಫಲ ಉಣ್ಣುತ್ತಾರೆ ಎಂದು ಎಸ್.ಎಂ.ಕೃಷ್ಣ 1999ರ ಚುನಾವಣೆಯ ನಂತರ ಮುಖ್ಯಮಂತ್ರಿಗಳಾದಾಗ ಅವರೇ ಇದನ್ನು ಹಾಸ್ಯದಂತೆ ಹೇಳುತ್ತಿದ್ದರು.
ಕಾಂಗ್ರೆಸ್ ಆಧಿಕಾರದಲ್ಲಿರದ ಕಾಲದಲ್ಲಿ ಉತ್ತರ ಕರ್ನಾಟಕದ ‘ಸೆಟ್ ದೋಸೆಗಳು’ ಎಂದೇ ರಾಜಕೀಯ ವಲಯದಲ್ಲಿ ಪ್ರಸಿದ್ದರಾದವರು, ಧರ್ಮ ಸಿಂಗ್ (ಆಗಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು), ಖರ್ಗೆ ಮತ್ತು ಎಚ್.ಕೆ.ಪಾಟೀಲ್ (ವಿಧಾನಸಭೆ ಮತ್ತು ಪರಿಷತ್ತುಗಳಲ್ಲಿ ವಿರೋಧ ಪಕ್ಷದ ಧುರೀಣರು). ಎಸ್.ಎಂ.ಕೃಷ್ಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಬಂದದ್ದು ಚುನಾವಣೆ ಮುನ್ನಿನ ದಿವಸಗಳಲ್ಲಿ ಮಾತ್ರ.
ತಮ್ಮ ಜಿಲ್ಲೆಯಲ್ಲಿ ಆಗಲೀ ಅಥವಾ ರಾಜ್ಯದಲ್ಲಿ ಆಗಲೀ, ಖರ್ಗೆ ಯಾವಾಗಲೂ ಒಂಟಿ ಸಲಗ. ಅವರು ಯಾವ ಕಾಲದಲ್ಲಿಯೂ ತಮ್ಮ ಗುಂಪನ್ನು ಬೆಳೆಸಲಿಲ್ಲ. ಹಾಗಾಗಿ ಅವರ ಪರ ಲಾಬಿ ಮಾಡುವವರು ಯಾರೂ ಇರಲಿಲ್ಲ, ಈಗಲೂ ಇಲ್ಲ. ಈಗ ಕಾಂಗ್ರೆಸ್‌ನಲ್ಲಿ ಇರುವ ಒಳಜಗಳದಿಂದ ಖರ್ಗೆಯವರನ್ನು ಅಸಲಿ ಕಾಂಗ್ರೆಸ್ ಕಾರ್ಯಕರ್ತರ ಧುರೀಣರೆಂದು ಬಿಂಬಿಸಲಾಗುತ್ತಿದೆ. ಬರೀ ಇದರಿಂದಲೇ ಇವರು ವಲಸೆ ಕಾಂಗ್ರೆಸ್ ಧುರೀಣರಾದ ಮತ್ತು ರಾಜಕೀಯ ತಂತ್ರಗಾರಿಕೆಯಲ್ಲಿ ಹೆಸರಾದ ಸಿದ್ದರಾಮಯ್ಯನವರನ್ನು ಹಿಂದೆ ಹಾಕಲು ಆಗುತ್ತಿಲ್ಲ. ಸಿದ್ದರಾಮಯ್ಯನವರ ರಾಜಕೀಯ ಗತ್ತುಗಾರಿಕೆ ಖರ್ಗೆಯವರಿಗೆ ಬರುವುದಿಲ್ಲ. ಧುರೀಣತ್ವದ ಪ್ರಶ್ನೆ ಎಂದಾದರೂ ಬಂದರೆ, ಖರ್ಗೆಯವರು ತಮ್ಮ ಎದುರಾಳಿ ಆಗಬಾರದೆಂಬ ದೂರದೃಷ್ಟಿಯಿಂದ ಸಿದ್ದರಾಮಯ್ಯನವರು ಖರ್ಗೆಯ ಪುತ್ರ, ರಾಜಕೀಯ ಎಳಸು ಪ್ರಿಯಾಂಕ ಖರ್ಗೆಯವರನ್ನು ಸಮ್ಮಿಶ್ರ ಸರಕಾರದ ಮಂತ್ರಿಯನ್ನಾಗಿ ಮಾಡಿದರು. ಸಿದ್ದರಾಮಯ್ಯನವರ ತಂತ್ರ ಎಲ್ಲರಿಗೂ ಅರ್ಥವಾದರೂ ಹಿರಿಯ ಖರ್ಗೆಯವರಿಗೆ ಅರ್ಥವಾಗಿರಲಿಲ್ಲ.
2014ರಲ್ಲಿ ಮೋದಿ ಅಲೆಯಲ್ಲಿ ಪಾರಾಗಿದ್ದ ಖರ್ಗೆ ಈ ಬಾರಿ ಎಡವಿದ್ದೆಲ್ಲಿ?

ಕಲಬುರಗಿ ಖರ್ಗೆ ಅವರ ತವರು ಜಿಲ್ಲೆ. ಅವರ ಎದುರಾಳಿ ಅವರ ಒಂದು ಕಾಲದ ಶಿಷ್ಯ. ಹಾಗೆ ನೋಡಿದರೆ, ಖರ್ಗೆಯವರಿಗೆ ಸ್ಪರ್ಧೆಯೇ ಇರಲಿಲ್ಲ. ಖರ್ಗೆಯವರು ಏನೂ ಪ್ರಯಾಸವಿಲ್ಲದೆ ಗೆಲ್ಲಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೂ ಅವರು ಸೋತರು. ಅದೂ ಭಾರಿ ಅಂತರದಿಂದಲೇ ಸೋತರು. ಇದು ಸಾಧಾರಣ ಸೋಲು ಅಲ್ಲ. ಬಹಳ ಅಸಹನೀಯ ಸೋಲು. ಅವರ ಸುಮಾರು ನಾಲ್ಕು ದಶಕಗಳ ರಾಜಕೀಯ ಜೀವನದ ಮೇಲೆ ಈ ಸೋಲು ಕರಾಳ ಛಾಯೆ ಮೂಡಿಸಿದೆ.
ಕಾಂಗ್ರೆಸಿನಲ್ಲಿ ಇರುವ ಇಂದಿನ ಪರಿಸ್ಥಿತಿಯಲ್ಲಿ, ಖರ್ಗೆಯಂಥವರು ಮತ್ತೆ ಏಳುವುದೂ ಕಷ್ಟ. ಎರಡನೆಯದಾಗಿ, ಇದೀಗ ಅಪ್ಪನ ರಾಜಕೀಯ ಬೆಂಬಲದಿಂದ ರಾಜಕಾರಣದಲ್ಲಿ ರಂಗಪ್ರವೇಶ ಮಾಡಿದ ಅವರ ಮಗ ಮತ್ತು ಮಂತ್ರಿಯಾಗಿರುವ ಪ್ರಿಯಾಂಕ ಖರ್ಗೆಯವರ ರಾಜಕೀಯ ಭವಿಷ್ಯ ಬಹಳ ಅಸ್ಪಷ್ಟವಾಗಿದೆ. ಇದಕ್ಕೆ ಕಾರಣ ಅವರ ಪುತ್ರನೇ. ಜಾತಿ ವೈಷಮ್ಯದ ವಾತಾವರಣದಲ್ಲಿ ಖರ್ಗೆಯವರು ಕಾಯ್ದುಕೊಂಡಿದ್ದ ಸಮತೋಲನವನ್ನು ಪ್ರಿಯಾಂಕ ಖರ್ಗೆ ನುಚ್ಚುನೂರು ಮಾಡಿದರು. ಖರ್ಗೆಯವರ ಪರವಾಗಿ ಇದ್ದ ಎಲ್ಲರೂ ಅವರಿಗೆ ತಿರುಗಿಬಿದ್ದರು.
ಉತ್ತರ ಕರ್ನಾಟಕದಲ್ಲಿ ಸಂಪೂರ್ಣ ನೆಲಕಚ್ಚಿದ ಕಾಂಗ್ರೆಸ್ ಕೂಡ ಮತ್ತೆ ಏಳುವುದು ಸುಲಭವೇನೂ ಅಲ್ಲ. ಹಾಗೆ ಸಾಧ್ಯವಾಗಬೇಕೆಂದರೆ ಅಗತ್ಯವಾದ ಸಮರ್ಥ ನಾಯಕರು ಕಾಂಗ್ರೆಸಿನಲ್ಲಿ ಕಾಣುವುದಿಲ್ಲ. ಮೇಲಾಗಿ, ಕಷ್ಟಪಟ್ಟು ದುಡಿದು ಪಕ್ಷವನ್ನು ಗೆಲ್ಲುವಂತೆ ಮಾಡುವ ಕಾರ್ಯಕರ್ತರ ಅಭಾವವೂ ಇದೆ. ಕಾಂಗ್ರೆಸ್ ವಿಭಜನೆಯಾದಾಗಿನ ಪರಿಸ್ಥಿತಿ ಇಂದು ಮರುಕಳಿಸಿದೆ. ಪಕ್ಷಕ್ಕಾಗಿ ಯಾರು ದುಡಿಯಬೇಕು? ಯಾಕೆ ದುಡಿಯಬೇಕು? ಈ ಪ್ರಶ್ನೆಗಳಿಗೆ ಖರ್ಗೆ, ರಾಹುಲ್ ಗಾಂಧಿಯವರ ಬಳಿಯೂ ಉತ್ತರ ಇಲ್ಲ. ಬಹುಶಃ ಖರ್ಗೆ ಮುಖ್ಯಮಂತ್ರಿಯಾಗುವ ಅವಕಾಶಗಳೇ ಇನ್ನು ಮುಂದಿಲ್ಲ. ಅವರಿಗಿಲ್ಲದ ಅವಕಾಶ ಇದೀಗ ರಾಜಕೀಯ ರಂಗ ಪ್ರವೇಶ ಮಾಡಿದ ಅವರ ಮಗನಿಗೆ ಎಲ್ಲಿಂದ ಬರಬೇಕು?
ಅಂಕಣಕಾರರು ಹಿರಿಯ ಪತ್ರಕರ್ತರು