ಸುಪ್ರೀಂ ಕೋರ್ಟ್‌ನ ಮಾಜಿ ಉದ್ಯೋಗಿಯೊಬ್ಬರು ಮುಖ್ಯ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದು, ಏ.19ರಂದು ಸುಪ್ರೀಂನ ಎಲ್ಲ ನ್ಯಾಯಮೂರ್ತಿಗಳಿಗೂ ಈ ಕುರಿತು ಅಫಿಡವಿಟ್ ಸಲ್ಲಿಸಿದ್ದಾರೆ. ಅದರಲ್ಲಿ, ತನ್ನ ಬದುಕು ಮತ್ತು ತನ್ನ ಇಡೀ ಕುಟುಂಬ ಹೆಜ್ಜೆಹೆಜ್ಜೆಗೂ ಹೇಗೆ ಪೆಟ್ಟು ತಿನ್ನಬೇಕಾಯಿತು ಎಂಬ ರೋಚಕ ಕತೆ ಬಿಚ್ಚಿಟ್ಟಿದ್ದಾರೆ. ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಯಲ್ಲಿದ್ದ ಸಂತ್ರಸ್ತೆಯ ಆರೋಪಗಳು ತೀವ್ರ ಚರ್ಚೆ ಹುಟ್ಟುಹಾಕಿವೆ.
ಸಿಜೆಐ ವಿರುದ್ಧ ಆರೋಪಿಸಲಾಗಿರುವ ಮುಖ್ಯ ಘಟನೆ ನಡೆದದ್ದು 2018ರ ಅಕ್ಟೋಬರ್ 11ರಂದು ಎನ್ನಲಾಗಿದೆ. ಅಂದಿನಿಂದಲೇ ಆಕೆಯನ್ನು ಹುದ್ದೆಯಿಂದ ವಜಾ ಮಾಡಲಾಗಿದ್ದು, ಭ್ರಷ್ಟಾಚಾರ ಸೇರಿದಂತೆ ಅನೇಕ ಗಂಭೀರ ಆರೋಪಗಳನ್ನೂ ಹೊರಿಸಲಾಗಿದೆ. ಮೊದಲು, ದೆಹಲಿ ಪೊಲೀಸ್ ಇಲಾಖೆಯಲ್ಲಿದ್ದ ಸಂತ್ರಸ್ತೆಯ ಪತಿ ಮತ್ತು ಒಬ್ಬ ಮೈದುನನನ್ನು ಅಮಾನತು ಮಾಡಲಾಗಿದೆ. ಜೂನಿಯರ್ ಕೋರ್ಟ್ ಅಟೆಂಡೆಂಟ್ ಆಗಿದ್ದ ಮತ್ತೊಬ್ಬ ಮೈದುನನನ್ನೂ ಕಾರಣ ಕೊಡದೆ ವಜಾ ಮಾಡಲಾಗಿದೆ. ನಂತರ ಇದೇ ಮಾರ್ಚ್‌ನಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಸಂತ್ರಸ್ತೆಯನ್ನು ಬಂಧಿಸಲಾಗಿತ್ತು; ಇದು ನಡೆದದ್ದು ಆಕೆಯನ್ನು ಕೆಲಸದಿಂದ ವಜಾ ಮಾಡಿದ ಮೂರು ತಿಂಗಳ ನಂತರ. ಸದ್ಯ ಜಾಮೀನು ಪಡೆದು ಆಚೆ ಇರುವ ಸಂತ್ರಸ್ತೆ, ತನ್ನ ವಿರುದ್ಧದ ಆರೋಪ ಅಲ್ಲಗಳೆದಿದ್ದಾರೆ. ಸದ್ಯ ಈ ಭ್ರಷ್ಟಾಚಾರ ಪ್ರಕರಣದ ತನಿಖಾ ಉಸ್ತುವಾರಿಯನ್ನು ಕ್ರೈಮ್ ಬ್ರಾಂಚ್‌ಗೆ ವಹಿಸಲಾಗಿದ್ದು, ಸದ್ಯ ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ಸಂತ್ರಸ್ತೆಯ ಜಾಮೀನು ವಜಾ ಮಾಡುವಂತೆ ಕೋರಲಾಗಿದೆ.
ಮೂವತ್ತೈದು ವರ್ಷ ವಯಸ್ಸಿನ ಸಂತ್ರಸ್ತೆ ಸುಪ್ರೀಂ ಕೋರ್ಟ್ ಗ್ರಂಥಾಲಯದ ವಿಭಾಗವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿ ಅವರು ಮಾಡುತ್ತಿದ್ದದ್ದು ಟೈಪಿಂಗ್ ಮತ್ತು ಡಾಕ್ಯುಮೆಂಟೇಷನ್ ಮಾತ್ರ. ಕೋರ್ಟ್ ಅವಧಿಯಲ್ಲಿ ಆಕೆಯನ್ನು, ನಾನಾ ಕೇಸುಗಳಿಗೆ ಸಂಬಂಧಿಸಿದ ಪುಸ್ತಕ/ತೀರ್ಪುಗಳನ್ನು ಜೋಡಿಸಿಡುವಲ್ಲಿ ಕೋರ್ಟ್ ಮಾಸ್ಟರ್‌ಗಳಿಗೆ ನೆರವಾಗುವ ಕೆಲಸ ನೀಡಲಾಗಿತ್ತು. ನಂತರ 2015ರಲ್ಲಿ ನ್ಯಾ.ವಿಕ್ರಮ್‌ಜಿತ್ ಸೇನ್ ಅವರ ಕೋರ್ಟ್‌ನಲ್ಲಿ ಎಂಟರಿಂದ ಹತ್ತು ತಿಂಗಳ ಕೆಲಸ. 2016ರ ಅಕ್ಟೋಬರ್‌ನಲ್ಲಿ ನ್ಯಾ.ರಂಜನ್ ಗೊಗೊಯಿ ಅವರಿದ್ದ ಕೋರ್ಟ್‌ನಲ್ಲಿ ರಜೆ ಮೇಲೆ ತೆರಳಿದ್ದ ಜೂನಿಯರ್ ಕೋರ್ಟ್ ಅಸಿಸ್ಟೆಂಟ್‌ವೊಬ್ಬರಿಗೆ ಬದಲಿಯಾಗಿ ಕೆಲಸ ನೀಡಲಾಯಿತು. ಈ ಅವಧಿಯಲ್ಲಿ (2014-15, 2015-16) ಅವರ ಕೆಲಸದ ಬಗ್ಗೆ ‘ಉತ್ತಮ’ ಮತ್ತು ‘ಅತ್ಯುತ್ತಮ’ ಎಂಬ ಮೆಚ್ಚುಗೆ ಸಿಕ್ಕಿತು. 2016ರ ಅಕ್ಟೋಬರ್‌ನಿಂದ 2018ರ ಆಗಸ್ಟ್ ಅವಧಿಯಲ್ಲಿ ನ್ಯಾ.ಗೊಗೊಯಿ ಅವರಿಗೆ ಮಹಿಳೆಯ ಶ್ರದ್ಧೆ, ಶ್ರಮ ಅತ್ಯಂತ ಇಷ್ಟವಾಗಿ ನಂಬಿಕೆ ಬೆಳೆಯಿತು. ಇನ್ನೂ ಹೆಚ್ಚು ಜವಾಬ್ದಾರಿಯುತ ಕೆಲಸಗಳನ್ನು ವಹಿಸಲಾಯಿತು. ಗೊಗೊಯಿ ಅವರು ಆಫೀಸಿನ ವಿಷಯಗಳಾಚೆಗೆ ವೈಯಕ್ತಿಕ ವಿಚಾರಗಳನ್ನೂ ಮಾತನಾಡಲು ಆರಂಭಿಸಿದರು ಎಂದು ಹೇಳಿಕೊಂಡಿದ್ದಾರೆ ಮಹಿಳೆ.
ಮಾಜಿ ಉದ್ಯೋಗಿಯ ಹೇಳಿಕೆಗಳೇನು?
ಸಂತ್ರಸ್ತೆ ಸಲ್ಲಿಸಿದ ಅಫಿಡವಿಟ್‌ನಲ್ಲಿನ ಮಾಹಿತಿ ಆಧರಿಸಿ ‘ದಿ ವೈರ್’ ಜಾಲತಾಣ ವಿವರವಾದ ವರದಿ ಮಾಡಿದ್ದು, ಅದರಲ್ಲಿ ಸಂತ್ರಸ್ತೆಯ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಮಹಿಳೆಯ ಪ್ರಮುಖ ಹೇಳಿಕೆಗಳು ಇಲ್ಲಿವೆ.
- “ನನ್ನ ಕುಟುಂಬದ ಕುರಿತು ಮಾತನಾಡುವಾಗ ನನ್ನ ಕುಟುಂಬದ ಸದಸ್ಯರ ಬಗ್ಗೆಯೂ ವಿಚಾರಿಸುತ್ತಿದ್ದರು. ಒಮ್ಮೆ, ನನ್ನ ಗಂಡ ಸಂಪ್ರದಾಯವಾದಿ, ನಾನು ಕೆಲಸ ಮಾಡುವುದು ಆತನಿಗೆ ಇಷ್ಟವಿಲ್ಲ. ಆದರೆ, ನನಗೆ ನನ್ನ ವೃತ್ತಿ ರೂಪಿಸಿಕೊಳ್ಳುವುದು ಮುಖ್ಯ ಎಂದು ಹೇಳಿದ್ದೆ.”
- “ನ್ಯಾ.ಗೊಗೊಯಿ ಅವರು ಹೇಳಿದ ಕೆಲಸಗಳನ್ನೆಲ್ಲ ಮಾಡುತ್ತಿದ್ದೆ. ಔತಣಕೂಟವೊಂದರ ಸಂದರ್ಭದಲ್ಲಿ ಹಿಂದಿ ಚಿತ್ರಗೀತೆಗಳ ಪಟ್ಟಿಯೊಂದನ್ನು ಮಾಡಲು ಹೇಳಿದ್ದರು, ಅದನ್ನೂ ಮಾಡಿದ್ದೆ.”
- “ಕೆಲವು ಪ್ರಮುಖ ಕಾರ್ಯಕ್ರಮಗಳಿಗೆ ನ್ಯಾಯಮೂರ್ತಿಗಳು ಆಹ್ವಾನಿಸುತ್ತಿದ್ದರು. 2018ರ ಜೂನ್‌ನಲ್ಲಿ ನವದೆಹಲಿಯ ಕಾನ್ಸ್‌ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ, ನೊಬೆಲ್ ವಿಜೇತ ಕೈಲಾಶ್ ಸತ್ಯಾರ್ಥಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದೆವು. ನ್ಯಾ.ಗೊಗೊಯಿ ಅಲ್ಲಿ ಭಾಷಣಕಾರರಾಗಿದ್ದರು. ಆದರೆ, ಎಲ್‌ಎಲ್‌ಬಿ ಕೊನೆಯ ಸೆಮಿಸ್ಟರ್ ಪರೀಕ್ಷೆ ಕೂಡ ಅದೇ ದಿನ ಇದ್ದುದರಿಂದ ಕಾರ್ಯಕ್ರಮಕ್ಕೆ ಹೋಗಲು ಮೊದಲು ನಿರಾಕರಿಸಿದ್ದೆ. ಆದರೆ, ಬರಲೇಬೇಕು ಎಂದು ಹೇಳಿದಾಗ, ಪರೀಕ್ಷೆ ಬರೆದು ಮುಗಿಸಿದ ನಂತರ ಗಂಡನ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದೆ.”
- “ಕೋರ್ಟ್ ಸಮಯವಲ್ಲದಿದ್ದರೂ ಮತ್ತು ಸಂಜೆಯ ನಂತರವೂ ನ್ಯಾ.ಗೊಗೊಯಿ ಅವರು ನನಗೆ ಕರೆ ಹಾಗೂ ಮೆಸೇಜ್ ಮಾಡುತ್ತಿದ್ದರು.”
- “2018ರ ಆಗಸ್ಟ್‌ನಲ್ಲಿ ನ್ಯಾಯಮೂರ್ತಿಗಳು ತಮ್ಮ ನಿವಾಸದ ಕಚೇರಿಯಲ್ಲಿ ನಾನು ಕೆಲಸ ನಿರ್ವಹಿಸುವ ತಮ್ಮ ಅಭಿಲಾಷೆ ಹೇಳಿಕೊಂಡರು. ಮುಖ್ಯ ನ್ಯಾಯಮೂರ್ತಿಯಾಗಿ ಅಕ್ಟೋಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ಕೆಲಸದ ಹೊರೆ ಹೆಚ್ಚಾಗುತ್ತದೆಂಬ ಕಾರಣವನ್ನೂ ಕೊಟ್ಟರು. ಗ್ರಂಥಾಲಯ ವಿಭಾಗದ ನನ್ನ ಮೇಲಾಧಿಕಾರಿಯನ್ನು ಭೇಟಿಯಾದ ನ್ಯಾ.ಗೊಗೊಯಿ ಅವರು, ನನ್ನ ತುರ್ತು ವರ್ಗಾವಣೆ ಕುರಿತು ಹೇಳಿದರು. ನಂತರದಲ್ಲಿ, ಅವರ ಆಪ್ತ ಕಾರ್ಯದರ್ಶಿ ಎಚ್ ಕೆ ಜುನೇಜಾ ಎಂಬುವವರ ಜೊತೆ ಸಂಪರ್ಕದಲ್ಲಿರುವಂತೆ ನನಗೆ ತಿಳಿಸಿದರು. ಜುನೇಜಾ ಅವರು ನ್ಯಾಯಮೂರ್ತಿಗಳ ನಿವಾಸದ ಕಚೇರಿಯಲ್ಲಿ ನನ್ನ ಕೆಲಸ ಏನೆಂಬುದನ್ನು ವಿವರಿಸಿದರು ಮತ್ತು ಅಲ್ಲಿನ ಕೆಲಸದ ಸಂಗತಿಗಳನ್ನು ಯಾರ ಜೊತೆ ಕೂಡ, ಗಂಡನ ಜೊತೆಯೂ ಹೇಳಿಕೊಳ್ಳಬಾರದೆಂದು ಕಟ್ಟಪ್ಪಣೆ ವಿಧಿಸಿದರು.”
- “2018ರ ಆಗಸ್ಟ್ 11ರಿಂದ ನ್ಯಾಯಮೂರ್ತಿಗಳ ನಿವಾಸದ ಕಚೇರಿಯಲ್ಲಿ ಕೆಲಸ ಆರಂಭಿಸಿದೆ. ಮೊದಲು ಅವರು ನನ್ನ ಬಗೆಗೆ ವಿಶೇಷ ಕಾಳಜಿ ತೋರುತ್ತಿದ್ದುದು ಮತ್ತು ಕೆಲಸದಲ್ಲಿ ಲೋಪಗಳಾದರೂ ಸುಮ್ಮನಿರುತ್ತಿದ್ದುದು ಕಂಡು ಮುಜುಗರ ಆಗುತ್ತಿತ್ತು. ಆರಂಭದಲ್ಲಿ ಬೆಳಗ್ಗೆ ಹತ್ತರಿಂದ ಸಂಜೆ ಐದರವರೆಗೆ ಕೆಲಸದ ಅವಧಿ ಇರುತ್ತಿತ್ತು. ನಂತರದಲ್ಲಿ ಬೆಳಗ್ಗೆ ಎಂಟು ಗಂಟೆಗೇ ಬರಲು ಹೇಳಲಾಯಿತು; ನ್ಯಾಯಮೂರ್ತಿಗಳು ನಿವಾಸದಿಂದ ಕೋರ್ಟ್‌ಗೆ ಹೊರಡುವ ಮುನ್ನವೇ. ನಂತರದಲ್ಲಿ ನ್ಯಾಯಮೂರ್ತಿಗಳು ನಿವಾಸಕ್ಕೆ ಬಂದ ನಂತರವೇ ಕಚೇರಿ ಬಿಡಬೇಕೆಂದೂ ತಿಳಿಸಲಾಯಿತು. ಆ ಸಮಯದಲ್ಲಿ ಕೋರ್ಟ್ ನೌಕರರೊಬ್ಬರು, ನ್ಯಾಯಮೂರ್ತಿಗಳ ನಿವಾಸದ ಕಚೇರಿಗೆ ನನ್ನ ವರ್ಗಾವಣೆಯಾದ ನಂತರ ಅವರು ಕೋರ್ಟ್‌ನಿಂದ ಬೇಗನೆ ನಿವಾಸಕ್ಕೆ ತೆರಳುತ್ತಿದ್ದಾರೆ ಎಂದು ಹೇಳಿದ್ದರು.”
- “ಒಂದು ದಿನ ಇದ್ದಕ್ಕಿದ್ದಂತೆ ನ್ಯಾಯಮೂರ್ತಿಗಳು, ತಮಗೆ ಪ್ರತಿದಿನ ವಾಟ್ಸಾಪ್‌ನಲ್ಲಿ ಗುಡ್ ಮಾರ್ನಿಂಗ್ ಮೆಸೇಜು ಕಳಿಸುವಂತೆಯೂ ಹಾಗೂ ಸಂಜೆ ಮನೆ ತಲುಪಿದ ಮೇಲೆ ಮೆಸೇಜು ಮಾಡುವಂತೆಯೂ ಹೇಳಿದರು. ನನ್ನ ವೃತ್ತಿ ಅನುಭವ ಕಡಿಮೆ ಇದ್ದುದರಿಂದ, ಇದೆಲ್ಲ ಸಹಜವೇನೋ ಎಂದುಕೊಂಡೆ. ಈ ಮೊದಲು ಯಾವ ನ್ಯಾಯಮೂರ್ತಿಗಳ ಜೊತೆಯೂ ಹೀಗೆಲ್ಲ ಮಾತನಾಡಿದ್ದಿಲ್ಲ ನಾನು. ಕೋರ್ಟ್‌ನಲ್ಲಿ ಕೆಲಸ ಮಾಡುವಾಗ ನ್ಯಾಯಮೂರ್ತಿಗಳ ಕಡೆ ತಿರುಗಿಯೂ ನೋಡಬಾರದೆಂದೇ ನಮಗೆಲ್ಲ ಹೇಳಿಕೊಡಲಾಗಿರುತ್ತಿತ್ತು. ನಂತರ ವಾಟ್ಸಾಪ್‌ನಲ್ಲಿ ಕರೆ ಮಾಡಲು ಆರಂಭಿಸಿದರು; ವೃತ್ತಿ ಸಂಬಂಧಿ ವಿಷಯಗಳ ಜೊತೆ ವೈಯಕ್ತಿಕ ವಿಷಯಗಳ ಚರ್ಚೆಯೂ ನಡೆಯುತ್ತಿತ್ತು. ಆದರೆ, ಅವರು ವಾಟ್ಸಾಪ್‌ನಲ್ಲಿನ ತಮ್ಮ ಮೆಸೇಜುಗಳನ್ನು ಡಿಲಿಟ್ ಮಾಡಲು ಹೇಳಿದ ನಂತರ ಚಿತ್ರಣವೇ ಬದಲಾಯಿತು. ನನ್ನನ್ನು ತಮ್ಮ ಕಚೇರಿ ಕೊಠಡಿಗೆ ಕರೆಸಿಕೊಂಡು ನಾನು ವಾಟ್ಸಾಪ್ ಮೆಸೇಜುಗಳನ್ನು ಡಿಲಿಟ್ ಮಾಡಿದ್ದೇನೋ ಇಲ್ಲವೋ ಪರಿಶೀಲಿಸುತ್ತಿದ್ದರು.”
- “ಅವರ ಪತ್ನಿ ಮತ್ತು ಮಗಳ ನಂತರದ ಅತ್ಯಂತ ಮುಖ್ಯ ವ್ಯಕ್ತಿ ನಾನು ಎಂದು ಹೇಳಿದ್ದರು. ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಕೂಡ ಈ ಮಾತು ಹೇಳಿಯೇ ಆಹ್ವಾನಿಸಿದ್ದರು ಮತ್ತು ತಾನು ಸಿಜೆಐ ಆದ ನಂತರ ನನಗೆ ಸಹಾಯ ಮಾಡುವ ಸ್ಥಾನಕ್ಕೇರುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ ನಾನು, ಈಗ ಇರುವುದರಲ್ಲಿಯೇ ನಮ್ಮ ಕುಟುಂಬ ಆರಾಮ ಬದುಕುತ್ತಿದೆ, ನನ್ನ ಗಂಡ ಮತ್ತು ಮೈದುನರು ಸರ್ಕಾರಿ ಕೆಲಸದಲ್ಲಿದ್ದಾರೆ ಎಂದು ಹೇಳಿದ್ದೆ. ಆದರೆ, ಹೀಗೇ ಮಾತಾಡುವಾಗ, ನನ್ನ ಕಿರಿಯ ಅಂಗವಿಕಲ ಮೈದುನನಿಗೆ ಕೆಲಸ ಸಿಗುತ್ತಿಲ್ಲವೆಂಬುದನ್ನು ತಿಳಿಸಿದ್ದೆ. ತಾವು ಸಿಜೆಐ ಆದ ನಂತರ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಸ್ಟಾಫ್ ನೇಮಕ ಮಾಡುವ ಅಧಿಕಾರ ಸಿಗುತ್ತದೆ, ಆಗ ನೋಡುವ ಎಂದು ಭರಸವೆ ನೀಡಿದ್ದರು. ಅದರಂತೆ, ಮೈದುನನಿಗೆ ಕೆಲಸ ಕೊಟ್ಟಿದ್ದರು.”
- “ಅಕ್ಟೋಬರ್ ಹತ್ತರ ಬೆಳಗ್ಗೆ ನ್ಯಾಯಮೂರ್ತಿಗಳು ಕಚೇರಿಗೆ ಕರೆದು, ನನ್ನ ಮೈದುನ ಮೆಡಿಕಲ್ ಟೆಸ್ಟ್‌ನಲ್ಲಿ ಅನುತ್ತೀರ್ಣ ಆಗಿದ್ದರೂ ಕೆಲಸ ಕೊಡಲಾಗಿದೆ ಎಂಬುದನ್ನು ತಿಳಿಸಿದರು. ಇದಕ್ಕಾಗಿ ಆಭಾರಿಯಾಗಿ ಇರುವುದಾಗಿ ಹೇಳಿದೆ. ನಂತರದಲ್ಲಿ ನನ್ನ ಸೌಂದರ್ಯದ (looks) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ ಬಳಿ ಬಂದು, ಸಹ್ಯವಲ್ಲದ ರೀತಿಯಲ್ಲಿ (uncomfortable) ನನ್ನನ್ನು ಸ್ಪರ್ಶಿಸಿದರು.”
- “ನಾನು ಸಾಮಾನ್ಯವಾಗಿ ಬಿಳಿ-ಕಪ್ಪು ಸಮವಸ್ತ್ರ ಧರಿಸಿಯೇ ಕಚೇರಿಗೆ ಹೋಗುತ್ತಿದ್ದೆ. ಅಂದು ನವರಾತ್ರಿಯ ಮೊದಲ ದಿನವಾದ್ದರಿಂದ ಕಿತ್ತಳೆ ಬಣ್ಣದ ಕುರ್ತಾ ಮತ್ತು ದುಪ್ಪಟಾ ಧರಿಸಿ ಹೋಗಿದ್ದೆ. ನ್ಯಾಯಮೂರ್ತಿಗಳು ನನ್ನ ಧಿರಿಸಿನ ಬಗೆಗೆ ಮಾತನಾಡುತ್ತ, ‘ನೀನಿವತ್ತು ತುಂಬಾ ಚಂದ ಕಾಣುತ್ತಿದ್ದೀಯ’ ಎಂದರು. ಹತ್ತಿರ ಬಂದು ಪಕ್ಕದಲ್ಲಿ ನಿಲ್ಲುವಂತೆ ಹೇಳಿ, ತಮ್ಮ ಕುರ್ಚಿಯಿಂದ ಎದ್ದು ನಿಂತರು. ನನಗಾಗಿ ಏನು ಮಾಡಲು ಸಿದ್ಧಳಿದ್ದೀ? ಎಂದು ಕೇಳಿದರು. ನಾನು ಪದೇಪದೇ ಹೇಳಿದ್ದನ್ನೇ ಹೇಳಿದೆ; ನಾನು ನಿಮಗೆ ಆಭಾರಿಯಾಗಿದ್ದೇನೆ, ನಮ್ಮ ಕುಟುಂಬ ಖುಷಿಯಿಂದ ಬದುಕುತ್ತಿದೆ. ನಂತರ ನನ್ನ ತಲೆಯ ಹಿಂಬದಿಯಿಂದ ಕೈ ಜಾರಿಸಿದ ನ್ಯಾಯಮೂರ್ತಿಗಳು ನನ್ನ ಸೊಂಟದವರೆಗೆ ಕೈ ತೆಗೆದುಕೊಂಡು ಹೋದರು. ನಾನು ದಿಗ್ಭ್ರಾಂತಳಾದೆ. ಅದು ಅವರಿಗೆ ಗೊತ್ತಾಯಿತೇನೋ. ತಕ್ಷಣ ನನ್ನ ಎರಡೂ ಕೆನ್ನೆ ಹಿಂಡಿದರು. ತಮ್ಮ ಮಗಳ ಜೊತೆಯೂ ಹೀಗೇ ಮಾಡುವುದಾಗಿ ಹೇಳಿಕೊಂಡರು. ನಂತರದಲ್ಲಿ ನಾನು ಅವರಿಗಾಗಿ ಏನು ಮಾಡಲಿದ್ದೇನೆ ಎಂಬ ಕುರಿತು ಒಂದು ನೋಟ್‌ಬುಕ್‌ನಲ್ಲಿ ಬರೆಯುವಂತೆ ಹೇಳಿದರು.”
- “ಮರುದಿನ ಅಂದರೆ, ಅಕ್ಟೋಬರ್ ಹನ್ನೊಂದರಂದು ನ್ಯಾಯಮೂರ್ತಿಗಳು ಮಾತನಾಡುತ್ತ, ನನ್ನ ಕುಟುಂಬ ಖುಷಿಯಲ್ಲಿರಬೇಕು ಎಂದು ನೆನೆದರು. ನೀನು ಇನ್ನು ಸ್ವಲ್ಪ ತೂಕ ಹೆಚ್ಚಿಸಿಕೊಂಡರೆ ಚಂದ ಕಾಣ್ತಿ ಎಂದರು. ನಂತರ ಮತ್ತೆ, ತಮಗಾಗಿ ನಾನೇನು ಮಾಡಲಿರುವೆ ಎಂದು ಕೇಳಿದರು. ಅದನ್ನು ಬರೆದಿಡಲಾಗಿದೆಯೇ ವಿಚಾರಿಸಿದರು. ನಾನು ಅವರಿಗೆ ಎಷ್ಟು ಆಭಾರಿಯಾಗಿದ್ದೇನೆಂದು ಬರೆದ ಟಿಪ್ಪಣಿ ಕಾಣಿಸಿದೆ. ಅದನ್ನು ಓದಿ, ಎದ್ದು ಬಂದು ನನ್ನ ಎಡಕ್ಕೆ ನಿಂತರು. ಅವರು ನಿಂತಿರುವಾಗ ನಾನು ಕೂರಲಾಗಲಿಲ್ಲ. ಅವರು ನನ್ನ ಕೈಲಿದ್ದ ನೋಟ್‌ಪ್ಯಾಡ್ ತೆಗೆದುಕೊಂಡು ತೆಗೆದುಕೊಂಡು ಡೆಸ್ಕ್‌ನ ಒಂದು ಪಕ್ಕಕ್ಕೆ ಇಟ್ಟು, ನನ್ನ ಕೈನ ಪರಿಮಳ ಚಂದವಿದೆ ಎಂದರು. ಕೆನ್ನೆ ಚಿವುಟಿದರು. ಸೊಂಟ ಬಳಸಿ, ‘ನಿನ್ನಿಂದ ಇದು ಬೇಕು’ ಎಂದರು. ಸೊಂಟ ಬಳಸಿ ಅಪ್ಪಿಕೊಂಡರು. ದೇಹವನ್ನೆಲ್ಲ ಸ್ಪರ್ಶಿಸಿದರು. ತನ್ನನ್ನು ಹಿಡಿದುಕೊಳ್ಳುವಂತೆ ಹೇಳಿದರು. ನಾನು ದಿಗ್ಭ್ರಾಂತಳಾಗಿ ನಿಂತಿದ್ದೆ. ಅವರು ಬಲವಂತವಾಗಿ ನನ್ನನ್ನು ಅಪ್ಪಿಕೊಳ್ಳುತ್ತಲೇ ಇದ್ದಾಗ ಅವರನ್ನು ತಳ್ಳಿದೆ. ಅವರ ತಲೆ ಬುಕ್ ಶೆಲ್ಫ್‌ಗೆ ಬಡಿಯಿತು. ಏನಾಯಿತೆಂದು ಅರಿವಾಗದವಳಂತೆ ಡೆಸ್ಕ್‌ನಲ್ಲಿ ಕುಳಿತೆ.”
- “ಈ ಆಘಾತದಿಂದ ಹೊರಬಂದಿರಲಿಲ್ಲ. ನ್ಯಾಯಮೂರ್ತಿಗಳು ಕಚೇರಿಗೆ ಕರೆದು, ಅಲ್ಲಿ ಆದದ್ದನ್ನು ಯಾರೊಂದಿಗೂ ಹೇಳಕೊಳ್ಳದಿರುವಂತೆಯೂ, ಹೇಳಿಕೊಂಡರೆ ನನ್ನ ಕುಟುಂಬಕ್ಕೆ ತೊಂದರೆ ಕಾದಿದೆ ಎಂದೂ ಹೇಳಿದರು.”
ಸಿಜೆಐ ಗೊಗೊಯಿ ಪ್ರತಿಕ್ರಿಯೆ ಏನು?
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಜೆಐ ರಂಜನ್ ಗೊಗೊಯಿ, ಮಾಜಿ ಕೋರ್ಟ್ ಜೂನಿಯರ್ ಅಸಿಸ್ಟೆಂಟ್ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಮಹಿಳೆಯಿಂದ ಅಫಿಡವಿಟ್ ಸಲ್ಲಿಕೆಯಾದ ತಕ್ಷಣವೇ ಸ್ವತಃ ತಮ್ಮ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ರಚಿಸಿದ ನ್ಯಾ.ಗೊಗೊಯಿ, ವಿಚಾರಣೆಗೆ ಮುನ್ನುಡಿ ಬರೆದರು. ನಂತರದಲ್ಲಿ ನಡೆದ ವಿಚಾರಣೆ ವೇಳೆ ತಮ್ಮ ವಿರುದ್ಧದ ಆರೋಪ ನಿರಾಕರಿಸಿದರು. “ಇದನ್ನು ನಂಬಲಸಾಧ್ಯ. ನ್ಯಾಯಾಂಗದ ಸ್ವಾತಂತ್ರ್ಯ ತುಂಬಾ ಅಪಾಯದಲ್ಲಿದೆ. ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಇದ್ದಂತಿದೆ. ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ಸ್ತಬ್ದಗೊಳಿಸುವ ಉದ್ದೇಶ ಇದರ ಹಿಂದಿದೆ,” ಎಂದು ಹೇಳಿಕೆ ನೀಡಿದರು. “ಇಪ್ಪತ್ತು ವರ್ಷಗಳ ಕಾಲ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ ನಂತರವೂ ನನ್ನ ಬ್ಯಾಂಕ್ ಖಾತೆಯಲ್ಲಿರುವುದು 6.80 ಲಕ್ಷ ಹಣವಷ್ಟೆ,” ಎಂದು ಹೇಳಿಕೊಂಡರು.
ಪ್ರಕರಣದಲ್ಲಿ ಉಲ್ಲೇಖವಾದವರು ಹೇಳುವುದೇನು?
ಸಂತ್ರಸ್ತೆಯು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ ನ್ಯಾಯಾಂಗದ ಅಧಿಕಾರಿಗಳನ್ನು ಸಂಪರ್ಕಿಸಲು ‘ದಿ ವೈರ್’ ಜಾಲತಾಣ ಪ್ರಯತ್ನಿಸಿದೆ. ಸಿಜೆಐ ಆಪ್ತ ಕಾರ್ಯದರ್ಶಿ ಎಚ್ ಕೆ ಜುನೇಜಾ, ಇಲಾಖಾ ತನಿಖೆಯಲ್ಲಿನ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾದ ಪದ್ಮಾ ಸುಂದರ್ ಮತ್ತು ಇವರ ಮೇಲಾಧಿಕಾರಿ ಸತ್ಯಪ್ರಕಾಶ್ ಗುಪ್ತಾ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮಹಿಳೆಯ ವಿರುದ್ಧ ಭ್ರಷ್ಟಾಚಾರದ ಕೇಸು ದಾಖಲಿಸಿದ್ದ ನವೀನ್ ಕುಮಾರ್ ಎಂಬುವವರೂ ಈ ಕುರಿತು ಏನನ್ನೂ ಹೇಳಲು ನಿರಾಕರಿಸಿದ್ದಾರೆ. ಅಲ್ಲದೆ, ತುಂಬಾ ಒತ್ತಡವಾಗಿದ್ದು, ದೂರು ವಾಪಸು ಪಡೆಯಲು ಬಯಸಿದ್ದೇನೆ ಎಂದಿದ್ದಾರೆ. ಇನ್ನು, ಮಹಿಳೆ ವಿರುದ್ಧದ ಇಲಾಖಾ ತನಿಖೆ ತಂಡದ ಸೂರ್ಯ ಪ್ರತಾಪ್ ಸಿಂಗ್, ದೀಪಕ್ ಜೈನ್ ಹಾಗೂ ಮಹಿಳೆಯನ್ನು ಹುದ್ದೆಯಿಂದ ವಜಾ ಮಾಡುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ದೂರವಾಣಿ ಕರೆಗಳನ್ನು ಸ್ವೀಕರಿಸಿಲ್ಲ.
ಕುತೂಹಲಕರ ಬೆಳವಣಿಗೆ
ಮಹಿಳೆಯ ಮೈದುನ ಇದೇ ಜನವರಿಯಲ್ಲಿ ಪ್ರಕರಣ ಸಂಬಂಧ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸಂಜಯ್ ಜೋಷಿ ಅವರನ್ನು ಎರಡು ಬಾರಿ ಭೇಟಿ ಆಗಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಅಲ್ಲದೆ, ಮಂತ್ರಿ ರಾಜನಾಥ್ ಸಿಂಗ್ ಅವರನ್ನೂ ಭೇಟಿಯಾಗಲು ಪ್ರಯತ್ನಿಸಿದ್ದರು ಎನ್ನಲಾಗಿದೆ. “ನನಗೆ ಮೋಹನ್ ಶರ್ಮಾಜಿ ಗೆಳೆಯರು. ಅವರು ಬಿಜೆಪಿಯವರು, ನಾಯಕರ ರೀತಿ, ಸ್ಥಳೀಯ ನಾಯಕ. ಆದರೆ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಏನನ್ನೂ ಹೇಳಿಕೊಳ್ಳಲಿಲ್ಲ, ಬದಲಿಗೆ ಅಮಾನತು ಮಾಡಿದ್ದ ಬಗ್ಗೆ ಮಾತನಾಡಿದೆ. ನನ್ನೆದುರೇ ದೆಹಲಿ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ, ಪಾರದರ್ಶಕ ತನಿಖೆ ನಡೆಸುವಂತೆ ಹೇಳಿದರು. ನಂತರದ ಭೇಟಿಯಲ್ಲಿ ರಾಜನಾಥ್ ಸಿಂಗ್ ಅವರಿಗೂ ಕರೆ ಮಾಡಿದ್ದರು,” ಎಂದು ಅವರು ಹೇಳಿಕೊಂಡಿದ್ದಾರೆ.
ಮಾಹಿತಿ ಕೃಪೆ: ‘ದಿ ವೈರ್’ ಜಾಲತಾಣ