ಹೊಸಪೇಟೆಯನ್ನು ನೂತನ ಜಿಲ್ಲೆಯನ್ನಾಗಿ ಮಾಡಬೇಕೆಂದು ಮೊನ್ನೆ ಬುಧವಾರ ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿತು. ಈ ನಿಯೋಗದಲ್ಲಿ ಅನರ್ಹ ಶಾಸಕ ಆನಂದ್ ಸಿಂಗ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯ ಕೆ. ಸಿ. ಕೊಂಡಯ್ಯ, ಶಾಸಕರಾದ ಕಂಪ್ಲಿ ಗಣೇಶ್ ಹಾಗೂ ಇನ್ನಿತರರೂ ಇದ್ದರು. ಅದಾದ ನಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಹಾಗೂ ಮುಖ್ಯಮಂತ್ರಿಗಳು ಅದಕ್ಕೆ ಒಲವು ತೋರಿದ್ದು ಜಾಲತಾಣಗಳಲ್ಲಿ ಪರ ವಿರೋಧಗಳೂ ವ್ಯಕ್ತವಾದವು.
ಹೊಸಪೇಟೆ ಈಗ ಹೊಸ ಜಿಲ್ಲೆಯಾಗಲು ಅಣಿಯಾಗಿದೆ. ವಿಜಯನಗರ ವೆಂಬ ನಾಮಕರಣಕ್ಕೂ ಮುಖ್ಯಮಂತ್ರಿಗಳು ಒಲವು ತೋರಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆ ವಿಭಜನೆಯಾಗುತ್ತದೆ ಎಂಬ ಸುದ್ದಿ ಹರಿದಾಡ ತೊಡಗಿದ ಮೇಲೆ ವ್ಯಾಪಕ ವಿರೋಧಗಳು, ಟೀಕೆಗಳು ವ್ಯಕ್ತವಾಗಿವೆ. ಹಲವು ಪ್ರತಿಭಟನೆಗಳು ನಡೆಯುತ್ತಲಿವೆ. ಪ್ರಚಲಿತ ರಾಜಕೀಯದಲ್ಲಿ ಇದು ಆನಂದ್ ಸಿಂಗ್ ಅವರಿಗೆ ವೈಯಕ್ತಿಕವಾಗಿ ಲಾಭವಾಗುತ್ತದೆ ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಡೆಯುವುದು ಬೇಡ ಎಂಬ ಸಾತ್ವಿಕ ಅಳಲನ್ನು ಬಹಳಷ್ಟು ಜನರು ತೋರಿಕೊಂಡಿದ್ದಾರೆ.

ಈಗ ಸಚಿವ ಸಂಪುಟ ಇದಕ್ಕೆ ಅಸ್ತು ಅಂದರೆ 11 ತಾಲೂಕುಗಳನ್ನು ಒಳಗೊಂಡಿದ್ದ ಬಳ್ಳಾರಿ ಜಿಲ್ಲೆಯಲ್ಲಿರುವ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟುರು, ಹಡಗಲಿ ಹಾಗೂ ಹರಪನಹಳ್ಳಿ ತಾಲೂಕುಗಳು ಹೊಸ ವಿಜಯನಗರ ಜಿಲ್ಲೆಗೆ ಸೇರ್ಪಡೆಯಾಗಲಿವೆ. ಬಳ್ಳಾರಿ ಜಿಲ್ಲೆಗೆ ಕುರುಗೋಡು, ಸಂಡೂರು, ಕೂಡ್ಲಿಗಿ ಹಾಗೂ ಸಿರುಗುಪ್ಪ ತಾಲೂಕುಗಳು ಉಳಿಯಲಿವೆ.
ನೂತನ ಜಿಲ್ಲೆಯ ಪ್ರಸ್ತಾಪವಾಗುತ್ತಿದಂತೆಯೇ ಕೂಡ್ಲಿಗಿ, ಹರಪನಹಳ್ಳಿ, ಹಡಗಲಿಯಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ. ಸದ್ಯಕ್ಕೆ ಹೊಸಪೇಟೆಯೇ ಜಿಲ್ಲೆಯಾಗಬೇಕೆಂಬ ಅವಶ್ಯಕತೆ ಇಲ್ಲ. ಹರಪನಹಳ್ಳಿಯಂತೆ ಜನರಿಗೆ ಜಿಲ್ಲಾ ಕೇಂದ್ರ ತಲುಪಲು ಸಾರಿಗೆ ವ್ಯವಸ್ಥೆಯ ತಾಪತ್ರಯವಿಲ್ಲ. ಪಕ್ಕದಲ್ಲೇ ಕೂಡ್ಲಿಗಿ ಇದೆ. ಅದೂ ಕೂಡ ಜಿಲ್ಲೆಯಾಗಿ ಪರಿಗಣಿಸುವಂತಿದೆ. ರಾಜ ಸಂಸ್ಥಾನ ಹೊಂದಿದ ಹಾಗೂ ಗಣಿಗಾರಿಕೆಯಿಂದ ಹೆಚ್ಚಿನ ಲಾಭ ತರುವ ಸಂಡೂರು ಪಕ್ಕದಲ್ಲಿಯೇ ಇದೆ. ಹೀಗಾಗಿ ಹೋಸಪೇಟೆಗೆ ಏಕೆ ಪ್ರಾಶಸ್ತ್ಯ ಎಂಬುದು ಹಲವರ ಪ್ರಶ್ನೆಯಾಗಿದೆ.

ಹೊಸಪೇಟೆಯೇ ಏಕೆ?
ಇದು ರಾಜಕೀಯ ಪ್ರೇರಿತ, ತಮ್ಮ ಸ್ವಾರ್ಥಕ್ಕೆ ಹಾಗೂ ಹಿತಾಸಕ್ತಿಗೆ ಆನಂದ್ ಸಿಂಗ್ ಈ ಕ್ರಮಕ್ಕೆ ಮುಂದಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕೆಲಸ ಮಾಡಲಾಗಲಿಲ್ಲ. ಅಭಿವೃದ್ಧಿಯ ಕಡೆಗೆ ಗಮನ ನೀಡಲಾಗಲಿಲ್ಲ. ಹಾಗಾಗಿ ಜನಪ್ರಿಯತೆ ಕಡಿಮೆಯಾಗುತ್ತಿದ್ದು ಇದನ್ನೆಲ್ಲ ಮರೆಮಾಚಲು ಪ್ರತ್ಯೇಕ ಜಿಲ್ಲೆಯ ಅಸ್ತ್ರವನ್ನು ಹಿಡಿಯಲು ಹೊರಟಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ. ಹೊಸಪೇಟೆಯನ್ನೇ ಏಕೆ ಜಿಲ್ಲಾ ಕೇಂದ್ರವನ್ನು ಮಾಡಬೇಕು, ಪಕ್ಕದ 30 ಕಿಮಿ ಅಂತರದಲ್ಲಿ ರಾಜರ ಸಂಸ್ಥಾನವಿದ್ದ ಸಂಡೂರು ಇದೆ. ವಾಣಿಜ್ಯ ಕ್ಷೇತ್ರದಲ್ಲಿ ಹೆಸರುವಾಸಿಯಾದ ಹಡಗಲಿ ಇದೆ ಹಾಗೂ ಕೂಡ್ಲಿಗಿ ಇದೆ ಎಂಬುದು ಕೆಲವರು ಅನಿಸಿಕೆ.
ಸಿಎಂಗೇಕೆ ಇಷ್ಟು ಒಲವು!
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಒಂದಷ್ಟು ಕೊಡುಗೆ ನೀಡಿದ ಆನಂದ ಸಿಂಗ್ ಅವರ ಋಣ ತೀರಿಸಲು ಈ ಅವೈಜ್ಞಾನಿಕ ನಿರ್ಧಾರ ಕೈಕೊಂಡಿದ್ದಾರೆಂದು ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಪಾಳಯದಲ್ಲಿ ಚರ್ಚೆಗಳು ಬಿಸಿಯಾಗಿಯೇ ನಡೆಯುತ್ತಿವೆ. ಆದ್ದರಿಂದ ಹಲವು ಸಂಘಟನೆಗಳು ಈಗಾಗಲೇ ಜೋರಾಗಿ ಹೋರಾಟ ಮಾಡಲು ಸಿದ್ಧತೆ ನಡೆಸಿವೆ. ತುಂಗಭದ್ರಾ ರೈತ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದರ ಮೂಲಕ ನೂತನ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿವೆ. ಹಡಗಲಿ ತಾಲೂಕಿನಲ್ಲೂ ಹೋರಾಟ ಆರಂಭವಾಗಿದ್ದು, ಸಂಡೂರು, ಕೂಡ್ಲಿಗಿಯಲ್ಲಿಯೂ ಜನರು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಹೊಸಪೇಟೆ ಜಿಲ್ಲೆ ಬೇಡ ಎಂಬ ಮಾತು ಸ್ವತಃ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿವೆ.
ಆರೋಗ್ಯ ಮಂತ್ರಿ ಶ್ರೀರಾಮುಲು ಬಳ್ಳಾರಿ ಜಿಲ್ಲೆಯೆಂದು ನಾವು ಇದರ ಅಭಿವೃದ್ಧಿಗಾಗಿ ಶ್ರಮಿಸುತ್ತ ಬಂದಿದ್ದೇವೆ ಆದರೂ ಮುಖ್ಯಮಂತ್ರಿಗಳ ತೀರ್ಮಾನಕ್ಕೆ ಮುಜುಗರ ತರುವಂತಹ ಹೇಳಿಕೆಯನ್ನು ನಾನು ನೀಡುವುದಿಲ್ಲ ಎಂದು ಶುಕ್ರವಾರ (ಸೆಪ್ಟೆಂಬರ್ 20) ಮಾಧ್ಯಮಕ್ಕೆ ತಿಳಿಸಿದರು. ಮೇಲ್ನೋಟಕ್ಕೆ ಹೀಗೆ ಹೇಳಿದರೂ, ಶ್ರೀರಾಮುಲು ಅವರಿಗೂ ಇದು ಬೇಡವಾಗಿದೆ ಎಂಬುದು ಸ್ಪಷ್ಟ.
ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿವರು ಪ್ರತಿಕ್ರಿಯಿಸಿದ್ದು ಹೀಗೆ, “ಏನೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಜನಪ್ರತಿನಿಧಿಗಳ ಜೊತೆಗೆ ಹಾಗೂ ಪ್ರಮುಖರ ಜೊತೆಗೆ ಚರ್ಚಿಸಬೇಕಾಗಿತ್ತು. ದಿಢೀರನೇ ಜಿಲ್ಲೆ ಮಾಡುವುದೆಂದರೆ ಹೇಗೆ! ಜಿಲ್ಲೆ ದೊಡ್ಡದಾಗುತ್ತೆ, ಜನರಿಗೆ ತೊಂದರೆ ಆಗುತ್ತದೆ ಎಂದರೆ ಮೊದಲು 18 ಕ್ಷೇತ್ರಗಳಿರುವ ಬೆಳಗಾವಿಯನ್ನು ಇಬ್ಭಾಗ ಮಾಡಿ, ಬಳ್ಳಾರಿ ಏಕೆ. ಇದರಿಂದ ತುಘಲಕ್ ದರ್ಬಾರ್ ಗೆ ಆಸ್ಪದ ನೀಡಿದಂತಾಗುತ್ತದೆ”
ತುಂಗಭದ್ರಾ ರೈತ ಸಂಘ ಬಳ್ಳಾರಿಯ ಅಧ್ಯಕ್ಷರಾದ ದರೂರು ಪುರುಷೋತ್ತಮಗೌಡರು ಹೇಳುತ್ತಾರೆ, “ಜಿಲ್ಲೆಯನ್ನು ಇಬ್ಭಾಗ ಮಾಡುವುದು ಅವೈಜ್ಞಾನಿಕ ನಿರ್ಧಾರ. ಇದಕ್ಕೆ ನಮ್ಮ ವಿರೋಧವಿದೆ. ತುಂಗಭದ್ರಾ ಜಲಾಶಯಕ್ಕೆ ಹೊಂದಿಕೊಂಡಿರುವ ತಾಲೂಕುಗಳನ್ನು ಬೇರ್ಪಡಿಸುವುದನ್ನು ನಾವು ವಿರೋಧಿಸುತ್ತೇವೆ. ನಾವು ಇದರ ವಿರುದ್ಧ ಹೋರಾಟವನ್ನೂ ಮಾಡುತ್ತೇವೆ”.
ಹರಪನಹಳ್ಳಿಯನ್ನು ಜಿಲ್ಲೆಯಾಗಿ ಘೋಷಣೆ ಮಾಡಲಿ:
ಈ ಭಾಗದಲ್ಲಿ ಹೊಸ ಜಿಲ್ಲೆಯ ಅವಶ್ಯಕತೆಯಿರುವುದು ಹರಪನಹಳ್ಳಿಗೆ ಎಂದು ಹರಪನಹಳ್ಳಿಯ ಜನರು ಮುಖ್ಯಮಂತ್ರಿಗಳಿಗೆ ಕೇಳುತ್ತಿದ್ದಾರೆ. ಇದಕ್ಕಾಗಿ ಉಗ್ರ ಹೋರಾಟಕ್ಕೂ ಅಣಿಯಾಗಿದ್ದಾರೆ. 1997 ರಲ್ಲಿ ಜಿಲ್ಲೆಗಳ ಪುನರ್ ರಚನೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಜೆ. ಎಚ್. ಪಟೇಲರು ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿಯನ್ನು ದಾವಣಗೆರೆಗೆ ಸೇರಿಸಿದರು. ಎರಡು ದಶಕಗಳ ನಂತರ 2018 ರಲ್ಲಿ ಹರಪನಹಳ್ಳಿಯನ್ನು ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆಗೊಳಿಸಲಾಯಿತು. ಬಳ್ಳಾರಿಯಿಂದ ಹರಪನಹಳ್ಳಿಗೆ 180 ಕಿಮಿ. ಜಿಲ್ಲಾ ಕೇಂದ್ರ ತಲುಪಲು ಬಸ್ಸಿನಲ್ಲಿ ಮೂರುವರೆ ತಾಸು ಬೇಕು. ಹೀಗಾಗಿ ಹರಪನಹಳ್ಳಿಯನ್ನು ಜಿಲ್ಲೆಯಾಗಿ ಮಾಡಿದರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂಬುದು ಈ ಭಾಗದ ಜನರ ಅಂಬೋಣ.