ರಾಜಕೀಯ ದ್ವೇಷವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ 1984ರಲ್ಲಿ ನಡೆದಿದ್ದ ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಮುಖಂಡ, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರನ್ನು ಜೈಲಿಗೆ ಹಾಕಲು ಸಿದ್ಧತೆ ನಡೆಸಿದ್ದಾರೆ. ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ನಂತರ ಕಾಂಗ್ರೆಸ್ ನ ಪ್ರಮುಖ ನಾಯಕ ಕಮಲನಾಥ್ ಕೂಡ ದೆಹಲಿಯ ತಿಹಾರ್ ಜೈಲು ಸೇರಿದರೆ ಆಶ್ಚರ್ಯವಿಲ್ಲ. ಈಗಾಗಲೇ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಫ್ಟರ್ ಹಗರಣದಲ್ಲಿ ಕಮಲನಾಥ್ ಸೋದರಳಿಯ ರತುಲ್ ಪುರಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಿ, ಜೈಲಿಗಟ್ಟಿದೆ ಎಂಬುದನ್ನು ಇಲ್ಲಿ ನೆನೆಯಬಹುದು.
1984ರ ಅಕ್ಟೋಬರ್ 31ರಂದು ತಮ್ಮ ಭದ್ರತಾ ಸಿಬ್ಬಂದಿಯಾಗಿದ್ದ ಸತ್ವಂತ್ ಸಿಂಗ್ ಮತ್ತು ಬೀಯಂತ್ ಸಿಂಗ್ ಅವರ ಗುಂಡಿನ ದಾಳಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಲಿಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಮುಖಂಡರು ದೆಹಲಿ, ಪಂಜಾಬ್, ರಾಜಸ್ಥಾನ, ಹರ್ಯಾಣ, ಮಧ್ಯ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಸಿಖ್ ಸಮುದಾಯದ ಅಮಾಯಕರ ಮೇಲೆ ದಾಳಿ ನಡೆಸಿದ್ದರು. ಈ ಹತ್ಯಾಕಾಂಡದಲ್ಲಿ ದೆಹಲಿಯೊಂದರಲ್ಲೇ 2,800ಕ್ಕೂ ಹೆಚ್ಚು ಮುಗ್ಧರು ಪ್ರಾಣ ಕಳೆದುಕೊಂಡಿದ್ದರು ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಸ್ವತಂತ್ರ ಭಾರತದಲ್ಲಿ ನಡೆದ ಮೊದಲ ಹೀನ ಕೃತ್ಯ ಇದಾಗಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಸಜ್ಜನ್ ಕುಮಾರ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇದೇ ಪ್ರಕರಣದಲ್ಲಿ ಮುಂದೆ ನಿಂತು ಸಿಖ್ ಸಮುದಾಯದವರನ್ನು ಕೊಲ್ಲಿಸಿದ್ದಾರೆ ಎಂಬ ಆರೋಪದಲ್ಲಿ ಕಮಲನಾಥ್ ವಿರುದ್ಧ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ. ಹಿಂದೆ ಸಿಖ್ ಹತ್ಯಾಕಾಂಡದ ತನಿಖೆ ನಡೆಸಿದ್ದ ನ್ಯಾ. ನಾನಾವತಿ ಆಯೋಗವು ಅನುಮಾನದ ಲಾಭವನ್ನು ಕಮಲನಾಥ್ ಗೆ ನೀಡುವ ಮೂಲಕ ಪ್ರಕರಣದಲ್ಲಿ ಕಮಲನಾಥ್ ಕೈವಾಡ ಇಲ್ಲ ಎಂದು ಹೇಳಿತ್ತು. ಈಗ ಹೊಸ ಸಾಕ್ಷ್ಯಗಳು ದೊರೆತಿರುವುದರಿಂದ ಮರು ತನಿಖೆ ಮಾಡಲು ಗೃಹ ಇಲಾಖೆ ಒಪ್ಪಿಗೆ ನೀಡಿದೆ ಎಂದು ಪಂಜಾಬ್ ನಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾದ ಅಕಾಲಿ ದಳ ಹೇಳಿದೆ. ಇದರಿಂದ ಪಂಜಾಬ್ ರಾಜಕೀಯದಲ್ಲಿ ಪಂಜಾಬಿ ಅಸ್ಮಿತೆ ವಿಚಾರ ಎತ್ತಲು ಅಕಾಲಿ ದಳಕ್ಕೆ ಅವಕಾಶ ದೊರೆತಿದೆ. ಸಿಖ್ ಹತ್ಯಾಕಾಂಡ ಪ್ರಕರಣ ಮುನ್ನಲೆಗೆ ಬಂದಿರುವುದರಿಂದ ಕಾಂಗ್ರೆಸ್ ನಾಯಕರನ್ನು ಮತ್ತಷ್ಟು ಹೈರಾಣುಗೊಳಿಸುವ ಕಾರ್ಯಕ್ಕೆ ಬಿಜೆಪಿಯು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಮಾಧ್ಯಮಗಳ ಮೂಲಕ ಚಾಲನೆ ನೀಡಿದೆ.

30 ವರ್ಷಗಳ ಹಿಂದಿನ ಪ್ರಕರಣದಲ್ಲಿ ಎದುರಾಳಿ ಪಕ್ಷದ ಮುಖ್ಯಮಂತ್ರಿಯನ್ನು ನ್ಯಾಯಾಲಯದ ಕಟೆಕಟೆಯಲ್ಲಿ ನಿಲ್ಲಿಸಿ, ನೊಂದವರಿಗೆ ನ್ಯಾಯದಾನ ಮಾಡಬೇಕೆಂಬ ಅಮಿತ್ ಶಾ ಕಾಳಜಿಯನ್ನು ಯಾರೂ ಅನುಮಾನಿಸಬಾರದು. ಆದರೆ, 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 700ಕ್ಕೂ ಅಧಿಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಬಾಬರಿ ಮಸೀದಿ ಧ್ವಂಸದ ಹೋರಾಟವನ್ನು ಬಿಜೆಪಿ-ಆರ್‌ಎಸ್ ಎಸ್ ನಡೆಸಿದ್ದವು. ಇನ್ನು, ಅಂದಿನ ಮುಖ್ಯಮಂತ್ರಿ, ಇಂದಿನ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಗುಜರಾತ್ ಹತ್ಯಾಕಾಂಡದಲ್ಲಿ ಅಧಿಕೃತವಾಗಿ 2,000ಕ್ಕೂ ಹೆಚ್ಚು ಅಮಾಯಕರನ್ನು ಕಂಡಕಂಡಲ್ಲಿ ಹತ್ಯೆ ಮಾಡಲಾಗಿದೆ. ಗುಜರಾತ್ ಹತ್ಯಾಕಾಂಡದ ಕರಾಳ ಕೃತ್ಯಗಳ ಪೈಕಿ ಒಂದಾದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಅಂದು ಗೃಹ ಸಚಿವರಾಗಿದ್ದ ಅಮಿತ್ ಶಾ ಬಂಧನವಾಗಿತ್ತು. ಈ ಪ್ರಕರಣದಲ್ಲಿ ಗುಜರಾತ್ ಗೆ ಕಾಲಿಡದಂತೆ ಅಮಿತ್ ಶಾಗೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿತ್ತು.
2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆ ಅಮಿತ್ ಶಾ ಹಾಗೂ ಗುಜರಾತ್ ಹತ್ಯಾಕಾಂಡದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದ ಬಹುತೇಕ ಎಲ್ಲಾ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಖುಲಾಸೆ ಗುಂಡಿದ್ದಾರೆ. ಅಮಿತ್ ಶಾ ಹಾದಿಯಾಗಿ ಬಹುತೇಕರು ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಾರೆ. ಇದನ್ನು ಪ್ರಶ್ನಿಸಿದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ದಶಕಗಳ ಹಿಂದೆ ನಡೆದಿದ್ದ ಲಾಕಪ್ ಡೆತ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಗುಜರಾತ್ ಹತ್ಯಾಕಾಂಡದ ಬಗ್ಗೆ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟ್ಲವಾಡ್ ಅವರನ್ನು ಕೊಲ್ಲುವ ಹಲವು ಯತ್ನಗಳು ನಡೆದಿವೆ. ತೀಸ್ತಾಗೆ ಯಾವ ಕ್ಷಣದಲ್ಲಿ ಏನೇ ಆದರೂ ಆಶ್ಚರ್ಯವಿಲ್ಲ ಎನ್ನುವ ಸ್ಥಿತಿ ಇದೆ.
ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಅಮಿತ್ ಶಾ ಅವರನ್ನು ಜೈಲಿಗೆ ಅಟ್ಟಿದ್ದ ಬಾಂಬೈ ಹೈಕೋರ್ಟ್ ನ್ಯಾಯಮೂರ್ತಿ ಅಖಿಲ್ ಖುರೇಷಿ ಅವರನ್ನು ಮಧ್ಯಪ್ರದೇಶದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಬೇಕೆಂಬ ಸುಪ್ರೀಂಕೋರ್ಟ್ ಕೊಲಿಜಿಯಂ ತೀರ್ಮಾನವನ್ನು ಕೇಂದ್ರ ಸರ್ಕಾರ ತಿರಸ್ಕರಿಸುತ್ತಲೇ ಬಂದಿದೆ. ಮೋದಿ ಸರ್ಕಾರದ ನಿರ್ಧಾರವನ್ನು ಗುಜರಾತ್ ಬಾರ್ ಅಂಡ್ ಬೆಂಚ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದೆ.

ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಎಂಬಾಕೆಯ ಮೇಲೆ ಹಿಂದೂ ಸಂಘಟನೆಗಳ ಪುಂಡರು ಅತ್ಯಾಚಾರ ಎಸಗಿದ್ದರು. ಅಲ್ಲದೇ ಆಕೆಯ ಕುಟುಂಬದ ಹಲವರನ್ನು ಕೊಂದಿದ್ದರು. ಈ ಪ್ರಕರಣದಲ್ಲಿ 11 ಮಂದಿಗೆ ಶಿಕ್ಷೆ ವಿಧಿಸಿದ್ದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಹಾಲಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಜಯಾ ತಾಹಿಲ್ ರಮಣಿ ಅವರನ್ನು 75 ಸದಸ್ಯ ಬಲದ ಮದ್ರಾಸ್ ಹೈಕೋರ್ಟ್ ನಿಂದ ಕೇವಲ 3 ಸದಸ್ಯ ಬಲದ ಮೇಘಾಲಯ ಹೈಕೋರ್ಟ್ ಗೆ ವರ್ಗಾವಣೆ ಮಾಡಲಾಗಿದೆ. ಇದನ್ನು ವಿರೋಧಿಸಿ ಅವರು ರಾಜಿನಾಮೆ ನೀಡಿದ್ದಾರೆ. ಗುಜರಾತ್ ಹತ್ಯಾಕಾಂಡದ ಸಂತ್ರಸ್ಥೆಯ ಪರವಾಗಿ ನ್ಯಾಯದಾನ ಮಾಡಿದ್ದಕ್ಕಾಗಿ ನ್ಯಾ. ತಾಹಿಲ್ ರಮಣಿಯವರಿಗೆ ವರ್ಗಾವಣೆ ಶಿಕ್ಷ ವಿಧಿಸಲಾಗಿದೆ ಎನ್ನುವುದು ಬಹಿರಂಗ ಸತ್ಯ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಅನ್ಯಾಯಕ್ಕೊಳಗಾದ ಸಿಖ್ ಸಮುದಾಯದ ಕುಟುಂಬಕ್ಕೆ ನ್ಯಾಯದಾನ ಮಾಡಲು ಡಿ ಫ್ಯಾಕ್ಟೊ ಪ್ರಧಾನಿ ಎಂದೇ ಬಿಂಬಿತವಾದ ಅಮಿತ್ ಶಾ ತುದಿಗಾಲಲ್ಲಿ ನಿಂತಿದ್ದಾರೆ.