ಸಿಕ್ಕಿಂ ಪ್ರಕರಣ: ನೈತಿಕತೆ ಪ್ರಶ್ನೆಯಲ್ಲಿ ಸಿಕ್ಕಿಬಿದ್ದ ಚುನಾವಣಾ ಆಯೋಗ

ಭಾರತೀಯ ಜನತಾ ಪಾರ್ಟಿ ಮೈತ್ರಿ ಸರಕಾರದ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಅವರು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹತೆ ಮಾಡಿರುವ ಅವಧಿಯನ್ನು 6 ವರ್ಷದಿಂದ ಕೇವಲ ಒಂದು ವರ್ಷ ಒಂದು ತಿಂಗಳಿಗೆ ಕಡಿಮೆ ಮಾಡಿ ಭಾರತೀಯ ಚುನಾವಣಾ ಆಯೋಗ ಮತ್ತೊಂದು ಅಚ್ಚರಿಯ ಆದೇಶ ನೀಡಿದೆ.

ಪಿ. ಎಸ್. ಗೋಲೆ ಎಂದೇ ಜನಪ್ರಿಯರಾಗಿರುವ ಪ್ರೇಮ್ ಸಿಂಗ್ ತಮಂಗ್ ಸದ್ಯ ಸಿಕ್ಕಿಂ ರಾಜ್ಯದ ಮುಖ್ಯಮಂತ್ರಿ. ಸಿಕ್ಕಿಂ ಕ್ರಾಂತಿ ಮೋರ್ಚಾದ ಮುಖಂಡರು. ಅವರು ಕಳೆದ ವಿಧಾನಸಭೆಗೆ ಸ್ಪರ್ಧೆ ಮಾಡಿರಲಿಲ್ಲ. ಏಕೆಂದರೆ, ಅವರು ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಕಳಕೊಂಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ರಂಗ ಜಯಗಳಿಸಿದಾಗ ಭ್ರಷ್ಟಾಚಾರ ಕಾರಣಕ್ಕಾಗಿ ಚುನಾವಣೆ ಸ್ಪರ್ಧಿಸಲು ಅನರ್ಹಗೊಂಡಿದ್ದ ತಮಂಗ್ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ. ಆ ಮೂಲಕ, ಭ್ರಷ್ಟರ ಶುದ್ಧೀಕರಣದ ಮತ್ತೊಂದು ಮಾದರಿಯನ್ನು ದೇಶಕ್ಕೆ ಪರಿಚಯಿಸಲಾಗುತ್ತದೆ.

ಪ್ರೇಮ್ ತಮಂಗ್ ಅವರನ್ನು ಜೈಲಿಗೆ ಹಾಕಿದ ಭ್ರಷ್ಟಚಾರದ ಕೇಸ್ ಆದರೂ ಯಾವುದು? ಪಶುಸಂಗೋಪನಾ ಸಚಿವರಾಗಿದ್ದಾಗ ಹಾಲು ಕರೆಯುವ ಹಸು (`ಗೋಮಾತೆಯನ್ನು’) ಖರೀದಿಸಿ ವಿತರಿಸುವ ಯೋಜನೆಯಲ್ಲಿ ಮಾಡಿರುವ ಅವ್ಯವಹಾರಕ್ಕಾಗಿ ತಮಂಗ್ ಅವರಿಗೆ ಜೈಲು ಶಿಕ್ಷೆ ಆಗುತ್ತದೆ. ಗೋಮಾತೆಯ ವಿಚಾರದಲ್ಲೇ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಬಿಜೆಪಿ ಮೈತ್ರಿ ಸಂಘಟನೆ ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ. ಮಾತ್ರವಲ್ಲದೆ, ಪರಾಜಿತ ಎಸ್ ಡಿ ಎಫ್ ಪಕ್ಷದ 13ರ ಸದಸ್ಯರಲ್ಲಿ ಹತ್ತು ಮಂದಿ ಶಾಸಕರನ್ನು ಬಿಜೆಪಿ ಖರೀದಿಸುತ್ತದೆ. ಇಬ್ಬರನ್ನು ತಮಂಗ್ ಖರೀದಿಸುತ್ತಾರೆ. ಕೊನೆಗೆ ವಿಪಕ್ಷದಲ್ಲಿ ಉಳಿಯುವುದು ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಮಾತ್ರ. ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇನ್ನಷ್ಟೇ ಉಪ ಚುನಾವಣೆ ನಡೆಯಬೇಕಾಗಿದೆ.

ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಹಾಯಕ ಆಗುವಂತೆ ಚುನಾವಣಾ ಆಯೋಗ ಕಳೆದ ಭಾನುವಾರ ತಮಂಗ್ ಅವರ ಅನರ್ಹತೆಯ ಅವಧಿಯನ್ನು ಕಡಿತ ಮಾಡಿ ಆದೇಶ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಚುನಾವಣಾ ಆಯೋಗ ತನ್ನ ಆದೇಶವನ್ನು ನೀಡುವಾಗ ಕೆಲವೊಂದು ನ್ಯಾಯಾಲಯ ತೀರ್ಪುಗಳನ್ನು ಉಲ್ಲೇಖ ಮಾಡಿ ತಮಂಗ್ ಅವರ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನಮನ್ನಣೆ ಗಳಿಸಿದೆ ಎಂದೂ ಹೇಳಿದೆ.

1996-1997ರಲ್ಲಿ ನಡೆದಿರುವ 50 ಲಕ್ಷ ರೂಪಾಯಿ ಪಶುಸಂಗೋಪನಾ ಇಲಾಖೆಯ ಅವ್ಯವಹಾರಕ್ಕಾಗಿ ಸಚಿವರಾಗಿದ್ದ ತಮಂಗ್ ಅವರ ವಿರುದ್ಧ 2003ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆಯ ಅನಂತರ ತಮಂಗ್ ದೋಷಿ ಎಂದು ನ್ಯಾಯಾಲಯ ತೀರ್ಮಾನಿಸಿ, ಡಿಸೆಂಬರ್ 26, 2016ರಂದು ಒಂದು ವರ್ಷ ಜೈಲು ವಾಸ ಮತ್ತು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿತ್ತು. 2018 ಆಗಸ್ಟ್ ತಿಂಗಳಲ್ಲಿ ತಮಂಗ್ ಜೈಲು ವಾಸದಿಂದ ಬಿಡುಗಡೆ ಆಗಿದ್ದರು.

ಜನಪ್ರತಿನಿಧಿ ಕಾಯ್ದೆಯ (The Representation of People Act) ಪ್ರಕಾರ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದವರು ಜೈಲಿನಿಂದ ಹೊರಬಂದ ದಿನದಿಂದ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈ ಕಾರಣಕ್ಕಾಗಿ ಕಳೆದ ವಿಧಾನಸಭಾ ಚುನಾವಣಾ ಪ್ರಚಾರ ತಮಂಗ್ ನೇತೃತ್ವದಲ್ಲಿ ನಡೆದು, ಅವರೇ ಮುಂದಿನ ಮುಖ್ಯಮಂತ್ರಿ ಎಂದು ಪ್ರಚಾರ ಮಾಡಿದರೂ ಅವರು ಮಾತ್ರ ನಾಮಪತ್ರ ಸಲ್ಲಿಸಿರಲಿಲ್ಲ. ನಾಮಪತ್ರ ಸಲ್ಲಿಸಿದ್ದರೆ ನಾಮಪತ್ರ ತಿರಸ್ಕೃತ ಆಗುತ್ತಿತ್ತು.

ಆದರೆ, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿರುವ ಆಯೋಗ ಅದೇ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 11 ರಲ್ಲಿ ನೀಡಲಾದಂತೆ ತನ್ನ ವಿವೇಚನಾ ಅಧಿಕಾರವನ್ನು ಬಳಸಿದೆ. ಆಯೋಗದ ಆದೇಶದಂತೆ, “ಜನಪ್ರತಿನಿಧಿ ಕಾಯ್ದೆ ಪ್ರಕಾರ ದೋಷಿ ಎಂದು ತೀರ್ಮಾನಗೊಂಡವರು 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ, ಅನರ್ಹತೆ ವಿಧಿಸಲು ಶಿಕ್ಷೆ ಕಡಿಮೆ ಎಂದರೂ 2 ವರ್ಷಗಳಾಗಿರಬೇಕೆಂಬ ನಿಬಂಧನೆ ಇತ್ತು. 2018ರಂದು ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿಯಾಗಿದ್ದು, ಸೆಕ್ಷನ್ 13 (1) (ಡಿ) ರದ್ದುಗೊಂಡಿದೆ. ಸೆಕ್ಷನ್ 13 (1) (ಡಿ) 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದ್ದರೂ ಈ ಪ್ರಕರಣದಲ್ಲಿ ನ್ಯಾಯಾಲಯ ಸೆಕ್ಷನ್ ನಲ್ಲಿ ಒಂದು ವರ್ಷ ಶಿಕ್ಷೆ ವಿಧಿಸಿದೆ. ಜೊತೆಗೆ, ಇವರ (ತಮಂಗ್) ನಾಯಕತ್ವದ ಪಕ್ಷಕ್ಕೆ ಚುನಾವಣೆಯಲ್ಲಿ ಜನಮನ್ನಣೆಯೂ ದೊರೆತಿದೆ.’’

ಗೃಹ ಮಂತ್ರಿ ಅಮಿತ್ ಶಾ ಜೊತೆ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್

ಚುನಾವಣಾ ಆಯೋಗದ ಈಗಿನ ಆದೇಶದಿಂದಾಗಿ ಮುಖ್ಯಮಂತ್ರಿ ಆಗಿರುವ ತಮಂಗ್ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಕಳೆದ ಮೇ 28ರಂದು ಸಿಕ್ಕಿಂ ರಾಜ್ಯದ ಆರನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ತಮಂಗ್ ಆರು ತಿಂಗಳೊಳಗೆ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಬೇಕಾಗುತ್ತದೆ.

ಈಗ ಚುನಾವಣಾ ಆಯೋಗದ ಆದೇಶದಿಂದಾಗಿ ಪ್ರೇಮ್ ತಮಂಗ್ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾನೂನು ಸಮಸ್ಯೆ ಇಲ್ಲ. ಆದರೆ, ಅನರ್ಹರಾಗಿದ್ದ ಅವಧಿಯಲ್ಲೇ ತಮಂಗ್ ಮುಖ್ಯಮಂತ್ರಿ ಆಗಿರುವುದು ಕಾನೂನು ಸಮ್ಮತವೇ ಮತ್ತು ನೈತಿಕವೇ ಎಂಬ ಪ್ರಶ್ನೆ ಈಗ ಉಂಟಾಗಿದೆ. ಕಾನೂನು ತಜ್ಞರ ಪ್ರಕಾರ ಚುನಾವಣೆಯಲ್ಲಿ ಅನರ್ಹನಾಗಿರುವ ವ್ಯಕ್ತಿ ಸಚಿವ ಅಥವಾ ಮುಖ್ಯಮಂತ್ರಿ ಆಗುವಂತಿಲ್ಲ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ದಿವಂಗತ ಜಯಲಲಿತಾ ಪ್ರಕರಣದಲ್ಲೇ ಸ್ಪಷ್ಟ ಆದೇಶ ನ್ಯಾಯಾಲದಿಂದ ದೊರಕಿದೆ.

ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೊರಾ (ಮಧ್ಯದಲ್ಲಿ)

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಆದ ಮಾತ್ರಕ್ಕೆ ಮುಖ್ಯಮಂತ್ರಿ ಆಗುವಂತಿಲ್ಲ ಎಂದು 2001ರಲ್ಲಿ ಜಯಲಲಿತಾ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಸರಕಾರಿ ಜಮೀನು ಪರಭಾರೆ ಭ್ರಷ್ಟಾಚಾರ ಪ್ರಕರಣದಲ್ಲಿ ಜಯಲಲಿತಾ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಲಾಗಿತ್ತು. 2001 ಜೂನ್ ತಿಂಗಳಲ್ಲಿ ಜಯಲಲಿತಾ ಅವರನ್ನು ಏ ಐ ಎ ಡಿ ಎಂ ಕೆ ಶಾಸಕರು ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆರಿಸುತ್ತಾರೆ. 2001 ಸೆಪ್ಟೆಂಬರ್ ನಲ್ಲಿ ಈ ಪ್ರಕರಣದ ತೀರ್ಪು ನೀಡಿದ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಅನರ್ಹ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದ ರಾಜ್ಯಪಾಲರ ಕ್ರಮವೂ ಅಸಾಂವಿಧಾನಿಕ ಎಂದು ಹೇಳುತ್ತದೆ. ಆರು ತಿಂಗಳ ಕಾಲ ಚುನಾಯಿತನಾಗದ ವ್ಯಕ್ತಿ ಕೂಡ ಮುಖ್ಯಮಂತ್ರಿ ಆಗಬಹುದು ಎಂಬ ಸಾಂವಿಧಾನಿಕ ಅವಕಾಶ ಇಂತಹ ಪ್ರಕರಣಗಳಲ್ಲಿ ದೊರೆಯುವುದಿಲ್ಲ ಎಂದೂ ಕೂಡ ಹೇಳಿದೆ.

ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದ ತೀರ್ಪಿನ ಪ್ರಕಾರ ತಮಂಗ್ ಅವರು ಅಧಿಕಾರದಲ್ಲಿ ಇದ್ದದ್ದು ಕಾನೂನು ಬಾಹಿರವಾಗಿದೆ ಎನ್ನುತ್ತಾರೆ ತಜ್ಞರು. ಮಾತ್ರವಲ್ಲದೆ, ಈಗ ಚುನಾವಣಾ ಆಯೋಗ ನೀಡಿರುವ ಆದೇಶದಲ್ಲಿ ಕೂಡ ಈಗ ಕಳೆದಿರುವ ಅವಧಿಯಲ್ಲಿ ಅಂದರೆ ತಮಂಗ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಅವರು ಅನರ್ಹರಾಗಿದ್ದರು ಎಂಬುದನ್ನು ದೃಢೀಕರಿಸುತ್ತದೆ. ತಮಂಗ್ ಅವರ ಅನರ್ಹತೆ ಅವಧಿಯನ್ನು ಹಲವು ಕಾರಣಗಳಿಗಾಗಿ ಕಡಿತಗೊಳಿಸಿರುವ ಬಗ್ಗೆ ತಮ್ಮ ಆದೇಶದಲ್ಲಿ ಚರ್ಚಿಸಿರುವ ಚುನಾವಣಾ ಆಯೋಗ ಆಯ್ದ ಕೆಲವು ಕೋರ್ಟು ತೀರ್ಪುಗಳನ್ನು ಉಲ್ಲೇಖಿಸಿ, ಜಯಲಲಿತಾ ಪ್ರಕರಣವನ್ನು ಗಮನಿಸದಿರುವುದು ಕೇವಲ ಕಣ್ತಪ್ಪೆಂದು ನೈತಿಕತೆ ಹಾಗೂ ಕಾನೂನನ್ನು ಗೌರವಿಸುವ ಯಾವ ಸಜ್ಜನರೂ ಹೇಳಲಾರರು.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...