ನಾಲ್ಕು ದಿನಗಳ ಹಿಂದೆ ಐವತ್ತು ವರ್ಷದ ರಂಗಪ್ಪ ಕೆಲವು ಫೋಟೋಗಳನ್ನ ಹಿಡಿದುಕೊಂಡು ಶಿವಮೊಗ್ಗ ಮಹಾನಗರ ಪಾಲಿಕೆ ಬಳಿ ಬಂದಿದ್ದರು. ಯಾವುದೋ ಪ್ರತಿಭಟನೆ ಇದ್ದ ಕಾರಣ ಮಾಧ್ಯಮದವರೂ ಅಲ್ಲೇ ಇದ್ದರು. ಬಳಲಿದಂತಿದ್ದ ದೇಹ, ಸ್ವಲ್ಪ ಬಾಗಿದ ದೇಹ, ನಿಸ್ತೇಜ ಕಣ್ಣುಗಳಲ್ಲಿ ಅಸಹಾಯಕತೆ ಇತ್ತು. ಪತ್ರಕರ್ತರ ದೃಷ್ಟಿಯೂ ಅವರ ಮೇಲೆ ನೆಟ್ಟಿತ್ತು. ಹಾಗೆ ಬಂದ ಇಬ್ಬರು ವಯಸ್ಕರಲ್ಲಿ ಅಂಜಿಕೆ, ಸಂಕೋಚ ಇತ್ತು. ಅವರ ಜೊತೆ ಮಾತಿಗಿಳಿದಾಗ ಅವರು ಶಿವಮೊಗ್ಗ ಪ್ರವಾಹ ಸಂತ್ರಸ್ತರು ಎಂದು ಗೊತ್ತಾಯಿತು. ರಂಗಪ್ಪ ಹಾಗೂ ನೆರೆಹೊರೆಯರ ಮನೆಗಳನ್ನ ಹುಡುಕಿ ಹೊರಟಾಗ ಆಶ್ಚರ್ಯ ಎನಿಸಿತು. ಇವರು ಶಿವಮೊಗ್ಗ – ಎನ್‌ಆರ್ ಪುರ ರಸ್ತೆಯ ಪಕ್ಕದಲ್ಲೇ ವಡ್ಡಿನಕೊಪ್ಪ ಪ್ರದೇಶದಲ್ಲಿ ವಾಸವಿದ್ದಾರೆ. ಆದರೆ ಅಲ್ಲಿ ಮನೆಗಳಿಲ್ಲ, ಕಳೆದ ಆಗಸ್ಟ್‌ನಲ್ಲಿ ಸುರಿದ ಭೀಕರ ಮಳೆಗೆ ಮನೆಗಳು ಕುಸಿದು ಹೋಗಿದ್ದವು. ದಿನಗೂಲಿ ಕೆಲಸಕ್ಕೆ ಹೋಗುವ ಈ ಜನರೆಲ್ಲಾ ಬಹಳ ವರ್ಷದ ಹಿಂದೆಯೇ ಇಲ್ಲಿ ನೆಲೆಸಿದ್ದಾರೆ. ಆದರೆ, ಅಧಿಕಾರಿಗಳಿಗೆ ಲಂಚ ನೀಡಲು ಸಾಧ್ಯವಾಗದೇ ಮನೆ ಜಾಗವನ್ನ ಪಕ್ಕಾ ಮಾಡಿಕೊಂಡಿಲ್ಲ. ಆದರೂ ಒಂದು ಲಕ್ಷ ರೂಪಾಯಿ ಪರಿಹಾರದ ಹಣದಲ್ಲಿ ಕುಸಿದು ಬಿದ್ದ ಮನೆಯ ಜಾಗದಲ್ಲೇ ಅಡಿಪಾಯ ಮಾಡಿಸಿಕೊಂಡಿದ್ದಾರೆ.
ಪ್ರವಾಹ ಪರಿಸ್ಥಿತಿ ಅವಲೋಕನ ಮಾಡಲು ಬಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಲ್ಲಿಂದಲೇ ರಾಜ್ಯಕ್ಕೂ ಅನ್ವಯಿಸುವ ಹಾಗೆ ಆದೇಶ ಹೊರಡಿಸಿದ್ದರು. ಮನೆ ಹಾನಿಯಾದವರು ಯಾರೇ ಆಗಲಿ ದಾಖಲೆಗಳನ್ನ ನೋಡುತ್ತಾ ಕುಳಿತುಕೊಳ್ಳಬೇಡಿ, ಪೂರ್ಣ ಪರಿಹಾರವನ್ನ ನೀಡಬೇಕು ಎಂದು ಹೇಳಿದ್ದರು. ಅದರಂತೆ ಪಾಲಿಕೆ ಅಧಿಕಾರಿಗಳು ಫೋಟೋಗಳನ್ನ ತೆಗೆಸಿ ಲಿಸ್ಟ್ ಮಾಡಿಕೊಂಡು ಹೋಗಿದ್ದರು, ಆದರೆ ಬಿಡಿಗಾಸೂ ಬಂದಿರಲಿಲ್ಲ. ರಂಗಪ್ಪ ಹೇಳುವಂತೆ ಹಣಕ್ಕಾಗಿ ಕನಿಷ್ಟ ಇಪ್ಪತ್ತು ಬಾರಿ ಅಲೆದು ಅಧಿಕಾರಿಗಳಿಂದ ಹೀನಾಮಾನ ಹೇಳಿಸಿಕೊಂಡು ಒಮ್ಮೆ ಐದು ಸಾವಿರ, ನಂತರ ಹತ್ತು ಸಾವಿರ ಪಡೆದುಕೊಂಡರು. ಮೂರು ತಿಂಗಳ ನಂತರ ಒಂದು ಲಕ್ಷ ಹಣ ಸಿಕ್ಕಿದೆ. ಈ ಮಧ್ಯೆ ಬಾಡಿಗೆ ಮನೆಯಲ್ಲಿದ್ದರೂ ಅದರ ಹಣವನ್ನ ನೀಡಿಲ್ಲ. ಪರಿಹಾರದ ಭರವಸೆ ಸಿಕ್ಕಿತೆಂದು ಹಿಗ್ಗಿದ ಜನರು ನಿವೇಶನ ಸಿದ್ಧಪಡಿಸಿಕೊಂಡು ಉಳಿದ ಹಣದಲ್ಲಿ ಗೋಡೆ ಕಟ್ಟಲು ಸಿದ್ಧರಾದರು. ಆದರೆ ಹಣ ಮಾತ್ರ ಸಿಗಲೇ ಇಲ್ಲ. ಪರಿಹಾರದ ಹಣ ನೀಡಿ ಎಂದು ಕೇಳಿದರೆ ನಿಮ್ಮ ಪಾಲಿಗೆ ಬರುವ ಹಣ ಇಷ್ಟೇ, ಮೊದಲು ದಾಖಲೆ ತಂದು ಕೊಡಿ ನೋಡೋಣ ಎನ್ನುತ್ತಾರಂತೆ..! ಮಾಧ್ಯಮಗಳ ಬಳಿ ಹೋಗದಂತೆ ಪಾಲಿಕೆ ಅಧಿಕಾರಿಗಳು ಧಮ್ಕಿ ಹಾಕುತ್ತಾರೆಂದೂ ಸಂತ್ರಸ್ತರು ದೂರುತ್ತಾರೆ.
“ಮೊದಲನೇ ಹಂತದ ಪರಿಹಾರ ನೀಡಲಾಗಿದೆ, ಉಳಿದ ಹಣ ನೀಡುತ್ತೇವೆ, ದಾಖಲೆ ಪರಿಶೀಲನೆ ಬಗ್ಗೆ ಮಾಹಿತಿ ಇಲ್ಲ,” ಎಂದು ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಹೇಳಿದ್ದಾರೆ.
ಇನ್ನೊಬ್ಬ ಸಂತ್ರಸ್ತೆ ಮಂಜಮ್ಮ ತನ್ನ ಮಗ -ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಟೆಂಟ್‌ನಲ್ಲಿ ವಾಸವಿದ್ದಾರೆ. ಅವರೂ ಕೂಡ ಅಡಿಪಾಯ ಹಾಕಿಕೊಂಡಿದ್ದಾರೆ ಆದರೆ ಹಣ ಇಲ್ಲ, ಮಗ ಕೂಲಿ ಮಾಡಲು ಹೋಗುತ್ತಾನೆ. ಚಿಕ್ಕ ಟೆಂಟ್‌ಲ್ಲಿ ಐದು ಜನರು ವಾಸ ಮಾಡಲು ಸಾಧ್ಯವಿಲ್ಲ ಹಾಗಾಗಿ ತಾಯಿ ಬೇರೆಯವರ ಮನೆಯಲ್ಲಿಯೂ ಆಶ್ರಯ ಪಡೆಯುತ್ತಾರೆ. ಇಷ್ಟೆಲ್ಲಾ ಆದರೂ ಶಿವಮೊಗ್ಗ ಪಾಲಿಕೆಯ ಅಧಿಕಾರಿಗಳು ಮಾತ್ರ ಈ ಕಡೆ ಸುಳಿದಿಲ್ಲ. ಇದೇ ಪ್ರದೇಶದಲ್ಲಿ ಹತ್ತಾರು ಮನೆಗಳು ಸಂಕಷ್ಟದಲ್ಲಿವೆ. ಪುನಃ ಮಳೆಗಾಲ ಆರಂಭವಾದರೂ ಪರಿಹಾರ ಸಿಗುವ ಭರವಸೆಯೇ ಇಲ್ಲದಂತೆ ಬದುಕುತ್ತಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ, ಪಾಲಿಕೆಯಲ್ಲಿ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಸಿಎಂ ಬಿಎಸ್ ಯಡಿಯೂರಪ್ಪ ಇಲ್ಲಿಯವರೇ, ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪನವರು ಈ ಭಾಗದ ಶಾಸಕರು ಹಾಗಾದರೆ ಈ ಸಂತ್ರಸ್ತರೇನು ವಿರೋಧ ಪಕ್ಷದವರೇ..!?
ಶಿವಮೊಗ್ಗ ನಗರ ಕಳೆದ ಬಾರಿ ಪ್ರವಾಹದಿಂದ ತತ್ತರಿಸಿ ಹೋಗಿತ್ತು, ನೂರಾರು ಮನೆಗಳು ಕುಸಿದು ಬಿದ್ದಿದ್ದವು, ತುಂಗಾನದಿ ತೀರದಲ್ಲೂ ಅಪಾರ ಪ್ರಮಾಣದ ಹಾನಿಯಾಗಿತ್ತು, ಎಷ್ಟೋ ಮಂದಿ ಮನೆಗಳ ಜೊತೆ ಅಮೂಲ್ಯವಾದ ವಸ್ತುಗಳನ್ನ, ದಾಖಲಾತಿಗಳನ್ನೂ ಕಳೆದುಕೊಂಡಿದ್ದಾರೆ, ಯಾರಿಗೂ ಸಮರ್ಪಕವಾಗಿ ಪರಿಹಾರ ವಿತರಣೆಯಾಗಿಲ್ಲ, ರಂಗಪ್ಪ, ಮಂಜಮ್ಮನಂತವರಿಗೆ ದಾಖಲೆಗಳನ್ನಿಡಿ ಎಂದು ಹೇಳುತ್ತಿದ್ದಾರೆ, ಆದರೆ ಮೂಲಗಳ ಪ್ರಕಾರ ಬಿಜೆಪಿ ಆಪ್ತರಿಗೆ ಪರಿಹಾರ ಹುಡಕಿಕೊಂಡು ಬಂದಿವೆ, ಈ ಬಡ ಜನರೆಲ್ಲಾ ವಿಷದ ಬಾಟೆಲ್ ಹಿಡಿದು ಪಾಲಿಕೆ ಅಂಗಳದಲ್ಲಿ ಪ್ರತಿಭಟನೆ ಮಾಡಲು ಸಿದ್ಧರಾಗಿದ್ದಾರೆ.