ಮೆಡಿಕಲ್, ಆಯುಷ್, ಇಂಜಿನಿಯರಿಂಗ್, ಫಾರ್ಮಸಿ, ಫಾರ್ಮ್ ಸಾಯನ್ಸ್… ಮುಂತಾದ ವೃತ್ತಿಪರ ಕೋರ್ಸ್‍ಗಳ ಸರಕಾರಿ ಕೋಟಾದ ಸೀಟುಗಳಿಗಾಗಿ ಯುಜಿಸಿಇಟಿ/ನೀಟ್ ಪ್ರವೇಶ ಪರೀಕ್ಷೆ ಬರೆದಿರುವ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆನ್‍ಲೈನ್ ಕೌನ್ಸಿಲಿಂಗ್‍ನ ಅವಾಂತರಗಳಿಂದಾಗಿ ಕಂಗಾಲಾಗಿದ್ದಾರೆ. ಹೇಳಿ ಕೇಳಿ ನಮ್ಮದು ಹಳ್ಳಿಗಳ ದೇಶ. ರಾಜ್ಯದ ಶೇ. 80ಕ್ಕಿಂತಲೂ ಅಧಿಕ ಜನ ಇನ್ನೂ ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇಂಟರ್ ನೆಟ್ ಸೌಲಭ್ಯ ಗಳಿಲ್ಲದ, ಇದ್ದರೂ ನೆಟ್‍ವರ್ಕ್ ಸಿಗದ ಬಹುಪಾಲು ವಿದ್ಯಾರ್ಥಿಗಳು ಆನ್‍ಲೈನ್ ಕೌನ್ಸಿಲಿಂಗ್‍ನಲ್ಲಿ ಭಾಗವಹಿಸುವುದು ಎಷ್ಟು ಪ್ರಾಯೋಗಿಕ ಎಂಬುದು ನಮ್ಮ ಡಿಜಿಟಲ್ ಇಂಡಿಯಾದ ಅಧಿಕಾರಿಗಳಿಗಿನ್ನೂ ಮನದಟ್ಟಾಗದಿರುವುದು ವಿಪರ್ಯಾಸ. ಸಿಇಟಿ ಮತ್ತು ನೀಟ್‍ನ ಮೊದಲ ಮತ್ತು ಎರಡನೇ ಸುತ್ತಿನ ಕೌನ್ಸಿಲಿಂಗ್ ಹಂತದಲ್ಲಿರುವ ಈ ಹೊತ್ತಿನಲ್ಲಿ ಇನ್ನಾದರೂ ಪ್ರಾಧಿಕಾರವು ಹಳ್ಳಿಯ ಮಕ್ಕಳ ನೋವನ್ನು ಅರ್ಥಮಾಡಿಕೊಂಡು, ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಗಳನ್ನು ಕಾಲ ಕಾಲಕ್ಕೆ ನೀಡುತ್ತಾ ಮುಂದಡಿಯಿಟ್ಟಲ್ಲಿ ಮಕ್ಕಳ ಹಿಡಿ ಶಾಪದಿಂದ ತಪ್ಪಿಸಿಕೊಳ್ಳಬಹುದೇನೋ? ಅಂದ ಹಾಗೆ, ಈ ಆನ್‍ಲೈನ್ ಕೌನ್ಸಿಲಿಂಗ್ ಮುಂದುವರಿಯಬೇಕೇ? ಅಥವಾ ಸದ್ಯಕ್ಕೆ ಆಫ್‍ಲೈನ್ ಕೌನ್ಸಿಲಿಂಗ್ ಸಾಕೇ? ಎಂಬ ವಿಷಯದ ಕುರಿತಂತೆ ರಾಜ್ಯದಲ್ಲಿ ವ್ಯಾಪಕ ಚರ್ಚೆ ನಡೆಯಬೇಕಾದ ತುರ್ತು ಅಗತ್ಯವಿದೆ.
ಹೆಚ್ಚು ಓದಿದ ಸ್ಟೋರಿಗಳು
ಆಫ್‍ಲೈನ್ ಕೌನ್ಸಿಲಿಂಗ್ ಇದ್ದಾಗ:
ಹಿಂದೆ ಸಿಇಟಿ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳು ಅರ್ಜಿ ಹಾಕುವಂತೆ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕ. ಪ. ಪ್ರಾಧಿಕಾರ) ದಿಂದ ಸುತ್ತೋಲೆ ಬರುತ್ತಿತ್ತು. ಅರ್ಜಿ ಶುಲ್ಕ ಕಾಲೇಜಿನಲ್ಲೇ ಸಂಗ್ರಹಿಸಿ, ವಿದ್ಯಾರ್ಥಿಗಳ ವಿವರ ಮತ್ತು ಶುಲ್ಕವನ್ನು ಪ್ರಾಧಿಕಾರಕ್ಕೆ ಕಳುಹಿಸಿದಲ್ಲಿ ಅಷ್ಟೂ ವಿದ್ಯಾರ್ಥಿಗಳಿಗೆ ಅರ್ಜಿ ನಮೂನೆಗಳನ್ನು ಪ್ರಾಧಿಕಾರದಿಂದ ಕಾಲೇಜಿಗೆ ಕಳುಹಿಸಲಾಗುತ್ತಿತ್ತು. ಜೊತೆಗೆ ಸಿಇಟಿ ‘ಮಾಹಿತಿ ಕೈಪಿಡಿ’ಯನ್ನೂ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿತ್ತು. ಅರ್ಜಿ ನಮೂನೆಗಳು ಕಾಲೇಜಿನಲ್ಲೆ ತುಂಬಿಸುವ, ಗೊಂದಲಗಳಿದ್ದರೆ ಮಾಹಿತಿ ಕೈಪಿಡಿಯನ್ನು ನೋಡಿ, ಸರಿಪಡಿಸಿಕೊಳ್ಳುವ ಪರಿಪಾಠ ಚಾಲ್ತಿಯಲ್ಲಿತ್ತು. ಫಲಿತಾಂಶ ಪ್ರಕಟವಾದ ಬಳಿಕ, ನಿಗದಿತ ದಿನಾಂಕದಂದು ರಾಜ್ಯದ ಎಲ್ಲ ವಿದ್ಯಾರ್ಥಿಗಳು ತಾವು ಪಡೆದಿರುವ ರಾಂಕ್ ಗಳಿಗೆ ಅನುಗುಣವಾಗಿ ದಾಖಲೆಗಳ ಪರಿಶೀಲನೆ ಮತ್ತು ಸೀಟುಗಳ ಆಯ್ಕೆಯ ಕೌನ್ಸಿಲಿಂಗ್ ಗಾಗಿ ಬೆಂಗಳೂರಿನ ಕ. ಪ. ಪ್ರಾಧಿಕಾರದ ಕಚೇರಿಗೆ ಹಾಜರಾಗಬೇಕಾಗಿತ್ತು. ರಾಜ್ಯದ ಎಲ್ಲ ವಿದ್ಯಾರ್ಥಿಗಳು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಕೆಲವು ವರ್ಷಗಳ ಹಿಂದೆ ಆಯ್ದ ಜಿಲ್ಲೆಗಳಲ್ಲಿ ಸಿಇಟಿ ಹೆಲ್ಪ್ ಲೈನ್ ಸೆಂಟರ್ ಗಳನ್ನು ತೆರೆಯಲಾಯಿತು. ದಾಖಲೆಗಳ ಪರಿಶೀಲನೆ ಮತ್ತು ಸೀಟುಗಳ ಆಯ್ಕೆ ಈ ಸೆಂಟರ್ ಗಳಲ್ಲಿ ನಡೆಯುತ್ತಿತ್ತು.
ಆನ್‍ಲೈನ್ ಕೌನ್ಸಿಲಿಂಗ್ ಆರಂಭಗೊಂಡಾಗ:
2012ರಿಂದ ಆನ್‍ಲೈನ್ ಕೌನ್ಸಿಲಿಂಗ್ ಆರಂಭಗೊಂಡ ಬಳಿಕವೂ ಹೆಲ್ಪ್ ಲೈನ್ ಗಳಲ್ಲೇ ದಾಖಲೆಗಳ ಪರಿಶೀಲನೆ ಮುಂದುವರಿಯಿತು. ಆದರೆ, ಕಾಲೇಜುಗಳಿಗೆ ಸುತ್ತೋಲೆ, ಅರ್ಜಿ ನಮೂನೆ ಬರುವುದು ನಿಂತು ಹೋಯಿತು. ಅರ್ಜಿಗಳನ್ನು ಆನ್‍ಲೈನ್‍ನಲ್ಲೇ ತುಂಬಿ, ಬ್ಯಾಂಕ್ ಚಲನ್ ಅಥವಾ ಬ್ಯಾಂಕ್ ಖಾತೆಯಿಂದ ನೇರವಾಗಿ ವರ್ಗಾವಣೆ ಮಾಡುವ ಮೂಲಕ ಶುಲ್ಕವನ್ನು ತುಂಬುವ ಅವಕಾಶ ಕಲ್ಪಿಸಲಾಯಿತು. ಸಿಇಟಿ ಮಾಹಿತಿ ಕೈಪಿಡಿಯನ್ನು ಸಿಇಟಿ ಪರೀಕ್ಷೆ ಬರೆದು ಪರೀಕ್ಷಾ ಕೊಠಡಿಯಿಂದ ಹೊರ ಬರುವಾಗ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಮಾತ್ರವಲ್ಲ ದಾಖಲೆಗಳ ಪರಿಶೀಲನೆ ನಡೆಸಿ, ಹಿಂದಿರುಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್‍ಲೈನ್ ಕೌನ್ಸಿಲಿಂಗ್‍ನ ವಿವರಗಳಿರುವ ‘ವೀಡಿಯೊ ಸಿ ಡಿ’ ನೀಡಲಾರಂಭಿಸಲಾಯಿತು.
ಈಗ ಏನಾಗಿದೆ?
ಈಗ ವಿದ್ಯಾರ್ಥಿಗಳಿಗೆ ಮಾಹಿತಿ ಕೈಪಿಡಿಯೂ ಇಲ್ಲ, ಸಿಡಿ ಯೂ ನೀಡಲಾಗುತ್ತಿಲ್ಲ. ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಹಂತ ಹಂತವಾಗಿ ಇ-ಬ್ರೋಷರ್ ಗಳನ್ನು ಹಾಕಲಾಗುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ಇದನ್ನು ಗಮನಿಸಿರುವುದಿಲ್ಲ. ಗೊತ್ತಿರುವವರೂ ಬ್ರೋಷರನ್ನು ಓದಿರುವುದಿಲ್ಲ. ಕ. ಪ. ಪ್ರಾಧಿಕಾರವು ಬರೇ ಸಿಇಟಿ/ನೀಟ್ ಕೌನ್ಸಿಲಿಂಗ್ ಮಾತ್ರ ನಡೆಸುವ ಸಂಸ್ಥೆಯೂ ಅಲ್ಲ. ಆದ್ದರಿಂದಲೇ ವೆಬ್ ಸೈಟ್ ಪುಟದಲ್ಲಿ ನಿರಂತರ ಕಾಣಿಸಿಕೊಳ್ಳುವ ಇತರ ಸುತ್ತೋಲೆ, ಮಾಹಿತಿಗಳ ನಡುವೆ ವಿದ್ಯಾರ್ಥಿಗಳಿಗೆ ಸಿಇಟಿ/ನೀಟ್ ಕೌನ್ಸಿಲಿಂಗ್‍ಗೆ ಸಂಬಂಧಿಸಿದ ನಿಯಮ, ಮಾಹಿತಿಗಳು ಕಣ್ತಪ್ಪುವ ಸಾಧ್ಯತೆಗಳೇ ಹೆಚ್ಚು. ಈ ಕಾರಣದಿಂದಲೇ ಸಿಇಟಿ/ನೀಟ್ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನದ ಪ್ರಕಟಣೆಯಿಂದ ಮೊದಲ್ಗೊಂಡು, ಆನ್ ಲೈನ್ ಅರ್ಜಿ ತುಂಬಿಸುವ, ದಾಖಲೆಗಳ ಪರಿಶೀಲನೆಗೆ ಹಾಜರಾಗುವ, ಸೀಟುಗಳ ಆಯ್ಕೆ ಪ್ರಕ್ರಿಯೆ (Option Entry) ಯಲ್ಲಿ ಭಾಗವಹಿಸುವ, ಸೀಟುಗಳ ಹಂಚಿಕೆಯ ಬಳಿಕದ ‘ಚಾಯ್ಸ್ ಎಂಟ್ರಿ’ ಮಾಡುವ, ಶುಲ್ಕ ಭರಿಸುವ ಮತ್ತು ಕಾಲೇಜುಗಳಿಗೆ ದಾಖಲಾತಿಗೆ ಹಾಜರಾಗುವ ದಿನಾಂಕ, ನಿಯಮಗಳ ಮಾಹಿತಿ, ಮಾರ್ಗದರ್ಶನಗಳ ಕೊರತೆಯಿಂದ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.

ಎಡವಟ್ಟಿನ ಕೆಲವು ಸ್ಯಾಂಪಲ್ ಗಳು:
ರಾಜ್ಯದ ಹಲವು ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಸಿಇಟಿ, ನೀಟ್ ಪ್ರವೇಶ ಪರೀಕ್ಷೆ ಬರೆಯಲು ಅರ್ಜಿಯೇ ಹಾಕಿಲ್ಲ. ಯಾಕೆಂದರೆ, ಈ ಮಾಹಿತಿ ಅವರಿಗೆ ಕಾಲೇಜಿನಿಂದ ದೊರೆತಿಲ್ಲ. ಆನ್ ಲೈನ್ ಅರ್ಜಿ ತುಂಬಿಸುವಾಗಲೂ ಮಾಹಿತಿಯ ಕೊರತೆಯಿಂದ ಅನೇಕ ತಪ್ಪುಗಳು ವಿದ್ಯಾರ್ಥಿಗಳಿಂದ ನಡೆದಿವೆ. ನಾವೇ ಅರ್ಜಿ ತುಂಬಿಸುತ್ತೇವೆಂದು ವಿದ್ಯಾರ್ಥಿಗಳ ವಿವರ ಪಡೆದು ಕೊನೆ ದಿನಾಂಕದ ಒಳಗೆ ಸರ್ವರ್ ದೋಷದಿಂದಾಗಿ ಅರ್ಜಿ ತುಂಬಿಸಲಾಗದ ಕಾಲೇಜುಗಳಿವೆ. ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬರೆದಿಟ್ಟು, ವಿದ್ಯಾರ್ಥಿಗಳಿಗೆ ನೀಡದ ಕಾಲೇಜುಗಳಿವೆ. ಅದು ಮುಂದಿನ ದಿನಗಳಲ್ಲಿ ಆನ್ ಲೈನ್ ಕೌನ್ಸಿಲಿಂಗ್ ಗಾಗಿ ಲಾಗಿನ್ ಆಗಲು ಬೇಕಾಗುತ್ತೆ ಎಂಬುದೂ ಅವರಿಗೆ ಗೊತ್ತಿಲ್ಲ! ಮಾಹಿತಿಯ ಕೊರತೆಯಿಂದ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳದ, ದಾಖಲಾತಿ ಪರಿಶೀಲನೆ ಮಾಡಿಯೂ ಮೊದಲ ಸುತ್ತಿನಲ್ಲಿ Option ಎಂಟ್ರಿ ಮಾಡದ, ಅದರಲ್ಲೂ ತಪ್ಪು ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ರಾಜ್ಯದಲ್ಲಿದ್ದಾರೆ.
ಹೆಲ್ಪ್ ಲೈನ್ ಅಧಿಕಾರಿಗಳಿಗೆ ಮಾಹಿತಿ ಕೊರತೆ:
ದಾಖಲಾತಿಗಳ ಪರಿಶೀಲನೆಗಾಗಿ ಕ. ಪ. ಪ್ರಾಧಿಕಾರವು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಹೆಲ್ಪ್ ಲೈನ್ ಸೆಂಟರ್ ಮಾಡಿಕೊಂಡಿದ್ದರೂ ಅಲ್ಲಿರುವ ಯಾರೂ ಪ್ರಾಧಿಕಾರದ ಸಿಬಂದಿಗಳಲ್ಲ. ಆಯಾ ಜಿಲ್ಲೆಯ ಆಯ್ದ ಕೆಲವು ಕಾಲೇಜು ಪ್ರಾಧ್ಯಾಪಕರಿಗೆ ದಾಖಲಾತಿ ಪರಿಶೀಲನೆಯ ತರಬೇತಿ ನೀಡಿ ಕೂರಿಸಲಾಗಿದೆ. ಹಲವು ಹೆಲ್ಪ್ ಲೈನ್ ಸೆಂಟರ್ ಗಳಲ್ಲಿರುವ ಸಿಬ್ಬಂದಿಗಳಿಗೂ ಆನ್‍ಲೈನ್ ಕೌನ್ಸಿಲಿಂಗ್ ನ ಹಂತ ಮತ್ತು ನಿಯಮಗಳ ಕುರಿತಂತೆ ಮಾಹಿತಿಗಳ ಕೊರತೆಯಿರುವುದು ಕಂಡುಬಂದಿವೆ. ವಿವಿಧ ಹಂತಗಳಲ್ಲಿ ತಪ್ಪು ಮಾಡಿರುವ ವಿದ್ಯಾರ್ಥಿಗಳು ಸರಿಪಡಿಸಿಕೊಳ್ಳಲು ಹೆಲ್ಪ್ ಲೈನ್ ಸೆಂಟರ್ ಗಳಿಗೆ ಹೋದಾಗ, ‘ನಮಗೇನೂ ಮಾಡಲಿಕ್ಕಾಗಲ್ಲ’ವೆಂದು ಅಲ್ಲಿರುವ ಸಿಬ್ಬಂದಿಗಳು ಕೈಚೆಲ್ಲಿ ಕೂರುತ್ತಿದ್ದಾರೆ. ಕ .ಪ. ಪ್ರಾಧಿಕಾರದ ಕಚೇರಿಗೆ ಕರೆ ಮಾಡಿದರೆ ಫೋನ್ ಎತ್ತುವವರೇ ಇಲ್ಲ. ಬೆಂಗಳೂರಿನ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿದ ಅನೇಕ ವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಕೆಲವು ವಿದ್ಯಾರ್ಥಿಗಳು ಮತ್ತು ಪಾಲಕರನ್ನು `ಗೆಟ್ ಔಟ್’ ಎಂದು ಕಚೇರಿಯಿಂದ ಹೊರದಬ್ಬಿರುವ ಘಟನೆಗಳೂ ನಡೆದಿವೆ.
ಪ್ರತಿವರ್ಷ ಹೊಸ, ಹೊಸ ನಿಯಮಗಳು:
ಪ್ರತಿ ವರ್ಷ ಶುಲ್ಕಗಳ ಅನಿಯಮಿತ ಹೆಚ್ಚಳ ಒಂದೆಡೆಯಾದರೆ, ಯುಜಿಸಿಇಟಿ/ನೀಟ್ ಆನ್‍ಲೈನ್ ಕೌನ್ಸಿಲಿಂಗ್‍ಗೆ ಸಂಬಂಧಿಸಿದಂತೆ ಹೊಸ ಹೊಸ ನಿಯಮಗಳನ್ನು ಕ. ಪ. ಪ್ರಾಧಿಕಾರವು ರೂಪಿಸುತ್ತಿದೆ. ಸಿಇಟಿ ಮತ್ತು ನೀಟ್‍ನ ಸೀಟುಗಳ ಆಯ್ಕೆಗಳಿಗಾಗಿ ಮೂರು ವಿಭಾಗಗಳಲ್ಲಿ (ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಫಾರ್ಮಸಿ, ಫಾರ್ಮ್ ಸಾಯನ್ಸ್… ಮತ್ತಿರರ ಕೋರ್ಸ್‍ಗಳದ್ದು ಒಂದು ವಿಭಾಗವಾದರೆ, ಆಯುಷ್ ಕೋರ್ಸ್‍ಗಳದ್ದು ಎರಡನೇ ವಿಭಾಗ, ಮೆಡಿಕಲ್ ಮತ್ತು ಡೆಂಟಲ್ ಮೂರನೇ ವಿಭಾಗ) ಏಕಕಾಲದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತವರ ಪಾಲಕರ ಗೊಂದಲಗಳಿಗೆ ಮಿತಿಯಿಲ್ಲದಂತಾಗಿದೆ.
ಮೊದಲ ಸುತ್ತಿನಲ್ಲಿ ಮೆಡಿಕಲ್ ಸೀಟು ಪಡೆದ ವಿದ್ಯಾರ್ಥಿಗಳು ಚಾಯ್ಸ್ 2 ಎಂಟ್ರಿ ಮಾಡಿದಲ್ಲಿ ಕಳೆದ ವರ್ಷದ ತನಕ ಶುಲ್ಕ ಪಾವತಿಸಬೇಕಾಗಿರಲಿಲ್ಲ. ಈ ವರ್ಷ ಹೊಸ ನಿಯಮವನ್ನು ಜಾರಿಗೊಳಿಸಿ, ಶುಲ್ಕ ಪಾವತಿಸದಿದ್ದಲ್ಲಿ ಹಂಚಿಕೆಯಾಗಿರುವ ಸೀಟುಗಳನ್ನು ಕಳೆದುಕೊಳ್ಳುವ ಮತ್ತು ಮುಂದಿನ ಸುತ್ತುಗಳಲ್ಲಿ ಭಾಗವಹಿಸುವ ಅರ್ಹತೆಯನ್ನು ವಿದ್ಯಾರ್ಥಿಗಳು ಕಳೆದುಕೊಳ್ಳುವ ಹೊಸ ನಿಯಮವನ್ನು ಹೇರಲಾಗಿದೆ. ಮಾತ್ರವಲ್ಲ ಯಾವುದೇ ವೈದ್ಯಕೀಯ ಕಾಲೇಜುಗಳಲ್ಲಿ ಯಾವುದೇ ಕೋಟಾದ ಸೀಟು ಪಡೆದಿರುವ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ, ಆನ್ ಲೈನ್ ನಲ್ಲೇ ಕಾಲೇಜು ಪ್ರವೇಶ ಪತ್ರ ಪಡೆದು, ನಿಗದಿತ ದಿನಾಂಕದ ಒಳಗಾಗಿ ಮೂಲ ದಾಖಲೆಗಳನ್ನು ಕಾಲೇಜುಗಳಿಗೆ ನೀಡಿ ಪ್ರವೇಶ ಪಡೆಯುವ ನಿಯಮಗಳಿತ್ತು. ಈ ವರ್ಷ ಈ ನಿಯಮವನ್ನೂ ತಿದ್ದುಪಡಿ ಮಾಡಲಾಗಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಮತ್ತು ಖಾಸಗಿ ಸೀಟುಗಳನ್ನು ಪಡೆಯುವ ವಿದ್ಯಾರ್ಥಿಗಳು ದಾಖಲಾತಿ ಪರಿಶೀಲನೆಗೆ ಹಾಜರುಪಡಿಸಿದ ಮೂಲ ದಾಖಲೆಗಳನ್ನು ಕ. ಪ. ಪ್ರಾಧಿಕಾರದ ಬೆಂಗಳೂರು ಕಚೇರಿಗೆ ನೀಡಬೇಕು. ಬಳಿಕವೇ ಕಾಲೇಜು ಪ್ರವೇಶ ಪತ್ರ ನೀಡಲಾಗುತ್ತದೆ. ಕಾಲೇಜು ಪ್ರವೇಶ ಪಡೆಯಬೇಕಾದರೆ ರಾಜ್ಯದ ಎಲ್ಲ ವಿದ್ಯಾರ್ಥಿಗಳು ಬೆಂಗಳೂರಿಗೆ ಹೋಗಬೇಕೆಂದಾದರೆ ಆನ್ ಲೈನ್ ಕೌನ್ಸಿಲಿಂಗ್ ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ವಿದ್ಯಾರ್ಥಿಗಳ ಪಾಲಕರದ್ದು!
ಒಟ್ಟಿನಲ್ಲಿ ಅವಾಸ್ತವ ಭ್ರಮೆಗಳಿರುವ ಅಧಿಕಾರಿ ವರ್ಗ ಕಾಲ ಕಾಲಕ್ಕೆ ರೂಪಿಸುವ ಹೊಸ ಹೊಸ ನಿಯಮಗಳಿಂದಾಗಿ ನಮ್ಮ ಹಳ್ಳಿಯ ಅದೆಷ್ಟೋ ಪ್ರತಿಭಾವಂತ ಮಕ್ಕಳು ಆನ್ ಲೈನ್ ಕೌನ್ಸಿಲಿಂಗ್‍ನಲ್ಲಿ ಭಾಗವಹಿಸಲಾಗದೆ, ಉತ್ತಮ ರಾಂಕ್ ಪಡೆದರೂ ತಮಗೆ ಸಿಗಬಹುದಾಗಿದ್ದ ಸೀಟುಗಳಿಂದ ವಂಚಿತರಾಗುತ್ತಿದ್ದಾರೆ. ಸಕಾಲಕ್ಕೆ ಸೂಕ್ತ ಮಾಹಿತಿ, ಮಾರ್ಗದರ್ಶನಗಳನ್ನು ನೀಡದ, ಗೊಂದಲಗಳ ಗೂಡಾಗಿರುವ ಈ ಆನ್ ಲೈನ್ ಕೌನ್ಸಿಲಿಂಗ್ ಎಂಬ ಸೋಂಕಿನಿಂದ ವೃತ್ತಿಪರ ಶಿಕ್ಷಣ ಮುಕ್ತವಾಗಲಿ. ಇನ್ನಾದರೂ ಸುಶಿಕ್ಷಿತರೆನಿಸಿಕೊಂಡಿರುವ ನಮ್ಮನ್ನಾಳುವ ಸರಕಾರಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಾಚರಿಸಲು ಮುಂದಾಗಲಿ ಎಂಬುದು ರಾಜ್ಯದ ನೊಂದ ವಿದ್ಯಾರ್ಥಿಗಳು ಮತ್ತವರ ಪಾಲಕರ ಗೋಳು.