ಕರೋನಾ ಲಾಕ್ ಡೌನ್ ನಡುವೆಯೂ ಎಂದಿನಂತೆ ತಮ್ಮ ರೇಡಿಯೋ ಟಾಕ್ ಶೋ, ಮನ್ ಕೀ ಬಾತ್ ನಡೆಸಿದ ಪ್ರಧಾನಿ ಮೋದಿಯವರು ಭಾನುವಾರ, ಭಾರತದ ಕರೋನಾ ವಿರುದ್ಧದ ಹೋರಾಟ ಜನರ ಹೋರಾಟ ಎಂಬುದನ್ನು ಸ್ಮರಿಸುತ್ತಾ, “ನಮಗೇನೂ ಆಗುವುದಿಲ್ಲ ಎಂಬ ಉದಾಸೀನದಿಂದ ಮೈಮರೆಯಬೇಡಿ, ಮಹಾಮಾರಿಯ ವಿರುದ್ಧ ಎಚ್ಚರದಿಂದ ಇರಿ” ಎಂದಿದ್ದಾರೆ. ಅದೇ ಹೊತ್ತಿಗೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, “ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸದೆ ಈ ಪಿಡುಗಿನ ವಿರುದ್ಧ ನಾವು ಗೆಲ್ಲಲಾಗದು” ಎಂದಿದ್ದಾರೆ.
ದೇಶದ ಆಡಳಿತದ ಚುಕ್ಕಾಣಿ ಹಿಡಿದವರು ಮಹಾಮಾರಿಯ ವಿರುದ್ಧ ಎಚ್ಚರದಿಂದ ಇರುವುದೊಂದೇ ಉಳಿದಿರುವ ದಾರಿ ಎಂಬಂತೆ ಮಾತನಾಡಿದ್ದರೆ, ಪ್ರತಿಪಕ್ಷದ ನಾಯಕರು ಪರೀಕ್ಷೆ ಹೆಚ್ಚು ಮಾಡದೇ ಹೋದರೆ ಅಪಾಯ ಖಚಿತ ಎನ್ನುವ ಮೂಲಕ, ಸರ್ಕಾರ ಜನರ ಹೆಗಲಿಗೆ ಹೊಣಗಾರಿಕೆ ದಾಟಿಸಿ ಕೈಕಟ್ಟಿ ಕೂರುವುದು ತರವಲ್ಲ; ಸರ್ಕಾರ ತನ್ನ ಹೊಣೆಗಾರಿಕೆ ನಿಭಾಯಿಸಬೇಕಿದೆ ಎಂಬರ್ಥದಲ್ಲಿ ತಾಕೀತು ಮಾಡಿದ್ದಾರೆ.
ಈ ನಡುವೆ, ಚೀನಾದದಿಂದ ಹತ್ತು ದಿನಗಳ ಹಿಂದೆ, ದೇಶಕ್ಕೆ ತರಿಸಿಕೊಂಡಿದ್ದ ಬರೋಬ್ಬರಿ ಆರೂವರೆ ಲಕ್ಷ ಪರೀಕ್ಷಾ ಕಿಟ್ ಗಳ ಖರೀದಿಯನ್ನು ರದ್ದುಪಡಿಸಿ, ಕಿಟ್ ಗಳನ್ನು ವಾಪಸು ಕಳಿಸಲು ಕೇಂದ್ರ ಸರ್ಕಾರ ಸೋಮವಾರ ನಿರ್ಧರಿಸಿದೆ. ಚೀನಾದಿಂದ ಖರೀದಿಸಿದ ಈ ಪರೀಕ್ಷಾ ಕಿಟ್ ಗಳು ಎರಡು ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ವಿವಾದದ ಕೇಂದ್ರವಾಗಿದ್ದವು. ಒಂದು; ಅವುಗಳು ಕಳಪೆ ಗುಣಮಟ್ಟದವಾಗಿದ್ದು, ಕೇವಲ ಶೇ.5ರಷ್ಟು ಮಾತ್ರ ನಿಖರ ಫಲಿತಾಂಶ ನೀಡುತ್ತಿವೆ ಎಂಬ ಆಘಾತಕಾರಿ ಸಂಗತಿ. ಮತ್ತೊಂದು; ಇಂತಹ ಕಳಪೆ ಗುಣಮಟ್ಟದ ಕಿಟ್ ಖರೀದಿಯಲ್ಲಿ ಕೂಡ ಸರ್ಕಾರ ಗುರುತಿಸಿರುವ ಮಧ್ಯವರ್ತಿ ಕಂಪನಿಗಳು ದುಪ್ಪಟ್ಟು ಲಾಭ ಮಾಡಿಕೊಂಡಿದ್ದು, ಕರೋನಾದಂತಹ ಸಂಕಷ್ಟದ ಹೊತ್ತಲ್ಲೂ ಜನರ ಕಣ್ಣೀರನ್ನೇ ದಂಧೆ ಮಾಡಿಕೊಂಡಿವೆ ಎಂಬ ನಾಚಿಕೆಗೇಡಿನ ಸಂಗತಿ.
ಪ್ರಮುಖವಾಗಿ ದೇಶದಲ್ಲಿ ಕರೋನಾ ಪ್ರಕರಣ ಜನವರಿ 30ರ ಹೊತ್ತಿಗೇ ವರದಿಯಾಗಿದ್ದರೂ ಕೇಂದ್ರ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಮುಂಜಾಗ್ರತೆ ವಹಿಸಲಿಲ್ಲ. ಪೂರ್ವತಯಾರಿಗಳನ್ನು ಮಾಡಿಕೊಳ್ಳಲಿಲ್ಲ. ಬದಲಾಗಿ ನಮಸ್ತೆ ಟ್ರಂಪ್ ನಂತಹ ಪ್ರಚಾರ ಬಿರುಸಿನ ಕಾರ್ಯಕ್ರಮಗಳಲ್ಲಿ, ಎನ್ ಆರ್ ಸಿ- ಸಿಎಎ ನಂತಹ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಾಯ್ದೆ ಜಾರಿಯಲ್ಲಿ ಮತ್ತು ದೆಹಲಿ ಚುನಾವಣೆಯಂತಹ ವಿಷಯಗಳಲ್ಲಿ ಮೈಮರೆಯಿತು. ಹಾಗಾಗಿ ದೇಶದಲ್ಲಿ ದೇಶದದ ಜನಸಂಖ್ಯೆ ಮತ್ತು ಸಾಮಾಜಿಕ ಸಂಪರ್ಕದ ಪರಿಸ್ಥಿತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಗಬೇಕಾದ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಲು ಅಗತ್ಯ ಕಿಟ್ ಗಳ ಕೊರತೆ ತೀವ್ರವಾಗಿದೆ ಎಂಬ ಆತಂಕ ಆರಂಭದಿಂದಲೇ ಇತ್ತು.

ಆ ಬಳಿಕ ಸಾಕಷ್ಟು ವಿಳಂಬದ ಬಳಿಕ ಕಳೆದ ವಾರ 6.5 ಲಕ್ಷ ಪರೀಕ್ಷಾ ಕಿಟ್ ಚೀನಾದ ಗುವಾಂಗ್ಜೂ ವಿಮಾನ ನಿಲ್ದಾಣದಿಂದ ಹೊರಟು ಭಾರತಕ್ಕೆ ತಲುಪಿದ್ದವು. ಅವುಗಳ ಗುಣಮಟ್ಟ ಖಚಿತಪಡಿಸಿಕೊಳ್ಳುವ ಮುನ್ನವೇ ಭಾರತ ಸರ್ಕಾರದ ಮುಂಚೂಣಿ ಅಧಿಕೃತ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್ ಕಿಟ್ ಗಳನ್ನು ಪರೀಕ್ಷಾ ತಪಾಸಣೆಗೆ ಬಳಸಲು ವಿವಿಧ ರಾಜ್ಯಗಳಿಗೆ ನೇರವಾಗಿ ಕಳಿಸಿಕೊಟ್ಟಿತ್ತು. ತಮಿಳುನಾಡು, ಪಶ್ಚಿಮಬಂಗಾಳ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಆ ಕಿಟ್ ಬಳಸಿ ನಡೆಸಿದ ಪರೀಕ್ಷಾ ಫಲಿತಾಂಶ ದೋಷಪೂರಿತವಾಗಿದೆ. ಕಿಟ್ ಗಳು ನಿಗದಿತ ಗುಣಮಟ್ಟ ಹೊಂದಿಲ್ಲ, ಕಳಪೆಯಾಗಿವೆ. ಇಂತಹ ಕಳಪೆ ಕಿಟ್ ಬಳಸಿ ರೋಗ ನಿರ್ಧರಿಸುವುದು ಮತ್ತು ರೋಗಿಗಳ ಕ್ವಾರಂಟೈನ್ ಮತ್ತು ಚಿಕಿತ್ಸೆಯಂತಹ ಕ್ರಮ ಜರುಗಿಸುವುದರಿಂದ ಈಗಾಗಲೇ ವಿಳಂಬವಾಗಿರುವ ಮತ್ತು ಹಿಂದೆ ಬಿದ್ದಿರುವ ಕರೋನಾ ವಿರುದ್ಧದ ಹೋರಾಟದಲ್ಲಿ ನಾವು ದಾರಿ ತಪ್ಪಲಿದ್ದೇವೆ ಎಂಬ ಆತಂಕ ಆ ರಾಜ್ಯಗಳಿಂದ ಕೇಳಿಬಂದಿತ್ತು.
ಆ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಈ ಕಿಟ್ ಗಳ ಬಳಕೆಯನ್ನು ನಿಲ್ಲಿಸುವಂತೆಯೂ, ತಾನು ಸ್ವತಃ ಪರೀಕ್ಷಿಸಿ ಅವುಗಳ ಗುಣಮಟ್ಟ ಖಾತರಿಪಡಿಸುವವರೆಗೆ ರ್ಯಾಪಿಡ್ ಟೆಸ್ಟಿಂಗ್ ಸಂಪೂರ್ಣ ನಿಲ್ಲಿಸುವಂತೆ ರಾಜ್ಯಗಳಿಗೆ ಐಸಿಎಂಆರ್ ಸೂಚಿಸಿತ್ತು. ಇದೀಗ ಕಿಟ್ ಗಳ ಬಗ್ಗೆ ವ್ಯಾಪಕ ದೂರು ಮತ್ತು ಪ್ರತಿಪಕ್ಷಗಳ ಎಚ್ಚರಿಕೆಗಳ ಬಳಿಕ ಪ್ರಧಾನಿ ಮೋದಿಯವರು ಸ್ವತಃ ಸೋಮವಾರ ಐಸಿಎಂಆರ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಕಳಪೆ ಕಿಟ್ ಗಳನ್ನು ರಾಜ್ಯಗಳಿಂದ ವಾಪಸು ತರಿಸಿಕೊಂಡು ಚೀನಾ ಕಂಪನಿಗೆ ವಾಪಸು ಕಳಿಸಿ ಮತ್ತು ಖರೀದಿ ಒಪ್ಪಂದವನ್ನು ರದ್ದುಪಡಿಸುವಂತೆ ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಐಸಿಎಂಆರ್ ಈವರೆಗೆ ಬಳಸದೇ ಬಾಕಿ ಉಳಿದಿರುವ ಸುಮಾರು 5 ಲಕ್ಷ ಕಿಟ್ ಗಳನ್ನು ವಾಪಸು ಕಳಿಸುವಂತೆ ರಾಜ್ಯಗಳಿಗೆ ಸೋಮವಾರ ಸೂಚಿಸಿದೆ.
ಜಾಗತಿಕ ಮಟ್ಟದಲ್ಲಿ ಶೇ.80ರಷ್ಟು ಕನಿಷ್ಠ ನಿಖರತೆ ಇರಬೇಕು ಎಂಬ ನಿಯಮಕ್ಕೆ ವಿರುದ್ಧವಾಗಿ ಚೀನಾದ ಕಿಟ್ ಗಳು ಶೇ.20ರಷ್ಟು ಮಾತ್ರ ನಿಖರತೆ ಹೊಂದಿವೆ ಎಂಬುದು ಅಮರಿಕ, ಯುರೋಪಿನ ಅಧಿಕೃತ ವೈದ್ಯಕೀಯ ಸಂಸ್ಥೆಗಳ ಎಚ್ಚರಿಕೆಯಾಗಿತ್ತು. ಜೊತೆಗೆ ಸ್ಪೇನ್, ಟರ್ಕಿ, ಝಕ್ ರಿಪಬ್ಲಿಕ್, ಬ್ರಿಟನ್, ನೆದರ್ಲೆಂಡ್ ಸೇರಿದಂತೆ ಹಲವು ದೇಶಗಳು ಒಂದೋ ಚೀನಾ ಕಂಪನಿಗಳ ಕಳಪೆ ಕಿಟ್ ಗಳನ್ನು ಬಳಸದೇ ಎಸೆದಿವೆ ಅಥವಾ ವಾಪಸು ಮಾಡಿ ಹಣ ವಾಪಸು ಪಡೆದುಕೊಂಡಿವೆ. ಈ ಬೆಳವಣಿಗೆಗಳು ಗೊತ್ತಿದ್ದರೂ, ಚೀನಾ ಕಿಟ್ ಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಳಪೆ ಎಂಬ ದೊಡ್ಡ ಮಟ್ಟದ ಚರ್ಚೆ ನಡೆವೆಯೂ ನರೇಂದ್ರ ಮೋದಿ ಸರ್ಕಾರ ಚೀನಾದಿಂದ ಅಗಾಧ ಪ್ರಮಾಣದ ಕಿಟ್ ಖರೀದಿ ಒಪ್ಪಂದ ಮಾಡಿಕೊಂಡಿತು. ಅಷ್ಟೇ ಅಲ್ಲ; ಆರೋಪ, ಅನುಮಾನಗಳಷ್ಟೇ ಅಲ್ಲದೆ, ವಿವಿಧ ದೇಶಗಳಲ್ಲಿ ವೈಜ್ಞಾನಿಕವಾಗಿ ಪ್ರಾಯೋಗಿಕವಾಗಿ ಕಳಪೆ ಎಂದು ಸಾಬೀತಾದ ಬಳಿಕವೂ ಐಸಿಎಂಆರ್ ಅವುಗಳ ಗುಣಮಟ್ಟ ಖಾತ್ರಿಪಡಿಸಿಕೊಳ್ಳುವ ಮೊದಲೇ ನೇರವಾಗಿ ರಾಜ್ಯಗಳಿಗೆ ಬಳಕೆಗೆ ಕಳಿಸಿಕೊಟ್ಟಿತು! ಇದು ಕರೋನಾ ಸೋಂಕನ್ನು ಮೋದಿಯವರ ಆಡಳಿತ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಮತ್ತೊಂದು ತಾಜಾ ನಿದರ್ಶನ!
ಈ ನಡುವೆ, ತಮಿಳುನಾಡು ಸರ್ಕಾರ ಶಾನ್ ಬಯೋಟೆಕ್ ಎಂಬ ಕಂಪನಿ ಮೂಲಕ ಚೀನಾ ಕಿಟ್ ಆಮದು ಕಂಪನಿ ಮ್ಯಾಟ್ರಿಕ್ಸ್(ಐಸಿಎಂಆರ್ ಗೆ ಕೂಡ ಇದೇ ಕಂಪನಿಯೇ ಆಮದು ಮಾಡಿಕೊಂಡಿತ್ತು) ನೊಂದಿಗೆ ವ್ಯವಹರಿಸಿ, ಕಿಟ್ ತರಿಸಿಕೊಂಡಿತು. ಆಗ ಐಸಿಎಂಆರ್ ಗೆ ಮ್ಯಾಟ್ರಿಕ್ಸ್ ಕಂಪನಿಯಿಂದ ಕಿಟ್ ಸರಬರಾಜು ಮಾಡಿದ್ದ ರಿಯಲ್ ಮೆಟಾಬಾಲಿಕ್ಸ್ ಕಂಪನಿ, ಭಾರತದಲ್ಲಿ ಮ್ಯಾಟ್ರಿಕ್ಸ್ ಕಂಪನಿಯ ಸರಬರಾಜುದಾರನಾಗಿ ತನಗೆ ಮಾತ್ರ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಬೆಲೆ ವ್ಯತ್ಯಯವಾಗಿ ತನಗೆ ಅನ್ಯಾಯವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತು. ಇದೀಗ ಈ ಪ್ರಕರಣದ ನ್ಯಾಯಾಲಯದ ಮುಂದೆ ಬಿಚ್ಚಿಟ್ಟಿರುವ ಅವ್ಯವಹಾರದ ಕರ್ಮಕಾಂಡ 130 ಕೋಟಿ ಭಾರತೀಯರು ನಾಚಿ ತಲೆತಗ್ಗಿಸುವಂತೆ ಮಾಡಿದೆ!
ಹೌದು, ಇಡೀ ಜಗತ್ತು ಕರೋನಾ ವಿರುದ್ಧ ಒಗ್ಗೂಡಿ ಜನರ ಜೀವ ಉಳಿಸಿಕೊಳ್ಳಲು ಮಹಾನ್ ತ್ಯಾಗ, ಬಲಿದಾನದ ಮೂಲಕ ಕೈಜೋಡಿಸಿದ್ದರೆ, ಈಗಾಗಲೇ ಕೋಮು ದ್ವೇಷದ ಅಸ್ತ್ರವಾಗಿ ಕರೋನಾವನ್ನು ಬಳಸಿ ಜಾಗತಿಕ ಮಟ್ಟದಲ್ಲಿ ಮಾನ ಕಳೆದುಕೊಂಡ ನಾವು, ಇದೀಗ ವೈರಾಣು ಪರೀಕ್ಷಾ ಕಿಟ್ ವಿಷಯದಲ್ಲಿ ದಂಧೆಕೋರತನ ಮೆರೆದು ಭಾರತೀಯರ ಮಾನವೀಯತೆ, ಔದಾರ್ಯದ ಮಟ್ಟ ಯಾವುದು ಎಂಬುದನ್ನು ಜಗಜ್ಜಾಹೀರು ಮಾಡಿದ್ದೇವೆ.
ವಾಸ್ತವವಾಗಿ ಆಮದು ಕಂಪನಿ ಮ್ಯಾಟ್ರಿಕ್ಸ್, ಚೀನಾದಿಂದ ಕಿಟ್ ವೊಂದಕ್ಕೆ ಕೇವಲ 245 ರೂ.ದರಲ್ಲಿ ಖರೀದಿಸಿದೆ. ಆದರೆ, ಮ್ಯಾಟ್ರಿಕ್ಸ್ ಎಂಬ ಆಮದು ಕಂಪನಿಯಿಂದ ಕಿಟ್ ಪಡೆದು ಸರಬರಾಜು ಮಾಡಲು ರಿಯಲ್ ಮೆಟಾಬಾಲಿಕ್ಸ್ ಮತ್ತು ಆರ್ಕ್ ಫಾರ್ಮ ಸ್ಯೂಟಿಕಲ್ಸ್ ಎಂಬ ಕಂಪನಿಗಳು ಐಸಿಎಂಆರ್ ಗೆ ಕಿಟ್ ಗೆ 600 ರೂ. ದರ ನಿಗದಿ ಮಾಡಿವೆ ಮತ್ತು ಐಸಿಎಂಆರ್ ಮತ್ತು ಮೋದಿ ಸರ್ಕಾರ ಆ ಪ್ರಸ್ತಾವನೆಗೆ ಜೈ ಎಂದು ಗುತ್ತಿಗೆ ನೀಡಿವೆ. ಅಂದರೆ, ಬರೋಬ್ಬರಿ ಶೇ.150 ಪಟ್ಟು ಲಾಭ ಮಾಡಿಕೊಳ್ಳಲು ಈ ಸರಬರಾಜು ಕಂಪನಿಗಳು ಸರ್ಕಾರವೇ ರಕ್ತಗಂಬಳಿ ಹಾಸಿಕೊಟ್ಟಿದೆ! ಆದರೆ, ಈ ನಡುವೆ ತಮಿಳುನಾಡು ಸರ್ಕಾರ ಮ್ಯಾಟ್ರಿಕ್ಸ್ ಕಂಪನಿಯ ಆಮದು ಕಿಟ್ ಗಳನ್ನು ಶಾನ್ ಬಯೋಟೆಕ್ ಎಂಬ ಕಂಪನಿಯ ಮೂಲಕ ಸರಬರಾಜು ಮಾಡಿಕೊಂಡ ಹಿನ್ನೆಲೆಯಲ್ಲಿ ಅದನ್ನು ಪ್ರಶ್ನಿಸಿ ರಿಯಲ್ ಮೆಟಾಬಾಲಿಕ್ಸ್ ಕಂಪನಿ ಕೋರ್ಟ್ ಮೆಟ್ಟಿಲು ಏರಿದ್ದರಿಂದ ಇಡೀ ಅವ್ಯವಹಾರ ಈಗ ನ್ಯಾಯಾಲಯದಲ್ಲೇ ಬಟಾಬಯಲಾಗಿದೆ. ದೇಶದ ಜನ ಕರೋನಾ ಮತ್ತು ಲಾಕ್ ಡೌನ್ ನಿಂದಾಗಿ ಹೊತ್ತಿಗೆ ಅನ್ನಕ್ಕೆ ಪರದಾಡುತ್ತಿದ್ದಾರೆ. ಒಂದು ಕಡೆ ಜೀವ ಉಳಿಸಿಕೊಳ್ಳುವ ಮತ್ತು ಮತ್ತೊಂದು ಕಡೆ ಬದುಕು ಉಳಿಸಿಕೊಳ್ಳುವ ಸಂಕಷ್ಟ ಜನರದ್ದು. ಇಂತಹ ಹೊತ್ತಲ್ಲಿ ವೈಯಕ್ತಿಕ ಲಾಭನಷ್ಟ ಮರೆತು ಜನರ ಜೀವ ಉಳಿಸುವ ಹೊಣೆ ಎಲ್ಲರದ್ದು. ಅಂತಹ ಪರಿಸ್ಥಿತಿಯಲ್ಲಿ ಹೀಗೆ 245 ರೂ. ಬೆಲೆಯ ಜೀವರಕ್ಷಕ ಪರೀಕ್ಷಾ ಕಿಟ್ ಗೆ 600 ರೂ. ದರ ನಿಗದಿ ಮಾಡುವುದು ಅಮಾನುಷ. ಹೆಚ್ಚೆಂದರೆ ಪ್ರತಿ ಕಿಟ್ ಗೆ 400 ರೂ. ನಿಗದಿ ಮಾಡಬಹುದು ಎಂದು ಸ್ವತಃ ನ್ಯಾಯಪೀಠವೇ ಅಭಿಪ್ರಾಯಪಟ್ಟಿದೆ.
ಇದೀಗ ಗುಣಮಟ್ಟ ಮತ್ತು ದರ ಎರಡರಲ್ಲೂ ಚೀನಾ ಕಂಪನಿಯ ಕಿಟ್ ಗಳು ತಿರಸ್ಕೃತವಾಗಿವೆ. ಆದರೆ, ಈ ಇಡೀ ಪ್ರಕರಣ ದೇಶದ ಜನರ ಜೀವ ಉಳಿಸುವ ವಿಷಯದಲ್ಲಿ, ಕರೋನಾ ವಿರುದ್ಧದ ಹೋರಾಟದ ವಿಷಯದಲ್ಲಿ ದೇಶರಕ್ಷಣೆಯ ಚೌಕಿದಾರರೆಂದು ಕರೆದುಕೊಂಡಿದ್ದ ಪ್ರಧಾನಿ ಮೋದಿಯವರ ನೈಜ ಕಾಳಜಿಯನ್ನು ಬೆತ್ತಲು ಮಾಡಿದೆ ಎಂದರೆ ಅತಿಶಯೋಕ್ತಿಯಲ್ಲ!
ಮತ್ತೊಂದು ದುರಂತ, ಇಂತಹ ಸ್ಥಿತಿಯಲ್ಲೂ ಸಾವಿನ ದವಡೆಯಲ್ಲಿರುವ ಜನರ ಜೀವ ರಕ್ಷಣೆಗೆ ಮುಂಜಾಗ್ರತೆ, ಬದ್ಧತೆ ಪ್ರದರ್ಶಿಸಬೇಕಾಗಿದ್ದ ಸರ್ಕಾರ, ಕಳಪೆ ಗುಣಮಟ್ಟದ ಎಚ್ಚರಿಕೆಯ ಹೊರತಾಗಿಯೂ ದುಬಾರಿ ಬೆಲೆ ತೆತ್ತು ಅದೇ ಕಿಟ್ ತರಿಸಿಕೊಂಡಿದ್ದೇ ಅಲ್ಲದೆ, ಆ ಕಿಟ್ ಪರೀಕ್ಷೆಗಳನ್ನು ನಂಬಿ ದೇಶದ ಕರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ, ಸೋಂಕಿನ ದುಪ್ಪಟ್ಟಾಗುವ ವೇಗ ಕಡಿತ ಮಾಡಿದ್ದೇವೆ, ಸೋಂಕು ರೇಖೆ ಸಮಾನಾಂತರಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸ್ವತಃ ಆರೋಗ್ಯ ಸಚಿವರು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ! ಬಿಜೆಪಿ ಟ್ರೋಲ್ ಪಡೆ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಶಶಿ ತರೂರು ಸೇರಿದಂತೆ ಕಳಪೆ ಮತ್ತು ದುಬಾರಿ ಕಿಟ್ ಕುರಿತ ಆತಂಕ ವ್ಯಕ್ತಪಡಿಸಿದ ನಾಯಕರ ವಿರುದ್ಧ 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂಬ ಅದೇ ಪ್ರಶ್ನೆಯೊಂದಿಗೆ ಟ್ರೋಲ್ ಮಾಡುತ್ತಿದೆ.
ಇದೀಗ ಸರ್ಕಾರದ ಸೋಮವಾರದ ನಿರ್ಧಾರದಿಂದಾಗಿ ಕಳಪೆ ಗುಣಮಟ್ಟದ 5 ಲಕ್ಷ ಕಿಟ್ ವಾಪಸು ಹೋಗಲಿವೆ. ಅಂದರೆ; ಈಗಾಗಲೇ ದಿನಕ್ಕೆ ಕೇವಲ 40 ಸಾವಿರ ಪ್ರಮಾಣದಲ್ಲಿರುವ ಕರೋನಾ ವೈರಾಣು ಪರೀಕ್ಷೆಗೆ ವೇಗ ನೀಡುವುದು ಸದ್ಯಕ್ಕೆ ಸಾಧ್ಯವಿಲ್ಲ. ಕಿಟ್ ಕೊರತೆಯಿಂದಾಗಿ ಪರೀಕ್ಷೆಗಳು ಇನ್ನಷ್ಟು ವಿಳಂಬವಾಗಲಿವೆ ಮತ್ತು ಪರೀಕ್ಷೆಗಳು ವಿಳಂಬವಾದಷ್ಟೂ ಅದೃಶ್ಯ ಸೋಂಕಿತರ ಸಂಖ್ಯೆ ಹೆಚ್ಚಲಿದೆ, ಅದೃಶ್ಯ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ರೋಗ ಹರಡುವ ಪ್ರಮಾಣ ಹೆಚ್ಚುತ್ತದೆ. ಮತ್ತೊಂದು ಕಡೆ ನಡೆಸಿದ ಸೀಮಿತ ಪರೀಕ್ಷೆಗಳ ಅಂಕಿಅಂಶಗಳನ್ನೇ ಮುಂದಿಟ್ಟುಕೊಂಡು, ಉಷ್ಟ್ರಪಕ್ಷಿಯಂತೆ ವಾಸ್ತವಕ್ಕೆ ಮುಖ ತಿರುಗಿಸಿ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದು ಮುಂದುವರಿಯಲಿದೆ!
ಹಾಗಾಗಿ, ಪ್ರಧಾನಿ ಮೋದಿಯವರು ಹೇಳಿದ “ನಮಗೇನೂ ಆಗುವುದಿಲ್ಲ ಎಂಬ ಉದಾಸೀನದಿಂದ ಮೈಮರೆಯಬೇಡಿ, ಮಹಾಮಾರಿಯ ವಿರುದ್ಧ ಎಚ್ಚರದಿಂದ ಇರಿ” ಎಂಬ ಮಾತನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾಗಿದೆ. ತಮ್ಮ ಜೀವಕ್ಕೆ ತಾವಷ್ಟೇ ಕಾತರಿ, ತಮ್ಮ ಜೀವದ ಮೇಲೆ ಲಾಭದ ದಂಧೆ ನಡೆಸಲು ಮಾತ್ರ ಸರ್ಕಾರಗಳು ತುದಿಗಾಲಲ್ಲಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ!