ಗದಗಿನ ಉತ್ತರಕ್ಕೆ ಇರುವ ಹಲವು ಹಳ್ಳಿಗಳು ಸತತ ಬರಗಾಲದಿಂದ ತತ್ತರಿಸಿವೆ. ಬೆಳೆ ಇಲ್ಲದೆ ಹೊಲಗಳು ಫಲವತ್ತತೆ ಕಳೆದುಕೊಳ್ಳತೊಡಗಿವೆ ಎಂಬ ಭಯದಲ್ಲಿ ರೈತರು ಕಂಗಾಲಾಗಿದ್ದಾರೆ. ಇಂತಹ ಪ್ರದೇಶದಲ್ಲಿ, ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳಿಂದಲೇ ಸಾವಯವ ಗೊಬ್ಬರ ತಯಾರಿಸಿ, ಉತ್ತಮ ಫಸಲು ಬೆಳೆದು, ಬರಪೀಡಿತ ಪ್ರದೇಶದ ರೈತರಿಗೆ ಮಾದರಿಯಾಗಿದ್ದಾರೆ ಕೋಟುಮಚಗಿಯ ವೀರೇಶ ನೇಗಲಿ.
ಕೃಷಿ ಕ್ಷೇತ್ರದಲ್ಲಿ ಹೆಚ್ಚು ಇಳುವರಿಗಾಗಿ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಕೈ ಸುಟ್ಟುಕೊಳ್ಳುವುದರ ಜೊತೆಗೆ ಭೂಮಿಯ ಫಲವತ್ತತೆ ನಾಶ ಮಾಡಿಕೊಂಡ ರೈತರ ಸಂಖ್ಯೆಯೇ ಹೆಚ್ಚು. ಆದರೆ, ಕೋಟುಮಚಗಿ ಗ್ರಾಮದ ಒಣಬೇಸಾಯದ ಕೃಷಿಕ ವೀರೇಶ ನೇಗಲಿ ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ, ಪರಿಸರಸ್ನೇಹಿ ಜೈವಿಕ ವಿಧಾನಗಳಿಂದ ತಮ್ಮ ಮನೆಯಲ್ಲಿಯೇ ಸಾವಯವ ಗೊಬ್ಬರ ತಯಾರು ಮಾಡುತ್ತಿದ್ದಾರೆ. ಈ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಬರುತ್ತಿರುವ ಇವರು, ಪ್ರತಿವರ್ಷ ಉತ್ತಮ ಫಸಲು ಪಡೆಯುತ್ತಿದ್ದಾರೆ.
ಸಾವಯವ ಗೊಬ್ಬರ ತಯಾರಿಕೆ ಸುಲಭ
ಸಾವಯವ ಕೃಷಿ ಮಾಡುವವರಿಗೆ ಕೊಟ್ಟಿಗೆ ಗೊಬ್ಬರ ಬಹಳ ಅವಶ್ಯ ಎಂದು ಅರಿತ ಇವರು, ಎರಡು ದೇಶಿ ತಳಿ ಆಕಳುಗಳನ್ನು ಸಾಕಿದ್ದಾರೆ. ತಮ್ಮ ಹೊಲದ ಕೃಷಿ ತ್ಯಾಜ್ಯ ವಸ್ತುಗಳನ್ನು ಮತ್ತು ಸಗಣಿಯನ್ನು ಪದರುಪದರಾಗಿ ತಿಪ್ಪೆ ಗುಂಡಿಗೆ 6 ತಿಂಗಳು ಹಾಕುತ್ತಾರೆ. ತಿಪ್ಪೆ ಗೊಬ್ಬರ ತಯಾರಾದ ನಂತರ ಅದನ್ನು ಸಾಣಿಗೆಯಿಂದ ಸಾಣಿಸುತ್ತಾರೆ. 30 ಲೀಟರ್ ಗೋಮೂತ್ರದಲ್ಲಿ ಅರ್ಧ ಕಿಲೋ ಆಕಳ ತುಪ್ಪ, ಜೇನುತುಪ್ಪ, ದ್ವಿದಳ ಧಾನ್ಯ ಕಡಲೆ ಹಿಟ್ಟಿನ ಮಿಶ್ರಣ ಮಾಡಿ, ಸುಮಾರು 15 ಕ್ವಿಂಟಾಲ್ ಸಾಣಿಸಿದ ತಿಪ್ಪೆ ಗೊಬ್ಬರಕ್ಕೆ ಸಿಂಪಡಿಸುತ್ತಾರೆ. ನಂತರ ಚೀಲಗಳಲ್ಲಿ ತುಂಬಿ ನೆರಳಿನಲ್ಲಿ ಇಡುತ್ತಾರೆ. ಹೊಲಕ್ಕೆ ಹಾಕುವವರೆಗೂ ಪ್ರತಿ ಅರ್ಧ ಕ್ವಿಂಟಾಲ್ ಸಾವಯವ ಗೊಬ್ಬರದ ಚೀಲಕ್ಕೆ ವಾರಕ್ಕೆ ಎರಡು ಬಾರಿ ಅರ್ಧ ಲೀಟರ್ ಗೋಮೂತ್ರ ಸಿಂಪಡಿಸುತ್ತಾರೆ. ಹೀಗೆ, ಮಾಡುವುದರಿಂದ ಉಪಕಾರಿ ಸೂಕ್ಷ್ಮಜೀವಿಗಳ ಸಂಖ್ಯೆ ವೃದ್ಧಿಸುತ್ತದೆ ಎಂಬುದು ಅವರ ಮಾತು.
ನಂತರ ಇವರು ಬಿತ್ತುವ ಸಮಯದಲ್ಲಿ, ಎಲ್ಲ ಬೆಳೆಗಳಿಗೆ ಎಕರೆಗೆ ಎರಡೂವರೆ ಕ್ವಿಂಟಾಲ್‌ನಂತೆ, ಸಾಲಿನಲ್ಲಿ ಕೂರಗಿಯ ಮೂಲಕ ಗೊಬ್ಬರ ಹಾಕುತ್ತಾರೆ. ಕೀಟದ ಬಾಧೆ ಕಂಡುಬಂದರೆ ಗೋಮೂತ್ರ ಮತ್ತು ಬೇವಿನ ಎಣ್ಣೆಯ ಮಿಶ್ರಣವನ್ನು ಬೆಳೆಗಳಿಗೆ ಸಿಂಪಡಿಸುತ್ತಾರೆ. ಎರಡು ವರ್ಷಗಳಿಂದ ಮಳೆಯ ಅಭಾವ ಇದ್ದರೂ ಪ್ರತಿ ಎಕರೆಗೆ ಮುಂಗಾರಿನಲ್ಲಿ 2 ಕ್ವಿಂಟಾಲ್ ಹೆಸರು, ಹಿಂಗಾರಿನಲ್ಲಿ 4 ಕ್ವಿಂಟಾಲ್ ಜೋಳದ ಇಳುವರಿಯನ್ನು ಒಣ ಬೇಸಾಯದ ಭೂಮಿಯಲ್ಲಿ ಪಡೆದಿದ್ದಾರೆ. ಇವರ ಬೆನ್ನಿಗೆ ಇವರ ಕುಟುಂಬವೇ ನಿಂತು ದುಡಿಯುತ್ತದೆ ಎನ್ನುವುದು ವಿಶೇಷ.

2008ರಲ್ಲಿ ರಾಸಾಯನಿಕ ಕೃಷಿಯಿಂದ ಬೇಸತ್ತು ಸಾವಯವ ಕೃಷಿಗಿಳಿದ ಇವರು, ಆರಂಭದಲ್ಲಿ ತುಂಬಾ ಕಷ್ಟ ಎದುರಿಸಿದರು. ಕಳೆದ 5 ವರ್ಷಗಳಿಂದ ಸದ್ದಿಲ್ಲದೆ ತಮ್ಮ ಸ್ವಂತ ಜಮೀನಿಗೆ ಅಗತ್ಯವಿರುವಷ್ಟು ಗುಣಮಟ್ಟದ ಸಾವಯವ, ನೈಸರ್ಗಿಕ, ಜೈವಿಕ ಗೊಬ್ಬರವನ್ನು ಯಶಸ್ವಿಯಾಗಿ ತಯಾರು ಮಾಡುತ್ತಿದ್ದಾರೆ. ಕಳೆದ ವರ್ಷದಿಂದ ಬೆಟಗೇರಿ ಕೃಷಿ ಅಧಿಕಾರಿ ಹೇಮಾ ಮರದ ಮಾರ್ಗದರ್ಶನದಲ್ಲಿ ಗೊಬ್ಬರ ಉತ್ಪಾದನೆಯ ಪ್ರಮಾಣ ಹೆಚ್ಚಿಸಿದ್ದಾರೆ.
“ಕೃಷಿಗೆ ಅಗತ್ಯವಿರುವ ಗೊಬ್ಬರವನ್ನು ರೈತರೇ ತಯಾರಿಸಿಕೊಳ್ಳಬೇಕು. ಬೃಹತ್ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆಸುವವರಿಗೆ ಇದು ಕೊಂಚ ಕಷ್ಟ ಎನಿಸಿದರೂ ಸಾಧ್ಯ. ಸರ್ಕಾರ ಸಹ ರಾಸಾಯನಿಕ ಮುಕ್ತ ಕೃಷಿಗೆ ಪ್ರೋತ್ಸಾಹ ನೀಡುತ್ತಿದೆ. ಸಾವಯವ ಕೃಷಿಕರ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮೊದಲಿನ ಪದ್ಧತಿಗೆ ಮರಳುವುದರಲ್ಲಿ ಸಂದೇಹವಿಲ್ಲ. ಈಚೆಗೆ ಎಲ್ಲೆಡೆ ಸಾವಯವ ಗೊಬ್ಬರಗಳಾದ ಎರೆಹುಳುವಿನ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಸಮೃದ್ಧ ಸಾವಯವ ಗೊಬ್ಬರ, ಜೈವಿಕ ಗೊಬ್ಬರಗಳಿಗೆ ಬೇಡಿಕೆ ಹೆಚ್ಚುತ್ತಿದೆ,” ಎನ್ನುತ್ತಾರೆ ವೀರೇಶ ನೇಗಲಿ.
ಸಾವಯವ ಗೊಬ್ಬರದ ಬಗ್ಗೆ ಆಸಕ್ತಿ ಹೇಗೆ ಬಂತು ಎಂಬ ಪ್ರಶ್ನೆಗೆ ಅವರ ಉತ್ತರವಿದು. “ಮೊದಲು ನಾನು ರಾಸಾಯನಿಕ ಗೊಬ್ಬರವನ್ನು ಹಾಕಿ ಬೆಳೆ ಬೆಳೆಯುತ್ತಿದ್ದೆ. ಅದರಲ್ಲಿ ಬೆಳೆದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಜೊತೆಗೆ, ರಾಸಾಯನಿಕ ಬಳಸುವುದರಿಂದ ಹಾನಿ ಆಗುತ್ತದೆಂಬುದು ಗೊತ್ತಿತ್ತು. ಅದಕ್ಕೇನು ಮಾಡಬೇಕು ಎಂದು ಯೋಚಿಸುತ್ತಿದ್ದೆ. ಮೊದಲು ನಾನು ನನ್ನ ಯೋಚನೆಯ ಪ್ರಕಾರ ಆಕಳ ತುಪ್ಪ, ಸಗಣಿ ಹೀಗೆ ಅನೇಕ ಪರಿಕರಗಳನ್ನು ಬಳಸಿ ಗೊಬ್ಬರ ತಯಾರಿಸಿದೆ. ಇದನ್ನು ತಯಾರಿಸಲು 6-7 ತಿಂಗಳು ಬೇಕಾಯಿತು. ಈ ಗೊಬ್ಬರವನ್ನು ಮೊದಲು ಹಾಕುವಂತಿಲ್ಲ, ಒಣಗಿಹೋಗುತ್ತದೆ. ಆದ್ದರಿಂದ ಬಿತ್ತುವ ಕಾಲಕ್ಕೆ ಹಾಕಬೇಕು. ಹೀಗೆ ಮಾಡಿ ಒಂದು ಬಾರಿ ಉತ್ತಮ ಬೆಳೆ ತೆಗೆದೆ. ಆಗ ನೆನಪಾಗಿದ್ದು ಕೃಷಿ ಇಲಾಖೆ. ಕೃಷಿ ಇಲಾಖೆಗೆ ಹೋಗಿ ಹೇಮಾ ಅವರನ್ನು ಭೇಟಿಯಾಗಿ, ನನ್ನ ಸಾವಯವ ಕೃಷಿ ಬಗ್ಗೆ ಇರುವ ಕುತೂಹಲವನ್ನು ತಿಳಿಸಿದೆ. ಅವರು ನನಗೆ ಕೆಲವೊಂದಿಷ್ಟು ವಿಧಾನಗಳನ್ನು ಹಾಗೂ ಬೆಳೆಗಳನ್ನು ಬೆಳೆಯುವ ಪದ್ಧತಿಗಳನ್ನು ತಿಳಿಸಿದರು. ಅವರ ಮಾರ್ಗದರ್ಶನದಲ್ಲಿ ಇಂದು ಚೆನ್ನಾಗಿ ಫಸಲು ತೆಗೆಯುತ್ತಿದ್ದೇನೆ. ನನ್ನ ಬೆಳೆಯ ಬಗ್ಗೆ ಕೃಷಿ ಇಲಾಖೆಯಲ್ಲಿ ತಿಳಿದುಕೊಂಡು ಹಲವರು ನನ್ನ ಹೊಲಕ್ಕೆ ಭೇಟಿ ನೀಡಿದ್ದಾರೆ. ನಾನು ತಯಾರಿಸುವ ಸಾವಯವ ಗೊಬ್ಬರದ ಬಗ್ಗೆ ತಿಳಿದುಕೊಂಡು ಕೆಲವರು ನೋಟ್ ಮಾಡಿಕೊಂಡು, ಕೆಲವರು ವಿಡಿಯೋ ಕೂಡ ಮಾಡಿಕೊಂಡು ಹೋಗಿದ್ದಾರೆ. ಇದು ನನಗೆ ಖುಷಿ. ನನ್ನಿಂದ ಹತ್ತು ಜನರು ರಾಸಾಯನಿಕ ಕೃಷಿ ಬಿಟ್ಟು ಸಾವಯವ ಕೃಷಿಯೆಡೆಗೆ ಒಲವು ತೋರಿದ್ದಾರೆ. ಇದಕ್ಕಿಂತ ಹೆಚ್ಚೇನು ಬೇಕು?”

ಪರಿಸರ ಪ್ರೇಮಿ ಚಂದ್ರು ರಾಥೋಡ್ ಅವರ ಪ್ರಕಾರ, “ವೀರೇಶ ಅವರ ಸಾವಯವ ಕೃಷಿಯ ಬಗ್ಗೆ ಕೇಳಿ ಅವರನ್ನು ಭೇಟಿಯಾಗಬೇಕೆಂದು ಕೊಟುಮಚಿಗೆಗೆ ಬಂದೆ. ಇಲ್ಲಿ ಅವರು ಸಾವಯವ ಗೊಬ್ಬರ ತಯಾರಿಸುವ ವಿಧಾನ ನೋಡಿ ಖುಷಿ ಎನಿಸಿತು. ಮನೆಯಲ್ಲಿಯೇ ಇಷ್ಟು ಚೆನ್ನಾಗಿ ಗೊಬ್ಬರವನ್ನು ತಯಾರಿಸುವಾಗ ರಾಸಾಯನಿಕ ಗೊಬ್ಬರವನ್ನು ಬಳಸುವುದು ಎಲ್ಲರ ರೈತರೂ ನಿಲ್ಲಿಸಬೇಕು. ಅದಕ್ಕೆ ವೀರೇಶ ಅವರಿಗೆ ಗೊಬ್ಬರದ ಮಾರಾಟ ಕೇಂದ್ರವನ್ನು ಆರಂಭಿಸಿ ಎಂದು ಸಲಹೆ ಇತ್ತೆ. ಅವರು ನಯವಾಗಿ ಅದನ್ನು ತಿರಸ್ಕರಿಸಿ, ಎಲ್ಲರಿಗೂ ಸಾವಯವ ಗೊಬ್ಬರ ತಯಾರಿಕೆ ಬಗ್ಗೆ ಕಲಿಸಿಕೊಡುವೆ ಎಂದು ಹೇಳಿದರು. ಈವರೆಗೆ ಇಪ್ಪತ್ತಕ್ಕೂ ಹೆಚ್ಚು ರೈತರನ್ನು ಅವರ ಕಡೆಗೆ ತರಬೇತಿಗೆಂದು ಕಳುಹಿಸಿದೆ. ಅವರೆಲ್ಲರೂ ಈ ಬಾರಿ ಮುಂಗಾರಿನ ಫಸಲಿಗೆ ಸಾವಯವ ಗೊಬ್ಬರ ಬಳಸಲು ಸಿದ್ಧರಿದ್ದಾರೆ.”
ಸೂಕ್ತ ಮಾರುಕಟ್ಟೆ ಅವಶ್ಯ
ಇಂದು ಎಲ್ಲರೂ ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ ನೀಡಬೇಕು ಎನ್ನುತ್ತಾರೆಯೇ ಹೊರತು ಸಾವಯವ ಕೃಷಿಗೆ ಸೂಕ್ತ ಮಾರುಕಟ್ಟೆಯ ಬಗ್ಗೆ ಮಾತೇ ಎತ್ತುವುದಿಲ್ಲ. ಸಾವಯವ ಕೃಷಿ ಉತ್ಪನ್ನಗಳು, ಗೊಬ್ಬರ ಹೀಗೆ ಎಲ್ಲ ಒಂದೇ ಸೂರಿನಡಿ ಸಿಗುವ ಹಾಗೆ ಈ ಭಾಗದಲ್ಲಿ ಮಾರುಕಟ್ಟೆಯಾಗಬೇಕು. ಆಗ ರೈತರು ಇದರ ಬಗ್ಗೆ ಒಲವು ತೋರುತ್ತಾರೆ. ವೀರೇಶ ಅವರು ಇಂದು ಸ್ವತಃ ತಾವೇ ತಯಾರಿಸಿಕೊಂಡಂತೆ ಎಲ್ಲರಿಗೂ ಆಗುವುದಿಲ್ಲ. ಇಂತಹ ಗೊಬ್ಬರ ಸಿಗುವುದಕ್ಕೆಂದೇ ಮಾರುಕಟ್ಟೆ ವ್ಯವಸ್ಥೆಯಾಗಬೇಕೆಂಬುದು ಈ ಭಾಗದ ರೈತರ ಬೇಡಿಕೆ.
ಸಾವಯವ ತೋಟ
ವೀರೇಶ ಅವರು ತಮ್ಮ ಜಾಗದಲ್ಲಿ ಸಾವಯವ ತೋಟವನ್ನು ನಿರ್ಮಿಸುತ್ತಿದ್ದಾರೆ. ಈ ತೋಟ ರಾಸಾಯನಿಕ ಮುಕ್ತವಾಗಿರಲಿದ್ದು, ಎಲ್ಲ ಬೆಳೆಗಳು ಸಾವಯವ ಕೃಷಿ ವಿಧಾನದಿಂದ ಬೆಳೆಯಲ್ಪಡುತ್ತವೆ. ವೀರೇಶ ಅವರು ಈಗ ಸಾವಯವ ಕೃಷಿ ರೈತ ಎಂದು ಉತ್ತರ ಕರ್ನಾಟಕದಲ್ಲಿ ಚಿರಪರಿಚಿತರು. ಇವರ ಹೊಲ ಮತ್ತು ಮನೆ ಈಗ ಹಲವರಿಗೆ ಪ್ರವಾಸಿ ತಾಣ. ಸಾವಯವ ಗೊಬ್ಬರ ತಯಾರಿಕೆ ಜೊತೆಗೆ ಸಾವಯವ ತೋಟವೂ ಈಗ ಸೇರ್ಪಡೆಯಾಗಿದೆ. ಕಳೆದ ತಿಂಗಳು ಮುಂಬೈನಲ್ಲಿ ಸಾವಯವ ಕೃಷಿ ಮೇಳ ಆಯೋಜಿಸಿದ್ದರು. ಆಗ ಇಲ್ಲಿನ ಕೃಷಿ ಅಧಿಕಾರಿಗಳು ತಮ್ಮೊಂದಿಗೆ ವೀರೇಶ ಅವರನ್ನು ಕರೆದುಕೊಂಡು ಹೋಗಿದ್ದರು ಎಂಬುದು ಗಮನಾರ್ಹ.